ಶಿವರಾಂಣ್ಣನವರದು ಅರವತೈದು ವರ್ಷಗಳ ಸಿನಿಮಾ ನಂಟು

Team Newsnap
4 Min Read

ಅ.ನಾ.ಪ್ರಹ್ಲಾದರಾವ್

​ನಟ ಎಸ್.ಶಿವರಾಂ ಕನ್ನಡಕ್ಕೆ ಹಲವು ಉತ್ತಮ ಚಲನಚಿತ್ರಗಳನ್ನು ನೀಡಿದ ನಿರ್ಮಾಪಕ ಹಾಗೂ ಉತ್ತಮ ಕಲಾವಿದ. ೧೯೩೮ರಲ್ಲಿ ಮದ್ರಾಸ್ ಪ್ರಾಂತದಲ್ಲಿದ್ದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಗಡಿಯಲ್ಲಿನ ಚೂಡಸಂದ್ರ ಎಂಬ ಹಳ್ಳಿಯಲ್ಲಿ ಜನಿಸಿದರು. ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ (೧೯೪೮) ವಿದ್ಯಾಭ್ಯಾಸ. ಆಗಲೇ ನಾಟಕಗಳ ಬಗ್ಗೆ ಅಭಿಮಾನ. ಬೆಂಗಳೂರಿನಲ್ಲಿ ಕಲ್ಪನಾ ಚಿತ್ರಮಂದಿರವಿದ್ದ ಸ್ಥಳದಲ್ಲಿದ್ದ ಕೆ.ಹಿರಣ್ಣಯ್ಯನವರ ಕೆ.ಎನ್.ಎಸ್.ಥಿಯೇಟರ್‌ನಲ್ಲಿ ನಾಟಕಗಳನ್ನು ವೀಕ್ಷಿಸುತ್ತಿದ್ದರು. ಹಿರಣ್ಣಯ್ಯನವರ ಸ್ಫೂರ್ತಿಯಿಂದ ರೂಪುಗೊಂಡ ಚಿತ್ರ ಕಲಾವಿದರು ನಾಟಕ ಸಂಸ್ಥೆಗೆ ಸೇರಿದರು. ರಾಶಿ ಸಹೋದರರು ಎಂದೇ ಖ್ಯಾತರಾದ ರಾಮನಾಥನ್-ಶಿವರಾಂ ಜೋಡಿಯ ಎಸ್.ರಾಮನಾಥನ್ ಇವರ ಅಣ್ಣ.

gejje pooje

ರಾಮನಾಥನ್ ಕು.ರ.ಸೀತಾರಾಮಶಾಸ್ತ್ರಿಗಳ ಬಳಿ ಸಹಾಯಕ ನಿರ್ದೇಶಕರಾಗಿದ್ದರು. ಮಹಾಕವಿ ಕಾಳಿದಾಸ (೧೯೫೫) ಚಿತ್ರ ಮದರಾಸಿನಲ್ಲಿ ಚಿತ್ರೀಕರಣಗೊಳ್ಳುತ್ತಿದ್ದಾಗ ಚಿತ್ರೀಕರಣಕ್ಕೆ ಅವಶ್ಯವಿದ್ದ ತಂಡವನ್ನು ಕರೆದೊಯ್ಯುವ ಜವಾಬ್ದಾರಿ ಶಿವರಾಂ ಅವರ ಮೇಲೆ ಬಿದ್ದಿತು. ಮದರಾಸಿಗೆ ಹೋದ ಶಿವರಾಂ ಚಲನಚಿತ್ರರಂಗದಲ್ಲಿ ಅವಕಾಶ ಕಲ್ಪಿಸುವಂತೆ ತಮ್ಮ ಅಣ್ಣನವರ ಮೂಲಕ ಕುರಸೀ ಅವರನ್ನು ಕೇಳಿದರು. ಮೊದಲು ವಿದ್ಯಾಭ್ಯಾಸ ಪೂರೈಸಲು ಕುರಸೀ ಹೇಳಿದರು.

ಅಣ್ಣ ತಂಗಿ ಚಿತ್ರಕ್ಕಾಗಿ ಕುರಸಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮಹದಾಸೆಯಿಂದ ೧೯೫೬ರಲ್ಲಿ ಪುನಃ ಶಿವರಾಂ ಮದರಾಸಿಗೆ ತೆರಳಿದರು. ಆದರೆ ಅವಕಾಶ ಸಿಗಲಿಲ್ಲ. ಬೊಮ್ಮನ್ ಡಿ. ಇರಾನಿ ನಿರ್ದೇಶಿಸುತ್ತಿದ್ದ ಶಿವರಾತ್ರಿ ಮಹಾತ್ಮೆ ಚಿತ್ರದಲ್ಲಿ ಕುರಸಿ ಅವರ ಶಿಫಾರಸಿನಿಂದ ಸಹಾಯಕ ನಿರ್ದೇಶಕನಾಗುವ ಅವಕಾಶ ದೊರೆಯಿತು. ನಿರ್ದೇಶನ, ಛಾಯಾಗ್ರಹಣ ಎರಡರಲ್ಲಿಯೂ ತರಬೇತಿ ದೊರೆಯಿತು. ೧೯೬೫ರಲ್ಲಿ ಕುರಸೀ ಅವರ ನಿರ್ದೇಶನದಲ್ಲಿ ತೆರೆಕಂಡ ಬೆರೆತ ಜೀವ ಶಿವರಾಂ ಅವರಿಗೆ ತಿರುವು ನೀಡಿದ ಚಿತ್ರ. ಈ ಚಿತ್ರದ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ ಶಿವರಾಂ ಅವರಿಗೆ ಎರಡನೇ ನಾಯಕನಾಗುವ ಅವಕಾಶ ದೊರೆಯಿತು. ಈ ಚಿತ್ರದಲ್ಲಿ ಶಿವರಾಂ ಉತ್ತಮ ಅಭಿನಯ ನೀಡಿದರು. ಚಿತ್ರಕಥೆಯಲ್ಲಿ ನೆರವಾಗುವುದು, ನಿರ್ದೇಶನದಲ್ಲಿ ಸಹಕರಿಸುವುದು ಸೇರಿದಂತೆ ಚಲನಚಿತ್ರಗಳಲ್ಲಿ ಅಭಿನಯಿಸತೊಡಗಿದರು. ಲಗ್ನಪತ್ರಿಕೆ, ಮುಕ್ತಿ, ನಮ್ಮ ಮಕ್ಕಳು ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದರು. ಮದರಾಸ್ ಟು ಪಾಂಡಿಚೆರಿ ಎಂಬ ತಮಿಳು ಚಿತ್ರವನ್ನು ಕೆಲವು ಗೆಳಯರೊಂದಿಗೆ ಕೂಡಿ ತಯಾರಿಸಿದರು. ಕಲ್ಪನಾ ಈ ಚಿತ್ರದ ನಾಯಕಿ. ಸಹಾಯಕ ನಿರ್ದೇಶಕರಾಗಿ ಅಲ್ಲದೆ ಕೆಲವು ಚಿತ್ರಗಳಲ್ಲಿ ಸಹಾಯಕ ಛಾಯಾಗ್ರಾಹಕರಾಗಿಯೂ ಕೆಲಸ ಮಾಡಿದರು.

​ಶಿವರಾಂ ಹಾಗೂ ಸಹೋದರ ರಾಮನಾಥ್ ಕೂಡಿಕೊಂಡು ೧೯೬೯ರಲ್ಲಿ ಚಿತ್ರಜ್ಯೋತಿ ಎಂಬ ಸಂಸ್ಥೆಯನ್ನು ರೂಪಿಸಿ ಗೆಜ್ಜೆಪೂಜೆ (೧೯೭೦) ಚಿತ್ರ ನಿರ್ಮಿಸಿದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನೀಡಿದರು. ೧೯೬೯-೭೦ರಲ್ಲಿ ಪ್ರಥಮ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಈ ಚಿತ್ರ ಪಡೆದುಕೊಂಡಿತು. ಚಿತ್ರಕ್ಕೆ ಶಿವರಾಂ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದರು. ಮುಂದೆ ರಾಶೀ ಸಹೋದರರು ಹೃದಯ ಸಂಗಮ (೧೯೭೨) ಚಿತ್ರ ನಿರ್ಮಿಸಿದರಲ್ಲದೆ ಈ ಇಬ್ಬರೂ ಕೂಡಿ ಈ ಚಿತ್ರವನ್ನು ನಿರ್ದೇಶಿಸಿದರು. ರಾಜಕುಮಾರ್, ಭಾರತಿ, ಪಂಡರಿಬಾಯಿ ಅಭಿನಯದ ಭಾಗಶಃ ವರ್ಣದ ಈ ಚಿತ್ರದಲ್ಲಿ ಅಭಿನಯಿಸಿದರು. ಚಿತ್ರದಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಉಪಾಸನೆ (೧೯೭೪) ಇವರು ನಿರ್ಮಿಸಿದ ಮತ್ತೊಂದು ಚಿತ್ರ. ಈ ಚಿತ್ರ ೧೯೭೪-೭೫ನೆ ಸಾಲಿನ ಪ್ರಥಮ ಅತ್ಯತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿತು. ರಾಜಕುಮಾರ್, ಲಕ್ಷಿö್ಮ ಅಭಿನಯದ ನಾನೊಬ್ಬ ಕಳ್ಳ (೧೯೭೯) ಇವರು ನಿರ್ಮಿಸಿದ ಮುಂದಿನ ಚಿತ್ರ. ದೊರ-ಭಗವಾನ್ ಈ ಚಿತ್ರದ ನಿರ್ದೇಶಕರು. ರವೀ ನಿರ್ದೇಶನದಲ್ಲಿ ರಾಶಿ ಸಹೋದರರು ನಿರ್ಮಿಸಿದ ಡ್ರೆöÊವರ್ ಹನುಮಂತು (೧೯೮೦) ಚಿತ್ರದಲ್ಲಿ ಶಿವರಾಂ ಅವರಿಗೆ ನಾಯಕ ಪ್ರಧಾನ ಪಾತ್ರ.

shivram 1

​ನಿರ್ದೇಶನ, ಚಿತ್ರ ತಯಾರಿಕೆ ವೃತ್ತಿಯನ್ನು ಬದಿಗಿರಿಸಿದ ಶಿವರಾಂ ಅಭಿನಯದತ್ತಲೇ ಹೆಚ್ಚು ಗಮನಹರಿಸಿದರು. ರಾಜಕುಮಾರ್, ದ್ವಾರಕೀಶ್ ಮುಂತಾದವರ ಚಿತ್ರಗಳಲ್ಲಿ ಹೆಚ್ಚು ಅವಕಾಶ ದೊರೆತವು. ‘ಶರಪಂಜರ’ ಚಿತ್ರದಲ್ಲಿ ಇವರ ಅಡುಗೆ ಭಟ್ಟನ ಅಭಿನಯವನ್ನು ಯಾರೂ ಮರೆಯಲಾರರು. ಹಾಸ್ಯ ಪಾತ್ರಗಳಲ್ಲಿ ತೊಡಗಿಕೊಂಡು ಜನಪ್ರಿಯರಾದರು. ಕಿರುತೆರೆ ಧಾರವಾಹಿಗಳಲ್ಲಿಯೂ ಅಭಿನಯಿಸಿದರು. ಆದರ್ಶ ಫಿಲಂ ಇನ್ಸಿಟ್ಯೂಟ್‌ಗೆ ಅರ್ಧಗಂಟೆಯ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಕಥೆ, ಸಂಭಾಷಣೆ ಸಹ ಇವರದೆ. ನಾಗರಹಾವು, ಶುಭಮಂಗಳ, ಚಲಿಸುವ ಮೋಡಗಳು, ಶ್ರಾವಣ ಬಂತು, ಹಾಲು ಜೇನು, ಹೊಂಬಿಸಿಲು, ಹೊಸ ಬೆಳಕು, ಗುರುಶಿಷ್ಯರು, ಸಿಂಹದಮರಿ ಸೈನ್ಯ, ಮಕ್ಕಳಸೈನ್ಯ ಮುಂತಾದ ಚಲನಚಿತ್ರಗಳಲ್ಲಿ ಅವರ ಪಾತ್ರಗಳು ಜನರ ಮೆಚ್ಚುಗೆ ಪಡೆದವು. ಬರ, ತಾಯಿ ಸಾಹೇಬ ಆಪ್ತಮಿತ್ರ ,ಹುಚ್ಚ ದಂತಹ ಪ್ರಮುಖ ಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದರು. ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಡಾ.ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧರಿಸಿದ ‘ಗೃಹಭಂಗ’ ಟೆಲಿವಿಷನ್ ಧಾರಾವಾಹಿಯಲ್ಲಿ ಗಮನಾರ್ಹ ಪಾತ್ರ ಮಾಡಿದರು. ರವಿಕಿರಣ್ ನಿರ್ದೇಶಿಸಿದ ಬದುಕು ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ,

​ಬಿ.ಕಾಂ. ಪದವೀಧರರಾಧ ಇವರು ಸ್ಟಾಂಪ್ ಹಾಗೂ ನಾಣ್ಯ ಸಂಗ್ರಹ ಹವ್ಯಾಸ ಇರಿಸಿಕೊಂಡಿದ್ದರು. ಬೆಂಗಳೂರಿನ ತಮ್ಮ ಸ್ವಂತ ಮನೆಯಲ್ಲೇ ಒಂದು ಕಲಾಮಂದಿರವನ್ನು ನಿರ್ಮಿಸಿದ್ದ ಪುಸ್ತಕ ಪ್ರಿಯರಾದ ಶಿವರಾಂ ಉತ್ಕೃಷ್ಟ ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ೧೯೯೨ರಲ್ಲಿ ರಾಜ್ಯ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ತಾಯಿ ಸಾಹೇಬ ಚಿತ್ರದಲ್ಲಿ ಇವರ ಅಭಿನಯಕ್ಕಾಗಿ ರಾಜ್ಯ ಸರ್ಕಾರ ೧೯೯೭-೯೮ನೆ ಸಾಲಿನ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ನೀಡಿ ಗೌರವಿಸಿದೆ. ೨೦೧೩ರಲ್ಲಿ ಪದ್ಮಭೂಷಣ ಡಾ ಬಿ ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಸಂದಿದೆ. ಕನ್ನಡ ಚಲನಚಿತ್ರ ಕಲಾವಿದರ ಸಂಘದ ಸ್ಥಾಪಕ ಕಾರ್ಯದರ್ಶಿಗಳಾದ ಶಿವರಾಂ ಆ ಸಂಸ್ಥೆಯ ಬೆಳವಣಿಗಾಗಿ ದುಡಿದಿದ್ದಾರೆ. ಚಿತ್ರರಂಗದಲ್ಲಿ ಶಿವರಾಮಣ್ಣ ಎಂದೇ ಪರಿಚಿತರು. ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಷ್ ಅವರಂತಹ ಮೇರುನಟರೊಂದಿಗೆ ನಿಕಟ ಸಂಪರ್ಕಹೊಂದಿದ್ದರು.

Share This Article
Leave a comment