ಮಂಡ್ಯದಲ್ಲಿ ಮತ್ತೊಂದು ಗ್ರಾ.ಪಂ.ಸದಸ್ಯ ಸ್ಥಾನ‌ ಹರಾಜು ಡಿಸಿ ಆದೇಶಕ್ಕೂ ಕ್ಯಾರೆ, ಕಿಮ್ಮತ್ತು ಇಲ್ಲ

Team Newsnap
1 Min Read

ರಾಜ್ಯ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ವಹಿಸಿದ್ದರೂ ಕೂಡ ಗ್ರಾಮಸ್ಥರು, ಅಭಿವೃದ್ಧಿ ಎಂಬ ನೆಪ ಮುಂದಿಟ್ಟುಕೊಂಡು ಕಾನೂನಿನ ಕಣ್ಣು ತಪ್ಪಿಸಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಮತ್ತೊಂದು ಗ್ರಾಮ ಪಂಚಾಯತಿ ಸದಸ್ಯರ ಹರಾಜು ಪ್ರಕ್ರಿಯೆ ನಡೆದಿದೆ.

ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗ ಮತ್ತಷ್ಟು ಕಠಿಣ ಕ್ರಮಗಳನ್ನು‌ ಕೈಗೊಂಡು ಇಂತಹ ಹಣದ ದಂಧೆಯ ಅವಿರೋಧ ಆಯ್ಕೆಗೆ ಕಡಿವಾಣ ಹಾಕಿದರೂ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಗ್ರಾ.ಪಂ.ಸದಸ್ಯ ಸ್ಥಾನ‌ ಹರಾಜು ನಡೆಸುವ ಮೂಲಕ
ಜಿಲ್ಲಾಧಿಕಾರಿ ಗಳ ಆದೇಶಕ್ಕೆ ಕ್ಯಾರೆ‌ ಕಿಮ್ಮತ್ತು ನೀಡುತ್ತಿಲ್ಲ.

ಮಂಡ್ಯದಲ್ಲಿ ಇತ್ತೀಚೆಗೆ ಗ್ರಾ.ಪಂ. ಸದಸ್ಯ ಸ್ಥಾನಕ್ಕೆ ಬಹಿರಂಗ ಹರಾಜು ನಡೆದಿತ್ತು. ನಾಗ ಮಂಗಲ ತಾಲೂಕಿನ ಲಾಳನಕೆರೆ ಪಂಚಾಯ್ತಿ ವ್ಯಾಪ್ತಿ ಯಲ್ಲಿ ನಡೆದಿದ್ದ ಗ್ರಾ.ಪಂ. ಸದಸ್ಯ ಸ್ಥಾನ ಹರಾಜು ಪ್ರಕ ರಣ ರಾಜ್ಯ ಮಟ್ಟದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಚರ್ಚೆಗೂ ಕೂಡ ಗ್ರಾಸವಾಗಿತ್ತು.

ಈ ಸಂಬಂಧ ಜಿಲ್ಲಾಡಳಿತ ಮತ್ತು ಚುನಾವಣೆ ಇಲಾಖೆ ಎಚ್ಚೆತ್ತು‌ ಹರಾಜು ನಡೆಸಿದ 50ಕ್ಕೂ ಹೆಚ್ಚು ಗ್ರಾಮಸ್ಥರ ಮೇಲೆ ಪ್ರಕರಣ ದಾಖಲಿಸಿತ್ತು. ಅಲ್ಲದೇ ಈ ರೀತಿ ಗ್ರಾ.ಪಂ.ಸದಸ್ಯ ಸ್ಥಾನ ಹರಾಜು ಹಾಕಿದರೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.

ಈ ಪ್ರಕರಣ ಇನ್ನೂ ಹಸಿ ಇರುವಾಗಲೇ ನಾಗಮಂಗಲ ತಾಲೂಕಿನಲ್ಲಿ ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಬೈರನಹಳ್ಳಿ ಗ್ರಾಮದಲ್ಲಿ ಹರಾಜು:

ನಾಗಮಂಗಲ ತಾಲೂಕಿನ ಅಂಚೆಚಿಟ್ಟನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಪ್ರವರ್ಗ-2ಎ ಸದಸ್ಯ ಸ್ಥಾನ 5 ಲಕ್ಷಕ್ಕೆ ಹರಾಜು ಪ್ರಕ್ರಿಯೆಯಲ್ಲಿ ಮಾರಾಟಗೊಂಡಿರುವುದು ಅಚ್ಚರಿ ಮೂಡಿಸಿದೆ. ಈಗಾಗಲೇ ತಾಲೂಕಿನ ಕಂಚನಹಳ್ಳಿ, ಪಾಲಾ ಅಗ್ರಹಾರ, ಚಿಕ್ಕೋನಹಳ್ಳಿ, ಪುರ, ಚಟ್ಟೇನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಈ ಹರಾಜು ಪ್ರಕ್ರಿಯೆ ಮುಗಿದಿದೆ. ಅದರಲ್ಲಿ ಬೈರನಹಳ್ಳಿ ಗ್ರಾಮದಲ್ಲಿ ರಾತ್ರಿ ವೇಳೆ ನಡೆದ ಪಂಚಾಯ್ತಿ ಸ್ಥಾನ ವಿಡಿಯೋ ವೈರಲ್ ಆಗಿದೆ.

ಈ ಹರಾಜು ಪ್ರಕ್ರಿಯೆಯ ಬಗ್ಗೆ ಜಿಲ್ಲಾ ಆಡಳಿತ ಯಾವ ಕ್ರಮ ಕೈಗೊಳ್ಳುತ್ತಿದೆ ಎನ್ನುವುದನ್ನು ಕಾದು ನೋಡಬೇಕು.‌

Share This Article
Leave a comment