ಮಂಡ್ಯ ಎಸಿ ಭರವಸೆ: ನಿವೇಶನ ರಹಿತರ ಧರಣಿ ತಾತ್ಕಾಲಿಕ ಹಿಂದಕ್ಕೆ

Team Newsnap
1 Min Read

ಕಳೆದ 8 ದಿನಗಳಿಂದ ನಡೆಯುತ್ತಿದ್ದ ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವೇಶನ ರಹಿತರ ಧರಣಿಯನ್ನು ಉಪ ವಿಭಾಗಾಧಿಕಾರಿಗಳ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ.

ಸೋಮವಾರ ಬೆಳಿಗ್ಗೆ ಉಪ ವಿಭಾಗಾಧಿಕಾರಿ ಡಾ.ನೇಹಾ ಜೈನ್, ತಹಶೀಲ್ದಾರ್ ಚಂದ್ರಶೇಖರ ಶಂ ಗಾಳಿ, ಧರಣಿ ನಿರತರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗುರುತಿಸಿರುವ ಸರ್ಕಾರಿ ಭೂಮಿಗೆ ಸಂಬಂಧಿಸಿದಂತೆ 1-5 ಪ್ರಕ್ರಿಯೆ ಮುಗಿದಿದ್ದು, ಅಳತೆ ಹದ್ದುಬಸ್ತ್ ನಡೆಸಲು ಗ್ರಾಮ ಚುನಾವಣೆ ಎದುರಾಗಿದೆ.

ಮುಂದಿನ ಮೂರು ತಿಂಗಳಲ್ಲಿ ಭೂಮಿ‌ ಗುರುತಿಸಿ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ವಿವರಿಸಿದರು.

ಇಂದೇ ಗುರುತಿಸಿರುವ ಸರ್ಕಾರಿ ಭೂಮಿಯ ಪರಿಶೀಲನೆ ನಡೆಸಿ ವರದಿ ಮಾಡಲಾಗುವುದು ಎಂದು ಉಪ ವಿಭಾಗಾಧಿಕಾರಿ ವಿವರಿಸಿದರು.

ಬೂದನೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಬಿ.ಕೆ.ಸತೀಶ್ ಮಾತನಾಡಿ, ತಾಲ್ಲೂಕು ಆಡಳಿತವೇ ಗುರುತಿಸಿರುವ ಭೂಮಿ‌ ನೀಡಲು ಮೀನಾಮೇಷ ಎಣಿಸಬಾರದು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ಗುರುತಿಸಿರುವ ಭೂಮಿ ಲಭ್ಯವಿಲ್ಲದಿದ್ದಲ್ಲಿ ಬದಲಿ‌ ಭೂಮಿ ಮಂಜೂರು ಮಾಡಲು ಮನವಿ ಮಾಡಿದರು.
ಬಳಿಕ ಮಾತನಾಡಿದ ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ಮುಂಚೂಣಿ ನಾಯಕ ಎಂ.ಬಿ.ನಾಗಣ್ಣಗೌಡ, ಕಳೆದ 8 ದಿನಗಳಿಂದ ನಿವೇಶನರಹಿತರು ನಡೆಸಿದ ಧರಣಿ ಜಿಲ್ಲಾಡಳಿತದ ಕಣ್ಣು ತೆರೆಸಿದೆ.ಮುಂದಿನ 3 ತಿಂಗಳಲ್ಲಿ ನಿವೇಶನ ದೊರಕಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ. ಕೊಂಕು ಮಾತಿಗೆ ಕಿವಿಗೂಡದೇ ನಿವೇಶನ ಪಡೆಯಲು‌ ಎಲ್ಲ ಸಂಘಟಿತರಾಗಿರಬೇಕು ಎಂದು ಹೇಳಿದರು.

ಜಿಲ್ಲಾಡಳಿತ ನಿವೇಶನರಹಿತರಿಗೆ ನೀಡಿರುವ ಭರವಸೆ ಈಡೇರದಿದ್ದಲ್ಲಿ ಮುಂದೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅದಕ್ಕೆ ಅಸ್ಪದ ಕೊಡಬಾರದು ಎಂದು ಎಚ್ಚರಿಸಿದರು.

ಈ ವೇಳೆ ಮದ್ದೂರು ತಾಲ್ಲೂಕು ಕಚೇರಿ ಶಿರಸ್ತೇದಾರ್ ಕೆ.ಜಯರಾಂ ಮೂರ್ತಿ, ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ಬಿ.ಕೆ.ಸತೀಶ, ಸವಿತಾ, ರಂಜಿತಾ, ಚೇತನ್, ಕುಳ್ಳಪ್ಪ, ಕಾಮಾಕ್ಷಿ, ಮಾದೇವಿ ಮೊದಲಾದವರಿದ್ದರು.

Share This Article
Leave a comment