ದ.ಕ. ಜಿಲ್ಲೆ ಪ್ರವೇಶಿಸಲು ಮುತಾಲಿಕ್ ಗೆ ತಡೆ : ವಾಪಸ್ ಕಳಿಸಿದ ಪೊಲೀಸರು

Team Newsnap
1 Min Read

ದ.ಕ. ಜಿಲ್ಲೆಗೆ ಪ್ರವೇಶಿಸಲು ಮುಂದಾದ ಶ್ರೀ ರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ಜಿಲ್ಲೆಯ ಗಡಿಭಾಗವಾದ ಹೆಜಮಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದು ವಾಪಸ್ ಕಳುಹಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಧ್ಯಮದವರಿಗೆ ಈ ಮಾಹಿತಿ ನೀಡಿ, ಸುಳ್ಯದಲ್ಲಿ ಹತ್ಯೆಯಾಗಿರುವ ಪ್ರವೀಣ್ ಮನೆಗೆ ಭೇಟಿ ನೀಡುವ ಉದ್ದೇಶದಿಂದ ಮತಾಲಿಕ್ ದ.ಕ. ಜಿಲ್ಲೆಗೆ ಆಗಮಿಸುವ ಬಗ್ಗೆ ಗುರುವಾರವೇ ಮಾಹಿತಿಯಿತ್ತು. ಅವರು ಆಗಮಿಸಿದ್ದಲ್ಲಿ ನಗರದಲ್ಲಿ ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆಗಸ್ಟ್ 3ರವರೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿ ಸೇರಿದಂತೆ ದ.ಕ. ಜಿಲ್ಲೆ ಪ್ರವೇಶಿಸುವುದನ್ನು, ಸಾರ್ವಜನಿಕವಾಗಿ ಹೇಳಿಕೆ ನೀಡುವುದಕ್ಕೆ ನಿಷೇಧ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಇದನ್ನು ಓದಿ – ಸುರತ್ಕಲ್ ಫಾಜಿಲ್ ಹತ್ಯೆ: 14 ಮಂದಿ ಶಂಕಿತರು ವಶಕ್ಕೆ : ಮಂಗಳೂರು ಕಮೀಷನರ್

ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಉಡುಪಿ ಜಿಲ್ಲೆಗೆ ಆಗಮಿಸಿದ್ದ ಪ್ರಮೋದ್ ಅಲ್ಲಿಂದ ಸುಳ್ಯದಲ್ಲಿ ಹತ್ಯೆಯಾದ ಪ್ರವೀಣ್ ಮನೆಗೆ ಆಗಮಿಸುವ ಉದ್ದೇಶದಿಂದ ಹೆಜಮಾಡಿ ಮೂಲಕ ಪ್ರವೇಶಿಸಲು ಮುಂದಾಗಿದ್ದಾರೆ. ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದು ವಾಪಸ್ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ ನಿಷೇಧದ ಹಿನ್ನೆಲೆಯಲ್ಲಿ ಮಂಗಳೂರು ಕಡೆ ತೆರಳುತ್ತಿದ್ದ ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರನ್ನು ಪಡುಬಿದ್ರೆ ಪೊಲೀಸರು ಜಿಲ್ಲೆಯ ಗಡಿ ಪ್ರದೇಶವಾಗಿರುವ ಹೆಜಮಾಡಿಯಲ್ಲಿ ತಡೆದು ವಾಪಸ್ ಕಳುಹಿಸಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ತಿಳಿಸಿದ್ದಾರೆ.

Share This Article
Leave a comment