May 20, 2022

Newsnap Kannada

The World at your finger tips!

WhatsApp Image 2022 05 10 at 8.02.04 AM

ಶ್ರೀಲಂಕಾದಲ್ಲಿ ಹಿಂಸಾಚಾರ, – ಉದ್ರಿಕ್ತರಿಂದ ಪ್ರಧಾನಿ ನಿವಾಸಕ್ಕೆ ಬೆಂಕಿ , ಸಂಸದನ ಹತ್ಯೆ

Spread the love

ರಾವಣನ ಕಾಲದ ಲಂಕಾ ದಹನ ಕಂಡಿರಲಿಲ್ಲ. ಈಗ ನಮ್ಮ ಕಣ್ಮುಂದೆಯೇ ಶ್ರೀಲಂಕಾ ಧಗಧಗ ಹೊತ್ತಿ ಉರಿಯುತ್ತಿದೆ. ಇದು ಕೇವಲ ಕಿಚ್ಚಲ್ಲ. ಬಡವರ ಸಿಟ್ಟಿನ ಜ್ವಾಲಾಗ್ನಿ.

ಆರ್ಥಿಕ ದಿವಾಳಿತನ, ಆಡಳಿತ ಸರ್ಕಾರಗಳ ಹೊಣೆಗೇಡಿತನ, ಕುಟುಂಬ ರಾಜಕಾರಣ, ಕಂಡು ಕೇಳರಿಯದಂತಹ ಬೆಲೆ ಏರಿಕೆ, ಅಗತ್ಯವಸ್ತುಗಳಿಗೆ ಹಾಹಾಕಾರ, ಪೆಟ್ರೋಲ್, ಡೀಸೆಲ್ ಇಲ್ಲದೆ ನಿಂತಲ್ಲೇ ನಿಂತ ವಾಹನಗಳು. ಇದರೊಂದಿಗೆ ಲಂಕಾ ಜನರ ಜೀವನ ದರ್ಬಾದ್ ಆಗಿದೆ ಇದೆಲ್ಲಾ ನೋವು ಜ್ವಾಲಾಗ್ನಿ ರೂಪದಲ್ಲಿ ಬಡವರ ಕೋಪ ಸ್ಫೋಟಿಸಿದೆ.

ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ ಬೆನ್ನಲ್ಲೇ ಲಂಕಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಪ್ರಧಾನಿ ಬೆಂಬಲಿಗರು ಹಾಗೂ ಸರ್ಕಾರದ ವಿರೋಧಿ ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು, ನಿರ್ಗಮಿತ ಪ್ರಧಾನಿ ರಾಜಪಕ್ಸ ಅವರ ಅಧಿಕೃತ ನಿವಾಸಕ್ಕೇ ಬೆಂಕಿ ಹಚ್ಚಿದ್ದಾರೆ. ಆಡಳಿತ ಪಕ್ಷದ ಸಂಸದರು, ಸಚಿವರು ಹಾಗೂ ಹಲವಾರು ನಾಯಕರ ಮನೆಗಳೂ ಭಸ್ಮವಾಗಿವೆ. ಸುಮಾರು 12ಕ್ಕೂ ಹೆಚ್ಚು ನಾಯಕರ ಮನೆಗಳು ಸುಟ್ಟು ಕರಕಲಾಗಿವೆ.

ಆರ್ಥಿಕ ದಿವಾಳಿತನ ವಿರೋಧಿಸಿ ಕಳೆದ ಏಪ್ರಿಲ್ 9ರಿಂದ ಕೊಲಂಬೋದ ರಾಜಪಕ್ಸ ನಿವಾಸದ ಎದುರು ಜನರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ನಿನ್ನೆ ಬೆಳಗ್ಗೆ ಪ್ರಧಾನಿ ಬೆಂಬಲಿಗರು ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದ್ದಾರೆ. ಇದರಿಂದ ಪ್ರತಿಭಟನಾಕಾರರು ರೊಚ್ಚಿಗೆದ್ದು, ಬೆಂಕಿ ಹಚ್ಚಿದ್ದಾರೆ. ಈ ಪ್ರಕ್ಷುಬ್ಧ ಸನ್ನಿವೇಶದಲ್ಲಿ ಆಡಳಿತ ಪಕ್ಷದ ಸಂಸದನೊಬ್ಬ ಬಲಿ ಆಗಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ.

ಪ್ರತಿಭಟನಾಕಾರರ ಮೇಲೆ ಹಲ್ಲೆ ವಿರೋಧಿಸಿ ಹಿಂಸಾಚಾರ ಭುಗಿಲೆದ್ದಿದೆ. ರಾಜಪಕ್ಸ ಅವರ ತಂದೆ ಹಾಗೂ ತಾಯಿ ಸ್ಮಾರಕಗಳನ್ನು ಧ್ವಂಸಗೊಳಿಸಲಾಗಿದೆ. ಹಂಬಂಟೋಟದಲ್ಲಿರುವ ರಾಜಪಕ್ಸ ನಿವಾಸಕ್ಕೂ ಬೆಂಕಿ ಹಚ್ಚಲಾಗಿದೆ. 3 ಮಾಜಿ ಸಚಿವರು, ಇಬ್ಬರು ಸಂಸದರ ಮನೆಗಳೂ ಭಸ್ಮವಾಗಿವೆ. ಕಾರು ತಡೆದ ಪ್ರತಿಭಟನಾಕಾರರ ಮೇಲೆ ಸಂಸದ ಫೈರಿಂಗ್ ಮಾಡಿದ್ದು, ಪ್ರಾಣ ರಕ್ಷಣೆಗಾಗಿ ಸಮೀಪದ ಕಟ್ಟಡದಲ್ಲಿ ಆಶ್ರಯ ಪಡೆದಿದ್ದಾರೆ. ನಂತರ ಶವವಾಗಿ ಅಮರಕೀರ್ತಿ ಆತುಕೋರಲ ಪತ್ತೆ ಆಗಿದ್ದಾರೆ.

ಉದ್ರಿಕ್ತರನ್ನು ಚದುರಿಸಲು ಪೋಲಿಸರು ಅಶ್ರುವಾಯು, ಜಲಫಿರಂಗಿ ಬಳಕೆ ಮಾಡಿದ್ದು, ಹಿಂಸಾಚಾರದಲ್ಲಿ 100ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸೇನೆಯನ್ನು ಬಳಸಿಕೊಂಡು ಪೆಟ್ರೋಲ್, ಡೀಸೆಲ್, ಅಗತ್ಯವಸ್ತುಗಳ ವಿತರಣೆ ಮಾಡ್ತಿದ್ರೂ, ಹಿಂಸಾಚಾರ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ ಆಗಿದೆ.

ಶ್ರೀಲಂಕಾದಾದ್ಯಂತ ಕರ್ಫ್ಯೂ ಜಾರಿ ಮಾಡಲಾಗಿದೆ. ಶಾಂತಿ ಕಾಪಾಡಲು ಸೇನೆಯನ್ನು ರಸ್ತೆಗಳಲ್ಲಿ ನಿಯೋಜಿಸಲಾಗಿದೆ. ಗಾಲೆ ಫೋರ್ಸ್‌ ಪ್ರತಿಭಟನಾ ಸ್ಥಳದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆ ವೇಳೆ ನೂರಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಲಂಕಾ ಹೊತ್ತಿ ಉರಿದಿದೆ. ಒಟ್ಟಿನಲ್ಲಿ ಆರ್ಥಿಕ ಬಿಕ್ಕಟ್ಟಿನ ನಡುವೆಯೇ ಲಂಕಾ ದಹನ ಆಗಿದೆ.

error: Content is protected !!