ದಾರಿ ದೀಪ – 12

Team Newsnap
2 Min Read

ಡಾ.ಶ್ರೀರಾಮ ಭಟ್ಟ

ಸಕಲ ವಿಸ್ತಾರದ ರೂಹು


ವಿಶ್ವತಶ್ಚಕ್ಷುಃ ಉತ ವಿಶ್ವತೋ ಮುಖೋ ವಿಶ್ವತೋ ಬಾಹುಃ ಉತ ವಿಶ್ವತಸ್ಪಾತ್
ಸಂ ಬಾಹುಭ್ಯಾಂ ಧಮತಿ ಸಂಪತತ್ರೈದ್ಯಾ೯ವಾಭೂಮೀ ಜನಯನ್ ದೇವ ಏಕಃ

ಎಲ್ಲೆಡೆ ಕಣ್ಣು, ಎಲ್ಲೆಡೆ ಮುಖ, ಎಲ್ಲೆಡೆ ತೋಳು, ಎಲ್ಲೆಡೆ ಕಾಲು. ಅವನಿ ಅಂತರಾಳಗಳ ಸೃಷ್ಟಿಗೆಂದೆ ಎರಡು ಬಾಹುಗಳಿಂದ ತಿದಿಯೂದಿ ಚೋದಿಸುವ ದೇವನು ಒಬ್ಬನೇ.
ಶ್ವೇತಾಶ್ವತರ ಉಪನಿಷತ್ತಿನ(೩:೩) ಈ ಮಂತ್ರವನ್ನು ಕನ್ನಡದ ಮನಸ್ಸು ಸೂಕ್ಷ್ಮ ಸಂವೇದನೆಯಿಂದ ಪರಿಭಾವಿಸಿದೆ:


ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ,
ಸಕಲವಿಸ್ತಾರದ ರೂಹು ನೀನೇ ದೇವಾ,

‘ವಿಶ್ವತಶ್ಚಕ್ಷುಃ’ ನೀನೆ ದೇವಾ,
‘ವಿಶ್ವತೋಮುಖ’ ನೀನೆ ದೇವಾ,
‘ವಿಶ್ವತೋಬಾಹು’ ನೀನೇ ದೇವಾ,
‘ವಿಶ್ವತಃಪಾದ’ ನೀನೆ ದೇವಾ, ಕೂಡಲಸಂಗಮದೇವಾ
. (ಬಸವಣ್ಣನವರ ವಚನಗಳು:೫೩೩)


ಇದೊಂದು ಮನೋಜ್ಞ ಕಾವ್ಯಾತ್ಮಕ ಭಾವಾನುವಾದದಂತಿದೆ. ‘ಅನುಭಾವಾನುವಾದ’ ಎಂದು ಹೊಸ ಹೆಸರಿಟ್ಟು ಕರೆಯಬಹುದೇನೊ. ಬಸವಣ್ಣನವರು ಶರಣ ಅಷ್ಟೇ ಅಲ್ಲದೆ ಅನುಭಾವಿಯೂ ಕೂಡ ಎನ್ನುವುದು ಲೋಕವಿದಿತ. ಮೂಲದ ಪದಗಳನ್ನು ಯಥಾವತ್ತಾಗಿ ಬಳಸುತ್ತಲೇ ‘ನೀನೆ ದೇವಾ’ ಎಂದು ಪುನರಾವರ್ತಿಸಿದ್ದು ‘ದೇವ ಏಕಃ’ ಎನ್ನುವುದರ ಸೂಚನೆ. ‘ದೇವನೊಬ್ಬ ನಾಮ ಹಲವು’ ಎನ್ನುವ ಬಸವಣ್ಣನವರ ಮಾತೇ ಇದೆಯಲ್ಲ. ವಿಶ್ವ ಮತ್ತು ನೀನೇ ದೇವಾ ಮರಳಿ ಮರಳಿ ಹೊರಳುತ್ತ ನಾದಾನುಸಂಧಾನವನ್ನು ಸೃಜಿಸಿವೆ.


ವಿಶ್ವಾತ್ಮಕಚೈತನ್ಯ ಸಕಲಕ್ಕು ವಿಸ್ತರಿಸಿದೆ ಎಂದು ಕಂಡರಿಯುವುದೆ ಅನುಭಾವ. ಬೀಜ ಮೊಳಕೆ ಒಡೆದು ಸಸಿಯಾಗಿ ರೆಂಬೆ ಕೊಂಬೆಗಳಾಗಿ ಮರವಾಗಿ ಹೂತಳೆದು ಹಣ್ಣಾಗಿ, ಹಣ್ಣ ಒಡಲಲ್ಲಿ ಬೀಜ ಅಡಗಿ ಇರುತ್ತದಲ್ಲ. ಬೀಜದಿಂದ ಬೀಜಕ್ಕೆ ಸಾಗಿಹೋದ ನಡೆಯೇ ‘ಋತ’. ಋತ ಎಂದರೇ ನಡೆ. ಈ ಋತದ ಉದ್ದಕ್ಕು ಓತಪ್ರೋತವಾಗಿ ನೆಲಸಿದ ಚೈತನ್ಯವೆ ‘ಸತ್ಯ’. ಸತ್ಯವಿಲ್ಲದೆ ಋತ ಸಂಭವಿಸದು. ಆ ಸತ್ಯವನ್ನು ಉಪನಿಷತ್ತು ಬ್ರಹ್ಮ(ಪರಬ್ರಹ್ಮ) ಎಂದು ಹೆಸರಿಸಿದರೆ, ಶೈವದರ್ಶನ ಮಾಹೇಶ್ವರ ಎಂದು ಕರೆದಿದೆ. ಈ ಮೇಲಿನದು ಮಾಹೇಶ್ವರಸ್ಥಲದ ವಚನ.

vermicompost 1111


ಈ ಅಖಂಡ ಚೈತನ್ಯ ವಿಶ್ವವಿಸ್ತಾರವಾದ ಪರಿಯನ್ನು ಬಸವಣ್ಣನವರು ಸ್ವಯಂ ಅನುಭವಿಸಿ ಅನನ್ಯವಾಗಿ ಅನುಪಮವಾಗಿ ಅಪ್ಪಟ ಕನ್ನಡದಲ್ಲೇ ನುಡಿಸಿದ ವಚನವೊಂದಿದೆ:


ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
…. …. ಎನ್ನ ಕರಸ್ಥಳಕ್ಕೆ ಬಂದು ಚುಳುಕಾದಿರಯ್ಯಾ.
(೭೪೪)
‘ಮಿಗೆಯಗಲ’ ಪುರುಷಸೂಕ್ತದ ಮಾತನ್ನು ನೆನಪಿಸುತ್ತದೆ: ಸ ಭೂಮಿಂ ವಿಶ್ವತೋ ವೃತ್ವಾ, ಅತ್ಯತಿಷ್ಠ ದ್ದಶಾಂಗುಲಮ್ (ಆತ ಭೂ ವ್ಯೋಮಗಳನ್ನು ವ್ಯಾಪಿಸಿ ಅದರಾಚೆಗೂ ಹತ್ತು ಅಂಗುಲ ವ್ಯಾಪಿಸಿದ್ದಾನೆ). ಅತ್ಯತಿಷ್ಠದ್ದಶಾಂಗುಲಮ್ ಎನ್ನುವುದು ದೇಸಿನುಡಿಯಲ್ಲಿ ‘ಮಿಗೆಯಗಲ’ ಎಂದಾದದ್ದು ಅತ್ಯಂತ ಸಾರ್ಥಕ. ಬಸವಣ್ಣನವರ ವಚನದಲ್ಲಿ ಅತ್ಯತಿಷ್ಠದ್ದಶಾಂಗುಲವೂ ಯಥಾವತ್ತಾಗಿ ಕಾಣಿಸಿಕೊಂಡಿದೆ:


ಶ್ರುತಿತತಿಯ ಶಿರದ ಮೇಲೆ ಅತ್ಯತಿಷ್ಠದ್ದಶಾಂಗುಲನ ನಾನೇನೆಂಬೆನಯ್ಯಾ?
ಘನಕ್ಕೆ ಘನಮಹಿಮನ ಮನಕ್ಕಗೋಚರನ!
‘ಅಣೋರಣೀಯಾನ್ ಮಹತೋ ಮಹೀಯಾನ್’
ಮಹಾದಾನಿ ಕೂಡಲಸಂಗಮದೇವ. (೫೩೧)

ವಿಶ್ವವ್ಯಾಪಕ ತತ್ವವು ನಿರಾಕಾರ. ಭಕ್ತಿಗೆ ಉಪಾಸನೆಗೆ ಬೇಕಾದದ್ದು ಸಾಕಾರ. ಬೆಳಗಾದರೆ ಅಂಗೈಯಲ್ಲಿ ಸಣ್ಣ ಮಣ್ಣಿನ ಲಿಂಗವಾಗಿ ಕರಸ್ಥಳಕ್ಕೆ ಬಂದು ಚುಳುಕಾಗುವುದು ಅನುಭಾವದ ಮಹಾವಿಸ್ಮಯ! ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಪುರುಷಸೂಕ್ತದ ಮಾತಿನೊಂದಿಗೆ ಮಹಾನಾರಾಯಣ ಉಪನಿಷತ್ತಿನ ಮಾತೂ ಕಾಣಿಸಿಕೊಂಡಿದೆ:

ಅಣೋರಣೀಯಾನ್…. ನಾರಾಯಣನ ಮಾತು ಶಿವನಿಗೆ ಸಲ್ಲಬಲ್ಲುದೆ! ಸಾಕಾರವು ನಿರಾಕಾರಕ್ಕೆ ಸಂಕೇತ. ನಾರಾಯಣ ಎಂದರೆ ಸಕಲ ಜೀವಕ್ಕೆ ಆಧಾರ. ವಿರಾಟ್ ಪುರುಷ ವಿಶ್ವವನ್ನು ವ್ಯಾಪಿಸಿದ ತತ್ವವು. ಶಿವ ಎಂದರೆ ಲೋಕಹಿತವೆ ಮೈವೆತ್ತ ಮಂಗಳಮೂರ್ತಿ. ಇದು ಆ ಶಬ್ದಗಳ ಅವಯವಾರ್ಥ. ಅಲ್ಲಿಗೆ ಇವೆಲ್ಲವೂ ಒಬ್ಬನೇ ದೇವನಿಗೆ ಸಲ್ಲುವ ವಿಶೇಷಣಗಳು. ಮೂಲ ಮೂರ್ತಿ ಉತ್ಸವ ಮೂರ್ತಿಗಳ ಹಿಂದಿರುವುದು ಒಂದೇ ತತ್ವವು. ತೋರಿಕೆಗೆ ಬೇರೆ ಅಷ್ಟೆ. ಸಕಳ(ಸಾಕಾರ) ನಿಷ್ಕಳ(ನಿರಾಕಾರ) ಕೂಡಿಕೊಂಡೇ ಇವೆ ಎನ್ನುವ ಬಸವಣ್ಣನವರ ಈ ವಚನ ನೋಡಿ. ಅದು ವಿಶ್ವತಶ್ಚಕ್ಷುಃ ಮಂತ್ರವನ್ನು ಮರಳಿ ಮನನ ಮಾಡುತ್ತದೆ.


ಸಕಳ ನಿಷ್ಕಳವ ಕೂಡಿಕೊಂಡಿಪ್ಪೆಯಾಗಿ
ಸಕಳ ನೀನೇ, ನಿಷ್ಕಳ ನೀನೇ ಕಂಡಯ್ಯಾ.
ವಿಶ್ವತಶ್ಚಕ್ಷುಃ ನೀನೆ ದೇವಾ, ‘ವಿಶ್ವತೋಮುಖ’ ನೀನೆ ದೇವಾ,
‘ವಿಶ್ವತೋಬಾಹು’ ನೀನೇ ದೇವಾ, ಕೂಡಲಸಂಗಮದೇವಾ. (೫೩೨)

Share This Article
Leave a comment