ಮಂಡ್ಯ ವಿಧಾನ ಸಭಾಕ್ಷೇತ್ರ : ಕಾಂಗ್ರೆಸ್ ಟಿಕೆಟ್ ಗೆ ಸಧ್ಯಕ್ಕೆ 14 ಮಂದಿ ಅರ್ಜಿ – ನಾಯಕರಿಗೆ ತಲೆ ಬಿಸಿ

Team Newsnap
2 Min Read

ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರಲ್ಲಿ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ.

ಈಗಾಗಲೇ ಕೆಪಿಸಿಸಿ ಆಯಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್‍ಗಾಗಿ ಅರ್ಜಿ ಹಾಕಲು ನವೆಂಬರ್ 21 ರ ವರೆಗೆ ಅವಕಾಶ ನೀಡಿದ ಬೆನ್ನಲ್ಲೇ , ಮಂಡ್ಯದ ಕಾಂಗ್ರೆಸ್ ಟಿಕೆಟ್‍ಗೆ ಭಾರಿ ಪೈಪೋಟಿ ನಡೆದಿದೆ.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲೇ ಈಗಗಲೇ ಬಿ ಫಾರಂಗಾಗಿ 14 ಮಂದಿ 2 ಲಕ್ಷ ರು ಠೇವಣಿ ( ವಾಪಸ್ಸು ಬರದ ) ನೀಡಿ. ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ದಿನಾಂಕ ವಿಸ್ತರಣೆ ಆಗಿರುವುದರಿಂದ ಮತ್ತಷ್ಟು ಅರ್ಜಿಗಳು ಸಲ್ಲಿಕೆಯಾಗುವ ಸಾಧ್ಯತೆಯೂ ಇದೆ.

ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿದ್ದ ಕೀಲಾರ ರಾಧಾಕೃಷ್ಣ ಕಾಂಗ್ರೆಸ್‍ನಿಂದ ಟಿಕೆಟ್‍ಗೆ ಅರ್ಜಿ ಹಾಕಿರುವುದು ಸಾಕಷ್ಟು ಅಚ್ಚರಿ ತಂದಿದೆ. ಇನ್ನೂ ಕಳೆದ ಬಾರಿ ಚುನಾವಣೆಯ ಪರಾಜಿತ ಅಭ್ಯರ್ಥಿ ಗಣಿಗ ರವಿಕುಮಾರ್, ಮಾಜಿ ಸಚಿವ ಆತ್ಮಾನಂದ, ಮಾಜಿ ಶಾಸಕ ಎಚ್.ಬಿ.ರಾಮು, ಮನ್ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಡಾ.ಕೃಷ್ಣ ಸೇರಿ 14 ಮಂದಿ ಟಿಕೆಟ್‍ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.

ಒಂದು ಕಡೆ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‍ನಲ್ಲಿ ಟಿಕೆಟ್ ಫೈಟ್ ನಡೆದರೆ, ಮತ್ತೊಂದೆಡೆ ನಾಗಮಂಗಲ, ಮದ್ದೂರು ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಟಿಕೆಟ್‍ಗೆ ಬೇಡಿಕೆ ಕಂಡುಬಂದಿಲ್ಲ.

ನಾಗಮಂಗಲದಿಂದ ಕೆಪಿಸಿಸಿ ಉಪಾಧ್ಯಕ್ಷ , ಮಜಿ ಸಚಿವ ಚೆಲುವರಾಯಸ್ವಾಮಿ ಮಾತ್ರ ಬಿ ಫಾರಂಗೆ ಅರ್ಜಿ ನೀಡುವ ಕಾರಣ ಯಾರು ಅರ್ಜಿ ಸಲ್ಲಿಸಿಲ್ಲ. ಇನ್ನೂ ಮದ್ದೂರಿನಲ್ಲಿ 2, ಕೆ.ಆರ್.ಪೇಟೆಯಲ್ಲಿ 6, ಮಳವಳ್ಳಿ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದಿಂದ ತಲಾ ಮೂರು ಅರ್ಜಿಗಳು ಸಲ್ಲಿಕೆಯಾಗಿವೆ.

ಕಾಂಗ್ರೆಸ್ ನಲ್ಲಿ ಹೊಸ ಹುರಪು:

ಜಿಲ್ಲೆಯಲ್ಲಿ ಕಾಂಗ್ರೆಸ್‍ ಎರಡು ಎಂಎಲ್‍ಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಅಲ್ಲದೇ ಭಾರತ್ ಜೋಡೋ ಯಾತ್ರೆ ಬಳಿಕ ಮಂಡ್ಯ ಜಿಲ್ಲೆಯಲ್ಲಿ ಹೊಸ ಉರುಪೂ ಬಂದಿರುವ ಕಾರಣ ಈ ಬಾರಿ ಟಿಕೆಟ್ ಬೇಡಿಕೆ ಹೆಚ್ಚಾಗಿದೆ.

ಮಂಡ್ಯ ಕ್ಷೇತ್ರದಲ್ಲಿ ಟಿಕೆಟ್ ಗೆ ಸಾಕಷ್ಟು ಪೈಪೋಟಿ ಇದೆ. ಈ ಸಂಗತಿ ರಾಜ್ಯ ಕೈ ನಾಯಕರಿಗೆ ತಲೆನೋವಾಗಲಿದೆ. ಒಬ್ಬರಿಗೆ ಟಿಕೆಟ್ ನೀಡಿ ಉಳಿದವರು ಬಂಡಾಯ ಹೇಳದಂತೆ ಸಮಾಧಾನ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಬಂಡಾಯ ಉದ್ಭವಿಸಿದರೆ, ಜೆಡಿಎಸ್‍ಗೆ ಲಾಭವಾಗುವ ಸಾಧ್ಯತೆ ಹೆಚ್ಚಿದೆ.

ಮಂಡ್ಯ ಕ್ಷೇತ್ರದಲ್ಲಿ ಮುಸ್ಲಿಂ, ಪರಿಶಿಷ್ಟ ಜಾತಿ, ಕುರುಬ ಮೂರು ಸಮುದಾಯದಿಂದ 75 ಸಾವಿರ ಮತಗಳನ್ನು ಹೊಂದಿರುವ ಕಾರಣ ಜಾತಿವಾರು ಲೆಕ್ಕಾಚಾರದಲ್ಲಿ ಕಾಂಗ್ರೆಸ್‍ಗೆ ಸುಲಭವಾಗಿರುವ ಕ್ಷೇತ್ರ ಇದಾಗಿದೆ.

Share This Article
Leave a comment