ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಿ ದೇವಿಗೆ ಪುಪ್ಷಾರ್ಚನೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Team Newsnap
2 Min Read
President Draupadi Murmu inaugurated the Mysore Dasara ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಿ ದೇವಿಗೆ ಪುಪ್ಷಾರ್ಚನೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಸಾಂಸ್ಕೃತಿಕ ನಗರಿ ಮೈಸೂರು ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ವಿಶ್ವವಿಖ್ಯಾತವಾಗಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2022ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಳ್ಳಿ ಪಲ್ಲಕ್ಕಿಯಲ್ಲಿನ ನಾಡದೇವಿ ತಾಯಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಆರತಿ ಬೆಳಗಿ, ಪುಷ್ಪಾರ್ಚನೆಗೈದು ನಮಿಸಿ, ದೀಪ ಬೆಳಗುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.

ಬೆಳಿಗ್ಗೆ 9.45 ರಿಂದ‌ 10.05ರ ವೃಶ್ಚಿಕ ಲಗ್ನದಲ್ಲಿ ಸಾಂಪ್ರದಾಯಿಕ, ವೈಭವಯುತವಾದ ದಸರಾ ಮಹೋತ್ಸವಕ್ಕೆ ಚಾಲನೆ ಲಭಿಸಿತು. ಬಳಿಕ ನಾಡಗೀತೆ ಮೊಳಗಿತು. ಇದನ್ನು ಓದಿ – ಆಮ್ಲಜನಕ ಕೊರತೆ: ಜಮ್ಮು-ಕಾಶ್ಮೀರದಲ್ಲಿ ಬೀದರ್ ನ ಯೋಧ ಹುತಾತ್ಮ 

ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಿದ್ದಂತೆಯೇ ಮೊದಲು ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆ ತೆರಳಿದ ರಾಷ್ಟ್ರಪತಿಗಳು ತಾಯಿಯ ದರ್ಶನ ಪಡೆದರು. ದೇವಸ್ಥಾನವನ್ನು ವೀಕ್ಷಿಸಿದರು. ದೇವಸ್ಥಾನದ ಕುರಿತು ಮಾಹಿತಿ ಪಡೆದುಕೊಂಡರು.

ಬಳಿಕ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಪೊಲೀಸ್ ಬ್ಯಾಂಡ್ ವತಿಯಿಂದ ರಾಷ್ಟ್ರಗೀತೆ ಮೊಳಗಿತು. ಸಭೆಯಲ್ಲಿ ಸೂಜಿ ಬಿದ್ದರೂ ಸದ್ದಾಗುವಷ್ಟು ಶಾಂತತೆ ಇತ್ತು. ಹೆಚ್ಚಿನ ಸಂಖ್ಯೆಯಲ್ಲಿ ಚಿಣ್ಣರು ಆಗಮಿಸಿದ್ದರೂ ಕೂಡ ಶಾಂತಚಿತ್ತರಾಗಿ ಕುಳಿತು ಕಾರ್ಯಕ್ರಮವನ್ನು ತದೇಕಚಿತ್ತರಾಗಿ ವೀಕ್ಷಿಸಿ ಭಾರತದ ಪ್ರಥಮ ಪ್ರಜೆಯನ್ನು ಕಣ್ತುಂಬಿಸಿಕೊಂಡು ಪುಳಕಿತರಾದರು.

ಚಾಮುಂಡೇಶ್ವರಿ ಉತ್ಸವ ಮೂರ್ತಿ ಸಿಂಗಾರಗೊಂಡಿತ್ತು. ಹಚ್ಚ ಹಸಿರು ಜರತಾರಿ ಸೀರೆ ತೊಡಿಸಿ ದೇವಿಗೆ ಸಿಂಗರಿಸಲಾಗಿತ್ತು. ಬಂಗಾರದ ಒಡವೆಗಳು, ತಾಳಿ, ವಿವಿಧ ಬಗೆಯ ಹೂವುಗಳಿಂದ ತಾಯಿ ಚಾಮುಂಡಿಯ ಉತ್ಸವ ಮೂರ್ತಿಯನ್ನು ಅಲಂಕಾರಿಸಲಾಗಿತ್ತು.

ಬೆಳ್ಳಿ ಪಲ್ಲಕ್ಕಿಯಲ್ಲಿ ಮಹಿಷ ಮರ್ದಿನಿ‌ ಅವತಾರದ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ದೊರೆಯಿತು.

ವೇದಿಕೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಜಿ.ಟಿ.ದೇವೇಗೌಡ.

ವೇದಿಕೆಯ ಮುಂಭಾಗದಲ್ಲಿ ಶಾಸಕರುಗಳಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್, ಸಿ.ಎನ್.ಮಂಜೇಗೌಡ , ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a comment