ಕೃಷ್ಣ ಎಂದರೆ ಸಂಭ್ರಮ:
ಕೃಷ್ಣನನ್ನು ಊಹಿಸಿ ನೋಡಿ ಸದಾ ಹಸನ್ಮುಖಿ. ತಲೆಯ ಮೇಲೆ ಒಂದು ನವಿಲುಗರಿ. ಕೈಯಲ್ಲಿ ಒಂದು ಬಿದರಿನ ಕೊಳಲು. ಆ ಕೊಳಲಿನಿಂದ ಸುಶ್ರಾವ್ಯನಾದ. ಆ ಕೊಳಲ ನಾದಕೆ ಕರಗದವರಿಲ್ಲ. ತುಂಟಾಟಕಿಲ್ಲ ಕೊನೆ ಹಾಗಂತ ಗಾಂಭಿರ್ಯ ಬಿಟ್ಟುಕೊಡದವ. ಸತ್ಯ..ಅವನೇ ಒಂದು ಸಂಭ್ರಮ.
ಕೃಷ್ಣ ಎಂದರೆ ಒಲವು:
ಸಖಿಯರಿಗೆ ಸಖನಾಗಿ, ಪ್ರೀತಿಯ ಸೆಲೆಯಾಗಿ ಒಲವಿನ ಗೆಲುವಾಗಿ, 16,000 ಗೋಪಿಕೆಯರ ಹೃದಯದ ಒಲವಾಗಿ, ಕರೆದರೆ ಓಡಿ ಬರುವ ಗೋವುಗಳ ಒಲವಾಗಿ, ಗೋವರ್ಧನ ಗಿರಿಯ ಮೇಲೆತ್ತಿ ಆ ಜನರ ಬಲವಾಗಿ, ಸುಧಾಮನ ಸ್ನೇಹಿತನಾಗಿ ಒಲವಾಗಿ ಕಾಣಿಸಿಕೊಳ್ಳುತ್ತಾನೆ
ಕೃಷ್ಣ ಎಂದರೆ ಸ್ಪಷ್ಟತೆ:
ಘನ ಘೋರ ಕುರುಕ್ಷೇತ್ರದ ಪ್ರಾರಂಭದಲ್ಲಿ, ತನ್ನ ರಕ್ತ ಸಂಬಂಧಗಳನ್ನು ನೋಡಿ ವಿಚಲಿತನಾದ ಅರ್ಜುನನಿಗೆ ಅವನ ಮೂಲ ಗುರಿ ಏನು? ಅವನ ನಾಯಕತ್ವದ ಮಹತ್ವವೇನು? ಈ ಧರ್ಮ ಯುದ್ಧ ಮಾಡಬೇಕಾದ ಉದ್ದೇಶವೇನು? ಇಲ್ಲಿ ಕೊಲ್ಲಬೇಕಾಗಿದ್ದು ದುಷ್ಟರ ದೇಹವನ್ನು ಮಾತ್ರ. ಆತ್ಮ ಎಂದೆಂದೂ ಅಮರ ಎಂಬ ಸ್ಪಷ್ಟ ಚಿತ್ರಣವನ್ನು ಕೊಟ್ಟು ಅಸ್ಪಷ್ಟ ಮನಸ್ಸನ್ನು ಗುರಿಯತ್ತ ಕೇಂದ್ರೀಕರಿಸಿ ಜೀವನದ ಸ್ಪಷ್ಟತೆಗೆ ಕಾರಣನಾದವನು.
ಲಕ್ಷಾಂತರ ಸಾವು, ನೋವುಗಳಿಗೆ ಕಾರಣವಾದ ಈ ಘನ ಘೋರ ಕುರುಕ್ಷೇತ್ರವನ್ನು ತಡೆಯ ಬಹುದಿತ್ತಲ್ವಾ! ಎಂದು ಅರ್ಜುನ ಕೃಷ್ಣನಿಗೆ ಕೇಳಿದಾಗ ಶ್ರೀ ಕೃಷ್ಣ ಹೇಳುತ್ತಾನೆ.
“ಹೌದು ಅರ್ಜುನ! ತಡೆಯಬಹುದಿತ್ತು ನಿಜಾ. ಆದರೆ ಕೇಳಿಲ್ಲಿ. ನಾನು ನಿಮ್ಮನ್ನು ಸೃಷ್ಟಿಸಿದ್ದೇನೆ. ನೀವು ಈ ಕುರುಕ್ಷೇತ್ರವನ್ನು ಸೃಷ್ಟಿಸಿಕೊಂಡಿದ್ದೀರಿ. ಈ ಸಾವು, ನೋವು, ಆಕ್ರಂದನ ಎಲ್ಲವೂ ನಿಮ್ಮಿಂದಲೇ. ಇದಕ್ಕೆಲ್ಲ ನಾ ಕಾರಣನಲ್ಲ. ನೀವೇ ಕಾರಣ. ಹೀಗಾಗಿ ಇದನ್ನು ನೀವೇ ಬಗೆಹರಿಸಿಕೊಳ್ಳಬೇಕು. ನಾನು ನ್ಯಾಯದ ಕಡೆ ನಿಲ್ಲುವೆ ಅಷ್ಟೇ. ನಾನು ಸೃಷ್ಟಿಸಿದ ಈ ಸೃಷ್ಟಿಯಲಿ ಏನಾದರೂ ಹೆಚ್ಚು ಕಡಿಮೆಯಾದಲ್ಲಿ ನಾನು ಅದನ್ನು ಸರಿ ಪಡಿಸುವೆ. ನಿಮ್ಮ ಕರ್ಮಗಳಿಗೂ ನನ್ನ ಕಡೆ ಕೈ ಮಾಡದಿರಿ.” ಎಂದು ಹೇಳಿದ ಸತ್ಯ ಎಷ್ಟು ಸ್ಪಷ್ಟವಲ್ಲವೇ!
ಕೃಷ್ಣ ಎಂದರೆ ಯೋಗಿ:
ಸಾಗರದತ್ತ ಸುತ್ತುತ್ತ ಬರುವ ಚಂಡಮಾರುತದ ಸುತ್ತಲು ಅದೆಷ್ಟೇ ಒತ್ತಡ ಇದ್ದರೂ, ಆ ಚಂಡಮಾರುತದ ಕೇಂದ್ರ ಭಾಗದಲ್ಲಿ ಅತಿ ಕಡಿಮೆ ಒತ್ತಡವಿರುತ್ತದೆ.
ನಮ್ಮ ಬದುಕಲಿ ಅದಷ್ಟೇ ಕಷ್ಟಕಾರ್ಪಣ್ಯವಿರಲಿ ದುಃಖ ದುಃಮಾನಗಳಿರಲಿ ಶಾಂತ ರೀತಿಯಿಂದ ಅವುಗಳನ್ನು ಒಪ್ಪಿಕೊಂಡು ಅಪ್ಪಿಕೊಂಡು ಆಗುವುದೆಲ್ಲ ಒಳ್ಳೆಯದಕ್ಕೆ ಆದದ್ದೆಲ್ಲ ಒಳ್ಳೆಯದಕ್ಕೆ ಎಂದುಕೊಂಡು ಸಾಗುವ ಯೋಗಿಯಂತೆ ಬದುಕಬೇಕೆಂಬುದು ಕೃಷ್ಣನ ಬೋಧನೆ.
ಕೃಷ್ಣ ಎಂದರೆ ಕೃತಜ್ಞತೆ :
ಕೃಷ್ಣನನ್ನು ಅವಮಾನಿಸುತ್ತಿದ್ದ ಶಿಶುಪಾಲನನ್ನು ತನ್ನ ಸುದರ್ಶನ ಚಕ್ರದಿಂದ ಕೊಂದು ಹಾಕಿದನು. ಸುದರ್ಶನ ಚಕ್ರವನ್ನು ಎತ್ತಿ ಹಿಡಿದ ಆ ತೋರು ಬೆರಳಿಂದ ಗಾಯವಾಗಿ ರಕ್ತ ಸುರಿಯುತ್ತಿತ್ತು. ಅದನ್ನು ನೋಡಿದ ಕೃಷ್ಣನ ಸಖಿ ದ್ರೌಪದಿ ತನ್ನ ಸೀರೆಯನ್ನು ಹರಿದು ಬೆರಳಿಗೆ ಕಟ್ಟಿ ರಕ್ತಸ್ರಾವವನ್ನು ನಿಲ್ಲಿಸಿದಳು. ಈ ಸಹಾಯವನ್ನು ಇದೇ ರೂಪದಲ್ಲಿ ಮುಂದೆ ಒಂದು ದಿನ ನಿನಗೆ ಮಾಡುತ್ತೇನೆ ಎಂದು ವಚನವಿತ್ತ.
ಮುಂದೆ ದ್ರೌಪದಿಯ ವಸ್ತ್ರಾಹರಣದ ಸಮಯದಲ್ಲಿ ಆಪದ್ಬಾಂಧವನಾಗಿ ಬಂದು ಅದೇ ಸೀರೆಯನ್ನು ಅವಳಿಗೆ ಮರಳಿಸಿ ದ್ರೌಪದಿಯ ಮಾನ ಕಾಪಾಡಿ ತನ್ನ ಕೃತಜ್ಞತೆಯನ್ನು ತೋರಿಸಿದ.
ಕೃಷ್ಣ ಎಂದರೆ ಧರ್ಮ:
“ಯದಾ ಯದಾ ಹಿ ಧರ್ಮಸ್ಯ
ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ
ತದಾತ್ಮಾನಾಂ ಸೃಜಾಮ್ಯಹಮ್
ಪರಿತ್ರಾಣಾಯ ಸಾಧೂನಾಮ್
ವಿನಾಶಾಯ ಚ ದುಷ್ಕ್ರತಾಮ್
ಧರ್ಮಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ”
ಹುಟ್ಟಿನಿಂದಲೇ ಕೌಂಸನನ್ನು ಕೊಂದು, ಜರಾಸಂಧನನ್ನು ಹತ ಮಾಡಿ, ಶಿಶು ಪಾಲನನ್ನು ಸಂಹರಿಸಿ, ದಾಮೋದರನನ್ನು ಸಾಯಿಸಿ, ಕೌರವರನ್ನು ಸೋಲಿಸಿ ಧರ್ಮವು ಅಧರ್ಮವಾದಾಗ ಧರ್ಮವನ್ನು ಮರು ಸ್ಥಾಪನೆ ಮಾಡುವ ಸಲುವಾಗಿ ಯುಗಯುಗಕ್ಕೂ ಸಂಭವಿಸಿ ಬರುತ್ತೇನೆ ಎಂದು ನನ್ನ ವಿರಾಟ ರೂಪದ ಮೂಲಕ ಮೇಲಿನ ಸಾಲುಗಳಂತೆ ಅಸಹಾಯಕರಿಗೆ ಅಭಯ ಹಸ್ತ ನೀಡಿದ ಕೃಷ್ಣನೆಂದರೆ ಧರ್ಮವಲ್ಲದೆ ಮತ್ತೇನು!
ಕೃಷ್ಣನೆಂದರೆ ನಾನೇ:
ಘನ ಘೋರ ಕುರುಕ್ಷೇತ್ರದ ಮಧ್ಯ ಭಾವನಾತ್ಮಕ ಸುಳಿಗೆ ಸಿಲುಕಿ, ಆತಂಕಕ್ಕೊಳಗಾಗಿ ವಿಚಲಿತನಾಗಿ ನಿಂತು ತನ್ನ ರಾಜ ಧರ್ಮದ ಕರ್ತವ್ಯವನ್ನು ಮರೆತು ಶಸ್ತ್ರಾಸ್ತ್ರವನ್ನು ತ್ಯಜಿಸಿ ರಣರಂಗದಿಂದ ಹಿಂದೆ ಹೆಜ್ಜೆ ಇಡುತ್ತಿದ್ದ ಮಾನಸಿಕವಾಗಿ ಸೋತ ಅರ್ಜುನ ಮತ್ತು ಅದೇ ಸಮಯದಲ್ಲಿ ಮಾನಸಿಕವಾಗಿ ಕುಸಿದ ಅರ್ಜುನನಿಗೆ ಧೈರ್ಯ ತುಂಬಿ ಅವನ ಗುರಿಯ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟು ಅವನ ಕರ್ಮದ ಮಹತ್ವವನ್ನು ಅರುಹಿ ಗುರುವಾಗಿ ನಿಂತ ಶ್ರೀ ಕೃಷ್ಣ ಯಾವುದೋ ದೊಡ್ಡ ಮಹಾಭಾರತವೆಂಬ ಗ್ರಂಥದ ಪಾತ್ರಗಳೆಂದು ನಾವು ನೋಡಬೇಕಾಗಿಲ್ಲ. ನಿಜ ಅರ್ಥದಲ್ಲಿ ಈ ಬದುಕೆಂಬ ಕುರುಕ್ಷೇತ್ರದಲ್ಲಿ ಸೋತ ಅರ್ಜುನನೂ ನಾನೇ ಹಾಗೆಯೇ ಸೋತ ಮನಸನ್ನು ಪಡಿದೆಬ್ಬಿಸುವ ಕೃಷ್ಣನು ಕೂಡ ನಾನೇ. ಹೀಗಾಗಿ ನಿಜ ಅರ್ಥದಲ್ಲಿ ಕೃಷ್ಣನೆಂದರೆ ನಾನೇ. ಅರ್ಥಾರ್ಥ ನನ್ನೊಳಗಿನ ಕೃಷ್ಣ ನಾನೇ.
ಕೃಷ್ಣನೆಂದರೆ ಅಪರಿಮಿತ:
ತನಗೆ ಜನ್ಮವಿತ್ತ ತಂದೆ ತಾಯಿಗಳಿಗೂ ದಕ್ಕಲಿಲ್ಲ. ಸಾಕಿದ ತಂದೆ ತಾಯಿಗಳಲ್ಲಿಯೂ ನಿಲ್ಲಲಿಲ್ಲ. ರಾಧೆಯ ಪ್ರೀತಿಯಲ್ಲಿಯೂ ನೆಲೆಯೂರಲಿಲ್ಲ. ಸತ್ಯಭಾಮೆಗೆ ಕಟ್ಟಿ ಬೀಳಲಿಲ್ಲ. ಗೋಪಿಕೆಯರ ಕನಸಲ್ಲಿ ನಿಂತಂತೆ ವಾಸ್ತವದಲ್ಲಿ ನಿಲ್ಲಲಿಲ್ಲ. ಹುಟ್ಟಿದ ನೆಲ್ಲೋ ಬೆಳೆದನು ಇನ್ನೆಲ್ಲೂ ನೆಲೆ ನಿಂತನು ಮತ್ತೆಲ್ಲೋ. ರಾಮನಿಗೆ ಒಂದು ಚೌಕಟ್ಟಿದೆ. ಆದರೆ ಕೃಷ್ಣನಿಗೆ ಯಾವ ಚೌಕಟ್ಟು ಇಲ್ಲ. ಯಾವ ಚೌಕಟ್ಟಿಗೂ ಸಿಗದ ಅನಂತ ಅಪರಿಮಿತ ಶಕ್ತಿ ಕೃಷ್ಣ.
ಕೃಷ್ಣನೆಂದರೆ ಸರ್ವಕಾಲಿಕ ಸತ್ಯ:
ಭಗವದ್ಗೀತೆಯಲ್ಲಿ ಕೃಷ್ಣನಾಡಿದ ನುಡಿಗಳು ದ್ವಾಪರ ಯುಗಕ್ಕೆ ಸೀಮಿತಗೊಳಿಸಬೇಕಾಗಿಲ್ಲ. ಇಂದಿನ ಕಲಿಯುಗಕ್ಕೂ ಪ್ರಸ್ತುತ. ಇಂದಿನ ಸಂಸಾರ ಜಂಜಾಟಗಳಿಂದ ನಾವು ಹೊರ ಬರಬೇಕಾದರೆ ಘನ ಘೋರ ಕುರುಕ್ಷೇತ್ರದ ಮಧ್ಯದಲ್ಲಿ ವಿಚಲಿತ ನಾಗದೇ ಅಚಲವಾಗಿ ನಿಂತ ಅರ್ಜುನನಂತೆ ನಿಲ್ಲಬೇಕಾದಲ್ಲಿ ಕೃಷ್ಣನ ನುಡಿಗಳು ಭಗವದ್ಗೀತೆಯ ರೂಪದಲ್ಲಿ ದಾರಿದೀಪಗಳಾಗಿವೆ. ಹೀಗಾಗಿ ಕೃಷ್ಣನೆಂದರೆ ಸರ್ವಕಾಲಿಕ ಸತ್ಯ.
ಅರ್ಜುನನು ಒಮ್ಮೆ ಕೃಷ್ಣ ನಲ್ಲಿ ಹೀಗೆ ನಿವೇದಿಸಿಕೊಂಡ “ಕೃಷ್ಣ.. ಈ ಗೋಡೆಯ ಮೇಲೆ ಒಂದು ವಾಕ್ಯವನ್ನು ಬರಿ . ಅದು ಸಂತೋಷದಲ್ಲಿ ಇರುವವನಿಗೆ ದುಃಖವಾಗಬೇಕು ಮತ್ತು ದುಃಖದಲ್ಲಿ ಇರುವವನಿಗೆ ಸಂತೋಷವಾಗಬೇಕು”
ಆಗ ಕೃಷ್ಣನು “ಈ ಸಮಯ ಕಳೆದು ಹೋಗುತ್ತದೆ” ಎಂದು ಬರೆದ. ಈ ಮಾತು ಸರ್ವಕಾಲಿಕ ಸತ್ಯ ಅಲ್ಲವೇ..!
ಕೃಷ್ಣನೆಂದರೆ ಸಂಪ್ರದಾಯಗಳನ್ನು ಮೆಚ್ಚುವವ, ಹಾಗೆಯೇ ಸಂಪ್ರದಾಯಗಳನ್ನು ಬದಲಾಯಿಸುವವ:
ಒಮ್ಮೆ ಶ್ರೀ ಕೃಷ್ಣನು ತನ್ನ ಅಗಾಧ ಸೇನೆಯೊಂದಿಗೆ ಕಾಶ್ಮೀರದ ಮೇಲೆ ಹಾಯ್ದು ಗಾಂಧಾರ ದೇಶ ಅಂದರೆ ಇಂದಿನ ಅಪಘನ್ ದೇಶಕ್ಕೆ ಕೆಲಸದ ಮೇರೆಗೆ ಸಾಗುತ್ತಿದ್ದ. ಆಗ ಕಾಶ್ಮೀರವನ್ನು ಆಳುತ್ತಿದ್ದ ದಾಮೋದರ ರಾಜನು ತುಂಬಾ ಬಲಶಾಲಿಯಾಗಿದ್ದ. ಯಾವ ಜರಾಸಂಧನನ್ನು ಕೃಷ್ಣನು ವಧೆ ಮಾಡಿದ್ದನೋ ಆ ಜರಾಸಂಧನ ಶಿಷ್ಯ ಈ ದಾಮೋದರನಾಗಿದ್ದ. ಹೀಗಾಗಿ ಕೃಷ್ಣನನ್ನು ಆತ ದ್ವೇಷಿಸುತ್ತಿದ್ದ. ಹೀಗಾಗಿ ಕೃಷ್ಣನಿಗೆ ತನ್ನ ರಾಜ್ಯದೊಳಗೆ ಪ್ರವೇಶಕ್ಕೆ ನಿರ್ಬಂಧವನ್ನು ಹೇಳಿದ. ಕೃಷ್ಣ ಅದಷ್ಟೇ ಪರಿಪಾರಿಯಾಗಿ ಕೇಳಿಕೊಂಡರು ದಾಮೋದರನು ಒಪ್ಪಲಿಲ್ಲ. ಬಲಶಾಲಿ ಎಂಬ ಭ್ರಮೆಯಲ್ಲಿದ್ದ ದಾಮೋದರನು ತನ್ನ ಜೊತೆ ಯುದ್ಧಕ್ಕೆ ಬಾ ಯುದ್ಧದಲ್ಲಿ ಸೋಲಿಸಿ ನೀನು ಮುಂದೆ ಹೋಗು ಎಂದು ಹೇಳುತ್ತಾನೆ. ಅನಿವಾರ್ಯವಾಗಿ ಕೃಷ್ಣನು ಆ ದಾಮೋದರನನ್ನು ಸಂಹರಿಸುತ್ತಾನೆ. ದಾಮೋದರನ ಮಂತ್ರಿಗಳೆಲ್ಲರೂ ಕೃಷ್ಣನನ್ನು ನೀನೇ ರಾಜ ನಾಗು ನಿನಗೆ ಪಟ್ಟಾಭಿಷೇಕವನ್ನು ಮಾಡುತ್ತೇವೆ ಎಂದು ಹೇಳಿದರು. ನನಗೆ ಇದಾವುದರ ಆಸೆ ಇಲ್ಲ ನನ್ನ ಗುರಿಯ ಬೇರೆ. ಹೀಗಾಗಿ ಬೇರೆ ಯಾರನ್ನಾದರೂ ಪಟ್ಟಾಭಿಷೇಕ ಮಾಡಿ ಎಂದು ಹೇಳುತ್ತಾನೆ. ಆಗ ದಾಮೋದರನ ಹೆಂಡತಿ ಯಶುಮತಿ ಗರ್ಭವತಿಯಾಗಿರುತ್ತಾಳೆ. ಅವಳಿಗೆ ಪಟ್ಟಾಭಿಷೇಕ ಮಾಡಿ ಎಂದು ಕೃಷ್ಣ ಹೇಳುತ್ತಾನೆ. ಆ ಮಂತ್ರಿಗಳು ಇಲ್ಲಿಯವರೆಗಿನ ನಮ್ಮ ರಾಜ ಸಂಪ್ರದಾಯದಲ್ಲಿ ಪರಂಪರೆಯಲ್ಲಿ ಹೆಣ್ಣನ್ನು ಪಟ್ಟಾಭಿಷೇಕ ಮಾಡಿಯೇ ಇಲ್ಲ ಎಂದು ನುಡಿಯುತ್ತಾರೆ. ಹಾಗಾದರೆ ಆ ಸಂಪ್ರದಾಯವನ್ನು ಬದಲಾಯಿಸಿ ಯಶೋಮತಿಗೆ ಪಟ್ಟಾಭಿಷೇಕ ಮಾಡಿ ಎಂದು ಹೇಳುತ್ತಾನೆ. ಯಶೋಮತಿಗೆ ಸಹೋದರಿಯೇ ನಿನ್ನ ಗರ್ಭದಲ್ಲಿರುವ ಮಗು ಬೆಳೆದು ದೊಡ್ಡವನಾಗಿ ಈ ರಾಜ್ಯವನ್ನು ಆಳುವವರೆಗೆ ನೀನೇ ಈ ಸಾಮ್ರಾಜ್ಯಕ್ಕೆ ಅಧಿಪತಿ. ಅದಾರೆ ಇದಕ್ಕೆ ಅಡ್ಡ ಬಂದರೆ ನಿನ್ನ ಅಣ್ಣನಾಗಿ ನಾನು ನಿನ್ನ ಸಹಾಯಕ್ಕೆ ಧಾವಿಸುತ್ತೇನೆ. ಅಂಜದಿರು ಅಳುಕದಿರು ಎಂದು ಅಭಯಹಸ್ತ ನೀಡಿ ಮುಂದೆ ಸಾಗುತ್ತಾನೆ. ಯಶೋಮತಿಗೆ ಹುಟ್ಟುವ ಮಗು ಕೂಡ ಮುಂದೆ ಕೃಷ್ಣನ ಅಭಿಮಾನಿ ಆಗುತ್ತಾನೆ.
ಹೀಗೆ ಕೃಷ್ಣ ಸಂಪ್ರದಾಯಗಳನ್ನು ಕೂಡ ಬದಲಾಯಿಸಬಲ್ಲವನಾಗಿ ನಿಲ್ಲುತಾನೆ.
ಕೃಷ್ಣನೆಂದರೆ ಸಕಲ ಚರಾಚರಗಳಿಗೂ ಭರವಸೆ :
ಕುರುಕ್ಷೇತ್ರದಲ್ಲಿ ಕೃಷ್ಣನು ಯಾವ ಶಸ್ತ್ರಾಸ್ತ್ರವನ್ನು ಹಿಡಿಯಲಾರೆ ಎಂದು ಮಾತನ್ನು ಕೊಟ್ಟಿರುತ್ತಾನೆ. ಆದರೆ ಕುರುಕ್ಷೇತ್ರ ಯುದ್ಧ ಇನ್ನೇನು ಪ್ರಾರಂಭವಾಗುತ್ತದೆ ಎನ್ನುವ ಸಮಯದಲ್ಲಿ ಕೃಷ್ಣನು ಅರ್ಜುನನಿಗೆ ಕರೆದು ನಿನ್ನ ಬಿಲ್ಲು ಬಾಣಗಳನ್ನು ನನಗೆ ಕೊಡು ಎಂದು ಹೇಳುತ್ತಾನೆ. ಶಸ್ತ್ರಾಸ್ತ್ರಗಳನ್ನು ಹಿಡಿಯುವುದಿಲ್ಲ ಎಂದು ಮಾತು ಕೊಟ್ಟಿರುವ ಕೃಷ್ಣನ ಈ ಮಾತುಗಳನ್ನು ಕೇಳಿ ಅರ್ಜುನನಿಗೆ ಆಶ್ಚರ್ಯವಾಗುತ್ತದೆ. ಆದರೂ ಕೃಷ್ಣನು ಹೇಳಿದ ಮಾತನ್ನು ಅರ್ಜುನನು ಮೀರಲಾರ ಹೀಗಾಗಿ ತನ್ನ ಬತ್ತಳಿಕೆಯನ್ನು ಕೃಷ್ಣನಿಗೆ ಕೊಡುತ್ತಾನೆ. ಆಗ ಕೃಷ್ಣನು ಬಿಲ್ಲನ್ನು ಎದೆಗೇರಿಸಿ ಒಂದು ಬಾಣವನ್ನು ಹೊರ ತೆಗೆದು ಹೂಡಿಯೇ ಬಿಡುತ್ತಾನೆ. ಆ ಬಾಣವು ದೂರದಲ್ಲಿರುವ ಒಂದು ಆನೆಯ ಕೊರಳಿಗೆ ಹೋಗಿ ನಾಟುತ್ತದೆ. ಅಷ್ಟರಲ್ಲಿ ಕುರುಕ್ಷೇತ್ರ ಪ್ರಾರಂಭವಾಗುತ್ತದೆ. ಘೋರ ಯುದ್ಧ ಹದಿನೆಂಟು ದಿನಗಳ ಕಾಲ ನಿರಂತರ ನಡೆದು ಮುಕ್ತಾಯವಾದ ಬಳಿಕ ಅರ್ಜುನನು ಕೃಷ್ಣನ ಹತ್ತಿರ ಬಂದು ಕೇಳುತ್ತಾನೆ. ಕುರುಕ್ಷೇತ್ರ ಪ್ರಾರಂಭವಾಗುವ ಮುಂಚೆ ನೀನು ಒಂದು ಬಾಣವನ್ನು ಹೂಡಿದೆ ಅದು ಯಾರಿಗೆ ಏತಕ್ಕಾಗಿ ಎಂದು ತಿಳಿಯಲಿಲ್ಲ ಕೃಷ್ಣ ಎನ್ನುತ್ತಾನೆ. ಆಗ ಕೃಷ್ಣನು ಅರ್ಜುನನನ್ನು ಕರೆದುಕೊಂಡು ಆ ಬಾಣ ನಾಟಿದ ಆನೆಯ ನಿಂತಿರುವ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾನೆ. ಆ ಬಾಣ ನಾಟಿದ ಆನೆಯ ಕೊರಳಿನಲ್ಲಿರುವ ದೊಡ್ಡ ಗಂಟೆಯು ನೆಲಕ್ಕೆ ಉರುಳಿ ಬಿದ್ದಿರುತ್ತದೆ. ಆ ಗಂಟೆಯನ್ನು ಕೃಷ್ಣನು ಮೇಲೆ ಎತ್ತುತ್ತಾನೆ. ಆ ಗಂಟೆಯ ಕೆಳಗೆ ಗುಬ್ಬಚ್ಚಿ ಒಂದು ತನ್ನ ಮರಿಗಳ ಜೊತೆ ಅಡಗಿಕೊಂಡು ಕುಳಿತಿರುತ್ತದೆ. ಇದನ್ನು ನೋಡಿ ಅರ್ಜುನನು ಆಶ್ಚರ್ಯದಿಂದ ಕೇಳುತ್ತಾನೆ. ಇದೇನಿದು ಕೃಷ್ಣಾ ಎಂದು.
ಆಗ ಕೃಷ್ಣ ಹೇಳುತ್ತಾನೆ ಕುರುಕ್ಷೇತ್ರ ಪ್ರಾರಂಭವಾಗುವ ಸಮಯದಲ್ಲಿ ಆ ಕುರುಕ್ಷೇತ್ರದ ಸ್ಥಳದಲ್ಲಿ ವಾಸವಾಗಿರುವ ಗುಬ್ಬಿಯು ಈ ರಣರಂಗವನ್ನು ನೋಡಿ ಕೃಷ್ಣ ನಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತದೆ. ಅಯ್ಯೋ ಭಗವಂತ ನಮ್ಮನ್ನು ದಯವಿಟ್ಟು ಕಾಪಾಡು ಎಂದು. ಇದನ್ನು ನಿಂತಲ್ಲಿಯೇ ಆಲಿಸಿದ ಕೃಷ್ಣನು ಅರ್ಜುನನ ಬಾಣವನ್ನು ತೆಗೆದುಕೊಂಡು ಅಲ್ಲಿ ನಿಂತ ಆನೆಯ ಕುತ್ತಿಗೆಯಲ್ಲಿ ಕಟ್ಟಿರುವ ಗಂಟೆಗೆ ನೇರವಾಗಿ ಹೂಡುತ್ತಾನೆ. ಆ ಕುತ್ತಿಗೆಯಲ್ಲಿರುವ ಗಂಟೆಯೂ ಕಳಚಿ ಕೆಳಗೆ ಬಿದ್ದಾಗ ಆ ಗಂಟೆಯೂ ಆ ಪಕ್ಷಿಯ ಮೇಲೆ ರಕ್ಷಾ ಕವಚದಂತೆ ಕುಳಿತುಕೊಳ್ಳುತ್ತದೆ. ಇಡೀ ಕುರುಕ್ಷೇತ್ರ ಮುಗಿಯುವವರೆಗೆ ಆ ಗಂಟೆಯೂ ಪಕ್ಷಿಗಳನ್ನು ರಕ್ಷಿಸುತ್ತದೆ. ಕೃಷ್ಣನು ಆ ಗಂಟೆಯನ್ನು ಮೇಲೆತ್ತಿದಾಗ ಪಕ್ಷಿಯು ಮೇಲೆ ಹಾರಿ, ತನ್ನನ್ನು ಮತ್ತು ಮರಿಗಳನ್ನು ಕಾಪಾಡಿದ ಕೃಷ್ಣನಿಗೆ ಕೃತಜ್ಞತಾ ಭಾವದಿಂದ ನಮಿಸುತ್ತದೆ.
ಹೀಗಾಗಿ ಪುರುಷಾರ್ಥದ, ಸ್ವಾರ್ಥ-ಪರಮಾರ್ಥದ ಕಥೆಯೇ ಮಹಾಭಾರತ. ಎಲ್ಲಿಯೂ ನಿಲ್ಲದ, ಯಾವ ಚೌಕಟ್ಟಿಗೂ ಸಿಲುಕದ, ಯಾರಿಗೂ ನೆಲುಕದ ಶ್ರೀ ಕೃಷ್ಣನು ಈ ಮಹಾಭಾರತದ ಸೂತ್ರಧಾರಿ, ಈ ಮಹಾ ಗ್ರಂಥದ ಕೇಂದ್ರದ ಪಾತ್ರಧಾರಿ. ನಮ್ಮ ನಿಮ್ಮೆಲ್ಲರ ಬದುಕಿನ ದಾರಿ, ಸಮಾಜದ ನೈತಿಕತೆಯ ರೂವಾರಿ. ಇವನೇ ಬಹುಮುಖಿ ಮುರಾರಿ. ಇವನಿಗೆ ಸಮಸ್ತ ಭಾರತವೇ ಆಭಾರಿ.
ಸ್ವರಚಿತ ಕವನದ ಮೂಲಕ ಚಿಕ್ಕದಾಗಿ ಕೃಷ್ಣನ ಬಗ್ಗೆ ಹೇಳುವುದಾದರೆ..
==============
ಚೌಕಟ್ಟಿಗೆ ನಿಲುಕದವ
ನೀಲಿ ಶ್ಯಾಮನಿವ
ಮುರಳಿ ಲೋಲನಿವ
ಸೀಮಿತದೊಳಗೆ ನಿಲುಕದವ
ಕೊಳಲು ಹಿಡಿದವ
ಸಿಕ್ಕನೆಂದರೆ
ಮಾಯವಾಗುವವ
ನೊಂದುಕೊಂಡಾಗ
ಹತ್ತಿರ ಬರುವವ
ಹೆತ್ತ ಕರುಳಿಗೆ ದಕ್ಕದವ
ಸಾಕಿದವಳಿಗೆ ಸಿಗದವ
ಜೈಲಿನಲಿ ಜನ್ಮಿಸಿಯೂ
ಸ್ವತಂತ್ರನಾದ ಮಾಧವ
ಮಾವನನು ಸಂಹರಿಸಿದವ
ಪೂತನಿಯ ಹಾಲುಕುಡಿದವ
ಬೆಣ್ಣೆಯ ಕಳ್ಳನಿವ
ಚೌಕಟ್ಟಿಗೆ ಸಿಗದವ
ರಾಧೆಯ ಪ್ರೀತಿಯಿವ
ಅವಳಲ್ಲೂ ನಿಲ್ಲದವ
ರುಕ್ಮಿಣಿಯಿಂದ ಮೋಹಿತನಿವ
ಸತ್ಯಭಾಮೆಯ ಹಠಕ್ಕೆ
ಕಟ್ಟಿಕೊಂಡವ
ಹದಿನಾರು ಸಾವಿರ
ಗೋಪಿಕೆಯರ ಜೀವ
ಸಖಿಯಂತ ದ್ರೌಪದಿಗೆ
ಅಣ್ಣನಿವ, ಕೂಗಿದಾಗ
ಸೀರೆಯಾಗಿ ಮಾನಿನಿಯ
ಮಾನ ಕಾಪಾಡಿದವ
ಶಸ್ತ್ರ ಹಿಡಿಯದೆ
ಧರ್ಮವ ಎತ್ತಿ ಹಿಡಿದವ,
ರಣರಂಗದಲಿ ಗೀತೆಯ
ಸಾರವೇ ಇವ,
ದೇವನಿವ, ಮಾತಿಗಾಗಿ
ಕಪಟಿ ಎನಿಸಿಕೊಂಡವ
ಕೌರವರಿಗೆ ಕಹಿಯಾದವ
ಧರ್ಮದ ಸಂಸ್ಥಾಪಕನಿವ
ವಿರಾಟ ರೂಪಿಯಿವ
ಕುಚೇಲನಿಗೂ ಗೆಳೆಯನಿವ
ಆದಿ ಅಂತ್ಯವಿಲ್ಲದವ
ಕೃಷ್ಣ ಕೃಷ್ಣ ಕೃಷ್ಣನಿವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
- ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ
- ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು
- ಪ್ರತಿ ಗ್ರಾ.ಪಂ ಅಭಿವೃದ್ಧಿಗೆ 8-9 ಕೋಟಿ ರೂ. ಅನುದಾನ: ಸಚಿವ ಮಧು ಬಂಗಾರಪ್ಪ
More Stories
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
ಅಹಂಕಾರ , ಒಣಜಂಭ ಬೇಡ
ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್