July 28, 2021

Newsnap Kannada

The World at your finger tips!

ಪಮ್ಮು ಆದಳೇ ಸ್ಲಿಮ್ಮು….?

Spread the love

ಇದೇನೆ ಪಮ್ಮು ಮದ್ವೆಗೆ ಮುಂಚೆ ಒಳ್ಳೇ ಐಶ್ವರ್ಯ ರೈ ಥರ ಇದ್ದೋಳು ಈಗ ಪ್ರೀತಿ ಗಂಗೂಲಿ ಆಗೋಗಿದೀಯಲ್ಲೇ…? ಪ್ರಮೀಳಾಳ ಆತ್ಮೀಯ ಸೋದರತ್ತೆ ಹೀಗೆಂದಾಗ ಪ್ರಮೀಳ ಮೂತಿ ಊದಿಸಿಕೊ೦ಡು ಕೂಡದೇ ಇರಲು ಸಾಧ್ಯಾನಾ? ನಾಲ್ಕಡಿ ಎಂಟಿಂಚು ಗಿಡ್ಡಗೆ ಗುಂಡಗೆ ಎನ್ನುವಂತೆ ಪ್ರಮೀಳಾ ಗುಂಡು-ಗುಂಡಾಗಿ ಓಡಾಡಿದರೆ ಸಾಕು ಡ್ರಮ್ಮು ಉರುಳಿಸಿದಂತೆ ಎನ್ನುವರು. ಪ್ರತೀ ಸಲ ಅವಳನ್ನು ಸಂತೈಸುವುದು ಪಾಂಡುರಂಗನ ಕೆಲಸ.
“ಅಯ್ಯೋ ಬಿಡೆ. ನೀನೇನು ಸಿನಿಮಾದಲ್ಲಿ ನಟನೆ ಮಾಡಬೇಕಾ? ನಿಮ್ಮ ಸೋದರತ್ತೇಂತೂ ಹೋಲಿಸೋದಕ್ಕೇ ಸರಿಯಾಗಿ ಬರಲ್ಲ. ಪ್ರೀತಿ ಗಂಗೂಲಿ ಯಾವುದೋ ತಾತರಾಯನ ಕಾಲದೋಳು. ನಿನ್ನನ್ನ ಅನ್ನೋಕೆ ಹೋಗಿ ಅವರ ಜನರಲ್ ನಾಲೆಡ್ಜ್ ಗೊತ್ತಾಯ್ತು ಅಷ್ಟೇ. ಆ ವಿಷ್ಯ ಬಿಡು ಇನ್ನೇನು ಹೇಳಿದ್ರು ನಿನ್ನ ಸೋದರತ್ತೆ. …” ಅವಳನ್ನು ವಿಷಯಾಂತರ ಮಾಡಿಸದೇ ವಿಧಿ ಇರಲಿಲ್ಲ.
’ನಿಜ ಹೇಳ್ರಿ.. ಪ್ರೀತಿ ಗಂಗೂಲಿ ತುಂಬಾ ದಪ್ಪಗಿದ್ಲ..?”
“ಬಿಡೆ ಅವಳ ವಿಷ್ಯ. ಅದೇನೋ ತುಂಬಾ ನಗ್ತಾ ಇದ್ದೆ. ಏನದು ವಿಷ್ಯ..?
“ ಓ ಅದಾ… ?”
ಪಮ್ಮು ಮುಖ ಸ್ವಲ್ಪ ಸಡಿಲವಾಯ್ತು. ಕಿಲಾಡಿ ಸೋದರತ್ತೆ ಒಂದೇ ಬಾಣದಲ್ಲಿ ಎರಡು ಹಕ್ಕಿಗಳನ್ನು ಹೊಡೆದಿದ್ದರು. ಒಂದು ಕಡೆ ಇವಳನ್ನು ದಪ್ಪ ಎಂದು ಸಣ್ಣಗಾಗಲು ಟಿಪ್ಸ್ ಕೂಡ ಕೊಟ್ಟಿದ್ದರು.
ರ್ರೀ.. ದಿನಾ ಬೆಳಿಗ್ಗೆ ಬಿಚ್ಚಗಿರೋ ನೀರಿಗೆ ನಿಂಬೆ ಹಣ್ಣಿನ ರಸ ಮತ್ತು ಜೇನುತುಪ್ಪ ತೆಗೆದುಕೊಂಡರೆ ಸಣ್ಣ ಆಗ್ತೀವಂತೆ….’
’ಕುಡಿ ಯಾರು ಬೇಡಾ ಅಂದ್ರು. …’ ಸಧ್ಯಕ್ಕೆ ತನಗೇನೂ ತೊಂದರೆ ಇಲ್ಲ ಎ೦ದುಕೊಂಡ ಪಾಂಡುರಂಗ. ಆದರೆ ಅವನ ಗ್ರಹಚಾರಕ್ಕೆ ಅದು ಅಷ್ಟಕ್ಕೇ ನಿಲ್ಲಲಿಲ್ಲ.
“ರ್ರೀ ಆಮೇಲೆ ಎರಡು ಕಿಲೋಮೀಟರ್ ವೇಗವಾಗಿ ನಡೀಬೇಕು. ನೀವೂ ನನ್ನ ಜೊತೆ ಬರಬೇಕು. ಮಾತಾಡ್ಕೊಂಡು ಹೋಗೋಣಾರೀ…’
ಹೇಳಿ ಕೇಳಿ ಪಾಂಡುರಂಗ ಬರೋಬ್ಬರಿ 40 ಕೆ.ಜೆ. ದಿನಾ ನಡೆದೂ ನಡೆದೂ ಇಪ್ಪತ್ತು ಕೆ.ಜಿ.ಆಗೋದ್ರೆ ಅಂತ ಹೆದರಿ ನಡುಗಿದ. ಇಷ್ಟಕ್ಕೂ ಸುಮ್ಮನೆ ಕೂಡುವಳೇ ಪಮ್ಮಿ ? ಅದೂ ಅವಳ ಸೋದರತ್ತೆ ಹೇಳಿದ ಮೇಲೆ? ಅಲಾರಂ ಕ್ಯುಂಯ್ ಎಂದದ್ದೇ ತಡ ಗಂಡನನ್ನು ಎಬ್ಬಿಸಿಕೊಂಡು ಹೊರಟೇಬಿಟ್ಟಳು. ನಾಲ್ಕು ಹೆಜ್ಜೆ ಇಟ್ಟು ಉಸ್ಸಪ್ಪ ಎನ್ನುತ್ತಾಳೆ. ಹಳ್ಳಿಗಾಡಿನ ಬಸ್ಸಿನಂತೆ ಅವಳು ಕುಳಿತಲ್ಲೆಲ್ಲಾ ಒಂದಿಷ್ಟು ನೀರು ಸುರಿದು ಅವಳ ಬಾಯಿಗೆ
ಪಾಂಡುರಂಗ ಕರೆದುಕೊ೦ಡು ಹೋಗಿ ಮನೆ ಸೇರುವ ಹೊತ್ತಿಗೆ ಅವನಿಗೆ ಸಾಕುಬೇಕಾಗುತ್ತಿತ್ತು. ಸೀರೆಯಲ್ಲಿ ನಡೆಯುವುದು ಕಷ್ಟ ಎ೦ದು ಜಾಗಿಂಗ್ ಡ್ರೆಸ್, ಕಾಲಿಗೆ ಕಾಲುಚೀಲ, ಬೂಟು ತಲೆಗೆ ಸ್ಕಾರ್ಫ್ ಎಲ್ಲವೂ ಬಂತು. ಪಾರ್ಕಿನಲ್ಲಿ ಎರಡು ರೌಂಡು ಹೊಡೆದು ಕುಳಿತಳೆಂದರೆ ಮುಗಿಯಿತು ಅವಳ ವಾಕಿಂಗ್.
ರ್ರೀ ನನ್ನ ಕೈಯಲ್ಲಿ ಆಗಲ್ಲ ನನ್ನ ಕಾಲೆಲ್ಲಾ ನೋವಾಗ್ತಾ ಇದೆ. ಪ್ಲೀಸ್ ಸ್ಕೂಟರ್ ತಂದುಬಿಡ್ರಿ. ’ ಎನ್ನುವಳು.
“ಏಳು ಪಮ್ಮು ಏಳು. ನಿನ್ನ ಸೋದರತ್ತೆ ನಿನಗೆ ಅಪ್ಪಣೆ ಕೊಟ್ಟಿಲ್ಲವಾ? ನೀನು ಐಶ್ವರ್ಯ ರೈ ಆಗಬೇಡ್ವ? ನಿಮ್ಮ ಮಹಿಳಾ ಸಮಾಜದಲ್ಲಿ ನಿನ್ನನ್ನ ರ್ರೀ ಪ್ರಮೀಳಾ ಏನು ಮಾಡಿ ಇಷ್ಟು ಸಣ್ಣಗಾದ್ರಿ ಅಂತಾ ಕೇಳಬೇಡ್ವ? ಪಮ್ಮು ನೀನು ಯಾರಿಗೂ ಕಮ್ಮಿ ಇಲ್ಲಾ ಕಣೆ ಏಳು ಎದ್ದೇಳು. ಧೈರ್ಯದಿಂದ ಮುನ್ನುಗ್ಗು. ನಿನ್ನ ದೇಹವನ್ನು ಆವರಿಸಿಕೊಂಡಿರುವ ಈ ಕೊಬ್ಬನ್ನು ಬಡಿದೋಡಿಸು.” ಎಂದ. ಪ್ರಮೀಳಾ ಕವಾಯತಿನಲ್ಲಿ ಭಾಗವಹಿಸುವ ಸಿಪಾಯಿಯ೦ತೆ ಎದ್ದು ಗಂಡನನ್ನು ಅನುಸರಿಸಿದಳು. ಇಷ್ಟು ಮಾಡುವಷ್ಟರಲ್ಲಿ ಅವನು ನಾಲ್ಕಾರು ಕೆ.ಜಿ. ಕಮ್ಮಿ ಆಗಿದ್ದ. ಒಂದು ವಾರ ಮು೦ದುವರೆಯಿತು. ಪಮ್ಮು ಕೈಯಲ್ಲಿ ಕರಪತ್ರ ನೋಡಿ ಯಾವುದೋ ಸೀರೆ, ಡ್ರೆಸ್ ಮಾರಾಟದ ಪತ್ರ ಇನ್ನೇನು ಆಸ್ಫೋಟಿಸುತ್ತದೆ ಅದನ್ನು ಹೇಗೆ ತಪ್ಪಿಸಿಕೊಳ್ಳುವುದೆಂದು ಯೋಚಿಸುತ್ತಿರುವಾಗಲೇ ಅವನಿಗೆ ಮತ್ತೊಂದು ಅಘಾತ ಕಾದಿತ್ತು.
ರ್ರೀ… ಪ್ರಭಾ ಶಂಕರ್ ಗುರೂಜಿ ನಮ್ಮ ಲೇಔಟ್ ನಲ್ಲಿ ಪ್ರಾಣಾಯಾಮ, ಯೋಗ ಶಿಬಿರ ನಡೆಸ್ತಾ ಇದಾರೆ. ಅವರೇ ಸ್ವತ: ಶಿಬಿರದಲ್ಲಿ ಭಾಗವಹಿಸ್ತಾ ಇದಾರೆ. ರ್ರೀ ನಾನು ಸೇರ್ತೀನಿ.
“ಈ ನಿಂಬೇರಸ, ವಾಕಿಂಗ್ ಗತಿ ಗೋವಿಂದಾನಾ…? ಸರಿ ದುಡ್ಡು ಎಷ್ಟಂತೆ…?
’ಬರೀ ಐದು ಸಾವಿರ…..” ಹಣದ ವಿಷ್ಯ ಕೇಳಿದ ತಕ್ಷಣ ಪಾಂಡುರಂಗ ತನ್ನ ಕಿವಿಯ ಸ್ಪೀಕರ್ ಅಫ್ ಮಾಡಿಕೊ೦ಡು ಟಿ.ವಿ ನೋಡುತ್ತಾ ಕುಳಿತು ಬಿಟ್ಟ. ಪಮ್ಮು ಮುಖ ಊದಿಸಿಕೊಂಡು ತನ್ನ ಶಕ್ತಿಯನ್ನೆಲ್ಲಾ ಬಿಟ್ಟು ಡಬ್ಬ್ ಎಂದು ಟಿ.ವಿ. ಆಫ್ ಮಾಡಿದಳು.
’ಲೇ ಬೇಡ್ವೆ. ಸೊಂಟ, ಕೈ ಕಾಲು ಹಿಡಕೊಂಡು ಆಮೇಲೆ ಡಾಕ್ಟರ್ ಹತ್ತಿರ ಹೋಗಬೇಕಾಗುತ್ತೆ. ಈಗ ಸುಮ್ನೆ ಮಲಕ್ಕೋ ಹೋಗು. ಬೆಳೆಗ್ಗೆ ವಾಕಿಂಗ್ ಹೋಗಬೇಕು….’
’ವಾಕಿಂಗ್ ಬೇಕಾದ್ರೆ ನೀವು ಹೋಗಿ ನನ್ನನ್ನ ಶಿಬಿರದಲ್ಲಿ ಬಿಟ್ಟು. ನಾನಂತೂ ಗೂರೂಜಿ ಶಿಬಿರಕ್ಕೆ ಹೋಗುವವಳೇ. ಶ್ಯಾಮಲ, ರಾಗಿಣಿ, ನಮ್ಮ ಮಹಿಳಾ ಸಮಾಜದಿಂದಾನೇ 5-6 ಜನ ಬರ್ತಾ ಇದಾರೆ. ಮಾರನೆ ದಿನದಿಂದ ಹೊಸ ಅಧ್ಯಾಯ ಪ್ರಾರಂಭಗೊಂಡಿತು. ಪಾಂಡುರಂಗ ನ ೨೦ ಇಂಚಿನ ಸೊಂಟವನ್ನು ಹೆಬ್ಬಾವಿನಂತೆ ಬಳಸಿಕೊಂಡಿತ್ತು ಪಮ್ಮೂಳ ಕೈಯಿ. ಕುಟರ್ ಕುಟರ್ ಎಂದು ಶಬ್ದ ಮಾಡುತ್ತಾ ಶಿಬಿರದತ್ತ ದೌಡಾಯಿಸಿತು ಅವನ ಪಾಪದ ಸ್ಕೂಟರ್. ಪಮ್ಮು ವಿಜಯದ ಕಹಳೆ ಊದುತ್ತಾ ಒಳಗೆ ನಡಿದಳು. ಬಡಪಾಯಿ ಪಾಂಡು ರಂಗ ಐದು ಸಾವಿರಗಳನ್ನು ತುಂಬಿ ಭಾರವಾದ ಹೆಜ್ಜೆಗಳನ್ನಿಡುತ್ತಾ ವಾಕಿಂಗ್ ಹೊರಟ. ಒಂದು ನಾಲ್ಕು ದಿನ ಹೋಗಿರಬಹುದು, ಇದ್ದಕ್ಕಿದ್ದ೦ತೆ ಪಮ್ಮು ತನಗೆ ಅಗಾಧವಾದ ಮಂಡಿನೋವು, ಸೊಂಟಾನೋವೆಂದು ಮಲಗಿದವಳು ಏಳಲೇ ಇಲ್ಲ. ಏತನ್ಮದ್ಯೆ ಇವಳ ನೆಂಟರ ಮದುವೆ ಬೇರೆ. ಹಾಗೆ ಕಷ್ಟಪಟ್ಟುಕೊ೦ಡು ಪಮ್ಮು ಪಾಂಡುರಂಗನನ್ನೂ ತಳ್ಳಿಕೊಂಡು ಹೊರಟೇಬಿಟ್ಟಳು. ಅವನ ಗ್ರಹಚಾರಕ್ಕೆ ಅವಳ ಸೋದರತ್ತೆ ಛತ್ರದ ಬಾಗಿಲಲ್ಲೇ ನಿಂತಿದ್ದವರು.
“ಏನೇ ಪ್ರಮೀಳ. ಬರ್ತಾ ಬರ್ತಾ ನಿನ್ನ ಗಂಡ ನರಪೇತಲ ನಾರಾಯಣ ಆಗ್ತಾ ಇದಾರೆ. ನೀನು ಮಾತ್ರಾ ಆ ಸುಮೋದವರ ಜೊತೆ ಸ್ಪರ್ಧೆಗೆ ನಿಂತವಳ ಹಾಗೆ ಊದ್ತಾ ಇದೀಯ. …!!!” ಎಂದುಬಿಡೋದೆ?
ಅವಳ ಉತ್ಸಾಹವೆಲ್ಲಾ ಜರ್ರೆಂದು ಇಳಿದು ಹೋಯಿತು. ಅವಳಿಗೆ ಊಟ ಮಾಡಲು ಮನಸ್ಸಾಗಲಿಲ್ಲ.
“ರ್ರೀ ನಿಜವಾಗಲೂ ಹೇಳಿ. ನಾನು ಸ್ವಲ್ಪಾನೂ ಸಣ್ಣಾ ಆಗಿಲ್ವಾ… ಅತ್ತೆ ನೋಡಿ ಹೇಗೆ ಹೇಳ್ತಾರೆ….?”
’ಯಾವುದನ್ನಾದರೂ ನೆಟ್ಟಗೆ ಒಂದು ತಿಂಗಳು ಮಾಡಿದರೆ ಸರಿ ಹೋಗುತ್ತೆ. ನಾಲ್ಕು ದಿನ ಮಾಡಿ ಸಣ್ಣಾ ಆಗಿಲ್ವಾ ಅಂದ್ರೆ ಹೇಗಾಗುತ್ತೆ…?
’ಮತ್ತೆ ನೀವು ಹೇಗೆ ಸಣ್ಣಾ ಅದ್ರಿ….?”
’ನಿನ್ನನ್ನ ಬಿಟ್ಟು ನಾನು ವಾಕಿಂಗ್ ಮಾಡ್ತಾ ಇದೀನಲ್ಲ. ಅದೂ ಅಲ್ದೆ ನನ್ನ ಬಾಡಿ ನೇಚರ್ರೇ ಹಾಗೆ ಕಣೆ.
ಮನೆಯ ಯಜಮಾನ್ತಿ ಇವಳನ್ನು ನೋಡಿ “ಏ ಬಾರಪ್ಪ ಇವಳು ನನಗೆ ತುಂಬಾ ಬೇಕಾದವಳು ಇನ್ನೊಂದು ಸ್ವೀಟು ಹಾಕು“ ಎಂದು ಎರಡೆರಡು ಸ್ವೀಟು ಹಾಕಿಸಿದರು. ಇವಳು ವೇಸ್ಟ್ ಯಾಕೆ ಮಾಡುವುದು ಎಂದು ತನ್ನ ಗುಡಾಣದಂತಹ ಹೊಟ್ಟೆಗೆ ತುರುಕಿಕೊಂಡಳು. ಇನ್ನು ಸಣ್ಣ ಹೇಗಾಗ್ತಾಳೆ. ಊಟ ಮುಗಿದು ಎಲ್ಲರೂ ಹೊರಟರೂ ಇವಳ ಪತ್ತೆ ಇಲ್ಲ. ಇನ್ನೇನು ಪಾಂಡುರಂಗ ಕೆರಳಿ ಕೆಂಡವಾಗಬೇಕು ಆಗ ಪ್ರತ್ಯಕ್ಷವಾದಳು. ಅವಳ ಮುಖ ಪ್ರಸನ್ನವಾಗಿರುವುದು ನೋಡಿ ಪಾಂಡುರಂಗ ನಿಗೆ ಮತ್ತಷ್ಟು ಗಾಭರಿಯಾಯ್ತು. ಇವಳ ಸೋದರತ್ತೆ ಇನ್ನೇನು ಫಿಟ್ಟಿಂಗ್ ಇಟ್ಟಿದಾರೋ ಅಂತ. ಅವನ ಯೋಚನೆಗೆ ಬ್ರೇಕು ಹಾಕಿದಳು ಪಮ್ಮು.
ರ್ರೀ ನಮ್ಮ ಉಮಚ್ಚಿ ಇದಾಳಲ್ಲ.
’ಯಾವೋಳೇ ಅವಳು….?’
ಅದೇ ನಮ್ಮ ಚಿಕ್ಕಮ್ಮನ ಅಣ್ಣನ ಸೊಸೆಯ ತಂಗಿ ನಾದಿನಿ.
’ಅದಕ್ಕೇನೀಗ ನಾನೇನು ಅವಳ ಜೊತೆ ಡ್ಯಾನ್ಸ್ ಮಾಡಬೇಕಾ….’
ಥೂ ಹೋಗ್ರೀ. ನನಗಿಂತಾ ದಪ್ಪ ಇದ್ಲು. ಪ್ರತಿ ದಿನ ವಾಕರ್ ನಲ್ಲಿ ಜಾಗಿ೦ಗ್ ಮಾಡಿ ಇಪ್ಪತ್ತು ಕೇಜಿ ಇಳಿಸಿಕೊಂಡಿದಾಳಂತೆ. ನಂಗೂ ವಾಕರ್ ಬೇಕೂರಿ”
ಮತ್ತೆ ಬಂತು ಪಾಂಡುರಂಗ ನ ಜೇಬಿಗೆ ಕತ್ತರಿ. ಸರಿ ಅದೂ ಬಂದು ಮೂಲೆಯ ಜಾಗವನ್ನು ಆಕ್ರಮಿಸಿತು. ಪಾಂಡು ರಂಗ ತನ್ನ ಕೋಪವನ್ನೆಲ್ಲಾ ಹೋಗ್ತಾ ಬರ್ತಾ ಅದನ್ನು ಗುದ್ದಿ ತೀರಿಸಿಕೊಳ್ಳುತ್ತಿದ್ದ. ಪಮ್ಮು ಅದಕ್ಕೆ ಅರಿಸಿನ ಕುಂಕುಮ ಹಚ್ಚಿ ಅಮೃತ ಘಳಿಗೆಯಲ್ಲಿ ಪ್ರಾರಂಭಿಸೇ ಬಿಟ್ಟಳು. ಸುಸ್ತಾದಾಗ ಮಧ್ಯೆ ಮಧ್ಯೆ ನೀರು ಬಿಸ್ಕತ್ತು, ಜ್ಯೂಸು, ಕಾಫಿ ಸಮಾರಾಧನೆ ನಡಿಯುತ್ತಿತ್ತು. ಒಂದು ವಾರಕ್ಕೂ ಮುಂಚಿತವಾಗಿಯೇ ವಾಕರ್ ಸ್ಥಬ್ಧವಾದಾಗ ಪಾಂಡುರಂಗ ಗೊಣಗಾಡಿದ. ಧೂಳು ಕುಡಿಯುತ್ತಾ ಕುಳಿತಿದ್ದ ಅದನ್ನು ಒಂದು ದಿನ ಆರಕ್ಕೆ ಮೂರಕ್ಕೆ ಮಾರಿಬಿಟ್ಟ. ’ಸಧ್ಯ ಪೀಡೆ ತೊಲಗಿತು..’ ಅಂತಾ ಪಮ್ಮು ನಿಟ್ಟುಸಿರು ಬಿಟ್ಟಳು. ಸಧ್ಯ ಎಲ್ಲ ತಾಪತ್ರಯವೂ ತಪ್ಪಿತು ಅಂತಾ ಅವನು ನಿಟ್ಟುಸಿರು ಬಿಡುವ ಮೊದಲೇ ಅವಳ ಬೀರುವಿನಲ್ಲಿ ಅದೇನೋ ಪುಡಿ, ಮಾತ್ರೆಗಳನ್ನು ನೋಡಿ ಕೆಂಡಾಮಂಡಲವಾದ ಪಾಂಡುರಂಗ. ಈ ದಿನ ಬಿಡಲೇಬಾರದು. ಪ್ರಮೀಳಾಳನ್ನು ಸರಿಯಾಗಿ ತರಾಟೆಗೆ ತೆಗೆದುಕೊಳ್ಳಬೇಕು ಎಂದು ಕನ್ನಡಿ ಮುಂದೆ ನಿಂತು ಒಳ್ಳೆಯ ತಯಾರಿ ತೆಗೆದುಕೊಂಡ.

“ಏನೇ ಅದು ಬೀರೂನಲ್ಲಿ…
“ಏನು…ವಾಯ್ಸ್ ರೈಜ್ ಆಗೋಗಿದೆ. ಏನ್ರೀ… …?’
’ಲೇ ಅಲ್ವೆ. ಅದೇ ಬೀರುನಲ್ಲಿ ಇಟ್ಟಿರೋ ಮಾತ್ರೆ ಯಾರದು ಅಂದೆ……’
’ನ೦ದೇ. ಇನ್ಮೇಲಿ ವ್ಯಾಯಾಮಾ, ವಾಕಿ೦ಗ್ ಏನು ಮಾಡಬೇಕಿಲ್ಲ. ಇದನ್ನ ತೊಗೊಂಡ್ರೆ ಸಾಕು ಸಣ್ಣಾ ಆಗ್ತೀನಿ. ’
ಸರಿ ಅದಕ್ಕೆಲ್ಲಾ ದುಡ್ಡು…..?’
”ನೀವು ನಂಗೆ ಹೇಳ್ದೆ ಕೇಳ್ದೆ ವಾಕರ್ ಮಾರಲಿಲ್ವ…? ಅದರ ದುಡ್ಡಲ್ಲೇ ತೊಗೊ೦ಡೆ. ಪಾ೦ಡುರಂಗ ಕುಸಿದು ಹೋದ. ಆ ಹಾಳಾದ ಕುಂಭಯ್ಯನಿಗೆ ಮಾರಿದರೆ. ಅವನ ಹೆಂಡತಿ ಮಹಿಳಾ ಸಮಾಜದಲ್ಲಿ ಪ್ರಮೀಳಾ ಕೈಯಲ್ಲಿ ದುಡ್ಡು ಕೊಟ್ಟಿದಾಳೆ. ಸಾಲದೂಂತ ’ಅಲ್ಲಾ ಸಾರ್ ನೀವು ನೋಡಿದರೆ ಮಡಿಕೋಲು ಇದ್ದಹಾಗೆ ಇದೀರಿ. ನಿಮ್ಮ ವೈಫ್ ನೋಡಿದರೆ ರಮಡೋಲು ಎನ್ನುವ ಬಿಟ್ಟಿ ಕಾಮೆಂಟ್ಸ್ ಬೇರೆ. ಇವಳ ಮಾತ್ರೆಗಳು ಮುಗಿದು ಡಬ್ಬಗಳು ಖಾಲಿಯಾದವು. ಆದರೆ ಪಮ್ಮು ಮಾತ್ರ ಅದೇ ವೇಸ್ಟ್ ಲೈನ್ ಉಳಿಸಿಕೊಂಡಿದ್ದಳು.
’ಇನ್ನು ಸಣ್ಣಗಾಗಲು ತಮ್ಮ ಮು೦ದಿನ ಯೋಜನೆ ಏನು ಪ್ರಮೀಳಾದೇವಿಯವರೆ…/’ ಸುಮ್ಮನಿರಲಾರದೆ ಪಾಂಡುರಂಗ ಬೀದಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆದಂತೆ. ತನ್ನ ಜೇಬಿಗೆ ಕತ್ತರಿಯನ್ನು ತಾನೇ ಆಹ್ವಾನಿಸಿಕೊ೦ಡ.
ನಮ್ಮ ಮಹಿಳಾ ಸಮಾಜದವರೆಲ್ಲಾ ನೇಚರ್ ಕ್ಯೂರ್ ಗೆ ಸೇರ್ತಾ ಇದೀವಿ. ನಾನು ವಾಪಸ್ಸು ಬ೦ದಾಗ ನಿಮಗೆ ಗುರ್ತೇ ಸಿಗಲ್ಲ.” ಎಂದಳು
’ನಾನಂತೂ ಒಂದು ಪೈಸೇನೂ ಕೊಡಲ್ಲ. ” ಪಾ೦ಡುರ೦ಗ ತನ್ನ ಅಸಹಾಯಕತೆಯನ್ನು ತೋಡಿಕೊಂಡುಬಿಟ್ಟ.
’ಬೇಡ. ನಿಮ್ಮ ಕ್ರೆಡಿಟ್ ಕಾರ್ಡ್ ನ೦ಬರ್ ಕೊಟ್ಟಿದೀನಿ. ಅದು ತ೦ತಾನೆ ಡೆಬಿಟ್ ಆಗುತ್ತೆ….’ ಪಮ್ಮು ಸ್ವಲ್ಪವೂ ವಿಚಲಿತಳಾಗದೇ ಹೇಳಿದಳು.. ಪಾಂಡುರಂಗನ ಮುಖ ಕಪ್ಪಿಟ್ಟುಕೊ೦ಡಿತು. ಅವನಿಗೆ ಒಂದೇ ಖುಷಿ ಎಂದರೆ ಒ೦ದು ಹತ್ತು ದಿನ ಯಾರೂ ಹೇಳುವವರೂ ಇಲ್ಲ ಕೇಳುವವರೂ ಇಲ್ಲ. ಬೇಕಾದ ಕಡೆ ಬೇಕಾದ ತಿಂಡಿಯನ್ನು ತಿಂದುಕೊಂಡು ಆರಾಮವಾಗಿ ಓಡಾಡಿಕೊಂಡಿರಬಹುದು. ಹನ್ನೊಂದನೆಯ ದಿನ ಪಮ್ಮು ಪಾದಾರ್ಪಣೆ ಮಾಡಿದಾಗಲೇ ಅವನಿಗೆ ಗೊತ್ತಾಗಿದ್ದು ಹತ್ತು ದಿನಗಳು ಹೇಗೆ ಕಳೆದು ಹೋದವೋ ತಿಳಿಯದಾಯಿತೆ೦ದು. ಒಂದು ಹದಿನೈದು ಸಾವಿರ ಖರ್ಚಾದರೂ ಪಮ್ಮು ಸ್ವಲ್ಪ ಸಣ್ಣಗೆ ಸೊರಗಿದ೦ತೆ ಕಾಣುತ್ತಿದ್ದಳು. ಫೋನ್ ಇಲ್ಲ. ಯಾರ ಜೊತೆಯೂ ಸಂಪರ್ಕವೂ ಇಲ್ಲ. ಇನ್ನು ಊಟ, ತಿಂಡಿಯ ಚಿ೦ತೆಯೇ ಇಲ್ಲ. ಬರೀ ಗೆಡ್ಡೆ ಗೆಣಸು.
’ಪಮ್ಮು ನೀನು ಮೊದಲು ಮಾಡಬೇಕಾದ ಕೆಲಸ ಅ೦ದ್ರೆ. ನಿಮ್ಮ ಸೋದರತ್ತೆ ಮನೆಗೆ ವಿಜಿಟ್ ಕೊಟ್ಟು ಬಾ.. ಹೊಟ್ಟೆ ಉರಿದುಕೊಳ್ಳಲಿ. ಏನೆಂದುಕೊಂಡು ಬಿಟ್ಟಿದಾರೆ ಅವರು ಪ್ರಮೀಳಾ ಅಂದ್ರೆ ’ ಎ೦ದದ್ದೇ ತಡ “ಸರಿ. ನೀವೂ ಈವತ್ತು ಸಂಜೆ ಆಫೀಸಿಂದ ಬೇಗ ಬನ್ನಿ ಹೋಗೋಣ. ಹಾಗೆ ಬರ್ತಾ ಒ೦ದು ಒಳ್ಳೆ ರೆಸ್ಟೋರೆ೦ಟ್ ಗೆ ಹೋಗಿ ಬರೋಣ. ನನ್ನ ಬಾಯೆಲ್ಲ ಕೆಟ್ಟು ಹೋಗಿದೆ. ಬರೀ ಸೊಪ್ಪು ತರಕಾರಿ ತಿಂದು…’ ಎಂದು ಸಂಜೆಯ ಪ್ರೋಗ್ರಾಮ್ ಫಿಕ್ಸ್ ಮಾಡಿಯೇ ಬಿಟ್ಟಳು.
ಇನ್ನೇನು ತಾನೆ ಹೇಳುತ್ತಾನೆ. ತಾನೇ ಬರಮಾಡಿಕೊಂಡ ಗೊಡವೆ ಇದು.
ಸ್ವಲ್ಪ ಯೋಚ್ನೆ ಮಾಡೇ. ತಿಂದು ಹೆಚ್ಚು ಕಮ್ಮಿ ಆದ್ರೆ ಮತ್ತೆ ನೇಚರ್ ಕ್ಯೂರ್ ಗೆ ಹಣ ಕೊಟ್ಟು ಡಾಕ್ಟರಿಗೆ ಬೇರೆ ಹಣ ಕೊಡಬೇಕು…’
ಅದ್ಯಾಕ್ರೀ ಹಣಾ ಹಣಾಂತ ಬಾಯ್ ಬಾಯ್ ಬಿಡ್ತೀರ. ನಾನು ಚೆನ್ನಾಗಿರೋದು ನಿಮಗೆ ಇಷ್ಟಾನೇ ಇಲ್ಲ. ನಾನು ನೇಣು ಬಿಗಿದುಕೊಂಡು ಸಾಯ್ತೀನಿ, ನೀವು ತೆಳ್ಳಗೆ ಬೆಳ್ಳಗೆ ಇರೋ ಹುಡುಗಿ ನೋಡಿ ಮದುವೆ ಮಾಡ್ಕೋಳಿ…’ ಎಂದಳು.
“ಪಮ್ಮು ಆ ಹಗ್ಗಾ ಎಲ್ಲಾ ಲೋ ಕ್ವಾಲಿಟೀದು. ಸುಮ್ನೆ ನೀನು ಸ್ಟೂಲಿಂದ ದಡಮ್ಮ್ ಅಂತಾ ಬಿದ್ದು ಸೊ೦ಟ ಉಳಕಿಸಿಕೊಳ್ತೀಯ ಅಷ್ಟೇ.”
ಪ್ರಮೀಳಾಳ ಉಬ್ಬಿದ ಮುಖ ಸ್ವಲ್ಪ ಸಡಿಲವಾಗಿ ಅವಳಿಗೆ ಫಕ್ಕನೆ ನಗು ಬಂದು ಬಿಟ್ಟಿತು.
“ಪಮ್ಮು ಎಲ್ಲರ ಮಾತೂ ಕೇಳಿದೀಯ. ನಾಳೆಯಿಂದ ನಾನೇ ನಿನ್ನ ಡಯಟ್ ಚಾರ್ಟ್ ರೆಡಿ ಮಾಡ್ತೀನಿ. ಅದು ಹೇಗೆ ಸಣ್ಣಗಾಗಲ್ವೋ ನಾನು ನೋಡೇ ಬಿಡ್ತೀನಿ. …’ ಎಂದ.
’ಅಯ್ಯೋ ನಿಮಗೆ ನಾನು ಅಂದ್ರೆ ಎಷ್ಟು ಪ್ರೀತಿ ರೀ” ಎನ್ನುತ್ತ ಎರಡು ದಿನ ಪಮ್ಮು ಪಾಂಡುರಂಗನ ಮಾತಿಗೆ ಎದುರಾಡಲಿಲ್ಲ. ಎರಡು ಸುಖಾ ಚಪಾತಿ ಒಂದಿಷ್ಟು ತರಕಾರಿ, ಹಣ್ಣು. ಪ್ರಪಂಮಚದಲ್ಲಿ ತನ್ನಷ್ಟು ಸುಖಿ ಯಾರೂ ಇಲ್ಲ ಎಂದುಕೊಂಡ ಪಾಂಡುರಂಗನಿಗೆ ಮನೆಯಲ್ಲಿ ಆಶ್ಚರ್ಯ ಕಾದಿತ್ತು. ತನ್ನ ಮನೆಗೆ ತಾನೇ ಪರಕೀಯ ಎನ್ನುವಂತೆ ಜನವೋ ಜನ. ಸ೦ಕೋಚದಿ೦ದಲೇ ಪಾ೦ಡುರ೦ಗ ಒಳಗಡಿ ಇಟ್ಟ. ಇದ್ದಬದ್ದವರೆಲ್ಲಾ ಅವನನ್ನು ನೋಡಿ ಮುಸಿ ಮುಸಿ ನಗುತ್ತಾರೆ.
’ಅಳಿಯಂದ್ರು ಬಂದ್ರು…..’ ಅತ್ತೆ ಸೆರಗನ್ನು ಬಾಯಿಗೆ ಅಡ್ಡ ಇಟ್ಟುಕೊ೦ಡು ಕಳ್ಳನಗು ನಕ್ಕರೆ, ಮಾವನವರು ಅವನ ಬೆನ್ನು ಚಪ್ಪರಿಸಿ ನಗುತ್ತಾರೆ. ಎಲ್ಲಾ ಅವಳ ಬಳಗವೇ. ಬರೀ ನಗುವವರೇ. ಪಮ್ಮುವಿನ ಪತ್ತೆಯೇ ಇರಲಿಲ್ಲ. ಹಾಗೂ ಹೀಗೂ ತನ್ನ ರೂಮಿಗೆ ಬಂದು ನಿಧಾನವಾಗಿ ಬಾಗಿಲು ಹಾಕಿಕೊಳ್ಳೋಣ ಎ೦ದು ಒಳಗಡಿಯಿಟ್ಟರೆ, ಅವನು ನೋಡುವುದೇನು. ಮ೦ಚದ ಮೇಲೆ ಪಟ್ಟಾಂಗ ಹಾಕಿಕೊಂಡು ತಟ್ಟೆ ತು೦ಬಾ ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ ರವೆ ಉಂಡೆ ಮುಕ್ಕುತ್ತ ಕುಳಿತಿದ್ದಾಳೆ.
ಇಷ್ಟು ಸಾಲದೂಂತ ಅಡುಗೆ ಮನೆ ಕಡೆಯಿಂದ ಘಮ್ಮೆಂದು ಸುವಾಸನೆ ಬರುತ್ತಿದೆ. ಇನ್ನೂ ತರಹೇವಾರಿ ತಿ೦ಡಿಗಳು ತಯಾರಾಗುತ್ತಿದೆ ಎಂದು ತಿಳಿಯುತ್ತಿತ್ತು. ಪಾಂಡುರಂಗನಿಗೆ ಕೋಪ ಉಕ್ಕೇರಿತು. ಕೋಪದಿ೦ದ ಅವನಿಗೆ ಮಾತೇ ಹೊರಡಲಿಲ್ಲ.
’ ನೀನು ನೀನು… ಗುಜ್ಜಾನೆ ಮರಿ. ಡ್ರಮ್ಮು, ಕೊಳದಪ್ಪಲೆ, ರೋಡ್ ರೋಲರ್ರು. ನಿನ್ನನ್ನ ಸಣ್ಣ ಮಾಡಬೇಕೂಂತ ನಾನು ಛಾಲೆ೦ಜ್ ಮಾಡ್ತೀನಲ್ಲ. ನನ್ನ ನಾನೇ ಹೊಡಕೋಬೇಕು. ನೀನು ಗೂಬೆ,…’ ಅಂದ.
ಅವನ ಎಲ್ಲ ಬೈಗುಳಗಳಿಗೂ ಅವಳೂ ಮುಸಿ ಮುಸಿ ನಗುತ್ತಾಳೆ. ಪಾಂಡುರಂಗನಿಗೆ ಮತ್ತಷ್ಟು ಆಶ್ಚರ್ಯವಾಯಿತು. ಬೈದರೂ ನಗುತ್ತಾಳಲ್ಲ. ಇವಳಿಗೆ ಇವಳ ಮನೆಯವರಿಗೆಲ್ಲಾ ಸಮೂಹ ಸನ್ನಿ ಬಡಿದಿದೆಯೆ ಎಂದು. ಧೊಪ್ಪೆಂದು ಕುಳಿತುಬಿಟ್ಟ.
ರ್ರೀ….’ ಪಮ್ಮುವಿನ ರಾಗಕ್ಕೆ
’ಹೇಳೇ…’ ಎಂದು ಸಿಟ್ಟಿನಿಂದ ಕೇಳಿದ.

’ನಂಗೀಗ ಮೂರು ತಿಂಗಳು. ಅದಕ್ಕೆ ಈ ತಿಂಡೀ ಎಲ್ಲಾ. ಇನ್ನು ಮೇಲೆ ಡಯಟಿಂಗ್ ಇಲ್ಲ. ಬೇಕು ಬೇಕಾದ್ದು ತಿನ್ನಬಹುದು.
ನೀವು ಅಪ್ಪಾ ಆಗ್ತಾ ಇದೀರ. ಅದ್ಯಾಕೆ ಹೀಗೆ ಬೆಪ್ಪನಾಗಿ ನೋಡ್ತಾ ಇದೀರಿ. ನಗ್ರೀ…. ನೀವು ನಕ್ಕರೆ ಚಂದ” ಎಂದುಲಿದ ಪಮ್ಮುವಿನ ರಾಗಕ್ಕೆ
ಪಾಂಡುರಂಗನೂ ಮುಸಿ ಮುಸಿ ನಗಲು ಶುರು ಮಾಡಿದ.

ಮನೆಯೆಲ್ಲ ಆನಂದದಿಂದ ತುಂಬಿಹೋಯಿತು.

-ಟಿ.ಆರ್.ಉಷಾರಾಣಿ
ಭಾರತೀಯ ಸ್ಟೇಟ್ ಬ್ಯಾಂಕ್ ಮಂಗಳೂರು
error: Content is protected !!