ಬೃಂದಾವನದಲ್ಲಿ ನೆಲೆಸಿ ಇಂದಿಗೂ ಭಕ್ತರನ್ನು ಕಷ್ಟ-ಕಾರ್ಪಣ್ಯಗಳಿಂದ ಕಾಪಾಡುತ್ತ, ಹೊಸ ಜೀವನ ನೀಡಿ ಹರಸುತ್ತ ಭಕ್ತರ ಹೃದಯದಲ್ಲಿ ನಿರಂತರವಾಗಿ ನೆಲೆಯೂರಿರುವ ನನ್ನ ನೆಚ್ಚಿನ ಆರಾಧ್ಯ ದೈವ ಗುರು ಸಾರ್ವಭೌಮ ಶ್ರೀ ರಾಘವೇಂದ್ರರ 353ನೇ ವೈಭವದ ಆರಾಧನಾ ಮಹೋತ್ಸವ.
ಧಾರ್ಮಿಕ ಆಚರಣೆ, ನಂಬಿಕೆ, ಶ್ರದ್ಧೆ, ಭಕ್ತಿ, ಪವಾಡಗಳನ್ನು ಅಚಲವಾಗಿ ನಂಬುವ ಅಥವಾ ನಂಬದೇ ಇರುವ ವಾಡಿಕೆ ಬಹು ಹಿಂದಿನಿಂದಲೂ ಅನೂಚಾನವಾಗಿ ನಡೆದು ಬಂದಿದೆ. ಕೆಲವರು ವೈಚಾರಿಕತೆಯ ನಿಲುವನ್ನು ಹೊಂದಿದ ನಾಸ್ತಿಕರು ಹಾಗೂ ಕೆಲವರು ಧಾರ್ಮಿಕತೆಯ ತಾತ್ತ್ವಿಕ ಸಿದ್ಧಾಂತವನ್ನು ನಂಬುವ ಆಸ್ತಿಕರೂ ಇದ್ದಾರೆ. ಇವರಲ್ಲಿ ಯಾರಿಗೆ ಯಾವುದರಿಂದ ಸಂತೃಪ್ತಿ ಸಿಗುತ್ತೋ ಆ ಮಾರ್ಗವನ್ನನುಸರಿಸುತ್ತಾರೆ ಹಾಗೂ ತಮ್ಮೂಲಕ ಜನರ ಮನೋಗತದಲ್ಲಿ ಸಂಚಲನ ಮೂಡಿಸುತ್ತಾ ಬದುಕಿನ ಮೌಲ್ಯಗಳನ್ನು ಬಿತ್ತುತ್ತಾರೆ. ಮನುಷ್ಯನ ಮಾನಸಿಕತೆ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿದೆ. ಅನೇಕ ಸಮಸ್ಯೆಗಳನ್ನು ಹೊತ್ತು ಜೀವನವನ್ನು ನಡೆಸುತ್ತಿದ್ದಾನೆ. ಆ ಸಮಸ್ಯೆಯ ಹೊರೆಯನ್ನು ಇಳಿಸಿಕೊಳ್ಳಲು ದೇವರ, ಗುರುಗಳ ಸಾನ್ನಿಧ್ಯಕ್ಕೆ ಶರಣಾಗುತ್ತಾನೆ. ಅಂತಹವರ ಬದುಕಿಗೆ ಆಶಾಕಿರಣವಾಗಿ ಬದುಕಿನಲ್ಲಿ ದಿವ್ಯತೆಯ ಪ್ರಕಾಶವನ್ನು ಬೆಳಗಿಸಿ ಪವಾಡವನ್ನು ಮಾಡುತ್ತಿರುವವರು, ಸಕಲ ಭಕ್ತ ಜನರಿಗೆ ಕಲ್ಪವೃಕ್ಷ ದಂತಿರುವವರು ಹಾಗೂ ಸಕಲ ಇಷ್ಟಾರ್ಥವನ್ನು ನೀಡುವ ಕಾಮಧೇನುವಿನ ಸ್ವರೂಪದಂತಿರುವವರು ಪೂಜ್ಯರಾದ ನಮ್ಮ “ಗುರುಸಾರ್ವಭೌಮರು ಶ್ರೀ ರಾಘವೇಂದ್ರಸ್ವಾಮಿಗಳು”.
ದೇವನೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂತ್ರಾಲಯದ ರಾಘಪ್ಪ’. ಎನ್ನುವ ಮಾತಿನಂತೆ ಗುರುರಾಯರನ್ನು ನೆನೆದಾಗ ಮೊದಲು ನೆನಪಾಗುವುದೇ ರಾಯರ ಸನ್ನಿಧಿ ಮಂತ್ರಾಲಯ. ಯಾವುದೇ ಕಷ್ಟವಿದ್ದರು ರಾಯರನ್ನು ನೆನೆದರೆ , ರಾಯರ ದರ್ಶನ ಮಾಡಿದರೆ ಕಷ್ಟಗಳೆಲ್ಲಾ ನಿವಾರಣೆಯಾಗುತ್ತದೆ.
ಮಂಚಾಲೆ ಆಂಧ್ರಪ್ರದೇಶದಲ್ಲಿರುವ ಒಂದು ಪುಟ್ಟ ಊರು. ಆದರೆ, ಈ ಸ್ಥಳ ಗುರುರಾಯರ ಕೃಪೆಯಿಂದ ವಿಶ್ವಭೂಪಟದಲ್ಲಿ ವಿಶಿಷ್ಟ ಸ್ಥಾನಪಡೆದಿದೆ. ಮಂಚಾಲೆ ಎಂಬುದು ಮಂತ್ರಾಲಯ ಕ್ಷೇತ್ರಕ್ಕಿದ್ದ ಹಿಂದಿನ ಹೆಸರು. ಈ ಪವಿತ್ರ ಪುಣ್ಯಸ್ಥಳದಲ್ಲಿ ಭಕ್ತರ ಸಕಲ ಇಷ್ಟಾರ್ಥಗಳನ್ನೂ ಈಡೇರಿಸುವ ಕಲಿಯುಗದ ಕಾಮಧೇನು ಗುರುರಾಘವೇಂದ್ರರು ಸಜೀವ ಬೃಂದಾವನಸ್ಥರಾಗಿದ್ದಾರೆ.
ಮಂತ್ರಾಲಯದ ಮೂಲ ಹೆಸರು ಮಂಚಾಲೆ. ಇಲ್ಲಿನ ಗ್ರಾಮ ದೇವತೆ ಮಂಚಾಲಮ್ಮ. ಮಂಚಾಲಮ್ಮ ಅಂದರೆ ಪಾರ್ವತಿಯ ಅಂಶ ಎಂದು ನಂಬಿಕೆ. ಶಿವಶಕ್ತಿಯ ಕೇಂದ್ರವಾದ ಮಂತ್ರಾಲಯವನ್ನು ಮಂಚಾಲೆ ಎಂದು ಕರೆಯುತ್ತಾರೆ. ರಾಘವೇಂದ್ರ ರಾಯರು ಇಲ್ಲಿಗೆ ಆಗಮಿಸಿ ಮಂಚಾಲಮ್ಮನಿಂದ ಅನುಮತಿ ಪಡೆದು ಇಲ್ಲಿ ನೆಲೆಸಿ ವೃಂದಾವನಸ್ಥರಾದರು. ಆ ನಂತರ ಇದು ಮಂತ್ರಾಲಯ ಎಂದು ಪ್ರಖ್ಯಾತಿ ಪಡೆಯಿತು ಎಂಬುದು ಇತಿಹಾಸ.
ಗುರುಸಾರ್ವಭೌಮರಾದ ರಾಘವೇಂದ್ರ ಸ್ವಾಮಿಗಳು ಕ್ರಿ.ಶ. 1595 ಮನ್ಮಥನಾಮ ಸಂವತ್ಸರ ಫಾಲ್ಗುಣ ಶುದ್ಧ ಸಪ್ತಮಿ ಗುರುವಾರ, ತಮಿಳುನಾಡಿನ ಭುವನಗಿರಿಯಲ್ಲಿ, ಬೀಗಮುದ್ರೆ ಮನೆತನದ ಗೋಪಮ್ಮ ಹಾಗೂ ತಿಮ್ಮಣ್ಣ ಭಟ್ಟ ದಂಪತಿಯ ಉದರದಲ್ಲಿ ತಿರುಪತಿ ತಿಮ್ಮಪ್ಪನ ಹರಕೆಯಿಂದ ಜನ್ಮವೆತ್ತಿದರು. ಮಗುವಿಗೆ ‘ವೆಂಕಟನಾಥ’ ಎಂದೇ ಹೆಸರಿಡಲಾಯಿತು. ವೆಂಕಟನಾಥನಿಗೆ ಪ್ರಾಥಮಿಕ ಗುರುಗಳು ಅಕ್ಕ ವೆಂಕಟಾಂಬೆಯ ಪತಿ ಲಕ್ಷ್ಮೀನರಸಿಂಹ ಆಚಾರ್ಯ, ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಸುಧೀಂದ್ರತೀರ್ಥರಿಂದ ದೊರೆಯಿತು.
ಬ್ರಹ್ಮಲೋಕದ ಶಂಕುಕರ್ಣನೆಂಬ ದೇವತೆ, ಬ್ರಹ್ಮನ ಶಾಪಕ್ಕೆ ಗುರಿಯಾಗಿ ಶಾಪವನ್ನು ವರವಾಗಿ ಸ್ವೀಕರಿಸಿ ಕೃತಯುಗದಲ್ಲಿ ಹಿರಣ್ಯ ಕಶಿಪುವೆಂಬ ರಾಕ್ಷಸನ ಉದರದಲ್ಲಿ ‘ಭಕ್ತ ಪ್ರಹ್ಲಾದ’ನಾಗಿ, ದ್ವಾಪರದಲ್ಲಿ “ಬಾಹ್ಲಿಕ ರಾಜರಾಗಿ” ಕಲಿಯುಗದಲ್ಲಿ “ವ್ಯಾಸರಾಯರಾಗಿ” ಹಾಗೂ ಕೊನೆಯ ಅವತಾರವಾಗಿ “ರಾಘವೇಂದ್ರರಾಗಿ” ಭೂಲೋಕದಲ್ಲಿ ನಾಲ್ಕು ಅವತಾರ ಎತ್ತಿದರು ಎಂಬ ನಂಬಿಕೆ ಭಕ್ತರಲ್ಲಿ ಇದೆ. ರಾಘವೇಂದ್ರ ಸ್ವಾಮಿಗಳು ಕೃತಯುಗದಲ್ಲಿ ಪ್ರಹ್ಲಾದರಾಜನಾಗಿ ಜನ್ಮವೆತ್ತಿದಾಗ ಹತ್ತು ಸಹಸ್ರ ವರ್ಷ ಹರಿನಾಮ ಸ್ಮರಣೆ ಮಾಡಿ ಪುಣ್ಯದ ಕಣಜವನ್ನೇ ತಮ್ಮದಾಗಿರಿಸಿ ಕೊಂಡವರು. ತಾವು ಸಂಪಾದಿಸಿದ ಅಪಾರ ಪುಣ್ಯವನ್ನು ಹಂಚಿ ಜನರ ಬವಣೆಯನ್ನು ನೀಗಿಸಲೆಂದೇ ರಾಯರು ತಮ್ಮ 76ನೇ ವರ್ಷದಲ್ಲಿ ಅಂದರೆ ಕ್ರಿ.ಶ. 1671 ವಿರೋಧಿನಾಮ ಸಂವತ್ಸರ ಶ್ರಾವಣ ಕೃಷ್ಣ ಬಿದಿಗೆಯಂದು ಮಂತ್ರಾಲಯದ ಮಂಚಾಲಮ್ಮನ ಸನ್ನಿಧಿಯಲ್ಲಿ ಸಶರೀರವಾಗಿ ಬೃಂದಾವನ ಪ್ರವೇಶಿಸಿದರು. ಬೃಂದಾವನದಲ್ಲಿ ತಾವು ಏಳು ನೂರು ವರ್ಷಗಳು ನೆಲೆಸುವುದಾಗಿ ತಿಳಿಸಿದ್ದಾರೆ.
ರಾಯರು ಬಯಸಿ ನೆಲೆಸಿರುವ ಮಂತ್ರಾಲಯದ ಮಹಿಮೆ ಬಣ್ಣಿಸಲಾಗದಷ್ಟು ಅಪಾರವಾಗಿದೆ. ಕೃತಯುಗದಲ್ಲಿ ಪ್ರಹ್ಲಾದರು ಯಜ್ಞ ಮಾಡಿದ ಸ್ಥಳ, ತ್ರೇತಾಯುಗದಲ್ಲಿ ರಾಮ–ಲಕ್ಷ್ಮಣರು ವಿಶ್ರಮಿಸಿದ ಬಂಡೆಯಿಂದ ನಿರ್ಮಿಸಿದ ಬೃಂದಾವನದ ಸ್ಥಳ, ದ್ವಾಪರದಲ್ಲಿ ಅನುಸಾಲ್ವನೆಂಬ ರಾಜ ಪಾಂಡವರ ಅಶ್ವಮೇಧಯಾಗದ ಕುದುರೆಯನ್ನು ಕಟ್ಟಿಹಾಕಿ ಪಾಂಡವರನ್ನು ಹಿಮ್ಮೆಟ್ಟಿದ ಸ್ಥಳ, ಮಂಚಾಲಮ್ಮನ ಸನ್ನಿಧಿ. – ಇಂತಹ ಪುಣ್ಯಸ್ಥಳದಲ್ಲಿ ನೆಲೆಸಿರುವ ಗುರುಸಾರ್ವಭೌಮರು ಭಕ್ತರ ಪಾಲಿಗೆ ಕಲಿಯುಗದ ಕಲ್ಪತರು. ಇಂದಿಗೆ ರಾಯರು ಬೃಂದಾವನಸ್ಥರಾಗಿ ಮುನ್ನೂರೈವತ್ತೆರಡು ವಸಂತಗಳು ಉರುಳಿವೆ; ಇಂದು ವಿಶ್ವದಾದ್ಯಂತ ಎರಡು ಸಾವಿರಕ್ಕೂ ಹೆಚ್ಚಿನ ಬೃಂದಾವನಗಳಲ್ಲಿ ಭಕ್ತಿ ಪೂರ್ವಕ ಆರಾಧನಾ ಕೈಂಕರ್ಯಗಳು ನಡೆಯುತ್ತಿವೆ.
ರಾಘವೇಂದ್ರ ಸ್ವಾಮಿಗಳು ಭವರೋಗವೈದ್ಯರು ಹಾಗೂ ಪವಾಡ ಪುರುಷರು ಎಂದೇ ಭಕ್ತರು ನಂಬಿದ್ದಾರೆ. ಮಾಂಸವನ್ನು ಫಲಪುಷ್ಪಾದಿ ಗಳಾಗಿ ಮಾಡಿದ ಹಾಗೂ ಒನಕೆಯನ್ನೇ ಚಿಗುರಿಸಿ ಜೀವತುಂಬಿ ಗಿಡವನ್ನಾಗಿ ಮಾಡಿದ ಕಥೆ ಅವರ ಜೀವನ ಚರಿತ್ರೆಯಲ್ಲಿ ಬರುತ್ತದೆ. ರಾಯರು ಬೃಂದಾವನಸ್ಥರಾಗಿ 135 ವರ್ಷಗಳ ನಂತರ, ಕ್ರಿ.ಶ. 1806ರಲ್ಲಿ, ಸರ್ ಥಾಮಸ್ ಮುನ್ರೋ ಅವರಿಗೆ ಬೃಂದಾವನದಿಂದ ಹೊರಬಂದು ದರ್ಶನ ನೀಡಿದರೆಂಬ ಪ್ರತೀತಿಯೂ ಇದೆ.
“ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವ ಮಾನವಾಃ “
ಎಂಬ ಮಾತಿನಂತೆ ಈ ನೆಲದಲ್ಲಿ ಹುಟ್ಟಿದ ಎಲ್ಲ ಮಾನವರು ತಮ್ಮ ತಮ್ಮ ನಡಾವಳಿಯು ಜಗತ್ತಿಗೆ ಶಿಕ್ಷಣವಾಗುವಂತೆ ನಡೆಯಬೇಕೆಂಬ ಎಂಬ ಅರ್ಥದಲ್ಲಿ ರಾಯರು ಅವರಲ್ಲಿದ್ದ ದಯೆ, ಶಾಂತಿ, ಔದಾರ್ಯ, ವಿದ್ವತ್ತು, ಜ್ಞಾನ, ವಿಜ್ಞಾನ, ಗಾಂಭೀರ್ಯತೆಯ ನುಡಿ, ಸರ್ವೋತ್ಕೃಷ್ಟವಾದ ಪ್ರೇಮ, ಹಾಗೂ ಜೀವನದ ಅನೇಕ ಮಾನವೀಯ ಮೌಲ್ಯಗಳ ಸಾತ್ವಿಕ, ತಾತ್ತ್ವಿಕ ಸಿದ್ಧಾಂತದೊಂದಿಗಿನ, ಅನುಗ್ರಹ ಸಂದೇಶವನ್ನು ಜಗತ್ತಿಗೆ ಸಾರಿ, ಪ್ರತಿಯೊಬ್ಬ ಭಕ್ತನ ಹೃನ್ಮನಗಳಲ್ಲಿ ಪರಂಜ್ಯೋತಿಯಾಗಿ ದೇದೀಪ್ಯಮಾನರಾಗಿ ರಾರಾಜಿಸುತ್ತಿದ್ದಾರೆ.
ರಾಘವೇಂದ್ರ ಸ್ವಾಮಿಗಳು ಬೃಂದಾವನ ಪ್ರವೇಶಿಸುವ ಮೊದಲು ಮಾಡಿದ ಕೊನೆಯ ಪ್ರವಚನದ ಸಾರಾಂಶ:
• ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೇ ಸತ್ಕಾರ್ಯಗಳನ್ನು ಮಾಡಬೇಕು.
• ಸಮಾಜಕ್ಕೆ ಒಳಿತಾಗುವಂತೆ ಮಾಡುವುದೇ ನಿಜವಾದ ದೇವರ ಪೂಜೆ.
• ಕಳೆದುಹೋದ ಒಂದು ನಿಮಿಷವೂ ಮತ್ತೆಬಾರದು ಎಂಬುದನ್ನು ಮರೆಯಬಾರದು.
• ದೇವರೆಡೆಗಿನ ನಿಮ್ಮ ಭಕ್ತಿ ಪರಿಶುದ್ಧವಾಗಿರಲಿ. ಪೂರ್ಣ ಮನಸ್ಸಿನಿಂದ ಅವನನ್ನು ಪೂಜಿಸಿ.
• ಸುಜ್ಞಾನ ಎಂಬುದು ಎಲ್ಲಾ ಪವಾಡಗಳಿಗಿಂತ ಮಿಗಿಲು.
ಜ್ಞಾನವಿಲ್ಲದಿದ್ದರೆ ಯಾವ ಪವಾಡವೂ ಘಟಿಸದು.
ದೀನಜನರ ಬಡವರ, ಹಿಂದುಳಿದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಶ್ರೀ ರಾಘವೇಂದ್ರ ಸ್ವಾಮಿಗಳು ಎಂದೆಂದಿಗೂ ಪರಮ ಪೂಜ್ಯರು.ತಮಿಳುನಾಡಿಗೆ ನೀರು ಬಿಡುಗಡೆ ಖಂಡಿಸಿ ಸೆ.2ಕ್ಕೆ ಜೆಡಿಎಸ್ ಬೃಹತ್ ಹೋರಾಟ
“ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ”.
- ಮೈಸೂರಿನಲ್ಲಿ ಚಲಿಸುತ್ತಿದ್ದ KSRTC ಬಸ್ಗೆ ಬೆಂಕಿ: 50 ಕ್ಕೂ ಹೆಚ್ಚು ಪ್ರಯಾಣಿಕರು ರಕ್ಷಣೆ
- ಪಿ.ವಿ ಸಿಂಧು ಡಿ.22 ರಂದು ಹಸೆಮಣೆ ಏರಲಿದ್ದಾರೆ
- ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕಾತಿ: ಹುದ್ದೆಗಳ ವಿವರ, ವೇತನ ಮತ್ತು ಅರ್ಜಿ ದಿನಾಂಕ
- ಅಕ್ರಮ ಆಸ್ತಿ ಆರೋಪ: ಇಂದು ಲೋಕಾಯುಕ್ತ ಮುಂದೆ ಹಾಜರಾಗುವಾರಾ ಸಚಿವ ಜಮೀರ್ ಅಹ್ಮದ್?
- ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಡಿ.3 ರಂದು ಶಾಲೆ, ಅಂಗನವಾಡಿ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ
- ಮಂಡ್ಯ ಎಡಿಸಿ ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧಾರ
More Stories
ಮೈಸೂರಿನಲ್ಲಿ ಚಲಿಸುತ್ತಿದ್ದ KSRTC ಬಸ್ಗೆ ಬೆಂಕಿ: 50 ಕ್ಕೂ ಹೆಚ್ಚು ಪ್ರಯಾಣಿಕರು ರಕ್ಷಣೆ
ಪಿ.ವಿ ಸಿಂಧು ಡಿ.22 ರಂದು ಹಸೆಮಣೆ ಏರಲಿದ್ದಾರೆ
ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕಾತಿ: ಹುದ್ದೆಗಳ ವಿವರ, ವೇತನ ಮತ್ತು ಅರ್ಜಿ ದಿನಾಂಕ