November 23, 2024

Newsnap Kannada

The World at your finger tips!

deepa1

ದಾರಿ ದೀಪ

Spread the love

ಸಹನೆ ಬಂಗಾರ

ಡಾ. ಶ್ರೀರಾಮ ಭಟ್ಟ

ಕಸವರಮೆಂಬುದು ನೆಱೆ ಸೈ
ರಿಸಲಾರ್ಪೊಡೆ ಪರವಿಚಾರಮಂ ಧರ್ಮಮುಮಂ
ಕಸವೇಂ ಕಸವರಮೇನು
ಬ್ಬಸಮಂ ಬಸಮಲ್ಲದಿರ್ದು ಮಾಡುವರೆಲ್ಲಂ
“ಇತರರ ವಿಚಾರವನ್ನೂ ಧರ್ಮವನ್ನೂ ಚೆನ್ನಾದ ಸಮಗ್ರವಾದ ಸಹನೆಯಿಂದ ಪರಿಶೀಲಿಸಲು ಸಾಧ್ಯವಾದರೆ ಅದು ಬಂಗಾರ(ಕಸವರ). ತಾನು ತನ್ನ ವಶದಲ್ಲಿಲ್ಲದೆ ಎಲ್ಲ ಸಂಕಟಗಳನ್ನೂ (ಉಬ್ಬಸಮಂ) ಉಂಟುಮಾಡುವರಲ್ಲ. ಆಗ ಕಸವೇನು! ಕಸವರವೇನು! ಎರಡೂ ಒಂದೇ.”
ಕವಿರಾಜಮಾರ್ಗದ(೩-೧೭೬) ಈ ಪದ್ಯ ತುಂಬ ಪ್ರಸಿದ್ಧ. ಕನ್ನಡದ ಮೊದಲ ಕೃತಿಯಲ್ಲಿ ಕಾಣಿಸುವ ಈ ಪದ್ಯವು ಕನ್ನಡ ಮನದ ಕನ್ನಡಿಯಂತಿದೆ. ಅತಿ ಪ್ರಾಚೀನ ಕಾಲದಿಂದಲೂ ಸಹನೆ ಅಥವಾ ಸಹಿಷ್ಣುತೆ ದೊಡ್ಡ ಮೌಲ್ಯ. ಆದ್ದರಿಂದಲೆ ಅದು ಬಂಗಾರ. ಅಸಹನೆಯಿಂದ ಏಕಪಕ್ಷೀಯವಾಗಿ ಯೋಚಿಸುವುದು ವರ್ತಿಸುವುದು ಮೌಲ್ಯ ಎನಿಸದ ಕಸ. ವಿವೇಕ ಸೊನ್ನೆಯಾದಾಗ ಕಸವೇ ಕಸವರವಾಗಿ ತೋರುವ ದುರಂತ! ಇದಕ್ಕೆ ಕಾರಣ ‘ಬಸಮಲ್ಲದಿರ್ದು ಎಲ್ಲಂ ಉಬ್ಬಸಮಂ ಮಾಡುವರ್.’ ಬಸಂ ಎಂದರೆ ವಶ. ನಮ್ಮ ಮನಸ್ಸನ್ನು ಬುದ್ಧಿಯನ್ನು ನಮ್ಮ ವಶದಲ್ಲಿಟ್ಟುಕೊಳ್ಳದೆ ಇತರರ ಆಗ್ರಹಕ್ಕೆ ಒಳಗಾಗುವುದು ಬಸಮಲ್ಲದಿರುವಿಕೆ. ಕಾಳಿದಾಸ ಹೇಳುವಂತೆ ಅದು ಪರಪ್ರತ್ಯಯನೇಯಬುದ್ಧಿ (ಬೇರೆಯವರ ನಂಬುಗೆಯಿಂದ ಪ್ರಚೋದಿತವಾದ ಬುದ್ಧಿ). ಆಗ ಸಾಮಾಜಿಕ ಉದ್ವೇಗ ಅನಿವಾರ್ಯ. ಉಬ್ಬಸ ಪದ ಪ್ರಯೋಗ ಇಲ್ಲಿ ತುಂಬ ಔಚಿತ್ಯಪೂರ್ಣ. ಉಬ್ಬಸವು ಉದ್ವೇಗವನ್ನು ನಾಟಕೀಯವಾಗಿ ಅನುಕರಿಸುತ್ತದೆ. ಸಂಕಟ, ಅಸಮಾಧಾನ, ಅಸೂಯೆ, ಭಯದ ಭಾವ ಉಬ್ಬಸ ಪದದ ಅರ್ಥ. ಆದರೆ ಉಸಿರಾಟಕ್ಕೆ ಸಂಬAಧಿಸಿದ ಕಾಯಿಲೆಗೆ ಉಬ್ಬಸ ಎನ್ನುವುದು ರೂಢಿ. ಆಯಾಸವಾದಾಗಲೂ ಉಸಿರಾಟದ ವೇಗ ತೀವ್ರವಾಗುವುದು ಉಬ್ಬಸ. ಕುಮಾರವ್ಯಾಸನಲ್ಲಿ ನೋಡಿ : ‘ನಿನ್ನುಸಿರಿಗುಬ್ಬಸ ಮಾಡೆನಂಘ್ರಿಗಳಾಣೆ ಧರ್ಮಜನ’ (ಅರಣ್ಯ ಪರ್ವ ೨೦-೩೬). ಅಸಹನೆ ಸಮಾಜದ ಮನಸ್ಸಿಗೆ ತಗುಲುವ ಉಬ್ಬಸ! ಅದು ಸ್ವಸ್ಥವಾಗಿ ಉಸಿರಾಡಲು ಬಿಡದು.
ವಿಚಾರ ಮತ್ತು ಧರ್ಮ ವ್ಯಕ್ತಿತ್ವವನ್ನು ಕಡೆದು ನಿಲ್ಲಿಸುವ ಸಂಗತಿಗಳು. ಇಂದು ಧರ್ಮವೆಂದರೆ ಮತಧರ್ಮ ಎನ್ನುವುದು ರೂಢಿ. ಅಂದು ಸ್ವಭಾವ, ಕರ್ತವ್ಯ, ದರ್ಶನಗಳೂ ಧರ್ಮ ಎನಿಸಿದ್ದವು. ಜೈನ ಬೌದ್ಧ ವೈಷ್ಣವ ಶೈವ ಶಾಕ್ತ ಗಾಣಪತ್ಯ ಕೌಲ ಲಕುಲೀಶ ಮುಂತಾದವುಗಳಲ್ಲೂ ಷಡ್ದರ್ಶನಗಳಲ್ಲೂ ವಿಚಾರ ಆಚಾರಗಳು ಹಾಸು ಹೊಕ್ಕಾಗಿದ್ದು ಧರ್ಮದ ವ್ಯಾಪ್ತಿಯೊಳಗಿದ್ದವು. ಇದಕ್ಕಾಗಿ ಈ ಪದ್ಯ ಸಮಗ್ರವಾದ ಸಹನೆಯನ್ನು (ನೆಱೆ ಸೈರಿಸಲು) ಒತ್ತಿಹೇಳಿರಬೇಕು. ಉದಾತ್ತಾಲಂಕಾರದ ನಿರೂಪಣೆಯ ಸಂದರ್ಭದಲ್ಲಿ ಮಾರ್ಗಕಾರ ನೀಡಿದ ನಿದರ್ಶನ (ಲಕ್ಷ್ಯ) ಪದ್ಯ ಇದು.ಅಸಹಿಷ್ಣುತೆಯ ಗದ್ದಲದಲ್ಲಿ ಬಿದ್ದ ಉಭಯ ಬಣಗಳೂ ಲಕ್ಷ್ಯದಲ್ಲಿಡಬೇಕಾದದ್ದು.

Copyright © All rights reserved Newsnap | Newsever by AF themes.
error: Content is protected !!