ಧರ್ಮ ಸಂಸ್ಥಾಪನೆಗಾಗಿ ಶ್ರೀಮನ್ನಾರಾಯಣನ ದಶಾವತಾರಗಳ ಪೈಕಿ ನಾಲ್ಕನೇ ಅವತಾರವೇ ನರಸಿಂಹ ಅವತಾರ. ವೈಶಾಖ ಶುದ್ಧ ಚತುರ್ದಶಿಯಂದು, ನರಸಿಂಹನ ಅವತಾರವಾಯಿತೆಂದು ಪುರಾಣದಲ್ಲಿ ಹೇಳಲಾಗಿದೆ.
ಭಕ್ತರನ್ನು ಪೊರೆಯಲು ಮತ್ತು ದುಷ್ಟರನ್ನು ಸಂಹರಿಸಲು ವಿಷ್ಣುವು ಹಲವಾರು ಅವತಾರಗಳನ್ನು ಎತ್ತಿದ್ದರು ಎಂಬುದಾಗಿ ಪುರಾಣಗಳಲ್ಲಿ ಹೇಳಲಾಗುತ್ತಿದೆ. ವಿಷ್ಣುವಿನ ನರಸಿಂಹ ಅವತಾರವು ಭೀಭತ್ಸವಾಗಿದೆ.ಅಸುರ ಹಿರಣ್ಯಕಶಿಪುವನ್ನು ವಧಿಸಲು ಮಹಾವಿಷ್ಣುವು ಉಗ್ರ ನರಸಿಂಹ ಅವತಾರವನ್ನು ಎತ್ತಿ ಆತನನ್ನು ವಧಿಸುತ್ತಾರೆ.
ಹಿರಣ್ಯಕಶಿಪು ತನ್ನ ರಾಜ್ಯದಲ್ಲಿ ಹರಿ ಪೂಜೆಯನ್ನು ಮಾಡುವವರಿಗೆ ಆತ ಮರಣ ಶಿಕ್ಷೆಯನ್ನು ವಿಧಿಸುತ್ತಿದ್ದ. ವಿಷ್ಣುವನ್ನು ವಧಿಸುವುದಕ್ಕಾಗಿಯೇ ಕಠಿಣ ತಪ್ಪಸ್ಸನ್ನು ಆಚರಿಸಿ ಬ್ರಹ್ಮನಿಂದ ವರವನ್ನು ಪಡೆಯುತ್ತಾನೆ. ಮನುಷ್ಯ ಅಥವಾ ಪ್ರಾಣಿ, ಆಕಾಶ ಅಥವಾ ಭೂಮಿ, ಅಸ್ತ್ರ ಇಲ್ಲವೇ ಶಸ್ತ್ರಗಳು ಕಟ್ಟಡ ಅಥವಾ ತೆರೆದ ಭಾಗದಲ್ಲಿ ತನ್ನನ್ನು ವಧಿಸಬಾರದು ಎಂಬುದಾಗಿ ವಿಚಿತ್ರ ವರವನ್ನು ಪಡೆಯುತ್ತಾನೆ. ವರವನ್ನು ಪಡೆದ ನಂತರ ಹಿರಣ್ಯಕಶಿಪುವಿನ ಕಾಟ ಇನ್ನಷ್ಟು ವಿಪರೀತವಾಗುತ್ತದೆ. ತನ್ನನ್ನು ವಧಿಸುವ ಶಕ್ತಿಯೇ ಇಲ್ಲ ಎಂಬುದಾಗಿ ಆತ ಅಟ್ಟಹಾಸದಿಂದ ಮೆರೆಯುತ್ತಾನೆ.
ಹಿರಣ್ಯಕಶಿಪುವಿನ ಪುತ್ರ ಪ್ರಹ್ಲಾದ ಮಹಾನ್ ಹರಿಭಕ್ತನಾಗಿರುತ್ತಾನೆ. ತಂದೆ ಹಿರಣ್ಯಕಶಿಪು ಪರಿಪರಿಯಾಗಿ ತಿಳಿ ಹೇಳಿದರೂ ಪುತ್ರನ ಹರಿಭಕ್ತಿ ಕಡಿಮೆಯಾಗುವುದಿಲ್ಲ, ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುತ್ತದೆ. ಇದರಿಂದ ಕುಪಿತಗೊಂಡ ಹಿರಣ್ಯಕಶಿಪು ಮಗನನ್ನ ವಧಿಸಲು ಮುಂದಾಗುತ್ತಾನೆ. ಎತ್ತರದ ಪರ್ವತದಿಂದ ತಳ್ಳಿಸುತ್ತಾನೆ. ವಿಷ ಸರ್ಪಗಳಿಂದ ಕಚ್ಚಿಸುತ್ತಾನೆ, ತಲೆಯನ್ನು ಕಡಿಯಲು ಆಜ್ಞಾಪಿಸುತ್ತಾನೆ ಕೊನೆಗೆ ಹೆತ್ತ ತಾಯಿಯಿಂದಲೇ ವಿಷವನ್ನು ಉಣಿಸುತ್ತಾನೆ. ಆತನ ಹರಿಯ ದ್ವೇಷ ಮಗನ ಮೇಲಿನ ಪ್ರೀತಿಯನ್ನು ಕುರುಡಾಗಿಸುತ್ತದೆ. ಮಗ ಎಂಬ ವಾತ್ಸಲ್ಯವನ್ನು ಆತ ತೋರುವುದಿಲ್ಲ.
ತಂದೆ ಎಷ್ಟು ಪ್ರಯತ್ನ ಮಾಡಿದರೂ ಪ್ರಹ್ಲಾದ ಬದುಕಿ ಬಂದು ತಂದೆಯ ಎದುರಿನಲ್ಲಿಯೇ ಹರಿಸ್ಮರಣೆಯನ್ನು ಮಾಡುತ್ತಾನೆ. ಇದಕ್ಕೆ ಮುಕ್ತಾಯ ಹಾಡಬೇಕೆಂದು ನಿರ್ಧರಿಸಿದ ಹಿರಣ್ಯಕಶಿಪು ಪ್ರಹ್ಲಾದನಲ್ಲಿಯೇ ಹರಿ ಎಲ್ಲಿದ್ದಾನೆ ಆತನನ್ನು ನನ್ನ ಮುಂದೆ ಬರಹೇಳು ಎಂದು ತಿಳಿಸುತ್ತಾನೆ. ಇದಕ್ಕೆ ಬಾಲಕ ಪ್ರಹ್ಲಾದ ಹರಿ ಎಲ್ಲೆಲ್ಲಿಯೂ ಇದ್ದಾನೆ ಎಂಬುದಾಗಿ ಉತ್ತರಿಸುತ್ತಾನೆ. ಅರಮನೆಯ ಕಂಬಗಳನ್ನು ಗೋಡೆಗಳನ್ನು ಪುಡಿ ಮಾಡುತ್ತಾ ಕೋಪೋದ್ರಿಕ್ತ ಹಿರಣ್ಯಕಶಿಪು ಇಲ್ಲಿದ್ದಾನೆಯೇ ಹರಿ ನಿನ್ನ ಹರಿ ಇಲ್ಲಿದ್ದಾನೆಯೇ ಎಂದು ಕೇಳುತ್ತಾನೆ. ಹೀಗೆ ಕಂಬವನ್ನು ಒಡೆದ ಸಂದರ್ಭದಲ್ಲಿ ಹರಿಯು ನರಸಿಂಹ ಅವತಾರವನ್ನು ತಾಳಿ ಹಿರಣ್ಯಕಶಿಪುವಿನ ಎದುರಿಗೆ ಪ್ರತ್ಯಕ್ಷನಾಗುತ್ತಾರೆ.
ಯುದ್ಧ ಇಬ್ಬರ ನಡುವೆ ನಡೆಯುತ್ತದೆ. ಅರ್ಧ ಮನುಷ್ಯ ರೂಪ ಮತ್ತು ಇನ್ನರ್ಧ ಸಿಂಹದ ರೂಪದಲ್ಲಿ ದೇವರು ಅಸುರನ ಮರಣಕ್ಕೆ ರೂಪತಾಳಿರುತ್ತಾರೆ. ಹಿರಣ್ಯಕಶಿಪುವಿನ ವರದಂತೆಯೇ ಅತ್ತ ಮನುಷ್ಯನೂ ಅಲ್ಲದೇ ಇತ್ತ ಪ್ರಾಣಿಯೂ ಅಲ್ಲದೆ, ತಮ್ಮ ತೊಡೆಯ ಮೇಲೆ ಹಿರಣ್ಯಕಶಿಪುವನ್ನು ಮಲಗಿಸಿ ಎದೆಯನ್ನು ನರಸಿಂಹ ದೇವರು ತಮ್ಮ ಉಗುರುಗಳಿಂದ ಸೀಳುತ್ತಾರೆ. ಹಿರಣ್ಯಕಶಿಪುವಿನ ಮರಣದ ನಂತರ ನರಸಿಂಹನ ಉಗ್ರ ಸ್ವರೂಪವನ್ನು ಪ್ರಹ್ಲಾದ ತನ್ನ ಭಕ್ತಿಯ ಪ್ರಾರ್ಥನೆಯ ಮೂಲಕ ನರಸಿಂಹನನ್ನು ಶಾಂತಗೊಳಿಸುತ್ತಾನೆ.
ನರಸಿಂಹ ಅವತಾರದಲ್ಲಿ ಶ್ರೀಮಾನ್ ಮಹಾವಿಷ್ಣುವು ಮನುಷ್ಯನ ದೇಹ ಹಾಗು ಸಿಂಹದ ತಲೆ ಇರುವ ಉಗ್ರವಾದ ರೂಪದಲ್ಲಿ ಅವತರಿಸಿದನು. ಈ ಅವತಾರವು ಸತ್ಯ ಯುಗದಲ್ಲಿ ಆಯಿತು ಎಂದು ಹೇಳಲಾಗುತ್ತದೆ.