ವಿವೇಕಾನಂದರು ಮತ್ತೊಮ್ಮೆ ಹುಟ್ಟಿ ಬರಬೇಕು …

Team Newsnap
4 Min Read

ಭಾರತದ ಸಾಂಸ್ಕೃತಿಕ ರಾಯಭಾರಿ,‌ ಧಾರ್ಮಿಕತೆಗೆ ಮಾನವೀಯ ಮತ್ತು ವೈಚಾರಿಕ ತಳಹದಿಯ ಚಿಂತನೆಗಳನ್ನು ಲೇಪಿಸಿದ, ಯುವ ಸಮೂಹವನ್ನು ಅತ್ಯಂತ ಪ್ರಭಾವಗೊಳಿಸಿದ ನರೇಂದ್ರ ನಾಥ ದತ್ತ ಎಂಬ ಸ್ವಾಮಿ ವಿವೇಕಾನಂದರ ಜನ್ಮದಿನದ ಶುಭಾಶಯಗಳೊಂದಿಗೆ ಎಲ್ಲರಿಗೂ ಬೆಳಗಿನ ಶುಭೋದಯ……….

ಭಾರತ ಇತಿಹಾಸದ ಕೆಲವೇ ಅತ್ಯಮೋಘ ವ್ಯಕ್ತಿತ್ವಗಳಲ್ಲಿ ಮತ್ತು ಇಂದಿಗೂ ಬಹು ಜನರ ಸ್ಪೂರ್ತಿಯ ಸೆಲೆಯಾಗಿ ಜನರ ಮನದಾಳದಲ್ಲಿ ನೆಲೆ ನಿಂತಿರುವ ಕೆಲವೇ ಕೆಲವು ಜನರಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರು.

ಎಡ ಬಲಗಳ ಆಚೆ ನಿಂತು ನಿಜವಾದ ಭಾರತೀಯತೆಯ ಹುಡುಕಾಟದಲ್ಲಿ ಇಲ್ಲಿನ ಶ್ರೇಷ್ಠತೆಯನ್ನು ಎತ್ತಿಹಿಡಿಯುವುದರ ಜೊತೆಗೆ ಇಲ್ಲಿನ ಅನಿಷ್ಟಗಳ ಬಗ್ಗೆ ಅಷ್ಟೇ ಪ್ರಾಮಾಣಿಕತೆಯಿಂದ ಮತ್ತು ಧೈರ್ಯವಾಗಿ ಮಾತನಾಡಿದ ಧೀಮಂತ ವ್ಯಕ್ತಿತ್ವ ಸ್ವಾಮಿ ವಿವೇಕಾನಂದರದು.

ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಮುಖ್ಯವಾಗಿ ಯುವ ಸಮೂಹ ಮತಿಭ್ರಮಣೆಗೆ ಒಳಗಾಗಿ ಯಾವುದೋ ಒಂದು ಸಿದ್ದಾಂತದ ದಾಸರಾಗಿ ಅದರ ಅಮಲಿನಲ್ಲಿ ನಾಣ್ಯದ ಒಂದೇ ಮುಖವನ್ನು ನೋಡಿ ಇನ್ನೊಂದು ಮುಖವನ್ನು ಅರ್ಥಮಾಡಿಕೊಳ್ಳದೆ ತನ್ನದೇ ಸಹವರ್ತಿಗಳನ್ನು ವಾಚಾಮಗೋಚರವಾಗಿ ನಿಂದಿಸಿ ಇಡೀ ಸಾಮಾಜಿಕ ಸೌಹಾರ್ದವನ್ನೇ ಹಾಳು ಮಾಡುತ್ತಿರುವಾಗ ಸ್ವಾಮಿ ವಿವೇಕಾನಂದರ ವಿವೇಚನೆ, ಧರ್ಮದ ವ್ಯಾಖ್ಯಾನ, ಭಾರತೀಯತೆ ಮತ್ತು ಮಾನವೀಯತೆಯ ನಿಜವಾದ ಅರ್ಥವನ್ನು ತಾಳ್ಮೆಯಿಂದ ಅಳವಡಿಸಿಕೊಳ್ಳಬೇಕಿದೆ…..

ಸೀಡ್ ಲೆಸ್ ಯುವ ಜನಾಂಗ…..

ಹೌದು ಹಣ್ಣು ತರಕಾರಿಗಳಲ್ಲಿ ಸೀಡ್ ಲೆಸ್ ಸೃಷ್ಟಿಯಾಗುತ್ತಿರುವಂತೆ ಭಾರತೀಯ ಸಮಾಜದ ಯುವಕ ಯುವತಿಯರ ಮಾನಸಿಕ ಸ್ಥಿತಿ ಗಮನಿಸಿದರೆ ಸೀಡ್ ಲೆಸ್ ಜನಾಂಗವೊಂದು ಸೃಷ್ಟಿಯಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.

ಜಾಗತೀಕರಣದ ಪ್ರಭಾವದಿಂದಾಗಿ ಭಾರತದ ಮಧ್ಯಮ ವರ್ಗದ ಕುಟುಂಬಗಳಲ್ಲಿ ಬಡತನ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಯಿತು. ಊಟ ಬಟ್ಟೆ ವಸತಿಯ ವಿಷಯದಲ್ಲಿ ಮಕ್ಕಳಿಗೆ ಹೆಚ್ಚಿನ ಕೊರತೆಯಾಗದಂತೆ ಪೋಷಕರು ನೋಡಿಕೊಂಡರು. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಂಡುಬಂದಿತು. ಅವಿಭಕ್ತ ಕುಟುಂಬಗಳು ಶಿಥಿಲವಾಗಿ ಚಿಕ್ಕ ಸಂಸಾರಗಳು ಅಸ್ತಿತ್ವಕ್ಕೆ ಬಂದವು.

ಅದರಿಂದಾಗಿ ಮಕ್ಕಳ ಮೇಲೆ ಪೋಷಕರು ಪ್ರೀತಿ ಹೆಚ್ಚಾಯಿತು. ಟಿವಿ ಮೊಬೈಲ್ ವಿಡಿಯೋ ಗೇಮ್ ಸಿನಿಮಾ ಮನರಂಜನೆ ಮುಂತಾದ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಿಂದ ಮಕ್ಕಳ ಮನಸ್ಥಿತಿ ಹೆಚ್ಚು ಶಾರ್ಪ್ ಆಯಿತು. ಕಲಬೆರಕೆ ಆಹಾರ ಜಂಕ್ ಪುಡ್ ಮುಂತಾದ ರಸಾಯನಿಕ ಮಿಶ್ರಿತ ಪದಾರ್ಥಗಳ ತಿಂಡಿಗಳು ಮತ್ತು ಅತಿಯಾದ ವಾಹನಗಳ ಬಳಸುವಿಕೆ ಹಾಗು ಪರಿಸರ ಮಾಲಿನ್ಯದಿಂದ ದೇಹ ಮತ್ತು ಮನಸ್ಸುಗಳಲ್ಲಿ ಆಲಸ್ಯ ಉಂಟಾಯಿತು.

ತೀರಾ ಹಸಿವಿನ ಸಂಕಷ್ಟಗಳ ಅನುಭವ ಅವರಿಗೆ ಆಗಲೇ ಇಲ್ಲ. ಯಾವುದೇ ಭಯಂಕರ ಯುದ್ಧ ಪ್ರಾಕೃತಿಕ ವಿಕೋಪ ಹಿಂಸೆಯ ಕ್ರಾಂತಿ ಇತ್ತೀಚಿನ ವರ್ಷಗಳಲ್ಲಿ ನಡೆಯಲಿಲ್ಲ. ಇದರ ಜೊತೆಗೆ ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆ ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಮತ್ತು ಉಚಿತ ಇಂಟರ್ ನೆಟ್ ಸೌಲಭ್ಯ ಮತ್ತು ಓಡಾಡಲು ದ್ವಿಚಕ್ರ ವಾಹನ ದೊರೆಯಿತು. ಕೈಗೊಂದಿಷ್ಟು ಕಾಸು ಹತ್ತಿರದಲ್ಲಿ ಮಾಲ್ ಗಳು. ಇಷ್ಟು ಸಾಕಲ್ಲವೇ ????

ಇತಿಹಾಸದ ನೋವುಗಳ ನೆನಪುಗಳಿಲ್ಲ, ಭವಿಷ್ಯದ ಕನಸುಗಳು ಮುನ್ನೋಟವಿಲ್ಲ. ಈ ಕ್ಷಣದ ಮಜಾ ಮಾತ್ರ ಅವರ ಪ್ರಾಮುಖ್ಯತೆಯಾಯಿತು. ಸ್ವಂತಿಕೆ ಮತ್ತು ಸ್ವಾಭಿಮಾನ ಇಲ್ಲದೇ ಹೋಯಿತು.

ಇದಕ್ಕಾಗಿಯೇ ಹೊಂಚು ಹಾಕಿ ಕುಳಿತಿದ್ದ ಕೆಲವು ರಾಜಕೀಯ ಪಕ್ಷಗಳು ಕೋತಿಗಳಿಗೆ ಕಡಲೆ ಬೀಜ ಹಾಕಿ ಭೋನಿಗೆ ಬೀಳಿಸುವಂತೆ ಭ್ರಷ್ಟಾಚಾರ, ಧರ್ಮ, ಜಾತಿ, ಭಾಷೆ, ಪಂಥ, ದೇಶಪ್ರೇಮ ಅದು ಇದು ಎಂಬ ಮಸಾಲೆ ಹಾಕಿದ ಕಡಲೇ ಬೀಜಗಳನ್ನು ಎಸೆದರು ನೋಡಿ. ಈ ಯುವಕರು ಸುಲಭವಾಗಿ ಅದರ ಬಲೆಗೆ ಬಿದ್ದರು.

ಇದರ ಜೊತೆಗೆ ಎಲ್ಲೆಲ್ಲೂ ಬಾರ್ ಅಂಡ್ ರೆಸ್ಟೋರೆಂಟ್ ಗಳು, ಶಾಪಿಂಗ್ ಮಾಲ್ ಗಳು, ಸಿಗರೇಟು ಗಾಂಜಾಗಳು ಸುಲಭವಾಗಿ ದೊರೆಯತೊಡಗಿದವು, ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ರಣಭೀರ್ ಕಪೂರ್ ಗಳು, ಕರೀನಾ ತಮನ್ನಾ ದೀಪಿಕಾ ಪಡುಕೋಣೆ ಕತ್ರಿನಾ ಕೈಪ್ ಗಳು, ದರ್ಶನ್ ಸುದೀಪ್ ಯಶ್ ಗಳು, ಜೊತೆಗೊಂದಿಷ್ಟು ಬೆಟ್ಟಿಂಗ್ ಕಟ್ಟಲು ತೆಂಡೂಲ್ಕರ್ ಕೊಹ್ಲಿ ಧೋನಿಗಳು, ಹುಚ್ಚೆಬ್ಬಿಸಲು ಮೋದಿ ರಾಹುಲ್ ಮಮತಾಗಳು,…..

ಇನ್ನೆಲ್ಲಿಯ ಸ್ವಂತಿಕೆ. ಸೀಡ್ ಲೆಸ್ ಜನಾಂಗ ಸೃಷ್ಟಿಯಾಗದೆ ಇನ್ನೇನಾಗುತ್ತದೆ. ಆದರ್ಶಗಳಿಲ್ಲದ ಕೇವಲ ಆಡಂಬರಗಳು.

” ಹಿಂದೆ ಮಕ್ಕಳು ತಂದೆ ತಾಯಿ ಮುಂತಾದ ಹಿರಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಈಗ ತಂದೆ ತಾಯಿಗಳು ಮಕ್ಕಳನ್ನು ಚಿಕಿತ್ಸೆಗಾಗಿ ಕರೆದುಕೊಂಡು ಬರುತ್ತಿರುವ ಬದಲಾವಣೆಯ ದೃಶ್ಯಗಳನ್ನು ನೋಡುತ್ತಿದ್ದೇವೆ “

ಇದು ದೇಹ ಸೀಡ್ ಲೆಸ್ ಆಗಿರುವುದಕ್ಕೆ ಒಂದು ಉದಾಹರಣೆ. ಹಾಗೆಯೇ ಯಾವುದೇ ಗಹನವಾದ ತರ್ಕಬದ್ಧವಾದ ಆಳವಾದ ಚಿಂತನೆಯಿಲ್ಲದೆ ವಿಷಯವನ್ನು ಕೇವಲ ವಾಕ್ಚಾತುರ್ಯ ಮತ್ತು ನಿರೂಪಣೆಯಿಂದ ಯುವ ಸಮೂಹವನ್ನು ಮೆಚ್ಚಿಸಿ ಅವರಿಂದ ಚಪ್ಪಾಳೆ ಮತ್ತು ಓಟು ಪಡೆಯಬಹುದು ಎಂಬುದು ಅವರ ಮಾನಸಿಕ ಸೀಡ್ ಲೆಸ್ ತನಕ್ಕೆ ಮತ್ತಷ್ಟು ಉದಾಹರಣೆಗಳು. ಆದ್ದರಿಂದಲೇ ಹಣ ಇರುವ ಜಾತಿ ರಾಜಕಾರಣದ ಭ್ರಷ್ಟ ವ್ಯಕ್ತಿಗಳು ಸುಲಭವಾಗಿ ಜನ ಪ್ರತಿನಿಧಿಗಳಾಗಿ ಮತ್ತೆ ಮತ್ತೆ ಆಯ್ಕೆಯಾಗುತ್ತಾರೆ.

ಮದುವೆಯಾಗಲು ಹುಡುಗ ಹುಡುಗಿಯರು ಕೇಳುತ್ತಿರುವ ಅಥವಾ ಬಯಸುತ್ತಿರುವ ಬೇಡಿಕೆಗಳು, ಕೆಲವೇ ತಿಂಗಳುಗಳಲ್ಲಿ ಅವರ ನಡುವೆ ಉಂಟಾಗುತ್ತಿರುವ ಭಿನ್ನಾಭಿಪ್ರಾಯಗಳು, ಹಣದ ಬಗೆಗಿನ ಮೋಹ, ವ್ಯಕ್ತಿತ್ವ ಮತ್ತು ಮೌಲ್ಯಗಳ ಬಗೆಗಿನ ತಿರಸ್ಕಾರ ಗಮನಿಸಿದರೆ ಈ ಸೀಡ್ ಲೆಸ್ ಜನಾಂಗದ ಬಗ್ಗೆ ಸ್ವಲ್ಪ ಅರ್ಥವಾಗಬಹುದು.

ಸ್ವಾಮಿ ವಿವೇಕಾನಂದರ ಕನಸಿನ,
ಉಕ್ಕಿನ ದೇಹದ, ಕಠಿಣ ಮನಸ್ಥಿತಿಯ, ಶುದ್ದ ವ್ಯಕ್ತಿತ್ವದ, ಕ್ರಿಯಾತ್ಮಕ ಚಿಂತನೆಯ ಭಾರತದ ಯುವ ಜನಾಂಗ ಎಲ್ಲಿ ಹೋಯಿತು.

ದ್ವೇಷ ಕಾರುವ, ಶ್ರೇಷ್ಠತೆಯ ವ್ಯಸನದ, ಸಣ್ಣ ಮನಸ್ಸಿನ ಅಸೂಯಾಪರ ಯುವ ಜನಾಂಗವನ್ನು ನೋಡಿ ಮನಸ್ಸು ಒದ್ದಾಡುತ್ತಿದೆ.

ಒಳ್ಳೆಯ ಅಂಶಗಳು ಇಲ್ಲವೆಂದಲ್ಲ. ಪಾಪ ಅವರಿಗೆ ಒಳ್ಳೆಯ ಮಾರ್ಗದರ್ಶನ ಸಿಗುತ್ತಿಲ್ಲ. ಒಳ್ಳೆಯದನ್ನು ಗ್ರಹಿಸುವ ಮನಸ್ಥಿತಿಯನ್ನು ಅವರಲ್ಲಿ ನಾವು ಬೆಳೆಸುತ್ತಿಲ್ಲ.

ಎಳನೀರಿನ ಜಾಗದಲ್ಲಿ ಪೆಪ್ಸಿ ಕೋಲಾಗಳು, ಸಹಜತೆಯ ಜಾಗದಲ್ಲಿ ಕೃತಕ ಬಣ್ಣಗಳು ಅವರನ್ನು ಆಕರ್ಷಿಸುತ್ತಿವೆ.

ಮತ್ತೊಮ್ಮೆ ಯುವಕರನ್ನು ಈ ವಿಷ ಚಕ್ರದಿಂದ ಬಿಡುಗಡೆ ಮಾಡಿ ಸಹಜ ಮೌಲ್ಯಯುತ ಸುಂದರ ಬದುಕಿನತ್ತ ಕರೆದೊಯ್ಯುವ ಜವಾಬ್ದಾರಿ ನಾವು ಹೊರಬೇಕಿದೆ. ಅದರ ಪ್ರಯತ್ನದ ಒಂದು ಸಣ್ಣ ಭಾಗವೇ……

ವಿವೇಕಾನಂದ. ಹೆಚ್.ಕೆ.

Share This Article
Leave a comment