ಮಳವಳ್ಳಿಯ ಬಾಡಿಗೆ ಮನೆಯಲ್ಲಿ ಸುರಂಗ : ದಂಗಾದ ಮಾಲೀಕ – ಮಾದಕ ವಸ್ತು, ಮಾರಕಾಸ್ತ್ರ ಪತ್ತೆ

Team Newsnap
2 Min Read

ಜಿಲ್ಲೆಯ ಮಳವಳ್ಳಿ ಪಟ್ಟಣದ ಮನೆಯೊಂದರ ಮಾಲೀಕನಿಗೆ ಬಾಡಿಗೆದಾರನೇ ಬಿಗ್ ಶಾಕ್ ನೀಡಿದ್ದಾನೆ.

ಮನೆ ಖಾಲಿ ಮಾಡಿ ಎಂದು ಎಷ್ಟೇ ಹೇಳಿದರೂ ಸಹ ಮನೆ ಖಾಲಿ ಮಾಡಿರಲಿಲ್ಲ. ಆ ಮಾಲೀಕನಿಗೆ ಮಳೆ ವರದಾನವಾಗಿ ಬಂದು ಮನೆ ಗೋಡೆ ಕುಸಿದು ಬಿದ್ದಿದೆ. ಈ ವೇಳೆ ಮನೆ ಒಳಭಾಗಕ್ಕೆ ಹೋಗಿ ನೋಡಿದಾಗ ಮನೆ ಮಾಲೀಕನಿಗೆ ಶಾಕ್ ಕಾದಿತ್ತು.

ಮಳವಳ್ಳಿ ಪಟ್ಟಣದ ಕೋಟೆ ಬೀದಿಯ ಪವಿತ್ರರಾಜ್ ತಮ್ಮ ಪಿತ್ರಾರ್ಜಿತ ಆಸ್ತಿಯಾಗಿ ಬಂದಿದ್ದ ಮನೆಯನ್ನು ತಸ್ಲೀಮ್ ಹಾಗೂ ಆಕೆಯ 5 ಗಂಡು ಮಕ್ಕಳಿಗೆ ಬಾಡಿಗೆ ನೀಡಿದ್ದರು. ಅದ್ಯಾಕೋ ಏನು ಅನ್ನಿಸಿತೋ ಗೊತ್ತಿಲ್ಲ, ಬಾಡಿಗೆ ಕೊಟ್ಟು 1 ವರ್ಷವಾದ ಬಳಿಕ ಪವಿತ್ರರಾಜ್ ಮನೆ ಖಾಲಿ ಮಾಡುವಂತೆ ತಸ್ಲೀಮ್ ಹಾಗೂ ಆಕೆಯ ಮಕ್ಕಳಿಗೆ 2 ತಿಂಗಳಿನಿಂದ ಒತ್ತಾಯ ಮಾಡಿದ್ದಾರೆ.ಇದನ್ನು ಓದಿ –ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶವಿಲ್ಲ – ಸುಪ್ರೀಂ

WhatsApp Image 2022 08 30 at 2.50.26 PM

ಸಬೂಬು ಹೇಳಿಕೊಂಡು ಮನೆ ಖಾಲಿ ಮಾಡಿರಲಿಲ್ಲ. ಆದರೆ ಕಳೆದ 3 ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಆ ಮನೆಯ ಗೋಡೆ ಕುಸಿದು ಬಿದ್ದಿದೆ. ಹೀಗಾಗಿ ಮನೆಯ ಒಳಭಾಗಕ್ಕೆ ಹೋಗಿ ನೋಡಿದ ಪವಿತ್ರರಾಜ್‌ಗೆ ಕಂಡಿರುವುದು 12 ಅಡಿಯ ಸುರಂಗ, ಮಾರಕಾಸ್ತ್ರ ಹಾಗೂ ಮಾದಕ ವಸ್ತುಗಳು.

ಪವಿತ್ರರಾಜ್ ಬಾಡಿಗೆ ನೀಡಿದ್ದ ಮನೆಯ ಸ್ನಾನಗೃಹದ ಬಳಿ 12 ಅಡಿಯ ಸುರಂಗ, ಮಾರಕಾಸ್ತ್ರ ಹಾಗೂ ಮಾದಕ ವಸ್ತುಗಳನ್ನು ನೋಡಿ ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಬಳಿಕ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಬಂದಾಗ ಮನೆಯಲ್ಲಿ ಇದ್ದ ಮಾದಕ ವಸ್ತು, ಮಾರಕಾಸ್ತ್ರಗಳೊಂದಿಗೆ ಮನೆಯಲ್ಲಿ ಇದ್ದ ನಾಲ್ವರು ಪುರುಷರು ತಮ್ಮ ತಾಯಿ ತಸ್ಲೀಮ್‌ರನ್ನು ಬಿಟ್ಟು ಪರಾರಿಯಾಗಿದ್ದಾರೆ.

ಮನೆಯಲ್ಲಿ 12 ಅಡಿ ಸುರಂಗ ಮಾಡಿ, ಅದರಲ್ಲಿ ಮಾದಕ ವಸ್ತುಗಳು ಹಾಗೂ ಮಾರಕಾಸ್ತ್ರಗಳ ಶೇಖರಣೆ ಮಾಡಲಾಗಿದೆ ಎನ್ನಲಾಗುತ್ತಿದೆ. ಪರಾರಿಯಾಗಿರುವವರು ಮನೆಯ ಬಳಿ ಸರಿಯಾಗಿ ನಡೆದುಕೊಳ್ಳುತ್ತಿರಲಿಲ್ಲ. ಆಗ್ಗಾಗ್ಗೆ ಗಲಾಟೆಗಳನ್ನು ಮಾಡುತ್ತಿದ್ದರು. ನಮಗೆ ಅವರು ಇರುವವರೆಗೆ ಭಯದ ವಾತಾವರಣ ಇಲ್ಲಿ ನಿರ್ಮಾಣವಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಒಟ್ಟಾರೆ ಬಾಡಿಗೆ ಮನೆಯೊಂದರಲ್ಲಿ ಈ ರೀತಿ ಸುರಂಗ ಕೊರೆದು ಮಾದಕ ವಸ್ತುಗಳು ಹಾಗೂ ಮಾರಕಾಸ್ತ್ರಗಳನ್ನು ಶೇಖರಣೆ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇದೀಗ ಪರಾರಿಯಾಗಿರುವ ನಾಲ್ವರ ಶೋಧ ಕಾರ್ಯಕ್ಕೆ ಮಳವಳ್ಳಿ ಪೊಲೀಸರು ಮುಂದಾಗಿದ್ದಾರೆ.

Share This Article
Leave a comment