ಮೈಸೂರಿನ ದಸರಾವನ್ನು ನಾಡಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬವು ಕರುನಾಡ ಹಬ್ಬ ಕರ್ನಾಟಕದ ಪ್ರಮುಖ ಹಬ್ಬವಾಗಿದೆ. ನವರಾತ್ರಿಯ ವೈಭವ, ವಿಜಯ ದಶಮಿ ಜಂಬೂ ಸವಾರಿ, ಅಲಂಕಾರಗೊಳ್ಳುವ ಮೈಸೂರು ಅರಮನೆ, ಶೃಂಗಾರಗೊಂಡ ಮೈಸೂರು ನಗರ, ವಿವಿಧ ಕಾರ್ಯಕ್ರಮ, ಸಾಂಸ್ಕೃತಿಕ ವೈಭವ ನೋಡಲು ದೇಶ, ವಿದೇಶಗಳಿಂದ ಜನ ಸಾಗರವೇ ಹರಿದು ಬರುತ್ತದೆ.
ಹತ್ತು ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳು ದಸರಾಕ್ಕೆ ಮೆರಗು ನೀಡುತ್ತವೆ. ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಧಿವಿಧಾನದಂತೆ ಪೂಜೆ ಸಲ್ಲಿಸಿ ದಸರಾಕ್ಕೆ ವಿದ್ಯುಕ್ತ ಚಾಲನೆ ನೀಡಲಾಗುತ್ತದೆ.
ಹತ್ತು ದಿನಗಳ ಧಾರ್ಮಿಕ ಕೈಂಕರ್ಯ ಇದಕ್ಕೂ ಮೊದಲು ಮೈಸೂರು ದಸರಾದ ಸಂದರ್ಭ ನಡೆಯುವ ಆಚರಣೆಗಳಲ್ಲಿಯೂ ಹತ್ತು ಹಲವು ವೈಶಿಷ್ಟ್ಯತೆಗಳು ಇರುವುದನ್ನು ನಾವು ಕಾಣಬಹುದು. ನವರಾತ್ರಿ ಆರಂಭದ ಒಂಭತ್ತು ದಿನಗಳ ಕಾಲ ಅಂದರೆ ಪಾಡ್ಯದಿಂದ ಬಿದಿಗೆ, ತದಿಗೆ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಠಮಿ, ನವಮಿ ಹೀಗೆ ಒಂಭತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು ಚಾಮುಂಡಿ ಬೆಟ್ಟ ಹಾಗೂ ಅಂಬಾವಿಲಾಸ ಅರಮನೆಯಲ್ಲಿ ನಡೆಯುತ್ತವೆ. ವಿಜಯದಶಮಿಯಂದು ಜಂಬೂ ಸವಾರಿಯೊಂದಿಗೆ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಮುಡಿದು ಹಬ್ಬವನ್ನು ಪೂರ್ಣ ಗೊಳಿಸುವರು.
ಪಾಂಡವರಿಗೆ ವಿಜಯದ ದಿನವೇ ವಿಜಯದಶಮಿ,
ಮಹಾಭಾರತದಲ್ಲಿ ಒಂದು ವರ್ಷದ ಅಜ್ಞಾತವಾಸಕ್ಕೆ ತೆರಳುವಾಗ ಬನ್ನಿ ಮರದಲ್ಲಿ ತಮ್ಮ ಆಯುಧಗಳನ್ನು ಬಚ್ಚಿಟ್ಟು ಹೋಗುತ್ತಾರೆ. ಅಜ್ಞಾತವಾಸದಿಂದ ಮರಳಿದ ಅವರು ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ನೋಡುತ್ತಾರೆ. ಯಾರೊಬ್ಬರೂ ಅವುಗಳನ್ನು ತೆಗೆದುಕೊಂಡು ಹೋಗಿರುವುದಿಲ್ಲ. ಹೀಗಾಗಿ ತಮ್ಮ ಆಯುಧಗಳನ್ನು ಕಾಪಾಡಿದ ಬನ್ನಿ ಮರಕ್ಕೆ ನಮಸ್ಕರಿಸುತ್ತಾರೆ. ಬಳಿಕ ನಡೆದ ಕೌರವರೊಂದಿಗಿನ ಯುದ್ಧದಲ್ಲಿ ವಿಜಯ ಸಾಧಿಸುತ್ತಾರೆ. ಹೀಗಾಗಿ ವಿಜಯದಶಮಿಯ ದಿನ ಬನ್ನಿ ಪೂಜೆ ಮಾಡುತ್ತಾರೆ. ಈ ದಿನದಂದು ಶಮಿಪೂಜೆಯೆಂದು ಬನ್ನಿಮರಕ್ಕೆ ಪೂಜಿಸುವರು,ಶಮಿ ಎಂದರೆ ಶಾಂತಿ, ಸಮಾಧಾನ ಎಂದರ್ಥ, ಹಾಗಾಗಿ ಬನ್ನಿ ಎಲೆಗಳನ್ನು ಪರಸ್ಪರ ಕೊಟ್ಟು ಬಂಗಾರದ ಹಾಗೆ ಇರಿ ಎಂದು ಶುಭ ಹಾರೈಸುತ್ತಾರೆ.
ಶಮೀ ಶಮೀಯತೇ ಪಾಪಂ ಶಮೀ ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶನೀ ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |
ತತ್ರ ನಿರ್ವಿಘ್ನಕತ್ರ್ರಿತ್ವಂ ಭವ ಶ್ರೀರಾಮಪೂಜಿತಾ ||
ಮಹಿಷಾಸುರ ಮರ್ದಿನಿ
ಹಿಂದೆ ಮಹಿಷಾಸುರ ಎಂಬ ರಾಕ್ಷಸನಿದ್ದ. ಅವನು ಜನರಿಗೆ ತುಂಬಾ ತೊಂದರೆ ನೀಡುತ್ತಿದ್ದನು. ಒಂದು ಸಲ ಅವನು ಇಂದ್ರನೊಂದಿಗೆ ಯುದ್ಧವನ್ನು ಮಾಡಿದನು ಮತ್ತು ಇಂದ್ರನನ್ನು ಸೋಲಿಸಿ ಅವನ ಸ್ಥಾನವನ್ನು ಪಡೆದನು. ಇಂದ್ರನನ್ನು ಸೋಲಿಸಿದಕ್ಕಾಗಿ ಅವನಿಗೆ ತನ್ನ ಶಕ್ತಿಯ ಬಗ್ಗೆ ತುಂಬಾ ಗರ್ವವಾಯಿತು.ದಿನೇ ದಿನೇ ಹೆಚ್ಚಾಗುತ್ತಿರುವ ಅವನ ಅನ್ಯಾಯವನ್ನು ಸಹಿಸಲಾರದೇ ದೇವತೆಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನಿಗೆ ಪ್ರಾರ್ಥನೆಯನ್ನು ಮಾಡಿದರು ಮತ್ತು ಅವನಿಂದ ರಕ್ಷಣೆಯನ್ನು ನೀಡಬೇಕೆಂದು ಪ್ರಾರ್ಥಿಸಿದರು.
ದೇವರು ಒಂದು ಕಡೆ ಸೇರಿ ತಮ್ಮ ತಮ್ಮ ಶಕ್ತಿಯನ್ನು ಸೇರಿಸಿ ದೇವಿಯೊಬ್ಬಳನ್ನು ನಿರ್ಮಾಣ ಮಾಡಿದರು. ಶಂಕರನ ಶಕ್ತಿಯಿಂದ ಮುಖ, ವಿಷ್ಣುವಿನ ಶಕ್ತಿಯಿಂದ ಕೈಗಳು ಮತ್ತು ಅಗ್ನಿಯ ಶಕ್ತಿಯಿಂದ ಮೂರು ಕಣ್ಣುಗಳು ನಿರ್ಮಾಣವಾದವು. ಈ ರೀತಿ ಪ್ರತಿಯೊಬ್ಬ ದೇವರು ಒಂದುಂದು ಅಂಗವನ್ನು ನೀಡಿ ಸಾಕ್ಷಾತ್ ದೇವಿಯ ನಿರ್ಮಾಣವಾಯಿತು. ಶಿವನು ತನ್ನ ತ್ರಿಶೂಲವನ್ನು, ವಿಷ್ಣು ಚಕ್ರವನ್ನು, ಇಂದ್ರನು ವಜ್ರವನ್ನು ಈ ರೀತಿ ಎಲ್ಲ ದೇವರು ದೇವಿಗೆ ಆಯುಧಗಳನ್ನು ನೀಡಿದರು.
ದೇವರ ತೇಜದಿಂದ ನಿರ್ಮಾಣವಾದ ದೇವಿಯು ಮಹಿಷಾಸುರನನ್ನು ವಧಿಸಲು ರೌದ್ರರೂಪವನ್ನು ತಾಳಿದರು. ಮಹಿಷಾಸುರ ಮತ್ತು ದೇವಿಗೆ ಒಂಬತ್ತು ದಿನಗಳ ಘೋರ ಯುದ್ಧವಾಯಿತು. ದುರ್ಗಾದೇವಿಯು ತನ್ನ ತ್ರಿಶೂಲದಿಂದ ಮಹಿಷಾಸುರನ್ನು ವಧಿಸಿದರು. ಮಹಿಷಾಸುರನನ್ನು ವಧಿಸಿದರಿಂದ ದೇವಿಗೆ ಮಹಿಷಾಸುರಮರ್ದಿನಿ ಎಂದು ಹೆಸರು ಬಂದಿತು. ಇದರ ನೆನಪಿಗಾಗಿ ನಾವು ನವರಾತ್ರಿಯನ್ನು ಆಚರಿಸುತ್ತೇವೆ.
ವಿಜಯನಗರ ಅರಸರ ಕಾಲದ ಆಚರಣೆ ದಸರಾ
ವಿಜಯದಶಮಿ ಇದು ದುಷ್ಟಶಕ್ತಿಯನ್ನು ನಿಗ್ರಹಿಸಿ ವಿಜಯ ಪಡೆದ ಸಂಕೇತವೂ ಹೌದು. ವಿಜಯದಶಮಿಯನ್ನು ವಿಜಯನಗರದ ಅರಸರು ಆಚರಿಸಿಕೊಂಡು ಬರುತ್ತಿದ್ದರಂತೆ. ವಿಜಯ ನಗರದ ಕಾಲದಲ್ಲಿ ದಸರಾ ಆಚರಣೆ ನಡೆಯುತ್ತಿತ್ತು ಎನ್ನುವುದಕ್ಕೆ ಹ೦ಪೆಯಲ್ಲಿ ಇರುವ ಮಹಾನವಮಿ ದಿಬ್ಬವು ಸಾಕ್ಷಿಯಾಗಿದೆ. ಮಹಾನವಮಿ ದಿಬ್ಬದ ಮೇಲೆ ಕುಳಿತು ರಾಜರು ದಸರಾ ಉತ್ಸವವನ್ನು ವೀಕ್ಷಿಸುತ್ತಿದ್ದರು.
ಅವರ ಸಾಮ್ರಾಜ್ಯ ಪತನಗೊಂಡ ಬಳಿಕ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದ ಮೈಸೂರಿನ ಯದುವಂಶಸ್ಥರು ಇದನ್ನು ಮುಂದುವರೆಸಿಕೊಂಡು ಬಂದರು ಎಂದು ಇತಿಹಾಸ ಹೇಳುತ್ತದೆ.
ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾವಣೆ
ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ಮಾಡುತ್ತಿದ್ದ ರಾಜ ಒಡೆಯರ್ 1610 ರಲ್ಲಿ ವಿಜಯನಗರ ಪರಂಪರೆಯ ಪ್ರತೀಕವಾಗಿದ್ದ ವಿಜಯದಶಮಿ ಆಚರಣೆಯನ್ನು ಮೊದಲ ಬಾರಿಗೆ ಆಚರಿಸಿದರು. ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ (1799-1868) ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದಲ್ಲದೆ, ಮೈಸೂರಿನಲ್ಲಿ ದಸರಾ ಆಚರಣೆಯನ್ನು ಮುಂದುವರೆಸಿದರು. ನಂತರದ ಕಾಲಾವಧಿಯಲ್ಲಿ ಇದು ತನ್ನದೇ ಆದ ವೈಭವ ಪಡೆಯುವುದರೊಂದಿಗೆ ವಿಶ್ವವಿಖ್ಯಾತವಾಯಿತು.
ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆ
ನಾಲ್ವಡಿಯವರಿಂದ ದಸರಾಕ್ಕೆ ಮತ್ತಷ್ಟು ಕಳೆ ಮೈಸೂರಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರಿಂದ ಮತ್ತಷ್ಟು ಭವ್ಯಗೊಂಡು, ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆ(1902-1940) ಕಾಲಕ್ಕೆ ಮಗದಷ್ಟು ವೈಭವದ ಉತ್ತುಂಗಕ್ಕೇರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವಾಗಿ ವಿಜೃಂಭಿಸಿತು. ನಾಲ್ವಡಿಯವರ ನಂತರ ಯದುವಂಶದ 25 ನೆಯ ಹಾಗೂ ಕಟ್ಟಕಡೆಯ ದೊರೆಯಾಗಿ ಅಧಿಕಾರಕ್ಕೆ ಬಂದ ಶ್ರೀ ಜಯಚಾಮರಾಜ ಒಡೆಯರ್ ಆಳ್ವಿಕೆ ಕಾಲದಲ್ಲಿ (1940-1947) ಇನ್ನಷ್ಟು ವೈಭವ ಪಡೆದುಕೊಂಡು ಜಾಗತಿಕ ಆಕರ್ಷಣೆ ಪಡೆಯಿತು. ಆದರೆ, 1947 ಆಗಸ್ಟ್ 15 ರಂದು ಭಾರತ ಸ್ವಾತಂತ್ರ್ಯಗಳಿಸಿದ ನಂತರ ರಾಜ ಮಹಾರಾಜರ ಸಂಸ್ಥಾನಗಳೆಲ್ಲವೂ ಭಾರತ ಸರ್ಕಾರದಲ್ಲಿ ವಿಲೀನವಾದವು. ಆದರೂ ಸಹ ಯಾವುದೇ ಅಡ್ಡಿಯಿಲ್ಲದೆ ಮೈಸೂರು ದಸರಾ ಆಚರಣೆ ನಡೆದುಕೊಂಡು ಬರುತ್ತಿತ್ತು. ಶ್ರೀ ಜಯಚಾಮರಾಜ ಒಡೆಯರು ರಾಜ ಪ್ರಮುಖರಾಗಿ ಹಿಂದಿನಂತೆ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿದ್ದರು.
ಮೈಸೂರಿನ ಅಧಿದೇವತೆ ನಾಡದೇವಿ ಶ್ರೀಚಾಮುಂಡೇಶ್ವರಿ ಅಂಬಾರಿಯಲ್ಲಿ ಅಲಂಕೃತ
ಅಂಬಾರಿಯನ್ನು ದರ್ಶಿಸುವುದೇ ಪುಣ್ಯ ಇನ್ನು ರಾಜ ಪ್ರತ್ಯಕ್ಷ ದೈವವೆಂಬ ಭಾವನೆಯಿದ್ದ ಆ ಕಾಲದಲ್ಲಿ ರಾಜರದೇ ದರ್ಬಾರು. ಅಂದು ಅಂಬಾರಿಯಲ್ಲಿ ಸ್ವತಃ ಮಹಾರಾಜರೇ ಕೂರುತ್ತಿದ್ದರೆ, ಇಂದು ಮೈಸೂರಿನ ಅಧಿದೇವತೆ ನಾಡದೇವಿ ಶ್ರೀಚಾಮುಂಡೇಶ್ವರಿ ಅಂಬಾರಿಯಲ್ಲಿ ಅಲಂಕೃತವಾಗಿ ಪೂಜಿಸಲ್ಪಡುತ್ತಾಳೆ. 750 ಕೆ.ಜಿ ಭಾರದ ಬಂಗಾರದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯ ಸುಂದರ ಮೂರ್ತಿಯನ್ನು ಹೊತ್ತ ಗಜರಾಜನ ಗಾಂಭೀರ್ಯ ನಡಿಗೆಯಲ್ಲಿ ಮೈಸೂರು ರಾಜಬೀದಿಯಲ್ಲಿ ಸಾಗುವ ಮೈಸೂರು ದಸರೆಯ ಜಂಬೂ ಸವಾರಿಯಲ್ಲಿ ಈ ಚಿನ್ನದ ಅಂಬಾರಿಯನ್ನು ದರ್ಶಿಸುವುದು ಮಹಾ ಪುಣ್ಯವೆಂಬ ಭಾವನೆ ಇಲ್ಲಿ ಬೇರೂರಿರುವುದರಿಂದ ಕಣ್ತುಂಬಿಕೊಳ್ಳಲು ಜನ ಕಿಕ್ಕಿರಿದು ಸೇರುತ್ತಾರೆ.
ದಸರಾ ಅಂದಕೂಡಲೇ ಮನಸ್ಸಿಗೆ ಬರುವುದು ಮೈಸೂರು ದಸರಾ.
ಮೈಸೂರು ದಸರಾ ಎಷ್ಟೊಂದು ಸುಂದರ ಚೆಲ್ಲಿದೆ ನಗೆಯಾ ಪನ್ನೀರಾ , ಚೆಲ್ಲಿದೆ ನಗೆಯಾ ಪನ್ನೀರಾ.
- ನವೆಂಬರ್ 11ರಿಂದ ಉಪ ಚುನಾವಣಾ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧ
- ಮಂಡ್ಯ : ಹಿಂದೂ ಸ್ಮಶಾನವನ್ನು ವಕ್ಫ್ ಆಸ್ತಿಯೆಂದು ಘೋಷಿಸಿದ ಪ್ರಕರಣ
- MUDA ಹಗರಣ: ನಾಳೆ ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಲು ಸಿಎಂ ಸಿದ್ದರಾಮಯ್ಯ ನಿರ್ಧಾರ
- HDK – ನಿಖಿಲ್ ವಿರುದ್ಧ ಎಡಿಜಿಪಿ ಚಂದ್ರಶೇಖರ್ ದೂರು ದಾಖಲು
- ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಕುಮಾರಸ್ವಾಮಿ ಪರ ಪತ್ನಿ ರೇವತಿ ಪ್ರಚಾರದಲ್ಲಿ ಸಕ್ರಿಯ
- ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು : ಬೆಂಕಿ ಹೊತ್ತಿಕೊಂಡು ಚಾಲಕ ಸಜೀವದಹನ
More Stories
ನವೆಂಬರ್ 11ರಿಂದ ಉಪ ಚುನಾವಣಾ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧ
ಮಂಡ್ಯ : ಹಿಂದೂ ಸ್ಮಶಾನವನ್ನು ವಕ್ಫ್ ಆಸ್ತಿಯೆಂದು ಘೋಷಿಸಿದ ಪ್ರಕರಣ
MUDA ಹಗರಣ: ನಾಳೆ ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಲು ಸಿಎಂ ಸಿದ್ದರಾಮಯ್ಯ ನಿರ್ಧಾರ