February 12, 2025

Newsnap Kannada

The World at your finger tips!

pudina

ಪುದೀನಾದ ಕಣ ಕಣದಲ್ಲೂ ಇದೆ ಔಷಧ ಗುಣ

Spread the love


ಪುದಿನಾ ಎಂಬ ಗಾಢ ಪರಿಮಳ ಬೀರುವ ಸಾಮಾನ್ಯ ಸಸ್ಯ. ನಮ್ಮ ಮನೆಗಳಲ್ಲಿ, ಪುಟ್ಟ ಕುಂಡಗಳಲ್ಲಿ ಬೆಳೆಸಬಹುದಾದ ಈ ಸಸ್ಯ ತನ್ನ ಔಷಧೀಯ ಗುಣಗಳಿಂದಾಗಿ ಅಷ್ಟೇ ಅಲ್ಲ ಸಾಕಷ್ಟು ವೈವಿಧ್ಯಮಯ ಅಡುಗೆ ತಯಾರಿಯಲ್ಲೂ (kitchen tips) ಮುಖ್ಯ ಪಾತ್ರ ವಹಿಸುತ್ತದೆ.

ಬಹಳ ಹಿಂದಿನಿಂದಲೂ ನಮ್ಮ ಹಿರಿಯರು ಪುದಿನವನ್ನು ನಿತ್ಯೋಪಯೋಗಿ ಸಸ್ಯವಾಗಿ ಬಳಸುತ್ತಲೇ ಬಂದಿದ್ದು, ತನ್ನ ತಾಜಾತನದ ಗುಣದಿಂದಾಗಿ ಹಾಗೂ ವಿಶೇಷ ಘಮದಿಂದಾಗಿ ಎಲ್ಲರ ಹೃದಯ ಗೆಲ್ಲುವ ಸಸ್ಯವಿದು. ತಾಜಾತನದ ಅನುಭೂತಿ ನೀಡುವ ಬೆಳಗಿನ ಅತ್ಯಗತ್ಯ ಹಲ್ಲುಜ್ಜುವ ಪೇಸ್ಟ್‌ನಿಂದ ಹಿಡಿದು, ಬಗೆಬಗೆಯ ಚ್ಯೂಯಿಂಗಂ, ಪೆಪ್ಪರವಿಂಟುಗಳ ಫ್ಲೇವರ್‌ಗಳಲ್ಲಿಂದು ಪುದಿನಕ್ಕೆ ರಾಜ ಮರ್ಯಾದೆ.

ಪುದಿನದಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ ಹಾಗೂ ಆಂಟಿ ಬ್ಯಾಕ್ಟೀರಿಯಲ್‌ ಗುಣಗಳ ಜೊತೆಗೆ ವಿಟಮಿನ್‌ ಎ, ವಿಟಮಿನ್‌ ಸಿ ಹಾಗೂ ಬಿ ಕಾಂಪ್ಲೆಕ್ಸ್‌ ಇದೆ. ಪಾಸ್ಪರಸ್‌, ಕ್ಯಾಲ್ಶಿಯಂ, ಕಬ್ಬಿಣಾಂಶ, ಪೊಟಾಶಿಯಂ ಹಾಗೂ ಮ್ಯಾಂಗನೀಸ್‌ ಮತ್ತಿತರ ಖನಿಜಾಂಶಗಳೂ ಇವೆ.

ಬನ್ನಿ ನಾವಿಂದು ಪುದಿನಾದ ಸೇವನೆಯಿಂದ ನಮಗಿರುವ ಆರೋಗ್ಯಕರ ಉಪಯೋಗಗಳನ್ನು ತಿಳಿಯೋಣ.

  • ಆಹಾರವನ್ನು ಸುಲಭವಾಗಿ ಪಚನ ಮಾಡುತ್ತದೆ.
  • ತಿಂದ ಕೊಬ್ಬನ್ನು ಅರಗಿಸಲು ಸಹಾಯ ಮಾಡುತ್ತದೆ.
  • ಹೆಚ್ಚಿನ ಆಹಾರ ಸೇವನೆಯಿಂದ ಉಂಟಾದ ಹೊಟ್ಟೆ ಉಬ್ಬರವನ್ನು, ಹೊಟ್ಟೆಯಲ್ಲಿ ಸಂಚಿತವಾದ ಗಾಳಿಯನ್ನು ಹೊರಹಾಕಿ, ನಿವಾರಣೆ ಮಾಡುತ್ತದೆ.
  • ಗರ್ಭಿಣಿಯರ ವಾಂತಿ ನಿವಾರಣೆ ಮಾಡುತ್ತದೆ.
  • ಊಟವಾದ ನಂತರ ಈ ಎಲೆಗಳನ್ನು ಅಗಿದು ತಿನ್ನುವುದರಿಂದ ಹಲ್ಲುಗಳಲ್ಲಿ ಹುಳುಕು ಬಾರದಂತೆ ತಡೆಯುತ್ತದೆ.
  • ಹುಳುಕು ಹಲ್ಲಿನ ದುರ್ವಾಸನೆ ತಡೆಯುತ್ತದೆ.
  • ಹಲ್ಲುಗಳ ಒಸಡನ್ನು ಬಲಪಡಿಸಿ ದಂತರಕ್ಷಣ ನೀಡುತ್ತದೆ.
  • ಹೊಟ್ಟೆಯ ಜಂತು ಹುಳುಗಳನ್ನು ತಡೆದು, ಮೂತ್ರವನ್ನು ಹೆಚ್ಚಿಸುತ್ತದೆ ಮತ್ತು ವಿಷದ್ರವ್ಯಗಳನ್ನು ಹೊರಹಾಕಲು ಸಹಕರಿಸುತ್ತದೆ.
  • ಇದರ ಕಷಾಯವನ್ನು ದಿನಕ್ಕೆ ೩ ಬಾರಿ ಸೇವಿಸಿದರೆ ಕೆಮ್ಮು ಮತ್ತು ನೆಗಡಿ ಗುಣವಾಗುತ್ತದೆ.
  • ರಜಸ್ರಾವವಾಗುವ ಮೊದಲು ೪ ದಿನ ಇದರ ಕಷಾಯ ಬಳಸಿದರೆ ಮುಟ್ಟಾದಾಗ ಉಂಟಾಗುವ ನೋವುಗಳು ಕಡಿಮೆಯಾಗುತ್ತವೆ.
  • ಎಲೆಗಳ ರಸವನ್ನು ಈರುಳ್ಳಿ ರಸದೊಂದಿಗೆ ಬೆರೆಸಿ ಕುಡಿದರೆ ವಾಂತಿ ನಿಲ್ಲುತ್ತದೆ.
    •ನೋವು ನಿವಾರಕ ಔಷಧಿಗಳಲ್ಲಿ ಈ ತೈಲವನ್ನು ಬಳಸಲಾಗುತ್ತಿದೆ.
    •ಗಂಟಲು ತುರಿಕೆ ನಿವಾರಣೆಯ ಚಾಕಲೇಟುಗಳಲ್ಲೂ, ಹಲ್ಲುಜ್ಜುವ ಪೇಸ್ಟುಗಳಲ್ಲೂ ಇದು ಬಳಕೆಯಾಗುತ್ತದೆ.
    •ನೆನಪಿನ ಶಕ್ತಿಯನ್ನು ಉತ್ತಮಗೊಳಿಸುತ್ತದೆ.

ಅಷ್ಟೇ ಏಕೆ, ಪುದಿನ ರೈಸ್‌, ಪುದಿನ ಜ್ಯೂಸ್‌, ಪುದಿನ ಚಹಾ, ಪುದಿನ ಚಟ್ನಿ, ಪುದಿನ ದೋಸೆ ಸೇರಿದಂತೆ ಹಲವು ಬಗೆಯ ಅಡುಗೆಗಳನ್ನು ನಾವು ಮನೆಗಳಲ್ಲಿ ಮಾಡುವ ಮೂಲಕ ಪುದಿನ ಸಾಧ್ಯತೆಗಳನ್ನೂ (mint uses) ನಾವು ಸಾಕಷ್ಟು ವಿಸ್ತರಿಸಿಕೊಂಡಿದ್ದೇವೆ. ಅದರಲ್ಲಿ ಕೆಲವು ಬಗೆಯ ಅಡುಗೆಯನ್ನು ಕಲಿಯೋಣವೇ …..

ಪುದಿನಾ ಚಟ್ನಿ

  • ತಯಾರಿಸಲು ಬೇಕಾಗುವ ಸಾಮಗ್ರಿಗಳು
  • ಪುದಿನಾ – 1 ಕಪ್
  • ಕಡ್ಲೆಬೇಳೆ – 4 ಚಮಚ
  • ಉದ್ದಿನಬೇಳೆ – 2 ಚಮಚ
  • ಜೀರಿಗೆ – 1 ಚಮಚ
  • ದನಿಯಾ – 2 ಚಮಚ
  • ಬ್ಯಾಡಿಗೆ ಮೆಣಸಿನಕಾಯಿ – 7 ರಿಂದ 8
  • ಕೊತ್ತಂಬರಿ ಸೊಪ್ಪು – 1/2 ಬಟ್ಟಲು
  • ಹುಣಸೇಹಣ್ಣು – ಅರ್ಧ ನಿಂಬೆ ಗಾತ್ರ
  • ಬೆಳ್ಳುಳ್ಳಿ – 4 ಎಸಳುಗಳು
  • ತೆಂಗಿನಕಾಯಿ 1/2 ಬಟ್ಟಲು
  • ರುಚಿಗೆ ಅನುಗುಣವಾಗಿ ಉಪ್ಪು, ಅರಿಶಿನ ಮತ್ತು ಬೆಲ್ಲ.

ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಅದಕ್ಕೆ ಕಡ್ಲೇಬೇಳೆ, ಉದ್ದಿನ ಬೇಳೆ, ಜೀರಿಗೆ, ದನಿಯಾ, ಬ್ಯಾಡಗೀ ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿದ ನಂತರ ಬಾಣಲಿಗೆ, ಪುದೀನಾ, ಸ್ವಲ್ಪ ಕೊತ್ತಂಬರೀ ಸೊಪ್ಪು ಸೇರಿಸಿ ಚೆನ್ನಾಗಿ ಹಸೀ ಹೋಗುವವರೆಗೂ ಬಾಡಿಸಿಕೊಂಡು ತಣ್ಣಗಾದ ನಂತರ ಅದಕ್ಕೆ ಉಪ್ಪು, ಹುಣಸೇ ಹಣ್ಣು, ಬೆಲ್ಲ ಮತ್ತು ತೆಂಗಿನಕಾಯಿ ತುರಿಯನ್ನು ಸೇರಿಸಿ ನುಣ್ಣಗೆ ರುಬ್ಬಬೇಕು. ಒಂದು ಸಣ್ಣ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಕಾದ ನಂತರ, ಸಾಸಿವೆ ಮತ್ತು ಇಂಗು ಸೇರಿಸಿ ಸಿಡಿಸಿಕೊಂಡು ಅದನ್ನು ರುಬ್ಬಿದ ಮಿಶ್ರಣಕ್ಕೆ ಸೇರಿಸಿದರೆ, ರುಚಿ ರುಚಿಯಾದ ಪುದೀನಾ ಚೆಟ್ನಿ ಸಿದ್ಧ.

ಪುದೀನಾ ಜ್ಯೂಸು

ಪುದೀನಾ ಸೊಪ್ಪು 1 ಚಿಕ್ಕ ಕಪ್ಪು,
ಕೊತ್ತಂಬರಿ ಸೊಪ್ಪು 1 ಚಿಕ್ಕ ಕಪ್ಪು,
ತುಳಸಿ ಎಲೆ 1/4 ಕಪ್ಪು,
ಉಪ್ಪು ನೀರಿನಲ್ಲಿ ಶುಭ್ರಗೊಳಿಸಿ, ಒರಳಲ್ಲಿ ಹಾಕಿ ಚೆನ್ನಾಗಿ ಕುಟ್ಟಿ ರಸ ತೆಗೆದು, ಆ ರಸಕ್ಕೆ 2 ಚಮಚ ಜೇನುತುಪ್ಪ, 2 ಚಮಚ ನಿಂಬೆರಸ ಸೇರಿಸಿ ಬೆಳಗ್ಗೆ ಮತ್ತು ಸಂಜೆ 30 ಮಿಲಿ ಲೀಟರ್​ನಂತೆ ತೆಗೆದುಕೊಳ್ಳುವುದರಿಂದ ಅನೇಕ ವ್ಯಾಧಿಗಳು ದೂರವಾಗುತ್ತವೆ. ಇದೆ ರೀತಿ ಕಷಾಯ ಸಹ ತಯಾರಿಸಿ, ತೆಗೆದುಕೊಳ್ಳಬಹುದು. ಮಧುಮೇಹಿಗಳು ಜೇನುತುಪ್ಪದ ಬದಲು ಚಿಟಿಕೆ ಉಪ್ಪು, 1/2 ಚಮಚ ನಿಂಬೆಹಣ್ಣಿನ ರಸ ಸೇರಿಸಿ ಸೇವಿಸಬಹುದು. ಈ ಜ್ಯೂಸ್ ಮಧುಮೇಹ, ಅಧಿಕ ರಕ್ತದೊತ್ತಡ, ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.

ಪುದಿನಾ ಚಹ

ಪುದೀನಾ ಎಲೆಗಳ ಜೊತೆಯಲ್ಲಿ ತುಳಸಿ ಎಲೆಗಳು, ಶುಂಠಿಯನ್ನು ಜಜ್ಜಿ ನೀರಿನೊಂದಿಗೆ ಸೇರಿಸಿ ಬಣ್ಣ ಬದಲಾಗುವವರೆಗೆ ಕುದಿಸಿ ರುಚಿಗೆ ಸ್ವಲ್ಪ ಜೇನು ತುಪ್ಪ ಹಾಕಿಕೊಂಡು ಕುಡಿದರೆ ಸಾಕಷ್ಟು ಆರಾಮದಾಯಕ ಅನುಭವ ಸಿಗುತ್ತದೆ. ಅದರಲ್ಲೂ ಶೀತದ ಸಮಸ್ಯೆ ಬಹಳ ಬೇಗನೆ ಬಗೆಹರಿಯುತ್ತದೆ.ಇದನ್ನು ಓದಿ –ರಾಷ್ಟ್ರೀಯ ಮತದಾರರ ದಿನ (ಜನವರಿ 25)

ಅದಲ್ಲದೆ, ಪುದಿನ ಎಲೆಗಳಲ್ಲಿ ಸಾಲಿಸಿಲಿಕ್‌ ಆಸಿಡ್‌ ಹೇರಳವಾಗಿರುವುದರಿಂದ , ವಿಟಮಿನ್‌ ಎ ಕೂಡಾ ಹೆಚ್ಚಿದೆ. ಇವೆರಡೂ ಮುಖದ ಮೊಡವೆ ಹಾಗೂ ಕಪ್ಪು ಕಲೆಗಳನ್ನು ತಡೆಗಟ್ಟಲು ನೆರವಾಗುತ್ತದೆ. ಇದರಲ್ಲಿರುವ ಮೆಂಥಾಲ್‌ ಹಾಗೂ ನೈರ್ಗಿಕ ಆಂಟಿ ಆಕ್ಸಿಡೆಂಟ್‌ಗಳು ಮುಖಕ್ಕೆ ನೈಸರ್ಗಿಕ ಕ್ಲೆನ್ಸರ್‌, ಟೋನರ್‌, ಮಾಯ್‌ಶ್ಚರೈಸರ್‌ ಆಗಿ ಕೆಲಸ ಮಾಡುವ ಕಾರಣ, ಮುಖದ ಚರ್ಮ ಆರೋಗ್ಯದಿಂದ ಕಂಗೊಳಿಸುತ್ತದೆ. ಸ್ತ್ರೀಯರ ಸೌಂದರ್ಯ ಹೆಚ್ಚಿಸುವ ಗುಣ ಹೊಂದಿರುವ ಪುದೀನಾ ಸೊಪ್ಪು ಅತ್ಯುತ್ತಮ ಸೌಂದರ್ಯವರ್ಧಕ. ಮತ್ತೇಕೆ ತಡ ಪುದೀನಾ ಸೊಪ್ಪಿಗೆ ಅಡುಗೆ ಮನೆಯಲ್ಲಿ ಕಾಯಂ ಸ್ಥಾನ ನೀಡೋಣವೇ….

soumya sanath b

ಸೌಮ್ಯ ಸನತ್ ✍️.

Copyright © All rights reserved Newsnap | Newsever by AF themes.
error: Content is protected !!