December 25, 2024

Newsnap Kannada

The World at your finger tips!

deepa1

ದುಡ್ಡು ಇದ್ರೇ ಜಗವೆಲ್ಲಾ – ದುಡ್ಡು ಇಲ್ದೇ ಜಗವಿಲ್ಲ……

Spread the love

ಯಾರ್ರೀ ಅದು ಪೇಪರ್ ದುಡ್ಡು ಕಂಡುಹಿಡಿದಿದ್ದು,
ಸ್ವಲ್ಪ ಅವನ ಅಡ್ರೆಸ್ ಕೊಡಿ…..

ಯಪ್ಪಾ ಯಪ್ಪಾ ಯಪ್ಪಾ
ಜನ ಹಣ ಹಣ ಹಣ ಅಂತ ಸಾಯ್ತಾರೆ. ಅದಕ್ಕೆ ಮಿತಿನೇ ಇಲ್ಲ…..

ಒಂದಿಷ್ಟು ದುಡ್ಡಿನ ಪೇಪರ್ ಕಟ್ಟಿಗೆ ಇನ್ನೊಬ್ಬ ವ್ಯಕ್ತಿಯ ಜೀವವನ್ನೇ ತೆಗೆದು ಬಿಡುವ ಸುಫಾರಿ ಹಂತಕರು ಇದ್ದಾರೆ.
ಅಮಾಯಕ ಜನರ ಗುಂಪಿನ ಮೇಲೆ ಬಾಂಬ್ ಹಾಕ್ತಾರೆ. ದುಡ್ಡಿಗೆ ದೇಹಾನು ಮಾರಿಕೊಳ್ತಾರೆ ಓಟು ಮಾರಿಕೊಳ್ತಾರೆ ಮಹತ್ವದ ಶಾಸಕ ಸ್ಥಾನವನ್ನು ಮಾರಿಕೊಳ್ತಾರೆ.

ದುಡ್ಡಿಗಾಗಿ ಏನ್ ಕೆಲ್ಸ ಬೇಕಾದರೂ ಮಾಡ್ತಾರೆ. ಎಂತ ದೇವರು ಧರ್ಮ ಕಾನೂನೇ ಇರಲಿ ದುಡ್ಡಿಗಾಗಿ ಅದನ್ನು ದಿಕ್ಕರಿಸುತ್ತಾರೆ. ಯಾವ‌ ಸಂಬಂಧಗಳನ್ನು ಬೇಕಾದರೂ ಹಿಂಸಿಸುತ್ತಾರೆ. ಇಡೀ ಬದುಕಿನ ಎಲ್ಲಾ ಆಲೋಚನೆಗಳಲ್ಲೂ ದುಡ್ಡೇ ತುಂಬಿರುತ್ತದೆ. ಬಹಳಷ್ಟು ಜನರ ಬದುಕಿನ ಗುರಿಯೇ ದುಡ್ಡು ಮಾಡುವುದು. ಅವರ ಪ್ರತಿ ನಡೆಯೂ ದುಡ್ಡಿಗಾಗಿಯೇ ಇರುತ್ತದೆ.

ದುಡ್ಡಿನಿಂದ ಪ್ರಾಣ ಬಿಟ್ಟು ಎಲ್ಲಾ ಸಿಗುತ್ತೆ. ಮಾನ ಮರ್ಯಾದೆ ಅಧಿಕಾರ ಸುಖ ಜನಪ್ರಿಯತೆ ಐಷಾರಾಮಿ ಊಟ ಬಟ್ಟೆ ಮನೆ ಕಾರು ಗೆಳೆಯ ಗೆಳತಿಯರು ಎಲ್ಲವೂ ನಿಮ್ಮ ಕಾಲ ಬುಡಕ್ಕೆ ಬರುತ್ತದೆ. ಯಥೇಚ್ಛ ಹಣ ಇದ್ದರೆ ರಕ್ತ ಸಂಬಂಧಗಳು ಸೇರಿ ಎಲ್ಲವೂ ಪ್ರೀತಿ ಆತ್ಮೀಯತೆಯಿಂದಲೇ ಇರುತ್ತದೆ.

ಈ ರೀತಿಯ ಮನೋಭಾವದ ಸಮಾಜ ನಿರ್ಮಿಸಿ ಭ್ರಷ್ಟಾಚಾರ ಇದೆ ಕಳ್ಳತನ ಇದೆ ವಂಚನೆ ಮೋಸ ಇದೆ ಕೊಲೆ ಇದೆ ದರೋಡೆ ಇದೆ ಅಂತ ಬಾಯಿ ಬಾಯಿ ಬಡಿದುಕೊಂಡರೆ ಏನು ಪ್ರಯೋಜನ.

ಹೌದು, ದುಡ್ಡು ಮಾಡಲಿಕ್ಕೆ ನ್ಯಾಯ ನೀತಿ ಧರ್ಮ ಕಾನೂನಿನ ಮಾರ್ಗಗಳು ಇಲ್ಲವೇ ಎಂಬ ನಿಮ್ಮ ಮನಸ್ಸಿನ ಪ್ರಶ್ನೆ ನನಗೆ ಕೇಳಿಸಿತು. ಆ ಮಾರ್ಗಗಳು ಸರಿಯಾಗಿ ಪಾಲನೆಯಾಗಿದ್ದರೆ ಇದನ್ನು ಬರೆಯುವ ಅವಶ್ಯಕತೆಯೇ ಇರಲಿಲ್ಲ.

ಶ್ರಮಕ್ಕೆ ತಕ್ಕ ಫಲ, ಪ್ರತಿಭೆಗೆ ತಕ್ಕಂತೆ ಹಣ ಅಧಿಕಾರ, ಸಾಮರ್ಥ್ಯಕ್ಕೆ ತಕ್ಕಂತೆ ಗೌರವ ಘನತೆ, ಒಳ್ಳೆಯತನಕ್ಕೆ ಸಿಗಬೇಕಾದ ಬೆಲೆ ಸಿಕ್ಕಿದ್ದರೆ ಇವತ್ತು ಹಣ ಕೇವಲ ಒಂದು ಪೇಪರ್ ಮಾತ್ರ ಆಗಿರುತ್ತಿತ್ತು. ಅದಕ್ಕಿಂತ ಹೆಚ್ಚಿನ ಮಹತ್ವ ಇರುತ್ತಿರಲಿಲ್ಲ.

ಥೋ ಥೋ ಥೋ ಬಹಳಷ್ಟು ಕಡೆ ತಂದೆ ತಾಯಿ ಮಕ್ಕಳು ಅಣ್ಣ ತಂಗಿ ತಮ್ಮ ಅಕ್ಕ ಅಜ್ಜ ಅಜ್ಜಿ ಎಲ್ಲರೂ ದುಡ್ಡಿಗಾಗಿ ಮಾಡುವ ಅತ್ಯಂತ ಕೀಳುಮಟ್ಟದವ ವರ್ತನೆಯನ್ನು ಕಣ್ಣಾರೆ ಕಾಣಬಹುದು. ಸರ್ಕಾರದ ಅಧಿಕಾರಿಗಳಿಗೆ ದುಡ್ಡು ಕೊಟ್ಟು ಬದುಕಿದ್ದಾಗಲೇ ಡೆತ್ ಸರ್ಟಿಫಿಕೇಟ್ ಪಡೆಯಬಹುದು. ಹೆಣ ಸುಡುವುದಕ್ಕೂ ಲಂಚ ಕೊಡಬೇಕು. ಅದೊಂದು ಪ್ರತಿ ಕ್ಷಣದ ಅಸಹ್ಯಕರ ಬ್ರಹ್ಮಾಂಡ ಭ್ರಷ್ಟಾಚಾರ.

ನೋಡಿ ದುಡ್ಡು ಬೇಕು ನಿಜ. ಅದೊಂದು ವ್ಯಾವಹಾರಿಕ ಮಾಧ್ಯಮ ಅಷ್ಟೆ. ಈಗ ಆಸ್ಪತ್ರೆ ಇದೆ, ಶಾಲೆ ಇದೆ, ಪೋಲೀಸ್ ಇದೆ, ನ್ಯಾಯಾಲಯ ಇದೆ, ಬ್ಯಾಂಕಿಂಗ್ ವ್ಯವಸ್ಥೆ ಇದೆ, ಸರ್ಕಾರ ಇದೆ ಹಾಗೆ ದುಡ್ಡು ಸಹ. ಇದರಲ್ಲಿ ಯಾವೂದೋ ಒಂದು ಎಲ್ಲವೂ ಅಲ್ಲ. ಆದರೆ ದುಡ್ಡು ಈ ಎಲ್ಲವನ್ನೂ ಆಕ್ರಮಿಸಿಕೊಂಡಿದೆ. ಸಂಬಂಧಗಳನ್ನು ನಾಶಪಡಿಸಿದೆ, ಪ್ರಕೃತಿಯನ್ನೇ ಆಪೋಷಣೆ ತೆಗೆದುಕೊಂಡಿದೆ, ಮಾನವೀಯ ಮೌಲ್ಯಗಳು ಬಿಡಿ ನಗೆಪಾಟಲಿಗೆ ಈಡಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ತೊಂದರೆ, ಕಾರ್ಮಿಕರಿಗೆ ತೊಂದರೆ, ಬಡವರಿಗೆ ತೊಂದರೆ, ಅವರಿಗೆ ತೊಂದರೆ ಇವರಿಗೆ ತೊಂದರೆ ಭ್ರಷ್ಟಾಚಾರ ಜಾಸ್ತಿ ಅಂತ ಹೇಳುವ ಯಾವ ನೈತಿಕತೆ ನಮಗಿದೆ.

ನಮ್ಮಪ್ಪ ಒಳ್ಳೆಯವರು, ನಮ್ಮಮ್ಮ ದೇವತೆ, ನನ್ನ ಮಗ ರಾಜಕುಮಾರ, ನನ್ನ ಮಗಳು ಚಿನ್ನ, ನನ್ನ ಹೆಂಡತಿ ಮುಗ್ದೆ, ನನ್ನ ಗಂಡ ಪ್ರಾಮಾಣಿಕ ಎಂದು ಹೇಳಿಕೊಂಡು ತಿರುಗಾಡಿದರೆ ಮತ್ತೆ ಕೆಟ್ಟವರು ಯಾರು, ಭ್ರಷ್ಟರು ಯಾರು, ಅವರು ಬೇರೆ ಲೋಕದಿಂದ ಬಂದವರೆ.

ಕೌಟುಂಬಿಕ ವ್ಯವಸ್ಥೆಯಲ್ಲಿ ಇರುವ ಯಾರೇ ಜವಾಬ್ದಾರಿ ವ್ಯಕ್ತಿಗಳು ನಮ್ಮ ಉದ್ಯೋಗ ಏನು ನಮ್ಮ ಆಸ್ತಿ ಏನು ನಮ್ಮ ಆದಾಯ ಏನು ಖರ್ಚು ಏನು ನಮ್ಮ ಉಳಿತಾಯ ಏನು ಆದಾಯದ ಮೂಲಗಳು ಯಾವುವು ಎಂಬುದರ ಅರಿವು ಇದ್ದೇ ಇರುತ್ತದೆ. ಆ ಮಿತಿ ಮೀರಿ ಹಣ ಆಸ್ತಿ ಒಡವೆಗಳು ಸಂಗ್ರಹವಾಗುತ್ತಿದ್ದರೆ ಅದನ್ನು ಪ್ರಶ್ನೆ ಮಾಡಬೇಕಲ್ಲವೇ. ಗಂಡನೋ, ಹೆಂಡತಿಯೋ, ಮಗನೋ, ಮಗಳೋ ಎಷ್ಟೇ ಹಣ ಬಂದರೂ ಅದನ್ನು ಅನುಮಾನಿಸದೆ ತಿಜೋರಿ ತುಂಬಿಸಿಕೊಂಡು ಮಜಾ ಉಡಾಯಿಸಿ ಎಲ್ಲರೂ ಒಳ್ಳೆಯವರೆ ಅನ್ನುವುದು ಆತ್ಮವಂಚನೆಯಲ್ಲವೇ….

ಮದುವೆಗಳಲ್ಲಿ ಮೈ ತುಂಬಾ ಒಡವೆ ಧರಿಸಿ ಪ್ರದರ್ಶನ ಮಾಡುವಾಗ ಅದು ಶ್ರಮದ ಸಂಪಾದನೆಯಾಗಿದ್ದರೆ ಸಂತೋಷ. ಆದರೆ ಅದು ಭ್ರಷ್ಟ ಸಂಪಾದನೆಯಾಗಿದ್ದರೆ ನಾಚಿಕೆಯಾಗಬೇಕಲ್ಲವೇ,
ಮದುವೆ ಮನೆಯಲ್ಲಿ ವರದಕ್ಷಿಣೆ ರೂಪದ ದುಬಾರಿ ಕಾರನ್ನು ಸ್ವಾಗತ ತೋರಣದ ಮುಂದೆ ನಿಲ್ಲಿಸಿ ಪ್ರದರ್ಶಿಸುವ ಗಂಡುಗಳಿಗೆ ಏನೆಂದು ಕರೆಯಬೇಕು. ನಾಗರಿಕ ಸೇವಾ ಅಧಿಕಾರಿಗಳು ದೊಡ್ಡ ಹುದ್ದೆಯಲ್ಲಿ ಇದ್ದಾಗಲೂ ಲಂಚದ ಹಣವನ್ನು ಸ್ವತಃ ಎಣಿಸಿಕೊಂಡಿರುವುದನ್ನು ನೋಡಿದ್ದೇನೆ.

ಇಷ್ಟೊಂದು ದುಡ್ಡಿಗೆ ಮಹತ್ವ ಕೊಟ್ಟು ಈಗ ದುಡ್ಡಿಗಾಗಿಯೇ ಸಮಾಜ ಬಡಿದಾಡುತ್ತಿರುವಾಗ, ಸಂಬಂಧಗಳೇ ಶಿಥಲವಾಗುತ್ತಿರುವಾಗ, ಪರಿಸರವೇ ನಾಶವಾಗುತ್ತಿರುವಾಗ ವ್ಯವಸ್ಥೆಯನ್ನು ಸರಿಪಡಿಸುವುದು ಹೇಗೆ.

ದುಡ್ಡೇ ಅರ್ಹತೆ, ದುಡ್ಡೇ ಅಧಿಕಾರ, ದುಡ್ಡೇ ನಿಮ್ಮ ಸರ್ವಸ್ವವೂ ಆಗಿರುವಾಗ ಎಲ್ಲರೂ ದುಡ್ಡಿಗಾಗಿ ಹಾತೊರೆಯುವಾಗ ಅದನ್ನು ಹೊರತುಪಡಿಸಿ ಯಾವುದೇ ಸುಧಾರಣೆ ಹೇಗೆ ಸಾಧ್ಯ.

ಮೊದಲು ದುಡ್ಢಿನ ಮಹತ್ವ ಕಡಿಮೆ ಮಾಡಬೇಕು. ದುಡ್ಡು ಪ್ರತಿಫಲ ಆಗಬಾರದು. ದುಡ್ಡು ವ್ಯಕ್ತಿತ್ವ ನಿರ್ಧರಿಸಬಾರದು.
ದುಡ್ಡು ಅಳತೆ ಗೋಲಾಗಬಾರದು.
ದುಡ್ಡು ಒಂದು ವ್ಯಾವಹಾರಿಕ ಸಾಧನ ಮಾತ್ರ. ಹೇಗೆ ಅಕ್ಷರಗಳು ಕಲಿಕೆಯ ಸಾಧನವೋ ಹಾಗೆ. ಅಕ್ಷರಗಳೇ ವಿದ್ಯೆಯಲ್ಲ.
ಸಮಾಜ ತೀರಾ ಹದಗೆಡಲು ದುಡ್ಡಿನ ಮೋಹವೇ ಕಾರಣ. ಅದಕ್ಕೆ ಈಗಲಾದರೂ ಕಡಿವಾಣ ಹಾಕಬೇಕಿದೆ.

ವಿಶೇಷ ಸೂಚನೆ ::


ವೈಯಕ್ತಿಕ ಮಟ್ಟದಲ್ಲಿ ಇದ್ದಕ್ಕಿದ್ದಂತೆ ನಿಮ್ಮ ಮನೋಭಾವ ಮತ್ತು ವ್ಯವಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಡಿ. ಅದು ಅಪಾಯಕಾರಿ. ಸಮಾಜ ಮತ್ತು ನಿಮ್ಮ ಅವಲಂಬಿತರು ಇದನ್ನು ಸಹಿಸುವುದಿಲ್ಲ. ದಿಡೀರನೇ ಲಂಚ ತಿರಸ್ಕರಿಸಿದರೆ ನಿಮ್ಮನ್ನು ಹುಚ್ಚ ಎನ್ನುತ್ತಾರೆ . ಆ ರೀತಿಯ ಬದಲಾವಣೆ ಮತ್ತೊಂದು ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ಇದನ್ನು ಸಾಮೂಹಿಕವಾಗಿ ಬದಲಾವಣೆ ಮಾಡಬೇಕು ಮತ್ತು ನಾವು ಅದರಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕು.

ಒಂದು ವೇಳೆ ನೀವು ಪ್ರಾಮಾಣಿಕವಾಗಿದ್ದರೆ ತುಂಬಾ ಸಂತೋಷ. ಹಾಗೆ ಇರಿ

ವಿವೇಕಾನಂದ. ಹೆಚ್.ಕೆ

Copyright © All rights reserved Newsnap | Newsever by AF themes.
error: Content is protected !!