ಗಾಯಕಿ ಅನನ್ಯ ಭಟ್ ತಂದೆ ಬಂಧನ

Team Newsnap
1 Min Read

ಮಾದೇವ ಹಾಡಿನಿಂದ ಖ್ಯಾತಿಯ ಉತ್ತಂಗಕ್ಕೇರಿದ ಗಾಯಕಿ ಅನನ್ಯ ಭಟ್ ತಂದೆ ವಿಶ್ವನಾಥ್ ಅವರನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಬಂಧಿಸಿದ್ದಾರೆ.

ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಅವರನ್ನು ಕೊಲೆ ಮಾಡಿಸಿದ್ದ ಆರೋಪದಲ್ಲಿ ವಿಶ್ವನಾಥ್ ಭಟ್ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಪರಶಿವಮೂರ್ತಿ ಕೊಲೆಗೆ ವಿಶ್ವನಾಥ್ ಭಟ್ 7 ಲಕ್ಷ ರು.ಗೆ ಸುಪಾರಿ ನೀಡಿದ್ದರು ಎಂಬುದು ವಿಚಾರಣೆ ವೇಳೆ ಬಯಲಾಗಿತ್ತು. ಹೀಗಾಗಿ, ಮೈಸೂರು ಪೊಲೀಸರು ವಿಶ್ವನಾಥ್ ಭಟ್ ಅವರನ್ನು ಬಂಧಿಸಿದ್ದಾರೆ.

ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಕೊಲೆಗಾಗಿ ಇಬ್ಬರನ್ನು ಬಳಸಿಕೊಂಡಿದ್ದ ವಿಶ್ವನಾಥ್ ಭಟ್ ಇದೀಗ ಕಂಬಿ ಎಣಿಸುತ್ತಿದ್ದಾರೆ. ವಿಶ್ವನಾಥ್ ಭಟ್‌ಗೆ ಸಹಶಿಕ್ಷಕ ಪರಶಿವ ಹಾಗೂ ಸ್ನೇಹಿತ ಸಿದ್ದರಾಜು ಸಹಾಯ ಮಾಡಿದ್ದರು. ನಿರಂಜನ್, ನಾಗೇಶ್ ಅವರಿಗೆ ಸುಪಾರಿ ನೀಡಿ ಪರಶಿವಮೂರ್ತಿ ಅವರನ್ನು ಕೊಲೆ ಮಾಡಿಸಲಾಗಿತ್ತು. ಸೆಪ್ಟೆಂಬರ್​ 20ರಂದು ಮೈಸೂರಿನ ನಿವೇದಿತಾ ನಗರದಲ್ಲಿ ಪರಶಿವಮೂರ್ತಿ ಅವರನ್ನು ಕೊಲೆ ಮಾಡಲಾಗಿತ್ತು. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಈ ಕೊಲೆಗೆ ಪರಶಿವಮೂರ್ತಿಯ ಟಾರ್ಚರ್ ಕಾರಣ ಎಂದು ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದ ಪರಶಿವಮೂರ್ತಿ ಪ್ರತಿ ತಿಂಗಳು ಕಮಿಷನ್‌ಗಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದರು ಎಂದು ಕೂಡ ಹೇಳಲಾಗಿದೆ. ಇದರಿಂದ ಮನ ನೊಂದು ಅನನ್ಯಾ ಭಟ್ ಅವರ ತಂದೆ ವಿಶ್ವನಾಥ್ ಭಟ್‌ ಈ ಕೊಲೆಗೆ ಸುಪಾರಿ ನೀಡಿದ್ದರು ಎನ್ನಲಾಗಿದೆ.

ಹೆಂಡತಿ, ಮಗಳಿಂದ ದೂರವಿದ್ದ ಭಟ್

ಎರಡು ವರ್ಷಗಳಿಂದ ಮಗಳು ಅನನ್ಯಾ ಭಟ್‌ ಹಾಗೂ ಹೆಂಡತಿಯನ್ನು ಬಿಟ್ಟು ವಿಶ್ವನಾಥ್ ಭಟ್ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಸೋಜುಗದ ಸೂಜಿಮಲ್ಲಿಗೆ ಹಾಡಿನಿಂದ ಪ್ರಸಿದ್ಧಿ ಪಡೆದಿದ್ದ ಅನನ್ಯಾ ಭಟ್​ ಅನೇಕ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕಿಯಾಗಿದ್ದಾರೆ. ರಾಮ ರಾಮ ರೇ ಸಿನಿಮಾದ ನಮ್ಮ ಕಾಯೋ ದ್ಯಾವನೇ, ಕೆಜಿಎಫ್​ ಸಿನಿಮಾದ ಧೀರ ಧೀರ, ಟಗರು ಸಿನಿಮಾದ ಹೋಲ್ಡ್​ ಆನ್ ಮತ್ತು ಮೆಂಟಲ್ ಹೋ ಜಾವಾ ಮುಂತಾದ ಸೂಪರ್ ಹಿಟ್ ಹಾಡುಗಳನ್ನು ಅನನ್ಯ ಭಟ್ ಹಾಡಿದ್ದಾರೆ.

Share This Article
Leave a comment