ಡಾ.ಶ್ರೀರಾಮ ಭಟ್ಟ
ಈ ಜಗ ದೇವದೇಹ
ಜೀವ ಮತ್ತು ಜಗ ಈಶನ ಎಂಟು ತನು; ಆದ್ದರಿಂದಲೇ ಈ ದೇವದೇಹ ನಮ್ಮ ಕಣ್ಣ ಮುಂದಿದೆ ಎನ್ನುವ ಮಾತು ಕಾಳಿದಾಸನ ಅಭಿಜ್ಞಾನ ಶಾಕುಂತಲದ ನಾಂದೀಪದ್ಯದಲ್ಲಿ ಇದೆ:
ಯಾ ಸೃಷ್ಟಿಃ ಸ್ರಷ್ಟುರಾದ್ಯಾ ವಹತಿ ವಿಧಿಹುತಂ ಯಾ ಹವಿರ್ಯಾ ಚ ಹೋತ್ರೀ
ಯೇ ದ್ವೇ ಕಾಲಂ ವಿಧತ್ತಃ ಶ್ರುತಿವಿಷಯಗುಣಾ ಯಾ ಸ್ಥಿತಾ ವ್ಯಾಪ್ಯ ವಿಶ್ವಮ್
ಯಾಮಾಹುಃ ಸರ್ವಬೀಜಪ್ರಕೃತಿರಿತಿ ಯಯಾ ಪ್ರಾಣಿನಃ ಪ್ರಾಣವಂತಃ
ಪ್ರತ್ಯಕ್ಷಾಭಿಃ ಪ್ರಪನ್ನಸ್ತನುಭಿರವತು ವಸ್ತಾಭಿರಷ್ಟಾಭಿರೀಶಃ
ನಮ್ಮ ಕಣ್ಣೆದುರಿಗೆ ಒದಗಿ ಬಂದ ಎಂಟು ದೇಹಗಳ ಮೂಲಕ ಜಗದೀಶನು ನಿಮ್ಮೆಲ್ಲರನ್ನು ಕಾಪಿಡಲಿ. ಆ ಶರೀರಗಳು ಇವು: ಸೃಷ್ಟಿಕರ್ತನ ಮೊದಲ ಸೃಷ್ಟಿಯಾದ ನೀರು, ಯಜ್ಞದಲ್ಲಿ ವಿಧಿವತ್ತಾಗಿ ಹೋಮಿಸಿದ ಹವಿಸ್ಸನ್ನು ಹೊತ್ತೊಯ್ಯುವ ಅಗ್ನಿ, ಹೋಮಿಸುವ(ಕ್ರಿಯಾಶೀಲವಾದ) ಯಜಮಾನ(ಜೀವ), ಕಾಲವನ್ನು ಮುನ್ನಡೆಸುವ ಆ ಇಬ್ಬರು ಸೂರ್ಯ ಮತ್ತು ಚಂದ್ರ, ಕಿವಿಗೆ ವಿಷಯವಾದ ನಾದವೆ ಗುಣ ಆಗಿದ್ದು, ಸಕಲ ವಿಶ್ವವನ್ನೂ ಆವರಿಸಿದ ಆಕಾಶ, ಸಕಲ ಬೀಜಗಳಿಗೂ ಪ್ರಕೃತಿಯೆನಿಸಿದ ಪೃಥ್ವಿ, ಪ್ರಾಣಿಗಳಿಗೆಲ್ಲ ಪ್ರಾಣದಾಯಕವಾದ ವಾಯು.
ಪಂಚಭೂತಗಳು, ಸೂರ್ಯ, ಚಂದ್ರ ಮತ್ತು ಜೀವಾತ್ಮ ಈ ಎಂಟು ಶಿವನ ಶರೀರಗಳಾದ್ದರಿಂದ ಆತ ಇಂದ್ರಿಯಗೋಚರ (ಪ್ರತ್ಯಕ್ಷಾಭಿಃ ಪ್ರಪನ್ನಃ) ಎನ್ನುವುದು ವಿಚಾರಪೂರ್ಣ ಸಂಗತಿ.
ಈ ದೃಷ್ಟಿಯಿಂದ ನಮ್ಮಲ್ಲಿ ಪ್ರಕೃತಿ ಪ್ರಾಣಿಗಳನ್ನು ಉನ್ನತ ಭಾವದಿಂದ ಪೂಜಿಸುವುದರ ಹಿನ್ನೆಲೆಯನ್ನು ಗಮನಿಸಬೇಕು. ಅದೇ ಕಾಲಕ್ಕೆ ಯಾವುದನ್ನೇ ಆಗಲಿ ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯ ಮುಂತಾದ ತಾರತಮ್ಯದಿಂದ ನೋಡುವುದು ಅಪರಾಧ ಎನ್ನುವುದೂ ಪ್ರತಿಫಲಿತವಾಗಿದೆ. ಭಗವದ್ದೇಹ ಅಸ್ಪೃಶ್ಯವಾಗುವುದುಂಟೆ! ಜಗತ್ತು-ಜೀವ-ಈಶ್ವರರ ಸ್ವರೂಪ ಮತ್ತು ಸಂಬAಧಗಳ ಚರ್ಚೆಯೇ ದರ್ಶನಗಳ ವಸ್ತು. ಕಾಳಿದಾಸನು ಈ ಎಂಟು ಶರೀರಗಳನ್ನು ವ್ಯಾಖ್ಯಾನಿಸಿದ ಬಗೆಯಿಂದಲೇ ಅವುಗಳ ಸಾರ್ಥಕ ಸ್ವರೂಪವೂ ಧ್ವನಿತವಾಗಿದೆ.
ಈ ಸ್ಥಾವರ ಜಂಗಮ ರೂಪಿ ಜಗ ಶಿವನ ದೇಹ ಎಂದು ಆದಿಶಂಕರಾಚಾರ್ಯರ ದಕ್ಷಿಣಾಮೂರ್ತಿಸ್ತೋತ್ರವೂ ಸ್ಪಷ್ಟವಾಗಿ ಹೇಳಿದೆ:
ಭೂರಂಭಾಂಸ್ಯನಲೋ$ನಿಲೋಂಬರಮಹರ್ನಾಥೋ ಹಿಮಾಂಶುಃ ಪುಮಾನ್
ಇತ್ಯಾಭಾತಿ ಚರಾಚರಾತ್ಮಕಮಿದಂ ಯಸ್ಯೈವಮೂರ್ತ್ಯಷ್ಟಕಮ್
ನೆಲ ನೀರು ಬೆಂಕಿ ಗಾಳಿ ಆಗಸ ಹಗಲ ಒಡೆಯನಾದ ಸೂರ್ಯ ತಂಗಿರಣನಾದ ಚಂದಿರ ಮತ್ತು ಜೀವಾತ್ಮವಾಗಿ ಈ ಸ್ಥಾವರ ಜಂಗಮಾತ್ಮಕ ಜಗತ್ತು ತೋರುತ್ತಿದೆ. ಇವೇ ಶಿವನ ಎಂಟು ಶರೀರಗಳು.
ಪುಷ್ಪದಂತನ ಶಿವಮಹಿಮ್ನಸ್ತೋತ್ರವು ಈ ಪ್ರಕೃತಿ ತತ್ವವನ್ನು ಎಂಟು ಹೆಸರುಗಳಿಂದ ಕರೆದಿದೆ. ಪ್ರಕೃತಿ ತತ್ವಗಳ ರೂಪಕಗಳಾಗಿ ಅವು ವೇದಗಳಲ್ಲಿ ಕಾಣಿಸಿಕೊಂಡಿವೆ ಎನ್ನುವುದನ್ನೂ ಸೂಚಿಸಿದೆ:
ಭವಃ ಶರ್ವೋ ರುದ್ರಃ ಪಶುಪತಿರಥೋಗ್ರಃ ಸಹಮಹಾನ್
ತಥಾ ಭೀಮೇಶಾನಾವಿತಿ ಯದಭಿಧಾನಾಷ್ಟಕಮಿದಂ
ಅಮುಷ್ಮಿನ್ ಪ್ರತ್ಯೇಕಂ ಪ್ರವಿಚರತಿ ದೇವ ಶ್ರುತಿರಪಿ
ಪ್ರಿಯಾಯಾಸ್ಮೈ ಧಾಮ್ನೇ ಪ್ರವಿಹಿತನಮಸ್ಯೋ$ಸ್ಮಿ ಭವತೇ
ಭವ(ಜಲ), ಶರ್ವ(ಭೂಮಿ), ರುದ್ರ(ಅಗ್ನಿ) ಪಶುಪತಿ(ಯಜಮಾನ) ಉಗ್ರ(ವಾಯು), ಮಹಾದೇವ (ಚಂದ್ರ), ಭೀಮ(ಆಕಾಶ), ಈಶಾನ(ಸೂರ್ಯ) ಈ ಎಂಟು ನಿನ್ನ ಹೆಸರುಗಳು. ಓ ದೇವನೇ, ವೇದವು ಕೂಡ ಇಲ್ಲಿ ಪ್ರತ್ಯೇಕವಾಗಿಯೇ ವಿವರಣೆಯನ್ನಿತ್ತಿದೆ. ಈ ಎಂಟು ಸ್ಥಾನಗಳೂ ಆಪ್ತವಾದ ನಿನಗೆ ನಮಸ್ಕಾರ ಗೈಯುವೆನು.
ಶ್ವೇತಾಶ್ವತರ ಉಪನಿಷತ್ತಿನಲ್ಲಿ ಇದು ‘ಅಷ್ಟಕೈಃ ಷಡ್ಭಿಃ’ ಎಂದು ಸೂಚಿತವಾಗಿದೆ. ಇದನ್ನನುಸರಿಸಿ ಕೆಲವು ವಚನಗಳಲ್ಲಿ ಬ್ರಹ್ಮಾಂಡವು ಪರಶಿವನ ಅಷ್ಟತನು ಎಂದು ಹೇಳಲಾಗಿದೆ. ಭಗವದ್ಗೀತೆಯೂ ಈ ಎಂಟು ಸಂಗತಿಗಳನ್ನು ಪರಮಾತ್ಮನ ಪ್ರಕೃತಿ ಎಂದು ಹೇಳಿದೆ:
ಭೂಮಿರಾಪೋ$ನಲೋ ವಾಯುಃ ಖಂ ಮನೋ ಬುದ್ಧಿರೇವ ಚ
ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ
ಭೂಮಿ ನೀರು ಬೆಂಕಿ ಗಾಳಿ ಆಕಾಶ ಮನಸ್ಸು(ಚಂದ್ರ) ಬುದ್ಧಿ(ಸೂರ್ಯ) ಅವ್ಯಕ್ತವಾದ ಅಹಂತಾ(ಜೀವಾತ್ಮ) ಇವು ನನ್ನ (ಭಗವಂತನ) ಎಂಟು ಬಗೆಯ ಪ್ರಕೃತಿ.
ಪಂಪಭಾರತದಲ್ಲಿ ಅರ್ಜುನನನ್ನು ದಿಗ್ವಿಜಯದ ದಾರಿಯಲ್ಲಿ ಗೋಕರ್ಣಕ್ಕೆ ಕರೆತಂದ ಪಂಪ ಮನದುಂಬಿ ಗೋಕರ್ಣನಾಥನನ್ನು ನಿರೂಪಿಸುತ್ತಾನೆ: “ಗೋಕರ್ಣನಾಥನಂ, ಗೌರೀನಾಥನಂ ಅವನಿ ಪವನ ಗಗನ ದಹನ ತರಣಿ ಸಲಿಲ ತುಹಿನಕರ ಯಜಮಾನ ಮೂರ್ತಿಯಂ, ತ್ರೈಲೋಕ್ಯ ಸಂಗೀತ ಕೀರ್ತಿಯಂ ಕಂಡು ಕೈಯ್ಗಳಂ ಮುಗಿದು”- (೪:೨೬ವ). ಪ್ರಾಚೀನ ಕವಿಗಳಿಂದ ನಾವು ಎಷ್ಟೊಂದು ಕಲಿಯಬೇಕಾದ್ದಿದೆ!
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ