ರಾಜಧಾನಿಯಲ್ಲಿ ಕನ್ನಡದ ವೈಭವ

Team Newsnap
9 Min Read

ಹೋಟೇಲಿನ ಕೇಸರಿಭಾತಿನಲ್ಲಿ ದ್ರಾಕ್ಷಿ, ಗೋಡಂಬಿಯನ್ನು ಹುಡುಕುವಂತೆ ಬೆಂಗಳೂರಿನಲ್ಲಿ ಕನ್ನಡವಿದೆಯೇ? ಎಂದು ಹುಡುಕಬೇಕು. ಮೊನ್ನೆ ನಮ್ಮ ಸ್ನೇಹಿತರೊಬ್ಬರು ಬಸ್ ನಿಲ್ಡಾಣದಲ್ಲಿ ಆಟೋಗಾಗಿ ಪರದಾಡುತ್ತಿದ್ದರಂತೆ. ಇವರ ತೊಗಲು ಸ್ವಲ್ಪ ಬಿಳಿ, ಎತ್ತರದ ಮೈಕಟ್ಟು. ಹತ್ತು ಆಟೋಗಳಿಗೆ ಕೈಯೊಡ್ಡಿದ ನಂತರ ಹನ್ನೊಂದನೆಯವ ನಿಲ್ಲಿಸಿ ‘ಕಹಾ ಜಾನಾ? ಮೀಟರ್ ಪೇ ತೀಸ್ ರುಪಯ’ ಅಂದನಂತೆ. ತಬ್ಬಿಬ್ಬಾದ ಇವರು ‘ಅಪ್ಪಾ ಆಟೋ ರಾಜ, ಮೀಟರ್ ಮೇಲೆ ಮೂವತ್ತಿಟ್ಟರೆ ಸಾಕೆನಪ್ಪ. ಹೆಚ್ಚಿಗೆ ಕೊಡಬೇಕಾಗಿಲ್ಲ ತಾನೆ’ ಅಂದರಂತೆ. ಮಿಕಿ ಮಿಕಿ ನೋಡಿದ ಆಟೋದವನು ‘ಎಲ್ಲಿಂದ ಬರ್ತಾರೋ’ ಅನ್ನುತ್ತಾ ಆಟೋ ಓಡಿಸಿಕೊಂಡು ಹೊರಟೇ ಬಿಟ್ಟನಂತೆ.

ಇವನೊಡನೆ ಕನ್ನಡ ಮಾತನಾಡಿದ್ದೇ ತಪ್ಪಾ ಎಂದು ಪೇಚಾಡಿಕೊಂಡ ಅವರ ಕೈ ನೋಯ ಹತ್ತಿತೇ ವಿನಾ ಆಟೋ ಸಿಗಲಿಲ್ಲ. ಅಡಿಯ ಹಿಂದಿಡೆ ನರಕ ಎಂದು ಅವರು ಆಟೋ ಸಿಗುವವರೆಗೂ ಕಾಯಲೇ ಬೇಕೆಂದು ಒಂದು ಗಂಟೆಗಳ ಕಾಲ ಆಟೋ ಆಟೋ ಎಂದವರಿಗೆ ಕೊನೆಗೂ ಒಬ್ಬ ನಿಲ್ಲಿಸಿದನಂತೆ. ‘ಶೀಘ್ರ ವಾಂಗು ಸಾರ್. ಒಕ್ಕಾರಂಗು. ಅಂಗೆ ಮಾಮ ಇರ್ಕಾರು. ಫೈನ್ ಪೋಡ್ರಾ’ ಎಲಾ ಇವನ ಎನ್ನುತ್ತಾ ಇವರೆಲ್ಲಿ ಹೋಗಬೇಕೆಂಬುದನ್ನೂ ಕೇಳದೆ ದೌಡಾಯಿಸಿದನಂತೆ. ಓಕಳಿಪುರವೆಲ್ಲಾ ಸುತ್ತಿಸಿ ಮಲ್ಲೇಶ್ವರಂನಲ್ಲಿ ಇವರನ್ನು ಇಳಿಸಿ ತಮಿಳಿನಲ್ಲೇ ಮೀಟರ್ ಮೇಲೆ ಇಪ್ಪತ್ತು ಕೇಳಿದನಂತೆ. ಅಲ್ಲಪ್ಪಾ’ ಎಂದ ಇವರನ್ನು ಮಧ್ಯದಲ್ಲೇ ತಡೆಯುತ್ತಾ’
‘ಎನ್ನ ಸಾರ್ ತಮಿಳ್ ವರಾದ’ ಎಂದು ಆಶ್ಚರ್ಯವಾಗಿ ನೋಡುತ್ತಿದ್ದಾನಂತೆ. ಅರೆ ಇದೇನಿದು ನಾನು ಬೆಂಗಳೂರಿಗೇ ಬಂದೆನಾ ಅಥವಾ ಇನ್ನೆಲ್ಲಿಗಾದರೂ ಹೊರಟು ಹೋದನಾ ಎಂದು ಅನುಮಾನವಾಯಿತಂತೆ ಅವರಿಗೆ.


ನಮ್ಮ ಮನೆಯ ತಿರುವಿನಲ್ಲಿ ಕಾಫಿ, ಚಹ, ಬಾದಾಮಿ ಹಾಲು, ಬನ್ನು ಮಾರುವ ಒಂದು ಚಿಕ್ಕಗೂಡಂಗಡಿ ಇತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕ ಹುಡುಗ ‘ಎರಡು ಆಟಾಲ್ ಹಾಕಿ’ ಎನ್ನುತ್ತಿದ್ದ. ನಮಗೆ ಅರ್ಥವೇ ಆಗುತ್ತಿರಲಿಲ್ಲ. ಅವನೇನು ಹೇಳುತ್ತಾನೆಂದು ಕೇಳಲು ನಾವು ಎರಡು ಬಾದಾಮಿ ಹಾಲನ್ನು ತರುವಂತೆ ಹೇಳಿದೆವು. ಅವನು ಮತ್ತೆ ‘ಎರಡು ಆಟಾಲ್ ಹಾಕಿ’ ಎಂದ. ಅವನನ್ನು ಹತ್ತಿರ ಕರೆದು ಕೇಳಿದ ಮೇಲೆ ತಿಳಿಯಿತು ’ಎರಡು ಹಾಟ್ ಹಾಲು ’ ಎಂದು.


ಹೆಚ್ಚು ಕಮ್ಮಿ ಬೆಂಗಳೂರು ಸ್ಥಳಿಕರಿಗೆ ಇದೇ ಅನುಭವವಾಗುತ್ತಿರುವುದು ಹೊಸತೇನಲ್ಲ. ಹರಿದು ಹಂಚಿ ಹೋಗಿದ್ದ ಕರ್ನಾಟಕ ಭೂಪಟವನ್ನು ಒಂದೆಡೆ ಸೇರಿಸಿದಂತೆ, ಓಕಳೀಪುರ ತಮಿಳರಿಗೆ, ಲಿಂಗರಾಜಪುರ ತೆಲುಗರಿಗೆ, ಶಿವಾಜಿನಗರ ಉರ್ದು ಮಾತನಾಡುವವರಿಗೆ ಇನ್ನು ಕುಮಾರ ಪಾರ್ಕು ಸೇಠುಗಳಿಗೆ ಅದು ಸ್ವಲ್ಪ ದೂರ ಕ್ರಮಿಸಿ ಅವಿನ್ಯೂ ರಸ್ತೆಯವರೆಗೂ ಆವರಿಸಿ ಅಲ್ಲೆಲ್ಲಾ ಹಿಂದಿ ಭಾಷಿಕರಿಗೆ ಇನ್ನು ಜಾಲಹಳ್ಳಿಯನ್ನು ಜಾಲಾಡಿದರೂ ಒಬ್ಬ ನರಪಿಳ್ಳೆ ಕನ್ನಡದವ ಸಿಗಲಿಕ್ಕಿಲ್ಲ.

ದೇಶಭಕ್ತಿಯ ಬಿಸಿ ಬಿಸಿ ನೆತ್ತರು ಹಾಡು ಹಾಡಿಕೊಂಡು ತಿರುಗಬೇಕಷ್ಟೇ. ಮಿಲಿಟರಿ ಮಾವಂದಿರು ‘ಕ್ಯಾ ಕ್ಯಾ’ ಎಂದು ಕ್ಯಾಕರಿಸುವರೆ ವಿನಾ ಕಸ್ತೂರಿಯ ಸೊಗಡು ಇಲ್ಲಿಲ್ಲ. ಇನ್ನು ಇಂದಿರಾ ನಗರವೆಂಬ ಮಾಯಾ ನಗರಿಯಲ್ಲಿ ಟಸ್ ಪುಸ್ ಎನ್ನುವವರೇ . ವಿಮಾನ ನಿಲ್ದಾಣ ಇಲ್ಲಿತ್ತು ಈಗಲೂ ಇದೆ ಎಂಬ ಕಾರಣಕ್ಕೋ ಏನೋ ಇಲ್ಲಿರುವವರು ಓದುವುದಿರಲಿ ಊಟ ಮಾಡುವುದು ಹಾಡುವುದು ಕುಣಿಯುವುದು ನಗುವುದು, ಅಳುವುದು ಎಲ್ಲವೂ ಆಂಗ್ಲ ಭಾಷೆಯಲ್ಲೇ. ಹೆಸರಿಗೆ ಕೆಂಪೇಗೌಡ ವಿಮಾನ ನಿಲ್ದಾಣ. ಇಲ್ಲಂತೂ ಹಿಂದಿ, ಆಂಗ್ಲ ಭಾಷೆಯದ್ದೇ ಕಾರು ಬಾರು. ಬಾಯಿ ಪಾಠ ಮಾಡಿಕೊಂಡ ನಾಲ್ಕಾರು ವಾಕ್ಯಗಳನ್ನು ಇಲ್ಲಿಯ ಮಂದಿ ಬಹಳ ಸೊಗಸಾಗಿ ಒದರಿ ಬಿಡುತ್ತಾರೆ. ನಿಮಗೆ ಇನ್ನೂ ಮಾಹಿತಿ ಬೇಕಾದಲ್ಲಿ ಇವರ ಮೆದುಳಿಗೆ ಕೈ ಹಾಕಿದರೂ ದೊರಕುವುದಿಲ್ಲ.


ಇಲ್ಲಿ ಹತ್ತಿರದ ನಾಗಾವರದಲ್ಲಿ ಮೊನೆ ಮೊನ್ನೆಯವರಿಗೂ ವಿರಾಜಿಸುತ್ತಿದ್ದ ‘ಮಾರಿಕಾಂಬ ನಗರ’ ಎಂಬ ಬೋರ್ಡು ಸದ್ದಿಲ್ಲದೇ ರಾತ್ರೋ ರಾತ್ರಿ ‘ಮರಿಯಾ ನಗರವಾಗಿ’ ಪರಿವರ್ತಿತವಾಗಿದೆ. ಹೆಸರು ಹೋಗಲಿ ಬಸಿರಿನಲ್ಲಿ ಕನ್ನಡದ ಅ ಆ ಇ ಈ ಕಲಿತ ಮಕ್ಕಳೆಲ್ಲಾ ಪಡ್ಡೆಯಾಗುವುದರಲ್ಲಿ ಎ ಬಿ ಸಿ ಡಿ ಎನ್ನಲು ಶುರು ಮಾಡಿದ್ದಾರೆ. ಇನ್ನು ಬೆಂಗಳೂರಿನ ಉದರ ಭಾಗಕ್ಕೆ ಬಂದರಂತು ರಿಚ್ ಮ೦ಡ್ ಸರ್ಕಲ್, ಕಿಂಗ್ಸ್ ಟನ್ ಸ್ಟ್ರೀಟ್, ಬೆನ್ ಸನ್ ಟೌನ್ , ವೈಟ್ ಫೀಲ್ಡ್ ವಗೈ ರೆ , ವಗೈರೆ. ನಾನು ವಾಸವಿರುವ ವಿದ್ಯಾರಣ್ಯಪುರದ ಬಗ್ಗೆ ಎರಡು ಮಾತು ಹೇಳಲೇ ಬೇಕು.

ಹೊಟ್ಟೆ ಭಾಗದಲ್ಲಿ ಮಲಯಾಳಂ ಮಾತನಾಡುವವರು ಶಿರೋ ಭಾಗದಲ್ಲಿ ತೆಲುಗು ಮತ್ತೊಂದು ಭಾಗದಲ್ಲಿ ತಮಿಳು ಅಳಿದುಳಿದ ಅಂಗೈ ಜಾಗದಲ್ಲಿ ಕನ್ನಡಿಗರು. ಕನ್ನಡ ಎಂಬುದನ್ನು ಬೆಂಗಳೂರಿನಲ್ಲಿ ಹುಡುಕಿಕೊಂಡು ಹೊರಟರೆ ನಿಮಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಸ್ವಲ್ಪ ಬಸವನಗುಡಿಯವರೆಗೂ ಪಾದ ಬೆಳೆಸಿದರೆ ಕನ್ನಡಕ್ಕೆ ಕುಟುಕು ಜೀವವಿರುವುದು ಕಾಣುತ್ತದೆ. ಹೊರ ರಾಜ್ಯಗಳಿಂದ ಉದ್ಯೋಗಾರ್ಥಿಗಳಾಗಿ ದಯಾಮಾಡಿಸುವವರು ಹುಡುಕುವುದೇ ಮಲ್ಲೇಶ್ವರಂ, ಬಸವನಗುಡಿ ಎಂದು. ಕಾರಣ ಇಷ್ಟೇ. ಭಾರತದ ನಾನಾ ಮೂಲೆಗಳ ಆರ್ ಟಿ ಓಗಳಲ್ಲಿ ನಂಬರು ಪಡೆದುಕೊಂಡ ಗಾಡಿಗಳು ಬೆಂಗಳೂರಿನ ಇಕ್ಕೆಡೆಗಳಲ್ಲೂ ತೂರಿಕೊಂಡು ತಂತಮ್ಮ ಗಂತವ್ಯವನ್ನು ತಲುಪುವ ಹೊತ್ತಿಗೆ ಸೂರ್ಯ ನೆತ್ತಿಗೇರಿರುತ್ತಾನೆ. ಇದ್ದುದರಲ್ಲಿ ಬೆಂಗಳೂರಿನ ಹೃದಯ ಭಾಗವನ್ನು ತಲುಪಲು ಇವೆರಡೂ ಭಾಗಗಳೂ ವಾಹನ ಸವಾರರ ಜೊತೆಗಿದೆ. ಹಾಗಾಗಿಯೇ ಇರಬೇಕು. ಪರಿಶುದ್ಧ ಕನ್ನಡದ ಮಲ್ಲೇಶ್ವರನಿಗೆ, ಶ್ರೀರಾಮನಿಗೆ, ವಿದ್ಯಾರಣ್ಯರಿಗೆ ಸ್ವಲ್ಪ ರಮ್ಮು ಕುಡಿಸಿ ಮಲ್ಲೇಶ್ವರಂ, ಶ್ರೀರಾಂಪುರಂ, ವಿದ್ಯಾರಣ್ಯಪುರಂ, ಕೆ ಆರ್ ಪುರಂ, ಮಾಡಿರುವುದು.

ಇದೊಂದೇ ಏನು ಎಷ್ಟೋ ಬೆಂಗಳೂರಿನ ಭಾಗಗಳು ರಮ್ಮು ಕುಡಿದಿರುವುದು, ಕನ್ನಡ ಎಂದರೆ ತೂರಾಡುವುದು. ಹೆಸರಿನಲ್ಲೇನಿದೆ ಎಂದು ಕೇಳಬಹುದು. ಸ್ವಾಮಿ ಮಾರತಹಳ್ಳಿ, ಜಾಲಹಳ್ಳಿ, ಗಂಗೇನಹಳ್ಳಿ, ಬೊಮ್ಮನಹಳ್ಳಿಯಂತ ಕನ್ನಡದ ಸುಂದರ ಪ್ರದೇಶಗಳು ‘ಳ’ ಬಾರದವರ ಬಾಯಲ್ಲಿ ಮಾರತ್ ಹಲ್ಲಿ, ಜಾಲಹಲ್ಲಿ, ಗಂಗೇನಹಲ್ಲಿ ಆಗಿರುವುದು. ಇದನ್ನು ಕೇಳಿ ಕೇಳಿ ಸ್ಥಳಿಕರು ಕೂಡ ತಮ್ಮ ಭಾಗದ ಹೆಸರನ್ನು ಇದೇ ಮಾದರಿಯಲ್ಲಿ ಹೇಳುವುದು ಆಶ್ಚರ್ಯವೇನಿಲ್ಲ.


ನಮ್ಮ ಸ್ಥಳೀಯ ವಾಹಿನಿಗಳೇನು ಕಮ್ಮಿ ಎಲ್ಲ. ಹೆಸರಿಗೆ ಕನ್ನಡದ ಚಾನಲ್ ಗಳು. ಅಲ್ಲಿ ಸರಾಗವಾಗಿ ಹರಿಯುವುದು ಮಾತ್ರ ಹಿಂದಾಂಗ್ಲ ಭಾಷೆಗಳು. ಸ್ಟೂಡಿಯೋಗಳಲ್ಲಿ ಕುಳಿತು ಬೇಜಾರಾಯಿತೆಂದರೆ ಬೀದಿಗಿಳಿಯುವ ಕಾರ್ಯಕ್ರಮ ಸಂಯೋಜಕರು ರಸ್ತೆಯಲ್ಲಿ ಓಡಾಡುವ ದಾರಿಹೋಕರನ್ನು ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಾ ಅವರಿಂದ ಬರುವ ಜವಾಬುಗಳಿಗೆ ನಗೆ ಬಾಂಬ್ ಸಿಡಿಸುತ್ತಾ ಒಂದು ಹೊತ್ತಿನ ಕಾರ್ಯಕ್ರಮ ಮಾಡಿ ಮುಗಿಸಿ ಬಿಡುತ್ತಾರೆ.

ಇವರು ಕೇಳುವ ಪ್ರಶ್ನೆಗಳಲ್ಲಿ ಕ್ರಿಯಾ ಪದಗಳನ್ನು ಕನ್ನಡದಲ್ಲಿ ಬಳಸುವುದನ್ನು ಬಿಟ್ಟರೆ ಮಿಕ್ಕೆಲ್ಲವೂ ಅನ್ಯ ಭಾಷೆಗಳು. ‘ನೀವು ದಿವಾಲಿಯನ್ನು ಹೇಗೆ ಸೆಲಿಬ್ರೇಟ್ ಮಾಡ್ತೀರಿ? ದಿಯಾ ಹಚ್ಚ್ತೀರಾ? ಸ್ಟೀಟ್ಸ್ ಹಂಚ್ತೀರಾ? ನೇಬರ್ಸ್ ಜೊತೆ ಸೆಲಿಬ್ರೇಟ್ ಮಾಡ್ತೀರ? ಅವರ ಉತ್ತರವೂ ಅಷ್ಟೇ ‘ಯೂ ಸಿ, ನಾರ್ಮಲಿ ದೀವಾಲಿ ಇಸ್ ದಿ ಮೈನ್ ಫೆಸ್ಟಿವಲ್ ಫಾರ್ ಅಸ್ ಹ್ಹಿ.. ಹ್ಹಿ.. ಹ್ಹಿ.. ಹ್ಹಿ.. ಸೋ ಎನ್ ಜಾಯಿಂಗ್’ ಹತ್ತು ನಿಮಿಷ ಮಾತನಾಡಿದರೂ ತಲೆ ಬುಡ ಅರ್ಥವಾಗುವುದಿಲ್ಲ.

ಇನ್ನು ಸ್ಟೂಡಿಯೋಗಳಲ್ಲಿ ನಡೆಸಿಕೊಡುವ ಕಾರ್ಯಕ್ರಮಗಳಂತೂ ಪಾಯಸದಲ್ಲಿ ಕಲ್ಲು ಸಿಕ್ಕಿದ ಹಾಗೆ. ‘ಸ್ವಲ್ಪ ಮಿಕ್ಸ್ ಮಾಡಿ, ಸ್ಟೀಮ್ ಮಾಡಿ, ಕುಕ್ ಮಾಡಿ, ಟೂ ಟೀ ಸ್ಪೂನ್ ಪುಟ್ ಮಾಡಿ, ಬೇಕ್ ಮಾಡಿ‘ ಇದು ಅಡುಗೆ ಕಾರ್ಯಕ್ರಮದ ವೈಖರಿಯಾದರೆ, ಯಾರಾದರೂ ಸಾಧಕರನ್ನು ಮಾತನಾಡಿಸಿದರೆ, ಅವರೂ ಹೇಳುವುದಿಷ್ಟೇ ‘ಆಫ್ಟರ್ ಲಿವಿಂಗ್ ಸೋ ಮೆನಿ ಇಯರ್ಸ್ ಇನ್ ಬ್ಯಾಂಗಳೂರ್ ಐ ಆಮ್ ಡಿಸ್ಗಸ್ಟೆಡ್, ದಿ ದಿ ಟ್ರಾಫಿಕ್, ಡರ್ಟಿನೆಸ್, ಪೀಪಲ್ ಓ ಮೈ ಗಾಡ್’ ಇದು ಬೆಂಗಳೂರು ಕನ್ನಡದ ಸ್ಠಿತಿ.

ನನ್ನ ಸ್ನೇಹಿತೆಯೊಬ್ಬರು ಬೆಂಗಳೂರಿನ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಅಧ್ಯಾಪಕಿ. ಲೆಕ್ಕಪರಿಶೋಧಕರೇ ತಲೆ ಮೇಲೆ ಕೈ ಹೊತ್ತ ಪ್ರಕರಣವಂತೆ. ಶಾಲೆಯಲ್ಲಿ ಕನ್ನಡ ಮಾತನಾಡಿದರೂ ಎಂಬುದಕ್ಕೆ ಮಕ್ಕಳು ಕಟ್ಟಿರುವ ದಂಡದ ಮೊತ್ತ ಒಂದು ವರ್ಷದಲ್ಲಿ ಒಂದು ಕೋಟಿ ರೂಪಾಯಿಗಳು. ‘ಐ ಗೋಸ್, ಕಾಲ್ಡ್ ಆಸ್, ಐ ಬಿಲಾಂಗ್ಸ್ ಟೂ, ಪೀಪಲ್ಸ್ ಆರ್ ಎಂದು ಕೆಟ್ಟ ಕುಲಗೆಟ್ಟ ಆಂಗ್ಲದಲ್ಲಿ ಹೊಡೆದರೂ ಅದು ಆಂಗ್ಲವೇ ಆಗಿರಬೇಕೇ ವಿನಾ ಕನ್ನಡವಾಗಿರಬಾರದು.

ಕನ್ನಡವನ್ನು ಕೇಳಲೇಬೇಕೆಂದು ಬಹಳ ಬಯಕೆಯಾದರೆ ಮೈಸೂರು ಬ್ಯಾಂಕ್ ವೃತ್ತಕ್ಕೆ ಹೋಗಬೇಕು. ಆದರೆ ಅಲ್ಲಿ ಕೋಣ, ಎಮ್ಮೆ ಅಥವಾ ಬಿಂದಿಗೆ ಕಂಡರೆ ಅದು ನವೆಂಬರ್ ತಿಂಗಳಾಗಿರಬೇಕು. ಕಾರಣ ಇಷ್ಟೇ ಅಲ್ಲಿ ವೈಆಲ್ ಸರ್ಪರಾಜ್, ಖನ್ನಡ ಖನ್ನಡ ಎಂದು ಬೊಬ್ಬೆಹೊಡೆಯುತ್ತಿರುತ್ತಾರೆ. ನಾಲ್ಕಾರು ಬೋರ್ಡುಗಳಿಗೆ ಮಸಿ ಮೆತ್ತಿ ಕನ್ನಡತನವನ್ನು ಮೆರೆಯುತ್ತಾರೆ. ತೊಟ್ಟಿರುವ ಬಿಳಿ ಬಟ್ಟೆ ಸ್ವಲ್ಪ ಮಸಿಯಾದರೂ ಸರ್ಫ್ ಎಕ್ಸೆಲ್ ಇದೆಯಲ್ಲ ಎನ್ನುತ್ತಾರೆ. ಕನ್ನಡ ನೆಲವನ್ನು ಮೆಟ್ರೋ ಮೆಟ್ರೋ ಎಂದರೂ ಕೇಳದ ಕನ್ನಡಿಗರು ತಮ್ಮ ಹಳೆಯ ಬಜಾಜ್, ಲೂನಾ, ಟಿ ವಿಎಸ್ ಏರಿ ಅದು ಕ್ರಿರ್ರೋ ಮರ್ರೋ ಎಂದರೂ ಕೇಳದೆ ಸಂಚರಿಸುತ್ತಾರೆ.

ಕನ್ನಡಿಗರು ಅತ್ಯಂತ ಸಹೃದಯರು. ಬೇರೆ ರಾಜ್ಯದವರಿಗೆ ಮೆಟ್ರೋ ಬಿಟ್ಟು ಕೊಟ್ಟಿದ್ದೇವೆ. ಅವರು ಚೆನ್ನಾಗಿರಬೇಕು. ಅವರು ಬೆಳಗಬೇಕು. ಬೆಂಗಳೂರಿಗೆ ಕಾಲಿಟ್ಟ ಒಂದೇ ವರ್ಷದಲ್ಲಿ ಬೆಂಗಳೂರಿನ ಉದರ ಭಾಗದಲ್ಲೋ, ಹೃದಯ ಭಾಗದಲ್ಲೋ ಒಂದು ಅಪಾರ್ಟ್ಮೆಂಟ್ ತೆಗೆದುಕೊಂಡು ಕನ್ನಡಿಗರಿಗಿಂತ ಚೆನ್ನಾಗಿ ಜೀವನ ನಡೆಸುತ್ತಾರೆ. ನಮ್ಮ ಬೆಂಗಳೂರಿನ ಹೋಟೇಲಿನವರೂ ಪಾಪ ಅವರಿಗೆ ತೊಂದರೆ ಆಗಬಾರದೆಂದು ಯಾವುದೇ ಹೊಟೇಲಿಗೆ ಹೋಗಿ ಸಂಜೆ ಬೆಂಗಳೂರು ಕಡೆಗಿನ ವಿಶೇಷ ಅಡುಗೆಗಳು ದೊರಕುವುದಿಲ್ಲ.

ಮಣಿ ಮಂಜರಿ(ಗೋಬಿ ಮಂಚೂರಿ) ಸೂಪ್, ಪನ್ನೀರ್. ಇನ್ನು ಬೆಂಗಳೂರಿನಲ್ಲಿ ಕನ್ನಡವೆಲ್ಲಿ ಬಂತು. ಸ್ವತ: ಸ್ಥಳವಂದಿಗರೇ ಊರಿಂದಾಚೆಗೆ. ಎನ್ನಡ, ಎಕ್ಕಡ ಗಳ ನಡುವೆ ಕನ್ನಡ ಬಳಲಿ ಬೆಂಡಾಗಿ ಸೋಲೊಪ್ಪಿದೆ. ವಿಮಾ ನಗರ ಬಂಗಾಲಿಗಳ ಬಾಯಲ್ಲಿ ಹೊಕ್ಕು, ಜೀವನ್ ಭೀಮಾ ನಗರವಾದರೆ, ಅಲಸೂರೋ ಹಲಸೂರೋ ಕಡೆಗೆ ಬಾಯಿಂದ ಬಾಯಿಗೆ ಹೊರಳಿ ಹೊಲಸೂರೂಗಿದೆ. ಬೆಂಗಳೂರಿಗರ ವೇಷ ಭೂಷಣವೂ ಬದಲಾಗಿ ಕನ್ನಡಿಗರೇ ಎದುರು ಸಿಕ್ಕಿದರೂ ಆಂಗ್ಲ ಭಾಷೆಯಲ್ಲಿ ಮಾತನಾಡುವ ಪರಿಸ್ಠಿತಿ ಎದುರಾಗಿದೆ.

ಮೊನ್ನೆ ಹೀಗೆ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ’ಇನ್ನಾದರೂ ಜೀವನದಲ್ಲಿ ಮುಂದೆ ಬನ್ನಿ’ ಹಾಡು ಹಾಗೆ ನೆನಪಾಗುತ್ತಿತ್ತು. ಸಣ್ಣದಾಗಿ ಸೋನೆ ಮಳೆ . ಆಂಗ್ಲ ಮತ್ತು ತೆಲುಗು ಭಾಷೆಯ ಫಲಕ ಹೊತ್ತ ಬಸ್ಸೊಂದು ನಿಂತಿತು. ಬಹಳ ವಿಚಿತ್ರವೆನಿಸಿತು. ಅನಂತಪುರಂ- ಚಿಂತಾಮಣಿ-ವಿದ್ಯಾರಣ್ಯಪುಂ. ಯವರಂಡಿ ವಿದ್ಯಾರಣ್ಯಪುರಂ’ ನನ್ನ ಪಕ್ಕದಲ್ಲಿ ನಿಂತಿದ್ದ ಹುಡುಗಿ ಅರಳಿಸಿದ್ದ ಕೊಡೆಯಿಂದ ಹೊರ ಹೊಮ್ಮಿದ್ದ ಸೂಜೆಗಳಿಂದ ನನ್ನ ತಲೆಗೆ ಚುಚ್ಚಿ ‘ಓ ಐ ಆಮ್ ಸಾರಿ’ ಎನ್ನುತ್ತಾ. ಡಸ್ ಇಟ್ ಗೋಸ್ ಟು ವಿದ್ಯಾರಣ್ಯಪುರಂ ಎಂದು ಕೇಳಿ ಕೊಡೆಯನ್ನು ಮಡಿಸುವ ಭರದಲ್ಲಿ ಆ ಕಂಡಕ್ಟರಿಗೂ ಚುಚ್ಚಿ ಹತ್ತಿಯೇಬಿಟ್ಟಳು. ಮತ್ತದೇ ಅಂಬೋಣ ‘ಓ ಐ ಆಮ್ ಸಾರಿ’ ಚುಚ್ಚಿದ ಕೈ ಮಾಲಿಷ್ ಮಾಡುತ್ತಾ ’ಇಟ್ಸ್ ಓಕೆ’ ಅಂದು, ನನ್ನತ್ತ ತಿರುಗಿ ’ಮೀರ್ ಎಕ್ಕಡಿಕಂಡಿ, ವಸ್ತಾರ ಲೇದಾ?’ ರೈಟ್ ರೈಟ್ ಎಂದು ಹೊರಟೇ ಬಿಟ್ಟ. ನಾನು ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಾ ನಿಂತಿದ್ದೆ. ಎಂತಹ ಪರಿಸ್ಥಿತಿ ಇದು. ನಮ್ಮ ಮನೆಯಲ್ಲಿ ನಾವೇ ಅಪರಿಚಿತರು.

ಹೆಳೆಯ ಬೆಂಗಳೂರು, ಹಬ್ಬಗಳೆಂದರೆ ಸೊಗಸಿನ ಓಡಾಟ, ಲಂಗ, ದಾವಣಿ ಎಲ್ಲವೂ ಮಾಯವಾಗಿ ಪಂಜಾಬಿ ಪೋಷಾಕುಗಳು ಲಂಗ ದಾವಣಿಯ ಜಾಗವನ್ನು ಆಕ್ರಮಿಸಿದೆ. ಸೀರೆಗಳಂತೂ ಅಪರೂಪಕ್ಕೆ ಕಾಣ ಸಿಗುವ ವಸ್ತುಗಳಾಗಿವೆ. ಒಮ್ಮೆ ಮೈ ಕೊಡವಿಕೊಂಡು ಎದ್ದಂತೆ ಹಳೆಯ ರೆಕ್ಕೆ ಪುಕ್ಕಗಳೆಲ್ಲಾ ಕಳಚೆ, ಹೊಸ ರೆಕ್ಕೆಗಳು ಬಂದಂತೆ. ವಠಾರಗಳೆಲ್ಲಾ ಗಠಾರಗಳೆಲ್ಲಿ ಕೊಚ್ಚಿ ಹೋಗಿ ದೊಡ್ಡ ದೊಡ್ಡ ಬಹು ಅಂತಸ್ತುಗಳ ಮಳಿಗೆಗಳು ತಲೆ ಎತ್ತಿವೆ. ಒಂದೇ ನಲ್ಲಿಯಲ್ಲಿ ಬೀದಿ ಜಗಳ, ಎಲ್ಲವೂ ಮಾಯವಾಗಿವೆ. ವಠಾಗಳೇ ಇಲ್ಲ ಎಂದ ಮೇಲೆ ಇನ್ನು ಜಗಳಗಳು ಎಲ್ಲಿಂದ. ಕನ್ನಡ ಎಲ್ಲಿಂದ. App, ಮ್ಯಾಪುಗಳಲ್ಲಿ ಕೆಲಸ ನಡೆಯುವಾಗ ಇನ್ನು ವಿಳಾಸ ಕೇಳುವುದಾದರೂ ಏಕೆ? ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ ’ ಜಾಗದಲ್ಲಿ ಟುಕುಡಾ ರೊಟ್ಟಿ ಖಾನೆಕೊ, ಬಾಟಲ್ ಪಾನಿ ಪೀನೇಕೋ ಆಗಿದೆ.
ಯಾರಿಗಾದರೂ ಹೇಳಿ ಭಾಷೆ ಒಂದು ಸಂಸ್ಕೃತಿ ಎಂದು. ಹಾಗೆಂದರೇನು ಎನ್ನುತ್ತಾರೆ. ಇನ್ನು ಸರಿಯಾಗಿ ಅಮ್ಮ ಅನ್ನುವುದನ್ನೂ ಕಲಿತಿರದ ಮಕ್ಕಳಿಗೆ, ರೈನ್ ರೈನ್ ಗೊ ಅವೇ, ಹಮ್ಟಿ ಡಮ್ಟಿ ಹ್ಯಾಡ್ ಅ ಗ್ರೇಟ್ ಫಾಲ್, ಲಂಡನ್ ಬ್ರಿಜ್ ಈಸ್ ಫಾಲಿಂಗ್ ಡೌನ್ ಎಂದು ಹೇಳಿಕೊಡುವುದುಂಟು. ಎಲ್ಲಾ ಬರೀ ಏಳೋದು ಬೀಳೋದು ಹಾಳಾಗೋದೆ. ನಮ್ಮ ಕನ್ನಡದ ಚೆಂದದ ಪದ್ಯ ಎಷ್ಟು ಅಮ್ಮಂದಿರಿಗೆ ಬರುತ್ತೆ. ’ಬಣ್ಣದ ತಗಡಿನ ತುತ್ತೂರಿ, ಒಂದು ಎರಡು ಬಾಳೆಲೆ ಹರಡು, ನಮ್ಮ ಮನೆಯಲ್ಲೊಂದು ಸಣ್ಣ ಪಾಪ ಇರುವುದು’

ಅಲ್ಪ ಸ್ವಲ್ಪ ಕನ್ನಡತನವನ್ನು ಉಳಿಸಿಕೊಂಡಿರುವವರಲ್ಲಿ ಈ ಅಲ್ಪ ಪ್ರಾಣ ಮಹಾ ಪ್ರಾಣಗಳ ಗೊಂದಲಗಳಿಂದ ಅಕ್ಕಿ ಆರುತ್ತದೆ, ಹಿತಿಆಸವನ್ನೇ ಬದಲಿಸುವ ಕೆಲಸ, ಎಲ್ಲರಿಗೂ ಹಾದರದ ಸ್ವಾಗತ, ಅಸಿವು, ಇವರದೊಂದು ವರ್ಗವಾದರೆ, ಹೊಕ್ಕಳು ಸೀಳುವ ಮತ್ತೊಂದು ವರ್ಗ ’ವಿಧ್ಯಾ ಗಣಪತಿ,’ ಹಾರ್ಧಿಕ ಸ್ವಾಗತ, ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲೂ ಗಣಪನ ಹಬ್ಬ ಬಂತೆಂದರೆ ತೂಗಾಡುವ ಫಲಕವಿದು.
ಪರಿಚಯ ಇರದವರನ್ನು ಕರೆಯಲು ‘ಓಯ್ ಗುರು,’ ’ಹೇ ರಾಜ ’ ಎನ್ನುತ್ತಿದ್ದ ಕಾಲವೊಂದಿತ್ತು. ಈಗ ನಮ್ಮ ಕನ್ನಡದ ಮಕ್ಕಳೂ ನಾವು ಯಾರಿಗೇನು ಕಮ್ಮಿ ಎಂದು ‘ಕಂ ಡಾ’ ‘ವೈ ರಾ’ ಓಯ್ ಬಾಬೂ ಸುನೊ ಭಾಯ್ ಎಂದೆಲ್ಲಾ ಶುರು ಮಾಡಿಬಿಟ್ಟಿದ್ದಾರೆ. ತಮ್ಮ ಸ್ನೇಹಿತರೊಂದಿಗೆ ಮಾತನಾಡುತ್ತಾ ‘ನಂಗೆ ಕೆನಡಾ ಬರೆಯೋಕೆ, ಓದೋಕೆ ಬರೊಲ್ಲ’ ಎನ್ನುತ್ತಾರೆ. ಇನ್ನು ಕಾಲೇಜು ಮಕ್ಕಳನ್ನು ಕೇಳುವುದೇ ಬೇಡಾ. ಪಿಜ್ಜಾ ಬರ್ಗರ್ ಸಂಸ್ಕೃತಿ. ಯಾರನ್ನಾದರೂ ಕೇಳಿ ‘ನಿನ್ನ ಧ್ಯೇಯ ಏನು’ ಎಂದು ಕ್ಷಣದಲ್ಲಿ ಉತ್ತರ ಬರುತ್ತದೆ ‘ಫ್ಲೈಯಿಂಗ್ ಟು ಯೂ ಎಸ್’ ಇನ್ನು ಇವರಿಂದ ಕನ್ನಡದ ಉದ್ಧಾರವೇನು ಬಂತು. ಕರ್ನಾಟಕವೆಂದು ನಾಮಕರಣವಾಗಿ ನಾವು ಕನ್ನಡವನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಉಳಿಸುವೆವೆಂದು ಸಂಕಲ್ಪ ಗೈಯ್ಯುತ್ತಲೇ ಬಂದಿದ್ದೇವೆ. ಶಾಸ್ತ್ರೀಯ ಭಾಷೆ ಎಂದು ಎದೆ ತಟ್ಟಿ ಹೇಳುತ್ತೇವೆ. ಶಾಸ್ತ್ರಕ್ಕಾದರೂ ಕನ್ನಡವನ್ನು ಉಳಿಸಿಕೊಂಡಿದ್ದೇವಾ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ.

ravi sharma
ಕೆ. ರವಿ ಶರ್ಮ ಬೆಂಗಳೂರು


Share This Article
Leave a comment