ಜನರೇಷನ್ ಗ್ಯಾಪ್…..
ಇತ್ತೀಚಿಗೆ ಒಬ್ಬ ಮಗ ಪಬ್ಜಿ ಎಂಬ ಮೊಬೈಲ್ ವಿಡಿಯೋ ಗೇಮ್ ಆಡಲು ಬಿಡದ ತಂದೆಯನ್ನೇ ಬರ್ಬರವಾಗಿ ಕೊಂದ…..
ಮತ್ತೊಂದು ಘಟನೆಯಲ್ಲಿ ಮಗಳು ತಮ್ಮ ಪ್ರೀತಿಗೆ ಅಡ್ಡಿಪಡಿಸಿದ ತಂದೆಯನ್ನೇ ಪ್ರಿಯಕರನೊಂದಿಗೆ ಸೇರಿ ಕೊಂದಳು…..
ಆಸ್ತಿ ಮತ್ತು ಕೌಟುಂಬಿಕ ಕಲಹದಿಂದ ಮಗನೊಬ್ಬ ತನ್ನ ತಂದೆಯ ಎರಡೂ ಕಣ್ಣುಗಳನ್ನು ಕಿತ್ತ ಘಟನೆ ಕೆಲವು ತಿಂಗಳುಗಳ ಹಿಂದೆ ನಡೆದಿತ್ತು……..
ಇದು ಕೇವಲ ಕೆಲವು ಘಟನೆಗಳು ಮಾತ್ರ. ಆದರೆ ಒಟ್ಟಾರೆ ಸಮಾಜದಲ್ಲಿ ತಂದೆ ತಾಯಿ ಮಕ್ಕಳ ನಡುವಿನ ಒಂದು ಸಂಘರ್ಷಮಯ ಅಸಮಾಧಾನ ಆಂತರ್ಯದಲ್ಲಿ ಹೊಗೆಯಾಡುತ್ತಿದೆ.
ಬಹುಮುಖ್ಯವಾಗಿ ತಂದೆ ಮತ್ತು ಗಂಡು ಮಗ/ಮಕ್ಕಳು, ತಾಯಿ ಮತ್ತು ಹೆಣ್ಣು ಮಗಳು/ಮಕ್ಕಳು ನಡುವೆ ಒಂದು ಸಾಮಾಜಿಕ ಸಂಘರ್ಷ ಜಾರಿಯಲ್ಲಿದೆ. ಅದರಲ್ಲೂ ಯೌವ್ವನದ ಸಮಯದಲ್ಲಿ ಈ ಜನರೇಷನ್ ಗ್ಯಾಪ್ ತುಂಬಾ ದೊಡ್ಡದಾಗುತ್ತಿದೆ. ಬಹಳಷ್ಟು ಪೋಷಕರು ಗೊಂದಲ ಮತ್ತು ಆತಂಕಕ್ಕೆ ಒಳಗಾಗಿದ್ದಾರೆ.
ಕೆಲವು ಒಳ್ಳೆಯ ಕೌಟುಂಬಿಕ ಸಂಬಂಧಗಳು ಈಗಲೂ ಉಳಿದಿರುವುದು ನಿಜ. ತಂದೆ ತಾಯಿ ಮಕ್ಕಳು ಅತ್ಯಂತ ಗೌರವಯುತವಾಗಿ ಒಬ್ಬರಿಗೊಬ್ಬರು ಪೂರಕವಾಗಿ ಪ್ರೀತಿಯಿಂದ ಚರ್ಚಿಸುತ್ತಾ ಅನ್ಯೋನ್ಯವಾಗಿ ಇದ್ದಾರೆ. ಅದನ್ನು ನೋಡಿದಾಗ ತುಂಬಾ ಸಂತೋಷವಾಗುತ್ತದೆ.
ಆದರೆ ಆ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದರ ಬಗ್ಗೆ ಯೋಚಿಸಬೇಕಿದೆ.
ಬಹಳಷ್ಟು ಜನರು ಯೋಚಿಸುವಂತೆ ಈಗಿನ ಯುವಜನಾಂಗವೇ ಇದಕ್ಕೆಲ್ಲಾ ಹೊಣೆ ಎಂಬುದು ಖಂಡಿತ ತಪ್ಪಾಗುತ್ತದೆ. ಇದನ್ನು ವೈಯಕ್ತಿಕ ನೆಲೆಯಲ್ಲಿ ನನ್ನ ಮಗ ಸರಿ ಇಲ್ಲ, ನನ್ನ ಮಗಳು ಸರಿ ಇಲ್ಲ, ನನ್ನ ತಂದೆ ಸರಿ ಇಲ್ಲ ಎಂದು ನೋಡದೆ ಇಡೀ ಸಾಮಾಜಿಕ ವ್ಯವಸ್ಥೆಯ ಬದಲಾವಣೆಗಳನ್ನು ಗಮನಿಸಬೇಕು. ಬಹುತೇಕರ ಮನೆಯಲ್ಲಿ ಈ ಸಮಸ್ಯೆ ಬೇರೆ ಬೇರೆ ರೂಪದಲ್ಲಿ ಇದೆ .
ನಮ್ಮ ಮನೆಯಲ್ಲಿ ಮಾತ್ರ ಎಂಬುದನ್ನು ದಯವಿಟ್ಟು ಬಿಟ್ಟುಬಿಡಿ.
ಮೊದಲಿಗೆ ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ,
ವ್ಯವಸ್ಥೆಯೇ ಬದಲಾಗಿದೆ. ಸಂಪರ್ಕ ಕ್ರಾಂತಿ ಎಲ್ಲರನ್ನೂ ಬೆಸೆದಿದೆ. ಉದ್ಯೋಗ ಮತ್ತು ಹಣಕಾಸಿನ ಪರಿಸ್ಥಿತಿ ಸ್ವತಂತ್ರ ಚಿಂತನೆಗೆ ಅವಕಾಶ ಕಲ್ಪಿಸಿದೆ. ಪೋಷಕರು ಅಥವಾ ಮಕ್ಕಳ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಮನೋರಂಜನೆ ಎಲ್ಲಾ ಮಿತಿಗಳನ್ನು ಮೀರಿದೆ. ಮಾನವೀಯ ಮೌಲ್ಯಗಳು ಮತ್ತು ವೈಯಕ್ತಿಕ ಸಂಬಂಧಗಳ ಗಾಡತೆಯಲ್ಲಿ ಮೊದಲಿನಷ್ಟು ನಿರೀಕ್ಷಿ ಇಟ್ಟುಕೊಳ್ಳುವಂತಿಲ್ಲ. ಒತ್ತಡದ ಜೀವನಶೈಲಿ ತಾಳ್ಮೆಯ ಮಟ್ಟ ಕುಸಿಯುವಂತೆ ಮಾಡಿದೆ. ಎಲ್ಲಾ ಕ್ಷೇತ್ರದಲ್ಲಿಯೂ ಬದಲಾವಣೆಗಳು ಮಿಂಚಿನಂತೆ ಆಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಯುವ ಜನಾಂಗದ ಮನಸ್ಥಿತಿ ಮೊದಲಿನಂತೆ ಇಲ್ಲ.
ಹಿಂದೆಯೂ ಈ ಸಂಘರ್ಷ ಇತ್ತು. ಜನಸಂಖ್ಯೆಗೆ ಅನುಗುಣವಾಗಿ ನೋಡಿದಾಗಲೂ ಈ ಪ್ರಮಾಣ ತುಂಬಾ ಕಡಿಮೆಯಿತ್ತು. ಆಗ ಹಿಂಸಾತ್ಮಕ ರೂಪ ಬಹಳ ವಿರಳವಿತ್ತು.
ಮಕ್ಕಳಿಗೆ ಬುದ್ದಿ ಹೇಳಬೇಕು, ಸಂಸ್ಕಾರ ಕಲಿಸಬೇಕು, ಮೊಬೈಲ್ ಕೊಡಬಾರದು, ಹೆದರಿಕೆ ಹುಟ್ಟಿಸಬೇಕು ಮುಂತಾದ ಕ್ರಮಗಳು ಹಳತಾಗಿವೆ. ಅದರಿಂದ ಹೆಚ್ಚಿನ ಪರಿಣಾಮ ಆಗುತ್ತಿಲ್ಲ.
ಮಕ್ಕಳ ಗ್ರಹಿಕೆಯ ಬುದ್ದಿಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಬಹುಬೇಗ ಸಮಾಜದ ಎಲ್ಲಾ ವಿಷಯಗಳು ಅವರಿಗೆ ತಿಳಿಯುವ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಇದರಿಂದಾಗಿ ಅತಿಹೆಚ್ಚು ಅಪಾಯಕಾರಿ ಮತ್ತು ಪೋಷಕರಿಗೆ ತಲೆ ಬಿಸಿಯಾಗಿರುವುದು ಮಕ್ಕಳು ದುಶ್ಚಟಗಳ ದಾಸರಾಗುತ್ತಿರುವುದು. ಕೇವಲ ಸಿಗರೇಟು ಎಣ್ಣೆ ಮಾತ್ರವಲ್ಲದೆ ಹುಕ್ಕಾ ಬಾರ್, ಡ್ರಗ್ಸ್, ಬೆಟ್ಟಿಂಗ್ ಅವರ ಆಯ್ಕೆಗಳಾಗಿವೆ.
ನಂತರದಲ್ಲಿ ಮೊಬೈಲ್ ವೀಡಿಯೋ ಗೇಮ್ ಮತ್ತು ಬೈಕುಗಳ ಹುಚ್ಚು ಸಾಹಸ ಅವರನ್ನು ಆಕರ್ಷಿಸುತ್ತಿದೆ.
ಇದನ್ನು ಹೊರತುಪಡಿಸಿ ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವ ಅತ್ಯಂತ ಗಾಢವಾಗಿ ಅವರನ್ನು ಸೆಳೆಯುವ ಚಟುವಟಿಕೆಗಳ ಬಗ್ಗೆ ಪೋಷಕರು ಚಿಂತೆಗೀಡಾಗಿದ್ದಾರೆ.
ಇದನ್ನು ಎದುರಿಸುವ ಬಗೆ ಹೇಗೆ ??????
ಇದು ಅಷ್ಟು ಸುಲಭವಲ್ಲ. ಮೊದಲೇ ಹೇಳಿದಂತೆ ಇದು ವೈಯಕ್ತಿಕ ನೆಲೆ ಮೀರಿ ಸಾಮಾಜಿಕ ಸಮಸ್ಯೆಯಾಗಿ ಎಲ್ಲಾ ಕಡೆ ಹರಡಿದೆ. ಶಾಲೆ, ಸ್ನೇಹಿತರು, ಸಾಮಾಜಿಕ ಜಾಲತಾಣಗಳು ಮುಂತಾದ ಎಲ್ಲವೂ ಈ ಮಕ್ಕಳು ಹದಗೆಡಲು ಪೂರಕ ವಾತಾವರಣ ಕಲ್ಪಸಿರುವಾಗ ಅದನ್ನು ತಡೆಯುವುದು ಹೇಗೆ ????????
ಮಕ್ಕಳ ಮೇಲೆ ಅತಿಯಾದ ನಿಯಂತ್ರಣ ಮತ್ತು ನಿರೀಕ್ಷೆ ಇಟ್ಟುಕೊಳ್ಳಬಾರದು.
ಆದರೆ ಅದೇ ಸಮಯದಲ್ಲಿ ಈಗಿರುವುದಕ್ಕಿಂತ ಎರಡು ಪಟ್ಟು ಪ್ರೀತಿ ಮತ್ತು ಮಕ್ಕಳ ಮೇಲಿನ ಕಾಳಜಿಯನ್ನು ದುಪ್ಪಟ್ಟು ಮಾಡಬೇಕು. ಇದು ಕೇವಲ ಕಾಟಾಚಾರಕ್ಕೆ ಆಗದೆ ಜವಾಬ್ದಾರಿಯುತವಾಗಿ ಆಗಬೇಕು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಂದು ವೇಳೆ ಮಕ್ಕಳು ಸರಿಯಾದ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ ಎಂದರೆ ಅದರ ಅವಶ್ಯಕತೆ ಇಲ್ಲ. ದಾರಿ ತಪ್ಪಿದ್ದಾರೆ ಎಂದು ಮನವರಿಕೆಯಾದಾಗ ಇದು ಅತ್ಯಂತ ಅವಶ್ಯ.
ಹದಿಹರೆಯದಲ್ಲಿ ಮಕ್ಕಳು ದುಶ್ಚಟ ಅಥವಾ ಪ್ರೀತಿಗೆ ಒಳಗಾಗಿದ್ದಾರೆ ಎಂದು ಪೋಷಕರಿಗೆ ತಿಳಿದಾಗ ಅವರು ವಿಲವಿಲ ಒದ್ದಾಡಿಬಿಡುತ್ತಾರೆ. ಸಮಾಜದ ನೀತಿ ನಿಯಮಗಳಿಗೆ ಹೆದರಿ ಅತ್ಯಂತ ಆಕ್ರೋಶ ಭರಿತರಾಗುತ್ತಾರೆ. ಸಮಸ್ಯೆಯ ಮೂಲ ಇರುವುದು ಇಲ್ಲಿಯೇ !!!!!
ಇದೊಂದು ಅಗ್ನಿ ಪರೀಕ್ಷೆ. ನಾವೇ ಹುಟ್ಟಿಸಿ ಪ್ರೀತಿಯನ್ನು ಧಾರೆ ಎರೆದು ಬೆಳೆಸಿದ ಮಗು ಈಗ ನಮ್ಮ ಕಣ್ಣ ಮುಂದೆಯೇ ಸಮಾಜದ ಒಪ್ಪಿತ ನಿಯಮಗಳಿಗೆ ವಿರುದ್ಧವಾಗಿ ಹಾಳಾಗುವ ವರ್ತನೆ ತೋರುತ್ತಿರುವಾಗ ನಾವು ತುಂಬಾ ತುಂಬಾ ತಾಳ್ಮೆಯ ಪ್ರಬುದ್ದತೆಯನ್ನು ಪ್ರದರ್ಶಿಸಬೇಕಾಗುತ್ತದೆ. ಇಲ್ಲದಿದ್ದರೆ ಮಕ್ಕಳ ಜೊತೆ ಇಡೀ ಕುಟುಂಬವೇ ನಾಶವಾಗುವ ಸಾಧ್ಯತೆ ಇದೆ.
ನಮ್ಮ ಬಂಧು ಬಳಗ ಸ್ನೇಹಿತರು ನೆರೆಹೊರೆಯವರು ಈ ಸಂದರ್ಭದಲ್ಲಿ ನಮ್ಮ ನೆರವಿಗೆ ಬರದೆ ಕುಹುಕವಾಡುವ ಸಾಧ್ಯತೆಯೇ ಹೆಚ್ಚು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗದೆ ದಿಟ್ಟತನದಿಂದ ಸಮಸ್ಯೆಯ ಮೂಲವನ್ನು ಕಂಡುಹಿಡಿದು ಮಗು ನನ್ನ ದೇಹದ ಒಂದು ಭಾಗ ಅದರ ಎಲ್ಲಾ ಒಳಿತು ಕೆಡಕುಗಳಿಗೆ ನಾನೂ ಸಹ ಜವಾಬ್ದಾರ ಎಂದು ನಮ್ಮ ಸಂಪೂರ್ಣ ಪ್ರಯತ್ನ ಹಾಕಬೇಕು. ಅದು ಬಿಟ್ಟು ಕೋಪದ ಮನಸ್ಥಿತಿಯಲ್ಲಿ ಮಕ್ಕಳನ್ನು ನಮ್ಮಿಷ್ಟದಂತೆ ದಂಡಿಸಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಿ ದುರಂತದ ಅಂತ್ಯ ಕಾಣಬೇಕಾಗುತ್ತದೆ.
ಇದು ತಾತ್ಕಾಲಿಕ ಪ್ರಯತ್ನವಾಗಬಾರದು. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ನಿರಂತರತೆಯನ್ನು ಕಾಪಾಡಿಕೊಳ್ಳಬೇಕು.
ಬಹುಬೇಗ ನಿರಾಶರಾಗಬಾರದು.
ಇದಲ್ಲದೆ ನಮ್ಮ ನಮ್ಮ ಅನುಭವದ ಆಧಾರದಲ್ಲಿ ಇನ್ನಷ್ಟು ಯೋಚಿಸಿ ಕ್ರಮ ಕೈಗೊಳ್ಳಬೇಕು. ಜೊತೆಗೆ ಇದನ್ನು ಮೊದಲೇ ಊಹಿಸಿ ಸಾಧ್ಯವಾದಷ್ಟು ಪ್ರೀತಿ ಮತ್ತು ಜವಾಬ್ದಾರಿಯ ಮುನ್ನೆಚ್ಚರಿಕೆ ತುಂಬಾ ತುಂಬಾ ಅವಶ್ಯ.
ಏನೇ ಆದರೂ ಧೃತಿಗೆಡದೆ ಸಮಸ್ಯೆಗಳನ್ನು ಎದುರಿಸುವುದು ನಮ್ಮ ಬದುಕಿನ ಭಾಗವಾಗಿ ಮಾಡಿಕೊಂಡರೆ ದುರಂತಗಳ ಸಾಧ್ಯತೆಯನ್ನು ಇಲ್ಲವಾಗಿಸಬಹುದು.
ಮತ್ತೊಮ್ಮೆ ಹೇಳುತ್ತೇನೆ. ಇದು ಸಾಮಾಜಿಕ ಸಮಸ್ಯೆ. ಇಂತಹ ಸಮಾಜದಲ್ಲಿ ಇದು ಸಾಮಾನ್ಯ. ಇದರಿಂದ ತಪ್ಪಿಸಿಕೊಳ್ಳಲು ಆಗದು. ಎದುರಿಸುವುದನ್ನು ಕಲಿಯಬೇಕು ಮತ್ತು ಬಂದದನ್ನು ಸ್ವೀಕರಿಸಬೇಕು.
- ವಿವೇಕಾನಂದ ಹೆಚ್ ಕೆ
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!
ಹೆಂಗರುಳೇ ಕಲ್ಲಾದರೆ ನುಡಿವುದೇನು(ಬ್ಯಾಂಕರ್ಸ್ ಡೈರಿ)