December 22, 2024

Newsnap Kannada

The World at your finger tips!

Identity Crisis

source - google credits - fintech

ಖ್ಯಾತಿಯ ಮೋಹ

Spread the love
IMG 20180306 WA0008 1 edited
ಡಾ.ಶುಭಶ್ರೀಪ್ರಸಾದ್

ಖ್ಯಾತಿ ಎಂಬುದು ಮನುಷ್ಯನ  ಬಹುಮುಖ್ಯ ಆಶಯಗಳಲ್ಲೊಂದು. ಅದೊಂದು ಅಮಲೂ ಹೌದು.  ನಮಗೆ ನಮ್ಮಲಿಯೇ ಹೆಚ್ಚು ಪ್ರೀತಿ. ನಮ್ಮನ್ನು ನಾವು ಪ್ರೀತಿಸುವಷ್ಟು ಮತ್ಯಾರನ್ನೂ ಪ್ರೀತಿಸುವುದಿಲ್ಲ. ‘ನಾವು ಏನು’ ಎಂಬುದು ನಮಗೆ ಗೊತ್ತಿದ್ದರೂ, ಸತ್ಯವನ್ನು ಜಗತ್ತಿಗೆ ತೋರಿಸಿಕೊಳ್ಳದೆ, ಮುಖವಾಡವನ್ನಾದರೂ ಹಾಕಿಕೊಂಡು ನಮ್ಮನ್ನು ನಾವು ಈ ಸಮಾಜದಲ್ಲಿ ಪ್ರತಿಷ್ಟಾಪಿಸಿಕೊಳ್ಳಲು ಸದಾ ಪ್ರಯತ್ನ ಮಾಡುತ್ತಿರುತ್ತೇವೆ. ಅದೇ ಹೆಸರಿನ ಹಂಬಲ

ಹೆಸರು ಹೆಸರೆಂಬುದೇಂ? ಕಸರು ಬೀಸುವ ಗಾಳಿ ।

ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ ? ।।

ಶಿಶುವಾಗು ನೀಂ ಮನದಿ, ಹಸುವಾಗು, ಸಸಿಯಾಗು ।

ಕಸಬೊರಕೆಯಾಗಿಳೆಗೆ – ಮಂಕುತಿಮ್ಮ ।।


ಹಣ, ಅಧಿಕಾರ ಮತ್ತು ಹೆಸರಿನ ಮೋಹಕ್ಕೆ ಒಳಗಾದ ಮನುಷ್ಯರು ಅವುಗಳ ಸಖ್ಯಕ್ಕಾಗಿಯೇ ಹಂಬಲಿಸುತ್ತಿರುತ್ತಾರೆ. ಎಲ್ಲಿ ತಮ್ಮ ಹಣ ಹೋಗುವುದೋ, ಎಲ್ಲಿ ತಮ್ಮ ಅಧಿಕಾರ ಹೋಗುವುದೋ, ಎಲ್ಲಿ ತಮ್ಮ ಹೆಸರನ್ನು ಜನ ಮರೆತುಬಿಡುವರೋ ಎಂದು  ಹೆದರಿ, ಅವುಗಳನ್ನು ಹೊಂದಿಯೇ ಇರಲು ನೇರವಾದ ದಾರಿಯಾಗಿರಲಿ ಅಲ್ಲದಿರಲಿ ಕಾರ್ಯಪ್ರವೃತ್ತರಾಗಿಯೇ ಇರುತ್ತಾರೆ.

ನಮ್ಮೆಲ್ಲರಲ್ಲೂ ಅಹಂಕಾರ ಎಂಬೊಂದು ಅಗ್ನಿಯಿದೆ. ಅದನ್ನು ಸರಿಯಾಗಿ ಹತ್ತಿಕ್ಕದಿದ್ದರೆ ಅದು ನಮ್ಮನ್ನೇ ಆವಾಹಿಸಿಕೊಂಡು ಆಪೋಶನ ತೆಗೆದುಕೊಂಡುಬಿಡುವ ಅಪಾಯವಿದೆ.
ತಮ್ಮ ಹೆಸರು ಸದಾ ಪ್ರಚಲಿತದಲ್ಲಿರಬೇಕೆಂಬ ಖಾಯಲೆಯನ್ನು ಇತ್ತೀಚೆಗೆ ಅನೇಕರಲ್ಲಿರುವುದನ್ನು ಕಾಣುತ್ತೇವೆ. ಅದಕ್ಕಾಗಿ ಅವರು ಹೋರಾಡುವ ರೀತಿ ಒಬ್ಬ ಸೈನಿಕ ಯುದ್ಧದಲ್ಲಿ ಪಾಲ್ಗೊಳ್ಳುವಂತಿರುತ್ತದೆ.

ಹಿಂದೆಲ್ಲ ಬಲಗೈಯಲ್ಲಿ ಮಾಡಿದ ದಾನ ಎಡಗೈಗೆ ಗೊತ್ತಾಗಬಾರದು ಎಂಬ ಮಾತನ್ನು ತಾವೂ ಪಾಲಿಸಿ, ತಮ್ಮ ವಂಶಜರಿಗೆ, ಕಿರಿಯರಿಗೆ ಉಪದೇಶಿಸುತ್ತಿದ್ದರು. ಇತ್ತೀಚಿನ ದಿನಗಳ ಅಪಾಯವೆಂದರೆ ರಾತ್ರಿ ಕಳೆದು ಬೆಳಕು ಹರಿಯುವುದರಲ್ಲಿ ತಾವು ಜಗದ್ವಿಖ್ಯಾತವಾಗಿಬಿಡಬೇಕೆಂಬ ಖ್ಯಾತಿಯ ಹುಚ್ಚು ವ್ಯಾಮೋಹ.  ಸಣ್ಣ ದಾನ ಮಾಡಿ ದೊಡ್ಡ ದೊಡ್ಡ ಬೋರ್ಡ್, ಕಟೌಟ್, ಬ್ಯಾನರ್ ಗಳನ್ನು ಊರತುಂಬ ಹಾಕಿಸಿ ಮೆರೆವವರನ್ನು ಕಾಣುವಾಗ ಖ್ಯಾತಿಯೆಂಬುದು ಮನುಜನಿಗೆ ಅಷ್ಟು ಮುಖ್ಯವೇ ಎಂಬ ಅಚ್ಚರಿಯೂ ಉಂಟಾಗುತ್ತದೆ.
ಪ್ರಸಕ್ತ ಸಂದರ್ಭದಲ್ಲಿ ತಾವೊಬ್ಬ ಮಹಾನ್ ವ್ಯಕ್ತಿಯಾಗಬೇಕೆನ್ನುವ ಹಂಬಲಕ್ಕಿಂತ, ಮಹಾನ್ ವ್ಯಕ್ತಿಯೆನಿಸಿಕೊಳ್ಳುವ ಹಂಬಲವೇ ಹೆಚ್ಚಾಗಿದೆ. ಎಂದರೆ ಒಳ್ಳೆಯವರೆಂಬ, ಗುಣವಂತರೆಂಬ, ಸಿರಿವಂತರೆಂಬ ಕೀರ್ತಿ ಬಂದರೆ ಸಾಕು, ಅದು ನಿಜವೇ ಆಗಿರಬೇಕಿಲ್ಲ.
ಖ್ಯಾತಿ, ಹಣ, ಅಧಿಕಾರಗಳನ್ನು ಗಳಿಸುವುದು ಮಾತ್ರ ದೊಡ್ಡದಲ್ಲ; ಅದನ್ನು ಉಳಿಸಿಕೊಳ್ಳಲು ಹೆಣಗಾಡುವುದಿದೆಯಲ್ಲಾ, ಅದು ಕತ್ತಿಯಲುಗಿನ ಮೇಲಿನ ನಡಿಗೆ. ಉಳಿಸಿಕೊಳ್ಳಲು ತೊಡಗುವಾಗಿನ ಮಾನಸಿಕ ಕ್ಷೋಭೆ, ಕೋಪ, ತಾಪ, ಹೊಟ್ಟೆಕಿಚ್ಚು, ಜಿದ್ದು, ತೊಳಲಾಟಗಳು ಮನುಷ್ಯನನ್ನು ಹಿಂಡಿ ಹಿಪ್ಪೆಮಾಡಿಬಿಡುತ್ತದೆ. ಏಕೆಂದರೆ ಒಮ್ಮೆ ಹೆಸರು ಪ್ರಚಾರಕ್ಕೆ ಬಂದರೆ ಆ ಹೆಸರನ್ನು ಕೆಡಿಸಲು ಪ್ರಯತ್ನಿಸುವ ಮಂದಿಯೂ ರಾತ್ರೋರಾತ್ರಿ ಹುಟ್ಟಿಕೊಂಡುಬಿಡುತ್ತಾರೆ.  
ಕೀರ್ತಿಯೆಂಬ ಕುದುರೆಯ ಬೆನ್ನೇರಿ ಜಿಗಿದು ಓಡಿ ಅಲ್ಪಕಾಲದಲ್ಲಿಯೇ ಮುಗ್ಗುರಿಸಿ ಬಿದ್ದವರ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದೆ ಇದ್ದರೂ ನಾವಿನ್ನೂ ಎಚ್ಚೆತ್ತುಕೊಂಡಿಲ್ಲ.

ಖ್ಯಾತಿಯ ಬೆನ್ನು ಹತ್ತಿದವರನೇಕರು ತಾವು ಮೇಲ್ಮೆ ಸಾಧಿಸಲು ಇತರರ ಕಾಲೆಳೆಯುವ ಪ್ರವೃತ್ತಿಗೆ ಇಳಿಯುವುದನ್ನು ಈ ಸಮಾಜದಲ್ಲಿ ಕಾಣುತ್ತಲೇ ಇದ್ದೇವೆ. ಏಕೆಂದರೆ ಇತರರೂ ಅಂಥದ್ದೇ ಹೆಸರಿಗಾಗಿ ಪರದಾಡುತ್ತಿರುತ್ತಾರೆ.

ಖ್ಯಾತನಾಮರನ್ನು ಗಮನಿಸಿದರೆ, ಅವರ ಅನುಭವಗಳನ್ನು ಒಮ್ಮೆ ಅವಲೋಕಿಸಿದರೆ, ಹೆಸರಿನಿಂದಾಗುವ ಒಳಿತು ಕೆಡಕುಗಳೆರೆಡರ ದರ್ಶನವೂ ನಮಗಾಗುತ್ತದೆ. ಇತರರ ಅನುಭವಗಳಿಂದ ನಾವು ಪಾಠ ಕಲಿತರೆ ನಾವೇ ಅವುಗಳನ್ನು ಅನುಭವಿಸಿ ಸಂಕಟ ಹೊಂದಬೇಕಿಲ್ಲ.  ಖ್ಯಾತಿ ಎಂಬುದು ಮೊದಮೊದಲು ಸಿಹಿ ತಿನ್ನುವ ಖುಷಿಯನ್ನು ಕೊಟ್ಟರೂ, ಕಾಲಾನಂತರದಲ್ಲಿ ಸಿಹಿಯೇ ಓಕರಿಕೆ ತರಿಸುವ ಹಾಗೆ ಭಾಸವಾಗುತ್ತದೆ. ಮೊದಮೊದಲು ಜನ ಗುರುತಿಸಿ, ಆರಾಧಿಸಿ, ಗೌರವಿಸುವ ಕ್ರಮ ಆನಂದ ಕೊಟ್ಟಿದ್ದರೂ, ತದನಂತರ ಅವೂ ಭಾರವಾಗತೊಡಗುತ್ತದೆ. ಒಂದು ಹಂತ ದಾಟಿದ ಮೇಲೆ ಖ್ಯಾತನಾಮರಿಗೆ ವೈಯಕ್ತಿಕ ಬದುಕೇ ಇಲ್ಲದಂತಾಗಿ ಅವರ ಪ್ರತಿ ವಿಷಯವೂ ಜಗತ್ತಿನ ಕಣ್ಣು, ಕಿವಿಗೆ ಆಹಾರವಾಗುತ್ತಲೇ ಇರುತ್ತದೆ. ಸಮಾಜ ಅಂತಹ ಸುದ್ಧಿಗಳನ್ನೇ ಜಗಿದೂ ಜಗಿದೂ ಖ್ಯಾತಿಯೆನ್ನುವುದು ಅವಶ್ಯಕವೇ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.

ಸತ್ಪುರುಷರಿಗೆ ಹೆಸರಿನ ಚಿಂತೆಯಿಲ್ಲ. ತಾವು ಮಾಡುವ ಕೆಲಸ ನೀಡುವ ಆತ್ಮತೃಪ್ತಿಯೇ ಅವರಿಗೆ ಆನಂದ. ಸಮಚಿತ್ತ ಸಾಧಿಸಿದವರಿಗೆ ಖ್ಯಾತಿಯಿಂದ ಹಿಗ್ಗುವುದೂ, ಅಪಖ್ಯಾತಿಯಿಂದ ಕುಗ್ಗುವುದೂ ಒಲ್ಲದು.
ಹೆಸರಿನ ಹಂಬಲವನ್ನು ಮೀರಿ ನಿಲ್ಲುವುದು ಅಷ್ಟು ಸುಲಭದ ಮಾತಲ್ಲ. ಪ್ರತಿಯೊಬ್ಬರೂ ನಮ್ಮನ್ನು ಪ್ರೀತಿಸುವುದಾಗಲೀ, ಮೆಚ್ಚುವುದಾಗಲೀ ಸಾಧ್ಯವೇ ಇಲ್ಲ. ನಾವು ಒಳ್ಳೆಯವರಂತಿದ್ದರೂ, ಇರದಿದ್ದರೂ ಒಂದಿಲ್ಲೊಂದು ಕಾರಣದಿಂದ ಜನ ಆಡಿಕೊಳ್ಳುತ್ತಾರೆ, ಜರಿಯುತ್ತಾರೆ. ಹಾಗಾಗಿ ಇತರರನ್ನು ಮೆಚ್ಚಿಸಿ, ಓಲೈಸಿ, ಹೆಸರು ಪಡೆಯುವುದಕ್ಕಿಂತ, ನಮ್ಮ ಹೃದಯ ಮೆಚ್ಚಿಕೊಳ್ಳುವಂತೆ ನಡೆದರೆ ಸಾಕು.

Copyright © All rights reserved Newsnap | Newsever by AF themes.
error: Content is protected !!