February 12, 2025

Newsnap Kannada

The World at your finger tips!

family

ತಿನಿಸುವುದರಲ್ಲಿನ ಆನಂದ ತಿನ್ನುವುದರಲ್ಲಿಲ್ಲ…!

Spread the love

ಬದುಕಿನಲ್ಲಿನ‌‌ ಸುಖ, ಶಾಂತಿ, ಸಂತೋಷ, ನೆಮ್ಮದಿ ಅಥವಾ ಲಿವಿಂಗ್ ಕಂಫ಼ರ್ಟ್ ಅನ್ನೋದಿವೆಯಲ್ಲಾ… ಅವು ಯಾವುದರಿಂದ ಸಿಗುತ್ತೆ ಎನ್ನು ಪ್ರಶ್ನೆಯೇ ಸಂಕೀರ್ಣವಾದದ್ದು. ವಾಸಕ್ಕೆ ಒಂದು ದೊಡ್ಡ ಬಂಗಲೆ, ಓಡಾಡಲು ಕಾರು, ಆರಂಕಿ ಸಂಬಳ, ಬಯಸಿದ್ದು ಬೇಕೆಂದಾಗ ದಕ್ಕಿಸಿಕೊಳ್ಳುವ ಆರ್ಥಿಕ- ಸಾಮಾಜಿಕ ತಾಕತ್ತು, ಸಮಾಜದಲ್ಲಿ ಒಂದು ದೊಡ್ಡ ಸ್ಥಾನಮಾನ, ಎಲ್ಲರಿಂದಲೂ ಪ್ರಶಂಸೆ…. ಇವೆಲ್ಲವೂ ಲೈಫ಼್ ಗೆ ಒಂದು ಮಟ್ಟದ ಲಗ್ಶುರಿ ತಂದು ಕೊಡಬಲ್ಲದೇ ವಿನಃ, ಇವಿದ್ದ ಎಲ್ಲರಿಗೂ ಸಂಪೂರ್ಣ ನೆಮ್ಮದಿ, ಖುಷಿ ತಂದುಕೊಡೋದು ಡೌಟು !

ಹಾಗಾದರೆ….ಜಗತ್ತಿನಲ್ಲಿ ಲೌಕಿಕಸುಖ ಕೊಡಬಲ್ಲ ಎಲ್ಲ ವಸ್ತುಗಳು ಕಾಲುಮುರಿದುಕೊಂಡು ಕಾಲ ಬಳಿಯಿದ್ದರೂ ಸಿಗದ ಆನಂದ ಬೇರೆಲ್ಲಿಂದ ಸಿಕ್ಕೀತು ?

ಜೀವನದ ಸುಖ ,ಸಂತೋಷ , ನೆಮ್ಮದಿ ಶಾಂತಿ ಇವೆಲ್ಲವೂ‌ ಮನಸಿಗೆ ಸಂಬಂಧಿಸಿದ ಅಂತರಂಗದ ಫ಼ೀಲಿಂಗುಗಳೇ ವಿನಃ ಯಾವುದೋ ಬೆಲೆ ಬಾಳುವ ವಸ್ತುಗಳಲ್ಲಿ ಅಡಗಿ ಕೂತಿರುವುದಲ್ಲ ಎನ್ನುವ ಡೈಲಾಗು ಸವಕಲಾದರೂ ಅದು ವಾಸ್ತವವೇ.!

ಈ ಮಾತುಗಳಲ್ಲಿ ಲಾಜಿಕ್ ಇರೋದ್ರಿಂದಲೇ ಕೋಟಿ ಕೋಟಿ ಬಂಗಲೆಗಳ ಸಿರಿವಂತಿಕೆಗಳಲ್ಲಿರದ ಪ್ರಾಮಾಣಿಕ ಖುಷಿಯ ಅನುಭೂತಿ, ಚಿಕ್ಕ ಮನೆಗಳಲ್ಲಿ…. ಅಷ್ಟೇಕೆ, ಅತಿ ಸಣ್ಣ ಗುಡಿಸಲುಗಳಲ್ಲಿ ಢಾಳಾಗಿ ಇರಬಲ್ಲದು. ಅಲ್ಲಿಗೆ , ಖುಷಿ- ಸುಖ- ಆನಂದ ನೆಮ್ಮದಿ ಇತ್ಯಾದಿ ಮೌಲ್ಯಯುತವಾದ ಫ಼ೀಲಿಂಗುಗಳು ಕೇವಲ ಮನಸಿಗೆ ಕನೆಕ್ಟ್ ಆಗಿರೋದೇ ವಿನಃ ಯಾವುದೋ ಷಾಪಿಂಗ್ ಮಾಲ್ ಗಳಲ್ಲಿ ಅಥವಾ ಅಮೇಜ಼ಾನ್- ಫ಼್ಲಿಪ್ ಕಾರ್ಟುಗಳ ಆನ್ ಲೈನ್ ಷಾಪಿಂಗ್ ನಲ್ಲಿ‌ ಸಿಗೋವಂಥಾದ್ದಲ್ಲ !

ಇದು ಸತ್ಯವಾಗಿರುವಾಗ , ಜೀವನದಲ್ಲಿ ಹಾಗಾದ್ರೆ ಪ್ರತಿಯೊಬ್ಬರೂ ಯಾಕ್ರೀ ಅಷ್ಟೆಲ್ಲಾ ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿ, ತಮ್ಮದೇ ಆದ ಒಂದು ಸುಂದರ ಬದುಕನ್ನು ಕಟ್ಟಿಕೊಳ್ಳಲು ನಾನಾ ಅವತಾರಗಳಲ್ಲಿ ಹೆಣಗಬೇಕು ? ಎನ್ನುವ ಸಿಂಪಲ್ ಪ್ರಶ್ನೆ ಧುತ್ತನೇ ಎದುರಾಗುತ್ತದೆಯಲ್ಲವೇ ?
ಚೆನ್ನಾಗಿ ದುಡಿದು ಸಂಪಾದನೆ ಮಾಡಿ ಶ್ರೀಮಂತಿಕೆಯಿಂದ ಬಾಳಬೇಕೆನ್ನುವ ತುಡಿತ ತಪ್ಪಲ್ಲ. ಅಸಲಿಗೆ ಅದಕ್ಕಾಗಿಯೇ ಎಲ್ಲರೂ ಪ್ರಯತ್ನಪಡೋದು. ಆದರೆ ಹಾಗೆ ಲಗ್ಸುರಿಯಾಗಿ ಚೆನ್ನಾಗಿರಬೇಕೆಂಬ ಧಾವಂತದಲ್ಲಿ ಬದುಕಿನ ಎಲ್ಲಾ ಸುಖವೂ ಕೇವಲ ಅಂತಹ ಲೈಫ಼ಿದ್ದಲ್ಲಿ ಮಾತ್ರವೇ ಸಿಗಬಹುದೆಂಬ ಭಾವನೆಯಿದೆಯಲ್ಲಾ…..

ಅದು ಮಾತ್ರ ಓಹ್…..ಭ್ರಮೆ !.

ಈಗ ನನ್ನ ಬರಹದ ಹೂರಣಕ್ಕೆ‌ ಬರುತ್ತೇನೆ. ಜೀವನದಲ್ಲಿ ದೊಡ್ಡ ದೊಡ್ಡ ಉದ್ದೇಶ ಸಾಧನೆಗಳ ಹಿಂದೆ‌ ಬಿದ್ದ ಮನುಷ್ಯ , ಚಿಕ್ಕ ಚಿಕ್ಕ ಸಂಗತಿಗಳು , ಮತ್ತೊಬ್ಬರಿಗೆ ಮಾಡುವ ಸಹಾಯಗಳು ತನಗೆ ಕೊಡಬಹುದಾದ ಅದಮ್ಯ ಸಂತೋಷವನ್ನು ತನಗರಿವಿಲ್ಲದಂತೆಯೇ ನೆಗ್ಲೆಕ್ಟ್ ಮಾಡಿರುತ್ತಾನೆ ಅಥವಾ ಅವುಗಳು‌ ಕೊಡುವ ಅನಿರ್ವಚನೀಯ ಆನಂದವನ್ನು ಅನುಭವಿಸುವಲ್ಲಿ ವಿಫಲನಾಗಿರುತ್ತಾನೆ. ಕೊನೆಗೆ ‘ಏನೆಲ್ಲಾ ಇದ್ದರೂ ತನಗೆ‌ ಬದುಕಲ್ಲಿ ನೆಮ್ಮದಿನೇ ಇಲ್ಲಾ ಕಣ್ರೀ’ ಎಂಬ‌ ತಥಾಕಥಿತ ಗೋಳಿನ ಕಥೆಗಳನ್ನು ವಾಕು ಪಾರ್ಕುಗಳಲ್ಲಿನ ಟಾಕುಗಳಲ್ಲಿ ಜೀಕುತ್ತಲೇ ಇರುತ್ತಾನೆ.

ಖುಷಿ ಕೊಡುವ ಸಣ್ಣಪುಟ್ಟ ಸಂಗತಿಗಳಾವುವು ಎಂಬುದಕ್ಕೆ ನೀವು ಹೀಗೆ… ಇಷ್ಟೇ…ಎಂದು ಬೇಲಿಯನ್ನು ನಿರ್ಮಿಸಲು ಸಾಧ್ಯವಿಲ್ಲ. ಅವು ನಿಮ್ಮ‌ ನಿತ್ಯ ಬದುಕಲ್ಲಿ ನಿಮ್ಮಿಂದಾಗಬಹುದಾದ ಅಥವಾ ‌ನಿಮ್ಮ‌ ಮೂಲಕ ಸಾಧ್ಯವಾಗಬಹುದಾದ ಯಾವುದೇ ಸಂಧರ್ಭ, ಸನ್ನಿವೇಶ, ಘಟನೆ, ವಿಚಾರ, ಉಪಕಾರ ….ಒಟ್ಟಾರೆ, ಮತ್ತೊಬ್ಬರ ಮುಖದಲ್ಲಿ ಮಂದಹಾಸ ಅರಳಿಸುವ, ಮತ್ತೊಬ್ಬರ ಬದುಕಲ್ಲಿ ಭರವಸೆ ಹುಟ್ಟಿಸುವ ಯಾವುದೇ ಕೆಲಸವಾಗಿರಬಹುದು.

ಸಪೋಸ್ ..ನೀವು ನಿಮಗಿಷ್ಟವಾದ ಊಟ ಮಾಡಿದಾಗ ,ತಿಂಡಿ ತಿಂದಾಗ ಅದು ನಿಮ್ಮಲ್ಲಿ ಆನಂದವನ್ನುಂಟು ಮಾಡಬಹುದು ಆದರೆ ಅದೇ ಊಟವೆಂಬುದು ಹಸಿದವನೊಬ್ಬನಿಗೆ ನಿಮ್ಮ‌ ಮೂಲಕ ಪ್ರಾಪ್ತವಾದಾಗ ಅವನ‌ ಮೊಗದಲ್ಲಿನ ಧನ್ಯತಾಭಾವವೆಂಬುದು ನೀವು ಉಂಡಾಗ ಸಿಕ್ಕಿದ್ದ ತೃಪ್ತಿಗಿಂತಲೂ ವಿಭಿನ್ನವಾದ ಸಂತೃಪ್ತಿ ಹಾಗೂ ಅರ್ಥಪೂರ್ಣ ಆನಂದವನ್ನು ನಿಮ್ಮೊಳಗೆ ತಂದುಕೊಡಬಲ್ಲದು.

ನೀವೊಬ್ಬರೇ ಕೂತು ಮೃಷ್ಟಾನ್ನ ಭೋಜನ ಸವಿದಾಗ ಸಿಗದ ಆನಂದ, ನಾಲ್ಕು ಜನ ಸ್ನೇಹಿತರೊಂದಿಗೆ ಅಥವಾ ಹಸಿದವರೊಂದಿಗೆ ಹರಕು ಮುರುಕು ಆಹಾರವನ್ನೇ ಹಂಚಿ ತಿಂದಾಗ ಪರಮಾನಂದವನ್ನೇ ತಂದೀತು. !

ಹಾಗೆಯೇ ಈ ಕೆಲವೊಂದು ಚಿಕ್ಕಪುಟ್ಟ ಸಂಧರ್ಭಗಳನ್ನು‌ ಗಮನಿಸಿ.

ರಸ್ತೆಯಲ್ಲಿ ಶಾಲಾ‌ ಬ್ಯಾಗ್ ಗಳ‌ ಭಾರವನ್ನು ಹೊತ್ತು‌ ನಡೆಯುತ್ತಿರುವ ಮಕ್ಕಳು ಕಂಡಾಗ ಅವರನ್ನು ನಿಮ್ಮ‌ ವಾಹನದಲ್ಲಿ ಕೂರಿಸಿ ಅವರನ್ನು ಸ್ವಲ್ಪದೂರ ಅವರ ಮನೆಯವರೆಗೋ ಅಥವಾ ಅವರ ಹತ್ತಿರದ ಸ್ಥಳಕ್ಕೋ ಡ್ರಾಪ್ ಕೊಟ್ಟು ಅವರ ಕಣ್ಣುಗಳಲ್ಲಿನ ಸಂತಸವನ್ನು‌ ಒಮ್ಮೆ ಗಮನಿಸಿ ನೋಡಿ !

ಹಸಿವಿನಿಂದ ಕಂಗಾಲಾಗಿರುವ ಮೂಕ‌ಪ್ರಾಣಿಗಳ‌ ಹಸಿವು‌ ನೀಗಿಸುವ ಕೆಲಸ ಮಾಡಿ‌ ಒಮ್ಮೆ‌ ಅವುಗಳು ಕೃತಜ್ಞತೆ ಯಿಂದ ಬಾಲ ಅಲ್ಲಾಡಿಸುವುದನ್ನೋ , ನಾಲಿಗೆಯಿಂದ ನಿಮ್ಮ‌ ಪಾದಗಳನ್ನು‌ ನೆಕ್ಕುವುದನ್ನೋ ಒಮ್ಮೆ‌ ಫ಼ೀಲ್ ಮಾಡಿ‌ ನೋಡಿ .!

ಜನನಿಬಿಡ ರಸ್ತೆಯಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ರಸ್ತೆ ದಾಟಿಸಲು ಅಶಕ್ತರಿಗೆ ವಿಕಲಚೇತನರಿಗೆ ಅಥವಾ ಅಮಾಯಕರಿಗೆ‌ ಸ್ವಲ್ಪ ಸಹಾಯ ಮಾಡಿ ನೋಡಿ !

ಎಲ್ಲ‌ ಜವಾಬ್ದಾರಿ ಒಬ್ಬನೇ ಹೊತ್ತು ಮನೆಯಲ್ಲಿನ‌ ಸಮಾರಂಭವನ್ನು‌ ಕಷ್ಟಪಟ್ಟು ನಿಭಾಯಿಸುತ್ತಿರುವ ನಿಮ್ಮ ಸ್ನೇಹಿತನಿಗೆ ಅವನ ನಿರೀಕ್ಷೆಯಿಲ್ಲದೆಯೇ ಹೆಗಲಿಗೆ ಹೆಗಲು‌ ಸಾಥ್ ಕೊಟ್ಟು ನಿಂತಾಗ ಅವನ ಹೃದಯದಲ್ಲಿನ ಧನ್ಯತೆಯನ್ನು ಅನುಭವಿಸಿ ನೋಡಿ !

ರಸ್ತೆಯಲ್ಲಿ ಅಪಘಾತಕ್ಕೊಳಗಾದವರಿಗೆ ಅಥವಾ ತುರ್ತುಚಿಕಿತ್ಸೆ ಬೇಕಾಗಿರುವವರಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆ ಸೇರಿಸಲು ನಿಮ್ಮ ಮಿತಿಯೊಳಗೆ ಕೈಲಾದ ಸಹಾಯ ಮಾಡಿ ಒಂದು ಜೀವ ಉಳಿಸಿದ ತೃಪ್ತಿಯನ್ನು ತೂಗಿ ನೋಡಿ !

ಯಾವುದೋ ಸರ್ಕಾರಿ ಕಚೇರಿಗಳಲ್ಲಿ, ಬ್ಯಾಂಕುಗಳಲ್ಲಿ ಅಥವಾ ಇತರೆ ಇಲಾಖೆಗಳಲ್ಲಿ ಸಹಾಯಕ್ಕಾಗಿ ಅಥವಾ ಅಪೇಕ್ಷಿತ ಮಾಹಿತಿಗಾಗಿ ಅಲೆಯುತ್ತ ಕತ್ತಲಲ್ಲಿರುವವರಿಗೆ ಸ್ವಲ್ಪವೇ ಮೋಂಬತ್ತಿಯ ಬೆಳಕಾಗಿ ಅವರ ಕೃತಜ್ಞತೆಯ ಕಂಗಳಲ್ಲಿ ನಿಮ್ಮ ಬಿಂಬವನ್ನು ಗಮನಿಸಿ !

ಬಸ್ ನಲ್ಲೋ ರೈಲಿನಲ್ಲೋ ಕೂತಿರುವ ನೀವು, ಸೀಟಿಲ್ಲದೇ ಪರದಾಡುತ್ತಿರುವ ಪುಟ್ಟ ಮಕ್ಕಳೊಂದಿಗಿರುವ ಮಹಿಳೆಗೋ , ತೀರಾ ಅಸಹಾಯಕರಿಗೋ, ವಯಸ್ಸಾದ ಹಿರಿಯರಿಗೋ ಅಥವಾ ಅಶಕ್ತರಿಗೋ ನಿಮ್ಮ‌ ಸೀಟು‌ ಬಿಟ್ಟುಕೊಟ್ಟಾಗ ಅವರಲ್ಲಿನ ಧನ್ಯತೆಯನ್ನು ನೋಡಿ.

ಹೀಗೆ…ಹೇಳುತ್ತಾ ಹೋದರೆ ಇಂತಹ ಚಿಕ್ಕ ಪುಟ್ಟ ಸಂಗತಿಗಳು ಕೊಡುವ ಖುಷಿಯ ಪಟ್ಟಿಗೆ ಕೊನೆಯೆಂಬುದೇ ಇಲ್ಲ. ಅಸಲಿಗೆ ಖುಷಿ ಕೊಡುವ ಕೆಲಸಗಳೆಂದರೆ ಇಂಥವೇ ಆಗಬೇಕೆಂದೇನೂ‌ ಇಲ್ಲ ಹೀಗೆಯೇ ಇರಬೇಕೆಂದೇನೂ ಇಲ್ಲ . ಒಟ್ಟಾರೆಯಾಗಿ ಇನ್ನೊಬ್ಬರ ಮೊಗದಲ್ಲಿ ಕೃತಜ್ಞತಾಭಾವವನ್ನುದಿಸುವ ನಿಮ್ಮ ಯಾವುದೇ ಕೆಲಸವಾಗಬಹುದು. ಅವುಗಳು ತಂದುಕೊಡುವ ನೆಮ್ಮದಿ , ತೃಪ್ತಿ ನಿಮ್ಮ ಬದುಕಿನ ಉತ್ಸಾಹದ ಸೆಲೆಯಾಗಿ, ಜೀವನ್ಮುಖಿಯಾಗಿ ನೆಲೆನಿಲ್ಲಬಹುದು…!!

ಈ ತರಹದ ಸನ್ನಿವೇಶಗಳ ಸಾರವನ್ನು ಅನುಭವಿಸಿದವರಿಗೆ ಮಾತ್ರವೇ ” ತಿನಿಸುವುದರಲ್ಲಿನ ಆನಂದ ತಿನ್ನುವುದರಲ್ಲಿಲ್ಲ ” ಎಂಬ ಸೂಕ್ಷ್ಮತೆ ಅರ್ಥವಾಗಲು ಸಾಧ್ಯ..!!

ಮರೆಯುವ ಮುನ್ನ

ನಮಗೆಲ್ಲಾ ಒಂದು ಅವ್ಯಕ್ತವಾದ , ಅಗೋಚರವಾದ ಅಸೀಮವಾದ ಅಂಶವೊಂದು ಮನಸಿನ ಯಾವುದೋ ಒಂದು ಮೂಲೆಯೊಳಗೆ ಸೇರಿಕೊಂಡು ” ಬದುಕಲ್ಲಿ ಸಂತೋಷಪಡಲು ಎಲ್ಲವೂ ದೊಡ್ಡ ದೊಡ್ಡ ಮಟ್ಟದ ಮೆಟೀರಿಯಲ್ಲುಗಳೇ ಆಗಬೇಕು, ದೊಡ್ಡ ಸಾಧನೆ ಮಾಡಬೇಕು ಅಥವಾ ಮೆಮೋರೆಬಲ್ ಈವೆಂಟುಗಳು ಮಾತ್ರವೇ ಆಗಬೇಕೆಂಬ ಅನ್‌ರಿಟನ್ ಮಿಥ್ ಒಂದನ್ನು ಸೃಜಿಸಿಬಿಟ್ಟಿರುತ್ತದೆ. ಆದರೆ ಫ಼್ರೆಂಡ್ಸ್….ಅದು ಜಸ್ಟ್ ಮಿಥ್ ….. ‌ಮಿಥ್ಯ !

ಹಾಗೇ ಫ಼್ಲಾಷ್‌ಬ್ಯಾಕಿಗೆ ಹೋದಲ್ಲಿ….

ನಮ್ಮ ಬಾಲ್ಯದಲ್ಲಿ ಒಂದೇ ತಟ್ಟೆಯಲ್ಲಿ ಮೂರುಜನ ಕೂತು ಊಟ ಮಾಡುತ್ತಿದ್ದೆವು, ಒಂದೇ ಲೋಟದಲ್ಲಿ ಎಲ್ಲರೂ ನೀರು ಕುಡಿಯುತ್ತಿದ್ದೆವು. ಒಂದು ಷರ್ಟನ್ನು ಇಬ್ಬರು ಅಣ್ಣ ತಮ್ಮಂದಿರು ತೊಡುತ್ತಿದ್ದೆವು, ಒಂದೇ ಮಿಠಾಯಿಯನ್ನು ಅಂಗಿಯ ಬಟ್ಟೆಯೊಳಗಿಟ್ಟು ಕಚ್ಚಿ ಬೈಟು ಮಾಡಿ ಹಂಚಿ ತಿನ್ನುತ್ತಿದ್ದೆವು. ಎಂದೂ ಕದ್ದು ಮುಚ್ಚಿ ಒಬ್ಬರೇ ಏನನ್ನೂ ತಿಂದ ಸೀನುಗಳೇ ನೆನಪಿಲ್ಲ !

ಈ ಹಂಚಿ ತಿನ್ನುವ, ಲಿವ್ ಅಂಡ್ ಲೆಟ್ ಲಿವ್ ಕಾನ್ಸೆಪ್ಟು ಬೈ ಡಿಫ಼ಾಲ್ಟ್ ನಮ್ಮ‌ ಜ಼ಮಾನಾದ ಬಹುತೇಕರೆಲ್ಲರಲ್ಲೂ ಹಾಗೆಯೇ ಬಂದಿದ್ದರಿಂದಲೋ ಏನೋ, ನಿತ್ಯಬದುಕಿನಲ್ಲಿ ಚಿಕ್ಕಪುಟ್ಟ ಸಂಗತಿಗಳನ್ನು ಎಂಜಾಯ್ ಮಾಡುವ ಸ್ವಭಾವ ಹಾಗೂ ಉಣ್ಣುವುದಕ್ಕಿಂತಲೂ ಉಣಿಸು ಸುವುದರಲ್ಲಿನ ಆನಂದವನ್ನು ನಮಗರಿವಿಲ್ಲದೇ ಅನುಭವಿಸುತ್ತಲೇ ಬಂದಿದ್ದೇವೆ.‌

ಒಂದೊಮ್ಮೆಇದು ಯಾರಿಗಾದರೂ ಮಿಸ್ ಆಗಿದ್ದಲ್ಲಿ….ಜೀವನದ ಒಂದು ಡಿಫ಼ರೆಂಟ್ ಫ಼ೀಲಿಂಗೇ ಮಿಸ್ ಆದಂತೆ ! ಸೋ….ಬದುಕಿ‌ನಲ್ಲಿ ಎದುರಾಗುವ ಎಲ್ಲ ಸಣ್ಣ ಸಣ್ಣ ಸಂಗತಿಗಳು ಕೊಡುವ ಖುಷಿಯನ್ನು ಮನಸಾರೆ ಅನುಭವಿಸಲು ಶುರುಮಾಡಿ…..

ರೈಟ್…?

ಪ್ರೀತಿಯಿಂದ….

HIRITYRU PRAKASH 1

ಹಿರಿಯೂರು ಪ್ರಕಾಶ್.

Copyright © All rights reserved Newsnap | Newsever by AF themes.
error: Content is protected !!