ಚಂದ್ರಯಾನ ಮತ್ತು ಭಾರತ

Team Newsnap
6 Min Read
rajshekar b
ಡಾ. ರಾಜಶೇಖರ ನಾಗೂರ

ಅಂಬೆಗಾಲಿಡುವ ಮಗುವಿನ ಸಮೇತ ನಾವೆಲ್ಲ ಆಕಾಶವನ್ನು ನೋಡುತ್ತಾ ಬೆಳೆಯುತ್ತೇವೆ. ಬೆಳೆ ಬೆಳೆಯುತ್ತಾ ಆಕಾಶಕ್ಕೆ ನೆಗೆಯಲು ಪ್ರಯತ್ನಿಸುತ್ತೇವೆ. ನಮ್ಮ ನೆಗೆಯುವ ಪ್ರಯತ್ನದ ತೀವ್ರತೆಯ ಮೇಲೆ, ಇಚ್ಛಾಶಕ್ತಿಯ ಆಧಾರದ ಮೇಲೆ, ಎಷ್ಟು ಎತ್ತರಕ್ಕೆ ಹಾರುತ್ತೇವೆ ಎನ್ನುವುದು ನಿರ್ಧರಿತವಾಗುತ್ತದೆ.

ಮನುಷ್ಯ ಮೊದಲು ಹಾರುತ್ತಾ ವಿಮಾನವನ್ನು ಕಂಡುಕೊಂಡ. ದೇಶದಿಂದ ದೇಶಕ್ಕೆ, ಊರಿನಿಂದ ಊರಿಗೆ ತಲುಪಲು ಪ್ರಾರಂಭಿಸಿ ಜಗತ್ತಿನ ದೂರವನ್ನು ಸಂಕುಚಿತಗೊಳಿಸಿದ. ಹಾಗೆಯೇ ಇನ್ನೂ ಎತ್ತರಕ್ಕೆ ಹಾರುವ ಕನಸನ್ನು ಹೊಂದಿ ಬಾಹ್ಯಾಕಾಶಕ್ಕೆ ನೆಗೆದ. ಅದನ್ನೂ ಮೀರಿ ಆಕಾಶಕಾಯಗಳಿಗೆ ಕಾಲಿಡಲು ಪ್ರಯತ್ನಿಸಿದ. ಹತ್ತಿರದ ಚಂದ್ರನನ್ನು ತಲುಪಿದ. ಮಂಗಳನನ್ನು ಕೂಡ ಮುಟ್ಟಿದ.

ಭೂಮಿಯ ಮೇಲಿನ 195 ರಾಷ್ಟ್ರಗಳಲ್ಲಿ ಕೇವಲ ನಾಲ್ಕೇ ನಾಲ್ಕು ರಾಷ್ಟ್ರಗಳು ಚಂದ್ರನ ಅಂಗಳಕ್ಕೆ ನೆಗೆದವು. ಅಮೆರಿಕ, ರಷ್ಯಾ, ಚೀನಾದ ನಂತರ ನಾಲ್ಕನೆಯ ರಾಷ್ಟ್ರ ಭಾರತವು ಚಂದ್ರನ ಅಂಗಳವನ್ನು, 2023, ಅಗಸ್ಟ್ 23ಕ್ಕೆ ತಲುಪಿತಾದರೂ, ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ರಾಷ್ಟ್ರ ಎಂಬ ಹೆಮ್ಮೆ ಹೆಗ್ಗಳಿಕೆಯ ಇತಿಹಾಸವನ್ನು ಸೃಷ್ಟಿಸಿತು.

ಸೆಕೆಂದಿಗೆ 11.2 ಕಿ.ಮಿ ವೇಗದಲ್ಲಿ ಚಲಿಸಿದಾಗ ಮಾತ್ರ ಭೂಮಿಯ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಂಡು ಬಾಹ್ಯಾಕಾಶಕ್ಕೆ ಕಾಲಿಡಬಹುದು. ಈ ವೇಗವನ್ನು ಪಡೆಯಲು ಪ್ರತೀ ರಾಷ್ಟ್ರಗಳು ಹರಸಾಹಸ ಮಾಡುತ್ತಿದ್ದವು. 1947 ರಲ್ಲಿ ಭಾರತವು ಸ್ವಾತಂತ್ರ್ಯವನ್ನು ಪಡೆದರೂ, ತನ್ನನ್ನು ಆಳಿಕೊಳ್ಳಲು ನೀತಿ ನಿಯಮಗಳಾದ ಸಂವಿಧಾನವನ್ನು ರಚಿಸಲು 1950 ಜನವರಿ 26 ರವರೆಗೂ ಕಾಯಬೇಕಾಯಿತು. ಇದಾದ ಮೇಲೆ ವಿಜ್ಞಾನ ತಂತ್ರಜ್ಞಾನ ಪ್ರಾರಂಭವಾಯಿತು. ಈ ನಿಟ್ಟಿನಲ್ಲಿ ಬಾಹ್ಯಾಕಾಶದ ಸಂಶೋಧನೆಗಾಗಿ 1969ರಲ್ಲಿ ಹುಟ್ಟಿದ ಸಂಸ್ಥೆಯೇ ISRO. ಈ ನಮ್ಮ ಇಸ್ರೋ ವಿಶ್ವದ ಆರು ಅತಿ ದೊಡ್ಡ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಲ್ಲಿ ಒಂದು.

1975 ಏಪ್ರಿಲ್ 19 ರಂದು ಭಾರತದ ಪ್ರಥಮ ಕೃತಕ ಉಪಗ್ರಹ “ಆರ್ಯಭಟ”ದ ಉಡಾವಣೆಯನ್ನು ಹಿಂದಿನ ರಷ್ಯಾ ದೇಶದಿಂದ ಮಾಡಿದ್ದೆವು. ಇನ್ನೊಬ್ಬರ ಸಹಾಯವನ್ನು ತೆಗೆದುಕೊಂಡು ಇಟ್ಟ ಆ ಮೊದಲ ಹೆಜ್ಜೆ, ನಮ್ಮ ಸ್ವಂತ ತಂತ್ರಜ್ಞಾನವನ್ನು ಬಳಸಿಕೊಂಡು ಇನ್ನೊಬ್ಬರ ಮುಂದೆ ತಂತ್ರಜ್ಞಾನಕ್ಕಾಗಿ ಕೈ ಚಾಚದೆ ಯಶಸ್ವಿಯಾಗಿ ಇಂದು ಮೂರನೇ ಬಾರಿಗೆ ಚಂದ್ರನ ಕಡೆಗೆ ನೆಗೆಯಲು ಪ್ರೇರಣೆಯಾಗಿದ್ದು ಸತ್ಯ. ಇಂದಿನ ಈ ಯಶಸ್ಸು ಭಾರತದ ವಿಜ್ಞಾನಿಗಳ ಪರಿಶ್ರಮಕ್ಕೆ ಹಿಡಿದ ಕನ್ನಡಿಯಷ್ಟೇ ಅಲ್ಲದೆ, ವಿಶ್ವದ ಮುಂದೆ ಭಾರತೀಯರ ಭೌದ್ಧಿಕ ಸಾಮರ್ಥ್ಯದ (mental ability) ಪ್ರದರ್ಶನವೂ ಹೌದು. ಇಷ್ಟೇ ಅಲ್ಲದೆ ನಮ್ಮ ವಿಜ್ಞಾನಿಗಳ ಈ ಪ್ರಯತ್ನಕ್ಕೆ ಪ್ರೋತ್ಸಾಹಿಕವಾಗಿ ನಿಂತ ಭಾರತದ ನಾಯಕತ್ವದ ಕನಸೂ ಹೌದು.

ಈ ಹಿಂದೆ ಆಕಾಶಕ್ಕೆ ನೆಗೆಯುವ ಈ ಪ್ರಯತ್ನದಲ್ಲಿ ಅನೇಕಬಾರಿ ವಿಜ್ಞಾನಿಗಳು ಬಿದ್ದಾಗ, ಅವರನ್ನು ಅಪ್ಪಿಕೊಂಡು, ಎದ್ದಾಗ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವ ಪ್ರಧಾನಮಂತ್ರಿಯ ಕಚೇರಿಯಲ್ಲಿ ಕುಳಿತ ಸಮರ್ಥ ನಾಯಕತ್ವವೂ ಇಂದಿನ ಯಶಸ್ಸಿಗೆ ಕಾರಣ. ಏಕೆಂದರೆ ಇಸ್ರೋ ಸಂಸ್ಥೆ ಬರುವುದು ಪ್ರಧಾನಮಂತ್ರಿ ಕಚೇರಿಯ ನೇರ ನಿಯಂತ್ರಣದ ಆಡಳಿತದೊಳಗೆ.

1960 ರ ಆಸು-ಪಾಸಿನಲ್ಲಿ ನಡೆದ ಟೋಕಿಯೋ ಒಲಂಪಿಕ್ ಕ್ರೀಡಾಕೂಟದ ನೇರ ಪ್ರಸಾರವನ್ನು Syncom-3 ಸೆಟಲೈಟ್ ಮೂಲಕ ಅಮೇರಿಕಾ ಜಗತ್ತಿಗೆ ಬಿತ್ತರಿಸಿದ ಮೇಲೆ ಭಾರತದ ಬಾಹ್ಯಾಕಾಶ ಸಂಶೋಧನೆಯ ಪಿತಾಮಹ ಡಾ. ವಿಕ್ರಂ ಸಾರಾಭಾಯಿ ಈ ಬಾಹ್ಯಾಕಾಶ ವಿಜ್ಞಾನದ ಉಪಯೋಗಗಳ ಬಗ್ಗೆ ಕನಸನ್ನು ಕಂಡು ಬಾಹ್ಯಾಕಾಶ ತಂತ್ರಜ್ಞಾನದ ಸಂಶೋಧನೆಗೆ ಒತ್ತು ಕೊಟ್ಟಿದ್ದು ಪ್ರೇರಣೆಯ ಮೊದಲ ಹೆಜ್ಜೆ. ಆಮೇಲೆ ಡಾ.ಎಪಿಜೆ ಅಬ್ದುಲ್ ಕಲಾಂ ರಂತಹ ಸಮರ್ಥ ವಿಜ್ಞಾನಿಗಳ ಸತತ ಪರಿಶ್ರಮದಿಂದ ಈ ಮೈಲಿಗಲ್ಲನ್ನು ಮುಟ್ಟಿದ್ದೇವೆ.

ನಾಯಕತ್ವ ಮತ್ತು ಚಂದ್ರಯಾನ ಮಿಷನ್ ಅವಲೋಕನ:

2008 ರಿಂದ ಇಲ್ಲಿಯವರೆಗೂ 3 ಚಂದ್ರಯಾನ ಮಿಷನ್ ಗಳನ್ನು ಭಾರತದ ISRO ಕೈಗೊಂಡಿದ್ದು, ರೋಚಕ ಹಿನ್ನೆಲೆಯನ್ನು ಹೊಂದಿದೆ. ಯಾವುದೇ ಚಂದ್ರಯಾನ ಮಿಷನ್ ಮೂರು ಅಂಶಗಳನ್ನು ಒಳಗೊಂಡಿರುತ್ತದೆ. 1. ಆರ್ಬಿಟರ್ 2. ಲ್ಯಾಂಡರ್ಸ್ 3. ರೋವರ್ಸ್

‘ಆರ್ಬಿಟರ್’ ಎಂದರೆ ಚಂದ್ರನ ಕಕ್ಷೆಯಲ್ಲಿ ಸುತ್ತುವ ಬಾಹ್ಯಾಕಾಶ ವಾಹನ.

‘ಲ್ಯಾಂಡರ್ಸ್’ ಎಂದರೆ ಆರ್ಬಿಟರ್ ನಿಂದ ಚಂದ್ರನ ಮೇಲೆ ಹೋಗಿ ಇಳಿಯುವ ಸಾಧನ.

‘ರೋವರ್ಸ್’ ಎಂದರೆ ಲ್ಯಾಂಡರ್ಸ್ ಚಂದ್ರನ ಮೇಲೆ ಇಳಿದ ಮೇಲೆ ಲ್ಯಾಂಡರ್ಸ್ ನಿಂದ ಹೊರಬಂದು ಚಂದ್ರನ ಮೇಲ್ಮೈ ಮೇಲೆ ಓಡಾಡುವ ತಾಂತ್ರಿಕ ವಾಹನ .

ಚಂದ್ರಯಾನ-I :

ಭಾರತದ ಅಂದಿನ ಹೆಮ್ಮೆಯ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ಅಗಸ್ಟ್ 15, 2003 ರ ಸ್ವಾತಂತ್ರ್ಯೋತ್ಸವದ ದಿನದಂದು ಚಂದ್ರಯಾನ ಕಾರ್ಯಕ್ರಮಗಳನ್ನು ಘೋಷಿಸಿದರು. ತದನಂತರ ಭಾರತದ ಶ್ರೇಷ್ಠ 100 ಬಾಹ್ಯಾಕಾಶ ವಿಜ್ಞಾನಿಗಳ ತಂಡ ರಚನೆಯಾಯಿತು.

ಪರಿಣಾಮವಾಗಿ 2008, ಅಕ್ಟೋಬರ್ 22ರಂದು PSLV-XL ರಾಕೆಟ್ ಮೂಲಕ ಚಂದ್ರಯಾನ-I ಉಡಾಯನವಾಯಿತು. ಇದೊಂದು ಇಸ್ರೋ ಪಾಲಿಗೆ ಬಹುದೊಡ್ಡ ಯಶಸ್ಸು.

ಹೆಗ್ಗಳಿಕೆ:

ಪ್ರಪ್ರಥಮ ಬಾರಿಗೆ ಇಡೀ ವಿಶ್ವದಲ್ಲಿ ಚಂದ್ರನ ಮೇಲ್ಮೈ ಮೇಲೆ ‘ನೀರಿದೆ’ ಎಂದು ಗುರುತಿಸಿದ ಹೆಗ್ಗಳಿಕೆ ನಮ್ಮ ಭಾರತದ ಚಂದ್ರಯಾನ-1 ಕಾರ್ಯಕ್ರಮದ್ದು.

ಚಂದ್ರಯಾನ-II :

ಅಂದಿನ ಹೆಮ್ಮೆಯ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ರವರು 2008 ರಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರೂ, ತಾಂತ್ರಿಕ ಕಾರಣಗಳಿಂದ ಈ ಕಾರ್ಯಕ್ರಮವನ್ನು 2013 ಕ್ಕೆ ಮುಂದೂಡಲಾಯ್ತು. ಇಷ್ಟಾದರೂ 2016 ರವರೆಗೆ ಚಂದ್ರಯಾನ-2 ಉಡಾಯನವಾಗಲೇ ಇಲ್ಲ. ಕಾರಣ ಇಷ್ಟೇ, ಚಂದ್ರನ ಮೇಲೆ ಇಳಿಯುವ ಲ್ಯಾಂಡ್ ರೋವರ್ ನ್ನು ರಷ್ಯಾ ದೇಶವು ನಮಗೆ ತಯಾರಿಸಿ ಒದಗಿಸಿ ಕೊಡಲು ಆಗಲಿಲ್ಲ. ಅಂದರೆ ಆ ಲ್ಯಾಂಡರ್ ತಯಾರಿಕೆಗೆ ನಾವು ರಷ್ಯಾ ದೇಶದ ಮೇಲೆ ಅವಲಂಬಿತವಾಗಿದ್ದೆವು.

ಈ ಪರಿಸ್ಥಿತಿಯನ್ನು ಮನಗಂಡು ಭಾರತ ದೇಶವು ತನ್ನ ಸ್ವಂತ ಸಾಮರ್ಥ್ಯದ ತಂತ್ರಜ್ಞಾನದ ಆಧಾರದ ಮೇಲೆ ಲ್ಯಾಂಡರ್ ನ್ನು ತಯಾರಿಸಲು ಸನ್ನದ್ದವಾಯಿತು. ಇನ್ನೊಬ್ಬರ ಮೇಲೆ ಅವಲಂಬಿತವಾಗಬಾರದು ಎಂಬ ಪಾಠ ನಾವು ಕಲಿತಾಗಿತ್ತು.

ಜುಲೈ 22, 2019 ರಂದು ಚಂದ್ರಯಾನ-2, LVM3 ರಾಕೆಟ್ ಮೂಲಕ ಉಡಾಯನವಾಯಿತು. ಆರ್ಬಿಟರ್ ನ್ನು ಚಂದ್ರನ ಕಕ್ಷೆಗೆ ಅಗಸ್ಟ್ 20 ಕ್ಕೆ ಯಶಸ್ವಿಯಾಗಿ ನಾವು ಸೇರಿಸಿದೆವು ನಿಜ ಆದರೆ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಕ್ರ್ಯಾಷ್ಯ ಆಯ್ತು.

ಚಂದ್ರಯಾನ-2 ಮಿಷನ್ ನಲ್ಲಿ ಈ ಲ್ಯಾಂಡರ್ ಮತ್ತು ರೋವರ್ ಚಂದ್ರನ ಮೇಲ್ಮೈ ಇಳಿಯುವಾಗ ಕ್ರ್ಯಾಷ್ಯ ಆಗಿ, ಮಿಷನ್ ವಿಫಲವಾದ ನಂತರ ಅಂದಿನ ಇಸ್ರೋ ಚೀಫ್ ಕೆ. ಶಿವನ್ ಭಾವನಾತ್ಮಕವಾಗಿ ಕಣ್ಣೀರು ಹಾಕುವಾಗ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿಯು ಅವರನ್ನು ತಬ್ಬಿಕೊಂಡು, ಬೆನ್ನು ಚಪ್ಪರಿಸಿ ಸಾಂತ್ವನ ಹೇಳಿದ್ದು, ಸೋಲು-ಗೆಲುವನ್ನು ಒಂದೇ ತರನಾಗಿ ತೆಗೆದುಕೊಳ್ಳುವ ಭಾರತದ ಸಮರ್ಥ ನಾಯಕತ್ವಕ್ಕೆ ಮಾದರಿಯಾಗಿ ನಮ್ಮೆಲ್ಲರ ಎದೆಯಲ್ಲಿ ನಿಂತುಬಿಟ್ಟಿದ್ದು ನಮಗೆಲ್ಲ ಗೊತ್ತೇ ಇದೆ. ಯಾವುದೇ ಮಹತ್ತರವಾದ ಸಾಧನೆಗೆ ಇಂತಹ ಪ್ರೋತ್ಸಾಹಿಕ ನಾಯಕತ್ವ ಬೇಕೇ ಬೇಕು.

ಇಷ್ಟಾದರೂ ಚಂದ್ರನ ಮೇಲ್ಮೈ ಮೇಲೆ ಸುತ್ತುವ ಆ ಆರ್ಬಿಟರ್ ಮುಂದಿನ 7.5 ವರ್ಷಗಳವರೆಗೆ ಕೆಲಸವನ್ನು ನಿರ್ವಹಿಸಬಲ್ಲದು. ಹೀಗಾಗಿ ಚಂದ್ರನ ಮೇಲ್ಮೈ ಮೇಲಿನ ಚಿತ್ರಗಳನ್ನು ನಮಗೆ ಇಂದಿಗೂ ಕಳುಹಿಸುತ್ತಿದೆ. ಅಂದರೆ ಚಂದ್ರಯಾನ-2 ಇನ್ನೂ ಕಾರ್ಯಗತವಾಗಿದೆ. ಸಂಪೂರ್ಣ ವಿಫಲವಾಗಿಲ್ಲ ಎನ್ನಬಹುದು.

ಚಂದ್ರಯಾನ-III :

ಚಂದ್ರಯಾನ-3 ಮಿಷನ್, 14 ಜುಲೈ 2023 ರಂದು ಉಡಾಯನಗೊಂಡಿತು. ಚಂದ್ರಯಾನ-3 ಬಾಹ್ಯಕಾಶ ವಾಹನದ ವಿಕ್ರಮ್ ಲ್ಯಾಂಡರ್ ಮತ್ತು ರೋವರ್ ಗಳು ಯಶಸ್ವಿಯಾಗಿ 23 ಆಗಸ್ಟ್ 2023 ರಂದು ಇಡೀ ಜಗತ್ತಿನ ಮುಂದೆ, ಹೆಮ್ಮೆಯ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ರವರ ಸಮ್ಮುಖದಲ್ಲಿ ಚಂದ್ರನ ಮೇಲ್ಮೈ ಮೇಲೆ ಇಳಿಯಿತು ಮತ್ತು ಇದರ ನೇರ ಪ್ರಸಾರವು ಭಾರತದ ತಂತ್ರಜ್ಞಾನ ಹಾಗೂ ಭಾರತದ ಸಮರ್ಥ ನಾಯಕತ್ವದ ಹೆಗ್ಗುರುತಾಗಿ ಉಳಿದುಬಿಟ್ಟಿತು.

ಯಶಸ್ವಿ ಚಂದ್ರಯಾನ-3 ಚಂದ್ರನ ಅಂಗಳಕ್ಕೆ ತಲುಪುವ ದಿನ ಹೆಮ್ಮೆಯ ಪ್ರಧಾನಿ BRICS ಶೃಂಗ ಸಭೆಗಾಗಿ ದಕ್ಷಿಣ ಆಫ್ರಿಕಾದಲ್ಲಿದ್ದರು. ಅಲ್ಲಿಂದಲೇ ಲೈವ್ ಬಂದು ರಾಷ್ಟ್ರಧ್ವಜವನ್ನು ಕೈಯಿಂದ ಕುಲುಕಿ ಎತ್ತಿ ಹಿಡಿದು ನಮಗೆ ನೆನಪಿದೆ. ಅದಾದ ಮೂರೇ ಮೂರು ದಿನಗಳ ನಂತರ ಆಫ್ರಿಕಾ ದಿಂದ ಬಂದವರೇ ನೇರವಾಗಿ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಭೇಟಿ ಕೊಟ್ಟು ಭಾವನಾತ್ಮಕವಾಗಿ ಖುಷಿಯಿಂದ ಕಣ್ಣೀರಿಡುತ್ತಾ ಶೀಘ್ರದಲ್ಲಿ ಅತಿ ಶೀಘ್ರವಾಗಿ ನಿಮ್ಮೆಲ್ಲರ ದರ್ಶನ ಪಡೆಯಲು ಕಾತುರನಾಗಿದ್ದೆ ಎಂದು ಇಸ್ರೋ ವಿಜ್ಞಾನಿಗಳಿಗೆ ಸೆಲ್ಯೂಟ್ ಮಾಡಿದರು. ಇಂತಹ ನಾಯಕತ್ವ ಹೆಮ್ಮೆ ಅಲ್ಲವೇ.

ಹಾಗೆಯೇ ಅಗಸ್ಟ್ 23 ನ್ನು ರಾಷ್ಟ್ರೀಯ ‘ಬಾಹ್ಯಾಕಾಶ ದಿನ’ ಎಂದು ಘೋಷಿಸಿ, ಯಾವ ಚಂದ್ರನ ಮೇಲ್ಮೈಯಲ್ಲಿ ‘ವಿಕ್ರಂ ಲ್ಯಾಂಡರ್’ ಇಳಿದು ಸ್ಪರ್ಶಗೊಂಡಿದೆಯೋ ಆ ಸ್ಥಳವನ್ನು “ಶಿವಶಕ್ತಿ ಪಾಯಿಂಟ್” ಎಂದು ಕರೆಯಲಾಗುವುದು ಎಂದರು.

ಇಂತಹ ನಾಯಕತ್ವದಲ್ಲಿ ಇನ್ನೂ ಹೆಚ್ಚಿನ ಚಂದ್ರಯಾನ ಮಿಷನ್ ಗಳು ಭಾರತದ ಹೆಸರನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲಿ ಎಂದು ನಾವು ನೀವೆಲ್ಲರೂ ಹೆಮ್ಮೆಯಿಂದ ಆಶಿಸೋಣ.

ಜೈ ಹಿಂದ್

Share This Article
Leave a comment