ಸೌಂದರ್ಯದಲಿ ಭೇದವೇಕೆ …….

Team Newsnap
2 Min Read
IMG 20180306 WA0008 1 edited
ಡಾ.ಶುಭಶ್ರೀ ಪ್ರಸಾದ್.

ಹೂಗಳಲ್ಲಿ ಎಷ್ಟೊಂದು ವಿಧ, ರೂಪ, ಸುಗಂಧ….  ಒಂದೊಂದು ಹೂವೂ ವಿಭಿನ್ನ ಮತ್ತು ವಿಶಿಷ್ಟ.ಮಲ್ಲಿಗೆಯ ಬಣ್ಣ, ಪರಿಮಳ; ಸಂಪಿಗೆಯ ಕಂಪು ರೂಪು; ಜಾಜಿಯ ಮೈಮರೆಸುವ ಗಂಧ; ವಿಧ ವಿಧದ ಗುಲಾಬಿಯ ಲಾವಣ್ಯ, ಕಮಲದ ಚೆಲುವು, ಪಾರಿಜಾತದ ಸೊಬಗು… ನಾವು ಇಂಥ ಪುಷ್ಪಗಳನ್ನೆಲ್ಲ ಬಲು ಪ್ರೀತಿಯಿಂದ ಆದರಿಸುತ್ತೇವೆ.ದಾಸವಾಳ, ಸೇವಂತಿಗೆ. ಕೇದಗೆ, ತಾಳೆ, ಕಾಕಡ. ಡೇರೆ, ತುಂಬೆ, ಅಶೋಕ ಪುಷ್ಪ. ಕನಕಾಂಬರ, ಮಂದಾರ ಮೊದಲಾದವುಗಳನ್ನು ದೇವರ ಪೂಚೆಗೆ, ಅಪರೂಪಕ್ಕೆ ಕೆಲವನ್ನು ಮುಡಿಯಲು ಬಳಸುತ್ತೇವೆ.ಚೆಂಡು ಹೂವು, ಕಣಿಗಲೆ, ಸ್ಪಟಿಕ, ಶಂಕು ಹೂ, ಸದಾಪುಷ್ಪ ಇನ್ನೂ ಮೊದಲಾದವುಗಳನ್ನು ವಿಧಿಯಿಲ್ಲದಿದ್ದರೆ ಬಳಸುವುದುಂಟು.ಅಂದರೆ ನಾವು ಹೂಗಳನ್ನೂ ಉತ್ತಮ, ಮಧ್ಯಮ, ಅಧಮ ಎನ್ನುವಂತೆ ವರ್ಗೀಕರಿಸಿಬಿಡುತ್ತೇವೆ.ಪಂಚೇಂದ್ರಿಯಗಳಿಗೆ ಹಿತವಾದ, ಸೊಗಸಾದವುಗಳು ಮಾತ್ರ ಶ್ರೇಷ್ಠವೇ? ಎನ್ನುವ ಪ್ರಶ್ನೆ .
ಜನ ನಂಬುವ ಪ್ರಭಾವಿಗಳ ಬಾಯಲ್ಲಿ ‘ಈ ಹೂವು ಇಂಥಾ ದೇವರಿಗೆ ತುಂಬ ಪ್ರೀತಿ. ಅದನ್ನು ಅರ್ಪಿಸಿ ಪ್ರಾರ್ಥಿಸಿದರೆ, ನಿಮ್ಮೆಲ್ಲ ಆಸೆಗಳೂ ಪೂರ್ಣವಾಗುತ್ತದೆ’ ಎಂದು ಹೇಳಿಸಿಬಿಟ್ಟರೆ ಸಾಕು, ತಿರುಗಿಯೂ ನೋಡದ ಪುಷ್ಪಕ್ಕೆ ಎಲ್ಲಿಲ್ಲದ ಬೇಡಿಕೆ ಬಂದು, ಅದರ ಬೆಲೆ ಆಗಸಕ್ಕೆ ಏಣಿ ಇಟ್ಟಂತೆ ಏರತೊಡಗುತ್ತದೆ.ಜಗದಲಿ ಸರ್ವವೂ ಒಂದೊಂದು ರೀತಿಯಲ್ಲಿ ಸೊಗಸೇ. ಪ್ರಕೃತಿಯಲ್ಲಿ ಮೇಲು, ಕೀಳು ಎನ್ನುವುದು ಇಲ್ಲವೇ ಇಲ್ಲ. ಅವೆಲ್ಲಾ ಬುದ್ಧಿವಂತ ಮನುಷ್ಯ ಮಾಡಿಕೊಂಡಿರುವ ವರ್ಗೀಕರಣ.ಉತ್ತರ ಭಾರತದಲ್ಲಿ ಬಿಳಿಯ ಬಣ್ಣದ ದೇವತಾ ಮೂರ್ತಿಗಳ ಪೂಜೆಯಿದೆ. ದಕ್ಷಿಣದಲ್ಲಿ ಕಪ್ಪುಶಿಲೆಯ ದೇವರುಗಳು. ನಾವು ಕರಿಶಿಲೆಯ ದೇವರನ್ನೇ ನೋಡೀ ನೋಡೀ ಅದರಲ್ಲೇ ಸೌಂದರ್ಯವನ್ನು ಕಂಡುಕೊಂಡಿದ್ದೇವೆ. ಹಾಗಾಗಿ ಉತ್ತರ ಭಾರತಕ್ಕೆ ಹೋದಾಗ ಅಲ್ಲಿನ ದೇವರುಗಳು ನಮಗೆ ಎಕ್ಸಿಭಿಷನ್ ದೇವರುಗಳಂತೆ ಕಂಡರೆ ಅಚ್ಚರಿಯಿಲ್ಲ. ಅಂತೆಯೇ ಅವರಿಗೆ ನಮ್ಮ ದೇವತಾ ವಿಗ್ರಹಗಳು..ಕಪ್ಪುಬಣ್ಣದ ಹುಡುಗ/ಗಿಯನ್ನು ತಿರಸ್ಕರಿಸುವ ಸಮಾಜ ದೇವರ ವಿಗ್ರಹಕ್ಕೆ ಕಪ್ಪು ಬಣ್ಣವನ್ನೇ ಬಲು ಪ್ರೀತಿಯಿಂದ ಒಪ್ಪುವುದು ಹೇಗೆ?ಸೌಂದರ್ಯವೆನ್ನುವುದು ನಾವು ಕಲ್ಪಿಸಿಕೊಂಡ / ಆರೋಪಿಸಿಕೊಂಡಿರುವ ಒಂದು ಮಾನದಂಡ. ಕಪ್ಪು ಚಂದವೆಂದು ಚಿಕ್ಕಂದಿನಿಂದ ಹೇಳುತ್ತಾ ಹೋದರೆ ಕಪ್ಪೇ ಚಂದವಾಗಿಬಿಡುತ್ತದೆ.ಝೀರೋ ಸೈಝ್ ಚಂದವೆಂದು ಯಾರೋ ನಿರ್ಧರಿಸಿದರೆಂದು ದಪ್ಪಗಿರುವವರು ಕುರೂಪಿಗಳೆಂದು ಭಾವಿಸಬೇಕಿಲ್ಲ.  ಕಣ್ಣು ಮೂಗು ಬಾಯಿ ಕಿವಿ ಎಲ್ಲವೂ ಹೀಗೆಯೇ ಇದ್ದರೆ ಅಂದವೆಂಬ ಶಾಸನವೇನೂ ಇಲ್ಲ.  ಪ್ರತಿ ಮಾನವನೂ ಪ್ರತಿ ಜೀವಿಯೂ ಒಂದೊಂದು ಸೌಂದರ್ಯದ ಮೂರ್ತಿಯೇ. ಪ್ರತಿಯೊಬ್ಬರಿಗೂ ಅವರದ್ದೇ ಆದ ಒಂದು ರೂಪಿದೆ, ಗುಣವಿದೆ. ಗುಣವೂ ಸೌಂದರ್ಯವೇ. ಅವರ ಸೌಂದರ್ಯವನ್ನು ಗುರುತಿಸಿ ಗೌರವಿಸುವ ದೊಡ್ಡ ಮನಸ್ಸಿರಬೇಕಷ್ಟೇ.ವಿಭಿನ್ನತೆಯೂ ಒಂದು ವೈಶಿಷ್ಟ್ಯವೇ.  ಸೌಂದರ್ಯ ನೋಡುವ ಕಣ್ಣಿನಲ್ಲಿದೆ, ಕಾಣುವ ಮನಸ್ಸಿನಲ್ಲಿದೆ.ಸೌಂದರ್ಯದ ವಿಭಿನ್ನತೆ, ವಿಶಿಷ್ಟತೆಗಳನ್ನು ಗುರುತಿಸದೆ ಭೇದವೆಣಿಸುವುದು ತರವೇ?

Share This Article
4 Comments