ಬದುಕಿನ ಪಯಣದಲಿ ತಾಯ್ತನದ ನೆನಪುಗಳು……

Team Newsnap
2 Min Read

ನನ್ನ ಕಂದ ನನ್ನ ಮಡಿಲಲ್ಲಿ ಎದೆ ಹಾಲು ಕುಡಿಯುತ್ತಿರುವ ಈ ಕ್ಷಣದಲ್ಲಿ……..

ಅಮ್ಮನನ್ನು ಎರಡೂ ಕೈಗಳಲ್ಲಿ ಬಾಚಿ ತಬ್ಬಿಕೊಂಡು ಹಾಲು ಚೀಪುತ್ತಾ ಪಿಳಿಪಿಳಿ ಕಣ್ಣು ಬಿಟ್ಟು ಮನೆಯೊಳಗಿನ ಸರಿದಾಡುವ ವಸ್ತುಗಳನ್ನು ನೋಡುತ್ತಿದ್ದಾಗ ಈ ಜಗತ್ತು ಕುತೂಹಲದಿಂದ ಕಂಡದ್ದೇ ಬೇರೆ.

ಅಕ್ಕನ ಕಂಕುಳಲ್ಲಿ ಕುಳಿತು ಮನೆಯ ಹಜಾರ – ವರಾಂಡಗಳಲ್ಲಿ ಸುತ್ತಾಡುವಾಗ ನನ್ನ ಮನಸ್ಸಿನೊಳಗೆ ಹರಿದಾಡಿದ ಲೋಕವೇ ಬೇರೆ.

ತಾತನ ಹೆಗಲ ಮೇಲೆ ಕೂತು ಅಂಗಡಿ – ಆಟದ ಮೈದಾನ – ಬೀದಿಗಳಲ್ಲಿ ಸುತ್ತಾಡುವಾಗ ನನ್ನೊಳಗೆ ಮೂಡುತ್ತಿದ್ದ ಭಾವನೆಗಳೇ ಬೇರೆ.

ಅಜ್ಜಿಯ ಮಡಿಲಲ್ಲಿ ಮಲಗಿ ಕಥೆ ಕೇಳುತ್ತಾ ನಿದ್ರೆಗೆ ಜಾರುವಾಗ ಮನದಲ್ಲಿ ಆಗುತ್ತಿದ್ದ ತಾಕಲಾಟಗಳೇ ಬೇರೆ.

ಅಣ್ಣನ ಕೈ ಹಿಡಿದು ಹೆಗಲಿಗೆ ಬ್ಯಾಗು ನೇತಾಕಿಕೊಂಡು ಶಾಲೆಗೆ ಹೋದಾಗ ನಾನು ಕಂಡ ಜಗತ್ತೇ ಬೇರೆ.

ಒಂದರಿಂದ ಹತ್ತರವರೆಗೆ ಶಾಲೆಯಲ್ಲಿ ಸ್ನೇಹಿತರು – ಟೀಚರ್ ಗಳು – ಆಟಗಳು – ಪಿಕ್ ನಿಕ್ ಗಳು – ಸಾಂಸ್ಕೃತಿಕ ಕಾರ್ಯಕ್ರಮಗಳು – ಗಲಾಟೆಗಳು – ಪರೀಕ್ಷೆಗಳು – ಓ – ಆಗ ಕಂಡ ಪ್ರಪಂಚವೇ ಬೇರೆ.

ಅಪ್ಪನ ಜೊತೆ ಗಾಡಿಯಲ್ಲಿ ಕುಳಿತು ನಗರದ ಕಾಲೇಜಿಗೆ ಹೋಗಿ ಸೇರಿದಾಗ ನಾನು ಕಂಡ ದುನಿಯಾನೇ ಬೇರೆ.

ಸ್ನೇಹಿತರ ಜೊತೆ ಕಾಲೇಜಿನಲ್ಲಿ – ಸಿನಿಮಾ ಥಿಯೇಟರುಗಳಲ್ಲಿ – ಹೋಟೆಲುಗಳಲ್ಲಿ ಮಜಾ ಉಡಾಯಿಸುವಾಗ ಕಂಡ ಜಗತ್ತೇ ಬೇರೆ.

ಉದ್ಯೋಗ ದೊರೆತಾಗ ಒಂಟಿಯಾಗಿಯೇ ಹೋಗಿ ಸೇರಿ ಅಲ್ಲಿ ಸಹಪಾಠಿಗಳ ಜೊತೆ ಬೆರೆತಾಗ ನಾನು ಕಂಡ ಲೋಕವೇ ಬೇರೆ.

ನಾನು ಮೆಚ್ಚಿದವರೊಂದಿಗೆ ಅಪ್ಪ – ಅಮ್ಮ ಮದುವೆ ಮಾಡಿಕೊಟ್ಟಾಗ ನಾನು ಅನುಭವಿಸಿದ ಸಂಭ್ರಮವೇ ಬೇರೆ.

ನನ್ನೊಂದಿಗೆ ಜೊತೆಯಾದವರೊಂದಿಗೆ ಸಂಸಾರ ಮಾಡುವಾಗ ನಾನು ಕಂಡ ಲೋಕವೇ ಬೇರೆ.

ಮತ್ತೆ ಈಗ ನನ್ನ ಮಗು ನನ್ನ ಮಡಿಲಲ್ಲಿ ಮಲಗಿ ನನ್ನ ಎದೆ ಹಾಲು ಕುಡಿಯುತ್ತಾ ಪಿಳಪಿಳನೇ ಕಣ್ಣುಬಿಟ್ಡು ನನ್ನನ್ನೇ ನೋಡುತ್ತಿರುವಾಗ ನನ್ನಲ್ಲಿ ಮೂಡುತ್ತಿರುವ ಭಾವನೆಗಳೇ ಬೇರೆ.

ಎಷ್ಟೊಂದು ಸುಂದರ ಈ ಬದುಕಿನ ಪಯಣ.
ಕಾಲನ ಅಂಗಳದಲ್ಲಿ ಎಷ್ಟೊಂದು ಅದ್ಭುತ – ಆಶ್ಚರ್ಯ – ವಿಸ್ಮಯ.
ಬದುಕು ಸಾರ್ಥಕತೆ ಕಂಡ ಈ ನೆನಪಿನ ಪಯಣದಲಿ ನಿಮ್ಮೊಂದಿಗೆ, ………………………..

ತಾಯ್ತನದ ಸುಖ ಅನುಭವಿಸುತ್ತಾ……

ನಿಮ್ಮ ಗೆಳತಿ…………

  • ವಿವೇಕಾನಂದ. ಹೆಚ್.ಕೆ.
Share This Article
Leave a comment