December 22, 2024

Newsnap Kannada

The World at your finger tips!

WhatsApp Image 2023 04 16 at 8.05.44 AM

ಕಥೆ.. ಗಾಳಿಮಾತು

Spread the love
WhatsApp Image 2023 04 15 at 2.55.16 PM
-ಸ್ನೇಹಾ ಆನಂದ್ 🌻

ರಾತ್ರಿ ನಿದ್ದೆ ಇಲ್ಲದೆ ಹೊರಳಾಡುತಿದ್ದಳು ಮಧು.. ಇಷ್ಟು ದಿನ ತಾನು ಹೃದಯದೊಳಗೆ ಬಚ್ಚಿಟ್ಟುಕೊಂಡು ಕಾಪಾಡಿದ ವಿಷಯವನ್ನು ಆತ್ಮೀಯ ಗೆಳತಿ ಭರಣಿಯ ಮುಂದೆ ಹೇಳಿದ್ದೇ ತನ್ನ ದೊಡ್ಡ ತಪ್ಪಾಗಿತ್ತು..

ಎಷ್ಟು ಬೇಗ ನನ್ನ ಹೇಗೆ ಬಿಟ್ಟು ಕೊಟ್ಟಳು ಇವಳು ಬೇರೆಯವರ ಮುಂದೆ, ನಾನು ಪೂರ್ತಿಯಾಗಿ ಅವಳನ್ನು ನಂಬಿದ್ದೆ, ಅದಕ್ಕೆ ಮೋಸಮಾಡಿ ಬಿಟ್ಟಳು, ಛೇ ವಿವೇಕನಿಗೆ ಗೊತ್ತಾಗಿದ್ದೆ ತಡ ನನ್ನ ಮೇಲೆ ಎಷ್ಟು ಬೇಸರ ಪಟ್ಟುಕೊಂಡರು, ಬುದ್ಧಿ ಎಲ್ಲಿಟ್ಟಿದ್ದೆ ಅಂತ ಬೈದಾಗ ಕಣ್ಣು ಕೆಳಗೆ ಹಾಕುವಂತಾಯಿತು, ನನ್ನ ಈ ಮುಗ್ಧತನಕ್ಕೆ ನನಗೆ ನಾಚಿಕೆಯಾಗುತ್ತದೆ ಎಂದು ಪೇಚಾಡುತ್ತಾ,ತನ್ನ ಗತ ಜೀವನದ ನೆನಪಿಗೆ ಕಾಲಿಟ್ಟಳು ಮಧು..

ಮದುವೆಯಾಗಿ ತಾನು ಎರೆಡು ವರ್ಷಗಳ ನಂತರ ಮಗುವಿಗಾಗಿ ಚಡಪಡಿಸಿದಾಗ ಅವಳಿಗೆ ಆಘಾತದ ಸುದ್ದಿ ಕಾಯ್ದಿತ್ತು ವೈದ್ಯರಿಂದ..

ಮಗು ಆಗುವ ಸಾಧ್ಯತೆ ಇಲ್ಲವೇ ಇಲ್ಲ ನಿಮಗೆ ಎಂದಾಗ ವೈದ್ಯರು, ಮಧುವಿನ ಗಂಡ ವಿವೇಕ್ ಮಗು ದತ್ತು ತೆಗೆದುಕೊಳ್ಳುವ ಬಗ್ಗೆ ಪೀಠಿಕೆ ಹಾಕಿದ ಶೀಘ್ರ ವಾಗಿ ಅವಳ ಮೃದು ಭಾವನೆಯನ್ನು ಅರ್ಥಮಾಡಿಕೊಂಡು …

ಆದರೆ ಮಧುವಿನ ಒಂದು ಷರತ್ತು ಇತ್ತು , ಮಗು ತಮ್ಮದೇ ಎನಿಸಬೇಕೆಂದರೆ ತಾವು ದತ್ತು ತೆಗೆದುಕೊಂಡ ಬಗ್ಗೆ ತನ್ನ ಮತ್ತು ವಿವೇಕನನ್ನು ಬಿಟ್ಟು ಯಾರಿಗೂ ಈ ವಿಷಯದ ಸುಳಿವೂ ಸಿಗಬಾರದು, ಮನೆಯ ಸದಸ್ಯರೆಲ್ಲರೂ ಕೂಡ ಮಗುವನ್ನು ತಮ್ಮ ವಂಶದ ಕುಡಿ ಎಂದೇ ಭಾವಿಸಿಬೇಕು ಎಂದು ಹೇಳಿದಳು ಗಂಡನಿಗೆ…

ಆಯ್ತು ನಿನ್ನಾಸೆಯಂತೆ ಮಾಡೋಣ ಎಂದು ಪ್ರಯತ್ನ ಪಟ್ಟು ದೂರದ ರಾಜ್ಯಕ್ಕೆ ತನ್ನ ಕೆಲಸವನ್ನು ಬದಲಾವಣೆ ಮಾಡಿಸಿಕೊಂಡ ವಿವೇಕ್..
ಅಲ್ಲಿದ್ದಾಗ ಮಧು ಗರ್ಭಧರಿಸಿದ್ದಾಳೆ ಎಂದು ತಮ್ಮ ಅತ್ತೆ ಮಾವ, ತಂದೆ _ತಾಯಿಗೆ ತಿಳಿಸಿದನು ವಿವೇಕ್, ಅವರೆಲ್ಲರಿಗೂ ಖುಷಿ ತಂದಿತು ಈ ಸಿಹಿ ಸುದ್ದಿ, ಮನೆಗೆ ಬರುವ ಮಗುವಿನ ಆಗಮನಕ್ಕೆ ಕಾಯತೊಡಗಿದರು ಇಬ್ಬರ ಪಾಲಕರು..

ಆದರೆ ಏನೇನೋ ಕಾರಣಗಳನ್ನು ತಿಳಿಸಿ ಅವರ್ಯಾರೂ ತಮ್ಮ ಕಡೆ ಬರದಂತೆ ಮಾಡಿದನು ವಿವೇಕ್…
ಸಮಯಕ್ಕೆ ಸರಿಯಾಗಿ ಏಳು ತಿಂಗಳಿಂದ ಮಗು ದತ್ತು ತೆಗೆದುಕೊಳ್ಳಲು ಹುಡುಕಾಟ ನಡೆಸಿದರು, ಅವರ ಅದೃಷ್ಟ ಕ್ಕೆ ಆಗ ತಾನೇ ಹುಟ್ಟಿದ ಸುಂದರ ಹೆಣ್ಣು ಮಗು ದತ್ತು ಸಿಕ್ಕಾಗ ಇಬ್ಬರೂ ನೆಮ್ಮದಿ ಯ ನಿಟ್ಟುಸುರು ಬಿಟ್ಟರು..

ಆ ಮಗುವನ್ನು ಕರೆದುಕೊಂಡು ಊರಿಗೆ ಹೋಗಿ ಬಾಣಂತನ ಮುಗಿಸಿಕೊಂಡಳು ಮಧು, ಸಂಭ್ರಮದಿಂದ ಮಗುವಿಗೆ ಅನ್ವಿಕಾ ಎಂದು ಹೆಸರಿಟ್ಟರು, ಮನೆಯ ಎಲ್ಲರ ಮುದ್ದಿನ ಕಣ್ಮಣಿಯಾಗಿ ಬೆಳೆದಳು ಅನ್ವಿಕಾ, ಆಶ್ಚರ್ಯವೆಂಬಂತೆ ಮಧುವಿಗಿರುವ ಗುಂಗುರು ಕೂದಲಿನ ಹಾಗೆ ಮಗುವಿಗೂ ಇದ್ದಾಗ ಎಲ್ಲರೂ ನಿನ್ನ ಹಾಗೆಯೇ ಇದೆ ಮಗು ಎಂದಾಗ ಮಧು ಹೆಮ್ಮೆ ಪಟ್ಟಳು..

ಅನ್ವಿಕಾ ಈಗ ಹತ್ತು ವರ್ಷದ ಪುಟ್ಟ ಹುಡುಗಿಯಾಗಿದ್ದಳು, ಅನ್ವಿಕಾಗೆ ಎರೆಡು ವರ್ಷಗಳಿದ್ದಾಗ ಬೆಂಗಳೂರಿನಲ್ಲಿ ಒಂದು ಸುಂದರ ಮನೆ ಖರೀದಿ ಮಾಡಿ ಹೊರ ರಾಜ್ಯದಿಂದ ಬಂದು ನೆಲಸಿದರು ಮಧು ಮತ್ತು ವಿವೇಕ್..

ಪಕ್ಕದ ಮನೆಯಲ್ಲಿದ್ದ ಭರಣಿ, ಮಧುವಿಗೆ ಆತ್ಮೀಯ ಗೆಳತಿಯಾದಳು…
ಭರಣಿಯ ಮಗ ಚಂದನ್ ಐದು ವರುಷದವನಿದ್ದ,ಅನ್ವಿಕಾ ಮತ್ತು ಚಂದನ್ ಅಕ್ಕ ತಮ್ಮರಂತೆ ಬೆಳೆಯತೊಡಗಿದರು…
ಹೀಗೆ ದಿನ ಕಳೆದು ಮಧು ಮತ್ತು ಭರಣಿ ಹೃದಯಕ್ಕೆ ಹತ್ತಿರವಾದ ಗೆಳತಿಯರಾದರು..

ಮಧು ಭರಣಿಯನ್ನು ಬಹಳ ಪ್ರೀತಿಯಿಂದ ಮನಸಿಗೆ ಹಚ್ಚಿಕೊಂಡಳು, ಇಬ್ಬರೂ ತಮ್ಮ ತಮ್ಮ ಮನಸಿನ ಎಷ್ಟೋ ಭಾವನೆಗಳನ್ನು ಹಂಚಿಕೊಂಡು ಹಗುರವಾಗತೊಡಗಿದರು..

ಒಂದು ದಿನ ಮಧು ಹೀಗೆ ಗೆಳತಿಯ ಜೊತೆ ಭಾವನಾತ್ಮಕವಾಗಿ ಮಾತನಾಡುತ್ತಿರುವಾಗ ತನ್ನ “ಹೃದಯದಲ್ಲಿ ಸರ್ಪವನ್ನಿಟ್ಟು ಕಾಯ್ದಂತೆ
ಕಾಯ್ದಿಟ್ಟ” ತಾನು ಮಗಳನ್ನು ದತ್ತು ತೆಗೆದುಕೊಂಡ ವಿಷಯವನ್ನು ಬಹಿರಂಗಗೊಳಿಸಿಬಿಟ್ಟಳು ಗೆಳತಿಯ ಮೇಲಿನ ಅತಿಯಾದ ನಂಬಿಕೆ ಮತ್ತು ಭರವಸೆಯಿಂದ…

ಭರಣಿ ಆಶ್ಚರ್ಯದಿಂದ ಎಲ್ಲಾ ವಿಷಯವನ್ನು ಕೇಳಿ ಭರವಸೆಯ ಮಾತು ಕೊಟ್ಟಳು ನಾನು ಇದರ ಬಗ್ಗೆ ಎಲ್ಲೂ ಹೇಳುವುದಿಲ್ಲವೆಂದು…

ಆದರೆ ಅದು ಅನಾಹುತಕ್ಕೆ ಕಾರಣವಾಗಿತ್ತು..
ಭರಣಿ ಯಾವುದೋ ಸಂದರ್ಭದಲ್ಲಿ ಪಕ್ಕದ ರಸ್ತೆಯಲ್ಲಿದ್ದ ತನ್ನ ತಂಗಿಯ ಮನೆಗೆ ಹೋದಾಗ ಮಧು ದತ್ತು ತೆಗೆದುಕೊಂಡ ವಿಷಯ ತಿಳಿಸಿಬಿಟ್ಟಳು ಮಾತಿನ ಭರಾಟೆಯಲ್ಲಿ, ನಂತರ ಹೆದರಿ ಹತ್ತು ಸಲ ಅವಳಿಗೆ ವಾಯಿದೆ ಮಾಡಿ ಬಂದಳು ಎಲ್ಲೂ ತಿಳಿಸಬೇಡವೆಂದು..

ಆದರೆ ಕಿಡಿ ಹತ್ತಿ ಬಿಟ್ಟಿತ್ತು,ಬೆಂಕಿ ಹತ್ತಲು ತಡವಾಗಲೇ ಇಲ್ಲ, ಸುದ್ದಿ ಓಣಿಯೆಲ್ಲಾ ಓಡಾಡಿ ಮಧುವಿನ ಕಿವಿಗೆ ಕಾದ ಸೀಸದಂತೆ ಬಿದ್ದಾಗ ತತ್ತರಿಸಿ ಹೋದಳು ಮಧು…

ಮಧು ಅಳುತ್ತಾ ಗಂಡನಿಗೆ ವಿಷಯ ತಿಳಿಸಿದಾಗ ಆತ್ಮೀಯತೆಗೂ ಒಂದು “ಪರಿಧಿಯನ್ನು” ಕೊಡಬೇಕು,ಆಗ ಮಾತ್ರ ಬೆಲೆ ಬಾಳುತ್ತದೆ ಗೆಳೆತನ,
ನಿನ್ನ ಹೆತ್ತ ತಾಯಿಗೂ ತಿಳಿಸಿದೇ ಇದ್ದ ವಿಷಯ ನಿನ್ನ ಗೆಳತಿಗೆ ತಿಳಿಸಿದ್ದೀಯಾ ಈಗ ಅನುಭವಿಸು,
ಅನ್ವಿಕಾಗೆ ತಿಳಿದರೆ ಎನು ಗತಿ, ಎಷ್ಟು ನೋವಾಗಬಹುದು ಆ ಎಳೆಯ ಮನಸಿಗೆ ಎನ್ನುವ ಸ್ವಲ್ಪ ವಿವೇಚನೆಯಾದರೂ ಬೇಕಿತ್ತು ನಿನಗೆ, ನಾವು ದತ್ತು ತೆಗೆದುಕೊಳ್ಳುವಾಗ ಷರತ್ತು ಹಾಕಿದವಳು ಕೂಡ ನೀನೇ, ಯಾರಿಗೂ ತಿಳಿಸುವುದು ಬೇಡವೆಂದು , ನಾನು ಅದನ್ನು ಪರಿ ಪಾಲನೆ ಮಾಡುತ್ತಲೇ ಬಂದೆ,
ಈಗ ನೋಡಿದರೆ ನೀನು ಗೆಳತಿಯನ್ನು ಅತಿಯಾಗಿ ನಂಬಿ ಕೆಟ್ಟೆ, ಅನುಭವಿಸು ಎಂದಾಗ ವಿವೇಕ್ , ಮಧು ನೋವಿನಿಂದ ನೊಂದು ಭೂಮಿಗಿಳಿದು ಹೋದಳು…

ಇದೆಲ್ಲವನ್ನೂ ನೆನಪಿಸಿಕೊಂಡು ರಾತ್ರಿ ನಿದ್ದೆಯಿಲ್ಲದೇ ಹೊರಳಾಡುತಿದ್ದ ಮಧು ಇದಕ್ಕೆ ಏನಾದರೂ ಒಂದು ಪರಿಹಾರ ನೀಡಲೇ ಬೇಕೆಂದು ಧೃಡ ನಿರ್ಧಾರ ತೆಗೆದುಕೊಂಡು ಮಲಗಲು ಪ್ರಯತ್ನಿಸಿದಳು…

ಇದೆಲ್ಲವೂ ಘಟನೆ ನಡೆದು ಹದಿನೈದು ದಿನಗಳಾಗಿದ್ದವು..ಮಧು ಭರಣಿಯನ್ನು ಮಾತನಾಡುಸುವುದನ್ನೇ ಬಿಟ್ಟಿದ್ದಳು..ಭರಣಿ ಚಿನ್ನದಂತಹ ತನ್ನ ಗೆಳತಿ ಮಾತನಾಡಿಸಿದೆ ಇದ್ದಾಗ ತತ್ತರಿಸಿ ಹೋದಳು..ಆದರೆ ಮಧು ಅವಳಿಂದ ದೂರ ಇದ್ದು ಏನೂ ಮಾತನಾಡದೆ ಮೌನಿಯಾಗಿದ್ದಳು, ತಾನೇ ಮಾಡಿದ ತಪ್ಪು ಗೆಳತಿಯನ್ನು ಅತಿಯಾಗಿ ನಂಬಿ ಮೋಸಹೋಗಿದ್ದು ಎನಿಸಿತ್ತು ಮಧುವಿಗೆ…

ಒಂದು ದಿನ ಇದ್ದಕ್ಕಿದ್ದ ಹಾಗೆ ದೊಡ್ಡ ಲಾರಿಯೊಂದು ಮಧುವಿನ ಮನೆಯ ಮುಂದೆ ನಿಂತಿತು..ನಾಲ್ಕೈದು ಜನರು ಒಳಗೆ ಹೋಗಿ ಮನೆಯ ಸಾಮಾನುಗಳನ್ನು ಲಾರಿಯಲ್ಲಿ ತುಂಬ ತೊಡಗಿದರು..

ಈಗ ಭರಣಿ ಹೌಹಾರಿ ಹೋದಳು, ಮಧುವಿನ ಮನೆಯೊಳಗೆ ಓಡಿ ಹೋಗಿ , ಏನು ಮಾಡ್ತಾದಿಯಾ ಮಧು, ನನ್ನ ಬಿಟ್ಟು ಎಲ್ಲಿಗೆ ಹೋಗ್ತಿಯಾ, ನೀನಿಲ್ಲದೇ ನಾನು ಹೇಗಿರಲಿ ಹೇಳು, ಇದು ನಿನ್ನ ಪ್ರೀತಿಯ ಸ್ವಂತ ಮನೆ ಕೂಡ, ಜೀವನ ಪೂರ್ತಿ ಜೊತೆಯಾಗಿ ಅಕ್ಕ ,ತಂಗಿಯರ ಹಾಗೆ ಇರೋಣವೆಂದು ಮಾತು ಕೊಟ್ಟಿದ್ದೇ ನೀನು ನನಗೆ ಅಲ್ವಾ ಎಂದಳು ಅಳುತ್ತಾ ಭರಣಿ…

ಆಗ ಮಧು, ಹುಂ ಭರಣಿ ನೀನು ಆ ಮಾತು ಉಳಿಸಿಕೊಳ್ಳಲಿಲ್ಲ, ಆತ್ಮೀಯತೆಗೆ ಮೋಸಮಾಡಿದೆ, ನನ್ನ ಗಂಡನ ಕಣ್ಣಲ್ಲಿ ನಾನು ಸಣ್ಣವಳಾಗಿಬಿಟ್ಟೆ ನಿನ್ನ ಈ ಕೆಲಸದಿಂದ..

ನೀನು ತೂರಿದ ಆ ಗಾಳಿ ಮಾತು ನನ್ನ ಮಗಳ ಕಿವಿ ಸೇರುವ ಒಳಗೆ ನಾನು ಇಲ್ಲಿಂದ ಹೊರಟು ಹೋಗುತ್ತೇನೆ..ಬೇರೆಯವರಿಗೆ ಈ ಮನೆ ಮಾರಿಯಾಗಿದೆ, ನೀನು ಮತ್ತೇ ಅವರ ಜೊತೆಗೆ ಆತ್ಮೀಯತೆ ಬೆಳಸಿಕೋ ಆಯ್ತಾ..!
ಆದರೆ ನನಗೆ ಮಾಡಿದ ದ್ರೋಹ ಅವರಿಗೆ ಮಾಡಬೇಡ ಅಷ್ಟೇ, ನಿನ್ನಲ್ಲಿ ಮನುಷ್ಯತ್ವವಿದ್ದರೆ ಒಳ್ಳೆಯ ನಡತೆಯ ಕಲಿ , ಆ ದೇವರು ನಿನಗೆ ಒಳ್ಳೆಯ ಬುದ್ಧಿ ಕೊಡಲಿ ನೂರು ಕಾಲ ಸುಖವಾಗಿರು ಎಂದು ಹೇಳಿ ವಿವೇಕನ ಜೊತೆಗೆ ಕಾರು ಏರಿ ಹೊರಟೇ ಬಿಟ್ಟಳು ಮಧು…

ಅವರ ಕಾರಿನ ಹಿಂದೆ ಆ ದೊಡ್ಡ ಲಾರಿಯೂ ಕೂಡ ಹೊರಟಿತು, ಭರಣಿ ಭಣಗುಟ್ಟುವ ಆ ಮನೆಯನ್ನು ನೋಡುತ್ತಾ ಕುಸಿದು ಕುಳಿತಳು ಅಳುತ್ತಾ ಮಧುವಿನ ಮನೆಯ ಮುಂದೆ..

ಇದಾಗಿ ಮತ್ತೇ ಹತ್ತು ವರ್ಷಗಳು ಸರಿದು ಹೋದವು,
ತನ್ನ ಚಿನ್ನದಂತಹ ಗುಣವುಳ್ಳ ಗೆಳತಿಗಾಗಿ ಈಗಲೂ ಕಾಯುತ್ತಿದ್ದಾಳೆ ಭರಣಿ ಎಂದಾದರೂ ಭೇಟಿಯಾಗಹುದೆಂದು ,ಮಧುವಿನ ಮನೆಯನ್ನು ದಿಟ್ಟಿಸುತ್ತಾ ಶಬರಿಯಂತೆ ..

ತನ್ನ ತಪ್ಪಿಗೆ ಬೈಯದೆ, ಜಗಳವಾಡಿದೆ, ಒಂದೆರಡು ನೊಂದ ಮಾತುಗಳಾಡಿ ಹೊರಟು ಹೋದಳು ನನ್ನ ಮಧು ಎಂದು ಕೊಳ್ಳುತ್ತಾ ಅದಕ್ಕೆ ದೇವರು ಕೊಟ್ಟ ಶಿಕ್ಷೆ ಇದು ಎಂದುಕೊಂಡು ನಿಟ್ಟುಸುರು ಬಿಡುತ್ತಾಳೆ ಭರಣಿ ಪಶ್ಚಾತಾಪದಿಂದ..

Copyright © All rights reserved Newsnap | Newsever by AF themes.
error: Content is protected !!