ದಾರಿ ದೀಪ – 5

Team Newsnap
3 Min Read

ಡಾ.ಶ್ರೀರಾಮ ಭಟ್ಟ

ಭಾಷಾಸಾಮರಸ್ಯ


ದ್ವಿಧಾ ಪ್ರಯುಕ್ತೇನ ಚ ವಾಙ್ಮಯೇನ ಸರಸ್ವತೀ ತನ್ಮಿಥುನಂ ನುನಾವ
ಸಂಸಸ್ಕಾರಪೂತೇನ ವರಂ ವರೇಣ್ಯಂ ವಧೂಂ ಸುಖಗ್ರಾಹ್ಯನಿಬಂಧನೇನ

ಇಬ್ಬಗೆಯ ಮಾತಿನ ಬಳಕೆಯಿಂದ ಸರಸ್ವತಿಯು (ಪಾರ್ವತೀಪರಮೇಶ್ವರರ) ಜೋಡಿಯನ್ನು ಹರಸಿದಳು.
ಸಂಸ್ಕರಿಸಿದ ಮಾತು ಶ್ರೇಷ್ಠನಾದ ವರನಿಗೆ; ಸುಲಭವಾಗಿ ಅರ್ಥವಾಗುವಂತಿದ್ದ ಆಡುಮಾತು ವಧುವಿಗೆ.
ಕಾಲಿದಾಸನ ‘ಕುಮಾರಸಂಭವ’ ಮಹಾಕಾವ್ಯವು ಗಿರಿಜಾಕಲ್ಯಾಣದ ಕತೆಯನ್ನು ಆಧರಿಸಿದೆ. ಗಿರಿಜೆಯ ಕಲ್ಯಾಣದ ಸಂದರ್ಭದ ಈ ಮೇಲಿನ ಪದ್ಯವು (೭:೯೦) ಭಾಷೆಗಳ ನಡುವಿನ ಸಂಬAಧವನ್ನು ಅಪೂರ್ವವಾಗಿ ಚಿಂತಿಸಿದೆ. ಶಿವ ಪಾರ್ವತಿಯರ ವಿವಾಹದ ಕೊನೆಯಲ್ಲಿ ನಡೆದ ‘ಅಕ್ಷತಾರೋಪಣ’ಕ್ಕೆ ಸರಸ್ವತಿ ಆಗಮಿಸುವಳು. ಬೇರೆ ದೇವತೆಗಳನ್ನು ಉಲ್ಲೇಖಿಸದೆ ಸರಸ್ವತಿಯ ಆಗಮನಕ್ಕಾಗಿ ಒಂದು ಶ್ಲೋಕ ಇಡಿಯಾಗಿ ಮೀಸಲಿಟ್ಟಿದ್ದು ಸೋದ್ದಿಷ್ಟವಾಗಿದೆ. ಪಾರ್ವತಿ ಮತ್ತು ಶಿವ ವಾಗರ್ಥ ಪ್ರತೀಕ. ವಾಗರ್ಥಾವಿವ ಸಂಪೃಕ್ತೌ ಪಾರ್ವತೀಪರಮೇಶ್ವರೌ ಎನ್ನುವುದು ಕಾಳಿದಾಸನದೇ ಮಾತು. ಈ ದೃಷ್ಟಿಯಿಂದ ಇಲ್ಲಿ ಸರಸ್ವತಿಯನ್ನು ಕರೆತರುವ ಮೂಲಕ ಕವಿ ಬೇರೆ ಏನನ್ನೋ ಸೂಚಿಸಲು, ಧ್ವನಿಸಲು ಪ್ರಯತ್ನಿಸಿದಂತಿದೆ.


ಅನಾದಿಯಿಂದಲೂ ಭಾರತ ಬಹು ಭಾಷೆಗಳ ನಾಡು. ಸಂಸ್ಕೃತ ಮತ್ತು ಪ್ರಾಕೃತ. ಪ್ರಾಕೃತವೂ ಒಂದು ಅಲ್ಲ. ಮಾಗಧಿ ಅರ್ಧಮಾಗಧಿ ಶೂರಸೇನಿ ಮಹಾರಾಷ್ಟಿ ಸೌರಾಷ್ಟಿ ಪಾಲಿ ಪೈಶಾಚಿ ದ್ರಾವಿಡ ಮುಂತಾಗಿ ಹಲವು ಪ್ರಾಂತೀಯ ಆಡು ಭಾಷೆಗಳಿಗೆಲ್ಲ ‘ಪ್ರಾಕೃತ’ ಸಾಮಾನ್ಯ ಹೆಸರು. ಸಂಸ್ಕೃತದಿಂದ ವರನನ್ನೂ ಪ್ರಾಕೃತದಿಂದ ವಧುವನ್ನೂ ಸರಸ್ವತಿಯು ಸ್ತುತಿಸಿದಳೆಂದು ಪ್ರಸಿದ್ಧ ವ್ಯಾಖ್ಯಾನಕಾರನಾದ ಮಲ್ಲಿನಾಥ ಸೂರಿ ಅರ್ಥೈಸಿದ್ದಾನೆ. ಮೂಲದಲ್ಲಿ ಒಂದು ‘ಸಂಸ್ಕಾರಪೂತ’ವಾದ ಮಾತು, ಇನ್ನೊಂದು ‘ಸುಖಗ್ರಾಹ್ಯ ನಿಬಂಧನ’ದ ಮಾತು. ಸಂಸ್ಕಾರಪೂತ ಎಂದರೆ ಪ್ರಕೃತಿ ಪ್ರತ್ಯಯಗಳ ವ್ಯವಸ್ಥೆಗೆ ಒಳಪಡಿಸಿ ಪರಿಷ್ಕರಿಸಿದ ಭಾಷೆ.

ಸುಖಗ್ರಾಹ್ಯನಿಬಂಧನ ಎಂದರೆ ಸುಲಭ(ಸುಖ)ವಾಗಿ ಗ್ರಹಿಸಬಲ್ಲ (ಅರ್ಥವಾಗುವ) ರಚನಾ ರೀತಿಯ (ನಿಬಂಧನ) ಭಾಷೆ. ಮೊದಲನೆಯದು ಸಂಸ್ಕೃತವನ್ನೂ ಎರಡನೆಯದು ಪ್ರಾಕೃತವನ್ನೂ ಸೂಚಿಸುತ್ತಿದೆ ಎನ್ನುವುದು ಮಲ್ಲಿನಾಥನ ಅಭಿಪ್ರಾಯ. ಬಳಕೆ ಎರಡು ಬಗೆಯಾದರೂ ವಾಙ್ಮಯ ಒಂದೇ ಎನ್ನುವ ಸೂಚನೆಯೂ ಇಲ್ಲಿದೆ. ದ್ವಿಧಾ ಪ್ರಯುಕ್ತೇನ ವಾಙ್ಮಯೇನ ಎನ್ನುವಲ್ಲಿ ಏಕವಚನ ಇರುವುದನ್ನು ಗಮನಿಸಬಹುದು. ಶಿವ ಪಾರ್ವತಿಯರೂ ತಾತ್ವಿಕವಾಗಿ ಭಿನ್ನರಲ್ಲ. ಮಾಹೇಶ್ವರ ಶೈವದಲ್ಲಿ ಸೃಷ್ಟಿಗಾಗಿ ಪರಶಿವನೇ ತನ್ನನ್ನು ಎರಡಾಗಿ ಒಡೆದುಕೊಂಡ ಎನ್ನುವ ಕಲ್ಪನೆ ಇದೆ.


ಸಂಸ್ಕೃತವು ದೇಶಭಾಷೆಗಳ ಜನನಿ ಎನ್ನುವ ಅಪಕಲ್ಪನೆ ವಿದ್ವಾಂಸರು ಎನಿಸಿಕೊಂಡವರಲ್ಲೂ ಇದೆ. ಇದನ್ನು ಆಧುನಿಕ ಭಾಷಾವಿಜ್ಞಾನವಷ್ಟೇ ಅಲ್ಲ, ನಮ್ಮ ಪ್ರಾಚೀನರೂ ಒಪ್ಪಿಲ್ಲ. ಅಲ್ಲಿರುವುದು ಕೊಡು ಕೊಳ್ಳುವಿಕೆಯ ದಾಂಪತ್ಯದ ಸಾಹಚರ್ಯ. ಜನ್ಯ-ಜನಕಭಾವ ಸಂಬAಧವಲ್ಲ. ವಾಗರ್ಥ ದೇವತೆಗಳ ದಾಂಪತ್ಯ ಮುಹೂರ್ತದಲ್ಲಿ ಸಂಸ್ಕೃತ ಪ್ರಾಕೃತ ಸಂಬಂಧ ಸರಸ್ವತಿಯನ್ನು ಕರೆತಂದುದರ ಉದ್ದೇಶ ಅದೇ ಆಗಿರಬೇಕು. ಸಂಸ್ಕೃತವು ಎಂದೂ ಜನಸಾಮಾನ್ಯರ ಆಡುಮಾತಾಗಿರಲಿಲ್ಲ. ಅರಮನೆ ಗುರುಮನೆಗಳ ಪ್ರಾಜ್ಞರು ಮನೆಮಾತಿನಂತೆ ಸುಗಮವಾಗಿ ಸೊಗಸಾಗಿ ಸಂಸ್ಕೃತವನ್ನು ಆಡುತ್ತಿದ್ದರು ಅಷ್ಟೆ. ಜನಸಾಮಾನ್ಯರ ಬಾಯಲ್ಲಿ ಎಂದಿಗೂ ಉಲಿಯುತ್ತಿದ್ದದು ಪ್ರಾಕೃತ ವೈವಿಧ್ಯವೇ. ಸಂಸ್ಕೃತ ನಾಟಕ ಪ್ರಪಂಚದಲ್ಲಿ ಇದರ ಸ್ಪಷ್ಟ ಕುರುಹು ಇದೆ. ಜ್ಞಾನ ಸಂರಕ್ಷಣೆಗೆ, ಮೀಮಾಂಸೆಗೆ ಪರಿಷ್ಕೃತವಾದ ಭಾಷೆ ಬೇಕು. ಅದರ ಸಂರಚನೆ ಮತ್ತೆ ಮತ್ತೆ ಬದಲಾಗಬಾರದು.

ಆಡು ಭಾಷೆ ನಿರಂತರ ಪರಿವರ್ತನಶೀಲ. ಆಡು ಭಾಷೆಯನ್ನು (ಪ್ರಾಕೃತವನ್ನು) ಪರಿಷ್ಕರಿಸಿದಾಗ (ಸಂಸ್ಕರಿಸಿದಾಗ) ಸಂಸ್ಕೃತ ಎನಿಸಿತು. ಅದು ಕಾಪಿಟ್ಟುಕೊಂಡ ಜ್ಞಾನ ಅನುಭವಗಳು ಮತ್ತೆ ಆಡುಭಾಷೆಯ (ಪ್ರಾಕೃತದ) ಮೂಲಕವೇ ಜನಸಾಮಾನ್ಯರಿಗೆ ತಲುಪುತ್ತಿತ್ತು. ಸಂಸ್ಕೃತ ಪ್ರಾಕೃತದ ಪದ ಸಂಪತ್ತನ್ನು ಬಳಸಿತು. ಪ್ರಾಕೃತವು ಸಂಸ್ಕೃತದ ಜ್ಞಾನಾನುಭವಗಳನ್ನು ಆಧರಿಸಿತು. ಈ ಕೊಡು ಕೊಳ್ಳುವಿಕೆಯ ಸಾಹಚರ್ಯವೆ ಭಾಷಾ ದಾಂಪತ್ಯ ಎನ್ನುವುದನ್ನು ಕವಿ ಧ್ವನಿಸಿದಂತಿದೆ.


ಕಾಲ ಬದಲಾಗಿದೆ. ಜನಸಾಮಾನ್ಯರ ಆಡು ಭಾಷೆಗಳೂ ಜ್ಞಾನಕ್ಷೇತ್ರದಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿವೆ; ಕೆಲವು ಅದಕ್ಕಾಗಿ ಸೆಣಸಾಟ ನಡೆಸಿವೆ. ಈ ಆಧುನಿಕ ಕಾಲದಲ್ಲಿ ಅದರೊಂದಿಗೇ ನಾನಾ ಕಾರಣಗಳಿಂದಾಗಿ ವಿವಾದ ಜಗಳ ದ್ವೇಷಗಳನ್ನೂ ಅಂಟಿಸಿಕೊAಡಿವೆ. ಅದಕ್ಕೆ ಕಾಳಿದಾಸನು ಸೂಚಿಸಿದ ಸಾಹಚರ್ಯ ಸಾಮರಸ್ಯಗಳೇ ಪರಿಹಾರ ಎನ್ನುವುದೂ ಈಗೀಗ ಗಮನಕ್ಕೆ ಬರತೊಡಗಿದೆ.

Share This Article
Leave a comment