November 22, 2024

Newsnap Kannada

The World at your finger tips!

eshwar

ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಕ್ರಮ: ಈಶ್ವರ ಖಂಡ್ರೆ

Spread the love

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಯಲು ಉನ್ನತ ಮಟ್ಟದ ತಜ್ಞರ ವರದಿ ತರಿಸಿಕೊಂಡು ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.

ಜಿಲ್ಲೆಯ ತಿತಿಮತಿ ಅರಣ್ಯ ವ್ಯಾಪ್ತಿಯ ಚೈನಿಹಡ್ಲು ಹಾಡಿಗೆ ಶನಿವಾರ ಭೇಟಿ ನೀಡಿ ಅಲ್ಲಿನ ಸ್ಥಳೀಯ ಆದಿವಾಸಿ ಜನರ ಅಹವಾಲು ಆಲಿಸಿದ ನಂತರ ಸಚಿವರು ಮಾತನಾಡಿದರು.

ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ನಿಯಂತ್ರಣ ಮಾಡುವಲ್ಲಿ ಸರ್ಕಾರ ಅಗತ್ಯ ತುರ್ತು ಕ್ರಮ ವಹಿಸಲಿದೆ. ಆ ನಿಟ್ಟಿನಲ್ಲಿ ತಿತಿಮತಿ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ 5 ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ ಮೂವರು ಕಾಡಾನೆ ಹಾವಳಿಗೆ ತುತ್ತಾಗಿದ್ದಾರೆ. ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷವನ್ನು ತಡೆಯುವಲ್ಲಿ ಶಾಶ್ವತ ಕಾರ್ಯಕ್ರಮ ರೂಪಿಸಲಾಗುವುದು, ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಿದೆ ಎಂದರು.

ಮನುಷ್ಯನ ಜೀವ ಮತ್ತು ಜೀವನ ಅತಿಮುಖ್ಯ. ಕಾಡಾನೆ ಹಾವಳಿ ತಡೆಗೆ ಸೂಕ್ತ ಮಾರ್ಗೋಪಾಯ ಕಂಡುಹಿಡಿಯಲಾಗುವುದು.

ಕೊಡಗು ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಾಡಾನೆಗಳು ಇದ್ದು, 100 ಕ್ಕೂ ಹೆಚ್ಚು ಕಾಡಾನೆಗಳು ಅರಣ್ಯದಿಂದ ಹೊರಗಿವೆ. ಈ ಕಾಡಾನೆಗಳನ್ನು ಕಾಡಿಗೆ ಓಡಿಸಲಾಗುವುದು, ಜೊತೆಗೆ ‘ರೇಡಿಯೊ ಕಾಲರ್’ ಅಳವಡಿಸಲಾಗುವುದು ಎಂದು ಸಚಿವರು ಹೇಳಿದರು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಕಾಡಾನೆ ಹಾವಳಿಯಿಂದ ಇಲ್ಲಿನ ಸ್ಥಳೀಯರು ತುಂಬಾ ತೊಂದರೆಪಡುತ್ತಿದ್ದಾರೆ. ಆದ್ದರಿಂದ ಕೊಡಗು ಜಿಲ್ಲೆಗೆ ಭೇಟಿ ನೀಡಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅರಣ್ಯ ಸಚಿವರಲ್ಲಿ ಮನವಿ ಮಾಡಲಾಗಿತ್ತು, ಅದರಂತೆ ಇಂದು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದಾರೆ ಎಂದರು.

ಸರ್ಕಾರ ಮತ್ತು ಅರಣ್ಯ ಸಚಿವರು ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಹಿಡಯಲಿದ್ದಾರೆ. ಕಳೆದ 20 ವರ್ಷಗಳಿಂದ ಕಾಡಾನೆ ಹಾವಳಿ ಸೇರಿದಂತೆ ಹಲವು ಸಮಸ್ಯೆಗಳು ಇದ್ದು, ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು.

ಜಿ.ಪಂ.ಮಾಜಿ ಸದಸ್ಯರು ಹಾಗೂ ಸ್ಥಳೀಯ ಪ್ರಮುಖರಾದ ಪಂಕಜ ಅವರು ತಿತಿಮತಿ ಚೈನಿಹಡ್ಲು ಹಾಡಿಯಲ್ಲಿ 150 ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ವಾಸಿಸುತ್ತಿದ್ದು, ಕಾಡಾನೆ ಹಾವಳಿಯಿಂದ ರಕ್ಷಣೆ ಬೇಕಿದೆ ಎಂದು ಅರಣ್ಯ ಸಚಿವರಲ್ಲಿ ಮನವಿ ಮಾಡಿದರು.ಈಗಾಗಲೇ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ನೀಡಲಾಗಿದ್ದು, ಕೊಳವೆ ಬಾವಿ ಕೊರೆಸಬೇಕು. ಕೃಷಿ ಚಟುವಟಿಕೆಗೆ ಅವಕಾಶ ಮಾಡಬೇಕು. ಜೊತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಹಲವು ಸೌಲಭ್ಯಗಳು ದೊರೆಯಬೇಕು ಎಂದು ಪಂಕಜ ಅವರು ಮನವಿ ಮಾಡಿದರು.

ಈ ಕುರಿತು ಮಾತನಾಡಿದ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಅರಣ್ಯ ಹಕ್ಕುಪತ್ರ ಪಡೆದಿರುವವರು ಉಳುಮೆ ಮಾಡಲು ಯಾವುದೇ ರೀತಿಯ ತೊಂದರೆ ಇಲ್ಲ, ಜೊತೆಗೆ ಅಭಿವೃದ್ಧಿ ನಿಗಮದಿಂದ ಹಲವು ಸೌಲಭ್ಯ ಪಡೆಯಲು ಅರಣ್ಯ ಅಧಿಕಾರಿಗಳು ಹಾಗೂ ವಿವಿಧ ಅಭಿವೃದ್ಧಿ ನಿಗಮದ ಮುಖ್ಯಸ್ಥರ ಜೊತೆ ಚರ್ಚಿಸಿ, ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗುವುದು ಎಂದು ತಿಳಿಸಿದರು.

ವಿವಿಧ ಪ್ರದೇಶಗಳಿಗೆ ಭೇಟಿ: ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ನಾಗರಹೊಳೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು, ಬಳಿಕ ಕುಟ್ಟ ಗ್ರಾಮ ಬಳಿಯ ‘ಕಾಯಿಮಾನಿ’ ಸ್ಥಳದಲ್ಲಿ ಸಾರ್ವಜನಿಕರನ್ನು ಭೇಟಿ ನೀಡಿ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯ ಗ್ರಾಮಸ್ಥರು ಕಾಡಾನೆ ಹಾವಳಿ ನಿಯಂತ್ರಣಕ್ಕೆ ರೇಡಿಯೊ ಕಾಲರ್ ಅನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಒತ್ತಾಯಿಸಿದರು.ಕಾಯಿಮಾನಿ ಭಾಗದಲ್ಲಿ 60 ಕ್ಕೂ ಹೆಚ್ಚು ಕಾಡಾನೆಗಳು ಓಡಾಡುತ್ತಿದ್ದು, ಈ ಕಾಡಾನೆಗಳನ್ನು ಸ್ಥಳಾಂತರಿಸಬೇಕಿದೆ ಎಂದು ಅರಣ್ಯ ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ 30 ಕ್ಕೂ ಹೆಚ್ಚು ಕಾಡಾನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲು ಮುಂದಾಗಲಾಗಿದೆ ಎಂದು ಅರಣ್ಯ ಸಚಿವರು ತಿಳಿಸಿದರು.

ಬಳಿಕ ತಿತಿಮತಿ ಬಳಿಯ ಬಂಬುಕಾಡಿನಲ್ಲಿನ ಮನೆಗೆ ಭೇಟಿ ನೀಡಿ, ಮಾಹಿತಿ ಪಡೆದರು. ಇತ್ತೀಚೆಗೆ ಕಾಡಾನೆ ದಾಳಿಗೆ ತುತ್ತಾದ ಕೊಡಗು ಜಿಲ್ಲೆ ಸಿದ್ದಾಪುರ ಬಳಿಯ ಬಾಡಗ-ಬಾನಂಗಾಲ ಗ್ರಾಮದ ನಿವಾಸಿ ಆಯಿಷ(63) ಅವರ ಪುತ್ರ ಲತೀಫ್ ಅವರಿಗೆ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಸಾಂತ್ವನ ಹೇಳಿ, ಪರಿಹಾರದ ಚೆಕ್ ವಿತರಿಸಿದರು.
ಕಾಡಾನೆ ದಾಳಿಗೆ ತುತ್ತಾದ ಜಿಲ್ಲೆಯ ಕಟ್ಟೆವಾಡು ಗ್ರಾಮದ ಪರಂಬು ಪೈಸಾರಿಯ ದೇವಪ್ಪ ಅವರ ಮನೆಗೆ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.ಕಾವೇರಿ ನೀರು ಬಿಡುಗಡೆಗೆ ವಿರೋಧ : ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ಪ್ರತಿಭಟನೆ – ಬಂಧನ

ಅರಣ್ಯ ಇಲಾಖೆ ಅಧಿಕ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್, ಅರಣ್ಯ ಕಾರ್ಯಪಡೆಯ ಮುಖ್ಯಸ್ಥರಾದ ರಾಜೀವ ರಂಜನ್, ಮುಖ್ಯ ವನ್ಯಜೀವಿ ಪರಿಪಾಲಕರಾದ ಶುಭಾಷ್, ನಾಗರಹೊಳೆ ಹುಲಿ ವಿಭಾಗದ ನಿರ್ದೇಶಕರಾದ ಹರ್ಷ, ಜಿ.ಪಂ.ಸಿಇಇಒ ವರ್ಣಿತ್ ನೇಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪೂವಯ್ಯ, ಶಿವರಾಮ್ ಬಾಬು, ಶರಣಬಸಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ತಹಶೀಲ್ದಾರ್ ರಾಮಚಂದ್ರ ಇತರರು ಇದ್ದರು.

Copyright © All rights reserved Newsnap | Newsever by AF themes.
error: Content is protected !!