ಮೇಘನ್ ಎನ್‌ಇಪಿ ಆಶಯಗಳಿಗೆ ಒಳ್ಳೆಯ ಮಾಡೆಲ್: ಸಚಿವ ಡಾ. ಅಶ್ವತ್ಥನಾರಾಯಣ

Team Newsnap
1 Min Read

ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ-೨೦೨೧) ಯಲ್ಲಿ ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಐದು ವಿಭಾಗಗಳಲ್ಲಿ ಮೊದಲ ರ‍್ಯಾಂಕ್ ಪಡೆದ ಮೈಸೂರಿನ ಎಚ್.ಕೆ.ಮೇಘನ್ ಅವರ ಮನೆಗೆ ಸೋಮವಾರ ಭೇಟಿ ನೀಡಿದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ರ‍್ಯಾಂಕ್ ವಿಜೇತನನ್ನು ಅಭಿನಂದಿಸಿದರು.


ಇದೇ ವೇಳೆ ಮೇಘನ್‌ನ ಪಠ್ಯೇತರ ಆಸಕ್ತಿಗಳ ಬಗ್ಗೆ ತಿಳಿದು ಮೆಚ್ಚುಗೆಯ ಮಾತುಗಳನ್ನಾಡಿದರು. ಮೇಘನ್ ಪಡೆದಿರುವ ಈ ರ‍್ಯಾಂಕ್ ಕೇವಲ ಎರಡು ವರ್ಷಗಳ ಪಿಯುಸಿ ಸಾಧನೆಯಲ್ಲ. ಅವನು ಐದನೇ ತರಗತಿಯಿಂದಲೂ ರೂಢಿಸಿಕೊಂಡ ಕ್ರಮಗಳ ಫಲವಾಗಿ, ಅಡಿಪಾಯ ಭದ್ರವಾಗಿದ್ದರಿಂದ ಇದು ಸಾಧ್ಯವಾಗಿದೆ ಎಂದು ಆತನ ತಾಯಿ ಹೆಮ್ಮೆಯಿಂದ ಹೇಳಿದರು.


ಆಫ್‌ಲೈನ್ ಮತ್ತು ಆನ್‌ಲೈನ್ ಟೀಚಿಂಗ್ ಕುರಿತ ಅಭಿಪ್ರಾಯವನ್ನು ಮೇಘನ್‌ನಿಂದಲೇ ಸಚಿವರು ತಿಳಿದುಕೊಂಡರು. ಈ ಪ್ರತಿಭಾವಂತ ವಿದ್ಯಾರ್ಥಿ ಒಳ್ಳೆಯ ಅಥ್ಲೀಟ್ ಎಂದು ಅಲ್ಲಿದ್ದವರು ಹೇಳಿದರು. ಗೀಟಾರ್ ನುಡಿಸುತ್ತಾನೆ. ಚೆನ್ನಾಗಿ ಹಾಡುತ್ತಾನೆ ಎಂದು ಮೇಘನ್ ತಾಯಿ ಹೇಳಿದರು. ಇದನ್ನು ಕೇಳಿದ ಡಾ. ಅಶ್ವತ್ಥನಾರಾಯಣ್, ರಾಜ್‌ಕುಮಾರ್ ಅವರ ಒಂದು ಹಾಡು ಹೇಳು ಎಂದಾಗ, “ಬಾನಿಗೊಂದು ಎಲ್ಲೆ ಎಲ್ಲಿದೆ… ಹಾಡನ್ನು ಮೇಘನ್ ಹೇಳಿದ. ಇದನ್ನು ಕೇಳಿ ಸಂತಸಪಟ್ಟ ಸಚಿವರು, ಇವನು ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಆಶಯಗಳಿಗೆ ಒಳ್ಳೆಯ ಮಾಡೆಲ್ ಎಂದು ನುಡಿದರು. ವಿದ್ಯಾರ್ಥಿಗಳು ಫಿಸಿಕಲಿ, ಮೆಂಟಲಿ, ಅಕಾಡೆಮಿಕಲಿ ಎಲ್ಲ ರೀತಿಯಲ್ಲೂ ಬೆಳೆದು ಪರಿಪೂರ್ಣವಾಗಿ ಬೆಳೆಯಬೇಕು ಅನ್ನೋದೇ ಎನ್‌ಇಪಿ ಆಶಯ ಎಂದರು. ಇದೇ ವೇಳೆ ಸಚಿವರು ಮೇಘನ್‌ಗೆ ಟ್ಯಾಬ್ ಅನ್ನು ಕೊಡುಗೆಯಾಗಿ ನೀಡಿ, ಮುಂದಿನ ವ್ಯಾಸಂಗಕ್ಕೆ ಶುಭ ಹಾರೈಸಿದರು.

Share This Article
Leave a comment