January 11, 2025

Newsnap Kannada

The World at your finger tips!

deepa1

ಮನಸ್ಸುಗಳ ಅಂತರಂಗದ ಚಳುವಳಿ

Spread the love

ದಟ್ಟ ಕಾನನದ ನಡುವೆ,
ನಿಶ್ಯಬ್ದ ನೀರವತೆಯ ಒಳಗೆ,
ನಿರ್ಜನ ಪ್ರದೇಶದ ಹಾದಿಯಲ್ಲಿ,
ಏರಿಳಿವ ತಿರುವುಗಳ ದಾರಿಯಲ್ಲಿ,
ಸಣ್ಣ ಭೀತಿಯ ಸುಳಿಯಲ್ಲಿ,
ಪಕ್ಷಿಗಳ ಕಲರವ,
ಕೀಟಗಳ ಗುಂಯ್ಗೂಡುವಿಕೆ,
ಪ್ರಾಣಿಗಳ ಕೂಗಾಟ,
ಹಾವುಗಳ ಸರಿದಾಟ,
ಗಿಡಮರಗಳ ನಲಿದಾಟ,
ಮೋಡಗಳ ನೆರಳು ಬೆಳಕಿನಾಟ,
ಮಿಂಚು ಗುಡುಗುಗಳ ಆರ್ಭಟ,
ಮಳೆ ಹನಿಗಳ ಚೆಲ್ಲಾಟ,
ವಾಹನಗಳ ಸುಳಿದಾಟ,
ನರ ಮನುಷ್ಯರ ಅಲೆದಾಟ,
ಹೊಳೆ ಕಾಲುವೆಗಳ ಜುಳು ಜುಳು ನಾದ,
ಸೇತುವೆಗಳ ಕುಲುಕಾಟ,
ಮಾವು ತೆಂಗು ಸೀಬೆ ಅಡಿಕೆ,
ಬೀಟೆ ಹೊನ್ನೆ ತೇಗು ನೀಲ…….

ಪ್ರವಾಸಿಗನೋರ್ವನ ಭಾವನೆಗಳ ಚೀಲ ತುಂಬಿ ಹೊರಚೆಲ್ಲುತ್ತಿದೆ,

ಹೇಗೆ ಹಿಡಿದಿಡಲಿ ಅಕ್ಷರಗಳಲ್ಲಿ,
ನಾನು ವಾಸ್ತವತೆಯ ಗುಲಾಮ,

ಕೊರೋನಾ ಹಾವಳಿ ನನ್ನ ಜನರನ್ನು ಕಾಡುತ್ತಿರುವಾಗ,
ಸಾವು ನೋವುಗಳ ಸಂಕಟದ ಸುದ್ದಿಗಳು ಅಪ್ಪಳಿಸುತ್ತಿರುವಾಗ,
ನಾನು ಕೂಡಾ ಅಸಹಾಯಕ…

ಆದರೂ ಮನಸ್ಸುಗಳ ಅಂತರಂಗದ ಚಳವಳಿ ನಿಮಗಾಗಿ………

ಪ್ರೇಯಸಿಯೊಬ್ಬಳು ತನ್ನ ಕೊರೋನಾ ಪೀಡಿತ ಪ್ರಿಯಕರನಿಗೆ ಮೊಬೈಲ್ ನಲ್ಲಿ ಹೀಗೆ ಪಿಸುಗುಟ್ಟಿದಳು….
” ಚಿನ್ನ ನಿನ್ನೊಳಗಿರುವ ವೈರಸ್ ಗೆ ನನ್ನ ಪ್ರೀತಿಯನ್ನು ಗೆಲ್ಲುವ ಶಕ್ತಿ ಖಂಡಿತ ಇಲ್ಲ. ನಿನ್ನೊಳಗೆ ಇರುವುದು ನನ್ನ ಪ್ರೀತಿಯ ವೈರಸ್.
ಅದು ಕೊರೋನಾ ವೈರಸ್ ಅನ್ನು ಒದ್ದೋಡಿಸುತ್ತದೆ ಧೈರ್ಯವಾಗಿರು.
ಇಲ್ಲಿಂದಲೇ ನನ್ನ ಬಿಸಿಯಪ್ಪುಗೆಯ ಸಿಹಿ ಮುತ್ತುಗಳು “

ಕೊರೋನಾ ಪೀಡಿತ ತಾಯಿಗೆ ಒಬ್ಬನೇ ಮಗನ ನೇರ ನುಡಿಗಳು….
” ಅಮ್ಮ ನನಗೆ ನೀನು ಜೀವ ಕೊಟ್ಟಿರುವಾಗ ನಾನು ನಿನ್ನ ಜೀವವನ್ನು ಉಳಿಸದಿರುವೆನೇ,
ವೈರಸ್ ಇರಲಿ, ಕ್ಯಾನ್ಸರ್ ಇರಲಿ ನನ್ನಮ್ಮ ನೂರು ವರ್ಷ ನನ್ನ ಜೊತೆ ಇರಲೇಬೇಕು. ಇರುತ್ತಾಳೆ. ಸಾಧ್ಯವಾದರೆ ಮತ್ತೊಮ್ಮೆ ನಿನ್ನ ದೇಹ ಪ್ರವೇಶಿಸಿ ವೈರಸ್ ಕೊಲ್ಲುತ್ತೇನೆ. ಅಮ್ಮ ಧೈರ್ಯವಾಗಿರು “

ಸ್ನೇಹಿತನೊಬ್ಬ ತನ್ನ ಗೆಳೆಯ ಕೊರೋನಾದಿಂದ ಕ್ವಾರಂಟೈನ್ ಆಗಿರುವಾಗ ಕಳುಹಿಸಿದ Watsapp ಸಂದೇಶ ಹೀಗಿದೆ….
” ಗೆಳೆಯ ನಿನಗಾಗಿ ನಾನು ಸಾವಿನ ಮನೆಯ ಬಾಗಿಲನ್ನು ಮುಚ್ಚಿಸಿರುವೆ. ಆದ್ದರಿಂದ ನೀನು ನನ್ನ ಜೊತೆಯೇ ಇರುವೆ. ಧೈರ್ಯವಾಗಿರು. ಸಾವು ನಿನ್ನನ್ನು ಸಂಧಿಸಲು ಸಾಧ್ಯವಿಲ್ಲ “

ಮಗುವೊಂದು ಆಸ್ಪತ್ರೆಗೆ ದಾಖಲಾಗಿರುವ ತನ್ನ ತಂದೆ ತಾಯಿಯ ಆರೋಗ್ಯ ಕುರಿತು ಹೀಗೆ ಪತ್ರ ಬರೆಯಿತು…..
” ಅಮ್ಮಾ ಅಪ್ಪಾ ನಾನು ದೇವರಿಗೆ ಒಂದು ಪ್ರಾರ್ಥನಾ ಪತ್ರ ಬರೆದಿದ್ದೇನೆ. ಅದರಲ್ಲಿ ನಿಮ್ಮಿಬ್ಬರನ್ನೂ ಬೇಗ ಆರೋಗ್ಯವಾಗಿ ಮನೆಗೆ ಕಳುಹಿಸುವಂತೆ ಕೇಳಿದ್ದೇನೆ. ನೀವು ಧೈರ್ಯವಾಗಿರಿ. ನಿಮಗೆ ಏನೂ ಆಗುವುದಿಲ್ಲ. ಬೇಗ ಮನೆ ತಲುಪಿ “

ಹಾಗೆಯೇ ಕೋವಿಡ್ ಪೀಡಿತ ಗೆಳೆಯರಿಗೆ ನನ್ನದೊಂದು ಪ್ರೀತಿಯ ಸಲಹೆ…..
” ಗೆಳೆಯರೆ, ಆಕ್ಸಿಜನ್ – ಬೆಡ್ – ವೆಂಟಿಲೇಟರ್ – ಟ್ಯಾಬ್ಲೆಟ್ – ಇಂಜೆಕ್ಷನ್ ಕೊರತೆ ಇರುವುದು ಎಲ್ಲರಿಗೂ ತಿಳಿದಿದೆ. ಬಹುತೇಕ ಅದಕ್ಕಾಗಿ ಹಾಹಾಕಾರವೇ ಉಂಟಾಗಿದೆ. ಇಂತಹ ಸಮಯದಲ್ಲಿ ಸಿನಿಕರಾಗದೆ, ಸಾವಿಗೆ ಅತಿಯಾಗಿ ಹೆದರದೆ, ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ದಯವಿಟ್ಟು ಒಂದಷ್ಟು ಸಂಯಮ ವಹಿಸಿ. ಸಿನಿಕರಾಗಬೇಡಿ. ತಮ್ಮೆಲ್ಲಾ ಮಾನಸಿಕ ಬಲವನ್ನು ಒಗ್ಗೂಡಿಸಿ ಹೋರಾಡಿ. ದೇಹ ಮತ್ತು ಮನಸ್ಸನ್ನು ಆದಷ್ಟು ಚಟುವಟಿಕೆಯಿಂದ ಇಟ್ಟುಕೊಳ್ಳಿ. ಕೊನೆಯವರೆಗೂ ಶರಣಾಗತರಾಗಬೇಡಿ. ಎಲ್ಲರಿಗೂ ಒಳ್ಳೆಯದಾಗಲಿ “

ಇನ್ನು ಮುಂದಾದರು ವ್ಯವಸ್ಥೆಯನ್ನು ಸರಿಪಡಿಸೋಣ. ದಕ್ಷತೆ ಪ್ರಾಮಾಣಿಕತೆ ಶುದ್ಧತೆಯನ್ನು ಉಳಿಸಿಕೊಳ್ಳೋಣ.

ಮನಗಳಲ್ಲಿ,
ಮನೆಗಳಲ್ಲಿ,
ಮತಗಳಲ್ಲಿ,
ಬದಲಾವಣೆಗಾಗಿ ಶ್ರಮಿಸುವ ಪಣತೊಡೋಣ……

ವಿವೇಕಾನಂದ. ಹೆಚ್.ಕೆ.

Copyright © All rights reserved Newsnap | Newsever by AF themes.
error: Content is protected !!