ಯುಗದ ಕವಿ , ಜಗದ ಕವಿ ಕುವೆಂಪು (Kuvempu) ಜನ್ಮ ದಿನ
ಡಾ.ಲೀಲಾ ಅಪ್ಪಾಜಿ
ದೇಶ ಕಾಲ ಚರಿತ್ರೆಗಳನ್ನು ಪ್ರಭಾವಿಸುವ ಕವಿಯನ್ನು ಯುಗದ ಕವಿ ಎನ್ನುವರು. ಕುವೆಂಪು ಅಂತಹ ಯುಗದ ಕವಿ. ಜಗದ ಕವಿ. ಕನ್ನಡ ನೆಲದಲ್ಲಿದ್ದು ಬರೆದರೂ ವಿಶ್ವವ್ಯಾಪಿಯಾದ ಕುವೆಂಪು ಪ್ರಕಾರ ಸಾಹಿತ್ಯವನ್ನು ಮಾತ್ರ ರಚಿಸುವುದರಿಂದ ಪ್ರಯೋಜನವಿಲ್ಲ. ಸಾಹಿತ್ಯದ ಪಟ್ಟಕ್ಕಿಂತ ಮುಖ್ಯ. ಬದುಕು-ಬರಹಗಳಲ್ಲಿ ಭಿನ್ನತೆ ಇಲ್ಲದ ಕುವೆಂಪು “ಕನ್ನಡ ನಿನ್ನ ಭಾಷೆ, ದೇಶಭಾಷೆ. ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯಭಾಷೆ, ಮಹಾಕವಿಗಳನ್ನೂ ಶಿಲ್ಪಿಗಳನ್ನೂ ರಾಜಾಧಿರಾಜರನ್ನೂ ವೀರಾಧಿವೀರರನ್ನೂ ರಸಋಷಿ ದಾರ್ಶನಿಕರನ್ನೂ ಹಡೆದಿರುವ ಭಾಷೆ’’ ಎಂದು ಕನ್ನಡದ ಹಿರಿಮೆಯನ್ನು ಅಭಿಮಾನದಿಂದ ಕಂಡು ಕನ್ನಡವನ್ನೇ ಉಸಿರಾಡಿ, ಮಾತಾಡಿ ಬರೆದು ಕನ್ನಡಕ್ಕೆ ಹಿರಿದಾದ ಕೊಡುಗೆ ಕೊಟ್ಟರು.
`ಭಾರತಾಂಬೆಯೆ, ಜನಿಸಿ ನಿನ್ನೊಳು ಧನ್ಯನಾದೆನು, ದೇವಿಯೇ. ನಿನ್ನ ಪ್ರೇಮದಿ ಬೆಳೆದು ಜೀವವು ಮಾನ್ಯವಾದುದು, ತಾಯಿಯೆ’ ಎನ್ನುವ ಕುವೆಂಪು ಭಾರತಿಯ ಬಗ್ಗೆ ಗೌರವಾದರ ತೋರಿಸಿಯೂ ಕನ್ನಡದ ಅಸ್ಮಿತೆಯನ್ನು ಕಾಯ್ದವರು.
ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯನ್ನು ಸ್ವಾತಂತ್ರ್ಯ ಪೂರ್ವದ ೧೯೨೮ರಲ್ಲೇ ರಚಿಸಿದ `ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ!’ ಗೀತೆಯಲ್ಲಿ ಭಾರತ ಜನನಿಗೆ ಸಲ್ಲುವ ಜಯಕಾರ ಅವಳ ತನುಜಾತೆಯಾದ ಕರ್ನಾಟಕ ಮಾತೆಗೂ ಸಲ್ಲುತ್ತದೆನ್ನುವ ಕವಿ ಭಾರತ ದೇಶ ಎಷ್ಟು ಮುಖ್ಯವೋ ಕರ್ನಾಟಕವೆಂಬ ಸ್ವಾಯತ್ತ ರಾಜ್ಯವೂ ಮುಖ್ಯವೆಂಬ ಮುನ್ನೋಟ ಕಂಡಿದ್ದರು. ಇದನ್ನು ಓದಿ – ನಮ್ಮ ಹೆಮ್ಮೆ
ಕನ್ನಡ ನಾಡಿದ ಏಕೀಕರಣಕ್ಕೆ ಆತಂಕಗಳು ಎದುರಾದಾಗ ಕೇವಲ ನೆಲಕ್ಕೆ, ಗಡಿ ಗುರುತಿಗೆ ಸೀಮಿತವಾಗಿಸದೆ ಪರಿಧಿ ವಿಸ್ತರಿಸಿ ಎಲ್ಲಿದ್ದರೂ ಕನ್ನಡಿಗರಾಗಿ ಎಂದು ಕರೆಕೊಟ್ಟ ಬಗೆ ಇದು:
ಎಲ್ಲಾದರು ಇರು; ಎಂತಾದರು ಇರು;
ಎಂದೆoದಿಗು ನೀ ಕನ್ನಡವಾಗಿರು.
ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!
ನೀ ಮೆಟ್ಟುವ ನೆಲ-ಅದೆ ಕರ್ನಾಟಕ;
ನೀನೇರುವ ಮಲೆ-ಸಹ್ಯಾದ್ರಿ.
ನೀ ಮುಟ್ಟುವ ಮರ-ಶ್ರೀಗಂಧದ ಮರ;
ನೀ ಕುಡಿಯುವ ನೀರ್-ಕಾವೇರಿ.
ಎಲ್ಲಿದ್ದರೂ, ಹೇಗಿದ್ದರೂ ಎಂದೆoದಿಗೂ ಕನ್ನಡವಾಗಿರಬೇಕಾದ ಕನ್ನಡಿಗ ತುಳಿಯುವ ನೆಲ ಕರ್ನಾಟಕದ ನೆಲ, ಏರಿದ ಬೆಟ್ಟ ಸಹ್ಯಾದ್ರಿ, ಮುಟ್ಟುವ ಮರ ಶ್ರೀಗಂಧ, ಕುಡಿಯುವ ನೀರು ಕಾವೇರಿ ಎಂದೇ ಭಾವಿಸಲಿ ಎನ್ನುವ ಕರೆ
ಏಕೀಕರಣದ ಅರ್ಥ ವ್ಯಾಪ್ತಿಯನ್ನು ವಿಸ್ತ್ತರಿಸಿದೆ. ಕನ್ನಡಿಗ ಇದ್ದಲ್ಲೆ ಕರ್ನಾಟಕವನ್ನು ಕಾಣಬೇಕೆಂಬ ಚಿಂತನೆಯೆ ಅಪೂರ್ವ, ವಿಶಿಷ್ಟ.
ಕನ್ನಡಿಗರು ಕರ್ನಾಟಕದ ಹೊರಗಿದ್ದಾಗ ವೈಯಕ್ತಿಕವಾಗಿ ಕನ್ನಡಿಗರಾದರೂ ಪ್ರಾದೇಶಿಕವಾಗಿ ತಾವಿರುವ ಪ್ರದೇಶದವರು. ಕರ್ನಾಟಕದಲ್ಲಿರುವ ಅನ್ಯ ಭಾಷಿಕರು ಇಲ್ಲಿದ್ದ ಮೇಲೆ ಅವರೂ ಕನ್ನಡ ನಾಡವರು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಈ ಅನ್ಯಭಾಷಿಕರು ಭಾಗಿಗಳಾಗಿರಬೇಕೆನ್ನುವ ಕುವೆಂಪು ಪ್ರಕಾರ ಕನ್ನಡಿಗರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದಿಸಿ ಜ್ಞಾನ, ಆಲೋಚನೆ, ವಿಚಾರಗಳನ್ನು ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ’.
ಶತಮಾನಗಳ ಪರಂಪರೆ ಪಡೆದು ಸಾಂಸ್ಕೃತಿಕವಾಗಿ ಒಂದಾಗಿದ್ದ ಕರ್ನಾಟಕ ಭೌಗೋಳಿಕವಾಗಿ ಅಖಂಡವಾಗಿರಲಿಲ್ಲ. ಚಿಂತಕರು, ಸಾಹಿತಿಗಳು ಏಕೀಕರಣಕ್ಕಾಗಿ ನಿರಂತರವಾಗಿ ದುಡಿಯುತ್ತಿದ್ದರು. ಮೈಸೂರು ಭಾಗದ ಕೆಲವರು ವಿಶಾಲ ಕರ್ನಾಟಕಕ್ಕೆ ವಿರುದ್ಧವಿದ್ದಾಗ ಏಕೀಕರಣವನ್ನು ದಿಟ್ಟವಾಗಿ ಪ್ರತಿಪಾದಿಸಿದ್ದ ಕುವೆಂಪು ಕೆಲವು ಕವಿತೆಗಳನ್ನು ಬರೆದಿದ್ದಾರೆ, ಭಾಷಣ ಮಾಡಿದ್ದಾರೆ. ರಾಜಕೀಯದ ಎಳೆದಾಟಗಳಿಗೆ ಸಿಲುಕಿ ಕನ್ನಡನಾಡು ಹರಿದು ಹಂಚಿಹೋಗಬಾರದೆoಬ ಕಾಳಜಿ ೧೯೪೧ರಲ್ಲಿ ಬರೆದ `ಏಕೈಕ ಕರ್ನಾಟಕ’ದಲ್ಲಿದೆ.
`ಕನಸು ನನಸಾಯಿತಿದೊ ಏಕೈಕ ಕರ್ನಾಟಕ:
ಕಣ್ ನಟ್ಟು ಬಯಸಿ ಕಾಣ್ ದಿಕ್ ತಟಧ್ವಜಪಟ!
ಕಾವೇರಿ ಸಿರಿಯಡಿಯ, ಗೋದಾವರಿಯ ಮುಡಿಯ,
ಮೂಡುಮಲೆಯೆಡದ ಗಡಿಯ, ಪಡುಗಡಲ ಬಲದ ತಡಿಯ;
ವರ್ಣಶಿಲ್ಪದ ಕಲೆಯ ಚೆಲ್ವಿನ ಶಿಲೆಯ ಗುಡಿಯ, ಕನ್ನಡದಿಂಪು ನುಡಿಯ;
ಕನಸು ನನಸಾಯಿತಿದೊ ಏಕೈಕ ಕರ್ನಾಟಕ’
೧೯೪೨ರ ’ಅಳುಕದೀ ಕನ್ನಡಂ’ಕವಿತೆಯಲ್ಲಿ ‘ಪಂಪರನ್ನರ್ ಕುಮಾರವ್ಯಾಸ ಲಕ್ಷ್ಮೀಶ ಹರಿಹರಾದಿಗಳುಸಿರ್ ನಮ್ಮೊಳಿರ್ಪನ್ನೆಗಂ ಅಳುಕದೀ ಕನ್ನಡಂ, ಅಳಿಯದೀ ಕನ್ನಡಂ, ಉಳಿವುದೀ ಕನ್ನಡಂ! ಎಂದಿದ್ದರು. ಆದ್ದರಿಂದಲೇ ದಿಟ್ಟತನದಿಂದ
ರನ್ನ ಪಂಪರ ನಚ್ಚು ಕನ್ನಡದ ಸೊಲ್ಲು; ಬಸವದೇವನ ಮೆಚ್ಚು, ಹರಿಹರನ ಗೆಲ್ಲು;
ನಾರಣಪ್ಪನ ಕೆಚ್ಚು ಬತ್ತಳಿಕೆ ಬಿಲ್ಲು; ಕನ್ನಡವ ಕೊಲುವ ಮುನ್ ಓ ನನ್ನ ಕೊಲ್ಲು!’ ಎಂದು ಆಹ್ವಾನಿಸಿದ್ದರು.
ಭಾರತಕ್ಕೆ ಸ್ವಾತಂತ್ರ‍್ಯ ಬಂದೂ ಕನಸು ಕಂಡ `ಕರ್ನಾಟಕ’ ರಾಜ್ಯ ಆಗದೇ ಇದ್ದಾಗ ಬಹಿರಂಗವಾಗಿ ಏಕೀಕರಣವನ್ನು ಬೆಂಬಲಿಸಿದ ಕುವೆಂಪು ಕನ್ನಡಿಗ ದಿಟ್ಟ ಸಂಕಲ್ಪ ಮಾಡದೆ ಹೊರತು ಏಕೀಕರಣ ಕೈಗೊಡುವುದಿಲ್ಲವೆಂದು ಮಂತ್ರ ದೀಕ್ಷೆ ಸ್ವೀಕರಿಸಲು ಕರೆಕೊಟ್ಟರು. ಇದನ್ನು ಓದಿ – ಇಂದು ರಾಷ್ಟ್ರಕವಿ ಕುವೆಂಪು ಜನ್ಮದಿನ – ಸಾಹಿತ್ಯದ ಮೆಲುಕು
ದೀಕ್ಷೆಯ ತೊಡು ಇಂದೇ; ಕಂಕಣ ಕಟ್ಟಿಂದೇ! ಕನ್ನಡನಾಡೊಂದೇ; ಇನ್ನೆಂದೂ ತಾನೊಂದೇ! ನನ್ನಾಣೆ! ನಿನ್ನಾಣೆ! ಕನ್ನಡ ಜನರೆಲ್ಲರ ಮೇಲಾಣೆ! ಕನ್ನಡ ನಾಡೊಂದಾಗದೆ ಮಾಣೆ!’ ಎಂದರು. ೧೯೪೯ರಲ್ಲಿ ಮಾಡಿದ ಭಾಷಣದಲ್ಲಿ
ನಮ್ಮ ಕರ್ಣಾಟಕ ಬರಿಯ ದೇಶ ವಿಸ್ತೀರ್ಣಕ್ಕೆ ಮಾತ್ರ ಸಂಬಂಧಪಟ್ಟುದಲ್ಲ; ಕಾಲವಿಸ್ತೀರ್ಣವನ್ನೂ ಪ್ರಮುಖವಾಗಿ ಭಾವಿಸುತ್ತೇವೆ. ಚದರ ಮೈಲಿಗಳಿಂದ ಅಳೆದರೆ ಸಾಲದು; ಚದರ ವರ್ಷಗಳಿಂದಲೂ ಗುರುತಿಸಬೇಕು. ಕರ್ಣಾಟಕದ ಕಾವ್ಯ ಸಂಸ್ಕೃತಿಗಳನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿಕೊಂಡ ಕನ್ನಡಿಗನು ಭೌಗೋಲಿಕವಾದ ಎಲ್ಲೆ ಮೀರಿ ಕನ್ನಡ ಕಾವ್ಯ ಓದುವವ ಅಮೆರಿಕೆಯಲ್ಲಿದ್ದರೂ ‘ಕರ್ಣಾಟಕವೆ,’ ‘ಪಂಪನನೋದುವ ನಾಲಗೆ’ ಮಿಸಿಸಿಪಿ ಹೊಳೆಯ ನೀರನ್ನು ಈಂಟಿದರೂ ಕಾವೇರಿಯೆ, ‘ಕುಮಾರವ್ಯಾಸನನಾಲಿಪ ಕಿವಿ’ ಆಂಡಿಸ್ ಪರ್ವತ ಏರುತ್ತಿದ್ದರೂ ಸಹ್ಯಾದ್ರಿಯೆ. ಕನ್ನಡಿಗರ ಸಂಸ್ಕೃತಿಗೆ ಕರ್ಣಾಟಕದ ವಿಸ್ತಾರ ನಿರ್ದಿಗಂತ: ಸಾಂಸ್ಕೃತಿಕ ಕರ್ಣಾಟಕದ ಸ್ಥಾಪನೆ ರಕ್ಷಣೆ, ಪೋಷಣೆ ಮತ್ತು ವಿಸ್ತರಣೆಗಳಿಗಾಗಿ ಸಹೃದಯ ಸಮಷ್ಟಿ ರೂಪವಾದ ಸಾಹಿತ್ಯ ಪರಿಷತ್ತು ನಿರಂತರವೂ ತಪಸ್ವಿಯಾಗಿ ದುಡಿಯಬೇಕಿದೆ’ ಎಂದಿದ್ದರು.
ಈ ರೀತಿಯ ನುಡಿಗೆ ಏಕೀಕರಣ ವಿರೋಧಿಯಾಗಿದ್ದ ಕೆ.ಸಿ.ರೆಡ್ಡಿ ಸರ್ಕಾರ ಕೆರಳಿ ಕುವೆಂಪುಗೆ ನೋಟಿಸು ಕೊಟ್ಟು ಕರ್ನಾಟಕ ಏಕೀಕರಣದ ಪರವಾಗಿ ಹೇಳಿಕೆ ನೀಡಬಾರದು’ ಎಂದು ಎಚ್ಚರಿಸಿತು. ಇದಕ್ಕೆ ಉತ್ತರವಾಗಿ ಮುಟ್ಟಿ ನೋಡಿಕೊಳ್ಳುವಂತೆ ’ಅಖಂಡ ಕರ್ಣಾಟಕ!’ ಕವಿತೆ ಬರೆದ ಕುವೆಂಪು ನಾಡಿನ ಸಾಂಸ್ಕೃತಿಕ ಹಿನ್ನೋಟ- ಮುನ್ನೋಟಗಳಿಲ್ಲದ, ಇಂದು ಬಂದು ನಾಳೆ ಹೋಗುವ ಮಂತ್ರಿಗಳಿಗೆ ಬದಲಾಗಿ ಹೊಸತೊಂದು ನಿತ್ಯಸಚಿವ ಮಂಡಲವನ್ನು ಸರಸ್ವತಿಯೆ ರಚಿಸಿದ್ದಾಳೆ ಎಂದರು. ಕನ್ನಡ ಕಟ್ಟಿದ, ಸಾಂಸ್ಕೃತಿಕ ಕರ್ನಾಟಕವನ್ನು ಶ್ರೀಮಂತಗೊಳಿಸಿದ, ಸಾಂಸ್ಕೃತಿಕ ನಾಯಕರಾದ ‘ನೃಪತುಂಗ’ ಚಕ್ರವರ್ತಿಯಾದರೆ ‘ಪಂಪ’ ಮುಖ್ಯಮಂತ್ರಿ. ರನ್ನ, ಜನ್ನ, ನಾಗವರ್ಮ, ರಾಘವಾಂಕ, ಹರಿಹರ, ಬಸವೇಶ್ವರ, ನಾರಣಪ್ಪ, ಸರ್ವಜ್ಞ, ಷಡಕ್ಷರರೆ ಮಂತ್ರಿಗಳು. ಇದು ಶಾಶ್ವತ ಆಡಳಿತ ವ್ಯವಸ್ಥೆಯ ಸಚಿವ ಮಂಡಲ. ಈ ಕಾರಣದಿಂದಲೇ ಅಖಂಡ ಕರ್ನಾಟಕ ಕೇವಲ ನಾಲ್ಕು ದಿನಗಳ ಒಂದು ರಾಜಕೀಯ ನಾಟಕ ಅಲ್ಲ ಎಂದರು. ಕರ್ಣಾಟಕ ಎಂಬುದು ಕೇವಲ ಭೌಗೋಳಿಕ ವಿಸ್ತಾರವನ್ನು ಸೂಚಿಸುವ ಮಣ್ಣಲ್ಲ ಎಂಬುದಕ್ಕೆ ಒತ್ತು ಕೊಟ್ಟು
ಕರ್ನಾಟಕ ಎಂಬುದೇನು ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ! ತಾಯಿ ಕಣಾ! ದೇವಿ ಕಣಾ!
ಬೆಂಕಿ ಕಣಾ ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ ಪಡೆದ ಚಲದ ಚಂಡಿ ಕಣಾ!’’
ಕರ್ನಾಟಕ ನಮ್ಮ ಮಂತ್ರ, ನಮ್ಮ ಶಕ್ತಿ, ನಮ್ಮ ತಾಯಿ, ದೇವಿ, ಬೆಂಕಿ, ಸಿಡಿಲು. ಇದಕ್ಕೆ ಕಾಯುವ ಮತ್ತು ಕೊಲ್ಲುವ ಎರಡೂ ಶಕ್ತಿಯೂ ಇದೆ ಎಂದು ಎಚ್ಚರಿಸಿದರು.
ಕುವೆಂಪುರ ಪದ್ಯರೂಪದ ಉತ್ತರ ಕೆ.ಸಿ.ರೆಡ್ಡಿ ಸರ್ಕಾರವನ್ನು ಕೆರಳಿಸಿ ಕುವೆಂಪು ಅವರನ್ನು ಏನು ಮಾಡಬಹುದೆಂದು ಕಾನೂನಿನ ವಿಷಯದಲ್ಲಿ ನಿಟ್ಟೂರು ಶ್ರೀನಿವಾರಾಯರ ಸಲಹೆ ಕೇಳಿತು. ಅವರು: “ಪುಟ್ಟಪ್ಪ ಕೈ ಎತ್ತಿದರೆ ಕರ್ನಾಟಕವೇ ಕೈ ಎತ್ತುತ್ತದೆ. ಆದ್ದರಿಂದ ಸರ್ಕಾರ ನೀಡಿದ ನೋಟಿಸನ್ನು ವಾಪಸ್ಸು ಪಡೆಯುವುದು ಒಳ್ಳೆಯದು” ಎಂದರು. ಅಲ್ಲಿಗೆ ಆ ನೋಟೀಸಿನ ಕಥೆ ಮುಗಿಯಿತು.
ಏಕೀಕರಣ ಆದಾಗ ’ಕರ್ಣಾಟಕ ರಾಜ್ಯೋದಯ ಶ್ರೀ’ ಗೀತೆ ಬರೆದು ಓ ತಾಯಿ ಭಾರತಿಯೆ, ನಿನ್ನ ಮಗಳನು ಹರಸು’ ಎಂದರು. ಏಕೀಕರಣವಾಗಿ ವಿಶಾಲ ಮೈಸೂರು ಎಂದಾದಾಗ
ವಿಶಾಲ ಮೈಸೂರು ಎಂದರೆ ಸಾಲದು, ಕರ್ನಾಟಕ ಎನ್ನಬೇಕೆಂಬ ನಿಲುವು ತಳೆದಿದ್ದರು.
ಕರ್ನಾಟಕ ಒಂದಾದರೂ ಕನ್ನಡಿಗರಲ್ಲಿ ಒಗ್ಗಟ್ಟಿಲ್ಲದ್ದನ್ನು ಕಂಡ ಕವಿ ‘ಕರ್ಣಾಟಕ ಹೃದಯಶಿವ’ನಿಗೆ ಮೊರೆಯಿಟ್ಟು ಕನ್ನಡಿಗರನ್ನು ಬಡಿದು ಎಚ್ಚರಿಸಲು ಕೋರಿದರು.
`ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯಶಿವ!
ಸತ್ತಂತಿಹರನು ಬಡಿದೆಚ್ಚರಿಸು; ಕಚ್ಚಾಡುವರನು ಕೂಡಿಸಿ ಒಲಿಸು.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು; ಒಟ್ಟಿಗೆ ಬಾಳುವ ತೆರದಲಿ ಹರಸು!
ಕ್ಷಯಿಸೆ ಶಿವೇತರ ಕೃತಿಕೃತಿಯಲ್ಲಿ ಮೂಡಲಿ ಮಂಗಳ ಮತಿಮತಿಯಲ್ಲಿ;
ಕವಿ ಋಷಿ ಸಂತರ ಆದರ್ಶದಲಿ ಸರ್ವೋದಯವಾಗಲಿ ಸರ್ವರಲಿ!’
ಸತ್ತವರನ್ನು ಎಬ್ಬಿಸುವ ಪ್ರಶ್ನೆಯೆ ಇಲ್ಲ; ನಿದ್ದೆ ಮಾಡುವವರನ್ನು ಎಬ್ಬಿಸಬಹುದು. ಆದರೆ ಸತ್ತಂತಿರುವವರನ್ನು, ನಿದ್ರಿಸುವಂತೆ ನಟಿಸುವವರನ್ನು ಎಬ್ಬಿಸುವುದು ಅಸಾಧ್ಯ. ಆದ್ದರಿದ ಕಚ್ಚಾಡುವರಿಗೆ ಕವಿತಾ ಸಂದೇಶ ನೀಡಿ ಒಗ್ಗಟ್ಟಿನ ಅಗತ್ಯವನ್ನು ಪ್ರತಿಪಾದಿಸಿದರು.
ಕವಿಗೆ ಕನ್ನಡ ಎಂದರೆ ರೋಮಾಂಚನ. ಕನ್ನಡವೆಂದರೆ ಸ್ವರ್ಗ.
ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು!
ಕಾಮನ ಬಿಲ್ಲನು ಕಾಣುವ ಕವಿಯೊಲು
ತೆಕ್ಕನೆ ಮನ ಮೈಮರೆಯುವುದು.
ಕನ್ನಡ! ಕನ್ನಡ, ಹಾ, ಸವಿಗನ್ನಡ!
ಕನ್ನಡದಲಿ ಹರಿ ಬರೆಯುವನು;
ಕನ್ನಡದಲಿ ಹರ ತಿರಿಯುವನು!
ಕನ್ನಡದಲ್ಲಿಯೆ ಬಿನ್ನಹಗೈದೊಡೆ
ಹರಿ ವರಗಳ ಮಳೆ ಕರೆಯುವನು!
ಹರ ಮುರಿಯದೆ ತಾ ಪೊರೆಯುವನು!
ಕನ್ನಡ ಎಂದರೆ ಹಿಗ್ಗುವ ಕವಿಗೆ ಕನ್ನಡವು ಸವಿಗನ್ನಡವಾಗಿದೆ. ಹರಿ, ಹರರಿಬ್ಬರಿಗೂ ಕನ್ನಡ ಪ್ರಿಯವಾಗಿದೆ. ಕನ್ನಡದಲ್ಲಿ ಬಿನ್ನವಿಸಿದರೆ ಹರಿ ವರಗಳ ಮಳೆಗರೆದರೆ, ಹರ ಮುನಿಯದೆ ಪೊರೆಯುವನು. ದೇವರ ಪೂಜೆಗೆ ಕನ್ನಡವನ್ನು ಬಳಸಬೇಕೆನ್ನುವುದೆ ಅವರ ಆಶಯ.
ಕನ್ನಡನಾಡಿನ ಶ್ರೇಯೋಭಿವೃದ್ಧಿಗೆ ಕನ್ನಡ, ಕನ್ನಡ ಮಕ್ಕಳ ಭವಿಷ್ಯ ಉತ್ತಮವಾಗಲೆಂದು ಹಂಬಲಿಸಿದ ಕವಿಕನ್ನಡಕೆ ಹೋರಾಡು ಕನ್ನಡದ ಕಂದಾ; ಕನ್ನಡವ ಕಾಪಾಡು ನನ್ನ ಆನಂದಾ! ಜೋಗುಳದ ಹರಕೆಯಿದು ಮರೆಯದಿರು, ಚಿನ್ನಾ; ಮರೆತೆಯಾದರೆ ಅಯ್ಯೊ ಮರೆತಂತೆ ನನ್ನ!; ಎನ್ನುತ್ತಾ ತಾಯಿಯ ಹಾಲಿನಷ್ಟೆ ಸತ್ವಭರಿತವಾದ ತಾಯಿ ನುಡಿಯ ರಕ್ಷಣೆಗೆ ಕನ್ನಡದ ಮಕ್ಕಳು ಹೋರಾಡಬೇಕೆಂದು ಮನದಟ್ಟು ಮಾಡಿದ್ದಾರೆ. ಕನ್ನಡಿಗರ ಪರಭಾಷಾ ಮೋಹ ಕಂಡು ಸಿಡಿವ ಕವಿ ಕನ್ನಡ ತಾಯಿಯ ಹಾಲು ಕುಡಿದು ಬೆಳೆದ ಕಂದಮ್ಮಗಳು ತಾಯಿಯನ್ನು ಕೊಂದAತೆ ಕನ್ನಡವನ್ನು ಕೊಲ್ಲುತ್ತಿರುವುದಕ್ಕೆ ಕನಲಿ
ನಿಮ್ಮ ನುಡಿ ನಿಮ್ಮ ಗಂಡಸುತನಕೆ ಹಿರಿಸಾಕ್ಷಿ ಗೆಲವಿದ್ದರದಕೆ ನಿಮಗಿಹುದು ಶಕ್ತಿ, ನುಡಿ ಮಡಿದರೆಲ್ಲರೂ ಮೂಕಜಂತುಗಳAತೆ ಬಾಲವಲ್ಲಾಡಿಪುದೆ ಪರಮ ಭಕ್ತಿ’ ಎನ್ನದೆ ತಾಯ್ನುಡಿಯನ್ನು ರಕ್ಷಿಸಿಕೊಳ್ಳಿ, ನಾಯಿಯಂತೆ ಬಾಲ ಅಲ್ಲಾಡಿಸಿ ಹೇಡಿಗಳಂತೆ ಪರಭಾಷೆಗಳ ದಾಸರಾಗದಿರಿ ಎನ್ನುತ್ತಾ “ಕಣ್ದೆರೆಯಿರೇಳಿ, ಓ ಕನ್ನಡದ ಮಕ್ಕಳಿರಾ, ಗರ್ಜಿಸುವುದನು ಕಲಿತು ಸಿಂಹವಾಗಿ ನಖದಂಷ್ಟç ಕೇಸರಂಗಳ ಬೆಳೆಸಿ ಹುರಿಗೊಂಡು ಶಿರವೆತ್ತಿ ನಿಂತು ಕುರಿತನವ ನೀಗಿ.” ದೇಹ ಮತ್ತು ಮನಸ್ಸನ್ನು ಸಶಕ್ತಗೊಳಿಸಿಕೊಂಡು ಹೊಸ ಚೈತನ್ಯದಿಂದ ಮುನ್ನುಗ್ಗಿ ಕನ್ನಡದ ಸಿಂಹಗಳಾಗಿ ಗರ್ಜಿಸಿ. ಕುರಿಯಂತೆ ತಲೆ ತಗ್ಗಿಸಿ ನಿಲ್ಲದಿರಿ ಎಂದು ಕನ್ನಡಿಗರಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ.
ಏಕೀಕೃತ ಕರ್ನಾಟಕದಲ್ಲಿ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವಾಗಬೇಕೆಂದು ಹಂಬಲಿಸಿದ ಕುವೆಂಪು (Kuvempu) ನಮ್ಮ ಭಾಷೆ ವಿದ್ಯಾಭ್ಯಾಸದ ಅತ್ಯುನ್ನತ ಮಟ್ಟಗಳಲ್ಲಿಯೂ ಶಿಕ್ಷಣ ಮಾಧ್ಯಮವಾಗಲು ಸಮರ್ಥವಾಗಿರುವ ಬಗೆಗೆ ಯಾರೂ ಸಂದೇಹ ಪಡಬೇಕಾಗಿಲ್ಲ’ ಎಂದು ಧೈರ್ಯ ತುಂಬಿದರು. ನಮಗೆ ತಿಳಿದಿರುವ ಜ್ಞಾನ ಜನಸಾಮಾನ್ಯರಿಗೆ ತಿಳಿಯಬೇಕಾದರೆ ಆಯಾ ನಾಡುಗಳು ಆಯಾ ನುಡಿಯಿಂದಲೇ ಅದನ್ನು ಗೊತ್ತು ಮಾಡಿಕೊಳ್ಳಬೇಕು. ಅತ್ಯಂತ ಗಹನವಾದ ವಿಜ್ಞಾನದ ವಿಚಾರಗಳನ್ನು ಕನ್ನಡದಲ್ಲಿ ಹೇಳಬಹುದು. ಇಂಗ್ಲಿಷ್‌ನಲ್ಲಿ ಹೇಳುತ್ತಾ ಇರೋವಾಗ ಸುಮ್ಮನೆ ತಟಸ್ಥರಾಗಿ ಸಮಾಧಿಸ್ಥಿತಿಯಲ್ಲಿ ಎಂಬoತೆ ವಿದ್ಯಾರ್ಥಿಗಳು ಕುಳಿತಿರುತ್ತಾರೆ, ಅನಿಸ್ತೀಸಿಯಾ ಕೊಟ್ಟಂತೆ, ಏನಾದರೂ ಹೇಳಿಕೊಳ್ಳಲಿ ಅನ್ನುವಂತೆ. ಅದನ್ನೇ ನೀವು ಕನ್ನಡದಲ್ಲಿ ಹೇಳಲು ಶುರುಮಾಡಿದಾಗ ಕಣ್ಣಿನಲ್ಲಿ ಹೊಳಪು ಬರುತ್ತದೆ. ಮುಖದಲ್ಲಿ ನಗೆ ಮೂಡುತ್ತದೆ, ಒಂದು ತಿಳಿವಳಿಕೆ ಉಂಟಾಗುತ್ತದೆ. ಕನ್ನಡ ಮಾಧ್ಯಮ ಸಂಪೂರ್ಣವಾಗಿ ಯಶಸ್ವಿಯಾಗಿ ಪ್ರತಿಷ್ಠಾಪಿತವಾಗುವ ತನಕ ಕನ್ನಡಿಗರಿಗೆ ಉದ್ಧಾರವಿಲ್ಲ, ಮೋಕ್ಷವಿಲ್ಲ. ಇಂಗ್ಲೀಷಿನ ಮೂಲಕ ಪಡೆಯುವ ಶಿಕ್ಷಣ ಗಾಳಿಗೋಪುರವಲ್ಲದೆ ಮತ್ತೇನೂ ಆಗಲಾರದು.
ಶಿಕ್ಷಣದ ಕಟ್ಟಡವನ್ನು ಕನ್ನಡದ ಇಟ್ಟಿಗೆಗಳಿಂದ ಕಟ್ಟಿ: ಅದು ಗಟ್ಟಿ!’ ಎಂದರು ಕುವೆಂಪು (Kuvempu).
ಕನ್ನಡ ಕಾವ್ಯದಲ್ಲಿ ರಸವಿಲ್ಲ, ಕನ್ನಡ ಕವಿಗಳಲ್ಲಿ ಸ್ವಂತಿಕೆಯಿಲ್ಲ, ಕನ್ನಡದಲ್ಲಿ ಹುರುಳು, ತಿರುಳುಗಳಿಲ್ಲ, ಗಟ್ಟಿದ್ವನಿಯಿಲ್ಲ ಎನ್ನುವವರ ಮಾತು ಕೇಳಿ ಎದೆಯಲ್ಲಿ ಕತ್ತಿಯಿಂದ ಇರಿದಂತೆ ನೋವಾಗುತ್ತಿದೆ. ಆ ನೋವಿನ ಆಳದಿಂದಲೇ ಘೋಷಿಸುತ್ತಾರೆ:
‘ಕನ್ನಡಾಂಬೆಯ ಮಗನು, ಕನ್ನಡಿಗ ನಾನು! ತಾಯ ನಿಂದೆಯ ಕೇಳಿ ನಡುಗುವುದು ಹೆಮ್ಮೆ!
ಪಂಪ ರನ್ನರ ಹೆತ್ತ ನುಡಿಗೆ ಕುಂದೇನು? ಕವಿ ಚಕ್ರವರ್ತಿಗಳು ಬರುವರಿನ್ನೊಮ್ಮೆ!
ಸರಸ್ವತಿಯೆ ಕನ್ನಡಿಗನಾಸೆಯಿಂದ ಸಲ್ಗೆ! ನನ್ನಮ್ಮ, ತಾಯೆ, ಸಿರಿಗನ್ನಡಂ ಬಾಳ್ಗೆ!
‘ಕನ್ನಡಿಗರ ಸರ್ವತೋಮುಖವಾದ ಉದ್ದಾರ ಕನ್ನಡದಿಂದಲೇ ಸಾಧ್ಯ. ಕನ್ನಡಿಗರಿಗೆ ಕನ್ನಡವೇ ಗತಿ! ಕನ್ನಡಮಾತೆಯ ಸೇವೆಗೆ ನಾವೆಲ್ಲರೂ ಸಿದ್ಧರಾಗಬೇಕೆಂದ ಕವಿ ಕನ್ನಡನಾಡಿನ ರಾಜಧಾನಿಯಲ್ಲಿ ಕನ್ನಡವೇ ಅಗ್ರಗಣ್ಯ ಮತ್ತು ಅಗ್ರಮಾನ್ಯವಾಗಿ ಆಡಳಿತ ಭಾಷೆಯಿಂದ ಹಿಡಿದು ಶಿಕ್ಷಣ ಮಾಧ್ಯಮದವರೆಗೂ ಸರ್ವಕ್ಷೇತ್ರಗಳಲ್ಲಿಯೂ ಸರ್ವಸ್ಥಳಗಳಲ್ಲಿಯೂ ಕನ್ನಡ ಭಾಷೆಗೇ ಅಗ್ರ ಸ್ಥಾನವಿರಬೇಕು. ಆಡಳಿತದಲ್ಲಿ ಕನ್ನಡ ಜಾರಿ ಮಾಡಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡಬೇಕು ಎಂದು ಒತ್ತಾಯಿಸಿದ್ದರು.
ಸಂಸ್ಕೃತ, ಹಿಂದಿ ಇಂಗ್ಲಿಷ್‌ಗಳು ಕನ್ನಡದ ಮೇಲೆ ಸವಾರಿ ಮಾಡಿ ಕನ್ನಡ ವೃಕ್ಷ ಬೆಳೆಯದಂತೆ ಅಡ್ಡವಾಗಿ ನಿಂತಿರುವುದನ್ನು ಗಮನಿಸಿ, ಕನ್ನಡಕ್ಕೆ ಬದಲಾಗಿ ಸಂಸ್ಕೃತ ಓದಿ ಅಂಕಗಳಿಸುವ ಓಟಕ್ಕೆ ಬಿದ್ದ ಮಕ್ಕಳು ತಾಯಿ ಭಾಷೆ ಕನ್ನಡವನ್ನು ಪಕ್ಕಕ್ಕೆ ಸರಿಸಿ, ಜೀವನವಿಡೀ ಕನ್ನಡ ಸವಿಯನ್ನು ಚಪ್ಪರಿಸದೆ ಉಳಿಯುತ್ತಾರಲ್ಲ! ಜನಭಾಷೆಯಾದ ಹಾಗು ಸಾಹಿತ್ಯ ಸೃಷ್ಟಿಯ ಸಮುದ್ರದಂತಿರುವ ಕನ್ನಡ ಭಾಷೆಯ ಸೊಗಸು ಮಕ್ಕಳಿಗೆ ತಿಳಿಯಬಾರದೆ’ ಎಂದು ಬೇಸರಿಸಿದರು. ಕೇಂದ್ರ ಸರ್ಕಾರದ ತ್ರಿಭಾಷ ಸೂತ್ರ ವಾಸ್ತವವಾಗಿ ಕನ್ನಡ ಮಕ್ಕಳ ಎದೆಗೆ ತ್ರಿಶೂಲ ಸದೃಶವೆ ಆಗಿದೆ. ಇದು ಅನ್ಯಭಾಷೆಗಳ ಮೇಲೆ ಹೇರಿಕೆ ಎಂದು ಸ್ಪಷ್ಟವಾಗಿ ನಿರಾಕರಿಸುತ್ತಾ
ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ ಬಾಲಕರ ರಕ್ಷಿಸೈ, ಹೇ ತ್ರಿಣೇತ್ರ ಚೂರು ತಿಂಡಿಗೆ ಸಿಕ್ಕಿಸಿಹರೊ ಈ ಮೂರು ಗಾಳ ನುಂಗದಿದ್ದರೆ ಹಸಿವೆ; ನುಂಗಿದರೆ ಪ್ರಾಣ ಶೂಲ’ ಎಂದರು
ಇoಗ್ಲೀಷನ್ನು ಕನ್ನಡದ ಕಂದಮ್ಮಗಳ ಮೇಲೆ ಒತ್ತಾಯದ ಒತ್ತಡದಿಂದ ಹೇರಿದರೆ ಸಂಭವಿಸಲಿರುವ ಅಪಾಯದ ಬಗ್ಗೆ ಎಚ್ಚರಿಸಿ
ಸಾಯುತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರ ಹೊರ ನುಡಿಯ ಹೊರೆಯಿಂದ ಕುಸಿದು ಕುಗ್ಗಿ ರಾಜ ನುಡಿಯೆಂದೊAದು, ರಾಷ್ಟ ನುಡಿಯೆಂದೊAದು ದೇವ ನುಡಿಯೆಂದೊAದು ಹತ್ತಿ ಜಗ್ಗಿ ನಿರಿನಿಟಲು ನಿಟಿಲೆಂದು ಮುದಿಮೊಳೆ ಮುರಿಯುತಿದೆ ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ! ’ ನಾವು ಇಂಗ್ಲೀಷ್ ದ್ವೇಷಿಗಳಲ್ಲ, ಹಿಂದಿ ದ್ವೇಷಿಗಳೂ ಅಲ್ಲ. ಎಲ್ಲರೂ ಎಲ್ಲವನ್ನೂ ಕಲಿಯಬೇಕೆನ್ನುವ ಬಲವಂತ ಬೇಡ. ಹಿಂದಿಯನ್ನಾಗಲಿ, ಇಂಗ್ಲೀಷನ್ನಾಗಲಿ ಎಲ್ಲರೂ ಕಲಿಯಬೇಕೆನ್ನುವಂಥ ಅವಿವೇಕ ಮತ್ತೊಂದಿಲ್ಲ. ಅದು ದಬ್ಬಾಳಿಕೆಯ ಸೂಚಕ ಎನ್ನುವ ಕವಿ ಹಿಂದಿಯ ಹೇರಿಕೆಯ ವಿರುದ್ಧ ಕನ್ನಡಿಗರು ದನಿ ಎತ್ತಲು ಕರೆಯಿತ್ತರು. ಹಿಂದಿ ಹೇರಿಕೆಯಿಂದ ಹಲವು ಭಾಷೆಗಳು ತಮ್ಮ ಮಹತ್ವ ಕಳೆದುಕೊಳ್ಳುವುದನ್ನು ಮನಗಂಡಿದ್ದ ಕುವೆಂಪು
ಉತ್ತರದ ಕಾಶಿಯಲ್ಲಿ ಕತ್ತೆ ಮಿಂದೈತರಲು ದಕ್ಷಿಣದ ದೇಶಕದು ಕುದುರೆಯಹುದೆ?
ತಾಯಿತ್ತು ಮೊಲೆಹಾಲೆ ನಿಮ್ಮ ಮೈಗಾಗದಿರೆ ಹೊತ್ತ ಹೊರೆ ಬಲಕಾರಿ ನೆತ್ತರಹುದೆ?’
ಉತ್ತರ ದೇಶದ ಕಾಶಿಯಲ್ಲಿ ಮುಳುಗಿದ ಕತ್ತೆ ದಕ್ಷಿಣದ ಕನ್ನಡನಾಡಿಗೆ ಬಂದರದು ಕುದುರೆಯಾಗದು. ಕರ್ನಾಟಕದಲ್ಲಿ ಕನ್ನಡಕ್ಕೇ ಸಾರ್ವಭೌಮ ಸ್ಥಾನವಿರಬೇಕು. ಕನ್ನಡಿಗನಿಗೇ ಸರ್ವ ಮನ್ನಣೆ ಸಲ್ಲಬೇಕೇ ವಿನಾ ಅನ್ಯ ಭಾಷೆ, ಭಾಷಿಕರಿಗಲ್ಲ ಎಂದರು.
ಕುವೆಂಪು (Kuvempu) ಕವನಗಳಲ್ಲಿ ಪ್ರಕೃತಿ ಸೊಬಗು ಕಂಡ ರಸ ಋಷಿ ಕುವೆಂಪು
ರಾಜ ಸತ್ತ, ಆದರೆ ರಾಜ ದೀರ್ಘಾಯುವಾಗಲಿ ಎಂಬ ವ್ಯಂಗ್ಯೋಕ್ತಿಯಂತೆ ಇಂಗ್ಲಿಷರು ಹೋದರೂ ಇಂಗ್ಲಿಷ್ ಹೋಗದೆ ಉಳಿದು ಮಾನಸಿಕ ಗುಲಾಮಗಿರಿ, ವೈಚಾರಿಕ ದಾಸ್ಯ ಮುಂದುವರಿಯಿತು. ವಾಮನನಾಗಿ ಬಂದ ಇಂಗ್ಲಿಷ್ ತ್ರಿವಿಕ್ರಮನಾಯಿತು. ಇಂಗ್ಲಿಷ್‌ನ ವಿಷವನ್ನು ಕನ್ನಡದ ಮಕ್ಕಳಿಗೆ ಕುಡಿಸುವ ಘೋರ ದುರಂತದ ಬಗ್ಗೆ ಎಚ್ಚರಿಸಿದ ಕುವೆಂಪು ಪಾರು ಮಾಡೆಮ್ಮನೀ ಇಂಗ್ಲೀಷಿನಿಂದ, ಪೂತನಿಯ ಅಸುವೀಂಟಿ ಕೊಂದ ಗೋವಿಂದ!’ ಎನ್ನುತ್ತಾ ಕನ್ನಡದ ಸ್ಥಾನವನ್ನು ಇಂಗ್ಲಿಷ್ ಅತಿಕ್ರಮಿಸಿ ಕನ್ನಡವನ್ನು ಅಸಹಾಯಕ ಸ್ಥಿತಿಗೆ ದೂಡಿದ್ದಕ್ಕೆ ಆಡಳಿತಗಾರರು,
ಕನ್ನಡ ಜನರೇ ಕಾರಣವೆಂದು ನೊಂದು ಕತ್ತಿ ಪರದೇಶಿಯಾದರೆ ಮಾತ್ರ ನೋವೆ? ನಮ್ಮವರೇ ಹದಹಾಕಿ ತಿವಿದರದು ಹೂವೆ’ ಎಂದು ವ್ಯಂಗ್ಯವಾಡಿದ್ದರು.
ಕನ್ನಡಕ್ಕಾಗಿ ಕೈಯೆತ್ತು; ನಿನ್ನ ಕೈ ಕಲ್ಪವೃಕ್ಷವಾಗುತ್ತದೆ!
ಕನ್ನಡಕ್ಕಾಗಿ ಕೊರಳೆತ್ತು; ಅಲ್ಲಿ ಪಾಂಚಜನ್ಯ ಮೂಡುತ್ತದೆ!
ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು ಅದೇ ಗೋವರ್ಧನ ಗಿರಿಧಾರಿಯಾಗುತ್ತದೆ’
ಎಂದು ಕನ್ನಡಿಗರಿಗೆ ಕನ್ನಡದ ದೀಕ್ಷೆ ತೊಡಲು ಕರೆ ನೀಡಿದ್ದರು. ನಾಡು-ನುಡಿಗೆ ಕುತ್ತು ಬಂದಾಗ ಬೀದಿಗಿಳಿದು ಪ್ರತಿಭಟಿಸುವ ಚಳವಳಿಗಾರರನ್ನು ಕಲ್ಲು ಹೊಡೆಯುವವರೆಂದು ಮೂದಲಿಸುತ್ತಿದ್ದವರಿಗೆ `ಕಲ್ಲೊ ಸೊಲ್ಲೋ, ಅದು ಕನ್ನಡಕ್ಕೆ ಅನಿವಾರ್ಯ’ವೆಂದು ಕುವೆಂಪು ನುಡಿದಿದ್ದರು.
ಕನ್ನಡ ಕಷ್ಟ ಎನ್ನುವವರಿಗೆ ನೀವು ತಿಳಿದಿದ್ದನ್ನು ನಿಮ್ಮ ಭಾಷೆಯಲ್ಲಿ ಇತರರಿಗೆ ಹೇಳಲು ಸಾಧ್ಯವಿಲ್ಲ ಎಂದರೆ ಅದರ ಅರ್ಥ ಇಷ್ಟೆ ‘ನೀನು ಏನೂ ವಿಷಯ ತಿಳಿದೇ ಇಲ್ಲ’ ಎಂದು ಚಾಟಿ ಬೀಸಿದ್ದರು. ಆದ್ದರಿಂದಲೆ
ನೀವು ಇಲ್ಲಿ ಕನ್ನಡಕ್ಕೆ ಕನ್ನಡದವರಿಗೆ ಎಡೆ ಕೊಡದಿದ್ದರೆ, ಸ್ಥಾನಮಾನ ಕೊಡದಿದ್ದರೆ ಜಗತ್ತಿನ ಮತ್ಯಾವ ಭಾಗವೂ ಕನ್ನಡದ ಕೈ ಹಿಡಿಯುವುದಿಲ್ಲ. ನೀವು ಕೈಬಿಟ್ಟರೆ ಅದಕ್ಕೆ ಸಮುದ್ರವೇ ಗತಿ’ ಎಂದು ಮೊದಲ ವಿಶ್ವಕನ್ನಡ ಸಮ್ಮೇಳನದ ಉದ್ಘಾಟನಾ ನುಡಿಯಲ್ಲಿ ಕರೆಯಿತ್ತರು
ಹೇ ರಾಜಕಾರಣಿ, ಹೇ ಮಂತ್ರಿವರೇಣ್ಯ, ಹೇ ಅಧಿಕಾರಿ ಸರ್ವೋತ್ತಮ, ಹೇ ವಣಿಗ್ವರ, ಹೇ ಶ್ರಮಜೀವಿ, ಹೇ ಅಧ್ಯಾಪಕ ಮಹಾಶಯ, ಹೇ ನೇಗಿಲಯೋಗಿ, ಹೇ ಪ್ರಿಯ ವಿದ್ಯಾರ್ಥಿ, ನೀನು ಯಾರೇ ಆಗಿರು, ಎಲ್ಲಿಯೇ ಇರು, ಕನ್ನಡವನು ಕೈ ಬಿಡದಿರು’ ಎನ್ನುವುದು ಕುವೆಂಪು ಕೋರಿಕೆಯಾಗಿತ್ತು.
ಕನ್ನಡದ ವಿಷಯದಲ್ಲಿ ನಾನು ಟ್ಯಾಂಕರಿನAತೆ ಮುನ್ನುಗ್ಗುತ್ತೇನೆ. ನೀವು ದಾರಿ ಬಿಟ್ಟುಕೊಟ್ಟಿರೋ ಸರಿ, ಇಲ್ಲವೋ ಅಪ್ಪಚ್ಚಿಯಾಗುತ್ತೀರಿ’ ಎಂದು ಎಚ್ಚರಿಸಿ ಕನ್ನಡಿಗರು ವಿನಯಕ್ಕಾಗಿ ಬಗ್ಗಿ ನಡೆಯಬಹುದು ಆದರೆ ರಿಕ್ತರಂತೆ ಕುಗ್ಗಿ ನಡೆಯಬೇಕಾಗಿಲ್ಲ’ ಎಂದರು. ಕನ್ನಡದ ಕಲ್ಯಾಣಕ್ಕಾಗಿ ಕಾತರಿಸಿದ ಕವಿ ಎಂತಹ ಅಡೆತಡೆ ಬಂದರೂ, ಕುಗ್ಗದೆ.
ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡ ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವ ತನಕ ನನ್ನ ಪ್ರಾಣವಿರುವತನಕ ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ದುಡಿಯಲು ವ್ಯಕ್ತಿಗಳನ್ನು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲಾ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡ ಸೇವೆಗಾಗಿ ಮೀಸಲಿಡುತ್ತೇನೆಂದವರು. ಕನ್ನಡಕ್ಕೆ ಮುಡಿಪಾಗಿ ತಮ್ಮನ್ನು ಸಮರ್ಪಿಸಿಕೊಂಡು ತಮ್ಮ ತಪಶ್ಯಕ್ತಿಯನ್ನು ಕನ್ನಡ ನಾಡು ನುಡಿಗಳ ಹಿರಿಮೆಗಾಗಿ ಧಾರೆ ಎರೆದು ಬದುಕಿನ ಪ್ರತಿಕ್ಷಣವನ್ನು ಕನ್ನಡಕ್ಕೆ ಕಾಯ್ದಿರಿಸಿದ ಕುವೆಂಪು (Kuvempu) ಕನ್ನಡದ ಪೆಂಪು.
(Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu) (Kuvempu)
Kuvempu in kannada, About kuvempu, karnataka jnanapeeta, kannada kuvempu
ವೆಂಕಣ್ಣಯ್ಯ ಅವರು ಕುವೆಂಪು ಅವರನ್ನು ಕರೆದು, ಏನಯ್ಯ, ರಾಜಕುಮಾರರಿಗೆ 17 ಅಂಕ ನೀಡಿದ್ದೀಯಲ್ಲ' ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಕುವೆಂಪು,
ನಾನು ನೀಡಿದ್ದಲ್ಲ. ಅವರು ತೆಗೆದುಕೊಂಡಿದ್ದು ಅಷ್ಟು’ ಎಂದು ಉತ್ತರಿಸಿದರು. ಅದನ್ನು 71 ಮಾಡಲು ಸಾಧ್ಯವಿಲ್ಲವೇ?' ಎಂದು ವೆಂಕಣ್ಣಯ್ಯ ಕೇಳಿದಾಗ,
ಉತ್ತರ ಪತ್ರಿಕೆಯನ್ನು ನೀವೇ ನೋಡಿ. ಎಷ್ಟು ಬೇಕಾದರೂ ಅಂಕ ಕೊಡಿ’ ಎಂದು ಕುವೆಂಪು ಹೇಳಿದರಂತೆ.
ಇದರಿಂದ ಮಹಾರಾಜರೇನೂ ಸಿಟ್ಟಾಗಲಿಲ್ಲ. ಬದಲಿಗೆ ಕುವೆಂಪು ಅವರಿಗೆ ವಾರಕ್ಕೆ ಮೂರು ದಿನ ಅರಮನೆಗೆ ಬಂದು ಯುವ ರಾಜರಿಗೆ ಪಾಠ ಮಾಡಿ. ನಿಮ್ಮನ್ನು ಕರೆದುಕೊಂಡು ಬರಲು ಕಾರು ಕಳುಹಿಸಲಾಗುತ್ತದೆ. ಅಲ್ಲದೆ ನೂರು ರೂಪಾಯಿ ಸಂಭಾವನೆ ನೀಡಲಾಗುತ್ತದೆ ಎಂದು ಹೇಳಿದರಂತೆ. ಆದರೆ ಅದಕ್ಕೂ ಕುವೆಂಪು ಒಪ್ಪಲಿಲ್ಲ. ಮಹಾರಾಜರ ಆಹ್ವಾನವನ್ನು ತಿರಸ್ಕರಿಸಿದ್ದೇ ಅಲ್ಲದೆ ಒಂದು ಕವನವನ್ನೂ ಬರೆದರು.
ವಸಂತ ವನದಲ್ಲಿ ಕೂಗುವ ಕೋಗಿಲೆ
ರಾಜರ ಬಿರುದನ್ನು ಬಯಸುವುದಿಲ್ಲ
ಕವಿಗೆ ಅರಸುಗಿರಸುಗಳ ಋಣವಿಲ್ಲ
ಅವನು ಅಗ್ನಿಮುಖಿ ಪ್ರಳಯ ಶಿಖಿ
ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಇನ್ನೂ ಮಾನಸ ಗಂಗೋತ್ರಿಗೆ ಸಂಪೂರ್ಣವಾಗಿ ಸ್ಥಳಾಂತರವಾಗಿರಲಿಲ್ಲ. ಸ್ಥಳಾಂತರಕ್ಕೆ ಸಾಕಷ್ಟು ಮಂದಿಯ ವಿರೋಧ ಕೂಡ ಇತ್ತು. ಮಾನಸ ಗಂಗೋತ್ರಿಗೆ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸುವ ಸಾಹಸದಲ್ಲಿ ಕುವೆಂಪು ನಿರತರಾಗಿದ್ದರು.
ಮಾಜಿ ಕೇಂದ್ರ ಸಚಿವರೂ ಆಗಿದ್ದ ಸಿ.ಡಿ.ದೇಶಮುಖ್ ಅವರು ಆಗ ಯುಜಿಸಿ ಅಧ್ಯಕ್ಷರಾಗಿದ್ದರು. ಅವರು ಒಮ್ಮೆ ತಮ್ಮ ಪತ್ನಿ ಜೊತೆಗೆ ಕೃಷ್ಣರಾಜಸಾಗರಕ್ಕೆ ಬಂದು ಉಳಿದುಕೊಂಡಿದ್ದರು. ಹೀಗೆ ಬಂದ ದೇಶಮುಖ್ ಅವರಿಗೆ ಜ್ವರ ಬಂದು ನಾಲ್ಕು ದಿನ ಇಲ್ಲಿಯೇ ಉಳಿದುಕೊಳ್ಳುವಂತೆ ಆಯಿತು. ಆಗ ಪ್ರತಿ ದಿನ ಕುವೆಂಪು ಕೆಆರ್‌ಎಸ್‌ಗೆ ಹೋಗಿ ಅವರನ್ನು ನೋಡಿಕೊಂಡು ಬರುತ್ತಿದ್ದರಂತೆ. ದೇಶಮುಖ್ ಅವರ ಪತ್ನಿ ಒಳ್ಳೆ ಕವಯತ್ರಿ. ಕುವೆಂಪು ಅವರು ಅಲ್ಲಿಗೆ ಹೋದಾಗ ಇವರೊಂದು ಅವರೊಂದು ಕವನ ವಾಚಿಸುತ್ತಿದ್ದರಂತೆ.
ಆಗಿನ್ನು ಮೈಸೂರು ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ಯುಜಿಸಿ ವೇತನ ಸಿಗುತ್ತಿರಲಿಲ್ಲ. ಕುವೆಂಪು ಈ ಬಗ್ಗೆ ದೇಶಮುಖ್ ಅವರಲ್ಲಿ ಪ್ರಸ್ತಾಪಿಸಿದಾಗ, `ನಿಮ್ಮ ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಕಳುಹಿಸಿದರೆ ತಕ್ಷಣವೇ ಅದಕ್ಕೆ ಒಪ್ಪಿಗೆ ಕೊಡುತ್ತೇನೆ’ ಎಂಬ ಭರವಸೆಯನ್ನು ನೀಡಿದರು.
ಖುಷಿಯಾದ ಕುವೆಂಪು ಈ ಬಗ್ಗೆ ಚರ್ಚೆ ನಡೆಸಲು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಮ್ಮನ್ನು ಕಾಣಲು ಬರಬೇಕು. ನಿಮ್ಮ ಸಮಯ ತಿಳಿಸಿ' ಎಂದು ಕೇಳಿಕೊಂಡರು. ಅದಕ್ಕೆ ನಿಜಲಿಂಗಪ್ಪ
ನೀವು ನನ್ನನ್ನು ನೋಡಲು ಇಲ್ಲಿಗೆ ಬರುವುದಾ? ನನಗೆ ಅವಮಾನ ಮಾಡಬೇಡಿ. ನಮ್ಮ ಶಿಕ್ಷಣ ಸಚಿವರನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ. ಅವರಲ್ಲಿ ನಿಮ್ಮ ಎಲ್ಲ ಸಮಸ್ಯೆಗಳನ್ನು ಚರ್ಚೆ ಮಾಡಿ. ನಾನು ಎಲ್ಲ ಅನುಕೂಲ ಮಾಡಿಕೊಡುತ್ತೇನೆ’ ಎಂದು ಉತ್ತರಿಸಿದರು.
ಅದರಂತೆ ಆಗಿನ ಶಿಕ್ಷಣ ಸಚಿವ ವಿ.ವೆಂಕಟಪ್ಪ ಕುವೆಂಪು ಅವರ ಬಳಿಗೆ ಬಂದು ವಿಶ್ವವಿದ್ಯಾಲಯದ ಸಮಸ್ಯೆಗಳನ್ನು ಆಲಿಸಿದರು. ಯುಜಿಸಿಗೆ ಸೂಕ್ತ ಪ್ರಸ್ತಾವನೆಯನ್ನೂ ಸಲ್ಲಿಸಿದರು. ಅಲ್ಲದೆ ಮಾನಸ ಗಂಗೋತ್ರಿಯಲ್ಲಿ ಸಂಚರಿಸಿ ಅಲ್ಲಿ ಮೂರು ಕಟ್ಟಡಗಳನ್ನು ನಿರ್ಮಿಸಲು ಸಂಪೂರ್ಣವಾಗಿ ರಾಜ್ಯ ಸರ್ಕಾರದಿಂದ ಅನುದಾನವನ್ನು ನೀಡಲು ಒಪ್ಪಿಕೊಂಡರು.
*
ಕುವೆಂಪು ಅವರು ಕರ್ನಾಟಕ ಏಕೀಕರಣದ ಪರವಾಗಿದ್ದರು. ಇದರಿಂದ ಮೈಸೂರು ಭಾಗದ ರಾಜಕಾರಣಿಗಳು ಸಿಟ್ಟಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕುವೆಂಪು ಅವರಿಗೆ ಒಂದು ನೋಟಿಸ್ ಜಾರಿ ಮಾಡಿತು. ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವ ತಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಸರ್ಕಾರ ಕೇಳಿತು. ಅದಕ್ಕೆ ಕುವೆಂಪು ಪದ್ಯದ ರೂಪದಲ್ಲಿಯೇ ಉತ್ತರ ಬರೆದರು. ಆ ಪದ್ಯವೇ ಕುವೆಂಪು ಅವರ ಪ್ರಸಿದ್ಧ `ಅಖಂಡ ಕರ್ನಾಟಕ’ ಪದ್ಯ.
ರಾಜ್ಯ ಸರ್ಕಾರದ ನೋಟಿಸ್‌ಗೆ ಕುವೆಂಪು ಉತ್ತರ ಹೀಗಿದೆ:
ಅಖಂಡ ಕರ್ನಾಟಕ
ಅಲ್ತೊ ನಮ್ಮ ಕೂಗಾಟದ ರಾಜಕೀಯ ನಾಟಕ
ಹರಸುತಿಹನು ದೇವ ಗಾಂಧಿ
ಮಂತ್ರಿಸಿಹುದು ಋಷಿಯ ನಾಂದಿ
*
ಅಖಂಡ ಕರ್ನಾಟಕ
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ
*
ನೃಪತುಂಗನೇ ಚಕ್ರವರ್ತಿ
ಪಂಪನಲ್ಲಿ ಮುಖ್ಯಮಂತ್ರಿ
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ
*
ಕುವೆಂಪು ಅವರ ಪದ್ಯರೂಪದ ಉತ್ತರ ರಾಜಕಾರಣಿಗಳನ್ನು ಇನ್ನಷ್ಟು ಕೆರಳಿಸಿತು. ಅವರನ್ನು ಮೆಳ್ಳಗಣ್ಣು ಎಂದು ಟೀಕಿಸಿದ್ದು ಕೂಡ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತೆ ಆಗಿತ್ತು. ಮೈಸೂರಿನಲ್ಲಿ ಕೆಲವರು ಈ ಪದ್ಯವನ್ನು ಸಾವಿರಾರು ಪ್ರತಿ ಮಾಡಿ ಹಂಚಿಬಿಟ್ಟರು. ವಿಷಯ ಸಚಿವ ಸಂಪುಟದ ಮುಂದೆ ಬಂತು. ಆಗ ಮುಖ್ಯಮಂತ್ರಿಯಾಗಿದ್ದವರು ಕೆ.ಸಿ.ರೆಡ್ಡಿ. ಸಂಪುಟ ಸಭೆಯಲ್ಲಿ ಕೆಲವು ಸಚಿವರು ಕುವೆಂಪು ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಅವರ ಬಡ್ತಿ ರದ್ದು ಮಾಡಬೇಕು. ಇನ್ನೊಂದು ನೋಟಿಸ್ ನೀಡಬೇಕು ಎಂದೆಲ್ಲಾ ಒತ್ತಾಯಿಸಿದರು.
ಆಗ ಕೆ.ಸಿ.ರೆಡ್ಡಿ ಅವರು `ಒಂದು ನೋಟಿಸ್‌ಗೆ ಈ ಪದ್ಯ ಬರೆದಿದ್ದಾರೆ. ಇನ್ನೊಂದು ನೋಟಿಸ್ ನೀಡಿದರೆ ಮತ್ತೆ ಮೂರು ಪದ್ಯ ಬರೆಯಬಹುದು. ಬೆಂಕಿಯ ಜೊತೆ ಸರಸ ಒಳ್ಳೆಯದಲ್ಲ’ ಎಂದು ಹೇಳಿ ಈ ಬಗ್ಗೆ ತಾವು ವಿಚಾರಣೆ ನಡೆಸುವುದಾಗಿ ಹೇಳಿದರು.
ಅದರಂತೆ ಕೆ.ಸಿ.ರೆಡ್ಡಿ ಅವರು ನಿಟ್ಟೂರು ಶ್ರೀನಿವಾಸರಾಯರ ಬಳಿ ಈ ಬಗ್ಗೆ ಚರ್ಚೆ ನಡೆಸಿದರು. ಆಗ ನಿಟ್ಟೂರು ಶ್ರೀನಿವಾಸರಾಯರು ಪುಟ್ಟಪ್ಪ ಕೈ ಎತ್ತಿದರೆ ಕರ್ನಾಟಕವೇ ಕೈ ಎತ್ತುತ್ತದೆ. ಅದಕ್ಕಾಗಿ ನೋಟಿಸ್ ವಾಪಸು ಪಡೆಯುವುದೇ ಸೂಕ್ತ' ಎಂದು ಮುಖ್ಯಮಂತ್ರಿಗೆ ಸಲಹೆ ಮಾಡಿದರು. ರೆಡ್ಡಿ ಅವರು ಕುವೆಂಪು ಅವರಿಗೆ ನೀಡಿದ್ದ ನೋಟಿಸ್ ವಾಪಸು ಪಡೆದರು. * 1929ರ ವೇಳೆಗೆ ಕುವೆಂಪು ಇನ್ನೂ ಯುವಕರು. ಶ್ರೀರಂಗಪಟ್ಟಣದಲ್ಲಿ ಒಂದು ಭಾಷಣ ಮಾಡಿದರು.
ನಿರಂಕುಶಮತಿಗಳಾಗಿ’ ಎಂದು ಜನರಿಗೆ ಕರೆ ನೀಡಿದರು. ಸರ್ಕಾರದ ವಿರುದ್ಧ, ಮೂಢ ನಂಬಿಕೆಗಳ ವಿರುದ್ಧ ಅವರು ಮಾತನಾಡಿದ್ದು ಕೂಡ ಅಧಿಕಾರಸ್ಥರನ್ನು ಕೆರಳಿಸಿತು. ಈ ಬಗ್ಗೆ ವರದಿ ನೀಡುವಂತೆ ಟಿ.ಎಸ್.ವೆಂಕಣ್ಣಯ್ಯ ಅವರನ್ನು ಕೇಳಿಕೊಳ್ಳಲಾಯಿತು. ವೆಂಕಣ್ಣಯ್ಯ ಅವರು ಕುವೆಂಪು ಅವರ ಭಾಷಣವನ್ನು ಪರಿಶೀಲಿಸಿ `ನನ್ನ ಮಗನಿಗೆ ಬುದ್ಧಿ ಹೇಳಿ ಎಂದು ಯಾರಾದರೂ ಹೇಳಿದರೆ ನಾನು ಇದಕ್ಕಿಂತ ಚೆನ್ನಾಗಿ ಹೇಳಲಾಗದು’ ಎಂದು ಸರ್ಕಾರಕ್ಕೆ ವರದಿ ನೀಡಿದರು. ಅದು ಅಲ್ಲಿಗೇ ನಿಂತಿತು
*
ಕುವೆಂಪು ಅವರಿಗೆ ವಿನೋಬಾ ಭಾವೆ ಅವರನ್ನು ಕಂಡರೆ ತುಂಬಾ ಗೌರವ. ಯಾವಾಗಲೂ ಅವರನ್ನು ಹೊಗಳುತ್ತಿದ್ದರು. ಒಮ್ಮೆ ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ಕಾರ್ಯಕ್ರಮ. ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಅಧ್ಯಕ್ಷತೆ. ಕುವೆಂಪು ಅತಿಥಿಗಳು. ಕುವೆಂಪು ತಮ್ಮ ಭಾಷಣದಲ್ಲಿ ವಿನೋಬಾ ಅವರನ್ನು ಸಾಕಷ್ಟು ಹೊಗಳಿದರು. ಇದು ಕೆಂಗಲ್ ಅವರಿಗೆ ಸರಿಕಾಣಲಿಲ್ಲ. ಅವರು ತಮ್ಮ ಭಾಷಣದಲ್ಲಿ ಕುವೆಂಪು ಅವರು ವಿನೋಬಾ ಅವರನ್ನು ಹೊಗಳಿದ್ದು ಹೆಚ್ಚಾಯಿತು ಎಂದರು. ಇದರಿಂದ ಕುವೆಂಪು ಸಿಟ್ಟಾದರಲ್ಲದೆ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು. ಕೆಂಗಲ್ ಕಸಿವಿಸಿಗೊಂಡರು. ಈ ಸುದ್ದಿ ಯಾವ ಪತ್ರಿಕೆಯಲ್ಲೂ ಬರದಂತೆ ನೋಡಿಕೊಂಡರು.
ಆದರೆ ಈ ಘಟನೆ ಕೆಂಗಲ್ ಮತ್ತು ಕುವೆಂಪು ಅವರ ಸಂಬಂಧವನ್ನು ಹಾಳು ಮಾಡಲಿಲ್ಲ. ಮುಂದೆ ಕುವೆಂಪು ಅವರನ್ನು ಮಹಾರಾಜ ಕಾಲೇಜು ಪ್ರಾಂಶುಪಾಲರನ್ನಾಗಿ ಮಾಡಿದ್ದು ಮತ್ತು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ಮಾಡಿದ್ದು ಕೂಡ ಕೆಂಗಲ್ ಹನುಮಂತಯ್ಯ ಅವರೆ.
ಕೆಂಗಲ್ ಹನುಮಂತಯ್ಯ ಅವರ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿತ್ತು. ಅವರನ್ನು ಕೆಳಕ್ಕೆ ಇಳಿಸಲು ಕಸರತ್ತುಗಳು ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಒಮ್ಮೆ ಕುವೆಂಪು ಅವರು ಕೆಂಗಲ್ ಹುನುಮಂತಯ್ಯ ಅವರನ್ನು ನೋಡಲು ಅವರ ಮನೆಗೆ ಹೋದರು. ಆಗ ಹನುಮಂತಯ್ಯ ಪ್ಲೇಟೋನ `ರಿಪಬ್ಲಿಕ್’ ಪುಸ್ತಕವನ್ನು ಓದುತ್ತಿದ್ದರು. ಅದನ್ನು ಕಂಡು ಕುವೆಂಪು ಅವರಿಗೆ ಅಚ್ಚರಿಯಾಯಿತು.
`ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ. ನಿಮ್ಮ ವಿರೋಧಿಗಳು ದಿನಕ್ಕೊಂದು ಆರೋಪ ಮಾಡುತ್ತಿದ್ದಾರೆ. ಆದರೂ ನೀವು ಶಾಂತವಾಗಿ ರಿಪಬ್ಲಿಕ್ ಓದುತ್ತಿದ್ದೀರಲ್ಲ?’ ಎಂದು ಕೆಂಗಲ್‌ರನ್ನು ಕುವೆಂಪು ಕೇಳಿದರು.
ಪುಟ್ಟಪ್ಪ, ನಾನು ನನ್ನ ಬದುಕಿನಲ್ಲಿ ಹಲವಾರು ಬಾರಿ ಆತ್ಮಹತ್ಯೆಗೆ ಮನಸ್ಸು ಮಾಡಿದ್ದೆ. ಆಗೆಲ್ಲಾ ನನ್ನನ್ನು ರಕ್ಷಿಸಿದ್ದು ರಾಮಾಯಣ, ಮಹಾಭಾರತ, ಪ್ಲೇಟೊ, ಅರಿಸ್ಟಾಟಲ್ ಮುಂತಾದವರು. ಈಗ ಅದೆಲ್ಲಾ ಯಾಕೆ. ನೀವು ಅಕ್ಷರದಲ್ಲಿ ಮಹಾಕಾವ್ಯ ರಚಿಸಿದ್ದೀರಿ. ನಾನು ಕಲ್ಲಿನಲ್ಲಿ ಮಹಾಕಾವ್ಯ ರಚಿಸಿದ್ದೇನೆ. ನೋಡೋಣ ಬನ್ನಿ' ಎಂದು ಕುವೆಂಪು ಅವರನ್ನು ವಿಧಾನಸೌಧ ತೋರಿಸಲು ಕರೆದುಕೊಂಡು ಹೋದರು. ಈ ಘಟನೆ ನಡೆದಾಗ ದೇಜಗೌ ಅವರು ಕುವೆಂಪು ಅವರೊಂದಿಗೆ ಇದ್ದರು. * ಒಮ್ಮೆ ವಿನೋಬಾ ಭಾವೆ ಅವರು ಮೈಸೂರಿಗೆ ಬಂದಿದ್ದರು. ಅವರನ್ನು ಕಾಣಲು ಕುವೆಂಪು ಹೋದರು. ಕುವೆಂಪು ಅವರ
ರಾಮಾಯಣ ದರ್ಶನಂ’ ಕಾವ್ಯವನ್ನು ವಿನೋಬಾ ಭಾವೆ ಅವರೂ ಓದಿದ್ದರು. ಭಾವೆ ಅವರನ್ನು ಭೇಟಿ ಮಾಡಿ ಹೊರಡುವಾಗ ಕುವೆಂಪು ಅವರಿಗೆ ವಿನೋಬಾ ಅವರು, ನೀವು ನಿಮ್ಮ ಮನೆಗೆ ನನ್ನನ್ನು ಕರೆದೇ ಇಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಕುವೆಂಪು ಉತ್ತರ
ಧನ್ಯೋಸ್ಮಿ’ ಎಂದಷ್ಟೆ.
ನಂತರ ವಿನೋಬಾ ಕುವೆಂಪು ಅವರ ಉದಯ ರವಿ'ಗೆ ಬಂದರು. ಕುವೆಂಪು
ರಾಮಾಯಣ ದರ್ಶನಂ’ ಬರೆದ ಜಾಗವನ್ನು ಕೇಳಿ ತಿಳಿದುಕೊಂಡು ಅಲ್ಲಿಯೇ ಕೊಂಚ ಕಾಲ ಧ್ಯಾನಸ್ಥರಾಗಿ ಕುಳಿತುಕೊಂಡರು. ಕೆಲವರಿಂದ ರಾಮಾಯಣ ದರ್ಶನಂ'ನ ಕೆಲವು ಭಾಗಗಳನ್ನು ಮತ್ತೆ ಓದಿಸಿಕೊಂಡರು. ನಂತರ ಪುರಭವನದಲ್ಲಿ ನಡೆದ ಸಮಾರಂಭದಲ್ಲಿಯೂ ಕುವೆಂಪು ಅವರನ್ನು
ಸಂತ’ ಎಂದು ಕರೆದು ಹೊಗಳಿದರು.
*
ಕುವೆಂಪು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗ ಕೆಲವು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿತ್ತು. ಆಗ ಒಬ್ಬ ಸಚಿವರು ಕುವೆಂಪು ಅವರಿಗೆ ಫೋನ್ ಮಾಡಿ ತಮ್ಮ ಕಡೆಯವರನ್ನು ಆಯ್ಕೆ ಮಾಡಿಕೊಳ್ಳುವಂತೆ ಒತ್ತಡ ಹೇರಿದರು. ಕುವೆಂಪು ನಿರಾಕರಿಸಿದರು. ಅದಕ್ಕೆ ಸಚಿವರು ನನ್ನ ಮಾತನ್ನೇ ಕೇಳುವುದಿಲ್ಲವೇ ನಿಮ್ಮನ್ನು ನೋಡಿಕೊಳ್ಳುತ್ತೇನೆ' ಎಂದರು. ಆಗ ಕುವೆಂಪು
ಏನ್ ನೋಡಿಕೊಳ್ಳುತ್ತೀಯಾ, ರ‌್ಯಾಸ್ಕಲ್’ ಎಂದು ಫೋನ್ ಇಟ್ಟುಬಿಟ್ಟರು. ಈ ಘಟನೆಗೂ ತಾವೇ ಸಾಕ್ಷಿ ಎಂದು ದೇಜಗೌ ಹೇಳುತ್ತಾರೆ.
*
ರಾಜಕೀಯ ಮತ್ತು ರಾಜಕಾರಣದ ಬಗ್ಗೆ ಕುವೆಂಪು ಅವರಿಗೆ ಸಿಟ್ಟಿತ್ತು. ಅವರು ತಮ್ಮ `ವಿಚಾರ ಕ್ರಾಂತಿಗೆ ಆಹ್ವಾನ’ ಎಂಬ ಭಾಷಣದಲ್ಲಿ ರಾಜಕೀಯದ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ನೀತಿ ಸೂಕ್ತಿಗಳನ್ನು ಸಾಮೂಹಿಕವಾಗಿ ಯಾಂತ್ರಿಕವಾಗಿ ಉಚ್ಚರಿಸಿ ಪ್ರತಿಜ್ಞೆ ಮಾಡಿದ್ದ ಲಕ್ಷಾಂತರ ಸ್ನಾತಕರೇ ಇಂದು ರಾಜಕೀಯ ರಂಗದಲ್ಲಿ, ಆರ್ಥಿಕ, ಅಧಿಕಾರ, ಶಿಕ್ಷಣ ರಂಗದಲ್ಲಿ ನಿರ್ಲಜ್ಜರಾಗಿ ಪಾಪಮಯ ಭ್ರಷ್ಟಾಚಾರದಲ್ಲಿ ತೊಡಗಿ ದೇಶವನ್ನು ದುರ್ಗತಿಗೆ ಒಯ್ಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ನಮ್ಮಲ್ಲಿ ಡೆಮಾಕ್ರಸಿ
' ಎನ್ನುವುದು ಬರಿಯ
ಮಾಕರಿ’ಯಾಗಿದೆ. ಕೋಟ್ಯಧೀಶರಲ್ಲದವರು ಚುನಾವಣೆಯಲ್ಲಿ ಗೆಲ್ಲುವುದು ಹಾಗಿರಲಿ, ನಿಲ್ಲುವುದು ಕೂಡ ಅಸಾಧ್ಯವಾಗಿದೆ. ಜಾತಿ, ಮತ, ಹೆಂಡ, ದುಡ್ಡು ಇವೇ ಓಟರುಗಳಾಗಿವೆ. ಓಟು ಕೊಡುವ ಪ್ರಜೆಗಳು ಬರಿಯ ನಿಮಿತ್ತ ಮಾತ್ರ. ಮೂಕ ವಾಹನಗಳಷ್ಟೆ. ನಾಲ್ಕಾರು ಜನ ಯಾತಕ್ಕೂ ಹೇಸದ ಖದೀಮರು ಸೇರಿ ಯಾವ ಉಪಾಯದಿಂದಾದರೂ ಕಾಳಸಂತೆಯ ಕಪ್ಪು ಹಣವೋ, ಕಳ್ಳ ಸಾಗಾಣಿಕೆಯ ಹಳದಿ ಹಣವೋ ಅಂತೂ ಹೆಚ್ಚು ಹಣ ಒಟ್ಟು ಮಾಡಿದರಾಯ್ತು ಚುನಾವಣೆ ಗೆಲ್ಲಬಹುದು.
ಒಮ್ಮೆ ಗೆದ್ದು ಅಧಿಕಾರ ಹಿಡಿದರಾಯ್ತು. ನಾಡಿನ ಸರ್ವ ಪ್ರಚಾರ ಮಾರ್ಗಗಳನ್ನು ಅಧಿಕಾರದ ಭಯದಿಂದಲೋ ದುಡ್ಡಿನ ಬಲದಿಂದಲೋ ವಶಪಡಿಸಿಕೊಳ್ಳಬಹುದು. ಒಮ್ಮೆ ಜನಶಕ್ತಿ ಪ್ರತಿಭಟನೆಗೆ ನಿಂತರೂ ಪೊಲೀಸ್, ಸೇನೆ ಬಳಸಿ ವಿಫಲಗೊಳಿಸಬಹುದು ಎಂದು ಅವರು ಆಗಲೇ ಸಿಟ್ಟು ಕಾರಿದ್ದರು. ಗುಡುಗಿದ್ದ
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ