ಮಹಾನ್ ವ್ಯಕ್ತಿತ್ವದ ಡಿವಿಜಿ ಗೆ ನಮನಗಳು

Team Newsnap
6 Min Read

ಡಿವಿಜಿಯವರ ಹೆಸರು ನೆನೆಪಿಗೆ ಬರುವುದೇ ಮಂಕುತಿಮ್ಮನ ಕಗ್ಗದ ಮೂಲಕ. ಇದು ಕನ್ನಡ ನಾಡಿನ ಅತ್ಯಮೂಲ್ಯವಾದ ಕೃತಿಗಳಲ್ಲಿ ಒಂದು. ಇಲ್ಲಿ ಸಾಹಿತ್ಯ ಸಂಸ್ಕೃತಿ, ಸಾಮಾಜಿಕ ಸಮಸ್ಯೆ, ರಾಜಕೀಯ ಸ್ಥಿತಿಗಳು, ಜನಸಾಮಾನ್ಯರ ಬದುಕು ಹೀಗೆ ಪ್ರಸ್ತಾಪವಾಗದ ವಿಚಾರವೇ ಇಲ್ಲ. ಈ ಪದ್ಯಗಳು ಜನಸಾಮಾನ್ಯರ ನಾಲಿಗೆಯ ಮೇಲೆ ಸದಾ ಕಾಲ ನಲಿದಾಡುತ್ತಿರುತ್ತವೆ.

ಬದುಕು ಜಟಕಾಬಂಡಿ,
ವಿಧಿ ಅದರ ಸಾಹೇಬ,
ಕುದುರೆ ನೀನ್,
ಅವನು ಪೇಳ್ದಂತೆ ಪಯಣಿಗರು.
ಮದುವೆಗೋ ಮಸಣಕೋ ಹೋಗೆಂದಕಡೆಗೋಡು
ಪದ ಕುಸಿಯೆ ನೆಲವಿಹುದು ಮಂಕುತಿಮ್ಮ

ಅಕ್ಕಿಯೊಳಗನ್ನವನು ಮೊದಲಾರು ಕಂಡವರು?
ಅಕ್ಕರದ ಬರಹಕ್ಕೆ ಮೊದಲಿಗದನಾರು?
ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ,
ದಕ್ಕುವುದೇ ಜಸ ನಿನಗೆ ಮಂಕುತಿಮ್ಮ?

ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ

ಡಿವಿಜಿ ಅವರ ಅನೇಕ ಅನನ್ಯ  ಸಾಧನೆಗಳ ನಡುವೆ ನಮಗೆ ಶ್ರೇಷ್ಠವೆನಿಸಿರುವುದು  ತತ್ವಾಧಾರಿತವಾದ ಅವರ ಕಾವ್ಯಗಳಾದ “ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ” ಗಳೇ  ಎನ್ನುವುದು ಸರ್ವವಿದಿತ. ಪತ್ರಿಕೋದ್ಯಮವೇ ಸರ್ವಸ್ವವೆಂದು ತಿಳಿದಿದ್ದ ಡಿವಿಜಿ ಸಾಹಿತ್ಯ ಲೋಕಕ್ಕೆ ಪಾದವಿರಿಸಿದ್ದು ಮಾತ್ರ ಅನಿರೀಕ್ಷಿತವೇ ಆದರೂ ಅವರೊಬ್ಬ ದಾರ್ಶನಿಕ ಬರಹಗಾರ.                                                                                                                                 
ಕನ್ನಡ ನಾಡಿನ ಸಾಹಿತ್ಯ ಲೋಕದ ಅದ್ವಿತೀಯ ಧ್ರುವತಾರೆ ಡಿವಿಜಿ. ಕನ್ನಡದ ಆಧುನಿಕ ಸರ್ವಜ್ಞ’ ಎಂದೇ ಖ್ಯಾತರಾದ ಇವರ ಪೂರ್ಣ ಹೆಸರು ದೇವನಹಳ್ಳಿ ವೆಂಕಟರಮಣಪ್ಪ ಗುಂಡಪ್ಪ. ಕೋಲಾರದ ಮುಳಬಾಗಿಲಿನ ದೇವನಹಳ್ಳಿ ಗ್ರಾಮದಲ್ಲಿ 1887 ರ ಮಾರ್ಚ್ 17 ಜನಿಸಿದ ಇವರ ಮೂಲಸ್ಥಳ ತಮಿಳುನಾಡಿನ ತಿರುಚಿನಾಪಳ್ಳಿ. ಅಲ್ಲಿಂದ ವಲಸೆಬಂದ ಇವರ  ಮುತ್ತಾತ ಮುಳಬಾಗಿಲಿನ ಶೇಕದಾರರಾಗಿದ್ದರು.

ಶಿಕ್ಷಣ:  

ಚಿಕ್ಕಂದಿನಿಂದಲೂ ಜಾಣ ವಿದ್ಯಾರ್ಥಿಯಾಗಿದ್ದ ಡಿವಿಜಿ 1898ರಲ್ಲಿ ತಮ್ಮ ಹುಟ್ಟೂರಲ್ಲೇ ಲೋಯರ್ ಸೆಕಂಡರಿ ಪಾಸು ಮಾಡಿದರು. ತದನಂತರ ಸಂಬಂಧಿಕರ ಸಹಾಯದಿಂದ ಮೈಸೂರಿನ ಮಹಾರಾಜ ಪ್ರೌಢಶಾಲೆ ಸೇರಿದರು. ಆದರೆ, ಮೆಟ್ರಿಕ್ಯಲೇಷನ್ ಪರೀಕ್ಷೆಯಲ್ಲಿ ನಪಾಸಾದ ಗುಂಡಪ್ಪ ತಮ್ಮ ಶಾಲಾ ಶಿಕ್ಷಣಕ್ಕೆ ಎಳ್ಳುನೀರು ಬಿಟ್ಟರು. ಆದರೆ ಇಂಗ್ಲಿಷ್ ನಲ್ಲಿ ಉತ್ತಮ ಪಾಂಡಿತ್ಯ ಗಳಿಸಿದ್ದೇ ಅವರ ದೊಡ್ಡ ಸಾಧನೆಯಾಗಿತ್ತು. ಈ ನಡುವೆ ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದ ಅವಧಿಯಲ್ಲೇ ಮದುವೆಯಾದ ಡಿವಿಜಿ ಗೆ ಜೀವನ ನಿರ್ವಹಣೆಯೂ ಮುಖ್ಯವಾಗಿತ್ತು. ಅದಕ್ಕಾಗಿ ಅವರು ಮುಳಬಾಗಿಲಿನ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕರಾದರು.

ಇದು ಅವರ ವೃತ್ತಿ ಜೀವನಕ್ಕೆ ಹೊಸದೊಂದು ತಿರುವು ನೀಡಿತು. ಆದರೂ ಅದನ್ನು  ಮುಂದುವರಿಯಲಾಗದೆ ಕೋಲಾರದ ಚಿನ್ನದ ಗಣಿ ಮತ್ತು ಸೋಡಾ ಫ್ಯಾಕ್ಟರಿಯಲ್ಲಿ ದುಡಿದರು. ಅಲ್ಲಿಯೂ ಬಹಳದಿನ ಇರಲಾಗದೆ ಬೆಂಗಳೂರಿಗೆ ಬಂದು ಪಡಲಾರದ ಪಾಡು ಪಟ್ಟರು. ಕೆಲಸಕ್ಕಾಗಿ ಬೀದಿ ಬೀದಿ ಅಲೆದು ಹೈರಾಣಾದರು. ಆದರೆ, ಮೊದಲೇ ವಿವಾಹಿತರಾಗಿದ್ದ ಡಿವಿಜಿ ಗೆ ಕುಟುಂಬದ ನಿರ್ವಹಣೆಗಾದರೂ ದುಡಿಯಲೇಬೇಕಾದ ಅನಿವಾರ್ಯತೆಯಿತ್ತು.  ಹಾಗಾಗಿ ‘ಸೂರ್ಯೋದಯ ಪ್ರಕಾಶಿಕೆ’ ಪತ್ರಿಕೆಯಲ್ಲಿ ವರದಿಗಾರಿಕೆ ಮಾಡಿದರು.ದುರದೃಷ್ಟವಷಾತ್ ಆ ಪತ್ರಿಕೆ ಮುಚ್ಚಿಹೋಯಿತು.

ಈ ನಡುವೆ ಅವರ ಕುಟುಂಬದ ಸ್ಥಿತಿ ಹದಗೆಡುತ್ತಾ ಸಾಗಿತ್ತು. ದಿನನಿತ್ಯದ ಖರ್ಚಿಗಾಗಿಯಾದರೂ ಏನಾದರೂ ಮಾಡಲೇಬೇಕಿದ್ದಾಗ ಕೈಹಿಡಿದದ್ದು ಮಾತ್ರ ಅವರ ಇಂಗ್ಲಿಷ್ ಜ್ಞಾನ ಮಾತ್ರ. ಅವರ ಇಂಗ್ಲಿಷ್ ಪಾಂಡಿತ್ಯ ಅರಿತ ಅನೇಕ ಇಂಗ್ಲಿಷ್ ಪತ್ರಿಕೆಗಳು ಅವರಿಗೆ ಅವಕಾಶದ ದೊಡ್ಡಬಾಗಿಲನ್ನೆ ತೆರೆದವು. ಆ ಪತ್ರಿಕೆಗಳಿಗೆ ಬರೆದು  ಹೆಚ್ಚಿನ ಅನುಭವ ದಕ್ಕಿಸಿಕೊಂಡರು.  ಅಲ್ಲದೆ ಅನೇಕ ಪತ್ರಿಕೆಗಳು, ನಿಯತಕಾಲಿಕೆಗಳಿಗೆ ಇಂಗ್ಲಿಷ್ ಲೇಖನ ಬರೆದು ತಮ್ಮ ಛಾಪನ್ನು ಮೂಡಿಸಿದರು.   ಹೀಗೆ ಸಾಗುತ್ತಿರುವಾಗಲೇ ‘ವೀರಕೇಸರಿ’ ಪತ್ರಿಕೆಯ ಕೆಲಸ ನಿಮಿತ್ತ ಮದ್ರಾಸ್ ಗೆ ಹೋದಾಗ ಪ್ರಖ್ಯಾತ ‘ಹಿಂದೂ’ ಪತ್ರಿಕೆಯ ಸಂಪರ್ಕ ಸಾಧಿಸಿದರು. ಅಲ್ಲಿಂದ ಅವರ ಜೀವನಕ್ಕೆ ಅದೃಷ್ಟ ದೇವತೆಯ ಪ್ರವೇಶ.  ಅಂದಿನ ಪ್ರಸಿದ್ಧ ‘ಮೈಸೂರ್ ಟೈಮ್ಸ್’ ಪತ್ರಿಕೆಯ ಸಹಾಯಕ ಸಂಪಾದಕರಾಗಿ ತಮ್ಮ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲನ್ನು ಮೀರಿನಿಂತರು. 

ಸಾಹಿತ್ಯ: 

ಪತ್ರಿಕೋದ್ಯಮವೇ ಸರ್ವಸ್ವವೆಂದು ತಿಳಿದಿದ್ದ ಡಿವಿಜಿ ಸಾಹಿತ್ಯ ಲೋಕಕ್ಕೆ ಪಾದವಿರಿಸಿದ್ದು ಮಾತ್ರ ಅನಿರೀಕ್ಷಿತವೇ. ಒಮ್ಮೆ ಅಂದಿನ ಮೈಸೂರು ದಿವಾನರಾದ ರಂಗಾಚಾರ್ಲು ಬಗ್ಗೆ ಬರೆದ ಇಂಗ್ಲಿಷ್ ಲೇಖನ ಅವರ ಬದುಕನ್ನು ಹೊಸದಿಕ್ಕಿನತ್ತ ಕೊಂಡೊಯ್ಯಿತು. ಪ್ರಕಟಗೊಂಡ ಈ ಲೇಖನ ಡಿವಿ ಗುಂಡಪ್ಪ ರಿಗೆ ಬೃಹತ್ ಮೊತ್ತದ ಹಣವನ್ನೇ ತಂದುಕೊಟ್ಟಿತು. ಸಹಜವಾಗಿಯೇ ಇದು ಅವರಿಗೆ ಇನ್ನೂ ಹೆಚ್ಚುಬರೆಯಲು ಉತ್ತೇಜನ ನೀಡಿತು.  ಇದರಿಂದ ಲೇಖನ ಬರಹ, ಕಾವ್ಯರಚನೆಯನ್ನು ಮುಖ್ಯಮಾಧ್ಯಮವಾಗಿ ಮಾಡಿಕೊಂಡರು. ಇದಕ್ಕೆ ಅವರ ಇಂಗ್ಲಿಷ್  ಮೇಲಿರುವ ಪ್ರಭುತ್ವವೂ ಕಾರಣ. ಹಾಗಾಗಿ ಅನುವಾದ ಸಾಹಿತ್ಯ ಅವರಿಗೆ ಬಹುದೊಡ್ಡ ಹೆಸರು ನೀಡಿತು. ಹೀಗಾಗಿ ಅವರು ನಾಡಿನಾದ್ಯಂತ ಮನೆಮಾತಾದರು. ಇದು ಡಿವಿಜಿ ಸಾಹಿತ್ಯ ರಚನೆಯಲ್ಲಿ ತೊಡಗಲು ಮತ್ತಷ್ಟು ಸ್ಫೂರ್ತಿ ನೀಡಿತು.ಅಂದಿನಿಂದ  ರಾಜಕೀಯ ವಿಡಂಬನೆ, ವಿಶ್ಲೇಷಣೆ, ತತ್ವಶಾಸ್ತ್ರ, ಧಾರ್ಮಿಕ ವಿಚಾರಗಳು, ಪ್ರಬಂಧ ಮತ್ತು  ಲೇಖನ ರಚನೆಯತ್ತ ಮುಖಮಾಡುವಂತೆ ಮಾಡಿತು. ಈ ಯಶಸ್ಸು ಡಿವಿಜಿಯವರ ಕಷ್ಟದ ಮಗ್ಗುಲು ಬದಲಾಗುವಂತೆ ಮಾಡಿ, ಸುಖದ ಮಗ್ಗುಲ ಪರಿಚಯಿಸಿತು.

ಮೂಲತಃ ಉತ್ತಮ ಪತ್ರಕರ್ತರಾದ ಡಿವಿಜಿ, ಕವಿಗಳು ಹೌದು. ಇವರದು ವೈಚಾರಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಂತಹ ಲೇಖನಗಳ ರಚನೆಯಲ್ಲೂ ಸಿದ್ಧಹಸ್ತ ಪ್ರತಿಭೆ. ಇದಕ್ಕೆ ಅವರ ‘ ಮಹನೀಯರು’ಮತ್ತು ‘ಜ್ಞಾಪಕ ಚಿತ್ರಸಾಲೆ’ ಎಂಬ ವೈಚಾರಿಕ ಪ್ರಜ್ಞೆ ಹರಡುವ ಯಶಸ್ವಿ ಕೃತಿಗಳು ಸಾಕ್ಷೀಭೂತವಾಗಿವೆ.

ಅವರ ಸಮಗ್ರ ಕೃತಿಗಳು:  

ಕವಿತೆ:

ನಿವೇದನ, ಉಮರನ ಒಸಗೆ, ಮಂಕುತಿಮ್ಮನ ಕಗ್ಗ-1, ಮರುಳ ಮುನಿಯನ ಕಗ್ಗ-2, ಶ್ರೀ-ರಾಮ ಪರೀಕ್ಷಣಂ, ಅಂತಃಪುರ ಗೀತೆ, ಗೀತ ಶಾಕುಂತಲಾ,

ನಿಬಂಧಗಳು:

ಜೀವನ ಸೌಂದರ್ಯ ಮತ್ತು ಸಾಹಿತ್ಯ. ಸಾಹಿತ್ಯ ಶಕ್ತಿ. ಸಂಸ್ಕೃತಿ. ಬಾಳಿಗೊಂದು ನಂಬಿಕೆ. ಜ್ಞಾಪಕ ಚಿತ್ರ ಶಾಲೆ.

ನಾಟಕಗಳು:

ವಿದ್ಯಾರಣ್ಯ ವಿಜಯ. ಜಾಕ್ ಕೇಡ್. ಮ್ಯಾಕ್ ಬೆತ್.

ಇತರೆ: ಪುರುಷ ಸೂಕ್ತ. ದೇವರು. ರುತ, ಸತ್ಯ ಮತ್ತು ಧರ್ಮ. ಈಶವಾಸ್ಯ ಉಪನಿಷತ್. ಹಲವು ಮಹಾನೀಯರು. ಮೈಸೂರಿನ ದಿವಾನರು. ಕಲೋಪಾಸಕರು.

ಪ್ರಶಂಸೆ:

ಡಿವಿಜಿ ಅವರನ್ನು ಅವರ ಸಮಕಾಲೀನ ಕವಿಗಳು, ಸಾಹಿತಿಗಳು ಹಾಡಿ, ಹೊಗಳಿರುವುದು ಅವರ ವಿದ್ವತ್ ಪೂರ್ಣ ಬುದ್ಧಿಮತ್ತೆಯ ಅರಿವಾಗುತ್ತದೆ. ಖ್ಯಾತ ಸಾಹಿತಿ ಪ್ರೊ.ಹಾ.ಮಾ.ನಾಯಕರು ಹೇಳುವಂತೆ,”ಸತ್ಯ, ಶಿವ, ಸೌಂದರ್ಯಗಳ ಸಮ್ಮಿಶ್ರಣದ ಸಾಹಿತ್ಯವೇ ಹೌದು”.  ಅಲ್ಲದೆ ಭಾರತೀಯ ಸಾಹಿತ್ಯದ  ಅರಳೀಮರ ಮತ್ತು ವಿದ್ವತ್ ಚಿಂತನೆಯ ರಸವುಳ್ಳ ಋಷಿ. ಈ ನಿಟ್ಟಿನಲ್ಲಿ ಗುಂಡಪ್ಪ ಸಾಹಿತ್ಯ ಬದುಕಿಗೊಂದು ನಂಬಿಕೆ, ಸಾಂತ್ವನ ,ಭರವಸೆ ನೀಡುವಲ್ಲಿ ಸಾರ್ಥಕವಾಗಿದೆ, ಎಂದಿದ್ದಾರೆ.

download 3

ಪತ್ರಕರ್ತ, ಸಾಹಿತಿ, ಕವಿ, ವಿಚಾರವಂತ, ತತ್ವಜ್ಞಾನಿ, ಮಾನವೀಯ ವಿಚಾರಗಳ ಪ್ರತಿಪಾದಕರಾದ ಡಿವಿಜಿ ಅವರಿಗೆ ಸಂದ ಸನ್ಮಾನ, ಗೌರವ ಅನೇಕ. ಅಂಥ ಮಹಾನ್ ಸಾಧಕನಿಗೆ ದೊರೆತ ಪುರಸ್ಕಾರಗಳ ಪಟ್ಟಿ ಇಂತಿದೆ.

  • 1937 ರ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
  • 1965 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಡಿ.ಲಿಟ್. ಗೌರವ ಪದವಿ ಸ್ವೀಕಾರ.
  • 1967 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,   ಶ್ರೀ ಮದ್ಭಗವದ್ಗೀತಾ ತಾತ್ಪರ್ಯ ಗ್ರಂಥಕ್ಕೆ.
  • 1973 ರಲ್ಲಿ ಡಿವಿಜಿ ಸನ್ಮಾನ ಸಮಿತಿ ಯಿಂದ 1 ಲಕ್ಷ ರೂಗಳ ಗೌರವ ಸಮರ್ಪಣೆ.
  • 1974 ರಲ್ಲಿ ಭಾರತದ ನಾಗರಿಕ ಗೌರವವಾದ ‘ಪದ್ಮ ಭೂಷಣ ಪ್ರಶಸ್ತಿ.’.
  • 1935 ರಲ್ಲಿ  ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸ್ಥಾಪನೆ.
  • 1988 ರಲ್ಲಿ ಡಿವಿಜಿ ನೆನಪಿಗಾಗಿ ಅಂಚೆ ಚೀಟಿಯನ್ನು  ಭಾರತ ಸರ್ಕಾರವು ಹೊರತಂದಿತು.

ಕನ್ನಡ ಸಾರಸ್ವತ ಲೋಕಕ್ಕೆ ಅದ್ಭುತ ಕೊಡುಗೆ ನೀಡಿದ ಡಿವಿಜಿ ಅನನ್ಯ ಸಾಧಕರು. ಮಾನವತೆಯ ಪಾಠವನ್ನು ಜಗತ್ತಿಗೆ ಸಾರಿದ ಇವರು 1975 ರ ಅಕ್ಟೋಬರ್ 7ರಂದು ವಿಧಿವಶರಾದರು. ಕಗ್ಗದ ಪದ್ಯಗಳು ಕನ್ನಡದ ಭಗವದ್ಗೀತೆ. ಮಾನವತೆಯ ಉದ್ಧಾರಕ್ಕಾಗಿಯೇ ನೀಡಿದ ಅವರ ಕೊಡುಗೆ ಸದಾ ಸ್ಮರಣೀಯ.ಇಂತಹ ಎಲ್ಲಾ ಕಾಲಕ್ಕೂ ಸಲ್ಲುವ ಪ್ರತಿಭಾಶಕ್ತಿಯ ಡಿವಿಗುಂಡಪ್ಪನವರದು ಬಹುಮುಖಿ ಕಾರ್ಯ.

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ’

ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗದ ಅದ್ಭುತ ಸಾಲುಗಳು. ಇದರರ್ಥ ನಮ್ಮ ಅಸ್ತಿತ್ವದಿಂದ ಇತರರಿಗೆ ಪ್ರಯೋಜವಾಗುವಂತಿರಬೇಕು ಎಂದು. ನಮ್ಮ ಇರುವಿಕೆ ಇತರರಿಗೆ ಪ್ರಯೋಜನವಾಗುವುದಂದರೇನು? ಎಲ್ಲರೊಳಗೊಂದಾಗಿ ಬದುಕುವುದು. ನಮ್ಮ ಅಸ್ತಿತ್ವ ಇತರರನ್ನು ಮತ್ತೆ ಮತ್ತೆ ಕಾಡುವಂತಿರಬೇಕು, ಪದೇಪದೆ ನೆನಪಿಸಿಕೊಳ್ಳುವಂತಿರಬೇಕು. ನಾವು ಮಾಡುವ ಕಾರ್ಯ ಎಲ್ಲರಿಂದಲೂ ಮೆಚ್ಚುಗೆಯಾಗುವಂತಿರಬೇಕು.

Share This Article
Leave a comment