ದ್ವಿಚಕ್ರವೋ..? ಲಾಜಾಹೋಮವೋ..?

Team Newsnap
8 Min Read

ನಂಗೆ ಮೂರು ಜನ ಸೋದರತ್ತೆಯರು. ಸುಮಿತ್ರಾ ಮತ್ತು ಪ್ರೇಮಾ ಅತ್ತೆಯರು ನಾ ಹುಟ್ಟುವ ಮೊದಲೇ ಮದುವೆಯಾಗಿ ಹೋಗಿದ್ದರು. ಕೊನೆಯವರು ಹೇಮ ಅತ್ತೆ. ನನಗೆ ಸುಮಾರು ಐದು ವರ್ಷವಿದ್ದಾಗ ಅವರಿಗೆ ಮದುವೆಯಾದದ್ದು. ಅದರ ಸಂಭ್ರಮದಲ್ಲಿ ನನ್ನದೇ ಸಿಂಹಪಾಲು. ಮಿರಿಮಿರಿ ಜರಿಲಂಗ, ಕಿವಿಗೆ ಲೋಲಾಕು, ಕಿಣಿಕಿಣಿ ಎನುವ ಕಾಲ್ಗೆಜ್ಜೆ.. ಆಹ್ ಅಂದಿನ ಖುಷಿಯನ್ನು ಹೇಳಲು ಸಾಧ್ಯವೇ? ನಾವಿದ್ದ ಮನೆಯ ರಸ್ತೆಯ ಮೇಲುಭಾಗದಲ್ಲೇ ಮದುವೆ ಚೌಲ್ಟ್ರಿ, ಹಾಗಾಗಿ ಚಿಕ್ಕ ಪುಟ್ಟ ಸಾಮಾನನ್ನು ಕೈಲಿ ಇಟ್ಕೊಂಡು ನಾನೇ ಮದುವೆ ಮನೆಯ ಎಲ್ಲ ಸಾಮಾನುಗಳನ್ನು ಸಾಗಿಸ್ತೀನೇನೋ ಅನ್ನೋ ಹಾಗೆ ತಾರಾಡ್ತಾ ಇದ್ದೆ. ಹಾಗೆ ಅದೇನೋ ಹಿಡ್ಕೊಂಡು ಓಡುವಾಗ ನಾ ಬಿದ್ದು, ಕಿವಿಯ ಚಿನ್ನದ ಲೋಲಾಕು ಮುರಿದು ಅದ್ಯಾವ ಮೋರಿಗೆ ಬಿತ್ತೋ ಕಾಣೆ.
‘ಸ್ವರ್ಣಾ, ನನ್ ಬಾಣಂತನಾನೂ ಮಾಡ್ತಾ, ಮನೇ ಕೆಲಸಾನೂ ಮಾಡ್ಕೊಂಡು, ಮೂರು ಚಿಕ್ಕ ಮಕ್ಕಳನ್ನು ರೆಡಿಮಾಡಿ ಸ್ಕೂಲಿಗೆ ಕಳಿಸಿ, ಅವರಿಗೆ ಓದಿಸೋದು ನಿಂಗೆ ಕಷ್ಟ ಆಗುತ್ತೆ. ನಾನು ಓದಿಸ್ತೀನಿ’ ಆಂತ ಅತ್ತಿಗೆಯ ಕಷ್ಟಕ್ಕೆ ಮರುಗುವ ಸಹೃದಯಿ ನಮ್ಮತ್ತೆ. ಹಾಗಾಗಿ ಮೊದಲ ಬಾಣಂತಿತನದಲ್ಲಿ ಆಕೆ ತನ್ನ ಚಿಕ್ಕ ಮಗುವನ್ನು ಮಲಗಿಸಿ, ನನಗೆ ಕನ್ನಡ, ಇಂಗ್ಲಿಷ್, ಸೈನ್ಸ್, ಮ್ಯಾಥ್ಸ್, ಸೋಶಿಯಲ್ ಸ್ಟಡೀಸ್ ಎಲ್ಲವನ್ನೂ ಬಾಯಿಪಾಠ ಮಾಡಿಸುತ್ತಿದ್ದರು.
ರಾಬರ್ಟ್ ಬ್ರೂಸ್ ಮತ್ತು ಜೇಡದ ಕಥೆಯಂತೂ ಮನಮುಟ್ಟುವ ಹಾಗೆ ಹೇಳುತ್ತಿದ್ದರು. ಅವರು ಪಾಠ ಮಾಡಿದ ಆ ಕತೆ ಇಂದಿಗೂ ನನ್ನೆಲ್ಲ ಪ್ರಯತ್ನಗಳ ಹಿಂದಿನ ಶಕ್ತಿ.
ಅಯ್ಯೋ ಇಷ್ಟೇ ಅಲ್ಲ; ನನ್ನ ಮತ್ತು ಅತ್ತೆ ನಡುವಿನ ಸ್ಟೋರಿ ಇನ್ನೂ ಇವೆ. ಒಂದು ಸಣ್ಣ ಘಟನೆ ಹೇಳ್ತೀನಿ:
ಆವತ್ತು ಒಂದು ದಿನ ಮನೇನಲ್ಲಿ ನಾನು, ನಮ್ಮತ್ತೆ ಇಬ್ಬರೇ. ಅಪ್ಪ ಅಮ್ಮ ಎಲ್ಲಿ ಹೋಗಿದ್ದರೋ ನೆನಪಾಗುತ್ತಿಲ್ಲ. ಅತ್ತೆ ಮೋಸಂಬಿ ಹಣ್ಣು ತಿನ್ನು ಅಂತ ಸಿಪ್ಪೆ ಬಿಡಿಸಿ ಕೊಟ್ಟಿದ್ದರು. ನಾನಿನ್ನೂ ಚಿಕ್ಕವಳು, ಜೊತೆಗೆ ಈಗಿನ ಮಕ್ಕಳ ಹಾಗೆ ನಾವೆಲ್ಲ ಚೂಟಿಯೂ ಇರಲಿಲ್ಲ ಬಿಡಿ. ಅತ್ತೆ ಅಡುಗೆ ಮನೆಯಲ್ಲಿ ಏನೋ ಕೆಲಸ ಮಾಡ್ತಿದ್ರು. ನಾನು ಹಾಲಿನಲ್ಲಿ ಕೂತು ಅಲ್ಲಲ್ಲಿ ತೆಳ್ಳಗಿನ ಸಿಪ್ಪೆ ಚೆಲ್ಲಾಡುತ್ತ ಪೂರ್ತಿ ಮೋಸಂಬಿ ತಿಂದೆ. ತಮ್ಮ ಕೆಲಸ ಮುಗಿಸಿ ಬಂದ ಅತ್ತೆ ‘ಸುಬ್ಬೂ ಪೂರ್ತಿ ತಿಂದ್ಯಾ?’ ಅಂತ ಅಚ್ಚರಿಯಿಂದ ಕೇಳಿದ್ರು. ಯಾಕಂದ್ರೆ ಊಟ ತಿಂಡಿಯ ವಿಷಯದಲ್ಲಿ ನಾ ಚಿಕ್ಕಂದಿನಿAದಲೂ ಸ್ವಲ್ಪ ಕುಸಬಿಷ್ಟೆಯೇ. ಹಸಿದಿದ್ದೆನೇನೋ ‘ಹೂಂ ಅತ್ತೆ ತಿಂದೆ’ ಅಂದೆ. ‘ಬೀಜ ಎಲ್ಲಿ’ ಅನ್ನೋ ಪ್ರಶ್ನೆಗೆ ಅಲ್ ಲ್ಲಿ’ ಸ್ವಲ್ಪ ಅಂತ ಮೂಲೆ ತೋರಿಸಿ ‘ನಾನೂ ಸ್ವಲ್ಪ ಬೀಜ ನುಂಗಿದೆ’ ಅಂತ ಬೀಗುತ್ತ ಹೇಳಿದೆ. ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದವರ ಹಾಗೆ ಅತ್ತೆಅಯ್ಯೋ ಎಂಥಾ ಕೆಲ್ಸ ಮಾಡ್ಬಿಟ್ಯೋ, ಬೀಜ ನುಂಗಿದ್ಯಾ? ಇನ್ನೊಂದೆರೆಡು ದಿನದಲ್ಲಿ ನೀ ನುಂಗಿದ ಬೀಜ ಹೊಟ್ಟೆಯೊಳಗೇ ಮೊಳಕೆ ಒಡೆದು, ಗಿಡವಾಗಿ, ದೊಡ್ಡ ಮರವಾಗಿ, ನಿನ್ನ ಕಿವಿ, ಮೂಗು, ಬಾಯಿಗಳಿಂದ ರೆಂಬೆ ಕೊಂಬೆ ಬಂದು, ಅದರಲ್ಲಿ ಹಣ್ಣು ಬಿಡುತ್ತೆ. ಅಯ್ಯೋ ದೇವ್ರೇ ಎಂಥಾ ಕೆಲಸ ಆಗ್ಬಿಡ್ತು? ನಂಗೇನೋ ಹಣ್ಣು ಬೇಕಂದಾಗಿ ನಿನ್ನ್ ಕಿವಿ ಬಾಯಿಂದ ಬಂದಿರೋ ಮರದಿಂದ ಕಿತ್ಕೊಂಡು ತಿಂತೀನಿ. ನೀ ಹೇಗೆ ಊಟ ಮಾಡ್ತೀಯೇ?’ ಅಂತ ಹೆದರಿಸಿದ್ರು. ಗಂಗೆ ಯಮುನೆ ಧಳಧಳ ಅಂತ ಕಣ್ಣಿಂದ ಉದುರಿದರು. ನಾ ಎಷ್ಟು ಹೆದರಿದ್ದೆ ಅಂದರೆ ಆ ಕ್ಷಣದಲ್ಲೇ ಕನ್ನಡೀಲಿ ನನ್ನ ಮುಖ ನೋಡಿಕೊಂಡೆ, ಗಿಡ ಆಗಲೇ ಹುಟ್ಟಿಬಿಟ್ಟಿದ್ಯೇನೋ ಅಂತ. ಬೀಜ ತಿಂದ ಪಾಪಕ್ಕೆ ಪರಿಹಾರವನ್ನೂ ಅತ್ತೆಯೇ ಸೂಚಿಸಿದರು. ಕೈ ಕಾಲು ಮುಖ ತೊಳ್ಕೊಂಡು ಬಂದು ದೇವರಿಗೆ ದೀಪ ಹಚ್ಚಿ, ಇನ್ಮುಂದೆ ಬೀಜ ನುಂಗಲ್ಲ, ಕ್ಷಮಿಸಿಬಿಡು ದೇವರೇ ಅಂತ ಕೇಳ್ಕೋ’ ಅಂದರು. ಅವರು ಹೇಳಿದ್ದೆಲ್ಲಾ ಚಾಚೂ ತಪ್ಪದೇ ಮಾಡಿ, ಕಣ್ಣೀರಿಡುತ್ತ ‘ದೇವ್ರೇ, ಇನ್ಮೇಲೆ ಇಂಥಾ ತಪುö್ಪ ಮಾಡಲ್ಲ, ಈ ಸಲ ಕ್ಷಮಿಸು, ನನ್ ಹೊಟ್ಟೇಲಿ ಗಿಡ ಬೆಳೆಸಬೇಡ’ ಅಂತ ಕೇಳಿ, ತಿಂಗಳೆಲ್ಲಾ ಗಿಡ ಬರುತ್ತೋ ಏನೋ ಅಂತ ಹೆದರಿ ನಿದ್ದೆಯಲ್ಲೂ ಬೆಚ್ಚುತ್ತಿದ್ದೆ. ನನಗೂ ಅತ್ತೆಗೂ ಕೆಲ ಸ್ವಭಾವಗಳಲ್ಲಿ ತುಂಬ ಹೋಲಿಕೆ ಇದೆ ಅಂತ ನಮ್ಮಮ್ಮ ಹೇಳ್ತಿರ್ತಾರೆ. ನಮ್ಮತ್ತೆಯೂ ‘ಸ್ವರ್ಣಾ ನಾ ಅವರಷ್ಟು ಎತ್ತರ ಇದೀನಾ? ಅವರಷ್ಟು ದಪ್ಪ ಇದೀನಾ? ನನ್ ಜಡೆ ಅಷ್ಟಾದರೂ ಇದ್ಯಾ?’ ಅಂತ ನಮ್ಮಮ್ಮನ್ನ ಕೇಳ್ತಿದ್ರಂತೆ. ನಾನೂ ನನ್ ಗಂಡನ್ನ ಕೇಳ್ತಿರ್ತೀನಿ! ‘ಹೆಂಡ್ತೀರು ತನ್ನ ಗಂಡ ಬೇರೆ ಹುಡುಗೀರನ್ನ, ಹೆಂಗಸರನ್ನ ನೋಡ್ಬಾರ್ದು ಅಂತ ಅಂದ್ಕೊಂಡ್ರೆ, ನೀನೊಳ್ಳೆ ನೋಡ್ರೀ ನೋಡ್ರೀ ಅಂತೀಯಲ್ಲ’ ಅಂತ ತಮಾಷೆ ಮಾಡ್ತಿರ್ತಾರೆ. ‘ನೀವು ಶ್ರೀರಾಮನ ನಕ್ಷತ್ರದವರಲ್ವಾ? ನೋಡಿ ಏನೂ ತೊಂದ್ರೆ ಇಲ್ಲ’ ಅಂತ ನಾನೂ ರೇಗಿಸೋದು. ಅತ್ತೆ ವಿಜ್ಞಾನ ಪದವೀಧರೆ, ಬೆಂಗಳೂರಿನಲ್ಲಿ ಹೈಸ್ಕೂಲ್ ಟೀಚರ್. ದಿನವೂ ಕೆಲಸಕ್ಕೆ ಹೋಗಬೇಕು. ಅದರ ಜೊತೆಗೆ ಅಲ್ಲಿ ಇಲ್ಲಿ ಓಡಾಡೋದೂ ಇರುತ್ತಲ್ಲಾ. ಪದೇ ಪದೇ ಗಂಡನ್ನೋ ಮಕ್ಕಳನ್ನೋ ಅಲ್ಲಿಗೆ ಕರ್ಕೊಂಡು ಹೋಗಿ, ಇಲ್ಲಿಗೆ ಕರ್ಕೊಂಡು ಹೋಗೀ ಅಂತ ಕೇಳ್ಕೊಳ್ಳೋದು ಯಾರಿಗಾದ್ರೂ ಕಷ್ಟಾನೇ ಅಲ್ವಾ? ಏನಂದ್ರೂ ಡಿಪೆಂಡೆನ್ಸಿ ಮನಸಿಗೆ ಕಸಿವಿಸಿಯೇ. ಅದಕ್ಕೆ ನಮ್ಮತ್ತೆ ಟೂ ವೀಲ್ಹರ್ ಕಲೀಬೇಕೂಂತ ಇಷ್ಟಪಟ್ರು. ನಮ್ಮತ್ತೆ ಸ್ವಲ್ಪ ಎತ್ತರ ಕಮ್ಮಿ. ಹಾಗಾಗಿ ಯಾವ ವೆಹಿಕಲ್ ಆದರೂ ಅವರಿಗೆ ಕಾಲು ನೆಲಕ್ಕೆ ಎಟಕೋದು ಸ್ವಲ್ಪ ಕಷ್ಟವೇ. ಆದರೂ ಹಠ ಬಿಡದ ವಿಶ್ವಾಮಿತ್ರನಂತೆ ಗಾಡಿ ಕಲಿಯೋ ಆಸ್ಥೆ ತೋರಿದ್ರು. ಬೇಸಿಗೆ ರಜೆಗೆಂದು ನಮ್ಮಮ್ಮನ ಮನೆಗೆ ಬಂದಾಗ ‘ಚುಬ್ಚಿಯಮ್ಮಾ ಈ ಸಲಾ ಆದ್ರೂ ಗಾಡಿ ಕಲೀಬೇಕೇ’ ಅಂತಿದ್ರು. ಇದು ಪ್ರತಿ ವರ್ಷದ ಮಾತು. ಅದು ಕೇವಲ ಬಾಯಿಂದ ಮಾತು ಅಂದ್ಕೋಬೇಡಿ. ನಿಜವಾಗಿಯೂ ಕಲಿಯೋ ಇಚ್ಛೆ ಇತ್ತು. ವ್ರತಗಳನ್ನು ‘ವರ್ಷೇ ವರ್ಷೇ ಕರಿಷ್ಯಾಮಿ, ಏತದ್ವರ್ಷ’ ಎನ್ನುವ ಹಾಗೆ ಪ್ರತಿವರ್ಷವೂ ಕಲಿಯುವ ಪ್ರಯತ್ನ ಮಾಡುವುದು, ಗಾಡಿಯ ಮೇಲೆ ಕುಳಿತಾಕ್ಷಣ ಐರಾವತವನ್ನೇರಿದ ಇಂದ್ರನಂತೆ ಕ್ಷಣ ಬೀಗುವುದು ಮತ್ತೆ ಹೆದರಿ ನಡುಗಿ ‘ಸುಬ್ಬೂ ನಿಲ್ಸು’ ಅಂತ ಕೈಬಿಟ್ಟು, ನನ್ನ ಕೈಕಾಲು ಬಿಡಿಸಿ ಇಳಿದುಬಿಡೋರು. ಮಾವನೂ ಎತ್ತರ ಕಡಿಮೆ. ಹಾಗಾಗಿ ಅವರಿಗೂ ಇವರನ್ನು ಗಾಡಿ ಮೇಲೆ ಕೂಡಿಸಿ ತಾವೂ ಹಿಂದೆ ಕುಳಿತುಕೊಂಡು ಕಲಿಸೋದು ಕಷ್ಟ. ನಾನೋ, ನನ್ನ ತಮ್ಮಂದಿರೋ ಹಾಗೂ ಹೀಗೂ ಗಾಡಿಯ ಹಿಂದೆ ಒಂದು ಕೈ, ಮುಂದೆ ಹ್ಯಾಂಡಲಿನ ಮೇಲೆ ಒಂದು ಕೈ ಹಿಡಿದುತಳ್ಳೋ ಮಾಡಲ್ ಗಾಡಿ ಇದು ತಳ್ಳಿ ನೋಡಪ್ಪಾ’ ಅಂತ ಅವರ ಭಾರವನ್ನೂ ಹೊತ್ತು ಮುಂದೆ ತಳ್ಳುತ್ತಿದ್ವಿ. ಯಾಕೆ ತಳ್ಳುತ್ತಿದ್ವಿ ಅಂದ್ರೆ ಅತ್ತೆಗೆ ಎಕ್ಸಲೇಟರ್ ಕೊಡೋಕೆ ಭಯ. ಎಲ್ಲಿ ಗಾಡಿ ನಮ್ಮನ್ನೂ, ಅವರನ್ನೂ ಬಿಟ್ಟು, ಬೀಳಿಸಿ ಮುಂದೆ ಓಡಿಬಿಡುತ್ತೋ ಅಂತ.
*
ಇಂದಿಗೂ ಆಶ್ಚರ್ಯವೆಂದರೆ ನಾನು ಗಾಡಿ ಓಡಿಸೋದನ್ನು ಕಲಿತದ್ದು. ನನಗೆ ಯಾವ ಗುರುವೂ ಇಲ್ಲ. ಅಪ್ಪ ಬ್ಯಾಂಕಿಗೆ ಹೋಗುವಾಗ ಮೊದಮೊದಲು ಸೈಕಲ್‌ಲಿ ಹೋಗುತ್ತಿದ್ದರು. ಬಹುಶಃ ನಾನು ಮಿಡ್ಲ್ಸ್ಕೂಲ್‌ಲಿದ್ದೆ. ಅವರು ತಿಂಡಿ ತಿನ್ನುವ ಸಮಯದಲ್ಲಿ, ನಿಲ್ಲಿಸಿರುತ್ತಿದ್ದ ಆ ದೊಡ್ಡ ಸೈಕಲನ್ನು ಕಷ್ಟಪಟ್ಟು ಸೆಂಟರ್ ಸ್ಟಾಂಡ್ ತೆಗೆದು ರಸ್ತೆಯಲ್ಲಿ ತಳ್ಳೋದು, ನಿಲ್ಲಿಸೋದು. ಇದೇ ದೊಡ್ಡ ಸಾಹಸ- ಸಾಧನೆ ನನ್ನ ಮಟ್ಟಿಗೆ. ಬ್ಯಾಲೆನ್ಸ್ ಸಿಕ್ಕ ನಂತರ ಕತ್ತರಿ ಸೈಕಲ್ ಹೊಡೆಯೋದು, ಯಾರನ್ನಾದರೂ ಗೋಗರೆದು ಸೀಟ್ ಮೇಲೆ ಕೂರಿಸಿಸಿಕೊಳ್ಳೋದು, ಸೈಕಲ್ ತುಳಿಯುತ್ತ ಬಂದು ಆಮೇಲೆ ಸಾಹಸ ಮಾಡಿ ಹಾರಿ ಕೆಳಗಿಳಿಯೋದು. ಹೈಸ್ಕೂಲ್‌ಗೆ ಬರುವ ವೇಳೆಗೆ ಅಪ್ಪ ಟೂ ವ್ಹೀಲರ್ ತಗೊಂಡ್ರು. ಒಂದು ಶುಭಗಳಿಗೆಯಲ್ಲಿ ಧೈರ್ಯ ಮಾಡಿ ನಾನೂ ಅದನ್ನು ಓಡಿಸಿದೆ. ಗಾಡಿ ಓಡಿಸೋದು ಬಹುದೊಡ್ಡ ವಿದ್ಯೆ ಎಂದೇನು ನನಗನಿಸಲೇ ಇಲ್ಲ. ಮೂವತ್ತೆರೆಡು ವರ್ಷಗಳಾಯಿತು ಕಲಿತು. ಈಗಲೂ ಡೌನ್ ಇರುವ ರಸ್ತೆಗಳಲ್ಲಿ ಎರಡೂ ಕೈ ಬಿಟ್ಟು ಗಾಡಿ ಓಡಿಸುವ ಖಯಾಲಿ ಇದೆ. ಆ ಮಜವೇ ಬೇರೆ. ನಾ ಹೀಗೆ ಎರಡೂ ಕೈ ಬಿಟ್ಟು ಗಾಡಿ ಓಡಿಸುವೆ ಎಂದಾಗ ನನ್ನ ಆತ್ಮೀಯರೊಬ್ಬರು ‘ನಿಂಗೇನು ತಲೆ ಕೆಟ್ಟಿದೆಯಾ? ನೀನೇನು ಅಡೋಲಸೆಂಟ್ ಅಂದ್ಕೊಂಡಿದೀಯಾ?’ ಅಂತ ಬೈಯ್ದಿದ್ದು ಚಂದ ನೆನಪಿದೆ.
ಇಷ್ಟಾದರೂ ನಾನ್ಯಾಕೆ ಅತ್ತೆಗೆ ಗಾಡಿ ಕಲಿಸೋ ಆಸೆ ಇಟ್ಕೊಂಡಿದ್ದೆ ಅಂದ್ರೆ ನನ್ನ ಚಿಕ್ಕ ವಯಸ್ಸಿನಲ್ಲಿ ಆಕೆ ಕಲಿಸಿದ ಪಾಠಗಳು, ಜೀವನದ ಪಾಠಗಳೂ.
ಈಗೊಂದು ನಾಲ್ಕು ವರ್ಷಗಳಾಗಿರಬೇಕು. ಒಂದು ಶುಭಸಂಜೆ ರಜೆಗೆಂದು ಮಂಡ್ಯಕ್ಕೆ ಬಂದಿದ್ದಾಗ ‘ಚುಬಚಿ ಈ ಸಲ ಏನಾದ್ರೂ ಆಗ್ಲಿ ನಾ ಗಾಡಿ ಓಡಿಸೋದನ್ನು ಕಲಿಯಲೇಬೇಕು’ ಅಂತ ಪಟ್ಟು ಹಿಡಿದರು. ಜೊತೆಗೆ ಮಾವನೂ ಮಂಡ್ಯಕ್ಕೆ ಬಂದಿದ್ದರು. ಶೀಬಿನರಸಿಂಹ ಅಂತ ಮಾವನ ಹೆಸರು. ಸಿಂಹ ಅಂತ ಕರೆಯೋದು. ಅದಕ್ಕೆ ಅತ್ತೆಗೆ ‘ಸಿಂಹಿಣಿ’ ಅಂತ ನಾವೆಲ್ಲ ರೇಗಿಸೋದು. ನಾನು ಕೆಲಸಕ್ಕೆ ಹೋಗಿ ಬರೋದ್ರೊಳಗೆ ಒಂದಿಷ್ಟು ಕಲೀಬೇಕೂಂತ ಅತ್ತೆಯ ಆಸೆ. ಸರಿ. ತಾವೇ ತಳ್ಳೋದು, ನಿಲ್ಸೋದು ಎಲ್ಲ ಮಾಡ್ತಿದ್ರು. ಎತ್ತರವಿರುವ ನನ್ನ ತಮ್ಮ ಅತ್ತೆ ಗಾಡಿಯ ಮೇಲೆ ಕೂತಿದ್ದಾಗ ಅವರಿಗೆ ಸಪೋರ್ಟ್ ಮಾಡಿದ್ದಕ್ಕೆ ಒಂದ್ನಾಲ್ಕು ಸಲ ಇಡೀ ರಸ್ತೆಯ ತುಂಬ ಗಾಡಿಯನ್ನು ಓಡಿಸಿದರು. ಯುದ್ಧ ಗೆದ್ದ ವೀರನಂತೆ ಬೀಗುತ್ತ ಸಂಜೆ ನಾ ಬಂದ ಮೇಲೆ ತಾವು ಗಾಡಿ ಕಲಿತ ಸಂಭ್ರಮವನ್ನು ಹಂಚಿಕೊಳ್ಳತೊಡಗಿದರು. ನನ್ನ ತಮ್ಮ ಎಲ್ಲೋ ಹೊರಗೆ ಹೋಗಿದ್ದ. ಹಾಗಾಗಿ ಮಾವ ತಾವೇ ಅತ್ತೆಗೆ ಸಹಾಯ ಮಾಡುವುದಾಗಿ ಹೇಳಿದರು. ಏರುಸೂರ್ಯನ ಜೊತೆಗಿದ್ದ ಧೈರ್ಯ ಈಗ ಅತ್ತೆಯಲ್ಲಿ ಇಳಿಸೂರ್ಯನಂತೆ ಕುಗ್ಗಿತ್ತು. ನಾವೆಲ್ಲ ಮಾವನನ್ನು ಪುಸಲಾಯಿಸಿದೆವು. ಸರಿ ಅತ್ತೆ ಮುಂದೆ ಸೀಟಿನಲ್ಲಿ ಕುಳಿತರು, ಮಾವ ಅವರ ಹಿಂದೆ. ಗಾಡಿ ಶುರುವಾಗ್ತಿದ್ದಂತೆ ಅತ್ತೆ ಮೆಲ್ಲಗೆ ‘ರೀ ಭಯ ಆಗ್ತಿದೆ’ ಅಂದ್ರಂತೆ. ಅದಕ್ಕೆ ಮಾವ ‘ಏಮಿ ಸುಮ್ನಿರೇ ನಾ ಇಲ್ವಾ ಹಿಡ್ಕೋತೀನಿ’ ಅಂತ ಮುಂದೆ ಬಾಗಿ ಹ್ಯಾಂಡಲ್ ಹಿಡ್ಕೊಂಡ್ರು. ಆಗ್ಲೇ ಹೇಳಿದ್ನಲ್ಲಾ ಮಾವಾನೂ ಕುಳ್ಳೇ. ಹಾಗಾಗಿ ಮುಂದೆ ಬಗ್ಗಿ ಹ್ಯಾಂಡಲ್ ಹಿಡ್ಕೊಳ್ಳುವಾಗ ಅತ್ತೆಯ ಬೆನ್ನಿಗೆ ತೀರಾ ಆತ ಹಾಗಿತ್ತು. ಮೊದಲೇ ಭಯ. ಜೊತೆಗೆ ಬೆನ್ನಿಗೆ ಮಾವನ ಭಾರ. ಮದುವೆಯ ಸಂದರ್ಭದಲ್ಲಿ ಧಾರೆಯಾದ ಮೇಲೆ ನಾಗೋಲಿ ಶಾಸ್ತçದಲ್ಲಿ ಲಾಜಾಹೋಮ ನಡೆಯುತ್ತದೆ. ಮದುಮಗಳು ತುಸು ಬಗ್ಗಿದ್ದಾಗ ವರ ವಧುವಿನ ಬೆನ್ನ ಮೇಲಿಂದ ಬಗ್ಗಿ ಆಕೆಯ ಎರಡೂ ಕೈ ಹಿಡಿದು ಹೋಮಕ್ಕೆ ಅರಳು ಸುರಿಸುವ ಲಾಜಾಹೋಮವನ್ನು ನೆನಪಿಸುವ ಚಿತ್ರ ನಮ್ಮ ಕಣ್ಮುಂದೆ ಇತ್ತು.
‘ಬ್ರೇಕ್ ಹಾಕೇ’ ಅಂತ ಮಾವ ಅನ್ನೋಕೂ, ಬ್ರೇಕ್ ಅಂದ್ಕೊಂಡು ಅತ್ತೆ ಎಕ್ಸಲೇಟರ್ ಒತ್ತೋಕೂ ಒಂದೇ ಆಯಿತು. ಎದುರಿಗಿದ್ದ ಚರಂಡಿಗೆ ದಂಪತಿ ಬಿದ್ದರು ಎಂದುಕೊಳ್ಳುವಷ್ಟರಲ್ಲಿ ಇವರಿಬ್ಬರ ಭಾರ ತಾಳಲಾರದೆ ಹ್ಯಾಂಡಲ್ ತಿ(ಕಿ)ರುಚಿಕೊಂಡು ಪಕ್ಕದ ಮುನಿಸಿಪಾಲಿಟಿ ಕಸದ ತೊಟ್ಟಿಗೆ ಬಡಿಯಿತು. ಜನುಮದ ಜೋಡಿ ಕಸದ ತೊಟ್ಟಿಯ ಮುಂಭಾಗ ಒಬ್ಬರ ಪಕ್ಕೆಗೆ ಒಬ್ಬರು ಬಿದ್ದು ಕುಯ್ಯೋ ರ‍್ರೋ ಅಂತ ನರಳುತ್ತಿದ್ದ ದೃಶ್ಯಕ್ಕೆ ಅಮ್ಮ ಅಪ್ಪ ನಾನು ನಗಲಾಗದೆ ಹೇಗೋ ಎಬ್ಬಿಸಿ ಕರೆದುಕೊಂಡು ಫಸ್ಟ್ ಏಡ್ ಕೊಟ್ಟೆವು. ಪ್ರಥಮ ಚುಂಬನೇ ದಂತಭಗ್ನಂ ಆಗಿ ಗಾಡಿ ಕಲಿಯುವ ಅತ್ತೆಯ ಆಸೆ ಕಮರಿಹೋಯಿತು. ಈಗಲೂ ಮದುವೆ ಮನೆಗಳಲ್ಲಿ ಲಾಜಾ ಹೋಮ ನಡೆಯುವಾಗ ಅತ್ತೆಯ ಕಡೆ ನೋಡಿ ನಾ ಮುಸಿಮುಸಿ ನಕ್ಕರೆ `ಏಟು ಕೊಡ್ತೀನಿ’ ಅನ್ನೋ ಕೈ ಸನ್ನೆ ಕಾಣತ್ತೆ.
ಬದುಕೆಂದರೆ ಗಾಡಿ ಕಲಿಯುವಿಕೆಯಂತೆಯೇ ಧೈರ್ಯದಿಂದ ಕಲಿಯುವುದು, ಎದುರಿಸುವುದು, ಬ್ಯಾಲೆಂನ್ಸಿಂಗ್ ಮತ್ತು ಹ್ಯಾಂಡ್ಲಿಂಗ್… ತಾನೇ?

IMG 20180306 WA0008 1 edited
ಡಾ.ಶುಭಶ್ರೀಪ್ರಸಾದ್, ಮಂಡ್ಯ
೯೮೪೪೪೯೮೪೩೨
Share This Article
Leave a comment