January 10, 2025

Newsnap Kannada

The World at your finger tips!

jalamangal naga

ಪಿಂಚಣಿಯ ಹಕ್ಕು ಅನುದಾನಿತ ನೌಕರರಿಗೂ ಇದೆ-ಜಾಲಮಂಗಲ ನಾಗರಾಜ್

Spread the love

ಪಿಂಚಣಿ ವೇತನದ ಒಂದು ಭಾಗವಾಗಿದ್ದು, 2006 ರ ನಂತರ ಅನುದಾನಕ್ಕೆ ಒಳಪಟ್ಟ ಶಾಲಾಕಾಲೇಜುಗಳ ನೌಕರರಿಗೆ ಸರ್ಕಾರ ಪಿಂಚಣಿ ನೀಡದೆ, ವಂಚನೆ ಮಾಡುತ್ತಿದೆ, ಪಿಂಚಣಿ ಪಡೆಯುವುದು ಪ್ರತಿಯೊಬ್ಬ ಸರ್ಕಾರಿ ವೇತನದಾರನ ಹಕ್ಕು, ಹಾಗಾಗಿ ಮುಂದಿನ ಬಡ್ಜೆಟ್ ನಲ್ಲಿ ಪಿಂಚಣಿಯ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳದಿದ್ದರೆ ರಾಜ್ಯವ್ಯಾಪಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಿ, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ರಾಜ್ಯ ಸಂಚಾಲಕ ಜಾಲಮಂಗಲ ನಾಗರಾಜ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ಮಂಡ್ಯ ಜಿಲ್ಲಾ ಘಟಕ ಡಾ.ಸರ್.ಎಂ.ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಏರ್ಪಡಿಸಿದ್ದ ಅನುದಾನಿತ ನೌಕರರ ಜಾಗೃತಿ ಸಮಾವೇಶ ಸಭೆಯಲ್ಲಿ ಮಾತನಾಡಿದ ಅವರು ಪಿಂಚಣಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಅನುದಾನಿತ ನೌಕರರ ಪರವಾಗಿ ತೀರ್ಪು ನೀಡಿದ್ದು, ಆ ಆದೇಶವನ್ನು ಸರ್ಕಾರ ಪಾಲಿಸದೇ, ಕಾಲಹರಣ ಮಾಡುತ್ತಿದೆ. ಮುಂದಿನ ಬಡ್ಜೆಟ್ ಅಧಿವೇಶನದಲ್ಲಿ ಇದರ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿದ್ದರೆ, ಇಡೀ ರಾಜ್ಯಾದ್ಯಂತ ಇರುವ ಸುಮಾರು ಮುವತ್ತು ಸಾವಿರ ಪಿಂಚಣಿ ವಂಚಿತ ನೌಕರರು ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ಉಗ್ರ ಹೋರಾಟ ನಡೆಸುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಗಡುವು ನೀಡಿದರು.

ರಾಜ್ಯಕಾರ್ಯಾಧ್ಯಕ್ಷರಾದ ಸಿ.ಎಂ.ಶಶಿಧರ್ ಮಾತನಾಡಿ ಅನುದಾನಿತ ನೌಕರರು ಇಂದು ಅನೇಕ ಸಂಘಟನೆಗಳಲ್ಲಿ ಹಂಚಿಹೋಗಿದ್ದಾರೆ, ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿದರೆ, ಸರ್ಕಾರ ಪಿಂಚಣಿ ನೀಡಲೇಬೇಕು ಆದ್ದರಿಂದ ನಾವೆಲ್ಲರೂ ಮುಂದಿನ ಹೋರಾಟವನ್ನು ಸಂಘಟಿತರಾಗಿ ಮಾಡೋಣ ಎಂದು ಸಲಹೆ ನೀಡಿದರು.

ರಾಜ್ಯ ಉಪಾಧ್ಯಕ್ಷರಾದ ನಿಡಸಾಲೆ ಪ್ರಸಾದ್ ಮಾತನಾಡಿ ಮುಂದಿನ ದಿನಗಳಲ್ಲಿ ಅನುದಾನಿತ ನೌಕರರು ಮಾಡುವ ಹೋರಾಟಗಳು ಸರ್ಕಾರಕ್ಕೆ ಎಚ್ಚರಿಕೆಯ ಘಂಟೆಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಘದ ಮಂಡ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಣ್ಣಮಂಗಲರವರು ಸರ್ಕಾರಿ ಮತ್ತು ಅನುದಾನಿತ ಶಿಕ್ಷಕರ ನಡುವೆ ತಾರತಮ್ಯ ಸಲ್ಲದು, ಅನುದಾನಿತ ನೌಕರರನ್ನು ಮಲತಾಯಿ ಮಕ್ಕಳಂತೆ ಸರ್ಕಾರ ನೋಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಉಮೇಶ್, ಜಿಲ್ಲಾಧ್ಯಕ್ಷರಾದ ಶಿವಲಿಂಗೇಗೌಡ ಉಪಸ್ಥಿತರಿದ್ದರು. ಮಂಡ್ಯ ಜಿಲ್ಲೆಯ ಅನುದಾನಿತ ನೌಕರರು ಸಭೆಯಲ್ಲಿ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Copyright © All rights reserved Newsnap | Newsever by AF themes.
error: Content is protected !!