” ದುಷ್ಟ ಶಿಕ್ಷಣ ಶಿಷ್ಠ ರಕ್ಷಣೆಯ ” ಸಾರ್ವಜನಿಕ ನಂಬಿಕೆ ಬಲಪಡಿಸಬೇಕು

Team Newsnap
3 Min Read

ಚುನಾಹೊಣೆ….ಹೌದು ಚುನಾಹೊಣೆ………

ಬಹುಶಃ ಭಾರತದ ಪ್ರಜಾಪ್ರಭುತ್ವ ಯಶಸ್ವಿಯಾಗಲು ಈ ಪದ ಬದಲಾವಣೆ ಜೊತೆಗೆ ಜನರ ಮನಸ್ಸುಗಳ ಪರಿವರ್ತನೆ ಹೆಚ್ಚು ಅರ್ಥಪೂರ್ಣ ಎನಿಸುತ್ತದೆ……

ಚುನಾವಣೆ ಮತದಾರರ ಪಾಲಿಗೆ ಚುನಾಹೊಣೆಯಾದರೆ ಜನ ಪ್ರತಿನಿಧಿಗಳ ಪಾಲಿಗೆ ಚುನಾಹೊರೆಯಾಗುತ್ತದೆ……

ಇಲ್ಲದಿದ್ದರೆ ಚುನಾವಣೆಗಳು ಜನರ ಪಾಲಿಗೆ ಚುನಾವಂಚನೆಗಳಾಗುತ್ತವೆ…….

ಇಷ್ಟೊಂದು ಆಧುನಿಕ ಕಾಲದಲ್ಲೂ ನಮ್ಮ ಅರಿವಿನ ಅಂತರದಲ್ಲಿಯೇ ಎಷ್ಟೊಂದು ಪಕ್ಷಪಾತ ಅನ್ಯಾಯ ಅಕ್ರಮ ಕಪಟ ನಾಟಕಗಳು ನಡೆಯುತ್ತಿವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಅವಶ್ಯಕತೆ ಇಲ್ಲ. ಎಲ್ಲವೂ ನೇರಾ ನೇರಾ…..

ಅದಕ್ಕೆ ಕಾರಣ ಜನ ಪ್ರತಿನಿಧಿಗಳ ಆಯ್ಕೆಯ ಚುನಾವಣೆ ಜನರ ಚುನಾಹೊಣೆಯಾಗದೆ ಬೇಜವಾಬ್ದಾರಿ ಮತ್ತು ಹಣ ಹೆಂಡ ಜಾತಿ ಧರ್ಮದ ಅಮಲಿನಲ್ಲಿ ನಡೆಯುತ್ತಿರುವುದರಿಂದ ದಿನೇ ದಿನೇ ಜನರ ಜೀವನಮಟ್ಟ ಕುಸಿಯುತ್ತಿದೆ. ಆಡಳಿತದ ಪಕ್ಷಪಾತ ಕಣ್ಣಿಗೆ ರಾಚುವಂತಿದೆ………

ಇದರಿಂದಾಗಿ…….

ತನ್ನ ಜವಾಬ್ದಾರಿ – ಕರ್ತವ್ಯ – ನಂಬಿಕೆಗಳಲ್ಲಿ ಬಹುತೇಕ ವಿಫಲವಾಗುತ್ತಿರುವ ಭಾರತದ ಕಾನೂನು ( ಆಡಳಿತ ) ಮತ್ತು ದೇವರುಗಳು……..

ಇದೊಂದು ನೇರ ಪ್ರಶ್ನೆ .

” ದುಷ್ಠರಿಗೆ ಶಿಕ್ಷೆ ಶಿಷ್ಠರಿಗೆ ರಕ್ಷೆ “
ಇದು ಯಾರ ಕರ್ತವ್ಯ ?
ದೇವರದೋ ? ಕಾನೂನಿನದೋ ?

ಕೆಲವರ ನಂಬಿಕೆ ಪ್ರಕಾರ ದೇವರದು.
ಮತ್ತೆ ಕೆಲವರ ಅಭಿಪ್ರಾಯ ಕಾನೂನಿನದು.
ಬಹುತೇಕರ ನಿರೀಕ್ಷೆ ಇಬ್ಭರದೂ ?
ಹಾಗಾದರೆ ತಮ್ಮ ಕರ್ತವ್ಯದಲ್ಲಿ ಅವರು ಸಫಲರಾಗಿದ್ದಾರೆಯೇ ?

ಈ ಕ್ಷಣದ ಭಾರತದಲ್ಲಿ ಒಳ್ಳೆಯವರು ನೆಮ್ಮದಿಯಿಂದಲೂ ಕೆಟ್ಟವರು ಜೈಲಿನಲ್ಲೂ ಇದ್ದಾರೆಯೇ ?

ಪ್ರಾಮಾಣಿಕವಾಗಿ ಸಹಜವಾಗಿ ಸರಳವಾಗಿ ಆತ್ಮಸಾಕ್ಷಿಗೆ ಅನುಗುಣವಾಗಿ ಇನ್ನೊಬ್ಬರಿಗೆ ತೊಂದರೆ ಕೊಡದಂತೆ ತಮ್ಮ ಸ್ವಾತಂತ್ರ್ಯ ಅನುಭವಿಸುತ್ತಾ ಇರುವವರು ನೆಮ್ಮದಿಯಾಗಿಯೂ, ಮೋಸ ವಂಚನೆ ಕೊಲೆ ಅತ್ಯಾಚಾರ ಮಾಡುತ್ತಿರುವವರು ನರಳುತ್ತಲೂ ಇದ್ದಾರೆಯೇ ?

ದೀರ್ಘವಾಗಿ ಆಳವಾಗಿ ಯೋಚಿಸಬೇಕಾಗಿದೆ.
ಹಿಂದಿನ ಜನ್ಮದ ಕರ್ಮ – ಮುಂದಿನ ಜನ್ಮದಲ್ಲಿ ಅದರ ಪರಿಣಾಮ ಅನುಭವಿಸುವರು – ಇದು ದೇವರ ಆಟ ಮುಂತಾದ ಪಲಾಯನವಾದ ಪಕ್ಕಕ್ಕಿರಿಸಿ ಇಂದಿನ ವಾಸ್ತವ ಯೋಚಿಸಬೇಕಿದೆ.

ಒಂದು ವ್ಯವಸ್ಥೆ ಯಶಸ್ವಿಯಾಗಲು,…….

ದುಷ್ಠರಿಗೆ ಅವರ ತಪ್ಪಿಗೆ ಒಂದು ಕಾಲಮಿತಿಯಲ್ಲಿ ಶಿಕ್ಷೆಯಾದರೆ ಇತರರು ಮತ್ತೆ ತಪ್ಪು ಮಾಡಲು ಭಯಪಡುತ್ತಾರೆ. ಕೊಲೆ ಅತ್ಯಾಚಾರ ಮೋಸ ಮುಂತಾದ ಭಯಂಕರ ಅಪರಾಧ ಮಾಡಿಯೂ ಕಾನೂನಿನಿಂದ – ದೇವರ ಕಣ್ಣಿನಿಂದ ತಪ್ಪಿಸಿಕೊಂಡು ಎಂದಿನಂತೆ ಸಾರ್ವಜನಿಕ ಜೀವನದಲ್ಲಿ ಉತ್ತಮ ಸ್ಥಾನಮಾನ ಹೊಂದಿ ಬದುಕುತ್ತಿದ್ದರೆ ಸಾಮಾನ್ಯ ಜನರಿಗೆ ಯಾವ ಸಂದೇಶ ರವಾನೆಯಾಗುತ್ತದೆ.

ಕೆಲವು ರಾಜ್ಯಗಳಲ್ಲಿ ಹೆಚ್ಚು ಹೆಚ್ಚು ಕೊಲೆ ಅಪರಾಧ ಮಾಡಿದ ಆಧಾರದಲ್ಲಿ ಅವರಿಗೆ ಅದೇ ಪ್ರಮಾಣದ ಮರ್ಯಾದೆ ಹೆಚ್ಚಾಗುತ್ತದೆ. ಜನರ ಅಭಿಮಾನವೋ ಭಯವೋ ಒಟ್ಟಿನಲ್ಲಿ ಅವರು ಅಪಾರ ಹಣ ಗಳಿಸಿ ರಾಜಕೀಯ ಪ್ರವೇಶಿಸಿ MLA ಗಳಾಗಿ ಕೆಲವರು ಮಂತ್ರಿಗಳಾಗಿಯೂ ಮೆರೆಯುತ್ತಿದ್ದಾರೆ.

ಇನ್ನೊಂದೆಡೆ ಸಮಾಜದ ಒಪ್ಪಿತ ಎಲ್ಲಾ ಮೌಲ್ಯಗಳನ್ನು ಪಾಲಿಸಿತ್ತಾ ಅತ್ಯಂತ ಸಭ್ಯತೆಯಿಂದ ಜೀವಿಸಲು ಪ್ರಯತ್ನಿಸುತ್ತಿರುವವರು ದುಃಖದ ಮಡಿಲಲ್ಲಿ ತೊಳಲಾಡಿತ್ತಿರುವ ಬಹುತೇಕ ಉದಾಹರಣೆ ನಮ್ಮ ಮುಂದಿದೆ.

ಅತ್ಯಂತ ಪ್ರಾಮಾಣಿಕ ಅಧಿಕಾರಿಗಳು ಅಥವಾ ರಾಜಕಾರಣಿಗಳು ಅಥವಾ ಸಾಮಾನ್ಯರು ಇಲ್ಲಿ ಸಹಜವಾಗಿ ಬದುಕುವುದು ಕಷ್ಠ. ದೇವರು ಅಥವಾ ಕಾನೂನು ಅವರನ್ನು ಕಾಪಾಡುವ ಯಾವ ಖಚಿತತೆಯೂ ಇಲ್ಲ. ಹೆಣ್ಣು ಮಕ್ಕಳು ನಿರ್ಭಯವಾಗಿ ಓಡಾಡುವ ಸ್ಥಿತಿಯೇ ಇಲ್ಲ. ಅದೇ ಮೂರೂ ಬಿಟ್ಟವರು ಊರಿಗೇ ದೊಡ್ಡವರು. ಅವರ ಬಳಿ ಹಣ ಅಧಿಕಾರಿ ಗೌರವ ಎಲ್ಲಾ ಇರುತ್ತದೆ.

ಇದು ಮುಂದಿನ ಪೀಳಿಗೆಯ ಜನರಿಗೆ ಯಾವ ಸಂದೇಶ ರವಾನಿಸುತ್ತದೆ. ಈಗಾಗಲೇ ದೇವರ ಮೇಲಿನ ನಂಬಿಕೆ ಶಿಥಿಲವಾಗಿ ಆತನ ಅಸ್ಥಿತ್ವವೇ ಪ್ರಶ್ನಾರ್ಹವಾಗಿದೆ ಮತ್ತು ತನ್ನ ಪ್ರಭಾವ ಕಳೆದುಕೊಂಡು ಕೇವಲ ಆಚರಣೆಗೆ ಸೀಮಿತವಾಗಿದೆ. ದೇವರು ಕೆಟ್ಟವರನ್ನು ಶಿಕ್ಷಿಸುತ್ತಾನೆ ಎಂಬುದು ಸವಕಲು ನಾಣ್ಯದಂತಾಗಿ ಹಾಸ್ಯಾಸ್ಪದವಾಗಿದೆ. ಎಲ್ಲೋ ಕೆಲವರು ಸಣ್ಣಪುಟ್ಟ ಘಟನೆಗಳನ್ನು ಉದಾಹರಣೆ ಸಮೇತ ವಿವರಿಸಿ ದೇವರ ಇರುವಿಕೆ ದೃಢಪಡಿಸಲು ಪ್ರಯತ್ನಿಸುವುದು ಬಿಟ್ಟರೆ ಅದರ ಪ್ರಭಾವ ಮುಸುಕಾಗಿದೆ.

ಕಾನೂನಿನ ಸ್ಥಿತಿ ಕೂಡ ಇದೇ . ಶಕ್ತಿಶಾಲಿಗಳ ಪಾಲಿಗೆ ಮಾತ್ರ ರಕ್ಷಣಾ ಕವಚವಾಗಿದೆ. ಬಡವರ ಗತಿ ಅಧೋಗತಿ.

ಆದ್ದರಿಂದ ವ್ಯವಸ್ಥೆ ಪುನಃ ತನ್ನ ಹಳಿಯ ಮೇಲೆ ಚಲಿಸುವಂತಾಗಲು
” ದುಷ್ಟ ಶಿಕ್ಷಣ ಶಿಷ್ಠ ರಕ್ಷಣೆಯ ” ಸಾರ್ವಜನಿಕ ನಂಬಿಕೆ ಬಲಪಡಿಸಬೇಕಾಗಿದೆ. ತಪ್ಪು ಮಾಡುವವರು ಇಲ್ಲಿಯೇ ನಮ್ಮ ಕಣ್ಣ ಮುಂದೆಯೇ ಶಿಕ್ಷೆ ಅನುಭವಿಸಬೇಕು ಮತ್ತು ಪ್ರಾಮಾಣಿಕರಿಗೆ ಎಲ್ಲಾ ರೀತಿಯ ಪ್ರೋತ್ಸಾಹ ಸಿಗಬೇಕು. ಆಗ ನಮ್ಮನ್ನು ಕಾಡುತ್ತಿರುವ ಬಹುತೇಕ ಸಮಸ್ಯೆಗಳು ತನ್ನಿಂದ ತಾನೇ ಪರಿಹಾರವಾಗುತ್ತದೆ.
ಇಲ್ಲದಿದ್ದರೆ ಕಾನೂನುಗಳು – ದೇವರುಗಳ ಸಂಖ್ಯೆ ಹೆಚ್ಚಾದಂತೆ ಅಪರಾಧಗಳೂ ಹೆಚ್ಚಾಗಿ ಜನ ಅಸಹನೆಯಿಂದ ನರಳುತ್ತಲೇ ಇರುತ್ತಾರೆ.
ಮತ್ತೆ ಅನಾಗರಿಕತೆ ತಾಂಡವವಾಡುತ್ತದೆ…….

ಅದಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಜನ ಪ್ರತಿನಿಧಿಗಳ ಆಯ್ಕೆಯಲ್ಲಿ ಅತ್ಯಂತ ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸಬೇಕಾದ ಸಮಯ ಬಂದಿದೆ. ಜನರನ್ನು ಜಾಗೃತಗೊಳಿಸಬೇಕಿದೆ.

ಅದಕ್ಕಾಗಿಯೇ ಚುನಾವಣೆ ಎಂಬುದು ಚುನಾಹೊಣೆಯಾಗಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ ಎಂಬ ಆಶಯದೊಂದಿಗೆ…..

ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ……

ವಿವೇಕಾನಂದ. ಹೆಚ್.ಕೆ

Share This Article
Leave a comment