ಲೋಕ ಚುನಾವಣೆ: ಮತ ಎಣಿಕೆ ಕಾರ್ಯದಲ್ಲಿ ಯಾವುದೇ ಲೋಪ ಬೇಡ: ಡಾ. ಕುಮಾರ

Team Newsnap
2 Min Read

ಮಂಡ್ಯ : ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಮತ ಎಣಿಕೆ ಕಾರ್ಯ ಜೂನ್ 4 ರಂದು ನಡೆಯಲಿದೆ, ಉತ್ತಮ ರೀತಿಯಲ್ಲಿ ತರಬೇತಿ ಪಡೆದು ಯಾವುದೇ ಲೋಪದೋಷವಿಲ್ಲದೇ ಮತ ಎಣಿಕೆ ಕಾರ್ಯ ಯಶಸ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಇವಿಎಂ ಮತ ಎಣಿಕೆ ಸಿಬ್ಬಂದಿಗಳಿಗೆ ಶುಭ ಹಾರೈಸಿ ಕರೆ ನೀಡಿದರು.

ಮಂಡ್ಯ ಅಂಬೇಡ್ಕರ್ ಭವನದಲ್ಲಿ ಗುರುವಾರ ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಇವಿಎಂ ಮತ ಎಣಿಕೆ ಸಿಬ್ಬಂದಿಗಳಿಗೆ ಆಯೋಜಿಸಲಾದ ಚುನಾವಣಾ ತರಬೇತಿಯಲ್ಲಿ ಮಾತನಾಡಿದರು.

ಚುನಾವಣೆಯಲ್ಲಿ ಮತದಾನ ಕಾರ್ಯಗಳಿಗೆ ಸಂಬಂಧಿಸಿದಂತೆ ನೇಮಕಗೊಂಡಿದ್ದ ಸೆಕ್ಟರ್ ಅಧಿಕಾರಿಗಳು, ಎಆರ್ ಒ ಗಳು, ಪಿಆರ್ ಒಗಳು, ಮಾಸ್ಟರ್ ಟ್ರೇನರ್ ಗಳನ್ನೇ ಮತ ಎಣಿಕೆ ಸಿಬ್ಬಂದಿಗಳಾಗಿ ನೇಮಕ ಮಾಡಲಾಗಿದೆ. ಎಲ್ಲಾ ಮತ ಎಣಿಕೆ ಸಿಬ್ಬಂದಿಗಳಿಗೂ ಇವಿಎಂ ಬಳಕೆಯ ಅನುಭವವಿರುವುದರಿಂದ ಭಯ ಪಡದೆ ಧೈರ್ಯ ಹಾಗೂ ಆತ್ಮ ವಿಶ್ವಾಸದಿಂದ ಕಾರ್ಯ ನಿರ್ವಹಿಸಿ ಎಂದರು.

ಮತ ಎಣಿಕೆಯ ದಿನ ಎಲ್ಲಾ ಸಿಬ್ಬಂದಿಗಳು ನಿಗದಿಪಡಿಸುವ ಸಮಯಕ್ಕೆ ಸರಿಯಾಗಿ ಹಾಜರಿರಬೇಕು. ಮತ ಎಣಿಕೆ ಕೊಠಡಿಗೆ ಮೊಬೈಲ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರತಿಯೊಂದು ಟೇಬಲ್ ಗಳ ಮೇಲೂ ಸಿ‌ಸಿ ಕ್ಯಾಮರಾ ಇದ್ದು, ಬಹಳ ಜಾಗರೂಕತೆಯಿಂದ ಮತ ಎಣಿಕೆ ನಡೆಸಿ ಎಂದರು.

ಕೆಲವು ಸಂದರ್ಭದಲ್ಲಿ ಮತ ಎಣಿಕೆಯ ಸಂದರ್ಭದಲ್ಲಿ ಇ.ವಿ.ಎಂ. ಗೆ ಸಂಬಂಧಿಸಿದಂತೆ ತಾಂತ್ರಿಕಾ ತೊಂದರೆ ಉಂಟಾಗಬಹುದು. ಕ್ಲೋಸ್ ಬಟನ್ ಉಪಯೋಗಿಸಿ ಕ್ಲೋಸ್ ಮಾಡದ ಪ್ರಕರಣ ಕಂಡು ಬರಬಹುದು ಇಂತಹ ಸಂದರ್ಭದಲ್ಲಿ ಯಾವ ರೀತಿ ಕೆಲಸ ನಿರ್ವಹಿಸಬೇಕು ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ ಅದನ್ನು ಅನುಸರಿಸಬೇಕು. ಸಮಸ್ಯೆ ಎದುರಾದಾಗ ಅದಕ್ಕೆ ತಹಶೀಲ್ದಾರ್ ಅಥವಾ ಸಹಾಯಕ ಚುನಾವಣಾಧಿಕಾರಿಗಳ ಬಳಿ ಪರಿಹಾರ ಪಡೆದುಕೊಳ್ಳುತ್ತೇವೆ ಎಂಬ ಮನೋಭಾವ ಇರಬರದು ಎಂದರು.

ಮತ ಎಣಿಕೆಗೆ ಸಂಬಂಧಿಸಿದಂತೆ ನಿಯೋಜಿಸಲಾಗುವ ಎಜೆಂಟ್ ಗಳ ಬಳಿ ಶಾಂತವಾಗಿ ವ್ಯವಹರಿಸಿ. ಅವರಿಗೆ ಸಂಶಯಗಳಿದ್ದಲ್ಲಿ ಅವುಗಳನ್ನು ಪರಿಹರಿಸಿ ಎಂದರು.

ಮತ ಎಣಿಕೆ ಮೇಲ್ವಿಚಾರಕರ ಜವಾಬ್ದಾರಿಯು ಬಹಳ ಮುಖ್ಯವಾಗಿದ್ದು, ಮೇಲ್ವಿಚಾರಕರು ಪ್ರತಿ ಇ.ವಿ.ಎಂ ಗಳಲ್ಲಿ ಎಣಿಕೆಯಾದ ತಕ್ಷಣ ನಿಖರವಾಗಿ ಅಂಕಿಆಂಶಗಳನ್ನು ಬರೆದುಕೊಳ್ಳಬೇಕು. ಇದರಲ್ಲಿ ತಪ್ಪಾದರೆ ಎಣಿಕೆ ಕೆಲಸಗಳು ಕಷ್ಟಕರವಾಗುತ್ತದೆ. ಆದರಿಂದ ತರಬೇತಿಯ ಅವಧಿಯಲ್ಲಿ ಸ್ಪಷ್ಟವಾದ ಮಾಹಿತಿ ಹಾಗೂ ಮಾರ್ಗದರ್ಶನ ಪಡೆಯಿರಿ. ಯಾವುದೇ ಗೊಂದಲವಿದ್ದರೂ ಇಲ್ಲಿಯೇ ಬಗೆಹರಿಸಿಕೊಳ್ಳಿ ಎಂದರು.ಮದುವೆ ಆಗಲು ವಧು ಸಿಗಲಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಯುವಕ

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ ಎಚ್. ಎಲ್ ನಾಗರಾಜು, ಸಹಾಯಕ ಚುನಾವಣಾಧಿಕಾರಿಗಳಾದ ಮಹೇಶ್, ಆನಂದ್ ಕುಮಾರ್ , ಕೃಷ್ಣ ಕುಮಾರ್, ಲೋಕನಾಥ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a comment