ಜ್ಞಾನ, ಕೌಶಲ್ಯ ಶಿಕ್ಷಣದ ಪ್ರತಿಬಿಂಬ ಹೊಸ ಶಿಕ್ಷಣ ನೀತಿ ಅವಿಷ್ಕಾರದ ಭರವಸೆ

Team Newsnap
4 Min Read
govind
ಗೋವಿಂದ ಕುಲಕರ್ಣಿ

ನಾವು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕಾಲ ಘಟ್ಟಕ್ಕೆ ಕಾಲಿರಿಸುವ ಹಂತಕ್ಕೆ ಬಂದಿದ್ದೇವೆ. ಶಿಕ್ಷಣದಲ್ಲಿ ಹೊಸ ಭರವಸೆ ನಿರೀಕ್ಷೆಗಳನ್ನು ಹೊತ್ತ ತರುವ ಆಶಯಗಳು ಈ ಶಿಕ್ಷಣ ನೀತಿಯಲ್ಲಿ ಇದೆ ಎಂದು ಭಾವಿಸುವುದಾದರೆ ವಿದ್ಯಾರ್ಥಿಗಳ ಬದುಕು ಬಂಗಾರವಾದೀತು. ಅಜ್ಜ ಹಾಕಿದ ಆಲದ ಮರಕ್ಕೆ ಜೋತು ಬೀಳುವ ಜಾಯಮಾನಕ್ಕೆ ಒಗ್ಗಿಕೊಳ್ಳುವುದರ ಬದಲು ಕಾಲ ಕಾಲಕ್ಕೆ ಬದಲಾವಣೆಯನ್ನು ಒಪ್ಪಿಕೊಂಡು ಜ್ಞಾನ, ಕೌಲಶ್ಯ ಎರಡನ್ನೂ ಪಡೆಯುವ ಮೌಲ್ಯಯುತ ಶಿಕ್ಷಣ ಬೇಕಾಗಿದೆ ಎನ್ನುವ ಅರಿವು ಮಕ್ಕಳು ಹಾಗೂ ಪೋಷಕರಲ್ಲಿ ಬರಬೇಕಾದ ಅನಿವಾರ್ಯತೆಯು ಶಿಕ್ಷಣ ತಜ್ಞರ ಒತ್ತಾಸೆಯೂ ಹೌದು.

ಈಗ ಫಾಸ್ಟ ಫುಡ್ ಕಾಲ. ಬೇಗ ಕಲಿತು, ಬೇಗ ಹಣ, ಹೆಸರು,ಅಧಿಕಾರ ಮಾಡುವ ಗುರಿಯಲ್ಲಿ ದಾರಿ ತಪ್ಪಿ ಹೋಗಿದ್ದೇವೆ. ಭಾರತೀಯ ಸಂಸ್ಕೃತಿ ಮತ್ತು ದೇಶಾಭಿಮಾನ ಜ್ಞಾನ, ಕೌಶಲ್ಯದ ನೆಲೆಗಟ್ಟನ್ನು ನಾವು ಮರೆತರೆ ದಿಕ್ಕು ತಪ್ಪುವ ಸಾಧ್ಯತೆಯೇ ಹೆಚ್ಚು. ಈಗ 2020 ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮಕ್ಕಳ ಕಲಿಕೆಯ ದಾರಿ, ದಿಕ್ಕನ್ನು ಬದಲಿಸುವ ಜೊತೆಯಲ್ಲಿ ಹೊಸ ಅವಿಷ್ಕಾರವನ್ನು ಬರೆಯಲಿದೆ. ಆದರೆ ಭಾರತ ಗ್ರಾಮೀಣ ದೇಶ. ಮೂಲ ಭೂತ ವ್ಯವಸ್ಥೆಗಳು, ಶಿಕ್ಷಕರ ಗುಣ ಮಟ್ಟ, ಪಾಲಕರ ಆಶೋತ್ತರಗಳು, ಮಕ್ಕಳ ಭವಿಷತ್, ಮಕ್ಕಳ ಚಿಂತನೆ ಕುರಿತು ಸಮಗ್ರವಾಗಿ ನೀತಿಗಳನ್ನು ರೂಪಿಸುವುದೇ ನಮ್ಮ ಮುಂದಿರುವ ಬಹು ದೊಡ್ಡ ಸವಾಲು.

ಗುರುವಿನ ಗುಲಾಮನಾಗಬೇಕು

ಗುರು ಹಾಗೂ ದೇವರು ಪ್ರತ್ಯಕ್ಷನಾಗಿ ಶಿಷ್ಯ ಇಲ್ಲವೆ ಭಕ್ತನ ಮುಂದೆ ಬಂದಾಗ ಮೊದಲು ಯಾರಿಗೆ ನಮಸ್ಕಾರ ಮಾಡಬೇಕು ಎಂಬ ಪ್ರಶ್ನೆಗೆ ಸರಳ ಉತ್ತರ ಗುರುವಿಗೆ ಮಾಡುವ ನಮಸ್ಕಾರವೇ ಶ್ರೇಷ್ಠ ಎನ್ನಬಹುದು.
ಗುರುವಿನ ಗುಲಾಮನಾಗದ ತನಕ ದೊರೆಯಣ್ಣ ಮುಕ್ತಿ ಎನ್ನುತ್ತಾರೆ ದಾಸರು ಹಾಗೆ ದೇವರನ್ನು ಕಾಣಲೂ ಕೂಡ ಗುರುವಿನ ಅರಿವು, ಜ್ಞಾನ, ಭಕ್ತಿಯ ಅಘ್ರ್ಯವನ್ನು ಧಾರೆಯಬೇಕು. ಅದು ಗುರುವಿನ ಸಾಕ್ಷಾತ್ಕಾರವೂ ಕಾರಣೀಭೂತವಾಗುತ್ತದೆ. ಪ್ರಾಚೀನ ಕಾಲದಿಂದ ರೂಢಿಗತವಾಗಿ ಬಂದ ಗುರು ಪದವು ಶಿಕ್ಷಕನಾಗಿ ಪರಿವರ್ತನೆಯಾಗಿದೆ. ಜನನಿ ತಾನೆ ಮೊದಲ ಗುರು. ನಂತರ ಜೀವನದುದ್ದಕ್ಕೂ ಅನೇಕ ಶಿಕ್ಷಕರು ನಾಲ್ಕಕ್ಷರ ಕಲಿಸುತ್ತಾರೆ. ಬುದುಕಿನ ದಾರಿ ತೋರಿಸುತ್ತಾರೆ.

ಶಿಕ್ಷಕರಲ್ಲಿನ ಜ್ಞಾನ, ಅನುಭವ, ಪ್ರಭಾವ, ಆದರ್ಶ, ಮಾರ್ಗದರ್ಶನ, ಕಲಿಕೆ, ಶಿಕ್ಷೆ ಹೀಗೆ ಅನೇಕ ಪ್ರಭಾವಗಳು ಶಿಷ್ಯರ ಮೇಲೆ ಇದ್ದೇ ಇರುತ್ತದೆ. ಆದರೆ ಕೆಲವೇ ಶಿಕ್ಷಕರು ಮಾತ್ರ ನೆನಪಿಲ್ಲಿ ಉಳಿಯುತ್ತಾರೆ. ಹಾಗಯೇ ಕೆಲವು ವಿದ್ಯಾರ್ಥಿಗಳು ಮಾತ್ರ ಉನ್ನತ ಸಾಧನೆ ಮಾಡಿ ಗುರುವಿನ ಹೆಸರು ಉಳಿಸುತ್ತಾರೆಂಬುದು ಗಮನಿಸಬೇಕಾದ ಅಂಶ. ಬೆಳೆಯುವ ಸಿರಿ ಮೊಳಕೆಯಲ್ಲಿ ಬೆಳೆಯುವ ಸಿರಿ ಮೊಳೆಕೆಯಲ್ಲ ಪ್ರಖರವಾಗಿರುತ್ತದೆ. ಹಾಗೆಯೇ ಮಗುವಿನಲ್ಲಿ ಅಡಗಿರುವ ಪ್ರತಿಭಾ ಶಕ್ತಿಯನ್ನು ಕಾಲ ಕಾಲಕ್ಕೆ ಶಿಕ್ಷಕರು ಹಾಗೂ ಪಾಲಕರು ಗುರುತಿಸಿ ಪ್ರೋತ್ಸಾಹಿಸುವ ಗುಣ ಇರಬೇಕು. ಗುರು,ಗುರಿ ಮತ್ತು ದಾರಿ ಹಾಗೂ ಮಗುವಿಗೆ ನೀಡುವ ಸಂಸ್ಕಾರ ಭವಿಷ್ಯಕ್ಕೆ ದಾರಿ ದೀಪವಾಗುತ್ತದೆ. ವಿದ್ಯಾರ್ಥಿಗಳ ಮನಸ್ಥಿತಿ ಅರಿತು ಬೌದ್ಧಿಕ ಮತ್ತು ಮಾನಸಿಕ ಪ್ರಬುದ್ಧತೆಯನ್ನು ಸಾಧಿಸುವ ಶಿಕ್ಷಣ ಅಗತ್ಯತೆ ಇದೆ. ಶಿಕ್ಷಣ ಕಲಿಸುವ ಪ್ರಕ್ರಿಯೆ ಈಗ ಬದಲಾವಣೆಯಾಗಿದೆ. ಮೊದಲು ಜ್ಞಾನ ಕೇಂದ್ರಿಕೃತವಾಗಿತ್ತು. ನಂತರ ಶಿಕ್ಷಕರು ಕೇಂದ್ರಿಕೃತವಾದರು. ಈಗ ಮಗುವಿನ ಕೇಂದ್ರಿಕೃತ ಶಿಕ್ಷಣ ಜಾರಿಯಲ್ಲಿದೆ.

ಮಗುವಿನ ಮನೋ ಹಾಗೂ ಕೌಶಲ್ಯ ಆಧಾರಿತ ಶಿಕ್ಷಣ ಕಲಿಸುವ ಪದ್ಧತಿ ಉತ್ತಮ ಬೆಳವಣಿಗೆ. ಶಿಕ್ಷಕರಲ್ಲಿ ಆದರ್ಶಗಳು, ಪಾಲಕರಲ್ಲಿ ಮೌಲ್ಯಿಕ ತತ್ವಗಳು ಹಾಗೂ ಮಕ್ಕಳಿಗೆ ಕಲಿಯಬೇಕು ಎನ್ನುವ ಆಸಕ್ತಿ ಇದ್ದರೆ ಎಂತಹ ಜ್ಞಾನವನ್ನು ಕೂಡ ಕಲಿಸಲು ಸಾದ್ಯ. ಪ್ರತಿ ಶಿಕ್ಷಕನು ಮಗುವಿನ ಸರ್ವಾಂಗೀಣ ಅಭಿವೃದ್ದಿಗೆ ಜ್ಞಾನವನ್ನು ಮಾರ್ಗದರ್ಶನ ನೀಡಬೇಕು. ಅಲ್ಲದೆ ಯಾವುದೇ ಫಲಾಪೇಕ್ಷೆಯಿಲ್ಲದೆ ಜ್ಞಾನ ಧಾರೆ ಎರೆಯುವ ಮನೋಭಾವನೆ ಬರಬೇಕು. ದೇಶ ಕಟ್ಟುವ ಕೆಲಸ ಶಿಕ್ಷಕನದ್ದು ಶಿಕ್ಷಕ ವೃತ್ತಿಗೆ ಅತ್ಯಂತ ಪವಿತ್ರ ಸ್ಥಾನ, ಬೆಲೆಯೂ ಇದೆ. ಹೀಗಾಗಿ ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಶಿಕ್ಷಕ ವೃತ್ತಿಗೆ ಆಯ್ಕೆ ಮಾಡುವಾಗ ಭಾರತೀಯ ಆಡಳಿತ ಸೇವೆಗೆ ಆಯ್ಕೆ ಮಾಡುವ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡುತ್ತಾರೆ. ಕಾರಣ ಶಿಕ್ಷಣದ ಮೂಲ ಸ್ಥರ ಚೆನ್ನಾಗಿದ್ದರೆ ದೇಶ ಕಟ್ಟುವ ಕೆಲಸ ತೀರಾ ಸುಲಭ ಎನ್ನುವುದು ಪಾಶ್ಚಾತ್ಯರ ಅನುಕರಣೀಯ ನಿರ್ಧಾರ. ಯಾಕೆಂದರೆ ಒಬ್ಬ ವೈದ್ಯ ಮೈಮರತೆರೆ ಒಬ್ಬ ರೋಗಿ ಮಾತ್ರ ಸಾಯಬಲ್ಲ, ಎಂಜನಿಯರ್ ತಪ್ಪಿನಿಂದ ಒಂದು ಕಟ್ಟಡ ಕುಸಿಯುತ್ತದೆ. ಅದನ್ನು ಪುನರ್ ನಿರ್ಮಾಣ ಮಾಡಬಹುದು. ಆದರೆ ಶಿಕ್ಷಕ ದಾರಿ ತಪ್ಪಿದರೆ ಅಥವಾ ದಾರಿ ತಪ್ಪಿಸಿದರೆ ಒಂದು ಜನಾಂಗವೇ ದಾರಿ ತಪ್ಪುತ್ತದೆ, ವಿದ್ಯಾರ್ಥಿಗಳ ಬದುಕು ಕತ್ತಲಿನಲ್ಲಿ ಇಟ್ಟಂತಾಗುತ್ತದೆ. ಅರಿವು, ಜ್ಞಾನ, ಬದುಕಿನ ಕೌಶಲ್ಯತೆ ಕಲಿಸುವ ಗುರುವಿನ ಪಾವಿತ್ರತೆ ಬಹಳ ಮುಖ್ಯವಾಗುತ್ತದೆ. ವರ ಕವಿ ದ. ರಾ. ಬೇಂದ್ರೆ ಶ್ರೇಷ್ಠ ಮಾಸ್ತರ ಸಾಲಿಗೆ ಸೇರುತ್ತಾರೆ. ಒಮ್ಮೆ ಧಾರವಾಡದಲ್ಲಿ ತರಕಾರಿ ತರಲು ಮಾರುಕಟ್ಟೆಗೆ ಹೋದಾಗ ಅವರ ಶಿಷ್ಯನೊಬ್ಬ ಗುರುಗಳಿಗೆ ನಮಸ್ಕರಿಸಿ, ಸರ್ ನಾನು ಶಿಷ್ಯ. ನಿಮ್ಮ ಕೈ ಚೀಲವನ್ನು ಹಿಡಿದುಕೊಂಡು ಮನೆಯವರಗೆ ತಂದುಕೊಡಲೆ ಎಂದು ಕೇಳಿದನಂತೆ. ಆಗ ಬೇಂದ್ರಯವರು ನಿನಗೆ ಒಜ್ಜಿ (ಭಾರ,ತೊಂದರೆ) ಆಗದಿದ್ದರೆ ತಗೊಂಬಾ ತಮ್ಮಾ ಎಂದರಂತೆ. ಈ ಮಾತುಗಳಲ್ಲಿ ಮಾಸ್ತರ ಆದರ್ಶದ, ಮಾರ್ಮಿಕ ಉತ್ತರವಿತ್ತು. ಕಷ್ಟಗಳನ್ನು ಸಹಿಸುವ ಸಾಮರ್ಥ್ಯ, ಬದುಕಿನ ಜ್ಞಾನ ಹಾಗೂ ಶತೃಗಳನ್ನು ಗೆಲ್ಲುವ ಯೋಜನೆ ಕುರಿತು ಮ್ಯಾಸಿಡೊನಿಯಾದ ದೊರೆ ಫಿಲಿಫ್ ತನ್ನ ಮಗ ಅಲೆಗ್ಸ್ಯಾಂಡರ್ ಬದುಕುವ ರೀತಿ ಮಾರ್ಗದರ್ಶನ ನೀಡುವ ಬಗೆ ಎಲ್ಲರಿಗೂ ಬೇಕು ಅನಿಸುತ್ತದೆ. ಅರಿಸ್ಟಾಟಲ್ ನಂತಹ ಗುರುಗಳು ದೊರೆತು ಚಿಕ್ಕ ವಯೋಮಾನದಲ್ಲಿ ವಿಶ್ವ ಗುರುತಿಸುವಂತಹ ಸಾಧನೆ ಮಾಡಿದನು. ಆಧುನಿಕ ಶಿಕ್ಷಣ ವ್ಯವಸ್ಥೆ ಭಾರತದ ರಾಷ್ಟ್ರಪತಿಯಾಗಿದ್ದ ಸರ್ವಪಲ್ಲಿ ಡಾ. ರಾಧಾಕೃಷ್ಣನ್ ಶಿಕ್ಷಣದ ಬಗ್ಗೆ ಅಪಾರ ಒಲವು ಇಟ್ಟು ಕೊಂಡವರು. ಪ್ರಾಥಮಿಕ ಶಿಕ್ಷಣ ಮಣ್ಣು ಹಾಗೂ ಮರಳಿನ ಬುನಾದಿಯಾಗಿರಬಾರದು, ಅದು ಇಟ್ಟಿಗೆ ಗಾರೆಯಿಂದ ಭದ್ರ ಬುನಾದಿಯಾಗಿರಬೇಕು.ಅದು ಆಗ ಮಾತ್ರ ಉನ್ನತ ಜ್ಞಾನ ಪಡೆಯಲು ಸಾಧ್ಯ ಎಂದಿದ್ದರು. ಗಾಂಧೀಜಿಯವರು ಮೂಲ ಶಿಕ್ಷಣದ ಕುರಿತು ಮಕ್ಕಳಿಗೆ ಕಲಿಕೆ ಜೊತೆ ವಸ್ತು ತಯಾರಿಕೆ ಮೂಲಕ ಆರ್ಥಿಕ ಸದೃಢತೆ ಸಾಧಿಸುವ ಜಾಣ ತನ ಕಲಿಸಿಕೊಡಬೇಕಿದೆ ಎಂದಿದ್ದರು. ಸನಾತನ ಶಿಕ್ಷಣದ ಗುಣಗಳು ವಿಶಿಷ್ಠವಾಗಿದ್ದವು. ಗುರು, ಶಿಷ್ಯರ ಸಂಬಂಧಗಳು, ಮಾನವೀಯತೆಯ ಗುಣಗಳು, ಸಮಾಜದ ಬಗೆಗಿನ ಕಾಳಜಿಗಳನ್ನು ನಾನಾ ಹಂತದಲ್ಲಿ ಕಲಿಸಿ ಕೊಡುತ್ತಿದ್ದರು. ಅದಕ್ಕೆ ಹೇಳುತ್ತಾರೆ ನಹಿಃ ಜ್ಞಾನೇನ ಸದೃಷ್ಯಂ ವಿದ್ಯಾರ್ಥಿಗಳ ಜ್ಞಾನದ ಹೊರತಾಗಿ ಏನೂ ಬೇಕಿಲ್ಲ. ಈಗ ಕಾಲಕ್ಕೆ ಕೌಶಲ್ಯವೂ ಕೂಡ ಜ್ಞಾನ ಸಮಾನವಾಗಿದೆ. ಅದಕ್ಕಾಗಿ ಗುರು ಮತ್ತು ಗುರಿ ಶ್ರೇಷ್ಠವಾಗಿರಬೇಕು.

Share This Article
5 Comments