ಅಚ್ಚು ಕಟ್ಟು ಅಚ್ಯುತನ್ – ನೂರೊಂದು ನೆನಪು

Team Newsnap
6 Min Read
ಕೆ.ಎನ್.ರವಿ

ಹಿರಿಯ ಪತ್ರಕರ್ತ ಖಾದ್ರಿ ಎಸ್. ಅಚ್ಚುತನ್ ನಿಧನರಾಗಿ ಇಂದಿಗೆ 3 ವರ್ಷಗಳು. ನಾನು ಯಾವುದಕ್ಕೂ ಅವರಿಗೆ ಸರಿಸಾಟಿ ಅಲ್ಲ. ಶಿಸ್ತು, ಹಿರಿತನ, ಅನುಭವ, ತಾಳ್ಮೆ, ಅಚ್ಚು ಕಟ್ಟುತನ , ಅಪಾರ ಜ್ಞಾನ. ಜನ ಬಳಕೆ, ಸಾಮಾಜಿಕ ಚಿಂತನೆಯ ಅನುಷ್ಠಾನದ ಕ್ರಮಗಳು ಹೀಗೆ ನಾನಾ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ನಾನು ಅವರನ್ನು ಮೀರಿಸುವ ಶಕ್ತಿ ಇಲ್ಲದೇ ಹೋದರೂ ಸಹ ನನಗೆ ದ್ರೋಣರು. ನಾನು ಅವರಿಗೆ ಏಕಲವ್ಯ. ಈ ಬಾಂಧವ್ಯವೇ ನಮ್ಮ ಗುಟ್ಟಾಗಿತ್ತು. ಅದು ನನಗೆ ಹೆಮ್ಮೆ.


ಅಚ್ಯುತನ್ ಬದುಕಿನ ಕೊನೆಯ ಐದು ವರ್ಷಗಳ ಕಾಲದ ಹತ್ತಿರದ ಒಡನಾಟ ನಂಗೆ ಬದುಕಿನಲ್ಲಿ ಹೊಸ ಉತ್ಸಾಹ ಮೂಡಿಸಿತ್ತು. ಲವಲವಿಕೆ, ತುಡಿತ, ವಿಫತೆಯನ್ನು ಸೆದೆಬಡಿಯಲು ನಿರಂತರ ಪ್ರಯತ್ನಗಳು ಹೇಗೆ ಮಾಡಬೇಕು ಎನ್ನುವುದು ಕಲಿಸಿದ ಗುರು, ಮಾರ್ಗದರ್ಶಕರು.ಅವರಿಗೆ ಒಂದು ಆಸೆ ಸದಾ ಕಾಡುತ್ತಿತ್ತು. ಅಚ್ಯುತನ್ ಸಾರ್ ತಮ್ಮ ಆಪ್ತರನ್ನು, ಗೆಳೆಯರನ್ನು ಮೇಲುಕೋಟೆಗೆ ಕರೆದುಕೊಂಡು ಹೋಗಿ ತಮ್ಮ ಮನೆ, ಬೆಳೆದ ಸ್ಥಳ, ಚಲುವನಾರಾಯಣ ದರ್ಶನ ನಂತರ ಪುಷ್ಕಳವಾಗಿ ಸಕ್ಕರೆ ಪೊಂಗಲ್, ಪುಳಿಯೋಗರೆ, ಮೊಸರನ್ನ, ಮಜ್ಜಿಗೆ ಹುಳಿ ಊಟ ಹಾಕಿಸಿದರೆ ಸಾಕು ಧನ್ಯತಾ ಭಾವ ಅವರಿಸುತ್ತಿತ್ತು. ಯಾವುದೇ ಚಟದ ಮನುಷ್ಯ ಅಲ್ಲ. ಆದರೆ ಹಠ ಮಾತ್ರ ದಂಡಿಯಾಗಿತ್ತು. ಹಿಡಿದದ್ದನ್ನು ಸಾಧಿಸುವ ಗುಣವನ್ನು ಕೊನೆಯವರೆಗೂ ಸಾಧಿಸಿ ತೋರಿಸಿದರು.
ಈ ಲೋಕ ತ್ಯಜಿಸಿ ಹೋದವರಿಗೆ ಇಲ್ಲಿನ ಲೆಕ್ಕ ಸಿಗುವುದಿಲ್ಲ. ಬದುಕಿದವರು ಲೆಕ್ಕಾ ಹಾಕಿ, ಅವರೊಂದಿಗಿನ ನೆನಪುಗಳನ್ನು ಸವೆಸುವ ಕಾಯಕ ಮಾಡುತ್ತಾರೆ. ಹೀಗಾಗಿಯೇ ಮರೆಯಲಾಗದ ಅಪರೂಪದ ವ್ಯಕ್ತಿತ್ವ ಮತ್ತು ವ್ಯಕ್ತಿ ಎಂದರೆ ಅಚ್ಚುತನ್ ಸಾರ್. ಸಾಮಾಜಿಕ ಕಾಳಜಿ ಇಟ್ಟುಕೊಂಡೇ ಪತ್ರಿಕೋದ್ಯಮದ ಹಾದಿ ತುಳಿದವರು. ಅದೇ ಹಾದಿಯಲ್ಲಿ ನಡೆಯಿರಿ ಎಂದು ಶಿಷ್ಯ ವರ್ಗಕ್ಕೆ ಹೇಳಿಕೊಟ್ಟವರು. ಬದುಕು, ಹೋರಾಟ ಹಾಗೂ ವೃತ್ತಿಯಲ್ಲಿ ಅವರಿಗೆ ವಾರಿಧಿಯಷ್ಟು ಅನುಭವ.


ಗಾಂಧಿ ಎಂದರೆ ಬಲು ಪ್ರೀತಿ. ಗಾಂಧಿ ನಡೆ, ಆಚಾರ ವಿಚಾರ ವನ್ನು ಸಾಕಷ್ಟು ಅಧ್ಯಯನ ಮಾಡಿದ ಅಚ್ಯುತನ್ ರ ಕೂಡ ನಡೆ ನುಡಿಗಳು ಕೂಡ ಸರಳವಾಗಿದ್ದವು. ವಸ್ತ್ರ ವಿನ್ಯಾಸ ಎಲ್ಲವೂ ಗಾಂಧಿ ಅನುಕರಣೆಯಾಗಿತ್ತು. ಜೀವನದಲ್ಲಿ ಹೇಳಿಕೊಳ್ಳಲಾಗದ ಕಷ್ಟಗಳು ಬಂದಾಗಲೂ ನಗು, ನಗುತ್ತಾ ಬದುಕಿ ಆದರ್ಶದ ಸಾಲಿಗೆ ಸೇರಿದವರು. ಸಹಿಸಿಕೊಂಡೇ ಬದುಕಿದವರು.


ಎಲ್ಲಾ ಕ್ಷೇತ್ರದಲ್ಲೂ ಅಚ್ಯುತನ್ ಒಡನಾಡಿಗಳ ಬಳಗವಿದೆ. ಅಚ್ಚುಕಟ್ಟು ಮಾತು, ಶ್ರದ್ಧೆಯಿಂದ ಮಾಡುವ ಕೆಲಸ, ಅಪಾರ ಜ್ಞಾನ, ಭಾಷೆಯ ಮೇಲೆ ಹಿಡಿತ, ತಿಳುವಳಿಕೆ ಜೊತೆಗೆ ಮತ್ತೊಬ್ಬರ ಅನಿಸಿಕೆ, ಅಭಿಪ್ರಾಯಗಳಿಗೆ ಮನ್ನಣೆ ನೀಡಿದರೂ, ತಮಗೆ ಸರಿ ಅನ್ನಿಸಿದ್ದನ್ನೇ ಮಾಡಿ ಮುಗಿಸುವ ಸ್ವಭಾವ ಎಲ್ಲವೂ ಅಚ್ಯುತನ್ ಅವರಲ್ಲಿ ಮಾತ್ರ ಸಮ್ಮಿಲತವಾಗಿತ್ತು. ಹಿಡಿದ ಕೆಲಸವನ್ನು ಸಾಧಿಸಿ ತೋರಿಸುವ ಹುಮ್ಮಸ್ಸು. ಯಾವುದೇ ಕೆಲಸವನ್ನು ಮಾಡುವಾಗಲೂ ಫಾಲೋ ಅಪ್ ಮಾಡುವುದರಲ್ಲಿ ಅಚ್ಯುತನ್ ಎತ್ತಿದ ಕೈ. ಬದುಕಿನ ಕಷ್ಟದ ದಿನಗಳನ್ನು ಸದಾ ಮೆಲುಕು ಹಾಕಿಕೊಂಡೇ ಸುಖವನ್ನು ಅನುಭವಿಸಿದ ಶ್ರಮ ಜೀವಿ. ಅಧಿಕಾರ ಮತ್ತು ಹಣ ಎರಡಕ್ಕೂ ಎಂದೂ ಜೋತು ಬಿದ್ದವರಲ್ಲ. ಧಾರವಾಡ ಆಕಾಶವಾಣಿ ಮತ್ತು ಬೆಂಗಳೂರಿನ ದೂರದರ್ಶನದಲ್ಲಿ, ಉತ್ತರ ಭಾರತದ ರಾಜ್ಯಗಳಲ್ಲೂ ಕೇಂದ್ರ ವಾರ್ತಾ ಇಲಾಖೆಯ ಸುದ್ದಿ ವಿಭಾಗದಲ್ಲಿ ಕೆಲಸ ಮಾಡುವ ಸಮಯದಲ್ಲೂ ಕೂಡ ಸಾಮಾಜಿಕ ಕಳಕಳಿಯಿಂದ ಮಾಡಿದ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಆ ಪಟ್ಟಿ ಮಾಡುವುದೇ ಅಸಾಧ್ಯ.


ಅವರೇ ಹೇಳಿದ್ದು ಒಂದು ಉದಾಹರಣೆ – ಫಿಲಂ ಸೆನ್ಸಾರ್ ಮಂಡಳಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾಗ, ತಮ್ಮ ಚಿತ್ರಗಳನ್ನು ಬೇಗ ಸೆನ್ಸಾರ್ ಮಾಡಿಸಲು ನಿರ್ಮಾಪಕರು
ಗಳು ಕಂತೆ ಗಟ್ಟಲೆ ಹಣ ತಂದು ಕೊಟ್ಟಾಗಲೂ ನಯವಾಗಿ ನಿರಾಕರಿಸಿದ್ದೆ ಎಂದು.
ವೃತ್ತಿ, ಸಂಸಾರ, ಗೆಳೆತನದ ನಂಟು, ಆಪ್ತ ವಲಯ, ಹತ್ತಾರು ಸಂಘ – ಸಂಸ್ಥೆಗಳು, ಬರವಣಿಗೆ , ಭಾಷಾಂತರ ಹೀಗೆ ನಾನಾ ಕ್ಷೇತ್ರಗಳನ್ನು ಲೀಲಾ ಜಾಲವಾಗಿ ನಿಭಾಯಿಸಿಕೊಂಡ ಬರುತ್ತಿದ್ದ ಅಚ್ಯುತನ್ ಅವರ ಆರೋಗ್ಯ- ಆರೈಕೆ, ಕಾಳಜಿ ಎಲ್ಲವನ್ನೂ ಚಾಚೂ ತಪ್ಪದಂತೆ ನೋಡಿಕೊಂಡವರು ಪತ್ನಿ ಯದುಶೈಲ, ಮಗಳು ಸ್ಮಿತಾ. ಆರೋಗ್ಯ ಕೈ ಕೊಟ್ಟಾಗಲೂ ಹಾಸಿಗೆ ಹಿಡಿದು ಮಲಗಲಿಲ್ಲ. ತುಡಿತ ಇದ್ದೇ ಇತ್ತು. ಆ ಕೆಲಸ ಮಾಡಬೇಕು – ಈ ಕೆಲಸ ಮಾಡಬೇಕು ಎನ್ನುವ ಲೆಕ್ಕಾಚಾರ ಹಾಕುವ ಬುದ್ದಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾಗಲೂ ಇತ್ತು. ಆಗಲೂ ಮಗಳೊಂದಿಗೆ ಹಂಚಿಕೊಂಡ ಸಂಗತಿಗಳು ಇಂದಿಗೂ ಅವರನ್ನು ಕಾಡುತ್ತಿವೆ.

ಹಿರಿಯ ಪತ್ರಕರ್ತ ಖಾದ್ರಿ ಅಚ್ಯುತನ್ ಕೊನೆಯ ದಿನಗಳಲ್ಲಿ ಬರೆದ ಬರವಣಿಗೆ ಇಲ್ಲಿದೆ.

ಸವಿ ನುಡಿ – ನಡೆ

ಖಾದ್ರಿ.ಎಸ್.ಅಚ್ಯುತನ್
ತೃಪ್ತಿ ಸಮಾಧಾನಗಳಿಂದ ಮನುಷ್ಯ ಬದುಕಲು ವಿಪುಲ ಪ್ರೇರಣೆಗಳಿವೆ. ಸಾಮಾನ್ಯವಾಗಿ ಜೀವನವನ್ನು ಗೋಜಲು ಮಾಡಿಕೊಳ್ಳಲು ನಾವು ಹೆಚ್ಚು ಗಮನಹರಿಸಿ ಅಮೂಲ್ಯ ಸಮಯ ಹಾಳು ಮಾಡಿಕೊಳ್ಳುತ್ತೇವೆ. ಅನಗತ್ಯ ವಾದವಿವಾದ. ಅದು ಮನೆಯಲ್ಲಾಗಬಹುದು, ಪೇಟೆ ಬೀದಿಯಲ್ಲಿ, ಸಂಚಾರದಲ್ಲಿ, ಕಚೇರಿಗಳಲ್ಲಿ ಕೆಲಸ ಮಾಡುವಾಗ ಇಂತಹ ಪ್ರವೃತ್ತಿ ಹೆಚ್ಚು. ಇದರಿಂದ ನಮ್ಮ ಮನಸ್ಸಿಗೆ ಘಾಸಿಯಾಗುವುದರ ಜತೆಗೆ ಉಳಿದವರಿಗೂ ಕಿರಿಕಿರಿ ಉಂಟು ಮಾಡಿ, ಸಮುದಾಯ ವಾತಾವರಣವನ್ನು ಮಲಿನಗೊಳಿಸಿಬಿಡುತ್ತದೆ. ಇದರ ಬದಲಿಗೆ ಸವಿಮಾತು ಆಡುವವರಿಗೆ ಮಾತ್ರವಲ್ಲದೇ, ಕೇಳುವವರಿಗೂ ಆನಂದ ತರುತ್ತದೆ.

“ ಪ್ರಿಯವಾಕ್ಯ ಪ್ರದಾನೇನ ಸರ್ವೆ ತುಷ್ಯಂತಿ ಜಂತವಃ |ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ ||”
ಅಂದರೆ ಪ್ರಿಯವಾಗಿ ಮಾತುಗಳನ್ನಾಡುವುದರಿಂದ ಎಲ್ಲರಿಗೂ ಸಂತೋಷ. ಆದ್ದರಿಂದ ಅದನ್ನೇ ಆಡಬೇಕು. ಮಾತಿಗೇನು ಬಡತನವೇ. ಇಷ್ಟರ ಮೇಲೆ ನಿನಗೆ ಬಿಟ್ಟದ್ದು ಆಯ್ಕೆ ಎಂಬ ಮಾತು ಹಿರಿಯರಿಂದ ನಮಗೆ ದೊರಕಿರುವ ಹಿತವಚನ. ಬುದ್ಧನೂ ಮಗಧ ದೇಶದ ರಾಜಕುಮಾರ, ರಾಜಕೇಸರಿ ವರ್ಮನಿಗೆ ಹೇಳಿದ ಹಿತನುಡಿ ಕೂಡ ಇದೇ ಆಗಿತ್ತು.
“ಕಹಿ ಅನುಭವ ನೀಡುವ ಯಾವುದನ್ನೂ ಜನ ಮೆಚ್ಚುವುದಿಲ್ಲ. ನೀನು ಎಲ್ಲರನ್ನೂ ತೆಗಳುವುದು, ನಿಂದಿಸುವುದು, ಚುಚ್ಚಿ ಮಾತನಾಡುವುದು ಯಾರಿಗೂ ಇಷ್ಟವಾಗುವುದಿಲ್ಲ. ನಿನ್ನೆ ಈ ನಡೆ ಹೀಗೆಯೇ ಮುಂದುವರಿದರೆ ನೀನೇ ಕಹಿ ಬಳ್ಳಿಯನ್ನು ಕಿತ್ತೆಸೆದಂತೆ ಪ್ರಜೆಗಳೆಲ್ಲಾ ಒಂದಾಗಿ ಈ ದೇಶದಿಂದಲೇ ನಿನ್ನನ್ನು ಗಡಿಪಾರು ಮಾಡಿಬಿಡಬಹುದು. ಅದೇ ಸವಿಮಾತು ಆಡಿದರೆ, ಒಳ್ಳೆಯ ಕೆಲಸ ಮಾಡಿದರೆ ಮಾವಿನ ಹಣ್ಣಿನಂತೆ ಎಲ್ಲರಿಗೂ ಪ್ರಿಯವಾಗುವೆ” ಎಂದ ಬುದ್ಧ. ರಾಜಕುಮಾರ ತನ್ನ ನಡಾವಳಿ ತಿದ್ದಿಕೊಂಡ, ಜನಪ್ರಿಯ ರಾಜನಾದ. ತಾನೂ ನೆಮ್ಮದಿಯಿಂದ ರಾಜ್ಯವಾಳಿದ.
ನಾವೇಕೆ ಸವಿಮಾತು ಆಡುವುದನ್ನು ಅಭ್ಯಾಸ ಮಾಡಿಕೊಳ್ಳಬಾರದು. ಕಂಡ ಮನುಷ್ಯರೆಲ್ಲಾ ವಂಚಕರು, ಕಳ್ಳರು, ಸ್ವಾರ್ಥಿಗಳು ಎಂದೇ ಏಕೆ ಆಲೋಚಿಸಬೇಕು. ಹಾಗೆ ಒಂದು ವೇಳೆ ಅವರಿದ್ದರೂ ಕೂಡ ನಿಮ್ಮ ಸನ್ನಡತೆ ಅವರ ಮೇಲೆ ಪರಿಣಾಮ ಬೀರುವುದಿಲ್ಲವೇ ಅಥವಾ ಬೀರಬಾರದೇ? ನಮ್ಮಲ್ಲಿ ಸದ್ಬೋಧ ಚಂದ್ರಿಕೆ ಅಂದರೆ ಇಂಗ್ಲಿಷ್‍ನ ‘ಸರ್ಮನ್’ ಹೇಳುವುದು ಬಹಳ ವ್ಯಾಪಕ. ನಮ್ಮ ನಡೆಯಲ್ಲಿ ಇದನ್ನು ಏಕೆ ಅಳವಡಿಸಿಕೊಳ್ಳಲಾರೆವು?
ಕವಿ ಪು.ತಿ.ನ ಹೇಳುತ್ತಾರೆ, ‘ಪರೋಪತಾಪವಿಲ್ಲದ ಆನಂದವೇ ನೈಜಾನಂದ ಎಂದು’.
ಈಗಂತೂ ಯೋಗಾಭ್ಯಾಸ ನಮ್ಮ ದೇಶದಲ್ಲಿ ಬಲು ಜನಪ್ರಿಯ. ಹಾಗೆಯೇ ಕೆಲವೊಂದು ಮಾನವ ಪ್ರೇಮಿ ಬಾಬಾಗಳ ಬಗೆಗೂ ಅನನ್ಯ ಭಕ್ತಿ. ಉದಾಹರಣೆಗೆ ಶಿರಡಿ ಬಾಬಾ. ಶಿರಡಿ ಬಾಬಾ ಮನುಷ್ಯ ಪ್ರೇಮದ ಪ್ರತಿರೂಪ. ಆದರೆ ನಾವೀಗ ನಮ್ಮ ಸ್ವಂತದ ಹಿತಕ್ಕೆ ಮಾತ್ರ ಬಾಬಾ ಎಂಬ ಸೀಮಿತ ನೋಟ ಹೊಂದಿದ್ದೇವೆ. ಬಾಬಾ ಬಳಿಗೆ ಹೋದಾಗ ಬೇಡುವುದೇನೂ ಬೇಡ, ಅವನು ಕಾಯುವನು, ದಾರಿತೋರುವನು. ಆದರೆ ನಾವು ಸುವಿಚಾರಿಗಳಾಗಿ ಇರುವುದು ಮುಖ್ಯ.
ಸಹಾಯ ಮಾಡುವುದು ಆಗದೇ ಇರಬಹುದು. ಆದರೆ ಸವಿಮಾತು ಆಡುವುದು ಕಷ್ಟತಮವಲ್ಲ. ಒಮ್ಮೊಮ್ಮೆ ಮಾತೇ ಮೊತ್ತಕ್ಕಿಂತ ಮಿಗಿಲಾಗಿರುತ್ತದೆ. ಇಲ್ಲಿ ಮೊತ್ತ ಎಂದರೆ ಹಣ. ಎಲ್ಲ ಕಾಲದಲ್ಲೂ ಹಣದ ನೆರವೇ ಅಂದರೆ ದಾನವೇ ನಮ್ಮ ಪಾಪ ಪುಣ್ಯದ ಮಾನದಂಡವಾಗದಿರಲಿ. ತೀರಾ ಅಗತ್ಯವಿರುವವನಿಗೆ ನಿಮ್ಮ ಬಳಿ ಕೊಡಲು ಒಂದಿಷ್ಟು ಹೆಚ್ಚು ಹಣವಿದ್ದರೆ ಮತ್ತೆ ಅದು ವಾಪಸ್ ಬರಲಿ ಎಂಬ ನಿರೀಕ್ಷೆ ಇಟ್ಟುಕೊಳ್ಳದೇ ಕೊಟ್ಟುಬಿಡಿ. ಇಲ್ಲವಾದರೆ ಕೊಡುವ ಗೋಜಿಗೇ ಹೋಗಬೇಡಿ. ಇದರಿಂದ ನಿಮಗೆ ನೆಮ್ಮದಿ.
ಸಾಮಾನ್ಯವಾಗಿ ನಾವು ಮನೆಯಲ್ಲೊಂದು, ಬೀದಿಯಲ್ಲೊಂದು ರೀತಿ ನಡೆದುಕೊಳ್ಳುತ್ತೇವೆ. ಇದು ಏಕೆ ಹೀಗೆ? ಮನೆ ಬಿಟ್ಟ ತಕ್ಷಣ, ನಾವೆಲ್ಲಾ ಸ್ವ ಹಿತ, ಸ್ವಂತ ಸುಖ, ಸ್ವಾರ್ಥಸಾಧನೆ, ಈ ಧಾಟಿಯಲ್ಲೇ ಸಾಗುತ್ತೇವೆ.
ಬಸ್‍ನಲ್ಲಿ ಸೀಟು ಹಿಡಿಯುವುದರಿಂದ ಆರಂಭವಾಗಿ ಎಲ್ಲ ನಮ್ಮ ಸಮುದಾಯ ಚಟುವಟಿಕೆಗಳಲ್ಲಿ ಅಂದರೆ ಬಾಬಾ ಬಳಿ ದರ್ಶನಕ್ಕೆ ಹೋದಾಗಲೂ ನಮ್ಮ ಅಹವಾಲು ಮೊದಲಿಗೆ ಸಲ್ಲಿಕೆಯಾಗಿಬಿಡಲಿ ಎಂದು ನುಗ್ಗುತ್ತೇವೆ. ಇದು ಬೇಕಾ? ಸರಿಯಾ?
ಸಣ್ಣ ಸಣ್ಣ ಸಂಗತಿಗಳಾದರೂ, ಇವೆಲ್ಲಾ ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತವೆ. ಬಸ್ ನಿಲ್ದಾಣದಲ್ಲಿ ನಿಲ್ಲುವಾಗ ಪಕ್ಕದಲ್ಲಿ ಯಾರಿದಾರೆ ಎನ್ನುವುದನ್ನು ಮರೆತು ಉಗಿಯುತ್ತೇವೆ. ಅವರಿಗೆ ಇದು ಎಷ್ಟು ಅಸಹ್ಯ ಉಂಟು ಮಾಡುತ್ತದೆ ಎಂಬ ಪರಿವೆಯೂ ನಮಗಿಲ್ಲ. ಹಾಗೆಯೇ ಹೊಟೇಲ್ ಮತ್ತಿತರ ಕಡೆ ಊಟ ಮಾಡಿದ ಮೇಲೆ ಕೈತೊಳೆಯುವಾಗ ಮನೆಯಲ್ಲಿ ಜೋರಾಗಿ ಬಾಯಿ ಒರೆಸಿ ನಾಲಗೆ ತಿಕ್ಕಿಕೊಳ್ಳುವಂತೆ ಹಿಂದೆ ನಿಂತವರಿಗೆ ಕಿರಿಕಿರಿಯಾಗುವಷ್ಟು ಅಸಹ್ಯ ಉಂಟು ಮಾಡುತ್ತೇವೆ.
ಸಣ್ಣ ಸಂಗತಿ ಎಂದು ಇವನ್ನು ಕಡೆಗಣಿಸುವುದರಿಂದ ನಮ್ಮ ವ್ಯಕ್ತಿತ್ವಕ್ಕೂ ಕುಂದು. ನಮ್ಮ ಸಾರ್ವಜನಿಕ ಬದುಕಿಗೂ ಕಳಂಕ. ಹೀಗೆ ನಾನಾ ಸಂಗತಿಗಳು ನಿತ್ಯ ಜೀವನದಲ್ಲಿ ಅಪ್ರಜ್ಞಾಪೂರ್ವಕವಾಗಿ ನಾವು ಮಾಡಿ ಮರೆತುಬಿಡುತ್ತೇವೆ.
ಧ್ಯಾನ, ಉಪಾಸನೆ, ಯೋಗಾಭ್ಯಾಸ, ಇವೆಲ್ಲವೂ ನಮ್ಮ ವೈಯಕ್ತಿಕ ಸ್ವಚ್ಛತೆ ಜತೆಗೆ ಸಾಮೂಹಿಕ ಸ್ವಚ್ಛತೆಗೂ ಇಂಬು ಕೊಟ್ಟರೆ ಬದುಕು ಚೆನ್ನ.
ಸವಿಮಾತಿನೊಡನೆ ನಮ್ಮೆಲ್ಲ ನಿತ್ಯ ನಡೆ ಸವಿಯಾಗಿರುವಂತೆ ನಿಯತ ಪರಿಶ್ರಮ ನಿತ್ಯ ಕಾಯಕವಾಗಿರಲಿ. ಇದು ಒಟ್ಟಂದವಾಗಿ ಸಕಾರಾತ್ಮಕ ವಾತಾವರಣ ನಿರ್ಮಿಸುತ್ತದೆ, ನೆಗಟಿವ್ ಎನರ್ಜಿ ನಿಗ್ರಹಿಸುತ್ತದೆ.

Share This Article
6 Comments