(ಬ್ಯಾಂಕರ್ಸ್ ಡೈರಿ)
ಅಂದು ಯಾವುದೋ ಕೆಲಸದ ನಿಮಿತ್ತ ಮಂಗಳ ನಮ್ಮ ಶಾಖೆಗೆ ಬಂದರು. ಬಹುಶಃ ಎಫ್.ಡಿ ರಿನಿವಲ್ ಎಂದು ಕಾಣುತ್ತದೆ. ಎಫ್ ಡಿ ಸೆಕ್ಷನ್ ಕಡೆಯಿಂದಲೇ ನನ್ನ ಕೌಂಟರ್ಗೆ ಬಂದರು .
ಆಗಾಗ ಮಾತನಾಡಿಸುತ್ತಲೇ ಇದ್ದರೆ ಒಂದು ರೀತಿಯ ಬಾಂಧವ್ಯ ಬೆಳೆದುಕೊಂಡು ಬಿಟ್ಟಿರುತ್ತದೆ ನಮಗೂ ಗ್ರಾಹಕರಿಗೂ.
ಮೊನ್ನೆಯೂ ಅಷ್ಟೇ. ವರಮಹಾಲಕ್ಷ್ಮಿಯ ಪೂಜೆಗೆಂದು ಮೂರ್ನಾಲ್ಕು ಗ್ರಾಹಕರು ಮನೆಗೆ ಕರೆದಿದ್ದರು. ನಾವೂ ಹೋಗಿ ಕುಂಕುಮ ತೆಗೆದುಕೊಂಡು ಬಂದಿದ್ದೆವು.
ಸರಿ ಮಂಗಳ ಬಂದವರು ’ಹೇಗಿದ್ದೀರಿ ಮೇಡಂ” ಎಂದು ಕೇಳಿದರು. ಆಕೆ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪೇದೆ. ’ನಾನು ಫೈನ್ ನೀವು ಹೇಗಿದ್ದೀರಿ? ಯಾಕೆ ಮುಖ ಸಪ್ಪಗಾಗಿದೆ?’ ಎಂದು ಕೇಳಿದೆ. ಹೀಗೇ ಹೆಣ್ಣು ಮಕ್ಕಳ ಸಮಾಚಾರ ಎಂದರು. ನಾನು ಅಪಾರ್ಥ ಮಾಡಿಕೊಂಡೆ. ಮನೆಯಲ್ಲಿ ಬಹುಶಹ ಗಲಾಟೆ ಇರಬಹುದು ಎಂದು . ಅನೇಕ ಮನೆಗಳಲ್ಲಿ ಇದು ಸರ್ವೇಸಾಮಾನ್ಯ ತಾನೇ? ’ಏನ್ ಮಾಡಕ್ಕಾಗುತ್ತೆ ಮಂಗಳ ಅವರೇ, ಸಂಸಾರ ಎಂಬ ಮೇಲೆ ಇವೆಲ್ಲ ಇದ್ದಿದ್ದೇ. ಕಷ್ಟ ಸುಖ ಬರುತ್ತದೆ ಹೋಗುತ್ತದೆ ಯಾಕೆ ಬೇಸರ ಮಾಡುತ್ತೀರಿ’ ಎಂದೆ
”ಮೇಡಂ, ಇದ್ದೇ ಇರುತ್ತದೆ ನಿಜಾ. ಆದರೆ ಹೆಣ್ಣು ಮಕ್ಕಳ ತೊಂದರೆ ಎಂದರೆ ಸಂಸಾರ ತಾಪತ್ರಯ ಮಾತ್ರವೇ ಎಂದಲ್ಲವಲ್ಲಾ. ಅದು ತಿಂಗಳ ತಾಪತ್ರಯ’ ಎಂದರು.
ಆಕೆ ಪ್ಯಾಂಟು ಶರ್ಟು ಬೆಲ್ಟು ಹಾಕಿದ್ದರು. ಹೌದಲ್ಲ ಎಂದು ಒಂದು ಕ್ಷಣ ಆರಿದ ಬಲ್ಬ್ ಹೊತ್ತಿಕೊಂಡ ಹಾಗೆ ಆಯಿತು. ಈ ಸಮಯದಲ್ಲಿ ಹೆಣ್ಣು ಮಕ್ಕಳು ಪ್ಯಾಂಟ್ ಶರ್ಟ್ ಹಾಕಿದ್ದರೆ ಆಗುವ ಅನಾನುಕೂಲಗಳು ಏನಿರಬಹುದು ಎಂದು ಅಂದಾಜು ಮಾಡಿದಾಗ ನನಗೆ ನಿಜಕ್ಕೂ ಗಾಬರಿಯಾಯಿತು. ಸಾಮಾನ್ಯವಾಗಿ ಚೂಡಿದಾರ್ ಆದರೆ ಹೆಚ್ಚಿನ ರಕ್ತಸ್ರಾವವಾದಾಗ ಕವರ್ ಮಾಡಿಕೊಳ್ಳಲು ವೇಲಿ ಇರುತ್ತದೆ ಅಥವಾ ಸೀರೆಯ ಸೆರಗನ್ನು ಮುಚ್ಚಿಕೊಳ್ಳಲು ಉಪಯೋಗಿಸುವ ಕ್ರಮ ಇದೆ್. ಆದರೆ ಪ್ಯಾಂಟ್ ಮತ್ತು ಶರ್ಟ್ ಹಾಕಿದಾಗ ಹಾಗೆ ರಕ್ಷಿಸಿಕೊಳ್ಳುವ ಸಂಭವವಿಲ್ಲ. ಅದರಲ್ಲೂ ಮೇಲಿನಿಂದ ಕೆಳಗಿನ ತನಕ ಒಂದೇ ಸಾದಾ ಬಣ್ಣ.
ಎಲ್ಲರ ದೇಹ ಸ್ಥಿತಿಯೂ ಒಂದೇ ಅಲ್ಲ. ಕೆಲವರಿಗೆ ಕಡಿಮೆ, ಕೆಲವರಿಗೆ ಜಾಸ್ತಿ, ಕೆಲವರಿಗೆ ಅತಿ ಹೆಚ್ಚು. ಹೀಗಿರುವಾಗ ಈ ಇಲಾಖೆಯ ಎಲ್ಲಾ ಹೆಣ್ಣು ಮಕ್ಕಳೂ ಪ್ಯಾಂಟು ಶರ್ಟಿನ ಜೊತೆಗೆ ಬೆಲ್ಟನ್ನು ಹಾಕಿಕೊಂಡಾಗ ಆ ಸಮಯದಲ್ಲಿ ಉಂಟಾಗಬಹುದಾದ ಹೊಟ್ಟೆ ನೋವನ್ನು ತಡೆದುಕೊಳ್ಳುವ ಬಗೆ ಹೇಗೆ ? ಎಂದು ಯೋಚಿಸಿದಾಗ ಅಯ್ಯೋ ಎನಿಸಿತು.
“ನಿಮ್ಮಲ್ಲಿ ಕೆಲವು ಮಹಿಳಾ ಪೇದೆಗಳು ಖಾಕಿ ಸೀರೆ ಉಡುವುದನ್ನೂ ನೋಡಿದ್ದೇನೆ. ಆದರೆ ಅನೇಕರು ಖಾಕಿ ಶರ್ಟು ಪ್ಯಾಂಟು ಹಾಕುತ್ತಾರೆ ಅದೇಕೆ ಹೀಗೆ?’ ಅರ್ಥವಾಗದೆ ಪ್ರಶ್ನಿಸಿದೆ.
’ಪೊಲೀಸ್ ಇಲಾಖೆಯ ಕಾನೂನಿನ ಪ್ರಕಾರ ಗಂಡಾಗಲಿ ಹೆಣ್ಣಾಗಲಿ ಖಾಕಿ ಶರ್ಟ್ ಕಾಕಿ ಪ್ಯಾಂಟನ್ನು ಧರಿಸಬೇಕು. ಇದು ಬ್ರಿಟಿಷರ ಕಾಲದಿಂದ ಬಂದಂತಹ ಪದ್ಧತಿ, ಆದರೆ ಅಲಿಖಿತ ಕಾನೂನಿನಂತೆ ಸಂಪ್ರದಾಯಸ್ಥ ಹೆಣ್ಣು ಮಕ್ಕಳನೇಕರು ಖಾಕಿ ಸೀರೆ ಉಡುತ್ತಾರೆ. ಇತ್ತೀಚಿನ ಹೆಣ್ಣು ಮಕ್ಕಳು ಮನೆಯ ಹೊರಗೂ ಪ್ಯಾಂಟು ಶರ್ಟ್ ಧರಿಸುವುದರಿಂದ ಇದರಲ್ಲೂ ಅವರಿಗೆ ಏನು ಸಮಸ್ಯೆ ಇಲ್ಲ. ಆದರೆ ಉನ್ನತ ಹುದ್ದೆಗೆ ಹೋಗುತ್ತಾ ಹೋಗುತ್ತಾ ಯಾವ ಹೆಣ್ಣು ಮಕ್ಕಳೂ ಖಾಕಿ ಸೀರೆ ಉಡುವುದನ್ನು ನಾವು ಕಂಡಿಲ್ಲ. ಬಹುಶಃ ಒಂದು ರೀತಿಯ ಶಿಸ್ತಿನ ಜೊತೆಗೆ ನಾವು ಗಂಡಸರಿಗಿಂತ ಏನು ಕಡಿಮೆ ಎನ್ನುವ ಭಾವನೆ ಇರಬಹುದು ಅಥವಾ ನಮ್ಮಂಥ ಕೆಲವು ಮಹಿಳಾ ಪೇದೆಗಳು ಖಾಕಿ ಸೀರೆ ಉಡುವುದರಿಂದ ಖಾಕಿ ಸೀರೆ ಕೆಳದರ್ಜೆಯ ಬಟ್ಟೆ ಎಂದು ಅನಿಸಬಹುದೇನೋ? ಒಟ್ಟಿನಲ್ಲಿ ಸಬ್ ಇನ್ಸ್ಫೆಕ್ಟರ್ ಮತ್ತು ಮೇಲಿನ ದರ್ಜೆಯ ಮಹಿಳಾ ಪೊಲೀಸರು ಖಾಕಿ ಶರ್ಟು ಪ್ಯಾಂಟೇ ಹಾಕುವುದು. ಉನ್ನತ ದರ್ಜೆಗೆ ಏರುತ್ತಾ ಏರುತ್ತಾ ಅವರಿಗೆ ಸಿಗುವ ಸ್ಟಾರ್ ಇರಬಹುದು ಅಶೋಕ ಚಕ್ರ ಸಿಂಬಲ್ ಇರಬಹುದು ಇವೆಲ್ಲವನ್ನೂ ಸೀರೆಯ ಮೇಲೆ ಧರಿಸಲು ಸರಿಯಾಗಿ ಆಗುವುದಿಲ್ಲ. ಶರ್ಟಿನ ಭುಜದ ಮೇಲೆ ಧರಿಸುವ ಕ್ರಮ ಇರುವುದರಿಂದ ಅದನ್ನು ತೋರಿಸಿಕೊಳ್ಳುವ ಸಲುವಾಗಿಯಾದರೂ ಧರಿಸುತ್ತಾರೆ’ ಎಂದರು. ಅವರ ಜೊತೆ ಬಂದಿದ್ದ ಅವರ ಸಹೋದ್ಯೋಗಿ ಭಾಗ್ಯ ಕೂಡ ಗೌಣಾಡಿಸಿದರು.
’ಅದೆಲ್ಲಾ ಸರಿ ಮಂಗಳಾ ಅವರೇ ಕಡೇಪಕ್ಷ ಈ ಪೊಲೀಸ್ ಹೆಣ್ಣು ಮಕ್ಕಳು ಗರ್ಭ ಧರಿಸಿದಾಗ ಅವರಿಗೆ ಈ ವಸ್ತ್ರದಲ್ಲಿ ಸಡಿಲಿಕೆ ಇರುತ್ತದೆಯಾ?’ ಎಂದು ಕೇಳಿದೆ. ಆಗ ಹೆಣ್ಣುಮಕ್ಕಳ ದೇಹಸ್ಥಿತಿಯ ಬಗೆಗೆ ನನಗೆ ಗೊತ್ತಿದ್ದರಿಂದ ಆ ಕೂಡಲೇ ಅದೇ ಪ್ರಶ್ನೆ ತಲೆಗೆ ಬಂದಿತು.
ಈಗ ಭಾಗ್ಯ ಅವರು ಬಾಯಿಬಿಟ್ಟರು ’ ಆಗ ಅವರು ಖಾಕಇ ಸೀರೆಯನ್ನು ಧರಿಸಬಹುದು. ಆದರೆ ಅನೇಕ ಉನ್ನತ ದರ್ಜೆಯ ಮಹಿಳಾ ಪೊಲೀಸರು ಆಗಲೂ ಆರು ತಿಂಗಳ ತನಕ ಖಾಕಿ ಪ್ಯಾಂಟ್ ಖಾಕಿ ಶರ್ಟ್ ಧರಿಸುವುದುಂಟು. ಎರಡು ತಿಂಗಳಿಗೊಮ್ಮೆ ಹೊಸ ಬಟ್ಟೆ ಹೊಲಿಸಿಕೊಳ್ಳುತ್ತಾರೆ. ಆದರೆ ಬೆಲ್ಟನ್ನು ತಿಂಗಳು ತಿಂಗಳೂ ಲೂಸ್ ಮಾಡಿಕೊಳ್ಳುತ್ತಾ ಇರುತ್ತಾರೆ. ಇದೆಲ್ಲಕ್ಕಿಂತ ನಮ್ಮ ಬಹುದೊಡ್ಡ ಸಮಸ್ಯೆ ಎಂದರೆ ನಮಗೆ ಸರಿಯಾದ ಮತ್ತು ಬೇರೆಯದೇ ಆದ ಶೌಚಾಲಯ ಇಲ್ಲದಿರುವುದು್’ ಎಂದರು.
’ಅರೆ ಹೌದೇ? ನಮ್ಮ ಬ್ಯಾಂಕುಗಳಲ್ಲಿ ಗಂಡಸರಿಗೆ ಬೇರೆ ಹೆಂಗಸರಿಗೆ ಬೇರೆ ಶೌಚಾಲಯಗಳಿದೆ. ಅದನ್ನು ಬಹಳ ಕಟ್ಟುನಿಟ್ಟಾಗಿ ಎಲ್ಲ ಶಾಖೆಗಳಲ್ಲೂ ಪಾಲಿಸುತ್ತಾರೆ. ಅದನ್ನು ಗಮನಿಸಲು ಒಂದು ತಂಡವೇ ಇದೆ. ನಮ್ಮ ಹೆಣ್ಣು ಮಕ್ಕಳಿಗೆ ಇಷ್ಟು ಅನುಕೂಲ ಇರುವಾಗ ಪೊಲೀಸ್ ಇಲಾಖೆಯ ಹೆಣ್ಣು ಮಕ್ಕಳಿಗೆ ಆ ಅನುಕೂಲ ಏಕಿಲ್ಲ” ಮೂಡಿದ ಪ್ರಶ್ನೆ ನಾಲಗೆಯ ಮೇಲೂ ಬಂದುಬಿಟ್ಟಿತು.
’ಅದೊಂದು ಸಮಸ್ಯೆ ನಿಜಾ. ಇದಕ್ಕಿಂತ ಬಹುದೊಡ್ಡ ಸಮಸ್ಯೆ ಇದೆ. ತಿಂಗಳ ಮುಟ್ಟಿನ ಸಂದರ್ಭದಲ್ಲಿಯೂ ನಮಗೆ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯ ಕರ್ತವ್ಯಗಳಿಗೆ ನಿಯೋಜನೆ ಮಾಡುತ್ತಾರೆ. ಕಳೆದ ವಾರ ಶ್ರೀರಂಗಪಟ್ಟಣದ ಶ್ರೀರಂಗನಾಥನ ರಥೋತ್ಸವಕ್ಕೆ ನನ್ನನ್ನು ನಿಯೋಜಿಸಲಾಗಿತ್ತು. ಭಾಗ್ಯ ಮೇಲುಕೋಟೆಯ ವೈರಮುಡಿಗೆ ನಿಯೋಜನೆ ಆಗಿದ್ದಳು. ನಮ್ಮ ಹಿಂದೂ ಹೆಣ್ಣು ಮಕ್ಕಳು ಆ ಮೂರು ದಿನಗಳು ದೇವರ ಪೂಜೆ ಮಾಡುವಂತಿಲ್ಲ ದೇವಸ್ಥಾನಕ್ಕೆ ಹೋಗುವಂತಿಲ್ಲ ತಾನೇ? ಆದರೆ ಅಂಥಾ ಸಮಯದಲ್ಲಿ ಯಾರಿಗೆ ಹೇಳುವುದು ನಮ್ ಪ್ರಾಬ್ಲಮ್ಮು? ಹಾಗೂ ಹೀಗೂ ಅಲ್ಲಿ ತಂಡದ ನಾಯಕರ ಬಳಿ ಹೋಗಿ ತೀರಾ ಮುಜುಗರದಲ್ಲಿ ಹೋಗಿ ಹೀಗೆ ಪರಿಸ್ಥಿತಿ ಎಂದು ಹೇಳಿ ದೇವಸ್ಥಾನದಿಂದ ದೂರದಲ್ಲಿ ನನ್ನನ್ನು ನಿಯೋಜಿಸಿ.,ರಥೋತ್ಸವ ನಡೆಯುವಾಗ ದೇವರ ಆಸುಪಾಸಿನಲ್ಲಿ ಇರದ ಹಾಗೆ ದೂರದಲ್ಲಿ ಹಾಕಿ ಎಂದು ಬೇಡುವುದೂ ಉಂಟು.
ಇಷ್ಟೇ ಅಲ್ಲದೆ ಬೆಳಿಗ್ಗೆ ನಿಂತರೆ ಎಷ್ಟೋ ಬಾರಿ ರಾತ್ರಿಯ ತನಕ ಡ್ಯೂಟಿಯಲ್ಲಿ ಇರಬೇಕಾಗುತ್ತದೆ. ಅಲ್ಲಿ ಏನೂ ವ್ಯವಸ್ಥೆ ಇರುವುದಿಲ್ಲ. ಆ ಸಮಯದಲ್ಲಿ ಗಂಡು ಮಕ್ಕಳು ಎಲ್ಲೋ ಅಲ್ಲಿ ಇಲ್ಲಿ ಹೋಗುತ್ತಾರೆ. ಆದರೆ ಹೆಣ್ಣು ಮಕ್ಕಳಿಗೆ ಸರಿಯಾದ ಶೌಚಾಲಯವು ಸಿಗದೆ ಮತ್ತು ಈ ಮೂರು ದಿನಗಳ ಮುಟ್ಟಿನ ಸಂದರ್ಭದಲ್ಲಿ ಪ್ಯಾಡ್ ಬದಲಿಸಬೇಕಾದ ಪರಿಸ್ಥಿತಿಯಲ್ಲಿಯೂ ಎಲ್ಲೂ ಮರೆಯಾದ ಸ್ಥಳ ಸಿಗದೇ ಇಡೀ ದಿನ ಹಿಂಸೆಯಲ್ಲಿ ಒದ್ದಾಡಿದ್ದುಂಟು’ ಎಂದರು ಮಂಗಳ.
ಕೇವಲ ಮಂಗಳ ಮಾತ್ರವಲ್ಲ ನಮ್ಮಲ್ಲಿಗೆ ಬರುವ ಎಷ್ಟು ಹೆಣ್ಣು ಪೊಲೀಸ್ಗಳನ್ನು ನಾನು ಈ ವಿಷಯದಲ್ಲಿ ಮಾತನಾಡಿಸಿದ್ದಿದೆ. ನಾವು ನೆನೆದ ಗಳಿಗೆಯಲ್ಲಿ ನಮ್ಮ ಶಾಖೆಯಲ್ಲಿನ ಶೌಚಾಲಯಕ್ಕೆ ಹೋಗಿ ಬರುತ್ತೇವೆ. ನೀವು ಯಾವುದೋ ಕರ್ತವ್ಯಕ್ಕೆ ಎಂದು ರಸ್ತೆಯಲ್ಲಿ ನಿಂತಿರುತ್ತೀರಿ ಯಾವುದೋ ಹಳ್ಳಿಗೆ ಹೋಗುತ್ತೀರಿ ಯಾವುದೋ ದೂರದ ಸ್ಥಳದಲ್ಲಿ ಹೆಣ ಕಾಯುವ ಸ್ಥಳವಿರಬಹುದು, ಗಲಾಟೆಯ ಸ್ಥಳ ಇರಬಹುದು ಅದು ಊರಿನಿಂದ ಹೊರಗೆ ಇರಬಹುದು ಅಂತಹ ಸ್ಥಳದಲ್ಲಿ ನೀವೇನು ಮಾಡುತ್ತೀರಿ ಎಂದು
ಆಗೆಲ್ಲಾ ಅವರು ’ಈ ಪ್ರಶ್ನೆಯನ್ನು ಕೇಳಬೇಕಾದ ನಮ್ಮ ಇಲಾಖೆಯ ಅಧಿಕಾರಿಗಳೇ ಕೇಳುವುದಿಲ್ಲ ನೀವಾದರೂ ಕೇಳಿದ್ದೀರಲಲ್ಲಾ’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡಿದ್ದುಂಟು, ನಮ್ಮ ಕಷ್ಟ ಆ ಭಗವಂತನಿಗೂ ಬೇಡ’ ಎಂದಿದ್ದಿದೆ.
’ಎರಡು ಜೀವ ಹೊತ್ತ ಹೆಣ್ಣು ಮಕ್ಕಳೆಂದರೆ ಸಾಮಾನ್ಯವಾಗಿ ಎಲ್ಲರಿಗೂ ವಿಶೇಷ ಕಾಳಜಿ ಇರುತ್ತದೆ. ನಮ್ಮ ಇಲಾಖೆಯಲ್ಲಿ ಅದು ಠಾಣೆಯ ಮುಖ್ಯಸ್ಥರ ಮೇಲೆ ಸಂಬಂಧಿಸಿರುತ್ತದೆ. ಎಷ್ಟೋ ಬಾರಿ ಅಯ್ಯೋ ಪಾಪ ಎಂದು ನಾಲ್ಕು ಗಂಟೆಗೇ ಹೋಗಿ ಮನೆಗೆ, ರೆಸ್ಟ್ ಮಾಡಿ ಎಂದು ಗರ್ಭಿಣಿ ಪೊಲೀಸ್ ಪೇದೆಗಳನ್ನು ಕಳಿಸುವುದು ಉಂಟು. ಇನ್ನು ಎಷ್ಟೋ ಬಾರಿ ನಮ್ಮಷ್ಟೇ ಸಂಬಳ ತೆಗೆದುಕೊಳ್ಳುವುದಿಲ್ಲವೇ? ನಾವು ಇರುವ ತನಕವೂ ಇರಿ. ಅದರಲ್ಲಿ ಇಕ್ವಾಲಿಟಿ ಬೇಕು ಇದರಲ್ಲಿ ಬೇಡವೇ ಎನ್ನುವವರು ಉಂಟು’ ಭಾಗ್ಯ ನಿಟ್ಟುಸಿರು ಬಿಟ್ಟರು.ರಾಜ್ಯದಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ
’ನಮ್ಮ ಇಲಾಖೆಯಲ್ಲಿಯೂ ಜೆಂಡರ್ ಸೆನ್ಸಿಟಿವಿಟಿ ಎನ್ನುವ ವಿಷಯದ ಮೇಲೆ ಚರ್ಚೆ ನಡೆಯುತ್ತಿದೆ. ಆದರೆ ಅಂಥಂಥಾ ಸಂದರ್ಭದಲ್ಲಿ ನೀವು ಏನು ಮಾಡುತ್ತೀರಿ ಎಂದು ಯಾರೊಬ್ಬರೂ ನಮ್ಮನ್ನು ಕೇಳುವುದಿಲ್ಲ. ಸುತ್ತ ಹತ್ತಾರು ಗಂಡು ಪೊಲೀಸರು ಇರುವಾಗ ನಾವು ಯಾರ ಬಳಿ ನಮ್ಮ ಕಷ್ಟವನ್ನು ಹೇಳಿಕೊಳ್ಳಲು ಸಾಧ್ಯವಾದೀತು? ಕಡೆಯ ಪಕ್ಷ ನಾವು ಇಬ್ಬರಾದರೂ ಇದ್ದರೆ ಒಬ್ಬರಿಗೊಬ್ಬರು ಮಾತಾಡಿಕೊಂಡು ಒಂದು ಮರೆಯ ಸ್ಥಳಕ್ಕೆ ಹೋಗಿ ಒಬ್ಬರು ಕಾವಲು ಕಾಯಬಹುದು. ಆದರೆ ಒಂದೇ ಮಹಿಳಾ ಪೊಲೀಸ್ ಸಿದ್ದು ಉಳಿದ ಗಂಡಸರಿದ್ದಾಗ ನಮ್ಮ ಪರಿಸ್ಥಿತಿಯನ್ನು ಅರಗಿಸಿಕೊಳ್ಳಲಾಗದೆ ಎಷ್ಟೋ ಬಾರಿ ನಮ್ಮ ಕಣ್ಣೀರು ನೆಲಕ್ಕೆ ಬಿದ್ದಾಗ ಭೂಮಿತಾಯಿಗೆ ಮಾತ್ರ ಅರ್ಥವಾಗಿದೆ’
ಹೀಗೆ ಹೇಳುತ್ತಾ ಮಂಗಳ ಹನಿಗಣ್ಣಾದರು. ಅವರ ಕಣ್ಣೀರು ನನ್ನ ಕಣ್ಣಿನಲ್ಲೂ ಪ್ರತಿಫಲಿಸಿತು.
ಸ್ಪಂದನೆ ಎಂದರೆ ಇದೆಯಲ್ಲವೇ?
-ಡಾ.ಶುಭಶ್ರೀಪ್ರಸಾದ್, ಮಂಡ್ಯ