December 19, 2024

Newsnap Kannada

The World at your finger tips!

WhatsApp Image 2023 05 27 at 5.33.28 PM

ಬದುಕಿನಲ್ಲಿ ಭರವಸೆ ತುಂಬುವ ಸಾಕಾರಾತ್ಮಕ ಆಲೋಚನೆಗಳು

Spread the love
WhatsApp Image 2023 05 27 at 5.32.48 PM
ಅಶ್ವಿನಿ ಅಂಗಡಿ, ಬಾದಾಮಿ

ಒಂದೂರಿನಲ್ಲಿ ಸಾತ್ವಿಕ ಗುಣ ಹೊಂದಿದ ಸೋಮಪ್ಪನಿದ್ದನು ಬಡವನಾದರೂ ಸ್ವಾಭಿಮಾನವನ್ನು ಎಂದಿಗೂ ಮಾರದವನಾಗಿದ್ದ .ಅವನದು ಚಿಕ್ಕ ಕುಟುಂಬ ಜೀವನ ಸಾಗಿಸಲು ಸೋಮಪ್ಪ ದಿನಾಲು ಕಾಡಿಗೆ ಹೋಗಿ ಒಣಸೌದೆಗಳನ್ನು ತಂದು ಮಾರಿ ಬಂದ ಹಣದಿಂದ ಸಂತೃಪ್ತ ಜೀವನ ಸಾಗಿಸುತ್ತಿದ್ದ.

ಒಮ್ಮೊಮ್ಮೆ ಸೌದೆಗಳ ಕೊರತೆಯಿಂದ ಒಂದೇ ಹೊತ್ತಿನ ಊಟ ಮಾಡಿ ಮಲಗುತ್ತಿದ್ದರು.ಆದರೆ ಅವನೆಂದು ಕೆಟ್ಟ ಮಾರ್ಗಗಳಿಂದ ಹಣ ಸಂಪಾದನೆಯ ಹಾದಿ ಮಾತ್ರ ತುಳಿಯುತ್ತಿದ್ದಿಲ್ಲ ಸಕಾರಾತ್ಮಕ ಆಲೋಚನೆ, ದಾನ, ಸಹಕಾರ,ಒಳ್ಳೆಯ ಗುಣಗಳನ್ನು ಹೊಂದಿದ್ದು ಕರುಣೆ ಹಾಗೂ ಸಹಬಾಳ್ವೆ ಅವನಲ್ಲಿ ಮನೆ ಮಾಡಿದ್ದವು ತನಗೆ ಊಟವಿಲ್ಲದಿದ್ದರೂ ಪರವಾಗಿಲ್ಲ ತನ್ನ ಪಾಲಿನ ಊಟವನ್ನು ಬೇರೆಯವರಿಗೆ ಕೊಟ್ಟು ಸಂತೃಪ್ತನಾಗುತ್ತಿದ್ದ ಊರಲ್ಲಿ ಕೆಲವರು ಇವನ ಉದಾರ ಗುಣವನ್ನು ಕಂಡು ಅಪಹಾಸ್ಯ ಮಾಡುತ್ತಿದ್ದರು.

ಇವನು ಎಂದು ಮುಂದೆ ಬರುವುದಿಲ್ಲ ಇವನ ದಾರಿದ್ರ ತೊಲಗುವುದಿಲ್ಲ ವೆಂದು ಕುಹಕವಾಡುತ್ತಿದ್ದರು. ಏನೇ! ಕಷ್ಟ ಬಂದರೂ ಒಳ್ಳೆಯದಕ್ಕೆ ಎಂಬ ಸಕಾರಾತ್ಮಕ ಆಲೋಚನೆ ಹೊಂದಿದ್ದ ಸೋಮಪ್ಪನಿಗೆ ದೇವರು ಪರೀಕ್ಷಿಸಲು ಒಬ್ಬ ಸನ್ಯಾಸಿಯ ವೇಷ ತೊಟ್ಟು ಧರಗಿಳಿದು ಬಂದ ಯಥಾ ಪ್ರಕಾರ ಸೋಮಪ್ಪ ಕಾಡಿನೊಳಕ್ಕೆ ಸೌದೆ ಸಂಗ್ರಹಿಸಲು ನಡೆಯುತ್ತಿದ್ದನು ಆಗ ಸನ್ಯಾಸಿಯು ಅವನನ್ನು ತಡೆದು ನಿಲ್ಲು ಸೋಮಪ್ಪ ಇಂತಹ ಬಿರು ಬಿಸಿಲಿನಲ್ಲಿ ನೀನು ಕಷ್ಟ ಪಡುವುದನ್ನು ನೋಡಲಾರೆ ತಗೋ ಈ ಆಕಳನ್ನು ಇದರ ಹಾಲನ್ನು ಮಾರಿ ಬಂದ ಹಣದಿಂದ ನಿನ್ನ ಜೀವನ ಸಾಗಿಸು ಎಂದನು. ಸ್ವಾಭಿಮಾನಿಯಾದ ಸೋಮಪ್ಪನು ಸುತಾರಾಮ್ ಆಕಳನ್ನು ತೆಗೆದುಕೊಂಡು ಹೋಗಲು ಒಪ್ಪಲಿಲ್ಲ ನಾನು ದುಡಿದೆ ನನ್ನ ಜೀವನ ಸಾಗಿಸುವೆ ಇದನ್ನು ಕೊಳ್ಳುವಷ್ಟು ಹಣ ನನ್ನಲ್ಲಿಲ್ಲ ಬೇಡ ಸ್ವಾಮಿ ಈ ಆಕಳು ಎಂದು ತಿರಸ್ಕರಿಸಿದ.ಆಗ ಸನ್ಯಾಸಿ ಈಗಲೇ ನೀನು ಇದರ ಹಣವನ್ನು ನನಗೆ ಕೊಡಬೇಡ ಮಾರಿ ಬಂದ ಲಾಭದಿಂದ ಸ್ವಲ್ಪ ಸ್ವಲ್ಪವಾಗಿ ನನಗೆ ಹಣವನ್ನು ನೀಡು ಎಂದು ಹೇಳಿ ಆಕಳನ್ನು (ಹಸು) ಅವನ ಕೈಗೆ ಇಟ್ಟ. ಸೋಮಪ್ಪ ಆಕಳನ್ನು ತಂದು ತನ್ನ ಮನೆಯಲ್ಲಿ ಕಟ್ಟಿಕೊಂಡನು ಆ ದಿನ ರಾತ್ರಿಯೇ ಕಳ್ಳರು ಬಂದು ಅವನ ಆಕಳನ್ನು ಕದ್ದುಕೊಂಡು ಹೋದರು.

ತನಗಾದ ಹಾನಿಯನ್ನು ನೆನೆಯದೆ ಸೋಮಪ್ಪ ಸೌದೆ ತರಲು ಮತ್ತೆ ಕಾಡಿಗೆ ಹೊರಟ ಇದನ್ನು ಕಂಡ ಸನ್ಯಾಸಿ ಏನಾಯಿತು? ನಾನು ಆಕಳನ್ನು ಕೊಟ್ಟಿದ್ದೇನಲ್ಲಆ ಎಂದು ಪ್ರಶ್ನಿಸಿದ ನಡೆದ ಘಟನೆಯನ್ನು ಸೋಮಪ್ಪ ವಿವರಿಸಿದೆ ಸೋಮಪ್ಪನ ಮುಖವೆಂದು ಬಾಡಿರಲಿಲ್ಲ,

ಹತಾಶಯವಾಗಿರಲಿಲ್ಲ,ಎಲ್ಲಾ ಒಳ್ಳೆಯದಕ್ಕೆ ಸ್ವಾಮಿ ಎಂದು ಮುಗುಳ್ನಗೆ ಬೀರಿದ ! ಮತ್ತೆ ಸನ್ಯಾಸಿ ಒಂದು ನಾಣ್ಯಗಳು ತುಂಬಿದ ಬಿಂದಿಗೆಯನ್ನು ಅವನ ಕೈಗಿತ್ತನು ಈಗಲಾದರೂ ಇದನ್ನು ಜೋಪಾನವಾಗಿ ಇಟ್ಟುಕೋ, ನಿನ್ನ ಕಷ್ಟವು ಪರಿಹಾರವಾಗಲಿ ಎಂದನು.

ಆದರೂ ಸೋಮಪ್ಪನ ಮನಸ್ಸು ಒಪ್ಪಲಿಲ್ಲ ಸನ್ಯಾಸಿಯ ಒತ್ತಾಯದ ಮೇರೆಗೆ ಹಣದ ಬಿಂದಿಗೆಯನ್ನು ಮನೆಗೆ ಹೊತ್ತು ಒಯ್ದನು ಒಂದು ಮೂಲೆಯಲ್ಲಿ ಆ ಬಿಂದಿಗೆಯನ್ನು ಜೋಪಾನವಾಗಿ ಇಟ್ಟು ಸಂಜೆಯ ವಾಯು ವಿಹಾರಕ್ಕೆ ಹೊರ ನಡೆದನು ಮರಳಿ ಬರುವಷ್ಟರಲ್ಲಿ ಹಣ ತುಂಬಿದ ಬಿಂದಿಗೆ ಮಾಯವಾಗಿತ್ತು ಅದು ಹೇಗೆ ಎಂದು ಅವನಿಗೆ ತೋಚದಾಯಿತು.

ಆದರೂ ಅದರ ಬಗ್ಗೆ ಸ್ವಲ್ಪವೂ ಯೋಚಿಸದೆ ಊಟ ಮಾಡಿ ಮಲಗಿಬಿಟ್ಟ ದೇವರು ಕೊಟ್ಟದ್ದು ದೇವರಿಗೆ ಅರ್ಪಿತವಾಯಿತು ಎಂದು ತಿಳಿದು ನಿಟ್ಟಿಸಿರುಬಿಟ್ಟ ಪುನಃ ಮರುದಿನ ಕೊಡಲಿಯೊಂದಿಗೆ ಸೋಮಪ್ಪ ಕಾಡಿನಡೆಗೆ ನಡೆದ ಸನ್ಯಾಸಿಗೆ ಇವನನ್ನು ನೋಡುತ್ತಲೇ “ಅಲ್ಲಯ್ಯ ಅಷ್ಟು ಹಣಕೊಟ್ಟರು ಮತ್ತೇ ಏಕೆ ಕಾಡಿಗೆ ಬಂದಿರುವೇ? ಎಂದು ರೋಸಿ ಕೇಳಿದರು

ಆಗ ರಾತ್ರಿ ನಡೆದ ಘಟನೆಯನ್ನು ಸೋಮಪ್ಪ ವಿವರಿಸಿದೆ ಇದನ್ನು ಕೇಳಿ ಸನ್ಯಾಸಿ ನಿನಗೆ ಸ್ವಲ್ಪವಾದರೂ ಸಿಟ್ಟು,ಹತಾಶಯ, ಮಾನಸಿಕ ತೊಳಲಾಟ ಇಲ್ಲವೇ ಎಂದನು ಆಗ ಸೋಮಪ್ಪ ಏಕೆ? ಕೋಪಿಸಿಕೊಳ್ಳಬೇಕು ಸ್ವಾಮಿ !ಈ ಭೂಮಿಯ ಮೇಲೆ ಯಾವುದು ಶಾಶ್ವತವಲ್ಲ. ಮನದಲ್ಲಿ ಕೋಪ ಹತಾಶಯವನ್ನು ಮಾಡಿಕೊಂಡರೆ ಏನು ಸಿಗುವುದು ನನಗೆ ಸಿಗಬೇಕಾಗಿದ್ದರೆ ಅದು ಹೇಗಾದರೂ ಮಾಡಿ ಸಿಕ್ಕೇ ಸಿಗುವುದು ಒಂದು ವೇಳೆ ಆ ವಸ್ತು ವ್ಯಕ್ತಿ ಸಂದರ್ಭ ನನಗೆ ಸಿಗಲಾರದಾದರೆ ನಾನು ಎಷ್ಟೇ! ಪರಿತಪಿಸಿದರು ಸಿಗುವುದಿಲ್ಲ . ನೀವು ನನ್ನ ದಾರಿದ್ರವನ್ನು ಹೋಗಲಾಡಿಸಲು ಅಮೂಲ್ಯವಾದ ಎರಡು ಸಂಗತಿಗಳನ್ನು ನೀಡಿದಿರಿ ಆದರೆ ಅವುಗಳ ಫಲ ಅನುಭವಿಸುವುದು ನನ್ನ ಹಣೆಯಲ್ಲಿ ಬರೆದಿಲ್ಲ ಹಾಗಾಗಿಯೇ ನನಗೆ ಅವುಗಳು ದೊರಕಲಿಲ್ಲ ಇದರಲ್ಲಿ ಕೋಪಿಸಿಕೊಳ್ಳುವ ಹತಾಶಯ ವಾಗುವ ಹಾಗೂ ದೈವವನ್ನು ಶಪಿಸುವ ಕಾರ್ಯವನ್ನೇಕೆ ಮಾಡಬೇಕು ಎಂದು ಕೇಳಿದ .

ಸೋಮಪ್ಪನ ಸಕಾರಾತ್ಮಕ ಆಲೋಚನೆ ಶಾಂತಿಯುತ ಮನಸ್ಸು ಹಾಗೂ ಸಹನೆಯ ಗುಣವನ್ನು ನೋಡಿ ದೇವರೇ ಸೋತು ಹೋದನು. ನಿನಗೆ ಒಳ್ಳೆಯದಾಗಲಿ ಎಂದು ಹರಸಿ ನಡೆದ . ಸೋಮಪ್ಪ ತನ್ನ ಕಾಯಕವನ್ನು ಮುಗಿಸಿ ಮನೆಗೆ ಹಿಂದಿರುಗುತ್ತಲೇ ಕಳೆದು ಹೋದ ಆಕಳು ಕಳ್ಳರ ಕೈಯಿಂದ ತಪ್ಪಿಸಿಕೊಂಡು ಅವನ ಮನೆಸೇರಿತ್ತು ಇದನ್ನು ನೋಡುತ್ತಲೇ ಸೋಮಪ್ಪ ಆಶ್ಚರ್ಯಚಕಿತನಾದ ಜೊತೆಗೆ ಅಂಗಳದಲ್ಲಿ ಬರುತ್ತಿದ್ದಂತೆಯೇ ಹಣ ತುಂಬಿದ ಬಿಂದಿಗೆ ಹೊತ್ತ ಪಕ್ಕದ ಮನೆಯ ಅಜ್ಜಿ ಅವನಿದ್ದ ಕಡೆ ಧಾವಿಸಿದಳು.

ತಗೋ ಸೋಮಪ್ಪ ನಿನ್ನ ಬಿಂದಿಗೆ ನಿನ್ನೆ ನನ್ನ ಮನೆಗೆ ಬೀಗರು ಬಂದಿದ್ದರು ಹಾಗಾಗಿ ಒಂದು ಕೊಡ ನೀರು ಬೇಕಿತ್ತು ಆದ್ದರಿಂದ ನಿನ್ನ ಮನೆಯಲ್ಲಿ ಈ ತುಂಬಿದ ಬಿಂದಿಗೆಯನ್ನು ಹೊತ್ತುಒಯ್ದೆ ಆದರೆ ಇದರಲ್ಲಿ ನೀರಿರಲಿಲ್ಲ ನೀನು ಕಷ್ಟಪಟ್ಟು ಸಂಗ್ರಹಿಸಿಟ್ಟಿದ್ದ ಹಣವಿತ್ತು ಆದ್ದರಿಂದ ಇದನ್ನು ಜೋಪಾನವಾಗಿ ತೆಗೆದಿಟ್ಟು ನಿನಗೆ ಹಿಂದಿರುಗಿಸುತ್ತಿದ್ದೇನೆ ಎಂದು ಹೇಳಿ ಹೋದಳು.

ಕಥೆಯ ತಿರುಳು: ನಾವು ಒಳ್ಳೆಯ ಸ್ವಭಾವ ಸಕಾರಾತ್ಮಕ ಯೋಚನೆ, ತಾಳ್ಮೆ ಹಾಗೂ ಸಹಾಯ ಗುಣಗಳನ್ನು ಹೊಂದಿದ್ದರೆ ಬೆಟ್ಟದಂತಹ ಕಷ್ಟಗಳು ಕರಗಿ ಸುಖದ ಮೆಟ್ಟಿಲಾಗುವುದು ಎಂಬುದಾಗಿದೆ.
ಹಾಗಾದರೆ ಸಕಾರಾತ್ಮಕ ಆಲೋಚನೆಗಳೆಂದರೇನು, ಒಂದು ಇಂಗ್ಲೀಷ್ ಗಾದೆಯಂತೆ smart work is better than hard work ಎಂಬಂತೆ ನಾವು ಈಗ ಶ್ರಮದ ಕೆಲಸಗಳನ್ನು ಕಡಿಮೆ ಮಾಡಿ ಚತುರ ಕೆಲಸಗಳನ್ನು ಮೈಗೂಡಿಸಿಕೊಂಡಿದ್ದೇವೆ ಇದರ ಜನಿತವೇ ಯಂತ್ರೋಪಕರಣಗಳ ಬಳಕೆಯಾಗಿದೆ . ನಮ್ಮಲ್ಲಿಯ ಸಕಾರಾತ್ಮಕ ಯೋಚನೆಗಳು ಜೀವನದಲ್ಲಿ ಎದುರಿಸಲಿರುವ ಎಂತಹ ಕಷ್ಟಗಳನ್ನು ದೂರ ಮಾಡಿ ಒಳನೆಮ್ಮದಿಯನ್ನು ನೀಡಲು ದಾರಿಯಾಗಿದೆ.ಈ ಯಾಂತ್ರಿಕ ಯುಗದಲ್ಲಂತೂ ಸಕಾರಾತ್ಮಕ ಯೋಚನೆ ಯೋಜನೆಗಳು ಅತ್ಯವಶ್ಯಕ. ಮಗುವಿನಿಂದ ಹಿಡಿದು ವೃದ್ಧರವರೆಗೂ ಈ ಆಧುನಿಕ ಜೀವನಶೈಲಿ ಅವಸರದಿಂದ ಕೂಡಿರುವುದಾಗಿದೆ ಏಳುವಾಗ, ತಿನ್ನುವಾಗ, ಹೊರಡುವಾಗ ,ಮಲಗುವಾಗ ಕೂಡ ಆತುರ ಅವಸರದಿಂದ ಕೂಡಿದುದಾಗಿದೆ. ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯದ ಕೊರತೆ ಉಂಟಾಗಿ ಹಲವಾರು ರೋಗಗಳಾದ ಬಿ ಪಿ (ರಕ್ತದ ಒತ್ತಡ)ಶುಗರ್ (ಸಕ್ಕರೆ ಕಾಯಿಲೆ ಯಂತಹ) ರೋಗಗಳು ವಯೋ ವ್ಯತ್ಯಾಸ ಮಾಡದೆ ನಮ್ಮನ್ನು ಆಕ್ರಮಿಸುತ್ತಲಿವೆ. ಅಲ್ಲದೆ ಮಾನಸಿಕ ಖಿನ್ನತೆ, ನಕಾರಾತ್ಮಕ ಯೋಚನೆಗಳು ,ಪ್ರಕ್ಷುಬ್ಧ ಮನಸ್ಸು ,ದಾನವ ಗುಣಗಳು ಇತ್ತೀಚಿನ ಜನರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿವೆ .

ಆದ್ದರಿಂದ ಮನೋವಿಚಲಿತರಾಗದೆ ಸನ್ಮಾರ್ಗ ಸುವಿಚಾರ ,
ಸಹಧಾರ್ಮಿಕತೆ ,ಹಿತ ಸಮಾಜದ ಕಾರ್ಯಗಳು, ಮಧುರ ಬಾಂಧವ್ಯ ಬೆಳೆಸಿಕೊಂಡು!! ಕೋಪ, ಆತುರ ಭಾವನೆಗಳ ವ್ಯರ್ಜ ಮಾಡುವುದರೊಂದಿಗೆ ಸು ಸಮಾಜ ಹಾಗೂ ಸಹಭಾಂಧವ್ಯ ಘಟಕಗಳ ನಿರ್ಮಾಣ ಮಾಡಬಹುದಾಗಿ

ಸಕಾರಾತ್ಮಕ ಆಲೋಚನೆಗಳ ಅಳವಡಿಸಿಕೊಳ್ಳುವ ಮಾರ್ಗಗಳು

• ಸದೃಢ ದೇಹದಲ್ಲಿ ಸದೃಢ ಮನವೆಂಬಂತೆ ನಮ್ಮ ಕಾಯವನ್ನು ಕಾಯಿಲೆಗಳು ಸೋಕದಂತೆ ನೋಡಿಕೊಳ್ಳುವುದು.

• ಉತ್ತಮ ಆಹಾರ ಪದ್ಧತಿ ಹಾಗೂ ಸಾದ್ವ ಆಹಾರ ಸೇವನೆ .

• ನಿಯಮಿತ ವ್ಯಾಯಾಮ ಹಾಗೂ ಲಘು ವಿಹಾರಗಳು

• ಪ್ರಾತಃಕಾಲದಲ್ಲಿ ಯೋಗ ಧ್ಯಾನ ಹಾಗೂ ಮಧುರ ಸಂಗೀತ ಆಲಿಸುವುದು.

• ಹಿಂದಿನ ಕಹಿ ಘಟನೆಗಳ ಮರೆತು ಸುಘಟನೆಗಳ ಮೆಲುಕು ಹಾಕುವುದು ಇಂದಿನ ದಿನ ತುಂಬಾ ಸಂತೋಷ ಹಾಗೂ ಯಶಸ್ವಿಯಾಗಿರುವುದೆಂದು ಭಾವಿಸುವುದು.

• ಪ್ರತಿ ಕೆಲಸದಲ್ಲಿ ಆಶಾಭಾವನೆ ಹೊಂದಿ ನಕಾರಾತ್ಮಕ ಯೋಚನೆ ಕೈ ಬಿಡುವುದು.

• ಸುಕರ್ಮ ಸುವಿಚಾರ ಹಾಗೂ ಸುಮಾರ್ಗಗಳು ನಿಮ್ಮ ದಿನಗಳನ್ನು ನಡೆಸುತ್ತಿರಲಿ.

• ನಕಾರಾತ್ಮಕ ಭಾವನೆಗಳನ್ನು ಅದುಮಿಟ್ಟುಕೊಂಡು ಯಶಸ್ವಿಗಾಗಿ ಪುನರ್ ಪ್ರಯತ್ನ ಮಾಡುವುದು.

• ಕಷ್ಟ ಸಂಧಿಗ್ಧ ಹಾಗೂ ಆಚಾತುರ್ಯ ಸಮಯದಲ್ಲಿ ನಿಮ್ಮ ಮನಸ್ಸನ್ನು ನೀವೇ ಸಂತೈಸಿಕೊಳ್ಳುವುದು.

• ಜಗದ ಪ್ರತಿ ಚರಾ ಚರಗಳಲ್ಲಿ ಪ್ರೀತಿ, ಕರುಣೆ ,ಸಹ ಸಂಬಂಧದ ಗುಣಗಳನ್ನು ಮೈಗೂಡಿಸಿಕೊಳ್ಳುವುದು.

• ಪರಿಸರ ಪ್ರೇಮಿಯಾಗಿದ್ದು ವಾರಕ್ಕೊಮ್ಮೆ ನಿಸರ್ಗದ ಮಡಿಲಲ್ಲಿ ಒಂದು ಸಂಜೆಯಾದರೂ ಏಕಾಂತವಾಗಿ ಕಳೆಯಬೇಕು.

• ಒತ್ತಡದ ಅವಸರದ ಬದುಕಿನಲ್ಲೂ ಒಂದು ತಾಸು ಧಾರ್ಮಿಕ ಪಠಣಗಳನ್ನು ಆಲಿಸಬೇಕು.

• ಜೀವನದ ಪ್ರತಿ ರಂಗದ ಸೋಲನ್ನು ಪರೀಕ್ಷೆಯಾಗಿ ತೆಗೆದುಕೊಳ್ಳುವುದು.

• ಕೋಪ ಅಸೂಯೆ, ಧನದಾಹ ಕ್ರೂರತೆ ದುರಾಭ್ಯಾಸಗಳನ್ನು ಆದಷ್ಟು ನಿರ್ಣಾಮ ಮಾಡಿಕೊಳ್ಳುವುದು.

• ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು.

• ಉತ್ತಮ ಪುಸ್ತಕಗಳ ಒಡನಾಡಿಯಾಗಬೇಕು, ರಂಗಭೂಮಿಯ ಕಲೆಗಳಾದ ಹಾಸ್ಯ ನಾಟಕ, ಪ್ರಸಿದ್ಧ ನೃತ್ಯಗಳು, ರೂಪಕಗಳು, ಹಾಗೂ ಹರಟೆಕಟ್ಟೆ ಯಂತಹ ಕಿರು ಪ್ರಸಾರವನ್ನು ದೂರದರ್ಶನದಲ್ಲಿ ನೋಡಬೇಕು.

• ಉಚಿತ ವ್ಯಕ್ತಿಗಳ ಸಂಗ ಹಾಗೂ ಹಿರಿಯರ ಸವಿನುಡಿಗಳನ್ನು ಆಲಿಸಬೇಕು.

• ನಮ್ಮ ಮೇಲೆ ನಕಾರಾತ್ಮಕ ಬೀರುವ ವ್ಯಕ್ತಿ ಹಾಗೂ ಘಟನೆಗಳಿಂದ ಆದಷ್ಟು ದೂರವಿರಬೇಕು .

• ವೈರಿಗಳನ್ನು ಅಲಕ್ಷಿಸಬೇಕು.

ಹೀಗೆ ಮಾನವನ ಬದುಕಿನಲ್ಲಿ ಸಕಾರಾತ್ಮಕ ಯೋಚನೆ ಹಾಗೂ ಯೋಜನೆಗಳು ಪ್ರಜ್ವಲಿಸಿದ್ದೇ ಆದರೆ ಶಾಂತ ಹಾಗೂ ನಿರ್ಲಿಪ್ತ ಸಮಾಜವನ್ನು ಬೆಳೆಸಬಹುದಾಗಿದೆ 12ನೇ ಶತಮಾನದಲ್ಲಿ ಶರಣಾದಿ ಪ್ರಮಥಮರು ಹೀಗೆ ತಾನೇ ಬಾಳಿ ಬದುಕಿದ್ದು!! ಯಾವುದೇ ದ್ವೇಷ, ಅಸೂಯೆ, ಅಶಾಂತಿ ಹಾಗೂ ಕುಚೋದ್ಯಗಳ ಸೋಂಕು ಇಲ್ಲದೆ . ಆಗಿನ ಶರಣರು ಸದಾ ಶಾಂತಿ,ನೆಮ್ಮದಿ ,ಸಹಕಾರ, ಒಳಾನಂದ ,ಸಂತೃಪ್ತ ಜೀವನ ನಡೆಸಿದ್ದರಿಂದ ಅದೊಂದು ಭಕ್ತಿ ಯುಗವಾಗಿ ಸುವರ್ಣ ಇತಿಹಾಸವನ್ನು ಸೇರಿದ್ದು…!!ನಮಗೆಲ್ಲಾ ಆದರ್ಶ ಮಾರ್ಗವಾಗಿದ್ದು…..

Copyright © All rights reserved Newsnap | Newsever by AF themes.
error: Content is protected !!