ತಮಿಳುನಾಡಿಗೆ ನೀರು ಬಿಡುಗಡೆ ಖಂಡಿಸಿ ಸೆ.2ಕ್ಕೆ ಜೆಡಿಎಸ್ ಬೃಹತ್ ಹೋರಾಟ

Team Newsnap
3 Min Read

ಮಂಡ್ಯ : ರಾಜ್ಯ ಸರ್ಕಾರ ರೈತರನ್ನು ನಿರ್ಲಕ್ಷಿಸಿ ರಾಜಕೀಯ ಓಲೈಕೆಗಾಗಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ ,ರಾಜ್ಯದ ರೈತರ ಬಗ್ಗೆ ಉದಾಸೀನ ಮನೋಭಾವ ತೋರಿರುವ ಸರ್ಕಾರದ ನಡತೆ ಖಂಡಿಸಿ ಸೆ.2 ರ ಶನಿವಾರದಂದು ಜೆಡಿಎಸ್ ವತಿಯಿಂದ ಮಂಡ್ಯದಲ್ಲಿ ಬೃಹತ್ ಹೋರಾಟ ನಡೆಸಲಾಗುವುದೆಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ರವೀಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ , ನಮ್ಮ ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದೆ. ನಮ್ಮ ನಾಡಿನ ರೈತರಿಗೆ, ಜನ ಸಾಮಾನ್ಯರಿಗೆ ವಿಶ್ವಾಸ ದ್ರೋಹ ಬಗೆದು, ಸಿಎಂ ಸ್ಟಾಲಿನ್ ಅವರ ವಿಶ್ವಾಸ ಗಳಿಸಿಕೊಳ್ಳಲು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದಾರೆ.ತಮಿಳು ನಾಡಿಗೆ ನೀರು ಹರಿಸಿ ನಂತರ ಸರ್ವಪಕ್ಷಗಳ ಸಭೆ ಕರೆಯುವ ರಾಜ್ಯ ಸರ್ಕಾರಕ್ಕೆ ರೈತರ ಹಿತ ಕಾಪಾಡುವ ಉದ್ದೇಶವಿಲ್ಲ.ರೈತರ ನಿಲುವಿಗೆ ಬದ್ಧ ಎನ್ನುವ ಸರ್ಕಾರ ನೀರು ಹರಿಸುವ ಮೂಲಕ ರೈತರ ಹಿತಾಸಕ್ತಿ ಕಡೆಗಣಿಸಿದೆ ಎಂದು ಆರೋಪಿಸಿದರು.

ಈ ಹಿಂದೆ ತಮಿಳುನಾಡಿಗೆ 13 ಟಿಎಂಸಿ ನೀರು ಹರಿಸಿದರು.ಈಗ ದಿನಕ್ಕೆ 5 ಸಾವಿರ ಕ್ಯೂಸೆಕ್ ನೀರು ಹರಿಸುವ ಮೂಲಕ ಮತ್ತೆ 7 ಟಿಎಂಸಿ ನೀರು ಹರಿಸಲು ಆದೇಶ ನೀಡಿದೆ. ಕಟ್ಟು ಪದ್ಧತಿಯಲ್ಲಿ ನೀರು ಕೊಡುತ್ತಾರೆ ಎಂಬುದನ್ನು ನಂಬಿ ನಾಟಿ ಮಾಡಿದ್ದಾರೆ. ಸಮರ್ಪಕವಾಗಿ ನೀರು ಹರಿಸದಿದ್ದರೆ ಬೆಳೆಗಳು ಒಣಗುತ್ತವೆ.ಇದನ್ನು ನೋಡಿಕೊಂಡು ಕೂರಲು ಜೆಡಿಎಸ್ ಮುಖಂಡರು ಕೂರುವುದಿಲ್ಲ.ನಮ್ಮ ಪಕ್ಷ ರೈತರ ಸಂಕಷ್ಟಕ್ಕೆ ನಿಲ್ಲಲಿದೆ ಎಂದರು.

ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ ಸೇರಿದಂತೆ ಎಲ್ಲರ ಅಧಿಕಾರಾವಧಿಯಲ್ಲೂ ಅನಿವಾರ್ಯವಾಗಿ ತಮಿಳುನಾಡಿಗೆ ನೀರು ಬಿಡಲಾಗಿದೆ. ಆದರೆ ಈಗಿನ ವಾಸ್ತವಾಂಶವನ್ನು ಕಾವೇರಿ ನೀರು ನಿರ್ವಹಣಾ ಸಮಿತಿಗೆ ಹಾಗೂ ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಮೆಚ್ಚಿಸಲು ಆತುರಾತುರವಾಗಿ ನೀರು ಬಿಡುತ್ತಿರುವುದು ಸರಿಯೇ? ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ತಮಿಳುನಾಡಿನ ಮೂರನೇ ಬೆಳೆಗೆ ನೀರು ನೀಡುತ್ತಿರುವ ರಾಜ್ಯ ಸರ್ಕಾರ, ನಮ್ಮ ರೈತರ ಒಂದು ಬೆಳೆಗೂ ನೀರು ಹರಿಸಲಾಗದ ಸಂಕಷ್ಟ ಪರಿಸ್ಥಿತಿಯನ್ನು ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ.ರಾಮನಗರ, ತುಮಕೂರು ಸೇರಿದಂತೆ ಕಾವೇರಿ ನೀರು ಬಳಸಿಕೊಳ್ಳುವ ಹಲವು ಜಿಲ್ಲೆಗಳಲ್ಲಿ ಈಗಾಗಲೇ ನೀರಿಗಾಗಿ ಹಾಹಾಕಾರ ಉಂಟಾಗಿದೆ.ನಾವು ಸರ್ಕಾರಕ್ಕೆ ಎರಡು ದಿನದ ಗಡುವು ನೀಡಿದ್ದು,ನೀರು ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆಂದು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಕನ್ನಂಬಾಡಿ ಅಣೆಕಟ್ಟೆಯ ಕಡೆ ಭಾಗವಾಗವಾಗಿರುವ ಮಳವಳ್ಳಿ ರೈತರ ಸಂಕಷ್ಟ ಜಿಲ್ಲೆಯ ಜನಪ್ರತಿನಿಧಿಗಳಿಗೆ ಅರ್ಥವಾಗಿಲ್ಲ, ಕೆರೆ -ಕಟ್ಟೆಗಳು ಭಣಗುಡುತ್ತಿವೆ, ಜಿಲ್ಲೆಯ ಆರು ಮಂದಿ ಶಾಸಕರು, 8 ಜಿಲ್ಲೆಯ ಜನರಿಗೆ ಅನ್ಯಾಯ ಮಾಡಿ, ತಮಿಳುನಾಡಿಗೆ ನೀರು ಹರಿಸಿದರೆ, ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ನಮ್ಮ ನೀರು ನಮ್ಮ ಹಕ್ಕು ಎಂಬ ಘೋ‍ಷಣೆಯೊಂದಿಗೆ ಮೇಕೆದಾಟು ಯೋಜನೆ ಜಾರಿಗಾಗಿ ಆಶೀರ್ವದಿಸಿ ಎಂದು ಅಧಿಕಾರ ಕೇಳಿದ ಕಾಂಗ್ರೆಸಿಗರು ಜಿಲ್ಲೆಯ ಜನರಿಗೆ ಅನ್ಯಾಯವೆಸಗಿರುವುದು ಬಹಿರಂಗವಾಗಿದೆ. ಕೂಡಲೇ ಎಚ್ಚೆತ್ತು ನೀರು ನಿಲುಗಡೆಗೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದರು.

ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರು ಮಾತನಾಡಿ, ದೇಶದ ಬೆನ್ನೆಲುಬು ರೈತ. ರಾಜ್ಯಕ್ಕೆ ಅನ್ನ ನೀಡುವ ರೈತ ಇಂದು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾನೆ. ಆತನ ಪರಿಸ್ಥಿತಿ ಶೋಚನೀಯವಾಗಿದ್ದು, ಕಾವೇರಿ ನೀರಿನ ರಕ್ಷಣೆಗಾಗಿ ಸೆ.2 ರಂದು ನಡೆಯುವ ಪ್ರತಿಭಟನೆಯಲ್ಲಿ ಜಿಲ್ಲೆಯ ಜನರು,ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.ಅರವಿಂದ ಕ್ರೇಜಿವಾಲ್ ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ – ಅಮ್ ಆದ್ಮಿ ವಕ್ತಾರೆ ಪ್ರಿಯಾಂಕ

ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕ ಸುರೇಶ್ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿ.ಪಂ.ಮಾಜಿ‌ಸದಸ್ಯ ಮರೀಗೌಡ ಉಪಸ್ಥಿತರಿದ್ದರು.

Share This Article
Leave a comment