ಉಪ್ಪಿಟ್ಟೆಂದರೆ ಮೂಗೆಳೆಯುವಿರೇಕೆ

Team Newsnap
5 Min Read

‘ಉಪ್ಪಿಟ್ಟು, ಉಪ್ಪಿಟ್ಟು ಬೀಳುಗಳೆವರು ರುಚಿ ತಿಳಿಯದ ಗಾವಿಲರು’ (ಸಂಚಿ ಹೊನ್ನಮ್ಮನ ಕ್ಷಮೆ ಕೋರಿ) ಉಪ್ಪಿಟ್ಟೆಂದರೆ ಉಪ್ಪೇ ತಿಂದವರಂತೆ ಮುಖ ಕಿವಚುವವರಿದ್ದಾರೆ. ಜೊತೆಗೆ ಬಾಯಲ್ಲಿ ಜೊಲ್ಲು ಸುರುಸಿಕೊಂಡು ಒದ್ದೆಯಾದ ಕಾಲರ್ ಕಾಣದಂತೆ ಒರೆಸಿಕೊಳ್ಳುವವರೂ ಇದ್ದಾರೆ. ಇಂಗ್ಲೀಷಿನಲ್ಲಿ ಗಾದೆ ಇಲ್ಲವೇ one man’s food is other man’s poison ಅಂತ. ಈ ಉಪ್ಪಿಟ್ಟಿಗೆ ಇತಿಹಾಸವೇ ಇದೆ. ಅನಾದಿ ಕಾಲದಿಂದಲೂ ಬಹು ಜನ ಪ್ರಿಯ ಬಹು ಸುಲಭ ಬಹು ಮಾನ್ಯ ಬಹು ಚರ್ಚಿತ ಬಹು ಗೃಹ ಪಾಕಶಾಲೆಯಲ್ಲಿ ಅರಳುವ ಕಲೆ ಇದು. ಎಂಭತ್ತು- ತೊಂಭತ್ತರ ದಶಕದಲ್ಲಿ ವಧು-ವರರ ಸಮಾಗಮವೆಂದರೆ ಅಲ್ಲಿ ಉಪ್ಪಿಟ್ಟಿಲ್ಲದೆ ಮಾತೆ ಇಲ್ಲ. ಕೊನೆಗೆ ಯಾವ ಹುಡುಗಿಯನ್ನು ಒಪ್ಪದ ಹುಡುಗನಿಗೆ ಮಂಗಳಾರತಿ ಎತ್ತುತ್ತಿದ್ದುದೆ ಹೀಗೆ
‘ಉಪ್ಪಿಟ್ಟು –ಕೇಸರಿಭಾತು ತಿಂದುಕೊಂಡು ಬರ್ತೀಯಲ್ಲ ನಾಚಿಕೆ ಆಗಲ್ವಾ? ನಿನ್ನ ಮೂತಿಗೆ ಇನ್ನೆಂಥ ಹೆಣ್ಣು ಬೇಕು? ……? ಒ ಕೆ ಮಾಡಿದರೆ ಸರಿ ಇಲ್ಲವಾದರೆ ಇನ್ನು ಮುಂದೆ ಈ ಉಪ್ಪಿಟ್ಟು –ಕೇಸರಿಭಾತು ಮಾತೆ ಇಲ್ಲ….’


ಉಪ್ಪಿಟ್ಟು ತಿಂದು ಬಂದವನ ಮುಖ ಕಪ್ಪಿಡದೆ ಇರುತ್ತದೆಯೇ? ಇನ್ನು ಗ್ರಹಣ ಬಿಟ್ಟ ಕೊಡಲೆ ನಾವೆಲ್ಲ ಸ್ನಾನ ಮಾಡಿ ಬರುವ ವೇಳೆಗೆ ಅಮ್ಮ ಹುರಿಯುತ್ತಿದ್ದ ರವೆಯ ಪರಿಮಳ ಕಮ್ಮನೆ ಮೂಗಿಗೆ ಬಡಿದರೆ ಮೊದಲೇ ಕುಣಿಯುತ್ತಿದ್ದ ಹೊಟ್ಟೆಯೊಳಗಿನ ಇಲಿಗಳು ಆಗ ರುದ್ರ ನರ್ತನ ಮಾಡುತ್ತಿದ್ದವು. ಕೆಲವೇ ಪರಿಕರಗಳಿಂದ ತಯಾರಾಗುತ್ತಿದ್ದ ಬೋಡುಪ್ಪಿಟ್ಟು ಗಂಟಳೊಳಗೆ ಇಳಿದಾಗ ಅಷ್ಟು ಹೊತ್ತಿನಿಂದ ಇದ್ದ ಉಪವಾಸ ಮರೆತು ನೆಮ್ಮದಿ. ಗ್ರಹಣಬಿಟ್ಟ ಖುಷಿ. ಇನ್ನು ಸಮಾರಂಭ, ಮದುವೆ, ಮುಂಜಿ, ಮೀಟಿಂಗುಗಳು, ಮಹಿಳಾ ಮಣಿಗಳ ಕೂಟಗಳು ಶಾಲೆಯ ವಾರ್ಷಿಕೋತ್ಸವ ಯಾವುದೇ ಇರಲಿ ಕೆದಕುವುದು ಇದನ್ನೇ. ಉಪ್ಪಿಟ್ಟಿನ ಪರಿಮಳ ಮೂಗಿಗೆ ಬಡಿದಾಗಲೇ ಮೀಟಿಂಗಿಗೆ ಗಮ್ಮತ್ತು. ನಿರ್ಣಯ ಏನಾದರಾಗಲಿ ಸಭೆ ಸಮಾರಂಭಗಳು ಸಾರ್ಥಕ್ಯ ಕಾಣುವುದೇ ಬಿಸಿ ಬಿಸಿ ಉಪ್ಪಿಟ್ಟು – ಕೇಸರಿಭಾತು ಜೊತೆಗೆ ಒಂದು ಐವತ್ತು ಎಂ ಎಲ್ ಕಾಫಿ ಗಂಟಲಿಗೆ ಬಿದ್ದಾಗ.
ಉಪ್ಪಿಟ್ಟು ಬಹು ರೂಪಿ. ಇದರ ನಾನಾ ಬಗೆಗಳು ಒಂದಕ್ಕಿಂತ ಒಂದು ತಿಂಡಿಗಳ ರಾಜನೆನಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ.

ಬರಿಯ ತೆಂಗು, ಜೀರಿಗೆ, ಮೆಣಸು ಕರಿಬೇವು ಹಾಕಿ ಕೆದಕಿದರೆ ಬೋಡುಪಿಟ್ಟು. ಅದಕ್ಕೆ ಸ್ವಲ್ಪ ಕ್ಯಾರೇಟು, ಹುರಳಿಕಾಯಿ, ಆಲೂಗಡ್ಡೆ, ದೊಣ್ಣೆ ಮೆಣಸಿನಕಾಯಿ, ಈರುಳ್ಳಿ, ಟಮ್ಯಾಟೊ ಹಾಕಿ ಕೆದಕಿದರೆ ತರಕಾರಿ ಉಪ್ಪಿಟ್ಟು, ಮೈಸೂರು ಮೊಗರು ಬದನೆ, ಜೊತೆಗೆ ದೊಣ್ಣೆ ಮೆಣಸಿನಕಾಯಿಗೆ ಒಂದಿಷ್ಟು ವಾಂಗಿಭಾತು ಪುಡಿ ಉದುರಿಸಿಬಿಟ್ಟರೆ ಆಹಾ ಖಾರಾಭಾತು. ಬೇಡಾ ಒಂದು ಈರುಳ್ಳಿ ಹೆಚ್ಚಿ ಹಾಕಿ ನಾಟಿ ಕೊತ್ತಂಬರಿ ಸೊಪ್ಪು ಮೇಲೆ ಉದುರಿಸಿಬಿಟ್ಟರೆ ಅದರ ಮುಂದೆ ಬೇರೆ ತಿಂಡಿಯುಂಟೇ? ಉಪ್ಪಿಟ್ಟು ಒಂದು ರೀತಿ ಸಂಘ ಜೀವಿ. ಅದು ಯಾವಾಗಲೂ ತನ್ನ ಜೊತೆಗಾರ ಕೇಸರಿಭಾತು/ ಸಜ್ಜಿಗೆ/ ಸಿರಾ ಇದರೊಂದಿಗೆ ತಯಾರಾಗುತ್ತದೆ. ಆಗ ತನ್ನ ಹೆಸರನ್ನು ಸ್ವಲ್ಪ ಬದಲಾಯಿಸಿಕೊಂಡು ಚೌ ಚೌ ಭಾತಾಗುತ್ತದೆ. ಇನ್ನು ಮಾಗಿಯ ಕಾಲಕ್ಕೆ ಸಿಗುವ ಸೋನೆ ಅವರೆಕಾಯಿ ಉಪ್ಪಿಟ್ಟಂತೂ ಆಹಾ, ಜಿಹ್ವೆಗೆ ಅದು ರಸದೌತಣ. ಜೀರಿಗೆ, ಕಾಳುಮೆಣಸು, ಆಗ ತಾನೇ ಒಡೆದ ತೆಂಗಿನಕಾಯಿಯ ತುರಿಯಲ್ಲಿ ಅವರೆಕಾಳು ಬೆರೆತು ಭೂಲೋಕದಲ್ಲೇ ಸ್ವರ್ಗವನ್ನು ತೋರಿಸಿ ಬಿಡುತ್ತದೆ.

ರವೆಯಲ್ಲೂ ಅದೆಷ್ಟು ವೈವಿಧ್ಯ? ಮೀಡಿಯಂ ರವೆ, ಬಾಂಬೆ ರವೆ, ಬನ್ಸಿ ರವೆ, ಚಿರೋಟಿ ರವೆ. ಗೋಧಿ ರವೆ, ಒಂದೊಂದು ರವೆಯ ಉಪ್ಪಿಟ್ಟಿಗೆ ಒಂದೊಂದು ರುಚಿ. ಇನ್ನೂ ಇದು ತಳ ಹಿಡಿದರಂತೂ ಆ ಉಪ್ಪಿಟ್ಟಿನ ರೊಟ್ಟಿಯ ರುಚಿ ಬಲ್ಲವನೇ ಬಲ್ಲ. ಅದಕ್ಕಾಗಿ ಸೀಸುವುದಿದೆ. ಸೀಕಲು ತಿನ್ನಲು ಮನೆಯಲ್ಲಿ ಝಟಾಪತಿ ಯುದ್ಧವೇ ನಡೆದುಹೋಗುತ್ತದೆ. ಈ ಸೀಕಲಲ್ಲಿ ಏನಿರುತ್ತದೆ? ಉಂಡವನೆ ಬಲ್ಲ. ಈ ಉಪ್ಪಿಟ್ಟಿಗಿರುವ ಒಂದು ಸಮತಾ ಭಾವವೆಂದರೆ ಹಲ್ಲಿದ್ದವರು, ಇಲ್ಲದವರು, ಅರ್ಧಂಬರ್ಧ ಹಲ್ಲಿರುವವರು, ದವಡೆ ಹಲ್ಲು ಮುರಿದಿರುವವರು, ಜ್ವರ ಬಂದವರು, ಜ್ವರ ಬಿಟ್ಟವರು ಎಲ್ಲರೂ ಸುಲಭವಾಗಿ ತಿಂದು ಜೀರ್ಣಿಸಿಕೊಳ್ಳಬಲ್ಲ ಖಾದ್ಯವಿದು.


ಹೀಗೆ ಒಬ್ಬರು ಮಹಾನ್ ಉಪ್ಪಿಟ್ಟು ಪ್ರೇಮಿ. ಆದರೆ ಹೆಂಡತಿ ಮಗನಿಗೆ ಉಪ್ಪಿಟ್ಟು ಎಂದರೆ ಅಲರ್ಜಿ. ಮಗನ ಮದುವೆ. ಸಮಾರಂಭ. ಮದುವೆ ಎಂದ ಮೇಲೆ ಒಂದು ಹೊತ್ತಾದರೂ ಉಪ್ಪಿಟ್ಟು ಇಲ್ಲದಿರುತ್ತದೆಯೇ. ಆದರೆ ಹೆಂಡತಿ ಮಗ ಮೊದಲೇ ಬೀಗಿತ್ತಿಗೆ ಬಂದೋಬಸ್ತು ಮಾಡಿ ಉಪ್ಪಿಟ್ಟು ಮಾಡದಿರುವಂತೆ ಕೋರಿದ್ದರು. ತಿಂಡಿಗೆ ಕುಳಿತಾಗ ಅಮ್ಮ- ಮಗನಿಗೆ ಒಳಗೊಳಗೆ ನಗು. ಉಪ್ಪಿಟ್ಟು ಬಡಿಸಲು ಬರುವುದಿಲ್ಲ ಎನ್ನುವ ಸತ್ಯ ಅವರಿಬ್ಬರಿಗೆ ಮಾತ್ರ ಗೊತ್ತಿತ್ತು. ಅಡುಗೆ ಭಟ್ಟರು ಇವರ ಎಲೆಯನ್ನು ಖಾಲಿ ಬಿಟ್ಟು ಮುಂದೆ ಹೋದರೆ ಅಮ್ಮ-ಮಗನಿಗೆ ಆಶ್ಚರ್ಯ . ಈಗ ಒಳಗೊಳಗೆ ನಗುವ ಸರದಿ ರಾಯರದಾಗಿತ್ತು. ಅವರ ಹೆಂಡತಿ ಕರೆದು ಬಡಿಸುವಂತೆ ಸೂಚಿಸಿದರು ಭಟ್ಟರು ಬರಲೇ ಇಲ್ಲ. ನಂತರ ಬಿಸಿ ಬಿಸಿ ಉಪ್ಪಿಟ್ಟು ತಂದು ಇವರ ಎಲೆಗೆ ಬಡಿಸಿದರೆ ಇವರಿಬ್ಬರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು. ರಾಯರು ಗುಟ್ಟಾಗಿ ತಮಗೆ ಉಪ್ಪಿಟ್ಟೇ ಬೇಕು ಎಂದು ಹೇಳಿ ಬೀಗರನ್ನು ಸರಿ ಮಾಡಿಕೊಂಡಿದ್ದರು ಎಂದು ಬೇರೆ ಹೇಳಬೇಕೆ. ಉಪಚರಿಸಲು ಬಂದ ಬೀಗರು ಕಳ್ಳ ನಗೆ ಬೀರಿದಾಗ ರಾಯರು ಒಂದು Thumbs up ಕೊಡುವುದನ್ನು ಮರೆಯಲಿಲ್ಲ.
ಉಪ್ಪಿಟ್ಟು ಇಷ್ಟ ಪಡದವರು ಅದನ್ನು ‘ಕಾಂಕ್ರೀಟು’ ಎನ್ನುವುದಿದೆ. ಆದರೆ ಡಾ ಎಚ್ ನರಸಿಂಹಯ್ಯವರು ಉನ್ನತ ವ್ಯಾಸಂಗಕ್ಕಾಗಿ ವಿದೇಶದಲ್ಲಿದ್ದಾಗ ಸತತವಾಗಿ ಮೂರು ವರ್ಷಗಳ ಕಾಲ 365 ದಿನಗಳು ಮೂರು ಹೊತ್ತು ಉಪ್ಪಿಟ್ಟು ಮಾಡಿ ತಿನ್ನುತ್ತಿದ್ದರು ಎಂದರೆ ಎಂತಹ ಮಹಾನ್ ವ್ಯಕ್ತಿ ಅಲ್ಲವೇ? ಅದಕ್ಕಿಂತಲೂ ಉಪ್ಪಿಟ್ಟಿಗೆ ಅವರು ದೊರಕಿಸಿಕೊಟ್ಟ ಸ್ಥಾನ ಎಂತಹದು. ಅವರ ಗಮನವೆಲ್ಲಾ ಓದಿನ ಕಡೆ ಕೇಂದ್ರೀಕೃತವಾಗಿ ಇದು ಅವರಿಗೆ ದೊಡ್ಡ ವಿಷಯವೇ ಆಗಿರಲಿಲ್ಲ.


ಉಪ್ಪಿಟ್ಟಿನ ವಿಶೇಷವೆಂದರೆ ಯಾವ ಕಾಲದಲ್ಲೂ, ಯಾವ ಭಾಗದಲ್ಲೂ ಎಲ್ಲರಿಗೂ ಸುಲಭ ಸಾಧ್ಯವಾಗುವ ತಿಂಡಿ. ಅರ್ಜೆಂಟಿನಲ್ಲಿರುವವರು, ಮುಂಜಾನೆ ಬೇಗ ಎದ್ದು ಹೊರಡುವವರಿಗೆ, ಹೊಟ್ಟೆ ಹಸಿಯುವಾಗ ಅತ್ಯಲ್ಪ ಸಮಯದಲ್ಲಿ ಕ್ಲಪ್ತಕಾಲದಲ್ಲಿ ಒದಗಿ ಬರುವ ತಿಂಡಿಯಿದು. ದಿಢೀರನೆ ಬಂದಿಳಿಯುವ ನೆಂಟರ ಪಾಲಿಗೆ ಬೇರೆ ಯೋಚನೆಯೇ ಇಲ್ಲದೆ ಒದಗುವುದು ಇದೆ. ಹೊಸದಾಗಿ ಮದುವೆಯಾಗಿ ಬಂದ ಮಡದಿ ಮಾಡಿ ಬಡಿಸುವ ಮೊದಲ ತಿನಿಸು ಇದೆ. ಅವಳು ಇದರಲ್ಲಿ ಪಾಸಾದಳೆಂದರೆ ಪಾಕಶಾಸ್ತ್ರ ಪ್ರವೀಣೆ ಎನ್ನುವ ಬಿರುದು, ಸೋತಳೋ ‘ ನಮ್ಮ ಸೊಸೆ ಗೆ ಒಂದು ಉಪ್ಪಿಟ್ಟು ಮಾಡುವುದಕ್ಕೂ ಬರುವುದಿಲ್ಲ ಎನ್ನುವ ಗೌರವ ಡಾಕ್ಟರೇಟ್. ಉಪ್ಪಿಟ್ಟನ್ನು ಇಷ್ಟ ಪಡುವ ಮಂದಿಯೇ ಇರಬೇಕು ಅವಲಕ್ಕಿ ಒಗ್ಗರಣೆಗೂ ಅವಲಕ್ಕಿ ಉಪ್ಪಿಟ್ಟು, ಶಾವಿಗೆ ಉಪ್ಪಿಟ್ಟು, ಸಿರಿಧಾನ್ಯ ಉಪ್ಪಿಟ್ಟು ಎನ್ನುವರು. ಅಂತೂ ಉಪ್ಪಿಟ್ಟಿಗೆ ನಾನಾ ಮುಖಗಳು. ಇದು ಅದೆಷ್ಟು ಸರಳ ತಿನಿಸೆಂದರೆ ಇದಕ್ಕೆ ನೆಂಜಿಕೊಳ್ಳಲು ಏನಾದರೂ ಬೇಕಂತೇನು ಇಲ್ಲ. ಇದ್ದರೂ ಸರಿ ಇಲ್ಲದೆ ಇದ್ದರೂ ಸರಿ. ಅದೇ ದೋಸೆ, ಇಡ್ಲಿ ಮುಂತಾದವುಗಳು ಹಾಗಲ್ಲ. ಜೊತೆಗೆ ಬೇಕೆ ಬೇಕು. ಉಪ್ಪಿಟ್ಟಿನ ಗುಣ-ಮಹಿಮೆಯನ್ನರಿತವರು ನಿರೋಗಿಗಳಾಗಿ ನಿರುಪದ್ರವಿಗಳಾಗಿ, ನಿರ್ಭಯವಾಗಿ ನಿರ್ದೇಶಿಸುವವರಾಗಿ ಬಾಳುವುದರಲ್ಲಿ ಸಂಶಯವಿಲ್ಲ ಇದಕ್ಕೆ ಉದಾಹರಣೆ ಬೆಂಗಳೂರಿನ ಮಾಜಿ ಪೊಲೀಸ್ ಕಮೀಷನರ್ ಶ್ರೀಯುತ ಭಾಸ್ಕರ್ ರಾವ್ ಅವರು. ಒಂದು ಕಾರ್ಯಕ್ರಮದಲ್ಲಿ ಉಪ್ಪಿಟ್ಟಿನ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡರಲ್ಲದೆ. ಅಡುಗೆ ಕಾರ್ಯಕ್ರಮದಲ್ಲಿ ಉಪ್ಪಿಟ್ಟನ್ನೇ ಮಾಡಿಸಿಕೊಂಡು ಆಸ್ವಾದಿಸಿದರು.
ಹಾಗಾಗಿ ಉಪ್ಪಿಟ್ಟಿಗೆ ಜೈ ಎನ್ನೋಣ.

usharani
ಟಿ.ಆರ್. ಉಷಾರಾಣಿ
ಮಂಗಳೂರು


Share This Article
Leave a comment