ರಂಗಮಂದಿರ ಬುಕಿಂಗ್ ಆರಂಭ: ವಿಶೇಷ ಮಾರ್ಗಸೂಚಿ

Team Newsnap
1 Min Read

ರಾಜ್ಯಸರ್ಕಾರವು ರಂಗಮಂದಿರಗಳನ್ನು ತೆರೆಯಲು ನಿರ್ಧರಿಸಿದೆ. ಕನ್ನಡ ಸಂಸ್ಕೃತಿ ಇಲಾಖೆಯು ರಂಗಮಂದಿರಗಳ ಆನ್‌ಲೈನ್ ಬುಕಿಂಗ್ ಅನ್ನು ಆರಂಭಿಸಿದ್ದು, ಅಕ್ಟೋಬರ್ 28 ರಿಂದಲೇ ರಂಗಮಂದಿರಗಳನ್ನು ಬುಕ್ ಮಾಡಬಹುದಾದ ಸೌಲಭ್ಯವನ್ನು ಪ್ರಾರಂಭಿಸಿದೆ. ಆ ಮೂಲಕ ಕಳೆದ ಆರು ತಿಂಗಳಿನಿಂದ ಬಂದ್ ಆಗಿದ್ದ ರಂಗಚಟುವಟಿಕೆಗಳು ಪುನರರಾರಂಭಗೊಳ್ಳಲು ಉತ್ತೇಜನ ನೀಡಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿರುವ ರವೀಂದ್ರ ಕಲಾಕ್ಷೇತ್ರ, ನಯನ ಸಭಾಂಗಣ ಸೇರಿದಂತೆ 16 ರಂಗಮಂದಿರಗಳು ಬುಕಿಂಗ್‌ಗೆ ಲಭ್ಯವಿವೆ. ತಂಡಗಳು ಸಭಾಂಗಣಗಳನ್ನು ಬುಕ್ ಮಾಡಿಕೊಂಡು ಸಾಂಸ್ಕೃತಿಕ ಚಟುವಟಿಕೆ ಪ್ರಾರಂಭಿಸಬಹುದಾಗಿದೆ.

ರಂಗಚಟುವಟಿಕೆ ಪುನರಾರಂಭಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಾರ್ಗಸೂಚಿಯೊಂದನ್ನು ಸಿದ್ಧಪಡಿಸಿದ್ದು, ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿದೆ. ಅನುಮೋದನೆಯ ನಂತರ ಅದನ್ನು ಜಾರಿಗೆ ತರಲಾಗುತ್ತದೆ.

ಮೂಲಗಳ ಪ್ರಕಾರ, ಚಿತ್ರಮಂದಿರಗಳಿಗೆ ವಿಧಿಸಿದಂತೆಯೇ ಒಟ್ಟು ಆಸನ ವ್ಯವಸ್ಥೆಯ 50% ಪ್ರೇಕ್ಷಕರಿಗೆ ಮಾತ್ರ ಅವಕಾಶ, ಕಲಾ ತಂಡಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ, ಸಭಾಂಗಣದಲ್ಲಿ ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಇನ್ನಿತರೆ ನಿಯಮಗಳನ್ನು ಮಾರ್ಗಸೂಚಿ ಒಳಗೊಂಡಿರಲಿದೆ.

ಇನ್ನು ಮುಂದೆ ಸೇವಾ ಸಧನ ಆಪ್ ಮೂಲಕ ರಂಗಮಂದಿರಗಳು, ಸಭಾಂಗಣಗಳನ್ನು ಬುಕ್ ಮಾಡುವ ಸೌಲಭ್ಯ ಲಭ್ಯವಾಗಲಿದೆ. ಕೆಲವರು ಹಲವಾರು ದಿನಗಳಿಗೆ ರಂಗಮಂದಿರಗಳನ್ನು ಬುಕ್ ಮಾಡಿಕೊಳ್ಳುತ್ತಿದ್ದರು. ಆದರೆ ಆನ್‌ಲೈನ್ ಬುಕಿಂಗ್‌ನಿಂದ ಎಲ್ಲರಿಗೂ ಸಮಾನ ಅವಕಾಶ ದೊರೆಯುವ ನಿರೀಕ್ಷೆ ಇದೆ.

ಖಾಸಗಿ ಸಭಾಂಗಣಗಳು ಸದ್ಯಕ್ಕೆ ಆರಂಭಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಸರ್ಕಾರಿ ಅಧೀನದ ರಂಗಮಂದಿರಗಳಲ್ಲಿ ಸದ್ಯಕ್ಕೆ ಸಾಂಸ್ಕೃತಿಕ ಚಟುವಟಿಕೆಗಳು ಆರಂಭವಾಗಲಿವೆ, ಕಾರ್ಯಕ್ರಮಗಳಿಗೆ ಜನ ಸ್ಪಂದನೆ ನೋಡಿಕೊಂಡು ಖಾಸಗಿ ರಂಗಮಂದಿರಗಳು ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.

Share This Article
Leave a comment