ನಾರೀಶಕ್ತಿಯ ವೇದನೆ….., ನ್ಯಾಯಾಂಗದ ಸೂಕ್ಷ್ಮ ಸಂವೇದನೆಯ ಸ್ಪಂದನೆ …

Team Newsnap
4 Min Read
HIRITYRU PRAKASH 1
ಹಿರಿಯೂರು ಪ್ರಕಾಶ್.

ದೇಶದ ಯಾವುದೇ ಭಾಗದಲ್ಲಿ ಯಾವುದೇ ಒಬ್ಬ ಮಹಿಳೆ ಅಮಾನುಷವಾಗಿ ಅತ್ಯಾಚಾರಕ್ಕೊಳಗಾದ ಪ್ರಕರಣಗಳಲ್ಲಿ , ಆಕೆಯನ್ನು ವಿವಸ್ತ್ರಗೊಳಿಸಿ‌ ಮೆರವಣಿಗೆ ಮಾಡಿದಂತಹಾ ಅನಾಗರಿಕ ಘಟನೆಯಲ್ಲಿ ಅಥವಾ ಇದೇ ರೀತಿಯ ಮಹಿಳೆಯ ಮೇಲಿನ‌ ಅಮಾನುಷ ದೌರ್ಜನ್ಯದಂತಹ ಪ್ರಕರಣಗಳಲ್ಲಿ ಆಘಾತಕ್ಕೊಳಗಾದ ಸಂತ್ರಸ್ತ ಮಹಿಳೆ ದೈಹಿಕವಾಗಿ ಒಮ್ಮೆ ಮಾತ್ರ ಘಾಸಿಗೊಳಗಾಗುತ್ತಾಳೆ. ಆದರೆ ಘಟನೆಯ ನಂತರ ಘಟಿಸುವ ರಾಜಕೀಯ ಕೆಸರೆರೆಚಾಟ , ಟೀವಿ , ಸೋಷಿಯಲ್ ಮೀಡಿಯಾಗಳ ಬೇಡದ ಪ್ರಚಾರದ ಅರಚಾಟ, ತನಿಖೆ ಸತ್ಯಶೋಧನೆ‌ ಹೆಸರಿನಲ್ಲಿ ಸಂದರ್ಶನ ನಡೆಸಿ ಜಗದ್ರಕ್ಷಕರ ಪೋಸು ಕೊಡುವವರ ನೂರೆಂಟು ಪ್ರಶ್ನೆಗಳೆಂಬ ನಿರಂತರ ಟಾರ್ಚರ್ ಗಳಿಂದಾಗಿ ಆಕೆ ಮತ್ತಷ್ಟು ಆಘಾತಕ್ಕೊಳಗಾಗಿ ಮಾನಸಿಕವಾಗಿ ಕುಗ್ಗಿ ಅದರ ನೋವನ್ನು ನಿರಂತರವಾಗಿ ಅನುಭವಿಸುತ್ತಲೇ ಇರುವ ದಾರುಣ ಸನ್ನಿವೇಶಗಳು ಇಂತಹ ಘಟನೆಗಳಾದಾಗಲೆಲ್ಲಾ ಸಹಜವೆಂಬಂತೆ ಸೃಷ್ಟಿಯಾಗುತ್ತಲೇ ಇರುತ್ತವೆ.

ಕಳೆದ ಕೆಲ ವರ್ಷಗಳಲ್ಲಿ‌ ದೇಶದ ವಿವಿದೆಡೆ ಮಹಿಳೆಯ ಮೇಲೆರಗಿದ ದೌರ್ಜನ್ಯ, ಅತ್ಯಾಚಾರದ ಪ್ರಕರಣಗಳನ್ನು‌ ಸೂಕ್ಷ್ಮವಾಗಿ ಗಮನಿಸಿದಾಗ ವೇದ್ಯವಾಗುವ ಒಂದು ಮುಖ್ಯ ಅಂಶವೆಂದರೆ ಸಂತ್ರಸ್ತೆ ಮಹಿಳೆ ಅತ್ಯಾಚಾರಕ್ಕೊಳಗಾಗಿ ವೇದನೆಯನ್ನನುಭವಿಸು ವಂತಾದರೆ, ಅಂತಹ ಘಟನೆ‌ ನಡೆದ ತಕ್ಷಣವೇ ಅಲ್ಲಿ ಎಲ್ಲಕ್ಕಿಂತ ಮೊದಲು ನುಸುಳುವುದು ವಿದ್ಯುನ್ಮಾನ ಮೀಡಿಯಾಗಳು, ಸೋಷಿಯಲ್ ಮೀಡಿಯಾಗಳು ಆನಂತರ ರಾಜಕಾರಣದ ಪಟ್ಟುಗಳು !

ಸಾಮಾನ್ಯವಾಗಿ ಇಂತಹಾ ಘಟನೆಗಳನ್ನು ಒಂದು ರೀತಿ ಪ್ರಚಾರದ ವಸ್ತು- ವಿಚಾರಗಳಂತೆ, ರಾಜಕೀಯ ಹೋರಾಟ ಮಾಡಲು ಸಿಕ್ಕ ಆಯುಧದಂತೆ ಅಥವಾ ಆಡಳಿತ- ವಿರೋಧ ಪಕ್ಷಗಳ ನಡುವಿನ ಪರ ವಿರೋಧದ ಕೆಸರೆರೆಚಾಟದಂತೆ ಬಳಸಲಾಗುತ್ತದೆಯೇ ಹೊರತು, ಅಂತಹಾ ಅಮಾನುಷ ಘಟನೆಯಿಂದಾಗಿ ಸಂತ್ರಸ್ತೆ ಹಾಗೂ ಆಕೆಯ ಕುಟುಂಬ ಅನುಭವಿಸುತ್ತಿರುವ ಒಳಬೇಗುದಿಯನ್ನಾಗಲೀ ಮಾನಸಿಕ‌ ತುಮುಲವನ್ನಾಗಲೀ, ಮರ್ಮಾಘಾತವನ್ನಾಗಲೀ ಅರ್ಥೈಸಿಕೊಳ್ಳುವ ಸೂಕ್ಷ್ಮ ಸಂವೇದನೆ‌ ಅಲ್ಲಿ ‌ನೆಗೆದು ಬಿದ್ದಿರುತ್ತದೆ.

ಹೀಗಾಗಿಯೇ ಇಂತಹ ಘಟನೆಗಳಾದಾಗ ಹಲ್ಲೆ ಅಥವಾ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಹಾಗೂ ಆಕೆಯ ಕುಟುಂಬ ಮಾನಸಿಕವಾಗಿ ಚೇತರಿಸಿಕೊಳ್ಳಲೂ‌ ಬಿಡದೇ ಹತ್ತಾರು ಕ್ಯಾಮೆರಾಗಳು, ಸಂದರ್ಶನಗಳ ಹೆಸರಿನಲ್ಲಿ ತೂರಿ ಬರುವ ನೂರೆಂಟು ಪ್ರಶ್ನೆಗಳು, ಅಬ್ಬರದ ಹೋರಾಟಗಳು, ಸತ್ಯಶೋಧನಾ ಸಮಿತಿಗಳೆಂಬ ರಾಜಕೀಯ ರಂಗುಮೆತ್ತಿಕೊಂಡ ಕಣ್ಣೊರೆಸುವ ಪ್ರದರ್ಶನಗಳು, ಪರ ವಿರೋಧದ ಸಿಡಿಲಬ್ಬರದ ಗುಡುಗುಗಳ ಹೇಳಿಕೆಗಳು… ವಾಕರಿಕೆ ಯಾಗುವಷ್ಟರ ಮಟ್ಟಿಗೆ ಘಟನೆಯನ್ನು ಜೀವಂತವಾಗಿರಿಸಲು ಯತ್ನಿಸುತ್ತಲೇ ಇರುತ್ತವೆ.

ಎಲ್ಲಕ್ಕಿಂತ‌ ವಿಪರ್ಯಾಸವೆಂದರೆ ರಾಜಕೀಯ ಕ್ಷೇತ್ರ ಹಾಗೂ ಮಾಧ್ಯಮಗಳವರಂತೆ ಬಹುತೇಕ ಸಾರ್ವಜನಿಕರೂ ಕೂಡಾ ಮಹಿಳೆ ಮೇಲಿನ ಅತ್ಯಾಚಾರ ಹಲ್ಲೆಗಳಂತಹ ಪ್ರಕರಣಗಳಲ್ಲಿ ಅದು ಯಾವ ರಾಜ್ಯದಲ್ಲಿ ನಡೆದಿದೆ, ಅಲ್ಲಿ ಯಾವ ರಾಜಕೀಯ ಪಕ್ಷ ಅಧಿಕಾರದಲ್ಲಿದೆ, ಅತ್ಯಾಚಾರಕ್ಕೊಳಗಾದ ಮಹಿಳೆಯ ಜಾತಿ ಜನಾಂಗ ಧರ್ಮ ಯಾವುದು…ಎಂಬಿತ್ಯಾದಿ ಗುಣಾಕಾರ ಭಾಗಾಕಾರಗಳ ಲೆಕ್ಕಾಚಾರಗಳನ್ನು ಆಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸುತ್ತಾರೆಯೇ ವಿನಃ, ಆಘಾತಕ್ಕೊಳಗಾದ ಮಹಿಳೆ ಎಂದರೆ, ಯಾರೇ ಆಗಿರಲಿ ಎಲ್ಲೇ ನಡೆದಿರಲಿ ಅದು ಖಂಡನಾರ್ಹ ಎಂಬ ತೀರ್ಮಾನಕ್ಕೆ ಒಮ್ಮೆಲೇ ತೆರೆದ ಮನಸ್ಸಿನಿಂದ ಬರುವುದು ಅಪರೂಪ. ಬೇಕಾದರೆ ಆತ್ಮಸಾಕ್ಷಿಗಳನ್ನು ಒಮ್ಮೆ ಪ್ರಶ್ನಿಸಿಕೊಂಡು‌ ನೋಡಲಿ .

ಈ ವಾಸ್ತವಿಕ ಕಹಿ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಉಚ್ಛ ನ್ಯಾಯಾಲಯದ ಒಂದು ಆದೇಶ ಇಂತಹಾ ಆಘಾತಕ್ಕೊಳಗಾದ ಅಮಾಯಕ ಮಹಿಳೆಯರ ಪಾಲಿಗೆ ಸ್ವಲ್ಪವಾದರೂ ನೆಮ್ಮದಿ‌ ಮೂಡಿಸಿದೆ.

ಇತ್ತೀಚಿನ ಬೆಳಗಾವಿ ತಾಲ್ಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು‌ ವಿವಸ್ತ್ರ ಗೊಳಿಸಿ ಕಂಬಕ್ಕೆ‌ ಕಟ್ಟಿಹಾಕಿ ಥಳಿಸಿದ ಮೃಗೀಯ ವರ್ತನೆಯ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಂಡು ಥಳಿತಕ್ಕೊಳಗಾದ ಸಂತ್ರಸ್ತೆಯನ್ನು ಸಂದರ್ಶಕರೂ ಸೇರಿದಂತೆ ಯಾರೇ ಆಗಲೀ ವಿನಾಕಾರಣ ಭೇಟಿ ಮಾಡಬಾರದೆಂದು ಆದೇಶಿಸಿರುವುದು ಹಾಗೂ ಪ್ರಕರಣದ ಅಷ್ಟೂ ಚೌಕಟ್ಟನ್ನು ಮಾನವೀಯ ಹಿನ್ನೆಲೆಯಲ್ಲಿ ನೋಡಿರುವುದು ಅತ್ಯಂತ ಸ್ವಾಗತಾರ್ಹ ನಿರ್ಧಾರವಾಗಿದ್ದು , ಬಹುಶಃ ಇಂತಹಾ ನಿರ್ಧಾರಗಳೇ ನ್ಯಾಯಾಂಗ‌ ವ್ಯವಸ್ಥೆಯ ಮೇಲೆ ಸಾರ್ವಜನಿಕರಿಗಿರುವ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿಕ್ಕೆ ಸಾಧ್ಯ.

ಸುದ್ದಿ‌ವಾಹಿನಿಯೊಂದರಲ್ಲಿ‌ ಇದೇ ಪ್ರಕರಣದ ದೃಶ್ಯಗಳನ್ನು ವೀಕ್ಷಿಸಿದ ನಂತರ ಈ ನಿರ್ಧಾರವನ್ನು ಪ್ರಕಟಿಸಿರುವ ಉಚ್ಚ ನ್ಯಾಯಾಲಯ ಕಾನೂನಿಗೂ ಸಹ ಮಾನವೀಯ ಅಂತಃಕರಣವಿರ ಬಲ್ಲದೆಂಬುದನ್ನು ಅನುಮಾನಕ್ಕೆಡೆಯಿಲ್ಲದಂತೆ ತೋರಿಸಿದೆ. ಈ ತೀರ್ಪಿನ ಅನುಸಾರ ಯಾವುದೇ ವ್ಯಕ್ತಿ, ಗುಂಪುಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಂತ್ರಸ್ತೆಯನ್ನು ಭೇಟಿ ಮಾಡಬಾರದು. ಹಾಗೊಂದು‌ ವೇಳೆ ಭೇಟಿ ಮಾಡುವುದಿದ್ದರೆ ಅದಕ್ಕೆ ವೈದ್ಯಾಧಿಕಾರಿಯ ಲಿಖಿತ ಅನುಮತಿ ಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಅನಗತ್ಯವಾಗಿ ಎಲ್ಲರೂ ಭೇಟಿ ನೀಡಿ ಮಾತನಾಡಿಸುವುದು ಸಂತ್ರಸ್ತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನು‌ ಸೂಕ್ಷ್ಮವಾಗಿ ಮನಗಂಡಿರುವ ನ್ಯಾಯಾಲಯದ ಈ‌ ನಿರ್ಧಾರ ಎಲ್ಲರೂ ಒಪ್ಪುವಂತಹದು.

ನ್ಯಾಯಲಯದ ಈ ಆದೇಶವನ್ನೇ ಶಾಶ್ವತ ಕಾನೂನನ್ನಾಗಿ ಪರಿವರ್ತಿಸಿ ಜಾರಿಗೊಳಿಸಿದಲ್ಲಿ ಈ ರೀತಿಯ ಘಟನೆಗಳ ಸಂತ್ರಸ್ತರಿಗಾಗಬಹುದಾದ ಮಾನಸಿಕ ವೇದನೆಯನ್ನು ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡಲು ಸಾಧ್ಯ.

ಕಾನೂನು ಈ‌ ನಿಟ್ಟಿನಲ್ಲಿ ಇನ್ನಷ್ಟು ಬಲಗೊಳ್ಳಲಿ.

  • ಮರೆಯುವ ಮುನ್ನ *

ಒಂದು ಹೆಣ್ಣು ತಾನು ಹಲ್ಲೆಗೆ, ದೌರ್ಜನ್ಯಕ್ಕೆ ಅಥವಾ ಅತ್ಯಾಚಾರಕ್ಕೆ ಒಳಗಾದಂತಹ ಸಂಧರ್ಭಗಳಲ್ಲಿ ಮಾನಸಿಕ ಆಘಾತದಿಂದ ಜರ್ಝ್ಹರಿತಳಾಗಿ ಕುಸಿದು ಹೋಗಿರುತ್ತಾಳೆ. ಆಗ ಆಕೆಗೆ , ಆಕೆಯ ಕುಟುಂಬಕ್ಕೆ ಬೇಕಾಗಿರುವುದು ತನ್ನ ದುಃಖದ ಕಟ್ಟೆಯೊಡೆದು ವೇದನೆಯನ್ನು ಹೊರಹಾಕಬೇಕಾದಂತಹ ಗೊಂದಲರಹಿತ ನಿರ್ಮಲ ವಾತಾವರಣ. ಆದರೆ ನಮ್ಮ ವ್ಯವಸ್ಥೆಯಲ್ಲಿ‌ ಇಂತಹಾ‌ ಘಟನೆಗಳು ಬೆಳಕಿಗೆ ಬಂದ ತಕ್ಷಣವೇ ಅದನ್ನೊಂದು ಟಿ.ಆರ್.ಪಿ.ಯ ಸರಕೆಂಬಂತೆ, ರಾಜಕೀಯ ಲಾಭ ಗಳಿಸಲು ಇರುವ ಸಾಧನದಂತೆ ಅಥವಾ ಪರಸ್ಪರ ಕೆಸರೆರೆಚಾಟದ ವಸ್ತು ವಿಷಯಗಳ ಆಡುಂಬೋಲದಂತೆ ಬಳಸಿಕೊಳ್ಳುತ್ತಿರುವ ಉದಾಹರಣೆಗಳೇ ಹೆಚ್ಚು.

ಇಂತಹಾ ಘಟನೆಗಳಾದಾಗ ಸಂತ್ರಸ್ತೆಗೆ ನ್ಯಾಯ ಒದಗಿಸುವ ಜವಾಬ್ದಾರಿ ಸಾರ್ವಜನಿಕ ಜೀವನದಲ್ಲಿರುವವರದ್ದಾದರೆ , ಇಂತಹಾ ಅಮಾನುಷ ಘಟನೆಯನ್ನು ಬೆಳಕಿಗೆ ತರುವಲ್ಲಿ ಮಾಧ್ಯಮಗಳ ಪಾತ್ರ ಮುಖ್ಯವಾದದ್ದು. ಅದರಲ್ಲಿ ಎರಡು ಮಾತಿಲ್ಲ.

ಆದರೆ ಇವೆಲ್ಲಕ್ಕಿಂತಲೂ ಹೆಚ್ಚಾಗಿ ಇಂತಹಾ ಪ್ರಸಂಗಗಳಲ್ಲಿ ಮಹಿಳೆಯ ಮಾನಸಿಕ ಸ್ಥಿತಿಯ ವೇದನೆಯನ್ನು ಗ್ರಹಿಸುವ ಸೂಕ್ಷ್ಮ ಸಂವೇದನೆ ಎಲ್ಲರಲ್ಲೂ ಇರಬೇಕಾದದ್ದು ಅಪೇಕ್ಷಣೀಯ. ಆದರೆ ಇಂದಿನ ಸೋಷಿಯಲ್ ಮೀಡಿಯಾ ಜ಼ಮಾನಾದಲ್ಲಿ ಆಘಾತಕ್ಕೊಳಗಾದವರ ಬಗೆಗೆ ತಲೆಕೆಡಿಸಿಕೊಳ್ಳದೇ ಅವರ ಸಾಮಾಜಿಕ ಮಾನಾಪಮಾನಗಳಿಗೆ ಕೇರ್ ಮಾಡದೇ ಸ್ವಹಿತಾಸಕ್ತಿ ಕೇಂದ್ರೀಕೃತ ಪರಿಧಿಯೊಳಗೆ ವರ್ತಿಸುವುದರಿಂದಲೇ ಬಹುಶಃ ನ್ಯಾಯಾಲಯ ಇಂತಹಾ ಸೂಕ್ಷ್ಮ ನಿರ್ಧಾರವನ್ನು ಕೈಗೊಂಡಿದ್ದಿರಬಹುದು.

ಸಾಮಾಜಿಕ ಹೊಣೆಗಾರಿಕೆಯಿರುವವರ ಎಲ್ಲರ ಬದ್ದತೆಯೆಂಬುದು ಸಂತ್ರಸ್ತೆಗೆ ನ್ಯಾಯ ಒದಗಿಸಿಕೊಡುವಲ್ಲಿ, ಆಕೆಗಾದ ಅಪಮಾನದ ಆಘಾತದಿಂದ ಹೊರಬಂದು ನವಜೀವನವನ್ನು ರೂಪಿಸಿಕೊಳ್ಳುವಲ್ಲಿ ಸಹಕರಿಸಬೇಕೇ ವಿನಃ ಇಂತಹ ಘಟನೆಗಳಲ್ಲಿ ರಾಜಕಾರಣವನ್ನು ಬೆರೆಸಿ ವೈಭವೀಕರಿಸಬಾರದು. ಪ್ರಾಯಶಃ ಇದೇ ನಿಲುವನ್ನೇ ನ್ಯಾಯಾಲಯ ಪರೋಕ್ಷವಾಗಿ ಎತ್ತಿ‌ ಹಿಡಿದಿದೆ.

ಈ ಹಿನ್ನೆಲೆಯಲ್ಲಿ ನಾರೀಶಕ್ತಿಯ ಭಾವನೆಗಳನ್ನು ಅರಿತು ಅವುಗಳನ್ನು ಗೌರವಿಸಿ ಸ್ವಯಂ ಮುನ್ನಡೆಯಿಟ್ಟಿರುವ ನ್ಯಾಯಾಂಗದ ಶಕ್ತಿಗೆ ಶಿರಬಾಗಿ ನಮಿಸೋಣ.

ಅಷ್ಟೇ ಅಲ್ಲ…. ಸಂತ್ರಸ್ತೆಗೆ ತಕ್ಕ ನ್ಯಾಯ ದೊರೆಯುವ ಮೂಲಕ ನಾಗರಿಕ ಸಮಾಜವೇ ತಲೆತಗ್ಗಿಸುವ ಇಂತಹಾ ಹೇಯ ಕೃತ್ಯಗಳ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಿ ಮುಂದೆ ಈ ರೀತಿಯ ಘಟನೆಗಳಿಗೆ ಕಡಿವಾಣ‌ ಬೀಳಲಿ.

Share This Article
Leave a comment