December 22, 2024

Newsnap Kannada

The World at your finger tips!

Bankers dairy

ಬ್ಯಾಂಕೂ ಮುಗ್ಧ ಗ್ರಾಹಕರೂ (ಬ್ಯಾಂಕರ್ಸ್ ಡೈರಿ)

Spread the love

ಈ ಘಟನೆಯನ್ನು ಹೇಳಿದರೆ ನಿಮಗೆ ಅಚ್ಚರಿಯೂ ಆಗಬಹುದು, ನಗುವೂ ಬರಬಹುದು. ಇಂಥಾ ಹೆಡ್ಡರೂ ಇರುತ್ತಾರೆಯೇ ಎಂದು ಅನುಮಾನವೂ ಬರಬಹುದು. ಇದು ನಡೆದದ್ದು 1992 ಅಥವಾ 1993 ರಲ್ಲಿ ನಡೆದದ್ದು. ನಾನಾಗ ಮಂಡ್ಯದ ಹತ್ತಿರದ ಹಳ್ಳಿ ಶಾಖೆಯೊಂದರಲ್ಲಿದ್ದುದು.  ಹಳ್ಳಿಯ ಜನರಲ್ಲಿ ಇನ್ನೂ ಮುಗ್ಧತೆಯಿದ್ದ ಕಾಲ. ಬ್ಯಾಂಕಿನವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು.

ಕೆಲವು ಹಳ್ಳಿ ಹೆಂಗಸರಂತೂ ಚಪ್ಪಲಿಯನ್ನು ಹೊರಗೇ ಬಿಟ್ಟು ಒಳಗೆ ಬರುತ್ತಿದ್ದರು, ಹಣವನ್ನು ಕಣ್ಣಿಗೊತ್ತಿಕೊಂಡು ತೆಗೆದುಕೊಳ್ಳುತ್ತಿದ್ದರು. ತೀರಾ ಬೆರಳೆಣಿಕೆಯಷ್ಟು ಕೆಲ ಹಳ್ಳಿಗರು ಈಗಲೂ ಹಣವನ್ನು ಕಣ್ಣಿಗೊತ್ತಿಕೊಂಡೇ ತೆಗೆದುಕೊಳ್ಳುತ್ತಾರೆ. ನನ್ನ ಮೊದಲ ಶಾಖೆ ಬಸ್ ನಿಲ್ದಾಣದಿಂದ ಎರಡು ಕಿಲೋಮೀಟರ್ ಒಳಗಿತ್ತು. ಎರಡೂ ಕಡೆಗಳಲ್ಲಿ ಹಸಿರು ಭತ್ತದ ಗದ್ದೆಗಳು, ಬೈತಲೆ ತೆಗೆದಂತೆ ರಸ್ತೆ. ಬ್ರಾಂಚಿನಿಂದ ಹೊರಟು ಕಾಲುವೆಯಲ್ಲಿ ಹರಿವ ನೀರಿನ ಝುಳು ಝುಳು ಸದ್ದಿನ ಜೊತೆ ನಡೆಯುತ್ತಾ ತಂಗಾಳಿ ಸವಿಯುತ್ತಾ ಬಸ್ ನಿಲ್ದಾಣ ಸಿಗುತ್ತಿದ್ದುದೇ ಗೊತ್ತಾಗುತ್ತಿರಲಿಲ್ಲ. ದಾರಿಯಲ್ಲಿ ನಡುನಡುವೆ ನಮ್ಮ ಗ್ರಾಹಕರು  ‘ಈಗ್ ಕಡ್ದ್ ಒಂಟ್ರಾ?’ ಅಂತ ಪ್ರಶ್ನೆ ಕೇಳೋದು, ನಾವು ಹೂಗುಟ್ಟೋದು; ಇಲ್ಲವಾದರೆ ‘ಯಾಕಿಷ್ಟು ತಳಾರ?’ ಎನ್ನೋ ಪ್ರಶ್ನೆಗೆ ಉತ್ತರಿಸುತ್ತಾ ನಡೆಯೋದು.

ಈ ಹಳ್ಳಿಗರ ಆಗಿನ ಮುಗ್ಧತೆಯ ಬಗ್ಗೆ ಮಾತನಾಡುತ್ತಿದ್ದಾಗ ನನ್ನ ಸಹೋದ್ಯೋಗಿ ಮಾಲಿಂಗು ಅವರ ಅನುಭವದ ಈ ಕಥೆ ಹೇಳಿದರು:

ತಿಮ್ಮ ಅಂತ ಒಬ್ಬ ಗ್ರಾಹಕ (ಹೆಸರು ಬದಲಿಸಲಾಗಿದೆ) ತೀರಾನೇ ಮುಗ್ಧ. ಅದ್ಯಾರೋ ಎಂದಾದರೂ ಅವನಿಗೆ ಹಸು ಸಾಲಾನೋ, ಎಮ್ಮೆ ಸಾಲಾನೋ ಸಿಗಬಹುದು ಅಂತ ನಮ್ಮ ಬ್ಯಾಂಕಿನ ಶಾಖೆಯಲ್ಲಿ ಒಂದು ಖಾತೆ ತೆರೆಸಿದ್ದರು. ಅವನಿಗೆ ಬ್ಯಾಂಕಿಗೆ ಬರುವುದು, ಹಣ ಕಟ್ಟುವುದು, ತೆಗೆಯುವುದು ಯಾವುದೂ ಗೊತ್ತಿಲ್ಲ. ಹೀಗೊಂದು ದಿನ ಅವನ ಮನೆ ರಿಪೇರಿ ಮಾಡಿಸೋಕಂತ ದೇವರ ಮನೆ ಗೋಡೆ ಕೆಡವಿದಾಗ ಅವರಪ್ಪನೋ, ಅವರಜ್ಜನೋ ದೇವರ ಪಟದ ಹಿಂದೆ ಗೋಡೆಯ ಸಂದಿನಲ್ಲಿ ಸಂದೂಕದಲ್ಲಿ ರಹಸ್ಯವಾಗಿ ಇರಿಸಿದ್ದ ಹತ್ತು ಸಾವಿರ ರೂಪಾಯಿ ಅವನಿಗೆ ಸಿಕ್ಕಿತು. ಆಗ ಅದು ಬಹುದೊಡ್ಡ ಮೊತ್ತ. ನನ್ನಂಥ ನಾಲ್ವರ ತಿಂಗಳ ಸಂಬಳ. ಕೆಲಸದ ಆಳುಗಳು ಒಳ್ಳೆಯ ಮನಸ್ಸಿನಿಂದ ತಿಮ್ಮನಿಗೆ ‘ನಾಳೇನೇ ಹೋಗಿ ಬ್ಯಾಂಕಿನಲ್ಲಿ ಕಟ್ಟಿ’ ಎಂದು ಹೇಳಿದರಂತೆ.  ಮರುದಿನ ಭಾನುವಾರ. ಹೇಳಿದವರಿಗೂ ಅದರ ಪರಿವೆಯಿಲ್ಲ; ಕೇಳಿಸಿಕೊಂಡವನಿಗಂತೂ ಗೊತ್ತೇ ಇಲ್ಲ.

ಮರುದಿನ ಬೆಳಿಗ್ಗೆ ಬ್ಯಾಂಕಿನ ಬಳಿ ಹೋಗಿ ನೋಡಿದರೆ ಬಾಗಿಲು ಹಾಕಿತ್ತು. ಬ್ಯಾಂಕಿನ ಮೋಟುಗೋಡೆಯ ಮೇಲೆ ಯಾರೋ ನಾಲ್ಕು ಹುಡುಗರು ಪಟ್ಟಾಂಗ ಹೊಡೆಯುತ್ತಾ ಮೋಟು ಬೀಡಿಯನ್ನು ಸೇದುತ್ತಾ ಕುಳಿತಿದ್ದರು. ಅವರ್ಯಾರೆಂದು ತಿಮ್ಮನಿಗೆ ತಿಳಿಯದು. ತಿಮ್ಮ ‘ಬ್ಯಾಂಕಿಗೆ ಹಣ ಕಟ್ಟಬೇಕು’ ಎಂದ. ಇವನ ನಡೆ ನುಡಿ ನೋಡಿಯೇ ಪೆÇೀಕರಿಗಳಿಗೆ ಇವನನ್ನು ಯಾಮಾರಿಸಬಹುದು ಎಂದು ತಿಳಿಯಿತು. ‘ಓ ಹಣ ಕಟ್ಟಬೇಕಾ? ದಾರ ತೊಗೊಳಿ, ಅದಕ್ಕೆ ಕಟ್ಟಿ ಬ್ಯಾಂಕಿನ ಕಿಟಕಿಯೊಳಗೆ ಬಿಡಿ. ಅವರು ತೆಗೆದುಕೊಳ್ಳುತ್ತಾರೆ’ ಎಂದರು. ನಂಬಿದ ತಿಮ್ಮ ದಾರ ಕಟ್ಟಿ ಬಿಟ್ಟ. ಅವನು ಆ ಕಡೆ ಹೋದ ಕೂಡಲೇ ಪಟಿಂಗರು ದಾರ ಎಳೆದುಕೊಂಡು ಹಂಚಿಕೊಂಡುಬಿಟ್ಟರು. ಮರುವಾರದಲ್ಲಿ ಪಕ್ಕದ ಹಳ್ಳಿಯಲ್ಲಿ ಒಂದೇ ಗುಸುಗುಸು- ಪೋಲಿಪೋಕರಿಗಳಂತೆ ತಿರುಗಾಡುತ್ತಿದ್ದ ಸ್ನೇಹಿತರು ಎಲ್ಲಿಂದ ದುಡ್ಡು ಹೊಂಚಿದರೋ ನಾಲ್ವರೂ ಹಳ್ಳಿಯಲ್ಲಿ ಒಂದೊಂದು ದೊಡ್ಡ ಸೈಟನ್ನು ಕೊಂಡರು ಎಂದು.
ಇದಾಗಿ ತಿಂಗಳಿಗೆ ನನ್ನ ಸಹೋದ್ಯೋಗಿಗೆ ತಿಮ್ಮ ಸಿಕ್ಕಿದ. ‘ಸಾ ನಿಮ್ ಬ್ಯಾಂಕಿನಲ್ಲಿ ನಾನು ಹತ್ತು ಸಾವಿರ ಕಟ್ಟಿದೆ. ನೀವೇ ಆವತ್ತು ಇರ್ನಿಲ್ಲ’ ಎಂದನಾ ಮಾಲಿಂಗು ಅವರಿಗೆ ಗಾಬರಿ. ನಾನು ಯಾವತ್ತೂ ರಜೆ ಹಾಕಿಲ್ಲ; ಸಾಲದ್ದಕ್ಕೆ ಅಷ್ಟು ದೊಡ್ಡ ಮೊತ್ತವನ್ನು ಅಂಗಡಿಯವರು ಬಿಟ್ಟು ಯಾರೂ ಕಟ್ಟಿಲ್ಲ ಎಂದು ಏನು ಎತ್ತ ಯಾವಾಗ ಎಂದು ವಿಚಾರಿಸಲಾಗಿ ವಂಚನೆ ಹೊರಗೆ ಬಂತು. ಈಗಿನಂತೆ ಆಗೆಲ್ಲ ಸಿ.ಸಿ.ಟಿವಿ ಇರಲಿಲ್ಲವಲ್ಲಾ. ಖಾತ್ರಿ ಇರದೆ ಅನುಮಾನದ ಮೇಲೆ ಯಾರನ್ನೂ ಕೇಳಲಾಗದು. ತಿಮ್ಮನೂ ಬ್ಯಾಂಕಿನವರಿಗೆ ‘ಸಾ ನಾ ಕಷ್ಟ ಪಟ್ಟು ದುಡ್ದಿದಲ್ಲ. ನಂಗೆ ಸಿಕ್ಕಿದ್ದು ಇನ್ಯಾರಿಗೋ ಸೇರ್ತು. ಅವ್ರು ಸಂದಾಗಿರ್ನಿ ಬುಡಿ’ ಅಂದುಬಿಟ್ಟ. ಆವತ್ತಿಂದ ಪಾಪ ಅವನಿಗೆ ಮಂಕುತಿಮ್ಮ ಎಂಬ ಹೆಸರೇ ಖಾಯಂ ಆಯಿತು. ಆದರೆ ಅವನ ಒಳ್ಳೆಯತನಕ್ಕೆ ಅದಕ್ಕಿಂತ ಹೆಚ್ಚಿಗೆಯೇ ದುಡಿದಿದ್ದಾನೆ, ಮಕ್ಕಳನ್ನು ಚೆನ್ನಾಗಿ ಓದಿಸಿ ಮದುವೆ ಮಾಡಿದ್ದಾನೆ.

ಸುಮಾರು ಹದಿನೈದು ವರ್ಷಗಳ ಹಿಂದೆ ನಡೆದ ಪ್ರಸಂಗ. ನಮ್ಮಲ್ಲಿ ಮಂಜುಳಾ ಎಂಬ ಸಹೋದ್ಯೋಗಿ ಇದ್ದರು. ಅವರು ಕುಳಿತುಕೊಳ್ಳುತ್ತಿದ್ದ ಪಿಂಚಣಿ ವಿಭಾಗ ಮೇನೇಜರ್ ಕ್ಯಾಬಿನ್ ಹಿಂದೆ. ಬಂದವರಿಗೆ ನೇರವಾಗಿ ಕಾಣುತ್ತಿರಲಿಲ್ಲ. ಅದರ ಪಕ್ಕದಲ್ಲಿಯೇ ವಾಶ್ ರೂಮ್ ಇತ್ತು. ಒಮ್ಮೆ ಸರೋಜ ಎನ್ನುವ ವೃದ್ಧೆ ಹಳ್ಳಿಗಳು ಇಂಗ್ಲೀಷ್ ಹೆಚ್ಚಾಗಿ ಪರಿಚಯವಿಲ್ಲದವರು, ಪಿಂಚಣಿ ವಿಭಾಗದಲ್ಲಿ ಯಾವುದೋ ವಿಚಾರಣೆಗಾಗಿ ಬಂದಿದ್ದರು. ಮಧ್ಯಾಹ್ನ ಒಂದು ಗಂಟೆಯಾಗಿರಬಹುದು, ನಮ್ಮ ಮಂಜುಳಾ ವಾಶ್ ರೂಮಿಗೆಂದು ಎದ್ದು ಪಕ್ಕಕ್ಕೆ ನಡೆದರು. ಸರೋಜ ಅವರೂ ಅವರ ಹಿಂದೆಯೇ ಪಿಂಚಣಿಪೇಪರ್  ಹಿಡಿದು ನಡೆದರು. ಇವರಿಗೆ ಗಾಬರಿ ‘ಎಲ್ಲೀಗಮ್ಮಾ ಬರ್ತಿದೀರಾ? ನಾ ವಾಶ್ ರೂಮಿಗೆ ಹೋಗಿ ಬರ್ತೀನಿ ಇರಿ’ ಎಂದರೆ ವಾಶ್ ರೂಮಿನ ಪದದ ಅರ್ಥ ಗೊತ್ತಿರದ ಆಕೆ ‘ಆ ರೂಮಲ್ಲೇ ಈ ಪೇಪರ್ ನೋಡಿ’ ಎಂದು ಕೈಗೆ ಕೊಟ್ಟರು. ಕೊನೆಗೆ ಆಕೆಗೆ ಅರ್ಥ ಮಾಡಿಸಲು ಬೆರಳುಸನ್ನೆ ಮಾಡಬೇಕಾಯಿತು. ಆಕೆ ನಾಚಿ ‘ಓಗ್ಬನ್ನಿಯಮ್ಮಾ ತೆಪ್ಪಾಯ್ತು’ ಎಂದರು. ನಾವೆಲ್ಲ ಆ ಪ್ರಸಂಗವನ್ನು ನೆನೆನೆನೆದು ನಗುತ್ತೇವೆ.
ಮುಗ್ಧತೆ ಇದ್ದರೆ ಚೆನ್ನು ಆದರೆ ಮುಠ್ಠಾಳತನವಿರಬಾರದು. ಈಗಂತೂ ಹಳ್ಳಿಯವರೂ ತಣ್ಣೀರನ್ನು ಆರಿಸಿ ಕುಡಿವ ಹಾಗೆ ಮೆಷೀನಿನಲ್ಲಿ ಎರಡು ಬಾರಿ ಅವರೆದುರೇ ಎಣಿಸಿಕೊಟ್ಟಿದ್ದರೂ ನಮ್ಮ ಕಣ್ಣಿಗೆ ತೀಡುವಂತೆ ನಮ್ಮೆದುರೇ ಮತ್ತೆ ಎಣಿಸಿಕೊಂಡು ಹೋಗುತ್ತಾರೆ.  

ಮುಗ್ಧತೆಯನ್ನು ಕಳೆದುಕೊಂಡ ಮತ್ತು ಒಳ್ಳೆಯತನವನ್ನು ಕಳೆದುಕೊಳ್ಳುತ್ತಿರುವ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬುದನ್ನು ನೆನೆದಾಗ ಭಯವೂ ಆಗುತ್ತದೆ.

ಕಾಲಾಯ ತಸ್ಮೈ ನಮಃ

– ಡಾ.ಶುಭಶ್ರೀಪ್ರಸಾದ್.

Copyright © All rights reserved Newsnap | Newsever by AF themes.
error: Content is protected !!