ಮಗಳ‌ ಬಂಧನದ ಪ್ರತೀಕಾರ: ಹಳೇ ವಿಡಿಯೋ ತಾಯಿಯಿಂದಲೇ ವೈರಲ್- ಬಂಧನ !

Team Newsnap
2 Min Read

ಕರ್ನಾಟಕ ಪೊಲೀಸರ ವಿರುದ್ದ ಸುಳ್ಳು ಸುದ್ದಿಯ ವಿಡಿಯೋ ಹರಿಬಿಟ್ಟು, ಪೊಲೀಸ್​ ಇಲಾಖೆಗೆ ಮಸಿ ಬಳಿಯಲು ಮುಂದಾಗಿದ್ದ ಕಾಂಗ್ರೆಸ್ ಕಾರ್ಯಕರ್ತೆಯನ್ನು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಪದ್ಮಾ ಹರೀಶ್ ಬಂಧಿತ ಕಾಂಗ್ರೆಸ್ ಕಾರ್ಯಕರ್ತೆ. 2019 ರಲ್ಲಿ ಬೆಂಗಳೂರಿನಲ್ಲಿ ನಡೆದ ರೌಡಿಶೀಟರ್ ಲಕ್ಷ್ಮಣ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ವರ್ಷಿಣಿ ತಾಯಿಯೇ ಈ ಪದ್ಮಾ ಹರೀಶ್. ಸದ್ಯ ಮಗಳು ಜಾಮೀನು
ಮೇರೆಗೆ ಹೊರಗಿದ್ದರೆ ತಾಯಿ ಈಗ ಜೈಲು ಸೇರಲಿದ್ದಾಳೆ‌.

ಪೋಲಿಸರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಹೀಗೆ ಮಾಡಿರುವುದಾಗಿ ವಿಚಾರಣೆ ವೇಳೆ ಹೇಳಿದ್ದಾಳೆ.

ಉದ್ದೇಶ ಪೂರ್ವಕವಾಗಿಯೇ ಮುಂಬೈನ ಹಳೆ ವಿಡಿಯೋಗೆ ಹಿನ್ನೆಲೆ ಧ್ವನಿ ಸೇರಿಸಿ ಫೇಸ್ ಬುಕ್ ಗೆ ಹರಿಬಿಟ್ಟಿರುವ ಹಿಂದೆ ಬಲವಾದ ಕಾರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ‌.

ಮುಂಬಯಿ ವಿಡಿಯೋ ಈಗ ವೈರಲ್:

ಕೆಲವು ದಿನಗಳ ಹಿಂದೆ ಪೊಲೀಸರು ವ್ಯಕ್ತಿಯೊಬ್ಬನನ್ನು ಹಿಗ್ಗಾಮುಗ್ಗ ಥಳಿಸುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದ್ದು, ಈ ವಿಡಿಯೋ ಕರ್ನಾಟಕದಲ್ಲಿ ಆಗಿದ್ದು, ಕರ್ನಾಟಕದ ಪೊಲೀಸರು ಇಂಥ ಕೃತ್ಯ ಎಸಗಿದ್ದಾರೆ ಎಂದು ಕ್ಯಾಪ್ಷನ್‌ ನೀಡಿ ವೈರಲ್‌ ಆಗುತ್ತಿದೆ. ಅದನ್ನೇ ಸಹಸ್ರಾರು ಮಂದಿ ತಮ್ಮ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡು ಕರ್ನಾಟಕ ಪೊಲೀಸರನ್ನು ನಿಂದಿಸುತ್ತಿದ್ದಾರೆ.

ಈ ವಿಡಿಯೋ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಿದಾಗ 2020ರ ಏ. 20ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಸ್ಥಳೀಯ ಪೊಲೀಸರು ವ್ಯಕ್ತಿಯೊಬ್ಬರಿಗೆ ಹೊಡೆದಿರುವುದು ಗೊತ್ತಾಗಿತ್ತು.

ಈ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಕಂಡುಕೊಂಡು ಆಯುಕ್ತ ಕಮಲ್‌ ಪಂತ್, ಪ್ರಚೋದನೆಗೆ ಕಾರಣವಾಗುವ ಹಾಗೂ ಸುಳ್ಳು‌ ಸುದ್ದಿ ಹಬ್ಬಿಸಿದ್ದ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ಇದರಂತೆ ದಕ್ಷಿಣ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.‌ ಕಮೀಷನರ್ ಸೂಚನೆ ಮೇರೆಗೆ ಸಿಸಿಬಿ ಮಾದಕ ದ್ರವ್ಯ ವಿಭಾಗದ ಇನ್ಸ್​ಪೆಕ್ಟರ್​ ಅಂಜುಮಾಲಾ ನಾಯಕ್ ಹಾಗೂ‌ ಯಲಹಂಕ‌ ಠಾಣೆಯ ಇನ್ಸ್​ಪೆಕ್ಟರ್​ ಸತ್ಯನಾರಾಯಣ್ ನೇತೃತ್ವದಲ್ಲಿ‌‌‌ ಕುಂಬಳಗೋಡು ಸಮೀಪದ ಮಿಲೇನಿಯಂ ಬಿಗ್ರೇಡ್ ಅಪಾರ್ಟ್​ಮೆಂಟ್​ನಲ್ಲಿ ಆರೋಪಿ ಪದ್ಮಾಳನ್ನು ಬಂಧಿಸಿ ನಗರ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಈ ವೇಳೆಗೆ ತಾವೇ ಇದನ್ನು ಮಾಡಿರುವು ದಾಗಿ ಪದ್ಮಾ ತಪ್ಪೊಪ್ಪಿಕೊಂಡಿದ್ದಾರೆ. ಇವರ ಮೂಲಕವೇ ಈ ವಿಡಿಯೋ ಹೋಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲು ಇವರ ಮೊಬೈಲ್ ಅನ್ನು ಪೊಲೀಸರು ಪರಿಶೀಲಿಸಿದ್ದರು.

ಸುದೀರ್ಘ ವಿಚಾರಣೆ ಬಳಿಕ ತಮ್ಮ ತಪ್ಪನ್ನು ಪದ್ಮಾ ಒಪ್ಪಿಕೊಂಡಿದ್ದಾರೆ. ವಿಚಾರಣೆ ವೇಳೆ ಕೊಲೆ ಪ್ರಕರಣದಲ್ಲಿ ಬಂಧಿಸಿದಕ್ಕೆ ಕೋಪಗೊಂಡು ಪೊಲೀಸರಿಗೆ ಅವಮಾನವಾಗುವ ಹಾಗೆ ಹಳೇ ವಿಡಿಯೋಗೆ ಹಿನ್ನೆಲೆ ಧ್ವನಿ ಸೇರಿಸಿ ವೈರಲ್ ಮಾಡಿದೆ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Share This Article
Leave a comment