ಸಾಹಚರ್ಯ ಸೂಕ್ತ
– ಡಾ.ಶ್ರೀರಾಮ ಭಟ್ಟ
ಸಂಗಚ್ಛಧ್ವಂ ಸಂವದಧ್ವಂ ಸಂವೋ ಮನಾಂಸಿ ಜಾನತಾಮ್
ದೇವಾ ಭಾಗಂ ಯಥಾ ಪೂರ್ವೇ ಸಂಜಾನಾನಾ ಉಪಾಸತೇ
ಒಟ್ಟಿಗೆ ಸೇರಿ; ಒಟ್ಟಾಗಿ ಮಾತನಾಡಿ; ನಿಮ್ಮ ಮನದ ಅರಿವು ಸಮರಸವಾಗಲಿ. ಹಿಂದೆ ಹೀಗೇ ದೇವತೆಗಳು ತಮ್ಮ ಭಾಗವನ್ನು ಅರಿವಿನಿಂದ ಪಡೆದಿದ್ದರು.
ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ಮನಃ ಸಹ ಚಿತ್ತಮೇಷಾಮ್
ಸಮಾನಂ ಮಂತ್ರಮಭಿಮಂತ್ರಯೇ ವಃ ಸಮಾನೇನ ವೋ ಹವಿಷಾ ಜುಹೋಮಿ
ಸಮಾನವಾದ ಕ್ರಿಯಾತ್ಮಕ ಆಲೋಚನೆಗಳು, ಸಮಾನವಾದ ಕಾರ್ಯತತ್ಪರ ಬಳಗಗಳು, ಸಮಾನ ಮನಸ್ಸು, ಜತೆಗೂಡಿದ ಅರಿವು ಈ ಎಲ್ಲರದು. ನಿಮಗಾಗಿ ನಾನು ಸಮಾನ ಅರಿವನ್ನು ಬಿತ್ತರಿಸುವೆನು. ನಿಮಗಾಗಿ ನಾನು ಸಮಾನ ಸಮರ್ಪಣೆಯನ್ನು ಮಾಡುವೆನು.
ಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ
ಸಮಾನ ಆಶಯಗಳು, ಒಂದಾದ ಹೃದಯ, ಸಾಮರಸ್ಯದ ಮನಸ್ಸು ನಿಮ್ಮದಾಗಿರಲಿ. ಇದರಿಂದಾಗಿ ನಿಮ್ಮ ಒಡನಾಟ ಆಪ್ತವಾಗುವುದು.
ಇವು ಋಗ್ವೇದದ ಸಂವನನ ಅಂಗಿರಸ ಸೂಕ್ತದ (೧೦:೧೯೧:೨,೩,೪) ಮಂತ್ರಗಳು. ವಿಶ್ವ ಸಾಹಿತ್ಯದಲ್ಲೆ ಅತ್ಯಂತ ಪ್ರಾಚೀನವಾದದ್ದೆಂದು ಹೇಳಲಾದ ಋಗ್ವೇದದ ಕಟ್ಟಕಡೆಯ ಪ್ರಾತಿನಿಧಿಕ ಸೂಕ್ತ ಇದು. ಸಾಮರಸ್ಯ ಸಾಹಚರ್ಯ ಸಹವಾಸ ಈ ಪ್ರಾಚೀನ ಸೂಕ್ತದ ಆಶಯ ಎನ್ನುವುದು ಸ್ಪಷ್ಟವಾಗೇ ಇದೆ. ಸಂವನನ ಪದವು ಲೌಕಿಕ ಸಂಸ್ಕೃತದಲ್ಲಿ ಅಷ್ಟಾಗಿ ಬಳಕೆಯಲ್ಲಿಲ್ಲ. ಕ್ವಚಿತ್ತಾಗಿ ಇದ್ದರೂ ವಶೀಕರಣ ಎನ್ನುವ ಅರ್ಥದಲ್ಲಿದೆ. ಆದರೆ ವೇದದಲ್ಲಿ ಸಂವನನಕ್ಕೆ ಸಾಹಚರ್ಯ, ಒಡನಾಟ ಎನ್ನುವ ಅರ್ಥ ತೋರುತ್ತದೆ. ‘ನದಿಗಳಿಂದ ಸಂವನನಕ್ಕೆ ನಿದರ್ಶನವನ್ನು ಎತ್ತಿ ತೋರಿಸಲಾಗಿದೆ. ಆ ದೇವ ಗಂಧರ್ವ ವಿತ್ತಗಳಿಂದ ಸಂವನಿನರಾಗೋಣ’ ಎಂಬ ಅರ್ಥದ ಮಂತ್ರವೊಂದಿದೆ (ಯಥಾ ಸಂವನನಂ ಯನ್ನದೀಭ್ಯ ಉದಾಹೃತಮ್/ಯದ್ವಿತ್ತೌ ದೇವಗಂಧರ್ವೌ ತೇನ ಸಂವನಿನೌ ಸ್ವಃ). ನದಿಯ ದಡಗಳಿಗೆ ಮರ ಮಟ್ಟುಗಳಿಂದ ರಕ್ಷಣೆ, ಮರ ಮಟ್ಟುಗಳಿಗೆ ನದಿಯ ಪೋಷಣೆ– ಈ ಸಾಹಚರ್ಯ (ಸಂವನನ)ದಿಂದ ಒಂದು ಒಟ್ಟಂದದ ಸಮೃದ್ಧಿ ಎನ್ನುವುದು ಈ ಮಾತಿನ ಆಶಯವಿರಬೇಕು. ಇದನ್ನು ‘ಸಂವನನ ಸೂಕ್ತ’ ಎಂದು ಹೆಸರಿಸುವಲ್ಲಿಯೂ ಇದರ ಸಾಹಚರ್ಯ ಸಂದೇಶವೇ ಕಾರಣವಾಗಿರಬೇಕು.
ಆಪ್ತ ಒಡನಾಟದ ಮೂಲಕ ಒಟ್ಟಂದದ ಸಮೃದ್ಧಿಯನ್ನು ಸಂವನನ ಸೂಕ್ತವು ವಾಚ್ಯವಾಗೇ ಹೇಳುತ್ತಿದೆ. ಭಾವನೆಗಿಂತ ಹೆಚ್ಚಾಗಿ ಬೌದ್ಧಿಕ ಪರಿಸರದ ಪರಿಭಾಷೆ ಈ ಮಾತುಗಳಲ್ಲಿದೆ. ವೇದದ ಕಾಲಾನಂತರದಲ್ಲಿ ವೇದದ ನಿಲವನ್ನು ಆಧರಿಸಿದ ಮತ್ತು ಆಧರಿಸದ ಅದೆಷ್ಟೋ ದರ್ಶನಗಳೂ ಮತಗಳೂ ಕಾಣಿಸಿಕೊಂಡಿವೆ. ವೇದದೊಳಗೇ ವಿಭಿನ್ನ ನಿಲುವುಗಳು ಇವೆ. ಅದು ಸಹಜ. ಅದನ್ನು ಪರಿಭಾವಿಸಿಯೇ ಸಾಮರಸ್ಯದ ಮುನ್ನೋಟದ ಕಾಣ್ಕೆಯಾಗಿ ಆಡಿದ ಪೀಠಿಕೆಯಂತಿವೆ ಈ ಮಾತುಗಳು.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ