ಭಾದ್ರಪದ ಮಾಸದ ಕೃಷ್ಣ ಪಕ್ಷದ ರೋಹಿಣಿ ನಕ್ಷತ್ರದ ಅಷ್ಟಮಿ ತಿಥಿಯಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ವಿಷ್ಣುವಿನ ಎಂಟನೇ ಅವತಾರ ಗೋಕುಲಾನಂದನ ಶ್ರೀಕೃಷ್ಣ ,ಈ ದಿನ ಮಧ್ಯ ರಾತ್ರಿ ಶ್ರೀ ಕೃಷ್ಣ ಜನಿಸಿದ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.
ಈ ಶುಭ ದಿನದಂದು ಇಡೀ ದೇಶಾದ್ಯಂತ ಸಡಗರ ಸಂಭ್ರಮದಿಂದ ಶ್ರೀ ಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸಲಾಗುವುದು. ಈ ಅವಧಿಯಲ್ಲಿ ಶ್ರೀ ಕೃಷ್ಣನ ದೇವಸ್ಥಾನಗಳನ್ನು ಸಿಂಗರಿಸಲಾಗುತ್ತದೆ ಮತ್ತು ಮನೆಗಳಲ್ಲಿಯೂ ಕೂಡ ತೊಟ್ಟಿಲನ್ನು ಸಿಂಗರಿಸಲಾಗುತ್ತದೆ. ಪಂಚ್ಯಖಾದ್ಯ ನೈವೇದ್ಯ ತಯಾರಿಸಿ ಶ್ರೀಕೃಷ್ಣನಿಗೆ ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ.
ದೇಶಾದ್ಯಂತ ಶ್ರೀಕೃಷ್ಣ ಜಯಂತಿಯನ್ನು ಆಚರಿಸುವ ಜನರು ಶ್ರೀಕೃಷ್ಣ ಜನಿಸಿದ ಮಧ್ಯರಾತ್ರಿಯವರೆಗೂ ಈ ದಿನದಂದು ಉಪವಾಸ ಮಾಡುತ್ತಾರೆ. ಮತ್ತು ಭಜನೆ , ಭಗವದ್ಗೀತೆ ಪಠಣಗಳನ್ನು ಮಾಡಲಾಗುತ್ತದೆ.
ಭಾರತದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸ್ಥಳೀಯ ಸಂಪ್ರದಾಯಗಳು ಮತ್ತು ಆಚರಣೆಗಳ ಪ್ರಕಾರ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ.
ಮಹಾರಾಷ್ಟ್ರದಲ್ಲಿ, ದಹಿ ಹಂಡಿಯನ್ನು ಸ್ಥಳೀಯ ಮತ್ತು ಪ್ರಾದೇಶಿಕ ಪ್ರಮಾಣದಲ್ಲಿ ಆಯೋಜಿಸಲಾಗಿದೆ. ಮಜ್ಜಿಗೆ ತುಂಬಿದ ಮಣ್ಣಿನ ಮಡಕೆಯನ್ನು ಒಡೆಯುವ ಸಲುವಾಗಿ ಮಾನವ ಪಿರಮಿಡ್ ರಚನೆಯಾಗುತ್ತದೆ. ಭಾರಿ ಪೈಪೋಟಿ ಏರ್ಪಟ್ಟಿದ್ದು, ಈ ಕಾರ್ಯಕ್ರಮಗಳಿಗೆ ಬಹುಮಾನವಾಗಿ ಲಕ್ಷಗಟ್ಟಲೆ ಬಹುಮಾನಗಳನ್ನು ಘೋಷಿಸಲಾಗಿದೆ.
ಉತ್ತರ ಪ್ರದೇಶದಲ್ಲಿ, ಈ ದಿನದಂದು ಪವಿತ್ರ ನಗರಗಳಾದ ಮಥುರಾ ಮತ್ತು ವೃಂದಾವನದಲ್ಲಿರುವ ಕೃಷ್ಣ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.
ಶ್ರೀಕೃಷ್ಣ ಬಳಸುವ ವಸ್ತುಗಳು ಮತ್ತು ಅವುಗಳ ಪ್ರಾಮುಖ್ಯತೆ
ಶ್ರೀಕೃಷ್ಣನಿಗೆ ಹಾಲು ಮತ್ತು ಗಂಗಾಜಲದಿಂದ ಸ್ನಾನ ಮಾಡಿ ಪೂಜಿಸಲಾಗುತ್ತದೆ. ಇಂದು ಕೃಷ್ಣನಿಗೆ ನವಿಲು ಗರಿಗಳು, ಕೊಳಲು, ಕಿರೀಟ, ಶ್ರೀಗಂಧ, ವೈಜಯಂತಿ ಮಾಲೆ, ತುಳಸಿ ದಳ ಇತ್ಯಾದಿಗಳಿಂದ ಅಲಂಕರಿಸಲಾಗುತ್ತದೆ.
ಕೊಳಲು : ಭಗವಾನ್ ಕೃಷ್ಣನು ಕೊಳಲನ್ನು ತುಂಬಾ ಪ್ರೀತಿಸುತ್ತಿದ್ದನು. ಹೀಗಾಗಿ ಅವನ ಜನಪ್ರಿಯ ಹೆಸರುಗಳಲ್ಲಿ ‘ಮುರಳೀಧರ’ ಎಂಬ ಹೆಸರೂ ಕೂಡ ಒಂದು. ಕೊಳಲು ಒಂದು ಮಧುರ ವಾದ್ಯ. ನಮ್ಮ ಜೀವನವೂ ಕೊಳಲಿನಂತೆ ಮಧುರವಾಗಿರಬೇಕು ಎಂಬ ಸಂದೇಶವನ್ನು ನೀಡುತ್ತದೆ. ಯಾವುದೇ ಪರಿಸ್ಥಿತಿಯಿರಲಿ, ನಾವು ಯಾವಾಗಲೂ ಸಂತೋಷವಾಗಿರಬೇಕು.
ನವಿಲು ಗರಿ : ನವಿಲು ಗರಿ ಕೂಡ ಶ್ರೀ ಕೃಷ್ಣನ ಮೆಚ್ಚಿನವುಗಳಲ್ಲಿ ಒಂದಾಗಿದೆ. ಅವನು ಅದನ್ನು ತನ್ನ ಕಿರೀಟದಲ್ಲಿ ಇಟ್ಟುಕೊಳ್ಳುತ್ತಿದ್ದನು ಎಂಬ ಅಂಶವು ಅವನ ಜೀವನದಲ್ಲಿ ಅದರ ಪ್ರಾಮುಖ್ಯತೆಯನ್ನು ಸ್ಥಾಪಿಸುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರವೂ ನವಿಲು ಗರಿ ಮಹತ್ವದ್ದಾಗಿದೆ. ಇದು ಜೀವನದಲ್ಲಿ ತೊಂದರೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ.
ಬೆಣ್ಣೆ : ಕೃಷ್ಣನು ಬೆಣ್ಣೆಯನ್ನು ಪ್ರೀತಿಸುತ್ತಿದ್ದನು. ಅವನು ‘ಗೋಪಿಗಳಿಂದ’ ಬೆಣ್ಣೆಯನ್ನು ಕದಿಯುತ್ತಿದ್ದುದರಿಂದ ಅವನಿಗೆ ‘ಮಖನ್ ಚೋರ್ ಅಥವ ಬೆಣ್ಣೆ ಕಳ್ಳ’ ಎಂಬ ಹೆಸರು ಬಂದಿತು.
ವೈಜಂತಿ ಮಾಲಾ : ವೈಜಂತಿ ಮಾಲಾ ಶಾಸ್ತ್ರಗಳ ಪ್ರಕಾರ ಕಮಲದ ಹೂವನ್ನು ಅತ್ಯಂತ ಪರಿಶುದ್ಧವೆಂದು ಪರಿಗಣಿಸಲಾಗಿದೆ. ಕೆಸರಿನಲ್ಲಿ ಬೆಳೆದರೂ ಅದು ತನ್ನ ಸೌಂದರ್ಯ, ಮೃದುತ್ವ ಮತ್ತು ಶುದ್ಧತೆಯನ್ನು ಕಳೆದುಕೊಳ್ಳುವುದಿಲ್ಲ. ಇದು ನಮಗೆ ಸರಳವಾಗಿ ಮತ್ತು ಸುಂದರವಾಗಿ ಬದುಕುವ ಪಾಠವನ್ನು ನೀಡುತ್ತದೆ.
ಪಂಚಗವ್ಯ :ಪಂಚಗವ್ಯ ಅಂದರೆ ಹಸುವಿನ ಹಾಲು, ಗೋವಿನ ಮೊಸರು, ಗೋಮೂತ್ರ, ಹಸುವಿನ ತುಪ್ಪ, ಗೋಮಯ ಇವುಗಳನ್ನು ಧರ್ಮಗ್ರಂಥದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ‘ಗೋಸೇವೆ’ ಸಮೃದ್ಧಿಯನ್ನು ನೀಡುತ್ತದೆ. ಹೀಗಾಗಿ ಕೃಷ್ಣ ಬಳಸುವ ಪ್ರತಿಯೊಂದು ವಸ್ತುಗಳು ತನ್ನದೇ ಆದ ಮಹತ್ವ ಹೊಂದಿದೆ. ಹೀಗಾಗಿ ಅವುಗಳನ್ನು ಕೃಷ್ಣನ ಪೂಜೆಗೆ ಬಳಕೆ ಮಾಡಲಾಗುತ್ತದೆ.
ಪಾಂಚ್ಯ ಜನ್ಯ :ಸನಾತನ ಧರ್ಮದಲ್ಲಿ, ಶಂಖ ಚಿಪ್ಪುಗಳನ್ನು ಧಾರ್ಮಿಕ ಆಯೋಜನಗಳಲ್ಲಿ ವಿಶೇಷವೆಂದು ಪರಿಗಣಿಸಲಾಗುತ್ತದೆ. ಶಂಖವನ್ನು ಊದಿದಂತೆ ಅದು ವಾತಾವರಣದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹರಡುತ್ತದೆ ಎನ್ನುವ ನಂಬಿಕೆಯಿದೆ. ಇದರ ಶಕ್ತಿ ಮತ್ತು ಪವಾಡಗಳು ಮಹಾಭಾರತ ಮತ್ತು ಪುರಾಣಗಳಲ್ಲಿಯೂ ಕಂಡುಬರುತ್ತವೆ. ಇದನ್ನು ವಿಜಯ, ಸಮೃದ್ಧಿ, ಸಂತೋಷ, ಶಾಂತಿ, ಖ್ಯಾತಿ, ಪ್ರತಿಷ್ಠೆ ಮತ್ತು ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಶಂಖವು ನಾದದ ಸಂಕೇತವಾಗಿದೆ. ಶಂಖ ಧ್ವನಿಯನ್ನು ಶುಭವೆಂದು ಪರಿಗಣಿಸಲಾಗಿದೆ.
ಶ್ರೀಕೃಷ್ಣ ಹುಟ್ಟಿದ ಕಥೆಯೇ ರೋಚಕ
ಮಥುರೆಯಲ್ಲಿ ಉಗ್ರಸೇನನೆಂಬ ರಾಜನಿದ್ದ, ಆತನ ಮಗನೇ ಕಂಸ. ಈತ ಕರುಣೆ ಇಲ್ಲದ ಕ್ರೂರ ವ್ಯಕ್ತಿ. ಮಥುರೆಯ ಪ್ರತಿಯೊಬ್ಬರೂ ಅವನ ಕ್ರೂರ ಮತ್ತು ದುಷ್ಟ ಸ್ವಭಾವಕ್ಕೆ ಹೆದರುತ್ತಿದ್ದರು. ಕಂಸ ಪ್ರೀತಿಸುವ ಒಬ್ಬ ವ್ಯಕ್ತಿಯೆಂದರೆ, ಆತನ ಸಹೋದರಿ ದೇವಕಿ. ಆಕೆ ದಯೆ, ಪ್ರೀತಿ ಮತ್ತು ಕಾಳಜಿಯುಳ್ಳವಳು. ದೇವಕಿಯ ಮದುವೆಯನ್ನು ವಾಸುದೇವನೊಂದಿಗೆ ನಿಶ್ಚಯಿಸಲಾಯಿತು.
ಮದುವೆ ಬಹಳ ವೈಭವದಿಂದ ನಡೆದು, ಎಲ್ಲಾ ಆಚರಣೆಗಳು ಮುಗಿದ ನಂತರ ತನ್ನ ತಂಗಿಯನ್ನು ಕಂಸ ರಥದ ಮೂಲಕ ಅತ್ತೆಯ ಮನೆಗೆ ಕರೆದೊಯ್ಯುತ್ತಿದ್ದನು. ಈ ದಾರಿಯಲ್ಲಿ, ಇದ್ದಕ್ಕಿದ್ದಂತೆ ಜೋರಾಗಿ ಗಾಳಿ ಬೀಸಿ, ಮೋಡಗಳು ಆಕಾಶವನ್ನು ಆವರಿಸಿದವು. ಆಗಸದಿಂದ ಒಂದು ಅನಾಮಿಕ ಧ್ವನಿಯು “ಓ ಕಂಸ, ನೀವು ತುಂಬಾ ಪ್ರೀತಿಸುವ ಸಹೋದರಿಗೆ ಮಗ ಹುಟ್ಟುತ್ತಾನೆ, ದೇವಕಿಗೆ ಜನಿಸಿದ ಎಂಟನೆಯ ಮಗನು ನಿನ್ನನ್ನು ಕೊಲ್ಲುತ್ತಾನೆ ಎಂದು ಹೇಳಿತು. ಇದನ್ನು ಕೇಳಿದ ಕಂಸನು ಕೋಪಗೊಂಡು, ಎಂಟನೇ ಮಗುವಿಗೆ ಜನ್ಮ ನೀಡುವ ಮೊದಲು ತನ್ನ ಸಹೋದರಿಯನ್ನು ಕೊಲ್ಲುವುದಾಗಿ ಆತ ಹೇಳುತ್ತಾನೆ, ಆಗ ವಾಸುದೇವ ಕಂಸನನ್ನು ಬೇಡಿಕೊಂಡು, ದೇವಕಿಯನ್ನು ಕೊಲ್ಲಬೇಡ. ಮದುವೆಯಾದ ದಿನವೇ, ಸ್ವಂತ ಸಹೋದರಿಯನ್ನು ಕೊಲ್ಲುವುದು ನ್ಯಾಯ ಸಮ್ಮತವಲ್ಲ. ತಮಗೆ ಜನಿಸಿದ ಎಲ್ಲಾ ಮಕ್ಕಳನ್ನು ಕಂಸನಿಗೆ ಹಸ್ತಾಂತರಿಸುವುದಾಗಿ ಭರವಸೆ ನೀಡಿದ.
ದೇವಕಿಗೆ ಜನಿಸಿದ ಮುಂದಿನ ಐದು ಮಕ್ಕಳನ್ನು ಕಂಸ ಕೊಂದನು. ದೇವಕಿ ಏಳನೇ ಬಾರಿ ಗರ್ಭಿಣಿಯಾಗಿದ್ದಳು. ಏಳನೆಯ ಮಗುವನ್ನು ಬುದ್ಧಿವಂತಿಕೆಯಿಂದ ರೋಹಿಣಿಗೆ ಹಸ್ತಾಂತರಿಸಿದರು,ಈ ಕ್ರೂರತೆಯಿಂದ ಬೇಸತ್ತ ದಂಪತಿಗಳು 8 ನೇ ಮಗುವನ್ನು ಉಳಿಸಲು ವಿಷ್ಣುವನ್ನು ಕೇಳಿಕೊಂಡರು. ಒಂದು ರಾತ್ರಿ ವಿಷ್ಣು ವಾಸುದೇವನಿಗೆ ಕನಸಿನಲ್ಲಿ ಕಾಣಿಸಿಕೊಂಡು, ನಿನ್ನ ಮಗುವನ್ನು ಗೋಕುಲಕ್ಕೆ ಕರೆದುಕೊಂಡು ಹೋಗಿ ಅಲ್ಲಿರುವ ನಂದಗೋಪಾಲ ಮತ್ತು ಯಶೋದೆಗೆ ಜನಿಸಿದ ಮಗುವಿನ ಜೊತೆ ವಿನಿಮಯ ಮಾಡಿಕೊಳ್ಳಬೇಕು ಎಂದು ಹೇಳಿ ವಿಷ್ಣು ಕಣ್ಮರೆಯಾದ.
ಕೃಷ್ಣ ಪಕ್ಷದ ಅಷ್ಟಮಿಯ ದಿನ ದೇವಕಿಯ ಎಂಟನೇ ಮಗ ಹುಟ್ಟಿದ, ಆತನೇ ಭಗವಾನ್ ಕೃಷ್ಣ. ಕೃಷ್ಣನ ತಂದೆ ವಾಸುದೇವನು ವಿಷ್ಣುವಿನ ಸೂಚನೆಯಂತೆ, ಬುಟ್ಟಿಯಲ್ಲಿಟ್ಟುಕೊಂಡು ಭಾರೀ ಮಳೆಯಲ್ಲೇ ತನ್ನ ಕಂದನನ್ನು ಕಂಸನಿಂದ ರಕ್ಷಿಸಲು ನಂದಗೋಪಾಲ ಮನೆಗೆ ಹೊರಡುತ್ತಾನೆ.ಯಮುನಾ ನದಿಯ ಸಹಾಯದಿಂದ ಗೋಕುಲದಲ್ಲಿನ ತನ್ನ ಸ್ನೇಹಿತ ನಂದಗೋಪ ಇರುವಲ್ಲಿಗೆ ಕರೆತರುತ್ತಾನೆ. ಅದೇ ಸಮಯದಲ್ಲಿ ನಂದಾ ಅವರ ಪತ್ನಿ ಯಶೋದಾ ಕೂಡ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಆಗ ವಾಸುದೇವನು ತನ್ನ ಮಗ ಕೃಷ್ಣನನ್ನು ಯಶೋದಾಳ ಮಡಿಲಲ್ಲಿ ಮಲಗಿಸಿ, ಆಕೆಯ ಹೆಣ್ಣು ಮಗುವನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಾನೆ.
ವಾಸುದೇವನು ನಂದರ ಹೆಣ್ಣು ಶಿಶುವಿನೊಂದಿಗೆ ಮಥುರಾದ ಜೈಲಿಗೆ ಮರಳಿದರು. ನಂತರ ಕಂಸನಿಗೆ ದೇವಕಿ ಮತ್ತು ವಾಸುದೇವನಿಗೆ 8 ನೇ ಮಗುವಾಗಿರುವ ವಿಷಯ ತಿಳಿಯಿತು. ಕಂಸನು ಆ ಮಗುವನ್ನು ಸಾಯಿಸಲು ಜೈಲಿಗೆ ಬರುತ್ತಾನೆ. ಆ ಹೆಣ್ಣು ಶಿಶುವನ್ನು ಕಲ್ಲಿನ ಮೇಲಿಟ್ಟು ಕೊಲ್ಲಲು ಯತ್ನಿಸಿದಾಗ ಮಗು ಆಕಾಶಕ್ಕೆ ಹಾರಿ ತನ್ನ ದಿವ್ಯ ಸ್ವರೂಪವನ್ನು ಪ್ರದರ್ಶಿಸುತ್ತಾಳೆ. ಕಂಸನಿಗೆ ಆತನ ಸಂಹಾರವನ್ನು ದೃಢಪಡಿಸಿ ವಿಂಧ್ಯಾಚಲ ಪರ್ವತವನ್ನೇರಿ ಕುಳಿತುಕೊಳ್ಳುತ್ತಾಳೆ. ಇಂದಿಗೂ ಆಕೆಯನ್ನು ವಿಂಧ್ಯಾವಾಸಿನಿ, ವಿಂಧ್ಯಾಚಲ ದೇವಿಯೆಂದು ಕರೆಯಲಾಗುತ್ತದೆ.ಇದೇ ಕೃಷ್ಣನ ಜನ್ಮದ ಹಿಂದಿರುವ ಕಥೆ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!